(1) ಕುಲಪತಿಯವರು ವಿಶ್ವವಿದ್ಯಾಲಯದ ಪೂರ್ಣಕಾಲಿಕ ಅಧಿಕಾರಿಯಾಗಿರತಕ್ಕದ್ದು ಮತ್ತು ಅವರು ಈ ಮುಂದಿನ ವ್ಯಕ್ತಿಗಳನ್ನು ಒಳಗೊಂಡ, ಎಂದರೆ:-
(i) ಮಹಾ ನಿರ್ದೇಶಕರು, ಭಾರತದ ಕೃಷಿ ಸಂಶೋಧನಾ ಪರಿಷತ್ತು
(ii) ಅಧ್ಯಕ್ಷರು, ವಿಶ್ವವಿದ್ಯಾಲಯ ಅನುದಾನ ಆಯೋಗ ಅಥವಾ ಅವರ ನಾಮನಿರ್ದೇಶಿತರು
(iii) ಕುಲಾಧಿಪತಿಯವರ ಒಬ್ಬ ನಾಮನಿರ್ದೇಶಿತರು;
(iv) ರಾಜ್ಯ ಸರ್ಕಾರದ ಒಬ್ಬ ನಾಮನಿರ್ದೆಶಿತರು;
- ಶೋಧನಾ ಸಮಿತಿಯು ತಯಾರಿಸಿದ ತೋಟಗಾರಿಕೆ ವಿಜ್ಞಾನಗಳ ಖ್ಯಾತ ವಿದ್ವಾಂಸರ ಅಥವಾ ವಿಜ್ಞಾನಿಗಳ ಪಟ್ಟಿಯಿಂದ ಕುಲಾಧಿಪತಿಯವರು ನೇಮಕಮಾಡಿದವರಾಗಿರತಕ್ಕದ್ದು:
ಪರಂತು ಕುಲಾಧಿಪತಿಯವರು ಸದಸ್ಯರ ಪೈಕಿಯಿಂದ ಒಬ್ಬರನ್ನು ಅಧ್ಯಕ್ಷರಾಗಿ ಕೆಲಸ ನಿರ್ವಹಿಸಲು ನಾಮನಿರ್ದೇಶಿಸತಕ್ಕದ್ದು. ತೋಟಗಾರಿಕೆ ಇಲಾಖೆಯ ಪ್ರಭಾರದಲ್ಲಿರುವ ಸರ್ಕಾರದ ಕಾರ್ಯದರ್ಶಿಗಳು ಅಥವಾ ಸರ್ಕಾರದ ಉಪ ಕಾರ್ಯದರ್ಶಿಗಳ ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ಅವರ ನಾಮನಿರ್ದೇಶಿತರು ಶೋಧನಾ ಸಮಿತಿಯ ಸಂಚಾಲಕರಾಗಿರತಕ್ಕದ್ದು.
(2) ಸಮಿತಿಯು, ನಿರ್ದಿಷ್ಟಪಡಿಸಬಹುದಾದ ಅವಧಿಯೊಳಗೆ ಕುಲಾಧಿಪತಿಯವರಿಗೆ ಒಂದು ಪಟ್ಟಿಯನ್ನು ಸಲ್ಲಿಸತಕ್ಕದ್ದು. ಕುಲಾಧಿಪತಿಯವರು ಅರ್ಹತೆ, ಸಮದರ್ಶಿತ್ವ ಮತ್ತು ಸಾಮಾಜಿಕ ನ್ಯಾಯ ಇವುಗಳನ್ನು ಗಮನದಲ್ಲಿಟ್ಟುಕೊಂಡು ಪಟ್ಟಿಯಿಂದ ಒಬ್ಬ ವ್ಯಕ್ತಿಯನ್ನು ಕುಲಪತಿಯಾಗಿ ನೇಮಕ ಮಾಡತಕ್ಕದ್ದು. ಸಮಿತಿಯು ಶಿಫಾರಸ್ಸು ಮಾಡಿದ ಯಾವ ಹೆಸರುಗಳನ್ನೂ ಕುಲಾಧಿಪತಿಯವರು ಅನುಮೋದಿಸದಿದ್ದಲ್ಲಿ, ಅವರು ಸರ್ಕಾರದ ಸಹಮತಿಯನ್ನು ಪಡೆದು ಅವಶ್ಯವಿದ್ದಲ್ಲಿ ಎರಡನೇ ಪಟ್ಟಿಯನ್ನು ಕೋರಬಹುದು. ಹಾಗೆ ನಿರ್ದಿಷ್ಟ ಪಡಿಸಿದ ಅವಧಿಯೊಳಗೆ ಸಮಿತಿಯು ಪಟ್ಟಿಯನ್ನು ಸಲ್ಲಿಸಲು ವಿಫಲವಾದಲ್ಲಿ ಕುಲಾಧಿಪತಿಯವರು, ಕುಲಪತಿಯಾಗುವುದಕ್ಕೆ ಯೋಗ್ಯರೆಂದು ತಾವು ಭಾವಿಸುವ ಯಾಮೊಬ್ಬ ವ್ಯಕ್ತಿಯನ್ನು ಕುಲಪತಿಯಾಗಿ ನೇಮಕ ಮಾಡಬಹುದು.
(3) (2)ನೇ ಉಪ ಪ್ರಕರಣದಲ್ಲಿ ಏನೇ ಇದ್ದರೂ, ವಿಶ್ವವಿದ್ಯಾಲಯದ ಮೊದಲ ಕುಲಪತಿಯವರನ್ನು ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇಲೆ ಕುಲಾಧಿಪತಿಯವರು ನೇಮಕ ಮಾಡತಕ್ಕದ್ದು.
(4) ಕುಲಪತಿಯವರು ನಾಲ್ಕು ವರ್ಷಗಳವರೆಗೆ ಅಥವಾ ಅವರಿಗೆ 65 ವರ್ಷಗಳಾಗುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಆ ಅವಧಿಯವರೆಗೆ ಪದಧಾರಣೆಯನ್ನು ಮಾಡಿರತಕ್ಕದ್ದು. ಅವರು ಪುನರ್ ನೇಮಕಾತಿಗೆ ಅರ್ಹರಾಗಿರತಕ್ಕದ್ದಲ್ಲ.
(5) ಕುಲಪತಿಯವರ ಉಪಲಬ್ಧಿಗಳು ಮತ್ತು ಇತರ ಸೇವಾ ಷರತ್ತುಗಳು ಕುಲಾಧಿಪತಿಯವರು ನಿರ್ಧರಿಸಬಹುದಾದಂತೆ ಇರತಕ್ಕದ್ದು ಮತ್ತು ಅವುಗಳನ್ನು ಅವರು ಕುಲಪತಿಯಾಗಿ ನೇಮಕವಾದ ತರುವಾಯ ಅವರಿಗೆ ಅನಾನುಕೂಲವಾಗುವಂತೆ ಬದಲಾಯಿಸತಕ್ಕದಲ್ಲ.
(6) ಕುಲಪತಿಯವರು ಕುಲಾಧಿಪತಿಯವರಿಗೆ ತನ್ನ ಕೈ ಬರಹದಲ್ಲಿ ರಾಜಿನಾಮೆ ಪತ್ರವನ್ನ್ರು ಬರೆದು ತಾನು ಬಿಡುಗಡೆಗೊಳ್ಳಲು ಇಚ್ಛಿಸುವ ದಿನಾಂಕದಿಂದ ಅರವತ್ತು ದಿನಗಳಿಗೆ ಮೊದಲು ಅದನ್ನು ಕುಲಾಧಿಪತಿಯವರಿಗೆ ಕಳುಹಿಸುವ ಮೂಲಕ ತನ್ನ ಸ್ಥಾನವನ್ನು ತ್ಯಜಿಸಬಹುದು ಆದರೆ ಕುಲಾಧಿಪತಿಯವರು ಅವರನ್ನು ಅದಕ್ಕೂ ಮೊದಲೇ ಬಿಡುಗಡೆಗೊಳಿಸಬಹುದು.
(7) ಕುಲಪತಿಯವರ ಹುದ್ದೆಯು ತಾತ್ಕಾಲಿಕವಾಗಿ ಖಾಲಿಯಾದರೆ ಅಥವಾ ಅವರ ರಜೆಯ ಕಾರಣದಿಂದಾಗಿ ಗೈರುಹಾಜರಾದಲ್ಲಿ ಅಥವಾ ಇನ್ನಾವುದೇ ಕಾರಣಗಳಿಗಾಗಿ ಖಾಲಿಯಾದರೆ ಶಿಕ್ಷಣ ನಿರ್ದೇಶಕರು ಮತ್ತು ಶಿಕ್ಷಣ ನಿರ್ದೇಶಕರ ಗೈರು ಹಾಜರಿಯಲ್ಲಿ, ಕುಲಸಚಿವರು ಅಥವಾ ಕೇಂದ್ರ ಕಾರ್ಯಸ್ಥಾನದಲ್ಲಿರುವ ವಿಶ್ವವಿದ್ಯಾಲಯದ ಅತ್ಯಂತ ಹಿರಿಯ ನಿರ್ದೇಶಕರು, ಕುಲಾಧಿಪತಿಯವರ ಅನುಮೋದನೆ ಪಡೆದು ಕುಲಪತಿಯವರ ಕರ್ತವ್ಯಗಳನ್ನು ನಿರ್ವಹಿಸಬಹುದು. ಆದರೆ ಅವರ ಪದಾವಧಿಯು 6 ತಿಂಗಳುಗಳನ್ನು ಮೀರತಕ್ಕದ್ದಲ್ಲ.
(8) ಕುಲಪತಿಯವರನ್ನು, ಅವರ ದುರ್ನಡತೆಯ ಕಾರಣದ ಮೇಲೆ ಅಥವಾ ಅಸಮರ್ಥತೆಯ ಕಾರಣದ ಮೇಲೆ ಅಥವಾ ಕುಲಪತಿಯವರು ತಮ್ಮ ಪದದಲ್ಲಿ ಮುಂದುವರಿಯುವುದರಿಂದ ವಿಶ್ವವಿದ್ಯಾಲಯದ ಹಿತಾಸಕ್ತಿಗೆ ದಕ್ಕೆ ಉಂಟಾಗುತ್ತದೆಂದು ಕುಲಾಧಿಪತಿಯವರು ಮನಗಂಡರೆ ಆಗ ಕುಲಾಧಿಪತಿಯವರು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯವರನ್ನು ಅಥವಾ ನ್ಯಾಯಮೂರ್ತಿ ಆಗಿದ್ದವರನ್ನು ನಾಮನಿರ್ದೇಶನ ಮಾಡಿ ಅವರಿಂದ ಯುಕ್ತ ವಿಚಾರಣೆಯನ್ನು ನಡೆಸಿದ ತರುವಾಯ ಮತ್ತು ಆ ವಿಚಾರಣೆಯಲ್ಲಿ ಕುಲಪತಿಯವರಿಗೆ ಮನವಿಯನ್ನು ಸಲ್ಲಿಸಲು ಅವಕಾಶವನ್ನು ನೀಡಿ, ಕುಲಾಧಿಪತಿಯವರು ಹೊರಡಿಸಿದ ಆದೇಶದ ಮೂಲಕವಾಗಿ ಹೊರತು ಅನ್ಯಥಾ ಕುಲಪತಿಯವರನ್ನು ಅವರ ಸ್ಥಾನದಿಂದ ತೆಗೆಯತಕ್ಕದ್ದಲ್ಲ.