(1) ಈ ಅಧ್ಯಾದೇಶವು ಪ್ರಾರಂಭವಾದ ದಿನಾಂಕದಿಂದ ಕೂಡಲೇ ರಾಜ್ಯದಲ್ಲಿ “ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ” ಎಂಬ ಹೆಸರಿನ ಒಂದು ವಿಶ್ವವಿದ್ಯಾಲಯವು ಸ್ಥಾಪನೆಯಾಗತಕ್ಕದ್ದು.
(2) ವಿಶ್ವವಿದ್ಯಾಲಯವು ಒಂದು ನಿಗಮಿತ ನಿಕಾಯವಾಗಿರತಕ್ಕದ್ದು, ಶಾಶ್ವತ ಉತ್ತರಾಧಿಕಾರವನ್ನು ಮತ್ತು ಸಾಮಾನ್ಯ ಮೊಹರನ್ನು ಹೊಂದಿರತಕ್ಕದ್ದು ಮತ್ತು ಸದರಿ ಹೆಸರಿನಿಂದ ದಾವೆ ಹೂಡತಕ್ಕದ್ದು ಮತ್ತು ದಾವೆಗೆ ಗುರಿಯಾಗತಕ್ಕದ್ದು.
(3) ಈ ಅಧ್ಯಾದೇಶದಲ್ಲಿ ನಮೂದಿಸಲಾದಂತೆ ಅಥವಾ ಶಾಸನಗಳಲ್ಲಿ ಉಪಬಂಧ ಕಲ್ಪಿಸಲಾದಂತೆ, ವಿಶ್ವವಿದ್ಯಾಲಯವು ಕುಲಾಧಿಪತಿಯವರು, ಒಬ್ಬರು ಕುಲಪತಿಯವರು, ವ್ಯವಸ್ಥಾಪನಾ ಮಂಡಳಿ, ವಿದ್ಯಾ ವಿಷಯಕ ಪರಿಷತ್ತು, ಸಂಶೋಧನಾ ಪರಿಷತ್ತು, ವಿಸ್ತಾರಣಾ ಶಿಕ್ಷಣ ಪರಿಷತ್ತು ಮತ್ತು ಇತರ ಪ್ರಾಧಿಕಾರಗಳು ಹಾಗೂ ಅಧಿಕಾರಿಗಳು ಮತ್ತು ಘಟಕ ನಿಕಾಯಗಳನ್ನು ಹೊಂದಿರತಕ್ಕದ್ದು.
(4) ವಿಶ್ವವಿದ್ಯಾಲಯವು, ಚರ ಮತ್ತು ಸ್ಥಿರ ಸ್ವತ್ತುಗಳೆರಡನ್ನು ಆರ್ಜಿಸಲು ಮತ್ತು ಧಾರಣ ಮಾಡಲು, ವಿಶ್ವವಿದ್ಯಾಲಯದ ಉದ್ದೇಶಗಳಿಗಾಗಿ ಅದರಲ್ಲಿ ನಿಹಿತವಾಗಿರಬಹುದಾದ ಅಥವಾ ಅದರಿಂದ ಆರ್ಜಿತವಾಗಿರಬಹುದಾದ ಯಾವುದೇ ಚರ ಮತ್ತು ಸ್ಥಿರ ಸ್ವತ್ತನ್ನು ರಾಜ್ಯ ಸರ್ಕಾರದ ಪೂರ್ವಾನುಮೋದನೆಯೊಡನೆ ಗುತ್ತಿಗೆಗೆ ನೀಡಲು, ಮಾರಾಟ ಮಾಡಲು ಅಥವಾ ಅನ್ಯಥಾ ವರ್ಗಾವಣೆ ಮಾಡಲು ಮತ್ತು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ಇತರ ಯಾವುದೇ ಅನುಮೋದಿತ ಮೂಲಗಳಿಂದ ಹಣವನ್ನು ಸಾಲ ಪಡೆದು ಮತ್ತು ಈ ಅಧ್ಯಾದೇಶದ ಉದ್ದೇಶಕ್ಕಾಗಿ ಅವಶ್ಯವಾದ ಇತರ ಎಲ್ಲಾ ಕಾರ್ಯಗಳನ್ನು ನಿರ್ವಹಿಸಲು ಸಕ್ಷಮವಾಗಿರತಕ್ಕದ್ದು.
(5) ವಿಶ್ವವಿದ್ಯಾಲಯವು ಹೂಡಿದ ಅಥವಾ ಅದರ ವಿರುದ್ಧ ಹೂಡಲಾದ ಎಲ್ಲಾ ದಾವೆಗಳಲ್ಲಿ ಮತ್ತು ಇತರ ಕಾನೂನು ವ್ಯವಹರಣೆಗಳಲ್ಲಿ ವಾದ ಪ್ರತಿವಾದ ಪತ್ರಗಳಿಗೆ ಕುಲಸಚಿವರು ಸಹಿ ಮಾಡಿ ಸತ್ಯಾಪನೆ ಮಾಡತಕ್ಕದ್ದು ಮತ್ತು ಅಂತಹ ದಾವೆಗಳಲ್ಲಿನ ಹಾಗೂ ವ್ಯವಹರಣೆಗಳಲ್ಲಿನ ಎಲ್ಲಾ ಆದೇಶಿಕೆಗಳನ್ನು ಕುಲಸಚಿವರಿಗೆ ನೀಡತಕ್ಕದ್ದು ಮತ್ತು ಅವರಿಗೆ ಜಾರಿ ಮಾಡತಕ್ಕದ್ದು.
(6) ವಿಶ್ವವಿದ್ಯಾಲಯದ ಕೇಂದ್ರ ಕಛೇರಿಯು ಬಾಗಲಕೋಟೆಯಲ್ಲಿ ಇರತಕ್ಕದ್ದು.