(1) ವಿಶ್ವವಿದ್ಯಾಲಯದ ಪ್ರದೇಶದಲ್ಲಿರುವ ಕಾಲೇಜುಗಳನ್ನು ಈ ಪ್ರಕರಣದಲ್ಲಿ ನಿರ್ದಿಷ್ಠಪಡಿಸಿದ ಷರತ್ತುಗಳನ್ನು ಪೂರೈಸಿದ ತರುವಾಯ ರಾಜ್ಯ ಸರ್ಕಾರವು ಮಾಡಿದ ಶಿಫಾರಸ್ಸುಗಳ ಮೇಲೆ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳಾಗಿ ವಿಶ್ವವಿದ್ಯಾಲಯಕ್ಕೆ ಸಂಯೋಜಿಸತಕ್ಕದ್ದು.
(2) ಕುಲಸಚಿವರು, ಹೊಸ ಕಾಲೇಜುಗಳ ಸಂಯೋಜನೆಯ ಬಗ್ಗೆ, ಅಸ್ತಿತ್ವದಲ್ಲಿರುವ ಸಂಯೋಜಿತ ಕಾಲೇಜುಗಳಲ್ಲಿ ಹೊಸ ವ್ಯಾಸಂಗ ಕ್ರಮಗಳ ಬಗ್ಗೆ, ಸಂಯೋಜಿತ ಕಾಲೇಜುಗಳಲ್ಲಿ ಹೊಸ ವಿಷಯಗಳು ಮತ್ತು ಮಂಜೂರಾದ ಪ್ರವೇಶ ಅವಕಾಶದಲ್ಲಿನ ಬದಲಾವಣೆಯ ಬಗ್ಗೆ ಅರ್ಜಿಗಳನ್ನು ಆಹ್ವಾನಿಸಿ, ಅರ್ಜಿಗಳ ಸ್ವೀಕೃತಿಗೆ ಕೊನೆಯ ದಿನಾಂಕವನ್ನು ನಿಗದಿಪಡಿಸಿ, ಒಂದು ಇಂಗ್ಲಿಷ್ ವೃತ್ತ ಪತ್ರಿಕೆ ಮತ್ತು ಒಂದು ಕನ್ನಡ ವೃತ್ತ ಪತ್ರಿಕೆ ಹೀಗೆ ಕಡೆಯ ಪಕ್ಷ ಎರಡು ಪ್ರಮುಖ ವೃತ್ತ ಪತ್ರಿಕೆಗಳಲ್ಲಿ ಅಧಿಸೂಚಿಸತಕ್ಕದ್ದು. ಈ ಜಾಹಿರಾತು, ವಿಶ್ವವಿದ್ಯಾಲಯವು ಅಗತ್ಯ ಪಡಿಸಬಹುದಾದಂತಹ ಇತರ ವಿವರಗಳನ್ನು ಒಳಗೊಂಡಿರತಕ್ಕದ್ದು ಮತ್ತು ಕಾಲೇಜುಗಳು ಭಾರತದ ಕೃಷಿ ಸಂಶೋಧನಾ ಪರಿಷತ್ತು ಅಥವಾ ಅಂತಹ ಇತರ ಪ್ರಾಧಿಕಾರಗಳ ಅನುಮೋದನೆ ಅಥವಾ ಮನ್ನಣೆಯನ್ನು ಪಡೆಯಬೇಕೆಂಬುದನ್ನು ಅಗತ್ಯಪಡಿಸಿದಲ್ಲಿ, ಆ ಬಗ್ಗೆ ನಿರ್ದಿಷ್ಟ ಸೂಚನೆ ನೀಡತಕ್ಕದು ಮತ್ತು ಸಂಯೋಜನೆಗಾಗಿ ಸಲ್ಲಿಸಬೇಕಾದ ಶುಲ್ಕದ ಮೊಬಲಗನ್ನು ಸಹ ನಿರ್ದಿಷ್ಟಪಡಿಸತಕ್ಕದ್ದು.
(3) ವಿಶ್ವವಿದ್ಯಾಲಯಕ್ಕೆ ಸಂಯೋಜನೆಗಾಗಿ ಅರ್ಜಿಸಲ್ಲಿಸುವ ಕಾಲೇಜು, ಈ ಮುಂದಿನವುಗಳಿಗೆ ಸಂಬಂಧಪಟ್ಟಂತೆ ಮಾಹಿತಿಯನ್ನು ಒದಗಿಸಿ ಜಾಹಿರಾತಿನಲ್ಲಿ ನಿಗದಿಪಡಿಸಿದ ಕಾಲಮಿತಿಯೊಳಗೆ ಅರ್ಜಿಯನ್ನು ಕುಲಸಚಿವರಿಗೆ ಕಳುಹಿಸತಕ್ಕದ್ದು, ಎಂದರೆ:-
(i) ಆ ಕಾಲೇಜು ಒದಗಿಸಲು ಉದ್ದೇಶಿಸಿದ ಶಿಕ್ಷಣದ ಮಾದರಿಯನ್ನು ನೆರೆಹೊರೆಯಲ್ಲಿರುವ ಇತರ ಕಾಲೇಜುಗಳು ಅದೇ ಮಾದರಿಯ ಶಿಕ್ಷಣಕ್ಕೆ ಮಾಡಿರುವ ಪ್ರಸ್ತುತ ಏರ್ಪಾಟನ್ನು ಮತ್ತು ಕಾಲೇಜನ್ನು ಯಾವ ಸ್ಥಳದಲ್ಲಿ ಸ್ಥಾಪಿಸಬೇಕಾಗಿದೆಯೋ ಆ ಸ್ಥಳದ ಸೂಕ್ತತೆಯನ್ನೂ ಗಮನದಲ್ಲಿಟ್ಟುಕೊಂಡು, ಆ ಕಾಲೇಜು ಸ್ಥಳೀಯ ಅವಶ್ಯಕತೆಯನ್ನು ಪೂರೈಸುತ್ತದೆ;
(ii) ಅದು ಕ್ರಮಬದ್ಧವಾಗಿ ರಚಿಸಲಾದ ಆಡಳಿತ ಮಂಡಳಿಯ ಆಡಳಿತ ನಿರ್ವಹಣೆಗೆ ಒಳಪಟ್ಟಿದೆ;
(iii) ಬೋಧಕ ಸಿಬ್ಬಂದಿಯ ಸಂಖ್ಯೆ ಮತ್ತು ಅರ್ಹತೆಗಳು ಮತ್ತು ಅವರ ಪದಾವಧಿಯನ್ನು ನಿಯಂತ್ರಿಸುವ ಷರತ್ತುಗಳು ಆ ಕಾಲೇಜಿನಲ್ಲಿ ಕೈಗೊಳ್ಳಬೇಕಾದ ಶಿಕ್ಷಣ, ಬೋಧನೆ ಅಥವಾ ತರಬೇತಿಗಳ ವ್ಯಾಸಂಗ ಕ್ರಮಗಳಿಗೆ ತಕ್ಕ ಏರ್ಪಾಟನ್ನು ಮಾಡುವಂಥದ್ದಾಗಿದೆ;
(iv) ಕಾಲೇಜನ್ನು ನಡೆಸುವಂಥ ಕಟ್ಟಡಗಳು ಸೂಕ್ತವಾಗಿವೆ ಮತ್ತು ತಂದೆ ತಾಯಿಗಳ ಅಥವಾ ಪಾಲಕರ ಜೊತೆಯಲ್ಲಿ ವಾಸವಾಗಿರದೆ ಇರುವ ವಿದ್ಯಾರ್ಥಿಗಳಿಗಾಗಿ ಆ ಕಾಲೇಜಿನಲ್ಲಿ ಅಥವಾ ಆ ಕಾಲೇಜು ಅನುಮೋದಿಸಿದ ವಸತಿಗಳಲ್ಲಿ ನಿವಾಸಕ್ಕಾಗಿ ಹಾಗೂ ಮೇಲ್ವಿಚಾರಣೆ ಮತ್ತು ಕ್ಷೇಮಾಭಿವೃದ್ಧಿಗಾಗಿ, ಶಾಸನಗಳು ಮತ್ತು ವಿನಿಯಮಗಳಿಗೆ ಅನುಗುಣವಾಗಿ ಏರ್ಪಾಟು ಮಾಡಲಾಗುವುದು;
(v) ಗ್ರಂಥಾಲಯಕ್ಕೆ ಹಾಗೂ ಇತರ ಸೇವಾ ಕೇಂದ್ರಗಳಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ;
(vi) ಪ್ರಾಯೋಗಿಕ ವಿಜ್ಞಾನದ ಯಾವುದೇ ಶಾಖೆಯಲ್ಲಿ ಸಂಯೋಜನೆಯನ್ನು ಕೋರಿರುವಲ್ಲಿ, ಶಾಸನಗಳು ಮತ್ತು ವಿನಿಯಮಗಳಿಗೆ ಅನುಗುಣವಾಗಿ ಆ ವಿಜ್ಞಾನದ ಶಾಖೆಯಲ್ಲಿ ಶಿಕ್ಷಣ ಕೊಡುವುದಕ್ಕಾಗಿ ಸರಿಯಾದ ರೀತಿಯಲ್ಲಿ ಸಜ್ಜುಗೊಳಿಸಿದ ಪ್ರಯೋಗಶಾಲೆ ಅಥವಾ ವಸ್ತು ಸಂಗ್ರಹಾಲಯ, ಪ್ರಯೋಗಿಕ ಕ್ಷೇತ್ರಗಳ ವ್ಯವಸ್ಥೆಗಳನ್ನು ನಿರ್ದಿಷ್ಟಪಡಿಸಿದ ಅವಧಿಯೊಳಗೆ ಮಾಡಲಾಗಿದೆ ಅಥವಾ ಮಾಡಲಾಗುವುದು;
(vii) ಸನ್ನಿವೇಶಗಳಲ್ಲಿ ಅವಕಾಶವಿರುವಷ್ಟರ ಮಟ್ಟಿಗೆ ಕಾಲೇಜಿನ ಪರಿಮಿತಿಯಲ್ಲಿ ಅಥವಾ ಅದರ ಹತ್ತಿರ ಅಥವಾ ವಿದ್ಯಾರ್ಥಿಗಳ ನಿವಾಸಕ್ಕಾಗಿ ಒದಗಿಸಿರುವ ಸ್ಥಳದಲ್ಲಿ ಪ್ರಾಂಶುಪಾಲರ ಮತ್ತು ಬೋಧಕ ಸಿಬ್ಬಂದಿಯ ಸದಸ್ಯರ ವಸತಿಗಾಗಿ ಸೂಕ್ತ ಏರ್ಪಾಟು ಮಾಡಲಾಗುವುದು;
(viii) ಕಾಲೇಜಿನ ನಿರಂತರ ನಿರ್ವಹಣೆ ಮತ್ತು ದಕ್ಷ ಕಾರ್ಯ ನಿರ್ವಹಣೆಗಾಗಿ ತಕ್ಕ ಏರ್ಪಾಟು ಮಾಡುವಷ್ಟು ಕಾಲೇಜಿನ ಹಣಕಾಸು ಸಂಪನ್ಮೂಲಗಳಿವೆ; ಮತ್ತು
(ix) ವಿದ್ಯಾರ್ಥಿಗಳು ಸಂದಾಯ ಮಾಡಬೇಕಾದ ಫೀಜು ಏನಾದರೂ ಇದ್ದರೆ ಅದನ್ನು ನಿಗದಿಮಾಡುವ ನಿಯಮಗಳನ್ನು ರಚಿಸಲಾಗಿದೆ.
(4) ಹೊಸ ಕಾಲೇಜುಗಳಿಗೆ ಸಂಯೋಜನೆಯ ಅರ್ಜಿಗಳನ್ನು ವ್ಯಕ್ತಿಗಳಿಂದ ಅಂಗೀಕರಿಸತಕ್ಕದ್ದಲ್ಲ, ರಾಜ್ಯ ಸರ್ಕಾರದ ನೆರವು ಇಲ್ಲದೆಯೇ ಕಾಲೇಜುಗಳನ್ನು ನಡೆಸಲು ಸಾಧ್ಯವಾಗುವ ಹಣಕಾಸು ಚೈತನ್ಯ ಹೊಂದಿರುವ, ನೋಂದಾಯಿತ ಸಂಘ ಅಥವಾ ನೋಂದಾಯಿತ ಸಾರ್ವಜನಿಕ ಟ್ರಸ್ಟ್ಗಳಿಂದ ಮಾತ್ರವೇ ಅಂಗೀಕರಿಸತಕ್ಕದ್ದು.
(5) ಅರ್ಜಿಯ ಜೊತೆಗೆ, ಕಾಲೇಜನ್ನು ಸಂಯೋಜಿಸಿದ ನಂತರ ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯದ ಪೂರ್ವಾನುಮೋದನೆ ಇಲ್ಲದೆ ವ್ಯವಸ್ಥಾಪನೆಯನ್ನು ವರ್ಗಾವಣೆ ಮಾಡುವುದಿಲ್ಲ ಅಥವಾ ಕಾಲೇಜಿನ ಹೆಸರು ಮತ್ತು ಅಭಿನಾಮವನ್ನು ಬದಲಾವಣೆ ಮಾಡುವುದಿಲ್ಲವೆಂಬ ಒಂದು ಮುಚ್ಚಳಿಕೆಯು ಇರತಕ್ಕದ್ದು.
(6) (2)ನೇ ಉಪಪ್ರಕರಣದ ಮೇರೆಗೆ ಅರ್ಜಿಯನ್ನು ಸ್ವೀಕರಿಸಿದ ತರುವಾಯ, ಅದನ್ನು ಪರಿಶೀಲನೆಗಾಗಿ ಮಂಡಳಿಯ ಮುಂದೆ ಇಡತಕ್ಕದ್ದು. ಮಂಡಳಿಯು ಸಂಯೋಜನೆಯ ಪ್ರತಿಯೊಂದು ಅರ್ಜಿಯನ್ನು ಪರಿಶೀಲಿಸಿದ ತರುವಾಯ ಒಂದು ಸ್ಥಳೀಯ ವಿಚಾರಣಾ ಸಮಿತಿಯಿಂದ ಸ್ಥಳೀಯ ವಿಚಾರಣೆ ಮಾಡಬೇಕೆಂದು ನಿರ್ದೇಶನ ನೀಡತಕ್ಕದ್ದು.
(7) ಸ್ಥಳೀಯ ವಿಚಾರಣಾ ಸಮಿತಿಯು, ಅದನ್ನು ರಚಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ, ಒಂದು ವರದಿಯನ್ನು ವಿದ್ಯಾ ವಿಷಯಕ ಪರಿಷತ್ತಿಗೆ ಸಲ್ಲಿಸತಕ್ಕದ್ದು.
(8) ವಿದ್ಯಾ ವಿಷಯಕ ಪರಿಷತ್ತು, ಸ್ಥಳೀಯ ವಿಚಾರಣಾ ಸಮಿತಿಯ ವರದಿಯನ್ನು ಸ್ವೀಕರಿಸಿದ ತರುವಾಯ ಕೂಡಲೇ ವರದಿಯಲ್ಲಿ ವಿವರಿಸಿದ ಸಮಿತಿಯ ತೀರ್ಮಾನಗಳನ್ನು ಪರಿಗಣಿಸತಕ್ಕದ್ದು ಮತ್ತು ತನಗೆ ಅವಶ್ಯಕವೆಂದು ಕಂಡುಬರಬಹುದಾದಂಥ ಹೆಚ್ಚಿನ ವಿಚಾರಣೆಯನ್ನು ಮಾಡತಕ್ಕದ್ದು ಮತ್ತು ಅಂಥ ಮನವಿಯ ಮೇಲೆ ತನ್ನ ಅಭಿಪ್ರಾಯವನ್ನು ದಾಖಲು ಮಾಡತಕ್ಕದ್ದು ಮತ್ತು ಅದನ್ನು ಮಂಡಳಿಗೆ ಕಳುಹಿಸತಕ್ಕದ್ದು.
(9) ಮಂಡಳಿಯು, ಸಮಿತಿಯ ವರದಿಯನ್ನು ಮತ್ತು ವಿದ್ಯಾ ವಿಷಯಕ ಪರಿಷತ್ತಿನ ಗೊತ್ತುವಳಿಯನ್ನು ಪರಿಗಣಿಸತಕ್ಕದ್ದು ಹಾಗೂ ತಾನು ಅವಶ್ಯವೆಂದು ಭಾವಿಸಬಹುದಾದಂತಹ ಹೆಚ್ಚಿನ ವಿಚಾರಣೆಯನ್ನು ಮಾಡಿದ ತರುವಾಯ ಮನವಿಯನ್ನು ಪೂರ್ಣವಾಗಿ ಅಥವಾ ಭಾಗಶ: ಮಂಜೂರುಮಾಡಬೇಕೆ ಅಥವಾ ನಿರಾಕರಿಸಬೇಕೆ ಎಂಬ ಪ್ರಶ್ನೆಯ ಬಗ್ಗೆ ತನ್ನ ಅಭಿಪ್ರಾಯವನ್ನು ದಾಖಲಿಸತಕ್ಕದ್ದು.
(10) ಕುಲಸಚಿವರು ಅರ್ಜಿಯನ್ನು ಅದರ ಅಡಕವನ್ನು, ಅನುಬಂಧಗಳನ್ನು ಸ್ಥಳೀಯ ವಿಚಾರಣಾ ಸಮಿತಿಯ ವರದಿ ಮತ್ತು ವಿದ್ಯಾ ವಿಷಯಕ ಪರಿಷತ್ತಿನ ಹಾಗೂ ಮಂಡಳಿಯ ಎಲ್ಲಾ ನಡವಳಿಗಳನ್ನು ಮುಂಬರುವ ವರ್ಷದ ಮಾರ್ಚ್ ಮೂವತ್ತೊಂದಕ್ಕೆ ಮೊದಲು ತೀರ್ಮಾನ ಕೈಗೊಳ್ಳುವುದಕ್ಕಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸತಕ್ಕದ್ದು.
(11) ರಾಜ್ಯ ಸರ್ಕಾರವು, ಸ್ಥಳಿಯ ವಿಚಾರಣಾ ಸಮಿತಿಯ, ವಿದ್ಯಾ ವಿಷಯಕ ಪರಿಷತ್ತಿನ ಮತ್ತು ಮಂಡಳಿಯ ಶಿಫಾರಸ್ಸುಗಳ ಹಿನ್ನೆಲೆಯಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸತಕ್ಕದ್ದು ಮತ್ತು ಅವಶ್ಯಕವೆಂದು ಅದಕ್ಕೆ ಕಂಡುಬರಬಹುದಾದಂತಹ ವಿಚಾರಣೆಯ ತರುವಾಯ ಪ್ರವೇಶಾವಕಾಶದಲ್ಲಿ ವ್ಯತ್ಯಾಸಗಳು ಸೇರಿದಂತೆ, ಸಂದರ್ಭಾನುಸಾರ ಸಂಯೋಜಿಸಲು ಅಥವಾ ಸಂಯೋಜನೆಯನ್ನು ಅಥವಾ ಅದರ ಯಾವುದೇ ಭಾಗವನ್ನು ನಿರಾಕರಿಸಲು ವಿಶ್ವವಿದ್ಯಾಲಯಕ್ಕೆ ತನ್ನ ಶಿಫಾರಸ್ಸನ್ನು ಮಾಡತಕ್ಕದ್ದು.
(12) ವಿಶ್ವವಿದ್ಯಾಲಯವು ರಾಜ್ಯ ಸರ್ಕಾರದ ನಿರ್ದೇಶನಗಳನ್ನು ಸ್ವೀಕರಿಸಿದ ತರುವಾಯ ಅದರಂತೆ ಔಪಚಾರಿಕ ಆದೇಶಗಳನ್ನು ಹೊರಡಿಸತಕ್ಕದ್ದು.
(13) ಆದಾಗ್ಯೂ ಸಂಯೋಜನೆಯ ಮಂಜೂರಾತಿಯು ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ಅಥವಾ ಸಂಬಂಧಪಟ್ಟಂತಹ ಇತರ ಪ್ರಾಧಿಕಾರಗಳು ಅಥವಾ ನಿಕಾಯಗಳ ಪೂರ್ವಾನುಮೋದನೆ ಪಡೆಯುವುದಕ್ಕೆ ಒಳಪಟ್ಟಿರತಕ್ಕದ್ದು ಮತ್ತು ನಿರ್ಧರಿಸಲಾದ ಪ್ರವೇಶಾವಕಾಶದ ಸಂಖ್ಯೆಯು, ಅಂತಹ ಪ್ರಾಧಿಕಾರಗಳು ಅಥವಾ ನಿಕಾಯಗಳು ಆ ಸಂಖ್ಯೆಯನ್ನು ನಿರ್ದಿಷ್ಟಪಡಿಸಿದ್ದರೆ ಅದನ್ನು ಮೀರತಕ್ಕದ್ದಲ್ಲ.
(14) ಸಂಯೋಜನೆಗಾಗಿ ಅಥವಾ ಪ್ರವೇಶಾವಕಾಶದ ಸಂಖ್ಯೆಯನ್ನು ನಿಗದಿಪಡಿಸುವುದಕ್ಕಾಗಿ ಅಥವಾ ಅದರ ಯಾವುದೇ ಭಾಗಕ್ಕಾಗಿ, ಅರ್ಜಿಯನ್ನು ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇಲೆ ವಿಶ್ವವಿದ್ಯಾಲಯವು ಮಂಜೂರು ಮಾಡಿದ್ದರೆ, ವಿಶ್ವವಿದ್ಯಾಲಯವು, ನಿರ್ದಿಷ್ಟ ಷರತ್ತುಗಳೊಡನೆ ಅಥವಾ ಷರತ್ತುಗಳಿಲ್ಲದೆ ನಿರ್ದಿಷ್ಟ ಪ್ರವೇಶಾವಕಾಶದ ಸಂಖ್ಯೆಯೊಡನೆ ಯಾವ ವ್ಯಾಸಂಗಕ್ರಮಗಳ ಸಂಬಂಧದಲ್ಲಿ ಮತ್ತು ಯಾವ ಅವಧಿಗಾಗಿ, ಕಾಲೇಜನ್ನು ಅಥವಾ ವ್ಯಾಸಂಗ ಕ್ರಮವನ್ನು ಸಂಯೋಜಿಸಲಾಗಿದೆಯೋ, ಆ ವ್ಯಾಸಂಗಕ್ರಮಗಳನ್ನು ಮತ್ತು ಅವಧಿಯನ್ನು ಆದೇಶದಲ್ಲಿ ನಿರ್ದಿಷ್ಟಪಡಿಸತಕ್ಕದ್ದು.
(15) ಅಂತಹ ಅರ್ಜಿಯನ್ನು ಅಥವಾ ಅದರ ಯಾವುದೇ ಭಾಗವನ್ನು ರಾಜ್ಯ ಸರ್ಕಾರವು ಅಥವಾ ವಿಶ್ವವಿದ್ಯಾಲಯವು ನಿರಾಕರಿಸಿದ್ದರೆ, ಹಾಗೆ ನಿರಾಕರಿಸಲು ಕಾರಣಗಳನ್ನು ತಿಳಿಸತಕ್ಕದ್ದು.
(16) (1)ನೇ ಉಪಪ್ರಕರಣದ ಅಡಿಯಲ್ಲಿ ಸಲ್ಲಿಸಿದ ಯಾವುದೇ ಅರ್ಜಿಯನ್ನು (12)ನೇ ಉಪ ಪ್ರಕರಣದ ಅಡಿಯಲ್ಲಿ ಆದೇಶವನ್ನು ಮಾಡುವುದಕ್ಕೆ ಮೊದಲು ಯಾವುದೇ ಸಮಯದಲ್ಲಿ ಅರ್ಜಿದಾರನು ಹಿಂದಕ್ಕೆ ಪಡೆಯಬಹುದು.
(17) ಪ್ರತಿಯೊಂದು ಶೈಕ್ಷಣಿಕ ವರ್ಷಕ್ಕಾಗಿ, ಪ್ರಸಕ್ತ ಇರುವ ವ್ಯಾಸಂಗ ಕ್ರಮಗಳಿಗಾಗಿ ಮತ್ತು ಹೊಸ ವ್ಯಾಸಂಗ ಕ್ರಮಗಳನ್ನು ಹೊರತುಪಡಿಸಿ ಅನುಸರಣಾ ವ್ಯಾಸಂಗ ಕ್ರಮಗಳಿಗೆ ಸಂಯೋಜನೆಯನ್ನು ನವೀಕರಿಸುವುದಕ್ಕಾಗಿ ಅಥವಾ ಮುಂದುವರೆಸುವುದಕ್ಕಾಗಿ ಮಂಜೂರಾತಿಯನ್ನು ಮಂಡಳಿಯು ಹೊಸ ಸಂಯೋಜನೆಯ ಮಂಜೂರಾತಿಗೆ ಅನ್ವಯವಾಗುವ ರೀತಿಯಲ್ಲಿಯೇ, ವಿದ್ಯಾ ವಿಷಯಕ ಪರಿಷತ್ತಿನೊಡನೆ ಸಮಾಲೋಚಿಸಿ ನೀಡಬಹುದು.
(18) ರಾಜ್ಯ ಸರ್ಕಾರವು ಪ್ರತಿಯೊಂದು ವ್ಯಾಸಂಗ ಕ್ರಮದ ಸಂಬಂಧದಲ್ಲಿ ಪ್ರವೇಶಾವಕಾಶವನ್ನು ವಾರ್ಷಿಕ ಆಧಾರದಲ್ಲಿ ನಿರ್ಧರಿಸತಕ್ಕದ್ದು.