(1) ಕರ್ನಾಟಕ ರಾಜ್ಯದ ರಾಜ್ಯಪಾಲರು ತಮ್ಮ ಹುದ್ದೆಯ ಬಲದಿಂದಾಗಿ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿರತಕ್ಕದ್ದು.
(2) ಕುಲಾಧಿಪತಿಯವರು ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿರತಕ್ಕದ್ದು ಮತ್ತು ಅವರು ಹಾಜರಿದ್ದಾಗ ವಿಶ್ವವಿದ್ಯಾಲಯದ ಘಟಿಕೋತ್ಸವಗಳ ಅಧ್ಯಕ್ಷತೆಯನ್ನು ವಹಿಸತಕ್ಕದ್ದು.
(3) ಗೌರವ ಪದವಿಯನ್ನು ನೀಡುವ ಪ್ರತಿಯೊಂದು ಪ್ರಸ್ತಾವಕ್ಕೂ ವ್ಯವಸ್ಥಾಪನಾ ಮಂಡಳಿಯ ಅನುಮೋದನೆ ನೀಡಿ ಕುಲಾಧಿಪತಿಯವರು ಸ್ಥಿರೀಕರಿಸಿರತಕ್ಕದ್ದು.
(4) ಈ ಅಧ್ಯಾದೇಶ ಮತ್ತು ಶಾಸನಗಳಿಗೆ ಅನುಸಾರವಾಗಿರದ ವಿಶ್ವವಿದ್ಯಾಲಯದ ಯಾವುದೇ ಅಧಿಕಾರಿಯ ಅಥವಾ ಪ್ರಾಧಿಕಾರದ ಯಾವುದೇ ಆದೇಶ ಅಥವಾ ವ್ಯವಹರಣೆಗಳನ್ನು ಕುಲಾಧಿಪತಿಯವರು ಲಿಖಿತದ ಆದೇಶದ ಮೂಲಕ ಶೂನ್ಯಗೊಳಿಸಬಹುದು :
ಪರಂತು ಅಂತಹ ಆದೇಶವನ್ನು ಹೊರಡಿಸುವ ಮೊದಲು ಅವರು ಅಂತಹ ಆದೇಶವನ್ನು ಏಕೆ ಹೊರಡಿಸಬಾರದು ಎಂದು ಕಾರಣ ಕೇಳುವ ನೋಟೀಸನ್ನು ಸಂಬಂಧಪಟ್ಟ ಅಧಿಕಾರಿ ಅಥವಾ ಪ್ರಾಧಿಕಾರಕ್ಕೆ ನೀಡತಕ್ಕದ್ದು ಮತ್ತು ಅಂತಹ ಆದೇಶದಲ್ಲಿ ಈ ಸಂಬಂಧದಲ್ಲಿ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಯಾವುದೇ ಕಾರಣವನ್ನು ನೀಡಿದಲ್ಲಿ ಅದನ್ನು ಅವರು ಪರಿಗಣಿಸತಕ್ಕದ್ದು.
(5) ಕುಲಾಧಿಪತಿಯವರು ಈ ಅಧ್ಯಾದೇಶದ ಅಥವಾ ಶಾಸನಗಳ ಮೂಲಕ ತಮಗೆ ಪ್ರದತ್ತವಾದಂತಹ ಇತರ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಅಂತಹ ಇತರ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು.