(1) ಸಬ್-ಇನ್ಸ್ಪೆಕ್ಟರ್ ದರ್ಜೆಗಿಂತ ಕಡಿಮೆಯಲ್ಲದ ಒಬ್ಬ ಪೊಲೀಸ್ ಅಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರಿಯು, ಈ ಅಧ್ಯಾದೇಶದ ಅಡಿಯಲ್ಲಿ ಅಪರಾಧ ಎಸಗಲಾಗಿದೆ ಎಂದು ನಂಬಲು ಕಾರಣವಿದ್ದಲ್ಲಿ, ತನಿಖೆ ಮಾಡುವ ಮತ್ತು ಅಂಥ ಜಾನುವಾರುಗಳನ್ನು ಹಾಗೂ ಅಂಥ ಅಪರಾಧವನ್ನು ಎಸಗಲು ಬಳಸಿದ ಅಥವಾ ಬಳಸಲು ಉದ್ದೇಶಿಸಿದ ಆವರಣಗಳನ್ನು ಮತ್ತು ಸಾಮಗ್ರಿಗಳನ್ನು ಜಫ್ತಿ ಮಾಡುವ ಅಧಿಕಾರವನ್ನು ಹೊಂದಿರತಕ್ಕದ್ದು.
(2) ಅಂಥ ಆವರಣಗಳ ಅಧಿಭೋಗ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು, ಸಕ್ಷಮ ಪ್ರಾಧಿಕಾರಿಗೆ ಅಥವಾ ಸಬ್-ಇನ್ಸ್ಪೆಕ್ಟರ್ ದರ್ಜೆಗಿಂತ ಕಡಿಮೆ ಇರದ ಅಧಿಕಾರಿಗೆ, ಮೇಲೆ ಹೇಳಿದ ಉದ್ದೇಶಕ್ಕಾಗಿ ಅವಶ್ಯವಿರಬಹುದಾದಂತೆ ಆವರಣಗಳ ಅಂಥ ಪ್ರವೇಶಕ್ಕೆ ಅವಕಾಶ ಮಾಡಿಕೊಡತಕ್ಕದ್ದು ಹಾಗೂ ಆತನಿಗೆ ಗೊತ್ತಿರುವಷ್ಟರಮಟ್ಟಿಗೆ ಮತ್ತು ನಂಬುವಷ್ಟರಮಟ್ಟಿಗೆ, ಸಬ್-ಇನ್ಸ್ಪೆಕ್ಟರ್ ದರ್ಜೆಗಿಂತ ಕಡಿಮೆ ಇರದ ಅಧಿಕಾರಿಯು ಅಥವಾ ಸಕ್ಷಮ ಪ್ರಾಧಿಕಾರಿಯು ಆತನಿಗೆ ಕೇಳುವ ಯಾವುವೇ ಪ್ರಶ್ನೆಗಳಿಗೆ ಉತ್ತರಿಸತಕ್ಕದ್ದು.
(3) (1)ನೇ ಉಪ-ಪ್ರಕರಣದ ಅಡಿಯಲ್ಲಿ ಜಫ್ತಿ ಮಾಡಿದ ನಂತರ, ಮುಟ್ಟುಗೋಲಿಗಾಗಿ ಉಪ-ವಿಭಾಗೀಯ ದಂಡಾಧಿಕಾರಿಗಳ ಮುಂದೆ ಅನುಚಿತ ವಿಳಂಬವಿಲ್ಲದೆ ಅಂಥ ಜಫ್ತಿ ಕುರಿತು ಆತನು ವರದಿ ಮಾಡತಕ್ಕದ್ದು.
(4) ವರದಿಯನ್ನು ಸ್ವೀಕರಿಸಿದ ಮೇಲೆ, ಅಪರಾಧ ಎಸಗುವಲ್ಲಿ ಬಳಸಿದ ಅಥವಾ ಬಳಸಲು ಉದ್ದೇಶಿಸಿದ ಆವರಣಗಳಿಗೆ ಮತ್ತು ಸಾಮಗ್ರಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು, ಉಪ-ವಿಭಾಗೀಯ ದಂಡಾಧಿಕಾರಿಗಳು, ಈ ಅಧ್ಯಾದೇಶದ ಅಡಿಯಲ್ಲಿ ಅಪರಾಧವನ್ನು ಎಸಗಲಾಗಿದೆ ಅಥವಾ ಎಸಗಲು ಉದ್ದೇಶಿಸಲಾಗಿತ್ತೆಂಬುದನ್ನು ಮನವರಿಕೆ ಮಾಡಿಕೊಂಡು, ಆರೋಪಿಸಲಾದ ಅಪರಾಧದ ಸಂಬಂಧದಲ್ಲಿ ಹೂಡಿದ ಕ್ರಿಮಿನಲ್ ವ್ಯವಹರಣೆಗಳ ಇತ್ಯರ್ಥದಲ್ಲಿರುವ ವಿಲೆಯನ್ನು ಅವರು ಅಂದಾಜಿಸಿದ ಮೌಲ್ಯಕ್ಕೆ ಸಮನಾದ ಬ್ಯಾಂಕ್ ಖಾತರಿಯನ್ನು ಹಾಜರುಪಡಿಸಿದ ತರುವಾಯ ಮತ್ತು ಜಫ್ತಿಯನ್ನು ಮಾಡಲಾಗಿದ್ದ ಕಾರಣದ ಆಧಾರದ ಮೇಲೆ ಅಪರಾಧವನ್ನು ವಿಚಾರಣೆ ಮಾಡಲು ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ದಂಡಾಧಿಕಾರಿಗಳ ಮುಂದೆ ಅಗತ್ಯಪಡಿಸಿದಂತೆ ಮತ್ತು ಹಾಗೆ ಅಗತ್ಯಪಡಿಸಿದಾಗಲೆಲ್ಲಾ ಹಾಗೆ ಬಿಡುಗಡೆ ಮಾಡಿದ ಸ್ವತ್ತಿನ ಹಾಜರಾತಿ ಬಾಂಡ್-ಅನ್ನು ಅದರ ಮಾಲೀಕನು ಬ್ಯಾಂಕ್ ಖಾತರಿಯನ್ನು ಬರೆದುಕೊಡುವುದರ ಆಧಾರದ ಮೇಲೆ ಜಾನುವಾರನ್ನು ಹೊರತುಪಡಿಸಿ ವಾಹನವನ್ನು ಒಳಗೊಂಡು ಸಾಮಗ್ರಿಗಳನ್ನು ಬಿಡುಗಡೆ ಮಾಡಬಹುದು ಮತ್ತು 19ನೇ ಪ್ರಕರಣದ ಅಡಿಯಲ್ಲಿ ಸ್ಥಾಪಿಸಲಾದ ಸಂಸ್ಥೆಗೆ ಜಾನುವಾರನ್ನು ಹಸ್ತಾಂತರಿಸಲು ಆದೇಶಿಸಬಹುದು.
(5) ಅಪರಾಧ ಎಸಗಲು ಬಳಸಿದ ಅಥವಾ ಬಳಸಲು ಉದ್ದೇಶಿಸಿದ ಆವರಣಗಳಿಗೆ ಮತ್ತು ಸಾಮಗ್ರಿಗಳಿಗೆ ಸಂಬಂಧಿಸಿದ ಅಂಥ ಜಫ್ತಿ ದಾಖಲೆಗಳ ವರದಿಯನ್ನು ಸ್ವೀಕರಿಸಿದ ಮೇಲೆ, ಉಪ-ವಿಭಾಗೀಯ ದಂಡಾಧಿಕಾರಿಗಳು, ಅಪರಾಧವನ್ನು ಈ ಅಧ್ಯಾದೇಶದ ಅಡಿಯಲ್ಲಿ ಎಸಗಲಾಗಿದೆ ಅಥವಾ ಎಸಗಬೇಕೆಂದು ಉದ್ದೇಶಿಸಲಾಗಿತ್ತು ಎಂಬುದನ್ನು ಸ್ವತಃ ಮನವರಿಕೆ ಮಾಡಿಕೊಂಡು, ಅಂಥ ಅಪರಾಧಕ್ಕೆ ಅಭಿಯೋಜನೆ ಹೂಡಬೇಕೇ ಅಥವಾ ಅದನ್ನು ಮುಟ್ಟುಗೋಲು ಹಾಕಿಕೊಂಡು ಅಂಥ ಆದೇಶವನ್ನು ಹೊರಡಿಸಬೇಕೆ ಎಂಬುದನ್ನು ನಿರ್ಧರಿಸತಕ್ಕದ್ದು;
ಪರಂತು, ಅಂಥ ಯಾವುದೇ ಆದೇಶವನ್ನು, ಅಪರಾಧವನ್ನು ಎಸಗುವ ವ್ಯಕ್ತಿಗೆ ಅಹವಾಲು ಹೇಳಿಕೊಳ್ಳುವ ಅವಕಾಶವನ್ನು ನೀಡಿದ ಹೊರತು ಮಾಡಕತಕ್ಕದ್ದಲ್ಲ.
(6) (5)ನೇ ಉಪ-ಪ್ರಕರಣದ ಅಡಿಯಲ್ಲಿ ಮುಟ್ಟುಗೋಲಿಗೆ ಆದೇಶವನ್ನು ಮಾಡುವಾಗ, ಉಪ-ವಿಭಾಗೀಯ ದಂಡಾಧಿಕಾರಿಗಳು, ಮುಟ್ಟುಗೋಲಿನ ಆದೇಶವನ್ನು ಯಾವ ಅಂಥ ಸ್ವತ್ತುಗಳ ಸಂಬಂಧದಲ್ಲಿ ಹೊರಡಿಸಲಾಗಿದೆಯೋ ಆ ಸ್ವತ್ತುಗಳು ಅವರ ಅಭಿಪ್ರಾಯದಲ್ಲಿ ಸಂರಕ್ಷಿಸಲಾಗದವುಗಳಾಗಿದ್ದಲ್ಲಿ ಅಥವಾ ಮಾನವ ಬಳಕೆ ಯೋಗ್ಯವಾಗಿಲ್ಲದೇ ಇದ್ದಲ್ಲಿ, ಅವುಗಳನ್ನು ನಾಶಪಡಿಸಲು ಸಹ ಆದೇಶಿಸಬಹುದಾಗಿದೆ.
(7) ಉಪ-ವಿಭಾಗೀಯ ದಂಡಾಧಿಕಾರಿಗಳ ಅಭಿಪ್ರಾಯದಂತೆ, ಹಾಗೆ ಮಾಡುವುದು ಸಾರ್ವಜನಿಕ ಹಿತಾಸಕ್ತಿಯಲ್ಲಿ ವಿಹಿತವೆಂದು ಅವರಿಗೆ ಅನ್ನಿಸಿದರೆ, ಮುಟ್ಟುಗೋಲು ಹಾಕಿಕೊಂಡ ಆವರಣಗಳನ್ನು ಬಹಿರಂಗ ಹರಾಜಿನಲ್ಲಿ ಮಾರಾಟ ಮಾಡಬಹುದು.
(8) ಮೇಲೆ ಹೇಳಲಾದಂತೆ, ಮುಟ್ಟುಗೋಲು ಹಾಕಿಕೊಂಡ ಯಾವುದೇ ಸ್ವತ್ತನ್ನು ಮಾರಾಟ ಮಾಡಿದಾಗ, ಅದರ ಉತ್ಪತ್ತಿಗಳನ್ನು, ಅಂಥ ಹರಾಜಿನ ಸಂಬಂಧದಲ್ಲಿನ ವೆಚ್ಚಗಳನ್ನು ಅಥವಾ ಅದಕ್ಕೆ ಸಂಬಂಧಿಸಿದ ಇತರ ಪ್ರಾಸಂಗಿಕ ವೆಚ್ಚಗಳನ್ನು ಕಡಿತ ಮಾಡಿಕೊಂಡ ನಂತರ, (5)ನೇ ಉಪ-ಪ್ರಕರಣದ ಅಡಿಯಲ್ಲಿ ಮಾಡಿದ ಮುಟ್ಟುಗೋಲಿನ ಆದೇಶವನ್ನು ಮೇಲ್ಮನವಿ ನ್ಯಾಯಾಲಯವು ರದ್ದುಗೊಳಿಸಿದರೆ ಅಥವಾ ಶೂನ್ಯಗೊಳಿಸಿದರೆ, ಅದರ ಮಾಲೀಕನಿಗೆ ಅಥವಾ ಅದನ್ನು ಅಂಥ ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದಂತೆ ಯಾರಿಂದ ಜಫ್ತಿ ಮಾಡಲಾಗಿತ್ತೋ ಆ ವ್ಯಕ್ತಿಗೆ ಸಂದಾಯ ಮಾಡತಕ್ಕದ್ದು.
(9) ಮುಟ್ಟುಗೋಲು ಹಾಕಿಕೊಂಡ ಜಾನುವಾರನ್ನು 19ನೇ ಪ್ರಕರಣದ ಅಡಿಯಲ್ಲಿ ಸ್ಥಾಪಿಸಿದ ಸಂಸ್ಥೆಗೆ ಹಸ್ತಾಂತರಿಸತಕ್ಕದ್ದು ಮತ್ತು ಯಾವುವೇ ಸಂದರ್ಭಗಳಲ್ಲೂ, ಆರೋಪಿಗೆ ಹಸ್ತಾಂತರಿಸತಕ್ಕದ್ದಲ್ಲ ಅಥವಾ ಬಹಿರಂಗ ಹರಾಜಿನಲ್ಲಿ ಮಾರಾಟ ಮಾಡತಕ್ಕದ್ದಲ್ಲ.