ನಿಯಮಿಸಬಹುದಾದಂತಹ ನಿಯಮಗಳಿಗೆ ಒಳಪಟ್ಟು ಪ್ರತಿಯೊಬ್ಬ ಪ್ರವರ್ತಕನೂ ಪ್ರತಿ ಸೋಮವಾರ ಸಹಾಯಕ ಆಯುಕ್ತನಿಗೆ, ಆ ದಿನದ ತರುವಾಯ ಬರುವ ಎರಡನೇ ಸೋಮವಾರದಿಂದ ಆರಂಭಗೊಂಡ ಆ ವಾರದಲ್ಲಿ ನಡೆಸಲಿರುವ ಡ್ರಾಗಳಿಗೆ ಸಂಬಂಧಪಟ್ಟಂತೆ ನಿಯಮಿಸಬಹುದಾದಂತಹ ವಿವರಗಳನ್ನೊಳಗೊಂಡ ಒಂದು ವಿವರ ಪತ್ರವನ್ನು ಸಲ್ಲಿಸತಕ್ಕದ್ದು ಮತ್ತು ವಿವರಪತ್ರದಲ್ಲಿ ತೋರಿಸಿದ ಡ್ರಾಗಳ ಸಂಬಂಧದಲ್ಲಿ ಈ ಅಧ್ಯಾದೇಶದ ಅಡಿಯಲ್ಲಿ ಆತ ಸಂದಾಯಮಾಡತಕ್ಕ ಪೂರ್ಣ ಮೊಬಲಗನ್ನು ಮುಂಗಡವಾಗಿ ಸಂದಾಯ ಮಾಡತಕ್ಕದ್ದು ಮತ್ತು ಹಾಗೆ ಸಂದಾಯ ಮಾಡತಕ್ಕ ಮೊಬಲಗುಗಳನ್ನು 12ನೇ ಪ್ರಕರಣದ ಉದ್ದೇಶಕ್ಕಾಗಿ ಅಂಥ ಪ್ರವರ್ತಕನಿಂದ ಈ ಅಧ್ಯಾದೇಶದಡಿಯಲ್ಲಿ ಬಾಕಿಯಾದ ಮೊಬಲಗು ಎಂದು ಭಾವಿಸತಕ್ಕದ್ದು:
ಪರಂತು, ಈ ಅಧ್ಯಾದೇಶದ ಪ್ರಾರಂಭದ ನಿಕಟತರುವಾಯ ನಡೆಸಲಿರುವ ಯಾವುದೇ ಡ್ರಾಗೆ ಸಂಬಂಧಪಟ್ಟ ತೆರಿಗೆಯನ್ನು ಅಂಥ ಪ್ರಾರಂಭದಿಂದ ಐದು ದಿನಗಳ ಒಂದು ಅವಧಿಯ ಒಳಗೆ ಸಂದಾಯಮಾಡತಕ್ಕದ್ದು:
ಮತ್ತೂ ಪರಂತು, ಯಾವುದೇ ಸೋಮವಾರ ಕೆಲಸದ ದಿನವಲ್ಲದೇ ಹೋದರೆ, ವಿವರ ಪತ್ರವನ್ನು ನಿಕಟ ತರುವಾಯದ ಕೆಲಸದ ದಿನದಂದು ಸಲ್ಲಿಸತಕ್ಕದ್ದು.
(2) ಯಾವುದೇ ವಾರಕ್ಕಾಗಿ ತೆರಿಗೆ ಸಂದಾಯ ಮಾಡುವಲ್ಲಿ ತಪ್ಪಿದಲ್ಲಿ, (1)ನೇ ಉಪಪ್ರಕರಣದಡಿ ಆಗತ್ಯವಾದ ವಿವರ ಪತ್ರವನ್ನು ಸಲ್ಲಿಸಿರಲಿ ಅಥವಾ ಇಲ್ಲದಿರಲಿ ಅಥವಾ ಸಂದಾಯಮಾಡಿದ ತೆರಿಗೆ ಯಾವುದೇ ವಾರಕ್ಕೆ ಸಂದಾಯಮಾಡತಕ್ಕ ತೆರಿಗೆಗಿಂತ ಕಡಿಮೆ ಇದ್ದರೆ, ತೆರಿಗೆ ಸಂದಾಯಮಾಡಲು ತಪ್ಪಿದ ಅಥವಾ ಕಡಿಮೆ ತೆರಿಗೆ ಸಂದಾಯ ಮಾಡಿದ ಪ್ರವರ್ತಕನು ತೆರಿಗೆಯ ಜೊತೆಗೆ ಹಾಗೆ ಸಂದಾಯತಪ್ಪಿಸಿದ ಅಥವಾ ಕಡಿಮೆ ಸಂದಾಯ ಮಾಡಿದ ದಿನಾಂಕದಿಂದ ಅಂಥ ತೆರಿಗೆಸಂದಾಯ ಮಾಡಿದ ದಿನಾಂಕದವರೆಗೆ ತಿಂಗಳಿಗೆ ಶೇ. ಎರಡರ ದರದಲ್ಲಿ ಲೆಕ್ಕಹಾಕಲಾದ ಬಡ್ಡಿಯನ್ನು ಸಂದಾಯಮಾಡತಕ್ಕದ್ದು.
(3) ಪ್ರವರ್ತಕನು (1)ನೇ ಉಪಪ್ರಕರಣದಡಿಯಲ್ಲಿ ನಿಯಮಿಸಲಾದ ದಿನಾಂಕಕ್ಕಿಂತ ಮುಂಚೆ ಅಂಥ ಯಾವ ವಿವರ ಪತ್ರವನ್ನೂ ಸಲ್ಲಿಸದಿದ್ದರೆ ಅಥವಾ ಅವನು ಸಲ್ಲಿಸಿದ ವಿವರ ಪತ್ರವು ಸಹಾಯಕ ಆಯುಕ್ತನಿಗೆ ಸರಿಯಲ್ಲ ಅಥವಾ ಅಪೂರ್ಣವೆಂದು ಕಂಡುಬಂದರೆ ಸಹಾಯಕ ಆಯುಕ್ತನು ತನ್ನ ಬಹುಮಟ್ಟಿನ ವಿವೇಚನೆ ಮೇರೆಗೆ ಪ್ರವರ್ತಕನ ಬಗ್ಗೆ ತಾತ್ಕಾಲಿಕವಾಗಿ ಕರನಿರ್ಧರಣೆ ಮಾಡಬಹುದು ಮತ್ತು ಅಂಥ ತೆರಿಗೆ ನಿರ್ಧರಣೆಗೆ ತನ್ನ ಕಾರಣಗಳನ್ನು ದಾಖಲಿಸತಕ್ಕದ್ದು ಹಾಗೂ ಅಂಥ ತೆರಿಗೆ ನಿರ್ಧರಣೆ ಆಧಾರದ ಮೇಲೆ ಕೂಡಲೇ ತೆರಿಗೆ ತಗಾದೆ ಮಾಡಿ ವಸೂಲು ಮಾಡಲು ಮುಂದುವರಿಯತಕ್ಕದ್ದು:
ಪರಂತು, ಈ ಉಪಪ್ರಕರಣದಡಿಯಲ್ಲಿ ಕ್ರಮ ಕೈಗೊಳ್ಳುವ ಮೊದಲು ಪ್ರವರ್ತಕನಿಗೆ ತನ್ನ ಅಹವಾಲು ಹೇಳಿಕೊಳ್ಳಲು ಸಮಂಜಸ ಅವಕಾಶ ನೀಡತಕ್ಕದ್ದು.