(1) ವಿಶ್ವವಿದ್ಯಾಲಯವು ಒಂದು ಸಾಮಾನ್ಯ ನಿಧಿಯನ್ನು ಹೊಂದಿರತಕ್ಕದ್ದು ಮತ್ತು ಅದಕ್ಕೆ ಈ ಮುಂದಿನವುಗಳು ಜಮೆಯಾಗತಕ್ಕದ್ದು,-
(ಎ) ಶುಲ್ಕಗಳಿಂದ, ದತ್ತಿಗಳಿಂದ ಮತ್ತು ಯಾವುದಾದರೂ ದಾನಗಳು ಇದ್ದರೆ ಅವುಗಳಿಂದ ಬರುವ ಆದಾಯ, ವಿದ್ಯಾರ್ಥಿ ನಿಲಯ, ಪ್ರಯೋಗ ಕೇಂದ್ರಗಳು ಹಾಗೂ ಫಾರ್ಮುಗಳೂ ಸೇರಿದಂತೆ ವಿಶ್ವವಿದ್ಯಾಲಯದ ಸ್ವತ್ತುಗಳಿಂದ ಬರುವ ಆದಾಯ;
(ಬಿ) ಈ ಅಧ್ಯಾದೇಶದ ಉಪಬಂಧಗಳಿಗೆ ಸುಸಂಗತವಾಗಿರುವಂತಹ ಷರತ್ತುಗಳಿಗೆ ಒಳಪಟ್ಟು ಸರ್ಕಾರವು ನೀಡಿದ ವಂತಿಕೆಗಳು ಅಥವಾ ಅನುದಾನಗಳು;
(ಸಿ) ಇತರ ವಂತಿಕೆಗಳು, ಅನುದಾನಗಳು, ದೇಣಿಗೆಗಳು, ಲಾಭಗಳು, ಸಾಲಗಳು ಮತ್ತು ಇತರ ಸ್ವೀಕೃತಿಗಳು.
(2) ವಿಶ್ವವಿದ್ಯಾಲಯವು ಪ್ರತಿಷ್ಠಾನ ನಿಧಿ ಎಂಬ ಹೆಸರಿನ ನಿಧಿಯನ್ನು ಹೊಂದಿರತಕ್ಕದ್ದು. ಇದಕ್ಕೆ ಕೇಂದ್ರ ಸರ್ಕಾರವು ಅಥವಾ ರಾಜ್ಯ ಸರ್ಕಾರವು ಅಥವಾ ಯಾವುದೇ ಅನುಮೋದಿತ ಏಜೆನ್ಸಿಯು ನೀಡುವ ವಂತಿಕೆಗಳು ಮತ್ತು ಅನುದಾನಗಳು ಹಾಗೂ ಮಂಡಳಿಯು ನಿರ್ದಿಷ್ಟಪಡಿಸಬಹುದಾದಂತಹ ಇತರ ಮೊತ್ತಗಳು ಜಮೆಯಾಗತಕ್ಕದ್ದು. ಮಂಡಳಿಯು ಅವಶ್ಯವಿದ್ದಾಗಲೆಲ್ಲ ಅಂತಹ ಮೊಬಲಗನ್ನು ನಿರ್ದಿಷ್ಟಪಡಿಸಬಹುದಾದಂತೆ ಪ್ರತಿಷ್ಠಾನ ನಿಧಿಯಿಂದ ಸಾಮಾನ್ಯ ನಿಧಿಗೆ ನಿಯಮಿಸಬಹುದಾದ ವಿಧಾನದಲ್ಲಿ ವರ್ಗಾಯಿಸಬಹುದು.
(3) ವಿಶ್ವವಿದ್ಯಾಲಯವು, ಸರ್ಕಾರವು ನೀಡಿದ ಯಾವುದೇ ಅನುದಾನಗಳ ಸಂಬಂಧದಲ್ಲಿ ಲೆಕ್ಕಪತ್ರ ತ:ಖ್ತೆಗಳನ್ನು, ವರದಿಗಳನ್ನು ಮತ್ತು ಇತರ ವಿವರಗಳನ್ನು ಸರ್ಕಾರಕ್ಕೆ ನೀಡತಕ್ಕದ್ದು ಹಾಗೂ ಸರ್ಕಾರವು ನಿರ್ದೇಶಿಸಬಹುದಾದಂತಹ ಅವಧಿಯೊಳಗೆ ಮತ್ತು ವಿಧಾನದಲ್ಲಿ ಯಾವುದೇ ಅನುದಾನದ ಬಳಕೆಗೆ ಸಂಬಂಧಿಸಿದಂತೆ ತ:ಖ್ತೆಗಳು, ಲೆಕ್ಕಪತ್ರಗಳು, ವರದಿಗಳು ಹಾಗೂ ಇತರ ವಿವರಗಳನ್ನು ಸಲ್ಲಿಸತಕ್ಕದ್ದು.
(4) ವಿಶ್ವವಿದ್ಯಾಲಯವು ಸರ್ಕಾರದಿಂದ ಅಥವಾ ಯಾವುದೇ ಇತರ ರಾಜ್ಯ ಸರ್ಕಾರಗಳಿಂದ ಅಥವಾ ಕೇಂದ್ರ ಸರ್ಕಾರದಿಂದ ಅಥವಾ ಶಾಸನಾತ್ಮಕ ನಿಕಾಯಗಳಿಂದ ಅಥವಾ ದತ್ತಿಗಳಿಂದ ಅಥವಾ ದಾನಗಳಿಂದ, ವಿಶ್ವವಿದ್ಯಾಲಯವು ಮತ್ತು ದಾನಿ ಅಥವಾ ಅನುದಾನದಾತರ ನಡುವೆ ಮಾಡಿಕೊಂಡ ಒಪ್ಪಂದಗಳಲ್ಲಿಯ ಷರತ್ತುಗಳಿಗೆ ಒಳಪಟ್ಟು ತನ್ನ ಧ್ಯೇಯೋದ್ದೇಶಗಳ ಸಾಧನೆಗಾಗಿ ಅನುದಾನ ಸ್ವೀಕರಿಸಲು ಸಕ್ಷಮವಾಗಿರತಕ್ಕದ್ದು.