(1) ಸಕ್ಷಮ ಅಧಿಕಾರಿ ಅಥವಾ ಸಂದರ್ಭಾನುಸಾರ ಮೇಲ್ಮನವಿ ಪ್ರಾಧಿಕಾರಿಯು ಆದೇಶವನ್ನು ಮುಕ್ತ ಕೇಳುವಿಕೆ (ಓಪನ್ ಹಿಯರಿಂಗ್) ಯಲ್ಲಿ ಘೋಷಿಸತಕ್ಕದ್ದು ಮತ್ತು ಇದು ಲಿಖಿತದಲ್ಲಿ ಇರತಕ್ಕದ್ದು (ನಮೂನೆ-ಈ).
(2) ಸಕ್ಷಮ ಅಧಿಕಾರಿಯು ಮೇಲ್ಮನವಿ ಆದೇಶದ ಪ್ರತಿಯನ್ನು ಅರ್ಜಿದಾರನಿಗೆ ಮತ್ತು ಹೆಸರಿಸಲಾದ ಅಧಿಕಾರಿಗೆ ಆದೇಶದ ದಿನಾಂಕದಿಂದ ಏಳು ದಿನಗಳೊಳಗೆ ನೀಡತಕ್ಕದ್ದು.
(3) ಮೇಲ್ಮನವಿ ಪ್ರಾಧಿಕಾರಿಯು ಮೇಲ್ಮನವಿ ಆದೇಶದ ಪ್ರತಿಯನ್ನು ಅರ್ಜಿದಾರರಿಗೆ, ಹೆಸರಿಸಲಾದ ಅಧಿಕಾರಿಗೆ ಮತ್ತು ಸಕ್ಷಮ ಅಧಿಕಾರಿಗೆ ನೀಡತಕ್ಕದ್ದು.
(4) ಪರಿಹಾರ ವೆಚ್ಚವನ್ನು ವಿಧಿಸಿದ ಸಂದರ್ಭದಲ್ಲಿ, ಸಕ್ಷಮ ಅಧಿಕಾರಿ ಅಥವಾ ಸಂದರ್ಭನುಸಾರ ಮೇಲ್ಮನವಿ ಪ್ರಾಧಿಕಾರಿಯು ಅಂಥ ಆದೇಶದ ಪ್ರತಿಯನ್ನು ಹೆಸರಿಸಲಾದ ಅಧಿಕಾರಿ ಅಥವಾ ಆತನ ಅಧೀನದಲ್ಲಿಯ ಸಾರ್ವಜನಿಕ ನೌಕರನ ಅಥವಾ ಸಂದರ್ಭಾನುಸಾರವಾಗಿ ಸಕ್ಷಮ ಪ್ರಾಧಿಕಾರಿಯ ಸಂಬಳ ಅಥವಾ ಗೌರವ ಧನ ಅಥವಾ ಪರಿಶ್ರಮ ಧನದಿಂದ ಮೊಬಲಗನ್ನು ಕಡಿತಗೊಳಿಸುವುದಕ್ಕೆ ಸೂಚನೆಗಳೊಡನೆ ಸಂಬಂಧಪಟ್ಟ ಸಾರ್ವಜನಿಕ ಪ್ರಾಧಿಕಾರಕ್ಕೆ ತಿಳಿಸತಕ್ಕದ್ದು.
(5) ಹೆಸರಿಸಲಾದ ಅಧಿಕಾರಿ ಅಥವಾ ಆತನ ಅಧೀನದಲ್ಲಿಯ ಸಾರ್ವಜನಿಕ ನೌಕರ ಅಥವಾ ಸಂದರ್ಭಾನುಸಾರವಾಗಿ ಸಕ್ಷಮ ಅಧಿಕಾರಿಯ ವಿರುದ್ಧ ಇಲಾಖಾ ವಿಚಾರಣೆಗೆ ಶಿಫಾರಸ್ಸು ಮಾಡಿದ ಸಂದರ್ಭದಲ್ಲಿ, ಮೇಲ್ಮನವಿ ಪ್ರಾಧಿಕಾರಿಯು ಆತನ ವಿರುದ್ಧ ಹೊರಡಿಸಿದ ಆದೇಶವನ್ನು ಸಂಬಂಧಪಟ್ಟ ಸಾರ್ವಜನಿಕ ಪ್ರಾಧಿಕಾರ ಅಥವಾ ನೇಮಕಾತಿ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದು.