ವಿಶ್ವವಿದ್ಯಾಲಯವು ಈ ಮುಂದಿನ ಕಾರ್ಯಗಳನ್ನು ಮಾಡಲು ಅಧಿಕಾರಗಳನ್ನು ಹೊಂದಿರತಕ್ಕದ್ದು, ಎಂದರೆ:-
(i) ಶಾಸನಗಳಲ್ಲಿ ಹೇಳಲಾದ ರೀತಿಯಲ್ಲಿ ಕಾಲಕಾಲಕ್ಕೆ ವಿಶ್ವವಿದ್ಯಾಲಯವು ನಿರ್ಧರಿಸಬಹುದಾದಂಥ ಕ್ಯಾಂಪಸ್ಸುಗಳು, ಪ್ರಾದೇಶಿಕ ಕೇಂದ್ರಗಳು ಮತ್ತು ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸುವುದು, ನಿರ್ವಹಿಸುವುದು ಮತ್ತು ಅವುಗಳಿಗೆ ಮನ್ನಣೆ ನೀಡುವುದು;
(ii) ವಿಶ್ವವಿದ್ಯಾಲಯದ ಉದ್ದೇಶವನ್ನು ಕಾರ್ಯರೂಪಕ್ಕೆ ತರುವಲ್ಲಿ ಅಗತ್ಯವಾಗಬಹುದಾದಂಥ ಅಥವಾ ಕಾರ್ಯಸಾಧ್ಯವಾಗಬಹುದಾದಂಥ ಇತರ ಚಟುವಟಿಕೆಗಳನ್ನು ಕೈಗೊಳ್ಳುವುದು;
(iii) ಶಾಸನಗಳಲ್ಲಿ ಹೇಳಲಾದ ರೀತಿಯಲ್ಲಿ ಮತ್ತು ಷರತ್ತುಗಳಿಗೊಳಪಟ್ಟು ಪದವಿಗಳು ಅಥವಾ ಇತರ ಶೈಕ್ಷಣಿಕ ಪ್ರಶಸ್ತಿಗಳನ್ನು ಪ್ರದಾನಮಾಡುವುದು;
(iv) ಶಾಸನಗಳನ್ವಯ ಸಂಶೋಧನಾ ವೇತನಗಳು (ಫೆಲೋಶಿಪ್ಗಳು), ವಿದ್ಯಾರ್ಥಿ ವೇತನಗಳು ಮತ್ತು ಬಹುಮಾನಗಳು, ಇತ್ಯಾದಿಗಳನ್ನು ಸ್ಥಾಪಿಸುವುದು ಮತ್ತು ನೀಡುವುದು;
(v) ಸಂದರ್ಭಾನುಸಾರ ಶಾಸನಗಳಲ್ಲಿ ಅಥವಾ ನಿಯಮಗಳಲ್ಲಿ ನಿಗದಿಪಡಿಸಬಹುದಾದಂಥ ಶುಲ್ಕಗಳು, ಬಿಲ್ಲುಗಳು, ಖರೀದಿ ಪಟ್ಟಿಗಳನ್ನು ಕೇಳಿಪಡೆದುಕೊಳ್ಳುವುದು ಮತ್ತು ಸ್ವೀಕರಿಸುವುದು ಹಾಗೂ ಚಾರ್ಜುಗಳನ್ನು ವಸೂಲು ಮಾಡುವುದು;
(vi) ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶಗಳನ್ನು ಕಲ್ಪಿಸುವುದು;
(vii) ವಿಶ್ವವಿದ್ಯಾಲಯದ ಅಥವಾ ಘಟಕ ಕಾಲೇಜಿನ, ಕ್ಯಾಂಪಸುಗಳ, ಪ್ರಾದೇಶಿಕ ಕೇಂದ್ರಗಳ, ಅಧ್ಯಯನ ಕೇಂದ್ರಗಳ ಫ್ಯಾಕಲ್ಟಿ, ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದು;
(viii) ವಿಶ್ವವಿದ್ಯಾಲಯದ ಅಥವಾ ಒಂದು ಘಟಕ ಕಾಲೇಜಿನ ಅಥವಾ ಕ್ಯಾಂಪಸ್ಸಿನ, ಪ್ರಾದೇಶಿಕ ಕೇಂದ್ರದ, ಅಧ್ಯಯನ ಕೇಂದ್ರದ ಉದ್ದೇಶಕ್ಕಾಗಿ ಯಾವುದೇ ರೀತಿಯ ದೇಣಿಗೆಗಳು ಮತ್ತು ಕೊಡುಗೆಗಳನ್ನು ಸ್ವೀಕರಿಸುವುದು ಮತ್ತು ನ್ಯಾಸ ಮತ್ತು ದತ್ತಿ ಆಸ್ತಿಗಳೂ ಸೇರಿದಂತೆ, ಯಾವುದೇ ಚರ ಅಥವಾ ಸ್ಥಿರ ಆಸ್ತಿಯನ್ನು ಅರ್ಜಿಸುವುದು, ಹೊಂದಿರುವುದು, ನಿರ್ವಹಿಸುವುದು, ನಡೆಸುವುದು ಮತ್ತು ಹಸ್ತಾಂತರ ಮಾಡುವುದು;
(ix) ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸಿಕೊಂಡು ಬರುವುದು ಹಾಗೂ ವಿಶ್ವವಿದ್ಯಾಲಯದ ಅಥವಾ ಘಟಕ ಕಾಲೇಜಿನ ವಿದ್ಯಾರ್ಥಿಗಳಿಗೆ ವಸತಿ ಸ್ಥಳಗಳಾಗಿ ಮಾನ್ಯತೆ ನೀಡುವುದು;
(x) ವಸತಿಯ ಮೇಲ್ವಿಚಾರಣೆ ಮಾಡುವುದು ಮತ್ತು ನಿಯಂತ್ರಣ ಮಾಡುವುದು ಹಾಗೂ ವಿದ್ಯಾರ್ಥಿಗಳು ಮತ್ತು ಎಲ್ಲಾ ಪ್ರವರ್ಗಗಳ ಸಿಬ್ಬಂದಿಗಳಲ್ಲಿ ಶಿಸ್ತು ನಿಯಂತ್ರಣ ಮಾಡುವುದು ಮತ್ತು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ನಡತೆ ಸಂಹಿತೆಯನ್ನು ರೂಪಿಸುವುದೂ ಒಳಗೊಂಡಂತೆ, ಅಂಥ ಸಿಬ್ಬಂದಿಗಳ ಸೇವಾಷರತ್ತುಗಳನ್ನು ನಿರೂಪಿಸುವುದು;
(xi) ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಬೆಂಬಲ ಸಿಬ್ಬಂದಿಯ ಹುದ್ದೆಗಳನ್ನು ಮತ್ತು ಇತರ ಅವಶ್ಯ ಹುದ್ದೆಗಳನ್ನು ಸೃಜಿಸುವುದು;
(xii) ವಿಶ್ವವಿದ್ಯಾಲಯವು ಕಾಲಕಾಲಕ್ಕೆ ನಿರ್ಧರಿಸಬಹುದಾದಂಥ ರೀತಿಯಲ್ಲಿ ಮತ್ತು ಅಂಥ ಉದ್ದೇಶಗಳಿಗಾಗಿ ಇತರ ವಿಶ್ವವಿದ್ಯಾಲಯಗಳೊಡನೆ ಸಹಕರಿಸುವುದು ಮತ್ತು ಸಹಯೋಗ ಹೊಂದುವುದು;
(xiii) ದೂರ ಶಿಕ್ಷಣಕ್ಕೆ ಮತ್ತು ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಕ್ರಮಗೆಳಿಗ ಸಂಬಂಧಪಟ್ಟಂತೆ ದೂರ ಶಿಕ್ಷಣವನ್ನು ಯಾವ ರೀತಿಯಲ್ಲಿ ಸಂಘಟಿಸಬಹುದು ಎಂಬುದಕ್ಕೆ ಉಪಬಂಧ ಕಲ್ಪಿಸುವುದು;
(xiv) ಶಿಕ್ಷಕರಿಗೆ, ಪಾಠಗಳನ್ನು ರಚಿಸುವವರಿಗೆ, ಮೌಲ್ಯಮಾಪಕರಿಗೆ ಮತ್ತಿತರ ಶೈಕ್ಷಣಿಕ ಸಿಬ್ಬಂದಿಗೆ ಪುನರ್ಮನನ ವ್ಯಾಸಂಗಕ್ರಮಗಳು, ಅಭಿಮುಖ ತರಬೇತಿ ಕಾರ್ಯಾಗಾರಗಳು, ವಿಚಾರಗೋಷ್ಠಿಗಳು ಮತ್ತಿತರ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಮತ್ತು ನಡೆಸುವುದು;
(xv) ಪ್ರಶಿಕ್ಷಣ ಪರಿಷತ್ತಿನ ಅನುಮೋದನೆಯೊಂದಿಗೆ ವಿಶ್ವವಿದ್ಯಾಲಯದ ಅಥವಾ ಘಟಕ ಕಾಲೇಜಿನ, ಪ್ರಾದೇಶಿಕ ಕೇಂದ್ರಗಳ, ಅಧ್ಯಯನ ಕೇಂದ್ರಗಳಿಗೆ ಪ್ರವೇಶಕ್ಕೆ ಮಾನಕ ಗುಣಮಟ್ಟಗಳನ್ನು ನಿರ್ಧರಿಸುವುದು;
(xvi) ಆಡಳಿತ ಮಂಡಳಿ ಅನುಮೋದನೆಯೊಂದಿಗೆ ವಿಶ್ವವಿದ್ಯಾಲಯದಲ್ಲಿ ಅಥವಾ ಘಟಕ ಕಾಲೇಜು, ಪ್ರಾದೇಶಿಕ ಕೇಂದ್ರ ಅಥವಾ ಅಧ್ಯಯನ ಕೇಂದ್ರದಲ್ಲಿ ಯಾವುದೇ ವ್ಯಾಸಂಗಕ್ರಮಕ್ಕೆ ಪ್ರವೇಶ ಪಡೆಯಲು ರಾಜ್ಯದ ವಿದ್ಯಾರ್ಥಿಗಳಿಗೆ ವಿಶೇಷ ಉಪಬಂಧಗಳನ್ನು ಕಲ್ಪಿಸುವುದು;
(xvii) ವಿಶ್ವವಿದ್ಯಾಲಯದ ಧ್ಯೇಯೋದ್ದೇಶಗಳನ್ನು ಕಾರ್ಯರೂಪಕ್ಕೆ ತರಲು ಅವಶ್ಯವಾಗಬಹುದಾದಂಥ ಇತರ ಎಲ್ಲಾ ಕ್ರಮಗಳನ್ನು ಅಥವಾ ಕಾರ್ಯಗಳನ್ನು, ಅವು ಮೇಲೆ ಹೇಳಿದ ಅಧಿಕಾರಗಳಿಗೆ ಪ್ರಾಸಂಗಿಕವಾಗಿರಲಿ ಅಥವಾ ಇಲ್ಲದಿರಲಿ, ಕೈಗೊಳ್ಳುವುದು;
(xviii) ಪರೀಕ್ಷೆಗಳ ಆಧಾರದ ಮೇಲೆ ಅಥವಾ ಇತರ ಯಾವುದೇ ಮೌಲ್ಯಮಾಪನ ವಿಧಾನದ ಆಧಾರದ ಮೇಲೆ ನೀಡಲು ಪದವಿಗಳು, ಡಿಪ್ಲೋಮಾಗಳು, ಪ್ರಮಾಣಪತ್ರಗಳು ಮತ್ತು ಇತರ ಶೈಕ್ಷಣಿಕ ಪ್ರಶಸ್ತಿಗಳನ್ನು ಸ್ಥಾಪಿಸುವುದು;
(xix) ಫಿಲಂಗಳು, ಕ್ಯಾಸೆಟ್ಗಳು, ಧ್ವನಿಸುರುಳಿಗಳು, ದೃಶ್ಯಸುರುಳಿಗಳು, ಸಿ.ಡಿ., ವಿ.ಸಿ.ಡಿ. ಮತ್ತಿತರ ತಂತ್ರಾಂಶಗಳೂ ಸೇರಿದಂತೆ ಬೋಧಕ ಸಾಮಗ್ರಿಗಳನ್ನು ತಯಾರಿಸುವುದಕ್ಕಾಗಿ ಅವಕಾಶ ಕಲ್ಪಿಸುವುದು;
(xx) ಇತರ ವಿಶ್ವವಿದ್ಯಾಲಯಗಳ, ಸಂಸ್ಥೆಗಳ ಅಥವಾ ಇತರ ಉನ್ನತ ವಿದ್ಯಾಭ್ಯಾಸದ ಸ್ಥಳಗಳ ಪರೀಕ್ಷೆಗಳು ಅಥವಾ ವ್ಯಾಸಂಗ ಅವಧಿಗಳನ್ನು (ಪೂರ್ಣವಾಗಿ ಅಥವಾ ಭಾಗಶ:) ವಿಶ್ವವಿದ್ಯಾಲಯದ ಪರೀಕ್ಷೆಗಳು ಅಥವಾ ವ್ಯಾಸಂಗ ಅವಧಿಗಳಿಗೆ ಸಮನೆಂದು ಮಾನ್ಯ ಮಾಡುವುದು ಮತ್ತು ಹಾಗೆ ನೀಡಿದ ಮಾನ್ಯತೆಗಳನ್ನು ಯಾವುದೇ ಸಮಯದಲ್ಲಿ ಹಿಂದಕ್ಕೆ ಪಡೆಯುವುದು;
(xxi) ಪ್ರಬಂಧಕ ಮಂಡಳಿಯ ಅನುಮೋದನೆಯೊಡನೆ ವಿಶ್ವವಿದ್ಯಾಲಯದ ಉದ್ದೇಶಗಳಿಗಾಗಿ ವಿಶ್ವವಿದ್ಯಾಲಯದ ಸ್ವತ್ತುಗಳನ್ನು ಭದ್ರತೆಯಾಗಿ ನೀಡಿ ಅಥವಾ ನೀಡದೆ ಹಣವನ್ನು ಪಡೆಯುವುದು, ಸಂಗ್ರಹಿಸುವುದು, ಚಂದಾದಾರರಾಗುವುದು ಮತ್ತು ಸಾಲ ಪಡೆಯುವುದು;
(xxii) ವಿಶ್ವವಿದ್ಯಾಲಯದ ಮೇಲಿನ ಉದ್ದೇಶಗಳಿಗೆ ಸಂಬಂಧಿಸಿದ ಅಥವಾ ಪ್ರಾಸಂಗಿಕವಾದ ಯಾವುದೇ ಇತರ ಚಟುವಟಿಕೆಗಳನ್ನು ಕೈಗೊಳ್ಳುವುದು.