ವಿಶ್ವವಿದ್ಯಾಲಯವು ತನ್ನ ನೌಕರರ ಅಥವಾ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡ ಸಂದರ್ಭದಲ್ಲಿ ಬಾಧಿತ ನೌಕರ ಅಥವಾ ವಿದ್ಯಾರ್ಥಿಯು ಶಾಸನಗಳಲ್ಲಿ ನಿರ್ದಿಷ್ಟಪಡಿಸಬಹುದಾದಂತೆ ಮೇಲ್ಮನವಿ ಹಕ್ಕು ಹೊಂದಿರತಕ್ಕದ್ದು.
ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರ ಅಥವಾ ಇತರ ಸಂಸ್ಥೆಯ ಸದಸ್ಯನಾಗಿ ಯಾಮೊಬ್ಬ ವ್ಯಕ್ತಿಯು ಸೂಕ್ತವಾಗಿ ಆಯ್ಕೆಯಾಗಿದ್ದಾನೆಯೇ ಅಥವಾ ನೇಮಕಗೊಂಡಿದ್ದಾನೆಯೇ ಅಥವಾ ಅದಕ್ಕೆ ಅರ್ಹನಾಗಿದ್ದಾನೆಯೇ ಎಂಬ ಯಾವುದೇ ಪ್ರಶ್ನೆ ಉದ್ಭವಿಸಿದರೆ ಆ ವಿಷಯವನ್ನು ತೀರ್ಮಾನಕ್ಕಾಗಿ ಕುಲಾಧಿಪತಿಯವರಿಗೆ ಕಳುಹಿಸತಕ್ಕದ್ದು ಮತ್ತು ಅವರ ತೀರ್ಮಾನವು ಅಂತಿಮವಾಗಿರತಕ್ಕದ್ದು.
(1) ಪ್ರತಿಯೊಬ್ಬ ನೌಕರನು ಲಿಖಿತ ಕರಾರನ್ನು ಬರೆದುಕೊಟ್ಟು ನೇಮಕಗೊಳ್ಳತಕ್ಕದ್ದು ಮತ್ತು ಅದನ್ನು ವಿಶ್ವವಿದ್ಯಾಲಯದಲ್ಲಿ ಇಟ್ಟುಕೊಳ್ಳತಕ್ಕದ್ದು ಹಾಗೂ ಅದರ ಪ್ರತಿಯನ್ನು ಸಂಬಂಧಪಟ್ಟ ನೌಕರನಿಗೆ ನೀಡತಕ್ಕದ್ದು.
(2) ನೌಕರರ ವಿರುದ್ಧ ಶಿಸ್ತು ಕ್ರಮವನ್ನು ಶಾಸನಗಳಲ್ಲಿ ನಿರ್ದಿಷ್ಟಪಡಿಸಬಹುದಾದ ಕಾರ್ಯವಿಧಾನಗಳ ಅನುಸಾರವಾಗಿ ತೆಗೆದುಕೊಳ್ಳತಕ್ಕದ್ದು.
(3) ವಿಶ್ವವಿದ್ಯಾಲಯ ಮತ್ತು ನೌಕರನ ಮಧ್ಯದಲ್ಲಿಯ ಕರಾರನಿಂದ ಉದ್ಭವಿಸಬಹುದಾದ ಯಾವುದೇ ವಿವಾದವನ್ನು ಆ ಲಿಖಿತ ಕರಾರಿನಲ್ಲಿ ಉಪಬಂಧಿಸಿದ ವಿಧಾನದಲ್ಲಿ ಹಾಗೂ ಶಾಸನಗಳ ಅನುಸಾರವಾಗಿ ಪರಿಹರಿಸತಕ್ಕದ್ದು.
ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರ ಅಥವಾ ಸಂಸ್ಥೆಯ ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿ, ಸದಸ್ಯರ ಪೈಕಿ ಯಾವುದೇ ಸ್ಥಾನವು ಆಕಸ್ಮಿಕವಾಗಿ ಖಾಲಿಯಾದರೆ ಯಾರ ಸ್ಥಾನವು ಖಾಲಿಯಾಗಿ ತುಂಬಬೇಕಾಗಿ ಬಂದಿದೆಯೋ ಆ ಸದಸ್ಯನನ್ನು ಯಾವ ರೀತಿಯಲ್ಲಿ ಆರಿಸಲಾಗಿತ್ತೋ ಅದೇ ರೀತಿಯಲ್ಲಿ ಹೊಸ ಸದಸ್ಯನನ್ನು ಆರಿಸಿ ಭರ್ತಿ ಮಾಡತಕ್ಕದ್ದು ಮತ್ತು ಹಾಗೆ ಖಾಲಿ ಸ್ಥಾನವನ್ನು ಭರ್ತಿ ಮಾಡಿದ ವ್ಯಕ್ತಿಯು ಆತನು ಯಾವ ಸದಸ್ಯನ ಸ್ಥಾನದಲ್ಲಿ ಭರ್ತಿಯಾಗಿರುವನೋ ಆ ಸದಸ್ಯನು ಪ್ರಾಧಿಕಾರ ಅಥವಾ ಸಂಸ್ಥೆಯ ಸದಸ್ಯನಾಗಿ ಉಳಿಯುತ್ತಿದ್ದ ಬಾಕಿ ಅವಧಿಯವರೆಗೆ ಮಾತ್ರ ಸದಸ್ಯನಾಗಿರತಕ್ಕದ್ದು.
ಈ ಅಧ್ಯಾದೇಶ ಮತ್ತು ಶಾಸನಗಳ ಯಾವುದೇ ಇತರ ಉಪಬಂಧಗಳಲ್ಲಿ ಏನೇ ಇದ್ದರೂ,-
(i) ಮೊದಲ ಕುಲಪತಿಯವರನ್ನು ಮತ್ತು ಸಹಕುಲಪತಿಗಳು ಯಾರಾದರು ಇದ್ದರೆ ಅವರನ್ನು ಕುಲಾಧಿಪತಿಯವರು ನೇಮಕಮಾಡತಕ್ಕದ್ದು;
(ii) ಮೊದಲ ಕುಲಸಚಿವರನ್ನು ಮತ್ತು ಮೊದಲ ಹಣಕಾಸು ಅಧಿಕಾರಿಯವರನ್ನು ಕುಲಾಧಿಪತಿಯವರು ನೇಮಕಮಾಡತಕ್ಕದ್ದು; ಮತ್ತು
(iii) ಮೊದಲ ಆಡಳಿತ ಮಂಡಳಿ, ಮೊದಲ ಹಣಕಾಸು ಸಮಿತಿ, ಮೊದಲ ದೂರಶಿಕ್ಷಣ ಸಮಿತಿ, ಮೊದಲ ಸಂಶೋಧನಾ ಪರಿಷತ್ತು ಹಾಗೂ ಮೊದಲ ಪ್ರಶಿಕ್ಷಣ ಪರಿಷತ್ತನ್ನು ಕುಲಾಧಿಪತಿಯವರು ರಚಿಸತಕ್ಕದ್ದು.
(1) ವಿಶ್ವವಿದ್ಯಾಲಯವು ಕನಿಷ್ಠ ಇಪ್ಪತ್ತೈದು ಕೋಟಿ ರೂಪಾಯಿಗಳನ್ನುಳ್ಳ ಒಂದು ಶಾಶ್ವತ ಶಾಸನಬದ್ಧ ದತ್ತಿ ನಿಧಿಯನ್ನು ಸ್ಥಾಪಿಸತಕ್ಕದ್ದು ಮತ್ತು ಈ ನಿಧಿಯನ್ನು ಸ್ವಪ್ರೇರಣೆಯಿಂದ ಹೆಚ್ಚಿಸಬಹುದೇ ಹೊರತು ಅದಕ್ಕಿಂತ ಕಡಿಮೆ ಮಾಡತಕ್ಕದ್ದಲ್ಲ.
(2) ವಿಶ್ವವಿದ್ಯಾಲಯವು, ನಿಯಮಿಸಬಹುದಾದಂಥ ವಿಧಾನದಲ್ಲಿ ಶಾಶ್ವತ ಶಾಸನಬದ್ಧ ದತ್ತಿ ನಿಧಿಯ ಹಣವನ್ನು ಹೂಡಲು ಅಧಿಕಾರವನ್ನು ಹೊಂದಿರತಕ್ಕದ್ದು.
(3) ವಿಶ್ವವಿದ್ಯಾಲಯವು, ಸಾಮಾನ್ಯ ನಿಧಿ ಅಥವಾ ಅಭಿವೃದ್ಧಿ ನಿಧಿಯಿಂದ ಯಾವುದೇ ಮೊಬಲಗನ್ನು ಶಾಶ್ವತ ಶಾಸನಬದ್ಧ ದತ್ತಿ ನಿಧಿಗೆ ವರ್ಗಾವಣೆ ಮಾಡಬಹುದು. ವಿಶ್ವವಿದ್ಯಾಲಯವನ್ನು ಸಮಾಪಣೆಗೊಳಿಸುವ ಸಂದರ್ಭದಲ್ಲಿ ಹೊರತುಪಡಿಸಿ, ಇತರ ಯಾವ ಸಂದರ್ಭದಲ್ಲೂ ಶಾಶ್ವತ ಶಾಸನಬದ್ಧ ದತ್ತಿ ನಿಧಿಯಿಂದ ಯಾವ ಮೊಬಲಗನ್ನೂ ಇತರ ಉದ್ದೇಶಗಳಿಗಾಗಿ ವರ್ಗಾಯಿಸತಕ್ಕದ್ದಲ್ಲ.
(4) ಶಾಶ್ವತ ಶಾಸನಬದ್ಧ ದತ್ತಿ ನಿಧಿಯಿಂದ ಬರುವ ಆದಾಯದ ಶೇಕಡಾ ಎಪ್ಪತ್ತೈದರಷ್ಟನ್ನು ವಿಶ್ವವಿದ್ಯಾಲಯದ ಅಭಿವೃದ್ಧಿ ಅಥವಾ ಸಾಮಾನ್ಯ ಕೆಲಸಗಳ ಉದ್ದೇಶಗಳಿಗಾಗಿ ಬಳಸಿಕೊಳ್ಳತಕ್ಕದ್ದು. ಉಳಿದ ಶೇಕಡಾ ಇಪ್ಪತ್ತೈದರಷ್ಟನ್ನು ಶಾಶ್ವತ ಶಾಸನಬದ್ಧ ದತ್ತಿ ನಿಧಿಯಲ್ಲಿ ಪುನಃ ತೊಡಗಿಸತಕ್ಕದ್ದು.
(1) ವಿಶ್ವವಿದ್ಯಾಲಯವು, ಪ್ರಾಯೋಜಕ ಸಂಸ್ಥೆಯು ನಿರ್ಧರಿಸಬಹುದಾದಂಥ ನಿಧಿಗಳನ್ನು ಒಳಗೊಂಡ ವಿಶ್ವವಿದ್ಯಾಲಯದ ದತ್ತಿ ನಿಧಿಯನ್ನು ಸ್ಥಾಪಿಸತಕ್ಕದ್ದು. ಇದರಲ್ಲಿ ಕಾಲಕಾಲಕ್ಕೆ ಸ್ವೀಕರಿಸಬಹುದಾದ ದೇಣಿಗೆಗಳು ಮತ್ತು ಇತರ ನಿಧಿಗಳೂ ಒಳಗೊಂಡಿರಬಹುದು.
(2) ವಿಶ್ವವಿದ್ಯಾಲಯವು, ಶಾಸನಗಳ ಮೂಲಕ ನಿರ್ದಿಷ್ಟಪಡಿಸಬಹುದಾದ ವಿಧಾನದಲ್ಲಿ ವಿಶ್ವವಿದ್ಯಾಲಯದ ದತ್ತಿನಿಧಿಯನ್ನು ಹೂಡುವ ಅಧಿಕಾರವನ್ನು ಹೊಂದಿರತಕ್ಕದ್ದು.
(3) ವಿಶ್ವವಿದ್ಯಾಲಯ ದತ್ತಿ ನಿಧಿಯು, ವಿಶ್ವವಿದ್ಯಾಲಯವು ತನ್ನ ಸಾಮಾಜಿಕ ಧ್ಯೇಯೋದ್ದೇಶಗಳನ್ನು ನೆರವೇರಿಸುವ ಸಂದರ್ಭದಲ್ಲಿ ಮತ್ತು/ಅಥವಾ ಮುಂಗಾಣದ ಸನ್ನಿವೇಶಗಳಲ್ಲಿ ಉದ್ಭವಿಸಬಹುದಾದ ಹಣಕಾಸು ಸವಾಲುಗಳಿಂದ ತನ್ನನ್ನು ರಕ್ಷಿಸಿಕೊಳ್ಳುವುದಕ್ಕಾಗಿ, ಸ್ವಇಚ್ಛೆಯಿಂದ ನಿರ್ವಹಿಸಿಕೊಂಡು ಬರಲು ಮತ್ತು ಜವಾಬ್ದಾರಿಯಿಂದ ಹಣ ಹೂಡಿಕೆ ಮಾಡಲು ಇಚ್ಛೆಯುಳ್ಳವರಾಗಿ ಸ್ವಯಂ ವಿಧಿಸಿಕೊಂಡ ನಿಧಿಯಾಗಿರತಕ್ಕದ್ದು.
(4) ವಿಶ್ವವಿದ್ಯಾಲಯವು, ಸಾಮಾನ್ಯ ನಿಧಿ ಅಥವಾ ಅಭಿವೃದ್ಧಿ ನಿಧಿಯಿಂದ ಯಾವುದೇ ಮೊಬಲಗನ್ನು ವಿಶ್ವವಿದ್ಯಾಲಯದ ದತ್ತಿ ನಿಧಿಗೆ ವರ್ಗಾಯಿಸಬಹುದು. ವಿಶ್ವವಿದ್ಯಾಲಯದ ಸಮಾಪಣೆಗೊಳಿಸುವ ಸಂದರ್ಭವನ್ನು ಹೊರತುಪಡಿಸಿ, ಇತರ ಯಾವ ಸಂದರ್ಭದಲ್ಲೂ ವಿಶ್ವವಿದ್ಯಾಲಯದ ದತ್ತಿ ನಿಧಿಯಿಂದ ಯಾವುದೇ ಮೊಬಲಗನ್ನು ಇತರ ಉದ್ದೇಶಗಳಿಗಾಗಿ ವರ್ಗಾಯಿಸತಕ್ಕದ್ದಲ್ಲ.
(5) ವಿಶ್ವವಿದ್ಯಾಲಯದ ದತ್ತಿ ನಿಧಿಯಿಂದ ಬರುವ ಆದಾಯದ ಶೇಕಡಾ ಎಂಭತ್ತರಷ್ಟನ್ನು ವಿಶ್ವವಿದ್ಯಾಲಯದ ಅಭಿವೃದ್ಧಿ ಅಥವಾ ಸಾಮಾನ್ಯ ಕೆಲಸಗಳ ಉದ್ದೇಶಗಳಿಗಾಗಿ ಬಳಸಿಕೊಳ್ಳತಕ್ಕದ್ದು. ಉಳಿದ ಶೇಕಡಾ ಇಪ್ಪತ್ತರಷ್ಟನ್ನು ವಿಶ್ವವಿದ್ಯಾಲಯದ ದತ್ತಿ ನಿಧಿಯಲ್ಲಿ ಪುನಃ ತೊಡಗಿಸತಕ್ಕದ್ದು.