ಪ್ರಕರಣ 35ರ ಅಡಿಯಲ್ಲಿ ವಿಚಾರಣೆಯನ್ನು ಕೋರಿ ಸಲ್ಲಿಸಿದ ಅರ್ಜಿ ಜೊತೆ ನೂರು ರೂಪಾಯಿಗಳ ಶುಲ್ಕವನ್ನು ಪಾವತಿಸತಕ್ಕದ್ದು.
[ಅಧ್ಯಾಯ VA ಸಹಕಾರ ಶಿಕ್ಷಣ ಮತ್ತು ತರಬೇತಿ 10ಎ. ಸಹಕಾರ ಶಿಕ್ಷಣ ನಿದಿಗೆ ಪಾವತಿ: ಪ್ರತಿ ಸಹಕಾರಿಯು ತನ್ನ ಸಹಕಾರ ನಿಧಿ ವಂತಿಕೆಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು ಇದರ ಖಾತೆಗೆ ತನ್ನ ವಾರ್ಷಿಕ ಸಾಮಾನ್ಯ ಸಭೆ ನಡೆದ ದಿನಾಂಕದಿಂದ ಮೂವತ್ತು ದಿನಗಳೊಳಗೆ ಜಮಾ ಮಾಡತಕ್ಕದ್ದು.
10ಬಿ ಶಿಕ್ಷಣ ನಿಧಿಯ ನಿರ್ವಹಣೆ : (1) ಸಹಕಾರ ಶಿಕ್ಷಣ ನಿಧಿಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ನಿರ್ವಹಿಸತಕ್ಕದ್ದು ಮತ್ತು ಪೋಷಿಸತಕ್ಕದ್ದು. ಅದನ್ನು ಕೆಳಗಿನ ಸದಸ್ಯರುಗಳನ್ನುಳ್ಳ ಒಂದು ಸಲಹಾ ಸಮಿತಿಯ ಸೂಚನೆ ಮೇರೆಗೆ ಬಳಕೆ ಮಾಡತಕ್ಕದ್ದು.
(ಎ) ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಇದರ ಅಧ್ಯಕ್ಷರು ಸಭಾಪತಿ
(ಬಿ) ಸಹಕಾರ ಶಿಕ್ಷಣ / ತರಬೇತಿ ಕುರಿತು ಓರ್ವ ತಜ್ಞರನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯಿಂದ ನಾಮನಿರ್ದೇಶನ ಮಾಡತಕ್ಕದ್ದು. ಸದಸ್ಯ
(ಸಿ) ನಿರ್ದೇಶಕ, ಪ್ರಾದೇಶಿಕ ಸಹಕಾರ ವ್ಯವಸ್ಥಾಪನ ಸಂಸ್ಥೆ, ಬೆಂಗಳೂರು ಸದಸ್ಯ
(ಡಿ) ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಮುಖ್ಯ ಕಾರ್ಯನಿರ್ವಾಹಕ ಸದಸ್ಯ ಕಾರ್ಯದರ್ಶಿ
(2) ಸದರಿ ಸಲಹಾ ಸಮಿತಿಯ ಸಭೆಗೆ ಕೋರಂ ಮೂರು ಇರತಕ್ಕದ್ದು. ಅಂತಹ ಸಮಿತಿಯ ನಾಮನಿರ್ದೇಶನ ಸದಸ್ಯನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಇದರ ಆಡಳಿತ ಮಂಡಳಿಯು ನಿಗದಿಪಡಿಸಿದಂತೆ, ಎರಡು ವರ್ಷಗಳಿಗೆ ಹೆಚ್ಚಿಲ್ಲದ ಅವಧಿಗೆ ಪದಗ್ರಹಣ ಹೊಂದಿರತಕ್ಕದ್ದು. ಸಲಹಾ ಸಮಿತಿಯ ಸಭೆಯನ್ನು ಕನಿಷ್ಟ ಮೂರು ತಿಂಗಳಿಗೊಮ್ಮೆ ಕರೆಯತಕ್ಕದ್ದು.
(3) ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಈ ನಿಧಿಯನ್ನು ಒಂದು ಪ್ರತ್ಯೇಕ ಖಾತೆಯನ್ನು ವಾಣಿಜ್ಯ / ಷೆಡ್ಯೂಲ್ಡ್ ಬ್ಯಾಂಕಿನಲ್ಲಿ ನಿರ್ವಹಿಸತಕ್ಕದ್ದು ಮತ್ತು ಸದರಿ ನಿಧಿಯ ಮೇಲಿನ ಬಡ್ಡಿ ಅಥವಾ ಇತರ ಗಳಿಕೆಯಿಂದ ಪ್ರಾಪ್ತವಾಗುವ ಆದಾಯವನ್ನು ಸದರಿ ನಿಧಿಗೆ ಜಮಾಮಾಡತಕ್ಕದ್ದು.
10ಸಿ ಶಿಕ್ಷಣ ನಿಧಿಯನ್ನು ಬಳಕೆ ಮಾಡಬಹುದಾದ ಉದ್ದೇಶಗಳು: (1) ಸಲಹಾ ಸಮಿತಿಯ ಅನುಮೋದನೆ ಇಲ್ಲದೆ ಸಹಕಾರ ಶಿಕ್ಷಣ ನಿಧಿಯಿಂದ ಯಾವುದೇ ವೆಚ್ಚವನ್ನು ಮಾಡತಕ್ಕದ್ದಲ್ಲ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಇದರ ಲೆಕ್ಕ ಪರಿಶೋಧಕರು ಈ ನಿಧಿಯ ಬಳಕೆಯನ್ನು ಪರಿಶೀಲಿಸಿ ದೃಢೀಕರಿಸತಕ್ಕದ್ದು.
(2) ಸಲಹಾ ಸಮಿತಿಯು ಕಾಲಕಾಲಕ್ಕೆ ನೀಡುವ ನಿರ್ದೇಶನಗಳಿಗೆ ಒಳಪಟ್ಟು ಈ ನಿಧಿಯನ್ನು ಸಹಕಾರಿ ಶಿಕ್ಷಣ ತರಬೇತಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಪಟ್ಟ ಕೆಳಗಿನ ಯಾವುದೇ ಉದ್ದೇಶಗಳಿಗೆ ಉಪಯೋಗಿಸಬಹುದು.
(ಎ) ಸಹಕಾರಿಗಳ ನೌಕರರ, ನಿರ್ದೇಶಕರ (ಪದಾಧಿಕಾರಿಗಳನ್ನು ಒಳಗೊಂಡಂತೆ) ಮತ್ತು ಸದಸ್ಯರ ಶಿಕ್ಷಣ ಹಾಗೂ ಸಹಕಾರ ತತ್ವ ಮತ್ತು ಆಚರಣೆಯಲ್ಲಿ ಸಾರ್ವಜನಿಕರಿಗೆ ಶಿಕ್ಷಣ ನೀಡುವುದುದು;
(ಬಿ) ಸಹಕಾರಿಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ;
(ಸಿ) ಸಹಕಾರಿಗಳ ಅಭಿವೃದ್ಧಿ;
(ಡಿ) ಸಾಮಾನ್ಯವಾಗಿ ಸಹಕಾರಿ ಚಳುವಳಿಯ ಅಭಿವೃದ್ಧಿ;
(ಇ) ವೃತ್ತಿ ನೈಪುಣ್ಯತೆ;
(ಎಫ್) ಸಂಶೋಧನೆ ಮತ್ತು ಅಭಿವೃದ್ಧಿ;
(ಜಿ) ತಾಂತ್ರಿಕ ಸೌಲಭ್ಯಗಳನ್ನು ಇಂದೀಕರಿಸುವುದು;
(ಹೆಚ್) ಶಿಕ್ಷಣ, ತರಬೇತಿ, ಸಂಶೋಧನೆ, ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ
(ಐ) ಸಹಕಾರಿ ಪ್ರಚಾರ ಮತ್ತು ಪ್ರಸಿದ್ಧಿ;
(ಜೆ) ಸಹಕಾರಿ ಚಳುವಳಿಗೆ ಸಂಬಂಧಪಟ್ಟ ಪುಸ್ತಕ ಮತ್ತು ನಿಯತಕಾಲಿಕೆಗಳ ಪ್ರಕಟಣೆ;
(ಕೆ) ಸಂಶೋಧನೆ, ಸರ್ವೇಕ್ಷಣೆ ಮತ್ತು ಪ್ರಕರಣ ಅಧ್ಯಯನಗಳನ್ನು ನಡೆಸುವುದು;
(ಎಲ್) ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಪ್ರಶಂಸನೀಯ ಸೇವೆ ಸಲ್ಲಿಸಿದವರಿಗೆ ಬಹುಮಾನ ಅಥವಾ ಗೌರವಧನ ಕೊಡುವುದು;
(3) ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ಸಲಹಾ ಸಮಿತಿಯು ನೀಡುವ ಒಟ್ಟಾರೆ ಮಾರ್ಗಸೂಚಿಗಳನ್ನು ಅನುಸರಿಸಿ ಸಹಕಾರಿ ತತ್ವಗಳು ಮತ್ತು ಮೌಲ್ಯಗಳ ಬಗ್ಗೆ ತಿಳುವಳಿಕೆ ಮೂಡಿಸುವುದು, ಸದಸ್ಯರ ಶಿಕ್ಷಣ, ಸಹಕಾರಿಗಳಲ್ಲಿ ಆರ್ಥಿಕ ಮತ್ತು ವ್ಯವಹಾರ ನಿರ್ವಹಣೆ ಇತ್ಯಾದಿ ವಿಷಯಗಳ ಸಹಕಾರಿ ಚಳುವಳಿ ಮತ್ತು ಸಹಕಾರಿಗಳ ಬೆಳವಣಿಗೆಗೆ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳನ್ನು ರೂಪಿಸತಕ್ಕದ್ದು ಮತ್ತು ವಾರ್ಷಿಕ ಬಜೆಟ್ಗಳನ್ನು ತಯಾರಿಸತಕ್ಕದ್ದು ಹಾಗೂ ಅವುಗಳನ್ನು ಅನುಷ್ಠಾನಗೊಳಿಸತಕ್ಕದ್ದು;
(4) ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ರಿಜಿಸ್ಟ್ರಾರನಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ವಿವರಗಳನ್ನು ತೋರಿಸುವ ಅಧಿಕೃತ ವರದಿಗಳನ್ನು ವರ್ಷಕ್ಕೊಮ್ಮೆ ಸಲ್ಲಿಸತಕ್ಕದ್ದು;
(5) ಪ್ರತಿ ಸಹಕಾರಿ ಆಡಳಿತ ಮಂಡಳಿಯು ಸಹ ತನ್ನ ವಾರ್ಷಿಕ ಆಯವ್ಯಯದಲ್ಲಿ ನೌಕರರ, ನಿರ್ದೇಶಕರ, ಸದಸ್ಯರ ಮತ್ತು ಭಾವಿ ಸದಸ್ಯರ ಶಿಕ್ಷಣದ ಖರ್ಚುಗಳನ್ನು ಅಳವಡಿಸತಕ್ಕದ್ದು. ಸಹಕಾರ ಸಿದ್ಧಾಂತ, ತತ್ವಗಳು ಮತ್ತು ಆಚರಣೆಗಳ ಬಗ್ಗೆ ಸದಸ್ಯರು ನಿರ್ದೇಶಕರು ಮತ್ತು ನೌಕರರು ಸರಿಯಾದ ತರಬೇತಿ ನೀಡಿ ಅರಿವು ಮೂಡಿಸುವುದನ್ನು ಖಾತರಿ ಪಡಿಸಿಕೊಳ್ಳತಕ್ಕದ್ದು. ಯಾವುದೇ ಒಂದು ಉತ್ತಮ ಸಹಕಾರಿಯಲ್ಲಿ ಅನುಸರಿಸಬೇಕಾದ ಮಾರ್ಗದರ್ಶಕತೆ ತಿಳುವಳಿಕೆಯ ಮಟ್ಟ, ಸದಸ್ಯರ ಭಾಗವಹಿಸುವಿಕೆ ಮತ್ತು ಸದಸ್ಯರ ನಿಯಂತ್ರಣಗಳು ಸಹಕಾರಿಯ ಎಲ್ಲಾ ನೌಕರರಿಗೆ, ನಿರ್ದೇಶಕರಿಗೆ ಮತ್ತು ಸದಸ್ಯರಿಗೆ ಮುಟ್ಟುವುದನ್ನು ಖಾತರಿ ಪಡಿಸಿಕೊಳ್ಳತಕ್ಕದ್ದು.]