(1)ಈನಿಯಮಗಳ ಮೇರೆಗೆ ಮಂಜೂರು ಮಾಡಿದ ಲೈಸೆನ್ಸು ಕಳೆದುಹೋದರೆ, ನಾಶವಾದರೆ, ಅಥವಾ ಓದಲಾಗದಂಥ ರೀತಿಯಲ್ಲಿ ಹರಿದು ಹೋದರೆ ಅಥವಾ ಅನ್ಯಥಾ ವಿರೂಪಗೊಂಡರೆ, ಗಿರವಿದಾರನು, ಲೈಸೆನ್ಸಿನ ದ್ವಿಪ್ರತಿಯ ಮಂಜೂರಾತಿಗಾಗಿ ಸಂಬಂಧಪಟ್ಟ ಲೇವಾದೇವಿದಾರರ ಸಹಾಯಕ ರಿಜಿಸ್ಟ್ರಾರನ ಮೂಲಕ ಲೈಸೆನ್ಸ್ ಕೊಡುವ ಪ್ರಾಧಿಕಾರಿಗೆ ಅರ್ಜಿಯನ್ನು ಸಲ್ಲಿಸಬಹುದು.
(2) ಮೂಲ ಲೈಸೆನ್ಸು ಹರಿದು ಹೋದ ಅಥವಾ ವಿರೂಪಗೊಂಡ ಕಾರಣದಿಂದಾಗಿ ಲೈಸೆನ್ಸಿನ ದ್ವಿಪ್ರತಿಯ ಅಗತ್ಯವಿದ್ದಲ್ಲಿ, ಲೇವಾದೇವಿದಾರನು ಲೈಸೆನ್ಸ್ ಕೊಡುವ ಪ್ರಾಧಿಕಾರಿಗೆ (1)ನೇ ಉಪನಿಯಮದ ಮೇರೆಗೆ ಸಲ್ಲಿಸಿದ ಅರ್ಜಿಯ ಜೊತೆಗೆ ಮೂಲ ಲೈಸೆನ್ಸನ್ನು ಒಪ್ಪಿಸತಕ್ಕುದು.
(3) (1)ನೇ ಉಪನಿಯಮದ ಮೇರೆಗಿನ ಅರ್ಜಿಯ ಜೊತೆಗೆ ಒಂದು ರೂಪಾಯಿಯ ಫೀಜು ಇರತಕ್ಕುದು ಮತ್ತು ಅದನ್ನು 4ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿಯೇ ಸಂದಾಯ ಮಾಡತಕ್ಕುದು.
(4) ಅಂಥ ಅರ್ಜಿಯನ್ನು ಸ್ವೀಕರಿಸಿದ ಮೇಲೆ, ಲೈಸೆನ್ಸು ಕೊಡುವ ಪ್ರಾಧಿಕಾರಿಯು ಅವನು ಅವಶ್ಯವೆಂದು ಭಾವಿಸಬಹುದಾದಂಥ ವಿಚಾರಣೆಯನ್ನು ನಡೆಸಿದ ತರುವಾಯ, ಗಿರವಿದಾರನಿಗೆ ಲೈಸೆನ್ಸಿನ ದ್ವಿಪ್ರತಿಯನ್ನು ಕೊಡಬಹುದು ಎಂದು ಅವನಿಗೆ ಮನದಟ್ಟಾದರೆ, ಅವನು ಲೈಸೆನ್ಸಿನ ದ್ವಿಪ್ರತಿಯನ್ನು ಕೊಡಬಹುದು ಮತ್ತು ಲೇವಾದೇವಿದಾರರ ಸಹಾಯಕ ರಿಜಿಸ್ಟ್ರಾರನಿಗೆ, ಅವನು ಇಟ್ಟಿರುವ ಲೈಸೆನ್ಸುಗಳ ರಿಜಿಸ್ಟರಿನಲ್ಲಿನ ಆ ಗಿರವಿದಾರನ ಹೆಸರಿನ ಎದುರಿಗೆ, ಅಂಥ ಲೈಸೆನ್ಸಿನ ದ್ವಿಪ್ರತಿಯನ್ನು ಅವನಿಗೆ ಕೊಟ್ಟ ಬಗ್ಗೆ ಟಿಪ್ಪಣಿ ಮಾಡುವಂತೆ ನಿರ್ದೇಶಿಸತಕ್ಕುದು.
(5) ಹಾಗೆ ಕೊಟ್ಟ ದ್ವಿಪ್ರತಿ ಲೈಸೆನ್ಸು, ಮೂಲ ಲೈಸೆನ್ಸಿನ ಸಂಖ್ಯೆಯನ್ನು ಮತ್ತು ದಿನಾಂಕವನ್ನು ಹೊಂದಿರತಕ್ಕುದು ಮತ್ತು ‘‘ದ್ವಿಪ್ರತಿ'' ಎಂಬ ಪದವನ್ನು ಸಹ ಹೊಂದಿರತಕ್ಕುದು.