ಲೈಸೆನ್ಸಿನ ಮಂಜೂರಾತಿಗಾಗಿ ಅಥವಾ ನವೀಕರಣಕ್ಕಾಗಿನ ಅರ್ಜಿಗೆ ಸಂಬಂಧಿಸಿದಂತೆ ಸಂದಾಯವಾಗಬೇಕಾದ ಫೀಜನ್ನು, ಅರ್ಜಿಯನ್ನು ಸಲ್ಲಿಸುವ ಕಾಲದಲ್ಲಿ ನಗದು ರೂಪದಲ್ಲೇ ಆಗಲಿ ಅಥವಾ ಲೇವಾದೇವಿದಾರರ ಸಹಾಯಕ ರಿಜಿಸ್ಟ್ರಾರನಿಗೆ ಅವರ ವಿಳಾಸಕ್ಕೆ ಮನಿ ಆರ್ಡರ್ ಮೂಲಕವಾಗಿಯೇ ಆಗಲಿ ಅಥವಾ ಖಜಾನೆಯಲ್ಲಿ, ಉಪಖಜಾನೆಯಲ್ಲಿ ಅಥವಾ ಭಾರತದ ರಿಸರ್ವ್ ಬ್ಯಾಂಕಿನಲ್ಲಿ ಸರ್ಕಾರದ ಲೆಕ್ಕಕ್ಕೆ ಜಮೆ ಮಾಡುವ ಮೂಲಕವಾಗಿಯೇ ಆಗಲಿ ಸಂದಾಯ ಮಾಡತಕ್ಕುದು. ಸಂದರ್ಭಾನುಸಾರ ಮನಿ ಆರ್ಡರನ್ನು ಕಳುಹಿಸಿದ ರಸೀತಿ, ಅಥವಾ ಖಜಾನೆ ಅಥವಾ ಬ್ಯಾಂಕ್ ಚಲನ್ನ್ನು ಅಂಥ ಅರ್ಜಿಗೆ ಲಗತ್ತಿಸಿರತಕ್ಕುದು.
1 [4ಎ. ಭದ್ರತಾ ಮೊತ್ತದ ಸಂದಾಯ.- (1)ಪ್ರತಿಯೊಬ್ಬ ಲೈಸೆನ್ಸುದಾರನು, 4ಎ ಪ್ರಕರಣದಲ್ಲಿ ಗೊತ್ತುಪಡಿಸಿದ ಭದ್ರತಾ ಮೊತ್ತವನ್ನು ಲೈಸೆನ್ಸ್ ಕೊಡುವ ಪ್ರಾಧಿಕಾರಿಯು ಅಧಿಸೂಚಿಸಿದ ಲೆಕ್ಕದ ಶೀರ್ಷಿಕೆಗೆ ಸರ್ಕಾರಿ ಖಜಾನೆಯಲ್ಲಿ ನಗದಾಗಿ ಠೇವಣಿ ಇಡತಕ್ಕುದು
(2) ಭದ್ರತಾ ಮೊತ್ತವನ್ನು ಠೇವಣಿ ಇಟ್ಟು ಪಡೆದಿರುವ ಖಜಾನೆಯ ರಸೀತಿಯನ್ನು ಲೈಸೆನ್ಸ್ ಕೊಡುವ ಪ್ರಾಧಿಕಾರಿಗೆ ಕಳುಹಿಸತಕ್ಕುದು.
4ಬಿ. 4ಬಿ ಪ್ರಕರಣದ ಮೇರೆಗಿನ ಆದೇಶವನ್ನು ತಿಳಿಸುವುದು.- 4ಬಿ ಪ್ರಕರಣದ ಮೇರೆಗೆ ಲೈಸೆನ್ಸ್ ಕೊಡುವ ಪ್ರಾಧಿಕಾರಿಯ ಪ್ರತಿಯೊಂದು ಆದೇಶವನ್ನು ಲೈಸೆನ್ಸುದಾರನಿಗೆ ಖುದ್ದಾಗಿ ಅಥವಾ ಅವನ ಏಜೆಂಟನಿಗೆ ಅಥವಾ ಲೈಸೆನ್ಸುದಾರನ ವಾಸಸ್ಥಳಕ್ಕೆ ಅಥವಾ ವ್ಯವಹಾರದ ಸ್ಥಳಕ್ಕೆ ಅಥವಾ ಕೊನೆಯದಾಗಿ ತಿಳಿಯಬಂದ ವಾಸಸ್ಥಳಕ್ಕೆ ಅಥವಾ ವ್ಯವಹಾರದ ಸ್ಥಳಕ್ಕೆ, ತಲುಪೊಪ್ಪಿಗೆ ನೋಂದಾಯಿತ ಅಂಚೆಯ ಮೂಲಕ ಕಳುಹಿಸಿಕೊಡತಕ್ಕುದು.
4ಸಿ. ಮುಟ್ಟುಗೋಲು ಹಾಕಿಕೊಂಡ ಮೊತ್ತದಿಂದ ಸಂದಾಯ.-1. ಲೈಸೆನ್ಸುದಾರನ ಕೃತ್ಯದಿಂದ ಬಾಧಿತನಾದ ಸಾಲಪಡೆದವನು, ಕ್ಲೇಮಿನ ಸ್ವರೂಪವನ್ನು ಮತ್ತು ಅಂಥ ಲೈಸೆನ್ಸುದಾರನಿಂದ ತನಗೆ ಬಾಕಿ ಬರಬೇಕಾದ ಮೊತ್ತವನ್ನು ನಿರ್ದಿಷ್ಟ ಪಡಿಸಿರುವ ಅರ್ಜಿಯನ್ನು ಲೈಸೆನ್ಸು ಕೊಡುವ ಪ್ರಾಧಿಕಾರಿಗೆ ಸಲ್ಲಿಸತಕ್ಕುದು. 2. ಲೈಸನ್ಸು ಕೊಡುವ ಪ್ರಾಧಿಕಾರಿಯು, (1)ನೇ ಉಪನಿಯಮದ ಮೇರೆಗೆ ಅರ್ಜಿಯನ್ನು ಸ್ವೀಕರಿಸಿದ ತರುವಾಯ, ಸೂಕ್ತವೆಂದು ಭಾವಿಸಬಹುದಾದಂಥ ವಿಚಾರಣೆ ನಡೆಸಿ, ಮುಟ್ಟುಗೋಲು ಹಾಕಿಕೊಂಡ ಮೊತ್ತದಲ್ಲಿ ಅರ್ಜಿದಾರನಿಗೆ ಕೊಡಬೇಕಾದ ಮೊತ್ತವನ್ನು ನಿರ್ಧರಿಸತಕ್ಕುದು: ಪರಂತು ಒಬ್ಬನಿಗಿಂತ ಹೆಚ್ಚು ಅರ್ಜಿದಾರರು ಇದ್ದರೆ ಮೊತ್ತವನ್ನು ಅರ್ಜಿದಾರರಿಗೆ ಸಂದಾಯಮಾಡಲು ನಿರ್ಧರಿಸಿದ ಮೊತ್ತದಲ್ಲಿ ಪ್ರಮಾಣಾನುಸಾರವಾಗಿ ದಾಮಾಷಾ ಪ್ರಕಾರ ಸಂದಾಯ ಮಾಡತಕ್ಕುದು.
4ಡಿ. ಭದ್ರತಾ ಮೊತ್ತದ ಮರುಸಂದಾಯ.- 1. ತನ್ನವ್ಯವಹಾರವನ್ನು ಮುಚ್ಚಿಕೊಂಡಿರುವ ಅಥವಾ ತನ್ನ ಲೈಸೆನ್ಸ್ನ್ನು ನವೀಕರಿಸದಿರುವ ಲೈಸೆನ್ಸುದಾರನು,4ಎ ಪ್ರಕರಣದ ಮೇರೆಗೆ ಠೇವಣಿ ಇಟ್ಟಿದ್ದ ಮೊತ್ತದ ಮರುಸಂದಾಯಕ್ಕೆ ಲೈಸೆನ್ಸು ಕೊಡುವ ಪ್ರಾಧಿಕಾರಿಗೆ ಅರ್ಜಿಸಲ್ಲಿಸಬಹುದು. 2. ಲೈಸೆನ್ಸು ಕೊಡುವ ಪ್ರಾಧಿಕಾರಿಯು, (1)ನೇ ಉಪನಿಯಮದ ಮೇರೆಗೆ ಅರ್ಜಿಯನ್ನು ಸ್ವೀಕರಿಸಿದ ತರುವಾಯ, ಲೈಸೆನ್ಸುದಾರನು ತನ್ನ ವ್ಯವಹಾರವನ್ನು ಮುಚ್ಚಿದ್ದಾನೆಂಬುದನ್ನಾಗಲಿ ಅಥವಾ ತನ್ನ ಲೈಸೆನ್ಸ್ನ್ನು ನವೀಕರಿಸಿಲ್ಲ ಎಂಬುದನ್ನಾಗಲಿ ಮತ್ತು ಅಧಿನಿಯಮದ ಅಥವಾ ಅದರ ಮೇರೆಗೆ ರಚಿಸಿದ ನಿಯಮಗಳ ಯಾವುವೇ ಉಪಬಂಧಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಅವನ ವಿರುದ್ಧ ಯಾವ ಮೊಕದ್ದಮೆಯೂ ಇತ್ಯರ್ಥದಲ್ಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ತರುವಾಯ, 4ಎ ಪ್ರಕರಣದ ಮೇರೆಗೆ ಠೇವಣಿ ಇಟ್ಟಿದ್ದ ಮೊತ್ತವನ್ನು ಅಥವಾ 4ಬಿ ಪ್ರಕರಣದ ಮೇರೆಗೆ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ತರುವಾಯ ಅದರಲ್ಲಿ ಉಳಿದಿರುವಷ್ಟನ್ನು ಯಾವುದಾದರೂ ಇದ್ದರೆ, ಅದನ್ನು ಮರುಸಂದಾಯ ಮಾಡುವುದಕ್ಕೆ ಆದೇಶವನ್ನು ಮಾಡಬಹುದು.] 1. ಜಿಎಸ್ಅರ್ 223 ಅಧಿಸೂಚನೆ ಸಂಖ್ಯೆ ಸಿಎಮ್ಡಬ್ಲ್ಯೂ 2 ಸಿಎಮ್ಎಲ್ 85, ದಿನಾಂಕ: 12/13-9- 1985ರ ಮೂಲಕ 17-9-1985ರಿಂದ ಜಾರಿಗೆ ಬರುವಂತೆ ನಿಯಮ 4ಎ ಇಂದ 4ಡಿ ಸೇರಿಸಲಾಗಿದೆ.