(1) ಕುಲಾಧಿಪತಿಯವರು ಆದಷ್ಟು ಬೇಗನೆ ಒಂದು ವ್ಯವಸ್ಥಾಪನಾ ಮಂಡಳಿಯನ್ನು ರಚಿಸತಕ್ಕದ್ದು.
(2) ವ್ಯವಸ್ಥಾಪನಾ ಮಂಡಳಿಯು ಈ ಮುಂದಿನವರನ್ನು ಒಳಗೊಂಡಿರತಕ್ಕದ್ದು:-
(i) ಕುಲಪತಿ - ಇವರು ಅಧ್ಯಕ್ಷರಾಗಿರತಕ್ಕದು.
(ii) ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಅಥವಾ ಕಾರ್ಯದರ್ಶಿಗಳು ತೋಟಗಾರಿಕೆ ಇಲಾಖೆ ಅಥವಾ ಉಪ ಕಾರ್ಯದರ್ಶಿ ದರ್ಜೆಗಿಂತ ಕಡಿಮೆ ದರ್ಜೆಯವರಲ್ಲದ ಅವರ ನಾಮನಿರ್ದೇಶಿತರು.
(iii) ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಅಥವಾ ಕಾರ್ಯದರ್ಶಿಗಳು ಆರ್ಥಿಕ ಇಲಾಖೆ ಅಥವಾ ಉಪ ಕಾರ್ಯದರ್ಶಿ ದರ್ಜೆಗಿಂತ ಕಡಿಮೆ ದರ್ಜೆಯವರಲ್ಲದ ಅವರ ನಾಮನಿರ್ದೇಶಿತರು.
(iv) ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಅಥವಾ ಕಾರ್ಯದರ್ಶಿಗಳು ಕೃಷಿ ಇಲಾಖೆ ಅಥವಾ ಉಪ ಕಾರ್ಯದರ್ಶಿ ದರ್ಜೆಗಿಂತ ಕಡಿಮೆ ದರ್ಜೆಯವರಲ್ಲದ ಅವರ ನಾಮನಿರ್ದೇಶಿತರು.
(v) ನಿರ್ದೇಶಕರು, ತೋಟಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು.
(vi) ಕುಲಾಧಿಪತಿಯವರು ನಾಮನಿರ್ದೇಶಿಸಿದ ತೋಟಗಾರಿಕೆ ಕ್ಷೇತ್ರದಿಂದ (ಪ್ರೊಫೆಸರ್ ದರ್ಜೆಗಿಂತ ಕಡಿಮೆ ದರ್ಜೆಯವರಲ್ಲದ) ಒಬ್ಬ ಖ್ಯಾತ ಶಿಕ್ಷಣ ತಜ್ಞರು.
(vii) ವಿಶ್ವವಿದ್ಯಾಲಯದ ಅಧಿಕಾರ ವ್ಯಾಪ್ತಿಯಲ್ಲಿರುವ ಇಬ್ಬರು ಪ್ರಗತಿಪರ ತೋಟಗಾರಿಕಾ ರೈತರು ಇವರ ಪೈಕಿ ಒಬ್ಬರು ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಕ್ಕೆ ಸೇರಿದವರಾಗಿದ್ದು ಸರ್ಕಾರದಿಂದ ನಾಮ ನಿರ್ದೇಶಿತರಾಗಿರತಕ್ಕದ್ದು;
(viii) ಕುಲಾಧಿಪತಿಯವರು ನಾಮನಿರ್ದೇಶನ ಮಾಡಿದ ಒಬ್ಬ ತೋಟಗಾರಿಕೆ ಉದ್ಯಮಿ;
(ix) ಗ್ರಾಮೀಣ ಚಟುವಟಿಕೆಯ ಹಿನ್ನೆಲೆಯುಳ್ಳ ಕುಲಾಧಿಪತಿಯವರು ನಾಮನಿರ್ದೇಶನ ಮಾಡಿದ ಒಬ್ಬ ಮಹಿಳಾ ಕಾರ್ಯಕರ್ತೆಯವರು;
(x) ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಮಹಾ ನಿರ್ದೇಶಕರು ನಾಮನಿರ್ದೇಶನ ಮಾಡಿದ ಒಬ್ಬ ಪ್ರತಿನಿಧಿ;
(xi) ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರು;
(xii) ಕುಲಪತಿಯವರು ನಾಮನಿರ್ದೇಶನ ಮಾಡಿದ ಒಬ್ಬ ಡೀನ್ - ಸುತ್ತು ಸರದಿಯ ಮೇಲೆ ಎರಡು ವರ್ಷಗಳ ಅವಧಿಯವರೆಗೆ;
(xiii) ಕುಲಸಚಿವರು, ಇವರು ಸದಸ್ಯ ಕಾರ್ಯದರ್ಶಿಯಾಗಿರತಕ್ಕದ್ದು;
(3) ಪದನಿಮಿತ್ತ ಸದಸ್ಯರುಗಳನ್ನು ಹೊರತುಪಡಿಸಿ ಮಂಡಳಿಯ ಸದಸ್ಯರ ಪದಾವಧಿಯು ಸಂಧರ್ಭಾನುಸಾರ ಸರ್ಕಾರ ಅಥವಾ ಕುಲಾಧಿಪತಿಯವರ ಇಚ್ಛೆಗೊಳಪಟ್ಟು ಮೂರು ವರ್ಷಗಳಾಗಿರತಕ್ಕದ್ದು ಮತ್ತು ಅವರುಗಳು ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರಕ್ಕೆ ಯಾವುದೇ ಪ್ರವರ್ಗದಲ್ಲಿ ಪುನರ್ ನಾಮನಿರ್ದೇಶನಕ್ಕೆ ಅರ್ಹರಾಗಿರತಕ್ಕದ್ದಲ್ಲ;
(4) ಪದಾವಧಿ ಮುಕ್ತಾಯವಾದ ಸಂದರ್ಭವನ್ನು ಹೊರತುಪಡಿಸಿ ಮರಣ, ರಾಜೀನಾಮೆ, ತೆಗೆದು ಹಾಕುವಿಕೆ ಅಥವಾ ಯಾವುದೇ ಇತರ ಕಾರಣಗಳಿಂದಾಗಿ ಯಾಮೊಬ್ಬ ಸದಸ್ಯರ ಸ್ಥಾನವು ಖಾಲಿಯಾದಾಗ ಆ ಖಾಲಿ ಸ್ಥಾನವನ್ನು ಈ ಅಧ್ಯಾದೇಶದ ಉಪಬಂಧಗಳಿಗೆ ಅನುಸಾರವಾಗಿ ಭರ್ತಿ ಮಾಡತಕ್ಕದ್ದು ಮತ್ತು ಅಂತಹ ಖಾಲಿ ಸ್ಥಾನವನ್ನು ತುಂಬುವ ವ್ಯಕ್ತಿಯು ಯಾರ ಖಾಲಿ ಸ್ಥಾನಕ್ಕೆ ಆತನು ನಾಮನಿರ್ದೇಶಿತನಾಗಿದ್ದಾನೆಯೋ ಆ ವ್ಯಕ್ತಿಯ ಉಳಿದ ಪದಾವಧಿವರೆಗೆ ಆ ಸ್ಥಾನವನ್ನು ಹೊಂದಿರತಕ್ಕದ್ದು.
(5) ಮಂಡಳಿಯ ಸಭೆಗಾಗಿ ಮಂಡಳಿಯ ಸದಸ್ಯರ ಮೂರನೇ ಒಂದು ಭಾಗದಷ್ಟು ಸದಸ್ಯರು ಸಭೆಯ ಕೋರಂ ಆಗಿರತಕ್ಕದ್ದು:
ಪರಂತು, ಕೋರಂ ಇಲ್ಲದಿದುದರಿಂದಾಗಿ ಮಂಡಳಿಯ ಒಂದು ಸಭೆಯನ್ನು ಮುಂದೂಡಿದ್ದರೆ, ಅದೇ ವ್ಯವಹಾರಗಳನ್ನು ನಡೆಸುವುದಕ್ಕಾಗಿ ಕರೆದ ಮುಂದಿನ ಸಭೆಯಲ್ಲಿ ಕೋರಂನ ಅವಶ್ಯಕತೆ ಇರುವುದಿಲ್ಲ.
(6) ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಹೊರತುಪಡಿಸಿ ಮಂಡಳಿಯ ಸದಸ್ಯರು ಈ ಅಧ್ಯಾದೇಶದ ಅಡಿಯಲ್ಲಿ ತಾವು ನೆರವೇರಿಸಿದ ಪ್ರಕಾರ್ಯಗಳಿಗೆ, ನಿಯಮಿಸಬಹುದಾದಂಥ ದಿನ ಭತ್ಯೆ, ಪ್ರಯಾಣ ಭತ್ಯೆಯನ್ನು ಹೊರತುಪಡಿಸಿ ಯಾವುದೇ ಸಂಭಾವನೆಯನ್ನು ಪಡೆಯಲು ಅರ್ಹರಾಗಿರತಕ್ಕದ್ದಲ್ಲ.
(7) ಮಂಡಳಿಯು ತನ್ನ ಸಭೆಯಲ್ಲಿ ಪರಿಶೀಲಿಸುತ್ತಿರುವ ಯಾವುದೇ ವಿಷಯಗಳ ಬಗ್ಗೆ ತಜ್ಞ ಸಲಹೆ ಪಡೆಯಲು ಆ ವಿಷಯಗಳಲ್ಲಿ ಪರಿಣತಿ ಅಥವಾ ವಿಶೇಷ ಜ್ಞಾನವನ್ನು ಉಳ್ಳ ಯಾಮೊಬ್ಬ ವ್ಯಕ್ತಿಯನ್ನು ತನ್ನ ಸಭೆಗೆ ಹಾಜರಾಗಲು ಆಹ್ವಾನಿಸಬಹುದು. ಅಂತಹ ವ್ಯಕ್ತಿಯು ಅಂತಹ ಸಭೆಯ ವ್ಯವಹರಣೆಗಳಲ್ಲಿ ಮಾತನಾಡಬಹುದು ಅಥವಾ ಅನ್ಯಥಾ ಭಾಗವಹಿಸಬಹುದು. ಆದರೆ ಆತನು ಮತದಾನದ ಹಕ್ಕನ್ನು ಹೊಂದಿರುವುದಿಲ್ಲ. ಹಾಗೆ ಆಹ್ವಾನಿತರಾದ ಯಾಮೊಬ್ಬ ವ್ಯಕ್ತಿಯು ಸಭೆಗೆ ಹಾಜರಾಗಿದ್ದಕ್ಕಾಗಿ ನಿಯಮಿಸಬಹುದಾದಂತಹ ಭತ್ಯೆ ಪಡೆಯಲು ಅರ್ಹರಾಗಿರತಕ್ಕದ್ದು.
(8) ಸಾಮಾನ್ಯವಾಗಿ ಮಂಡಳಿಯು ಪ್ರತಿ ಮೂರು ತಿಂಗಳಿಗೊಮ್ಮೆ ಕನಿಷ್ಠ ಒಂದು ಬಾರಿಯಾದರೂ ಕುಲಪತಿಯವರು ನಿಗದಿಪಡಿಸುವಂಥ ದಿನಾಂಕ ಮತ್ತು ಸ್ಥಳದಲ್ಲಿ ಸೇರತಕ್ಕದ್ದು. ಆದಾಗ್ಯೂ ಕುಲಪತಿಯವರು ತಾನು ಸೂಕ್ತವೆಂದು ಭಾವಿಸದಾಗಲೆಲ್ಲ, ಮಂಡಳಿಯ ಅರ್ಧಕ್ಕಿಂತ ಕಡಿಮೆಯಲ್ಲದ ಸದಸ್ಯರು ಬರೆದು ಸಹಿ ಮಾಡಿ ಕೋರಿಕೊಂಡಾಗ ಮಂಡಳಿಯ ವಿಶೇಷ ಸಭೆಯನ್ನು ಕರೆಯಬಹುದು.