(1) ಈ ಅಧ್ಯಾದೇಶ ಮತ್ತು ಶಾಸನಗಳ ಉಪಬಂಧಗಳಿಗೊಳಪಟ್ಟು, ವಿಶ್ವವಿದ್ಯಾಲಯವು ತೋಟಗಾರಿಕೆ ಮತ್ತು ಸಂಬಂಧಿತ ವಿಜ್ಞಾನಗಳಲ್ಲಿ ಕಾರ್ಯತಂತ್ರದ, ಮೂಲಭೂತ ಮತ್ತು ಆನ್ವಯಿಕ ಸಂಶೋಧನೆಗಳನ್ನು ಮಾಡತಕ್ಕದ್ದು.
(2) ವಿಶ್ವವಿದ್ಯಾಲಯವು ತನ್ನ ಸಂಶೋಧನಾ ಸಂಸ್ಥೆಯ ಮೂಲಕ ತನ್ನ ಅಧಿಕಾರ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ತೋಟಗಾರಿಕೆ ಮತ್ತಿತರ ಸಂಬಂಧಪಟ್ಟ ಶಾಖೆಗಳಲ್ಲಿನ ಸಂಶೋಧನಾ ಚಟುವಟಿಕೆಗಳ ಮೇಲೆ ನಿಯಂತ್ರಣವನ್ನು ಹೊಂದಿರುವ ಪ್ರಧಾನ ಏಜೆನ್ಸಿಯಾಗಿರತಕ್ಕದ್ದು.
(3) ವಿಶ್ವವಿದ್ಯಾಲಯವು ತನ್ನ ಅಧಿಕಾರ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಸಂಶೋಧನೆಯೂ ಸೇರಿದಂತೆ ಸಂಶೋಧನೆಗಳನ್ನು ನಡೆಸುವುದಕ್ಕೆ ಬೇರೆ ಬೇರೆ ಕೃಷಿ-ವಾತಾವರಣ ವಲಯಗಳಲ್ಲಿ ಸರ್ಕಾರದ ಸಹಮತಿಯೊಂದಿಗೆ ಪ್ರಾದೇಶಿಕ ವಲಯ ಸಂಶೋಧನಾ ಕೇಂದ್ರಗಳು ಮತ್ತು ಉಪಕೇಂದ್ರಗಳನ್ನು ಸ್ಥಾಪಿಸಬಹುದು.