(1) 11ನೇ ಪ್ರಕರಣದಲ್ಲಿ ಏನೇ ಇದ್ದರೂ, ಪ್ರತಿಯೊಬ್ಬ ಪ್ರವರ್ತಕ ಅಥವಾ ಈ ಅಧ್ಯಾದೇಶದ ಅಡಿಯಲ್ಲಿ ತನ್ನನ್ನು ನೋಂದಾಯಿಸಿಕೊಳ್ಳಲು ಬದ್ಧನಾದ ಪ್ರತಿಯೊಬ್ಬ ವ್ಯಕ್ತಿಯೂ ನಿಯಮಿಸಬಹುದಾದಂತಹ ಅವಧಿಗಾಗಿ ಮತ್ತು ಅಂಥ ಅವಧಿಯ ಒಳಗೆ ಮತ್ತು ಅಂಥ ರೀತಿಯಲ್ಲಿ ಮತ್ತು ಅಂಥ ವಿವರಗಳನ್ನು ಒಳಗೊಂಡ ಒಂದು ವಿವರ ಪಟ್ಟಿಕೆಯನ್ನು ಸಹಾಯಕ ಆಯುಕ್ತನಿಗೆ ಸಲ್ಲಿಸತಕ್ಕದ್ದು.
(2) (1)ನೇ ಉಪಪ್ರಕರಣದ ಅಡಿಯಲ್ಲಿ ಯಾವೊಬ್ಬ ಪ್ರವರ್ತಕನು ಯಾವುದೇ ವಿವರಪಟ್ಟಿಕೆಯನ್ನು ಸಲ್ಲಿಸುವ ಮೊದಲು ಅವನು ನಿಯಮಿಸಲಾದ ರೀತಿಯಲ್ಲಿ 11ನೇ ಪ್ರಕರಣದ ಅಡಿಯಲ್ಲಿ ಆ ವಿವರ ಪಟ್ಟಿಕೆಯು ಸಂಬಂಧಪಟ್ಟ ಅವಧಿಗಾಗಿ ತಾನು ಸಂದಾಯ ಮಾಡತಕ್ಕ ತೆರಿಗೆಯ ಪೂರ್ಣ ಮೊಬಲಗನ್ನು ಮುಂಗಡವಾಗಿ ಸಂದಾಯ ಮಾಡತಕ್ಕದ್ದು ಮತ್ತು ವಿವರ ಪಟ್ಟಿಕೆಯ ಜೊತೆಯಲ್ಲಿ ಅಂಥ ತೆರಿಗೆಯನ್ನು ಸಂದಾಯಮಾಡಿದ ಬಗ್ಗೆ ತೃಪ್ತಿಕರ ರುಜುವಾತನ್ನು ಒದಗಿಸತಕ್ಕದ್ದು ಮತ್ತು ಅಂತಿಮವಾಗಿ ತೆರಿಗೆ ನಿರ್ಧರಣೆ ಮಾಡಿದ ಮೇಲೆ ಹಾಗೆ ಸಂದಾಯಮಾಡಿದ ಮೊಬಲಗನ್ನು ಅಂತಿಮವಾಗಿ ತೆರಿಗೆ ನಿರ್ಧರಣೆ ಮಾಡಿದ ತೆರಿಗೆ ಕುರಿತು ಸಂದಾಯಮಾಡಿದ್ದು ಎಂಬುದಾಗಿ ಭಾವಿಸತಕ್ಕದ್ದು.
(3) ಸಹಾಯಕ ಆಯುಕ್ತನಿಗೆ (1)ನೇ ಉಪಪ್ರಕರಣದ ಅಡಿಯಲ್ಲಿ ಸಲ್ಲಿಸಿದ ವಿವರಪಟ್ಟಿಕೆ ಸರಿಯಾದದ್ದು ಮತ್ತು ಪೂರ್ಣವಾದದ್ದು ಎಂದು ಮನದಟ್ಟಾದರೆ ಅವನು ಅದರ ಆಧಾರದ ಮೇಲೆ ಪ್ರವರ್ತಕ ಅಥವಾ ಅಂಥ ವ್ಯಕ್ತಿಯ ತೆರಿಗೆ ನಿರ್ಧರಣೆ ಮಾಡತಕ್ಕದ್ದು.
(4) (1)ನೇ ಉಪಪ್ರಕರಣದ ಅಡಿಯಲ್ಲಿ ಪ್ರವರ್ತಕನು ನಿಯಮಿಸಲಾದ ಅವಧಿಗಿಂತ ಮುಂಚೆ ಯಾವ ವಿವರ ಪಟ್ಟಿಕೆಯನ್ನು ಸಲ್ಲಿಸದೇ ಹೋದಲ್ಲಿ ಅಥವಾ ಅವನು ಸಲ್ಲಿಸಿದ ವಿವರ ಪಟ್ಟಿಕೆಯು ಸಹಾಯಕ ಆಯುಕ್ತನಿಗೆ ಸರಿಯಲ್ಲ ಅಥವಾ ಅಪೂರ್ಣ ಎನಿಸಿದರೆ ಅವನು ಪ್ರವರ್ತಕನ ಬಗ್ಗೆ ತನ್ನ ಬಹುಮಟ್ಟಿನ ವಿವೇಚನೆ ಅನುಸಾರ ತೆರಿಗೆ ನಿರ್ಧರಣೆ ಮಾಡತಕ್ಕದ್ದು ಮತ್ತು ಅಂಥ ತೆರಿಗೆ ನಿರ್ಧರಣೆಗೆ ಕಾರಣಗಳನ್ನು ದಾಖಲು ಮಾಡತಕ್ಕದ್ದು:
ಪರಂತು, ಈ ಉಪ ಪ್ರಕರಣದ ಅಡಿಯಲ್ಲಿ ಕ್ರಮಕೈಗೊಳ್ಳುವ ಮೊದಲು ಆ ಪ್ರವರ್ತಕ ಅಥವಾ ವ್ಯಕ್ತಿಗೆ ತಾನು ಸಲ್ಲಿಸಿದ ವಿವರಪಟ್ಟಿಕೆಯು ಸರಿಯಾಗಿರುವ ಬಗ್ಗೆ ಅಥವಾ ಪೂರ್ಣವಾಗಿರುವ ಬಗ್ಗೆ ರುಜುವಾತುಪಡಿಸಲು ಸಮಂಜಸ ಅವಕಾಶ ನೀಡತಕ್ಕದ್ದು.
(5) (4)ನೇ ಉಪಪ್ರಕರಣದ ಅಡಿಯಲ್ಲಿ ಯಾವುದೇ ತೆರಿಗೆ ನಿರ್ಧರಣೆ ಮಾಡುವಾಗ ಸಹಾಯಕ ಆಯುಕ್ತನು ನಿರ್ಧರಿಸಲಾದ ತೆರಿಗೆಯ ಜೊತೆಯಲ್ಲಿ ಪ್ರವರ್ತಕನಿಂದ ಬಾಕಿಯಿದ್ದ, ಆದರೆ ಅವನು ವಿವರಪಟ್ಟಿಕೆಗಳಲ್ಲಿ ಪ್ರಕಟಪಡಿಸದಿದ್ದ ತೆರಿಗೆ ಮೊಬಲಗಿನ ಅರ್ಧ ಭಾಗಕ್ಕೆ ಸಮನಾದ ದಂಡವನ್ನು ಮತ್ತು ವಿವರಪಟ್ಟಿಕೆ ಸಲ್ಲಿಸದ ಸಂದರ್ಭದಲ್ಲಿ ನಿರ್ಧರಿಸಲಾದ ತೆರಿಗೆಯ ಅರ್ಧಭಾಗಕ್ಕೆ ಸಮನಾದ ದಂಡವನ್ನು ಸಂದಾಯಮಾಡಲು ಪ್ರವರ್ತಕನಿಗೆ ನಿರ್ದೇಶಿಸಬಹುದು.