ವಿಶ್ವವಿದ್ಯಾಲಯದ ಸಾಮಾನ್ಯ ನಿಧಿ, ಪ್ರತಿಷ್ಠಾನ ನಿಧಿ ಮತ್ತು ಇತರ ನಿಧಿಗಳನ್ನು ಶಾಸನಗಳಲ್ಲಿ ಹೇಳಿದ ಉಪಬಂಧಗಳಿಗೆ ಅನುಗುಣವಾಗಿ ನಿರ್ವಹಿಸತಕ್ಕದ್ದು.
(1) ಕುಲಪತಿಯು ಮುಂಬರುವ ವರ್ಷಕ್ಕಾಗಿ ವಿಶ್ವವಿದ್ಯಾಲಯದ ಹಣಕಾಸಿನ ಅಂದಾಜುಗಳನ್ನು ತಯಾರಿಸುವಂತೆ ಮಾಡತಕ್ಕದ್ದು ಮತ್ತು ಅನುಮೋದನೆಗಾಗಿ ಅದನ್ನು ಮಂಡಳಿಯ ಮುಂದೆ ಮಂಡಿಸತಕ್ಕದ್ದು.
(2) ಮಂಡಳಿಯು, ತಾನು ಸೂಕ್ತವೆಂದು ಭಾವಿಸಬಹುದಾದಂತಹ ಮಾರ್ಪಾಡುಗಳಿಗೆ ಒಳಪಟ್ಟು ಹಣಕಾಸಿನ ಅಂದಾಜುಗಳನ್ನು ಅನುಮೋದಿಸಬಹುದು ಮತ್ತು ಮಂಡಳಿಯು ಅನುಮೋದಿಸಿದ ಹಣಕಾಸಿನ ಅಂದಾಜಿಗೆ ಅನುಸಾರವಾಗಿ ಅಲ್ಲದೆ ಯಾವ ವೆಚ್ಚವನ್ನು ಮಾಡತಕ್ಕದ್ದಲ್ಲ.
(1) ಲೆಕ್ಕಪತ್ರ ನಿರ್ವಹಣೆಯು ಜೋಡಿ ದಾಖಲಾತಿ ಪದ್ಧತಿಯನ್ನು ಆಧರಿಸಿದ ವಿಶ್ವವಿದ್ಯಾಲಯದ ವಾರ್ಷಿಕ ಲೆಕ್ಕಪತ್ರಗಳನ್ನು ಕುಲಪತಿಯವರ ನಿರ್ದೇಶನದ ಮೇರೆಗೆ ಲೆಕ್ಕ ನಿಯಂತ್ರಕರು ತಯಾರಿಸತಕ್ಕದ್ದು ಮತ್ತು ವಿಶ್ವವಿದ್ಯಾಲಯಕ್ಕೆ ಯಾವುದೇ ಮೂಲಗಳಿಂದ ಪ್ರಾಪ್ತವಾಗುವ ಅಥವಾ ಅದು ಸ್ವೀಕರಿಸುವ ಎಲ್ಲಾ ಮೊಬಲಗುಗಳನ್ನು ಹಾಗೂ ವಿಶ್ವವಿದ್ಯಾಲಯವು ವಿತರಣೆ ಮಾಡುವ ಅಥವಾ ಸಂದಾಯ ಮಾಡುವ ಎಲ್ಲಾ ಮೊಬಲಗುಗಳನ್ನು ಈ ಲೆಕ್ಕಪತ್ರಗಳಲ್ಲಿ ದಾಖಲಿಸತಕ್ಕದ್ದು.
(2) ವಾರ್ಷಿಕ ಲೆಕ್ಕಪತ್ರ ಮತ್ತು ಜಮಾ ಖರ್ಚು ಪಟ್ಟಿಯನ್ನು ಕುಲಪತಿಯವರು ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕದ್ದು, ರಾಜ್ಯ ಸರ್ಕಾರವು ಈ ಸಂಬಂಧದಲ್ಲಿ ತಾನು ನೇಮಿಸಬಹುದಾದಂತಹ ವ್ಯಕ್ತಿಗಳು ಲೆಕ್ಕ ಪರಿಶೋಧನೆಯನ್ನು ನಡೆಸುವಂತೆ ಮಾಡತಕ್ಕದ್ದು. ಲೆಕ್ಕಪತ್ರಗಳನ್ನು ಪರಿಶೋಧಿಸಿದ ಮೇಲೆ ಅವುಗಳನ್ನು ಮುದ್ರಿಸತಕ್ಕದ್ದು ಹಾಗೂ ಕುಲಪತಿಯವರು ಅವುಗಳ ಪ್ರತಿಗಳನ್ನು ಲೆಕ್ಕಪರಿಶೋಧನೆಯ ವರದಿಯೊಡನೆ ಮಂಡಲಿಗೆ ಮತ್ತು ಕುಲಾಧಿಪತಿಯವರಿಗೆ ಮಂಡಿಸತಕ್ಕದ್ದು.
(3) ಮಂಡಳಿಯು, ಲೆಕ್ಕಪತ್ರಗಳ ಪ್ರತಿಯನ್ನು ಹಾಗೂ ವರದಿಯನ್ನು ಲೆಕ್ಕಪರಿಶೋಧನೆಯ ವರದಿಯ ಮೇಲೆ ವಿಶ್ವವಿದ್ಯಾಲಯವು ಕೈಗೊಂಡ ಕ್ರಮದ ಬಗ್ಗೆ ಒಂದು ಹೇಳಿಕೆಯೊಡನೆ ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕದ್ದು, ಹಾಗೂ ರಾಜ್ಯ ಸರ್ಕಾರವು ಅವನ್ನು ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮುಂದೆ ಮಂಡಿಸುವಂತೆ ಮಾಡತಕ್ಕದ್ದು.
(4) ವಿಶ್ವವಿದ್ಯಾಲಯವು ಯೋಜನೆಗಳ ಸಂಬಂಧದಲ್ಲಿ ಮತ್ತು ಭಾರತದ ಕೃಷಿ ಸಂಶೋಧನಾ ಪರಿಷತ್ತು, ಭಾರತ ಸರ್ಕಾರ ಮತ್ತು ಇತರ ಯೋಜನೆಗಳು/ಚಾರ್ಟೆಡ್ ಆಕೌಂಟೆಟ್ ಪ್ರಮಾಣ ಪತ್ರ ನೀಡಿದ ಸಂಸ್ಥೆಗಳು ಪ್ರಾಯೋಜಿಸಿದ ಕೃಷಿ ವಿಜ್ಞಾನ ಕೇಂದ್ರಗಳು/ಟಿ.ವಿ.ಕೆ.ಗಳ ಸಂಬಂಧದಲ್ಲಿ ಲೆಕ್ಕಪರಿಶೋಧನೆ ಬಳಕೆ ಪ್ರಮಾಣ ಪತ್ರಗಳನ್ನು ನೀಡುವಂತೆ ಮಾಡತಕ್ಕದ್ದು.
(1) ಸರ್ಕಾರದ ಪೂರ್ವಾನುಮೋದನೆಯೊಡನೆ ವಿಶ್ವವಿದ್ಯಾಲಯವು ತನ್ನ ಅಧಿಕಾರಿಗಳು, ಪ್ರಾಧ್ಯಾಪಕರು, ಲಿಪಿಕ ಸಿಬ್ಬಂದಿ ಮತ್ತು ಇತರ ನೌಕರರ ಪ್ರಯೋಜನಕ್ಕಾಗಿ ನಿಯಮಿಸಬಹುದಾದಂತಹ ವಿಧಾನಗಳು ಮತ್ತು ಷರತ್ತುಗಳಿಗೆ ಒಳಪಟ್ಟು ತಾನು ಸೂಕ್ತವೆಂದು ಭಾವಿಸಬಹುದಾದಂತಹ ನಿವೃತ್ತಿ ವೇತನ, ಉಪದಾನ, ವಿಮೆ ಅಥವಾ ಭವಿಷ್ಯ ನಿಧಿ, ವಂತಿಗೆ, ನಿವೃತ್ತಿ ವೇತನ ನಿಧಿ ಮತ್ತು ಇನ್ನಾವುದೇ ಅಂತಹ ನಿಧಿಗಳನ್ನು ರಚಿಸತಕ್ಕದ್ದು.
(2) ಸರ್ಕಾರವು, ಭವಿಷ್ಯ ನಿಧಿ ಅಧಿನಿಯಮ 1925 (1925ರ ಕೇಂದ್ರ ಅಧಿನಿಯಮ 19) ವಿಶ್ವವಿದ್ಯಾಲಯವು ಹಾಗೆ ರಚಿಸಿದ ಭವಿಷ್ಯ ನಿಧಿ ಅಥವಾ ನಿವೃತ್ತಿ ವೇತನ ನಿಧಿಗಳಿಗೆ ಅವು ಸರ್ಕಾರದ ಭವಿಷ್ಯ ನಿಧಿಗಳು ಆಗಿದ್ದರೆ ಹೇಗೋ ಹಾಗೆ ಅನ್ವಯಿಸತಕ್ಕದ್ದೆಂದು ಘೋಷಿಸಬಹುದು:
ಪರಂತು, ವಿಶ್ವವಿದ್ಯಾಲಯವು ಹಣಕಾಸು ಸಮಿತಿ ಮತ್ತು ಮಂಡಳಿಯೊಡನೆ ಸಮಾಲೋಚಿಸಿ ತಾನು ನಿರ್ಧರಿಸಬಹುದಾದಂತಹ ವಿಧಾನದಲ್ಲಿ ಭವಿಷ್ಯ ನಿಧಿಯ ಮೊಬಲಗನ್ನು ತೊಡಗಿಸಲು ಅಧಿಕಾರವನ್ನು ಹೊಂದಿರತಕ್ಕದ್ದು.
(1) ವಿಶ್ವವಿದ್ಯಾಲಯವು ಒಂದು ಸಾಮಾನ್ಯ ನಿಧಿಯನ್ನು ಹೊಂದಿರತಕ್ಕದ್ದು ಮತ್ತು ಅದಕ್ಕೆ ಈ ಮುಂದಿನವುಗಳು ಜಮೆಯಾಗತಕ್ಕದ್ದು,-
(ಎ) ಶುಲ್ಕಗಳಿಂದ, ದತ್ತಿಗಳಿಂದ ಮತ್ತು ಯಾವುದಾದರೂ ದಾನಗಳು ಇದ್ದರೆ ಅವುಗಳಿಂದ ಬರುವ ಆದಾಯ, ವಿದ್ಯಾರ್ಥಿ ನಿಲಯ, ಪ್ರಯೋಗ ಕೇಂದ್ರಗಳು ಹಾಗೂ ಫಾರ್ಮುಗಳೂ ಸೇರಿದಂತೆ ವಿಶ್ವವಿದ್ಯಾಲಯದ ಸ್ವತ್ತುಗಳಿಂದ ಬರುವ ಆದಾಯ;
(ಬಿ) ಈ ಅಧ್ಯಾದೇಶದ ಉಪಬಂಧಗಳಿಗೆ ಸುಸಂಗತವಾಗಿರುವಂತಹ ಷರತ್ತುಗಳಿಗೆ ಒಳಪಟ್ಟು ಸರ್ಕಾರವು ನೀಡಿದ ವಂತಿಕೆಗಳು ಅಥವಾ ಅನುದಾನಗಳು;
(ಸಿ) ಇತರ ವಂತಿಕೆಗಳು, ಅನುದಾನಗಳು, ದೇಣಿಗೆಗಳು, ಲಾಭಗಳು, ಸಾಲಗಳು ಮತ್ತು ಇತರ ಸ್ವೀಕೃತಿಗಳು.
(2) ವಿಶ್ವವಿದ್ಯಾಲಯವು ಪ್ರತಿಷ್ಠಾನ ನಿಧಿ ಎಂಬ ಹೆಸರಿನ ನಿಧಿಯನ್ನು ಹೊಂದಿರತಕ್ಕದ್ದು. ಇದಕ್ಕೆ ಕೇಂದ್ರ ಸರ್ಕಾರವು ಅಥವಾ ರಾಜ್ಯ ಸರ್ಕಾರವು ಅಥವಾ ಯಾವುದೇ ಅನುಮೋದಿತ ಏಜೆನ್ಸಿಯು ನೀಡುವ ವಂತಿಕೆಗಳು ಮತ್ತು ಅನುದಾನಗಳು ಹಾಗೂ ಮಂಡಳಿಯು ನಿರ್ದಿಷ್ಟಪಡಿಸಬಹುದಾದಂತಹ ಇತರ ಮೊತ್ತಗಳು ಜಮೆಯಾಗತಕ್ಕದ್ದು. ಮಂಡಳಿಯು ಅವಶ್ಯವಿದ್ದಾಗಲೆಲ್ಲ ಅಂತಹ ಮೊಬಲಗನ್ನು ನಿರ್ದಿಷ್ಟಪಡಿಸಬಹುದಾದಂತೆ ಪ್ರತಿಷ್ಠಾನ ನಿಧಿಯಿಂದ ಸಾಮಾನ್ಯ ನಿಧಿಗೆ ನಿಯಮಿಸಬಹುದಾದ ವಿಧಾನದಲ್ಲಿ ವರ್ಗಾಯಿಸಬಹುದು.
(3) ವಿಶ್ವವಿದ್ಯಾಲಯವು, ಸರ್ಕಾರವು ನೀಡಿದ ಯಾವುದೇ ಅನುದಾನಗಳ ಸಂಬಂಧದಲ್ಲಿ ಲೆಕ್ಕಪತ್ರ ತ:ಖ್ತೆಗಳನ್ನು, ವರದಿಗಳನ್ನು ಮತ್ತು ಇತರ ವಿವರಗಳನ್ನು ಸರ್ಕಾರಕ್ಕೆ ನೀಡತಕ್ಕದ್ದು ಹಾಗೂ ಸರ್ಕಾರವು ನಿರ್ದೇಶಿಸಬಹುದಾದಂತಹ ಅವಧಿಯೊಳಗೆ ಮತ್ತು ವಿಧಾನದಲ್ಲಿ ಯಾವುದೇ ಅನುದಾನದ ಬಳಕೆಗೆ ಸಂಬಂಧಿಸಿದಂತೆ ತ:ಖ್ತೆಗಳು, ಲೆಕ್ಕಪತ್ರಗಳು, ವರದಿಗಳು ಹಾಗೂ ಇತರ ವಿವರಗಳನ್ನು ಸಲ್ಲಿಸತಕ್ಕದ್ದು.
(4) ವಿಶ್ವವಿದ್ಯಾಲಯವು ಸರ್ಕಾರದಿಂದ ಅಥವಾ ಯಾವುದೇ ಇತರ ರಾಜ್ಯ ಸರ್ಕಾರಗಳಿಂದ ಅಥವಾ ಕೇಂದ್ರ ಸರ್ಕಾರದಿಂದ ಅಥವಾ ಶಾಸನಾತ್ಮಕ ನಿಕಾಯಗಳಿಂದ ಅಥವಾ ದತ್ತಿಗಳಿಂದ ಅಥವಾ ದಾನಗಳಿಂದ, ವಿಶ್ವವಿದ್ಯಾಲಯವು ಮತ್ತು ದಾನಿ ಅಥವಾ ಅನುದಾನದಾತರ ನಡುವೆ ಮಾಡಿಕೊಂಡ ಒಪ್ಪಂದಗಳಲ್ಲಿಯ ಷರತ್ತುಗಳಿಗೆ ಒಳಪಟ್ಟು ತನ್ನ ಧ್ಯೇಯೋದ್ದೇಶಗಳ ಸಾಧನೆಗಾಗಿ ಅನುದಾನ ಸ್ವೀಕರಿಸಲು ಸಕ್ಷಮವಾಗಿರತಕ್ಕದ್ದು.