(1) ರಾಜ್ಯ ಸರ್ಕಾರವು ಜಾನುವಾರುಗಳ ಪೋಷಣೆಯನ್ನು ಕೈಗೊಳ್ಳುವುದಕ್ಕಾಗಿ ಅಗತ್ಯವೆಂದು ಭಾವಿಸಬಹುದಾದ ಅಂಥ ಸ್ಥಳಗಳಲ್ಲಿ ಗೋಶಾಲೆಗಳನ್ನು ಒಳಗೊಂಡ ಸಂಸ್ಥೆಯನ್ನು ಸ್ಥಾಪಿಸಬಹುದು ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರಕ್ಕೆ ನಿರ್ದೇಶಿಸಬಹುದು ಅಥವಾ ಕರ್ನಾಟಕ ಸೊಸೈಟಿಗಳ ನೋಂದಣಿ ಅಧಿನಿಯಮ, 1960ರ (1960ರ ಕರ್ನಾಟಕ ಅಧಿನಿಯಮ 17) ಅಥವಾ ಯಾವುದೇ ಕೇಂದ್ರ ಅಧಿನಿಯಮದ ಅಡಿಯಲ್ಲಿ ನೋಂದಾಯಿಸಿದ ಸೊಸೈಟಿಗೆ ಅಥವಾ ಸಂಸ್ಥೆ ಅಥವಾ ಸಂಘಕ್ಕೆ ಅನುಮತಿಯನ್ನು ನೀಡಬಹುದು.
(2) ರಾಜ್ಯ ಸರ್ಕಾರವು ಅದರಲ್ಲಿ ಜಾನುವಾರು ರಕ್ಷಣೆಗಾಗಿ ಅಂಥ ಸಂಸ್ಥೆಗಳ ಯುಕ್ತ ನಿರ್ವಹಣೆಗೆ ಮತ್ತು ಅದರಲ್ಲಿ ಸೇರಿಸಬಹುದಾದ ಆಕಳುಗಳು ಅಥವಾ ಇತರ ಜಾನುವಾರು ವರ್ಗದ ಅಥವಾ ತಳಿಗಾಗಿ ಬೆಂಬಲವನ್ನು ಒದಗಿಸಲು ನಿಯಮಗಳ ಮೂಲಕ ಉಪಬಂಧ ಕಲ್ಪಿಸಬಹುದು.
(3) ರಾಜ್ಯ ಸರ್ಕಾರವು ಅಥವಾ ರಾಜ್ಯ ಸರ್ಕಾರದ ಪೂರ್ವ ಮಂಜೂರಾತಿಗೆ ಒಳಪಟ್ಟು (1)ನೇ ಉಪಪ್ರಕರಣದ ಅಡಿಯಲ್ಲಿ ಸಂಸ್ಥೆಯನ್ನು ಸ್ಥಾಪಿಸಿದ ಸ್ಥಳೀಯ ಪ್ರಾಧಿಕಾರ, ಸೊಸೈಟಿ ಅಥವಾ ವ್ಯಕ್ತಿಗಳ ನಿಕಾಯ ಅಥವಾ ಸಂಘವು ಅಂಥ ಸಂಸ್ಥೆಯ ನಿರ್ವಹಣೆಗಾಗಿ ನಿಯಮಿಸಬಹುದಾದ ಅಂಥ ಶುಲ್ಕಗಳನ್ನು ವಿಧಿಸಬಹುದು.
(4) ಈ ಅಧ್ಯಾದೇಶದ ಪ್ರಾರಂಭದ ದಿನಾಂಕದಂದು ಅಸ್ತಿತ್ವದಲ್ಲಿರುವ ಪ್ರತಿಯೊಂದು ಗೋಶಾಲೆಯು ಮತ್ತು ಅದರ ತರುವಾಯ ಪ್ರಾರಂಭವಾಗುವ ಯಾವುದೇ ಹೊಸ ಗೋಶಾಲೆಯು, ಈ ಅಧ್ಯಾದೇಶವು ಪ್ರಾರಂಭವಾದ ದಿನಾಂಕದಿಂದ ಅಥವಾ ಸಂದರ್ಭಾನುಸಾರವಾಗಿ ಹೊಸ ಗೋಶಾಲೆಯು ಆರಂಭವಾದ ದಿನಾಂಕದಿಂದ ಮೂರು ತಿಂಗಳುಗಳೊಳಗೆ ನಿಯಮಿಸಬಹುದಾದ ಅಂಥ ಷರತ್ತುಗಳಿಗೆ ಒಳಪಟ್ಟು ಅಂಥ ಶುಲ್ಕದೊಂದಿಗೆ ನೋಂದಣಿ ಅಧಿಕಾರಿಯಲ್ಲಿ ನೋಂದಾಯಿಸತಕ್ಕದ್ದು.
(5) ರಾಜ್ಯ ಸರ್ಕಾರವು, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ದರ್ಜೆಗೆ ಕಡಿಮೆಯಲ್ಲದ ಅಧಿಕಾರಿಯನ್ನು, ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದ ಅಂಥ ಪ್ರದೇಶಕ್ಕಾಗಿ ನೋಂದಣಿ ಅಧಿಕಾರಿಯನ್ನಾಗಿ ನೇಮಿಸಬಹುದು.