(1) ಯಾವುದೇ ಡ್ರಾ ತೆರಿಗೆ ನಿರ್ಧರಣೆಯಿಂದ ತಪ್ಪಿಹೋಗಿದೆ ಅಥವಾ ಈ ಅಧ್ಯಾದೇಶದ ಅಡಿಯಲ್ಲಿ ನಿರ್ಧರಿಸಬಹುದಾದ ದರಕ್ಕಿಂತ ಕಡಿಮೆ ದರದಲ್ಲಿ ಅದರ ತೆರಿಗೆ ನಿರ್ಧರಿಸಲಾಗಿದೆ ಎಂದು ನಂಬಲು ಸಹಾಯಕ ಆಯುಕ್ತನಿಗೆ ಕಾರಣವಿದ್ದರೆ, ತೆರಿಗೆ ನಿರ್ಧರಣೆ ಅಥವಾ ಮರು ತೆರಿಗೆ ನಿರ್ಧರಣೆ ಸಮಯದಲ್ಲಿ ಆ ಡ್ರಾ ಸಂಬಂಧದಲ್ಲಿ ತೆರಿಗೆ ನಿರ್ಧರಣೆಯು ತನ್ನ ಮುಂದೆ ಇದ್ದಾಗ್ಯೂ, (3)ನೇ ಉಪಪ್ರಕರಣದ ಉಪಬಂಧಗಳಿಗೆ ಒಳಪಟ್ಟು, ಆ ತೆರಿಗೆ ಯಾವ ಅವಧಿಗೆ ಸಂಬಂಧಪಟ್ಟಿದೆಯೋ ಆ ಅವಧಿ ಮುಕ್ತಾಯವಾದಾಗಿನಿಂದ ಮೂರು ವರ್ಷಗಳ ಅವಧಿಯ ಒಳಗೆ ಯಾವುದೇ ಕಾಲದಲ್ಲಿ, ಪ್ರವರ್ತಕನಿಗೆ ಒಂದು ನೋಟೀಸು ನೀಡಿದ ತರುವಾಯ ಮತ್ತು ತಾನು ಅವಶ್ಯವೆಂದು ಪರಿಗಣಿಸಬಹುದಾದಂಥ ವಿಚಾರಣೆ ನಡೆಸಿದ ತರುವಾಯ ಆ ಡ್ರಾ ಸಂಬಂಧದಲ್ಲಿ ಪ್ರವರ್ತಕನು ಸಂದಾಯಮಾಡತಕ್ಕ ತೆರಿಗೆಯನ್ನು ತನ್ನ ಬಹುಮಟ್ಟಿನ ವಿವೇಚನೆ ಮೇರೆಗೆ ತೆರಿಗೆ ನಿರ್ಧರಣೆ ಅಥವಾ ಮರು ತೆರಿಗೆ ನಿರ್ಧರಣೆ ಮಾಡಲು ಮುಂದುವರಿಯತಕ್ಕದ್ದು.
(2) (1)ನೇ ಉಪಪ್ರಕರಣದ ಅಡಿಯಲ್ಲಿ ಒಂದು ತೆರಿಗೆ ನಿರ್ಧರಣೆ ಮಾಡುವಾಗ ಉಪ ಆಯುಕ್ತರು, ತೆರಿಗೆ ನಿರ್ಧರಣೆ ತಪ್ಪಿಹೋಗಲು ಪ್ರವರ್ತಕನು ಡ್ರಾ ಆದ ಬಗ್ಗೆ ಉದ್ದೇಶಪೂರ್ವಕವಾಗಿ ಬಹಿರಂಗಪಡಿಸದೇ ಇರುವುದೇ ಕಾರಣ ಎಂದು ತನಗೆ ಮನದಟ್ಟಾದರೆ, (1)ನೇ ಉಪಪ್ರಕರಣದ ಅಡಿಯಲ್ಲಿ ನಿರ್ಧರಣೆ ಮಾಡಿದ ತೆರಿಗೆಯ ಜೊತೆಯಲ್ಲಿ ಹಾಗೆ ತೆರಿಗೆ ನಿರ್ಧರಣೆ ಮಾಡಿದ ತೆರಿಗೆಯ ಅರ್ಧಭಾಗಕ್ಕೆ ಸಮನಾದ ದಂಡವನ್ನು ಸಂದಾಯಮಾಡಲು ನಿರ್ದೇಶಿಸಬಹುದು:
ಪರಂತು, ಬಾಧಿತನಾದ ಪ್ರವರ್ತಕನು ಹಾಗೆ ದಂಡ ವಿಧಿಸುವುದರ ವಿರುದ್ಧ ಕಾರಣವನ್ನು ತೋರಿಸಲು ಸಮಂಜಸ ಅವಕಾಶವನ್ನು ಹೊಂದಿದ ಹೊರತು ಈ ಉಪಪ್ರಕರಣದ ಅಡಿಯಲ್ಲಿ ಯಾವ ದಂಡವನ್ನು ಸಂದಾಯಮಾಡಲು ನಿರ್ದೇಶಿಸತಕ್ಕದ್ದಲ್ಲ.
(3) ಈ ಪ್ರಕರಣದಡಿಯಲ್ಲಿ ತೆರಿಗೆ ನಿರ್ಧರಣೆಗೆ ಕಾಲಪರಿಮಿತಿಯ ಅವಧಿಯನ್ನು ಲೆಕ್ಕಹಾಕುವಾಗ, ನ್ಯಾಯಾಲಯ ಅಥವಾ ಇತರ ಪ್ರಾಧಿಕಾರವು ನೀಡಿದ ಯಾವುದೇ ತಡೆಯಾಜ್ಞೆಯ ಕಾರಣದಿಂದ ಅಥವಾ ಒಂದು ಅಪೀಲು ಅಥವಾ ಇತರ ವ್ಯವಹರಣೆಯು ಇತ್ಯಾರ್ಥದಲ್ಲಿದೆ ಎಂಬ ಕಾರಣದಿಂದ ಒಂದು ತೆರಿಗೆ ನಿರ್ಧರಣೆಯನ್ನು ಮುಂದೂಡಲಾಗಿದ್ದ ಸಮಯವನ್ನು ಬಿಟ್ಟುಬಿಡತಕ್ಕದ್ದು:
ಪರಂತು, ಯಾವ ಸಮಯದೊಳಗೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಹುದೋ ಅಥವಾ ಯಾವುದೇ ಆದೇಶ, ತೆರಿಗೆ ನಿರ್ಧರಣೆ ಅಥವಾ ಮರು ತೆರಿಗೆ ನಿರ್ಧರಣೆ ಮಾಡಬಹುದೋ ಆ ಸಮಯವನ್ನು ಪರಿಮಿತಿಗೊಳಿಸುವ ಈ ಪ್ರಕರಣದಲ್ಲಿರುವ ಯಾವುದೂ, 15 ರಿಂದ 18ನೇ ಪ್ರಕರಣಗಳ ಅಡಿಯಲ್ಲಿ ಮಾಡಲಾದ ಯಾವುದೇ ನಿರ್ಣಯ, ನಿರ್ದೇಶನ ಅಥವಾ ಆದೇಶದ ಅಥವಾ ಸರ್ವೋಚ್ಚ ನ್ಯಾಯಾಲಯ, ಉಚ್ಚನ್ಯಾಯಾಲಯ ಅಥವಾ ಯಾವುದೇ ಇತರ ನ್ಯಾಯಾಲಯದ ಯಾವುದೇ ತೀರ್ಪು ಅಥವಾ ಆದೇಶದ ಪರಿಣಾಮವಾಗಿ ಅಥವಾ ಅದನ್ನು ಜಾರಿಗೊಳಿಸಲು ಪ್ರವರ್ತಕನ ಬಗ್ಗೆ ಮಾಡಲಾದ ತೆರಿಗೆ ನಿರ್ಧರಣೆ ಅಥವಾ ಮರು ತೆರಿಗೆ ನಿರ್ಧರಣೆಗೆ ಅನ್ವಯಿಸತಕ್ಕದ್ದಲ್ಲ.