(1) ಸಹಾಯಕ ಆಯುಕ್ತನು ಈ ಅಧ್ಯಾದೇಶದ ಉಪಬಂಧಗಳ ಅಡಿಯಲ್ಲಿ ಹೊರಡಿಸಿದ ಯಾವುದೇ ಆದೇಶದಿಂದ ಬಾಧಿತನಾದ ಯಾವೊಬ್ಬ ವ್ಯಕ್ತಿಯು ಅವುಗಳನ್ನು ಆಕ್ಷೇಪಿಸಿ ಸಂಬಂಧಪಟ್ಟ ಅಧಿಕಾರವ್ಯಾಪ್ತಿ ಹೊಂದಿದ ಜಂಟಿ ಆಯುಕ್ತನಿಗೆ ಅಪೀಲು ಮಾಡಿಕೊಳ್ಳಬಹುದು.
(2) ಅಪೀಲು, ಅಂಥ ಆದೇಶ ಪತ್ರ ತಲುಪಿದ ದಿನಾಂಕದಿಂದ ಮೂವ್ವತ್ತು ದಿನಗಳೊಳಗೆ ಹೂಡತಕ್ಕದ್ದು.
(3) (ಎ) ತೆರಿಗೆ ನಿರ್ಧರಣೆಯ ಆದೇಶದ ವಿರುದ್ಧ ಯಾವುದೇ ಅಪೀಲನ್ನು ಅದರೊಂದಿಗೆ ಅಪೀಲಿನಲ್ಲಿ ವಿವಾದಿಸದೇ ಇರುವ ತೆರಿಗೆ ಮತ್ತು ದಂಡ ಸಂದಾಯದ ಬಗ್ಗೆ ತೃಪ್ತಿಕರ ರುಜುವಾತು ಇದ್ದ ಹೊರತು ಅಪೀಲು ಪ್ರಾಧಿಕಾರಿಯು ಪುರಸ್ಕರಿಸತಕ್ಕದ್ದಲ್ಲ;
(ಬಿ) (1)ನೇ ಉಪ-ಪ್ರಕರಣದ ಅಡಿಯಲ್ಲಿ ಅಪೀಲಿನ್ನು ಹೂಡಿದ್ದರೂ ಯಾವ ಆದೇಶದ ವಿರುದ್ದ ಅಪೀಲನ್ನು ಸಲ್ಲಿಸಲಾಗಿದೆಯೋ ಆ ಆದೇಶಕ್ಕೆ ಅನುಸಾರವಾಗಿ ತೆರಿಗೆ ಅಥವಾ ಇತರ ಮೊಬಲಗನ್ನು ಸಂದಾಯಮಾಡತಕ್ಕದ್ದು.
(4) ಅಪೀಲು, ನಿಯಮಿಸಲಾದ ನಮೂನೆಯಲ್ಲಿ ಇರತಕ್ಕದ್ದು ಮತ್ತು ನಿಯಮಿಸಲಾದ ರೀತಿಯಲ್ಲಿ ಸತ್ಯಾಪನೆ ಮಾಡಿರತಕ್ಕದ್ದು.
(5) ಅಪೀಲನ್ನು ವಿಲೇಮಾಡುವಲ್ಲಿ, ಅಪೀಲು ಪ್ರಾಧಿಕಾರವು, ಅಪೀಲುದಾರನಿಗೆ ಅಹವಾಲನ್ನು ಹೇಳಿಕೊಳ್ಳಲು ಒಂದು ಯುಕ್ತ ಅವಕಾಶವನ್ನು ಕೊಟ್ಟ ತರುವಾಯ,-
(i) ಆದೇಶವನ್ನು ಸ್ಥಿರೀಕರಿಸಬಹುದು, ಕಡಿಮೆಗೊಳಿಸಬಹುದು, ಹೆಚ್ಚಿಸಬಹುದು ಅಥವಾ ಶೂನ್ಯಗೊಳಿಸಬಹುದು;
(ii) ಆದೇಶವನ್ನು ರದ್ದುಗೊಳಿಸಬಹುದು ಮತ್ತು ನಿರ್ದೇಶಿಸ ಬಹುದಾದಂಥ ವಿಚಾರಣೆಯ ತರುವಾಯ ಒಂದು ಹೊಸ ಆದೇಶವನ್ನು ಹೊರಡಿಸಲು ನಿಯಮಿಸಲಾದ ಪ್ರಾಧಿಕಾರಕ್ಕೆ ನಿರ್ದೇಶಿಸಬಹುದು;
(iii) ತಾನು ಸೂಕ್ತವೆಂದು ಭಾವಿಸಬಹುದಾದಂಥ ಇತರ ಆದೇಶಗಳನ್ನು ಮಾಡಬಹುದು.
(6) ಈ ಪ್ರಕರಣದ ಅಡಿಯಲ್ಲಿ ಅಪೀಲಿನಲ್ಲಿ ಮಾಡಿದ ಪ್ರತಿಯೊಂದು ಆದೇಶವು, 17 ಮತ್ತು 18ನೇ ಪ್ರಕರಣಗಳ ಉಪಬಂಧಗಳಿಗೆ ಒಳಪಟ್ಟು ಅಂತಿಮವಾಗಿರತಕ್ಕದ್ದು.