(1) ಕುಲಪತಿಯವರು ವಿಶ್ವವಿದ್ಯಾಲಯದ ಪ್ರಧಾನ ಕಾರ್ಯನಿರ್ವಾಹಕ ಶೈಕ್ಷಣಿಕ ಅಧಿಕಾರಿ ಮತ್ತು ಮಂಡಳಿಯ, ವಿದ್ಯಾವಿಷಯಕ ಪರಿಷತ್ತಿನ ಮತ್ತು ಇತರ ಪ್ರಾಧಿಕಾರಗಳ ಪದನಿಮಿತ್ತ ಅಧ್ಯಕ್ಷರಾಗಿರತಕ್ಕದ್ದು ಹಾಗೂ ಕುಲಾಧಿಪತಿಯವರ ಮತ್ತು ಸಹಕುಲಾಧಿಪತಿಯವರ ಅನುಪಸ್ಥಿತಿಯಲ್ಲಿ ವಿಶ್ವವಿದ್ಯಾಲಯದ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸತಕ್ಕದ್ದು ಹಾಗೂ ಪದವಿಗಳನ್ನು ಪಡೆಯಲು ಅರ್ಹರಾದವರಿಗೆ ಪದವಿಗಳನ್ನು ಪ್ರದಾನ ಮಾಡತಕ್ಕದ್ದು.
(2) ಕುಲಪತಿಯವರು ವಿಶ್ವವಿದ್ಯಾಲಯದ ವ್ಯವಹಾರಗಳ ಮೇಲೆ ಸಾಮಾನ್ಯ ನಿಯಂತ್ರಣವನ್ನು ಹೊಂದಿರತಕ್ಕದ್ದು ಮತ್ತು ವಿಶ್ವವಿದ್ಯಾಲಯದ ಶಿಸ್ತನ್ನು ಕಾಪಾಡುವುದಕ್ಕೆ ಜವಾಬ್ದಾರರಾಗಿರತಕ್ಕದ್ದು.
(3) ಕುಲಪತಿಯವರು ಮಂಡಳಿಯ, ವಿದ್ಯಾವಿಷಯಕ ಪರಿಷತ್ತಿನ, ಸಂಶೋಧನಾ ಪರಿಷತ್ತಿನ ವಿಸ್ತರಣಾ ಶಿಕ್ಷಣ ಪರಿಷತ್ತಿನ ಸಭೆಗಳನ್ನು ಏರ್ಪಡಿಸತಕ್ಕದ್ದು.
(4) ಕುಲಪತಿಯವರು ಈ ಅಧ್ಯಾದೇಶದ, ಶಾಸನಗಳ ಮತ್ತು ವಿನಿಯಮಗಳ ಉಪಬಂಧಗಳು ಸರಿಯಾಗಿ ಪಾಲನೆಯಾಗುವಂತೆ ನೋಡಿಕೊಳ್ಳತಕ್ಕದ್ದು.
(5) ಕುಲಪತಿಯವರು ವಾರ್ಷಿಕ ಹಣಕಾಸು ಅಂದಾಜುಗಳನ್ನು ಮತ್ತು ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಳಿಗೆ ಮಂಡಿಸುವುದಕ್ಕೆ ಹೊಣೆಗಾರರಾಗಿರತಕ್ಕದ್ದು.
(6) ಕುಲಪತಿಯವರು ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಕ್ಷಣ ಕ್ರಮಕೈಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟಲ್ಲಿ ಅವರು ಅಂಥ ಯಾವುದೇ ಕ್ರಮವನ್ನು ಕೈಗೊಳ್ಳಬಹುದು. ಅಂತಹ ಸಂದರ್ಭದಲ್ಲಿ ಅವರು ತದನಂತರ ತಾನು ಕೈಗೊಂಡ ಕ್ರಮಗಳ ಬಗ್ಗೆ, ಆದಷ್ಟು ಬೇಗನೆ ಒಂದು ವರದಿಯನ್ನು ಸಾಮಾನ್ಯವಾಗಿ ಅಂತಹ ವಿಷಯಗಳನ್ನು ನಿರ್ವಹಿಸುವ ಪ್ರಾಧಿಕಾರಕ್ಕೆ ಅಥವಾ ನಿಕಾಯಕ್ಕೆ ಸಲ್ಲಿಸತಕ್ಕದ್ದು. ಕುಲಪತಿಯವರ ಕ್ರಮವನ್ನು ಆ ಪ್ರಾಧಿಕಾರ ಅಥವಾ ನಿಕಾಯವು ಒಪ್ಪಿಕೊಳ್ಳದಿದ್ದಲ್ಲಿ ಅಂತಹ ವಿಷಯವನ್ನು ಕುಲಾಧಿಪತಿಯವರಿಗೆ ಕಳುಹಿಸತಕ್ಕದ್ದು ಮತ್ತು ಅದರ ಬಗ್ಗೆ ಅವರ ತೀರ್ಮಾನವು ಅಂತಿಮವಾಗಿರತಕ್ಕದ್ದು.
(7) ಕುಲಪತಿಯವರು ಕೈಗೊಂಡ ಕ್ರಮದಿಂದಾಗಿ ವಿಶ್ವವಿದ್ಯಾಲಯದ ಸೇವೆಯಲ್ಲಿರುವ ಯಾವುದೇ ವ್ಯಕ್ತಿಗೆ ತೊಂದರೆ ಉಂಟಾದಲ್ಲಿ, ಅಂತಹ ವ್ಯಕ್ತಿಯು ಕೈಗೊಂಡ ಕ್ರಮದ ಬಗ್ಗೆ ನೋಟೀಸನ್ನು ಸ್ವೀಕರಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗೆ ಮಂಡಳಿಗೆ ಅಪೀಲನ್ನು ಸಲ್ಲಿಸಬಹುದು.
(8) ಮಂಡಳಿಯ ಮೇಲ್ಮನವಿ ಆದೇಶದಿಂದ ಬಾಧಿತನಾದ ಯಾಮೊಬ್ಬ ವ್ಯಕ್ತಿಯು ಅಂತಹ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗೆ ಕುಲಾಧಿಪತಿಯವರಿಗೆ ಎರಡನೇ ಅಪೀಲನ್ನು ಸಲ್ಲಿಸಬಹುದು ಮತ್ತು ಅಂತಹ ಅಪೀಲಿನ ಮೇಲೆ ಕುಲಾಧಿಪತಿಯವರ ತೀರ್ಮಾನವು ಅಂತಿಮವಾಗಿರತಕ್ಕದ್ದು.
(9) ಕುಲಪತಿಯವರು, (8)ನೇ ಉಪ ಪ್ರಕರಣದಡಿಯಲ್ಲಿಯ ತೀರ್ಮಾನವನ್ನು ಹೊರತುಪಡಿಸಿ ಮಂಡಳಿಯ ತೀರ್ಮಾನವು ಅಧಿನಿಯಮಗಳ ಮತ್ತು ಶಾಸನಗಳ ಉಪಬಂಧಗಳಿಗೆ ಸರ್ಕಾರದ ವಿನಿಯಮಗಳಿಗೆ ಅನುಗುಣವಾಗಿಲ್ಲವೆಂದು, ಹಾಗೂ ವಿಶ್ವವಿದ್ಯಾಲಯದ ಹಿತಾಸಕ್ತಿಗೆ ಪೂರಕವಾಗಿ ಇಲ್ಲವೆಂದು ಅಭಿಪ್ರಾಯಪಟ್ಟಲ್ಲಿ ಆತನು ಹದಿನೈದು ದಿನಗಳೊಳಗಾಗಿ ಅದನ್ನು ಕುಲಾಧಿಪತಿಯವರಿಗೆ ಅವರ ತೀರ್ಮಾನವನ್ನು ಕೋರಿ ಕಳುಹಿಸಿಕೊಡತಕ್ಕದ್ದು. ಅದರ ಮೇಲೆ ಕುಲಾಧಿಪತಿಯವರು ಕೈಗೊಂಡ ತೀರ್ಮಾನವು ಅಂತಿಮವಾಗಿರತಕ್ಕದ್ದು. ಕುಲಾಧಿಪತಿಯವರು ಹಾಗೆ ಕಳುಹಿಸಿಕೊಟ್ಟ ವಿಷಯವನ್ನು ವಿಲೆಮಾಡುವವರೆಗೆ ಮಂಡಳಿಯ ತೀರ್ಮಾನವನ್ನು ಜಾರಿಗೊಳಿಸತಕ್ಕದ್ದಲ್ಲ.
(10) ಮೇಲಿನ ಉಪ ಪ್ರಕರಣದ ಉಪಬಂಧಗಳಿಗೆ ಒಳಪಟ್ಟು ಕುಲಪತಿಯವರು ವಿಶ್ವವಿದ್ಯಾಲಯದ ಅಧಿಕಾರಿಗಳು, ಅಧ್ಯಾಪಕರು ಹಾಗೂ ಇತರ ನೌಕರರ ನೇಮಕಾತಿಗಳು, ಮುಂಬಡ್ತಿಗಳು ಮತ್ತು ವಜಾ ವಿಷಯಗಳಿಗೆ ಸಂಬಂಧಿಸಿದ ಮಂಡಳಿಯ ತೀರ್ಮಾನಗಳನ್ನು ಜಾರಿಗೊಳಿಸತಕ್ಕದು.
(11) ಕುಲಪತಿಯವರು ವಿಶ್ವವಿದ್ಯಾಲಯದ ವ್ಯವಹರಣೆಗಳ ಸೂಕ್ತ ಆಡಳಿತಕ್ಕೆ ಮತ್ತು ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಶಿಕ್ಷಣ ಇವುಗಳ ನಿಕಟ ಸಹವರ್ತನೆ ಮತ್ತು ಒಗ್ಗೂಡುವಿಕೆಗೆ ಜವಾಬ್ದಾರನಾಗಿರತಕ್ಕದ್ದು.
(12) ಕುಲಪತಿಯವರು ಈ ಅಧ್ಯಾದೇಶ ಮತ್ತು ಶಾಸನಗಳ ಉಪಬಂಧಗಳ ಅಡಿಯಲ್ಲಿ ತಮಗೆ ಪ್ರದಾನ ಮಾಡಿದ ಅಥವಾ ವಹಿಸಿದಂತಹ ಇತರ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಅಂತಹ ಇತರ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು.