ಚರ ಸ್ವತ್ತಿನ ಜಪ್ತಿ ಮತ್ತು ಮಾರಾಟದ ಸಂಬಂಧದಲ್ಲಿ ಈ ಕೆಳಗಿನ ನಿಯಮಗಳನ್ನು ಪಾಲಿಸತಕ್ಕದ್ದು:-
ಎ) ಡಿಕ್ರಿದಾರನಿಗೆ ಮುಂಚಿತವಾಗಿ ನೋಟೀಸನ್ನು ಕೊಟ್ಟ ನಂತರ, ಯಾವ ಗ್ರಾಮದಲ್ಲಿ ತೀರ್ಪುಋಣಿಯು ವಾಸವಾಗಿರುವನೋ ಅಥವಾ ಜಪ್ತಿಗೆ ಗುರಿಯಾದ ಸ್ವತ್ತನ್ನು ಹೊಂದಿರುವನೋ, ಆ ಗ್ರಾಮಕ್ಕೆ ಮಾರಾಟ ಅಧಿಕಾರಿಯು ಹೋಗತಕ್ಕದ್ದು ಮತ್ತು ತೀರ್ಪು ಋಣಿಯು ಹಾಜರಿದ್ದಲ್ಲಿ ನಿಯಮ 13(2)ರ ಪ್ರಕಾರ ಅವನಿಗೆ ತಗಾದೆ ನೋಟೀಸನ್ನು ಜಾರಿ ಮಾಡತಕ್ಕದ್ದು. ಬಾಕಿಯಿರುವ ಮೊಬಲಗನ್ನು ಜಾರಿಗೊಳಿಸುವ ಖರ್ಚು ಸಹಿತ ಬಾಕಿ ಹಣವನ್ನು ಕೂಡಲೇ ಸಂದಾಯ ಮಾಡದಿದ್ದರೆ ಮಾರಾಟ ಅಧಿಕಾರಿಯ, ತೀರ್ಪು ಋಣಿಯ ಸ್ವತ್ತುಗಳನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ಅಥವಾ ಅನ್ಯಥಾ ಜಪ್ತಿ ಮಾಡತಕ್ಕದ್ದು ಮತ್ತು ಹಾಗೆ ಜಪ್ತಿ ಮಾಡಿದ ಸ್ವತ್ತುಗಳ ಪಟ್ಟಿಯನ್ನು ನಮೂನೆ-5ರಲ್ಲಿ ತಯಾರಿಸತಕ್ಕದ್ದು ಹಾಗೂ ಅದರ ನಕಲನ್ನು ತೀರ್ಪುಋಣಿಗೆ ಕೂಡಲೇ ಕೊಡತಕ್ಕದ್ದು; ಮತ್ತು ನಿಗದಿತ ದಿನಾಂಕಕ್ಕೆ ಮುಂಚೆ ಸಂದಾಯ ಮಾಡಬೇಕಾಗಿದ್ದ ಮೊತ್ತಗಳನ್ನು ಸಂದಾಯ ಮಾಡದಿದ್ದಲ್ಲಿ ಜಪ್ತಿ ಮಾಡಲಾದ ಸ್ವತ್ತನ್ನು ಯಾವ ಸ್ಥಳದಲ್ಲಿ, ಯಾವ ದಿನಾಂಕದಂದು ಮತ್ತು ಯಾವ ಸಮಯಕ್ಕೆ ಮಾರಾಟ ಮಾಡಲಾಗುವುದು ಎಂಬ ನೋಟೀಸನ್ನು ತೀರ್ಪು ಋಣಿಗೆ ಕೊಡತಕ್ಕದ್ದು. ತೀರ್ಪು ಋಣಿಯು ಗೈರು ಹಾಜರಾಗಿದ್ದಲ್ಲಿ ಮೇಲೆ ಹೇಳಿದ ತಗಾದೆ ನೋಟೀಸನ್ನು ಆತನ ಕುಟುಂಬದ ಯಾಮೊಬ್ಬ ವಯಸ್ಕ ಸದಸ್ಯನ ಮೇಲೆ ಅಥವಾ ತೀರ್ಪು ಋಣಿಯ ಅಧಿಕೃತ ಏಜೆಂಟನ ಮೆಲೆ ಮಾರಾಟ ಅಧಿಕಾರಿಯು ಜಾರಿಗೊಳಿಸತಕ್ಕದ್ದು ಅಥವಾ ಹಾಗೆ ಜಾರಿಗೊಳಿಸಲಾಗದಿದ್ದಲ್ಲಿ ತೀರ್ಪುಋಣಿಯ ವಾಸ್ಥಳದಲ್ಲಿ ಯಾವುದೇ ಎದ್ದು ಕಾಣುವ ಭಾಗದಲ್ಲಿ ಅಂಥ ತಗಾದೆ ನೋಟೀಸಿನ ಒಂದು ಪ್ರತಿಯನ್ನು ಅಂಟಿಸತಕ್ಕದ್ದು. ಆ ನಂತರ ಜಪ್ತಿ ಮಾಡತಕ್ಕದ್ದು ಮತ್ತು ಜಪ್ತಿ ಮಾಡಲಾದ ಸ್ವತ್ತಿನ ಪಟ್ಟಿಯನ್ನು ಸದರಿ ಸ್ವತ್ತನ್ನು ಯಾವ ಸ್ಥಳದಲ್ಲಿ ಇಡಲಾಗುತ್ತದೆ ಎಂಬ ಬಗ್ಗೆ ಮತ್ತು ಮಾರಾಟ ಮಾಡುವ ಸ್ಥಳ, ದಿನಾಂಕ ಮತ್ತು ಸಮಯದ ಬಗ್ಗೆ, ಅದರ ಮೇಲೆ ಷರಾ ಬರೆದು ನೋಟೀಸು ಸಹಿತ ತೀರ್ಪುಋಣಿಯ ಸಾಮಾನ್ಯ ವಾಸಸ್ಥಳದ ಮೇಲೆ ಅಂಟಿಸತಕ್ಕದ್ದು.
ಬಿ) ಜಪ್ತಿ ನಂತರ, ಮಾರಾಟ ಅಧಿಕಾರಿಯು ಮಾಡಿದ ಸ್ವತ್ತಿನ ಅಭಿರಕ್ಷೆಯ ಬಗ್ಗೆ ಡಿಕ್ರಿದಾರನ ಬಳಿಯಲ್ಲಿ ಅಥವಾ ಬೇರೆ ರೀತಿಯಲ್ಲಿ ವ್ಯವಸ್ಥೆ ಮಾಡಬಹುದು. ಮಾರಾಟ ಅಧಿಕಾರಿಯು, ಡಿಕ್ರಿದಾರನು ಜಪ್ತಿ ಮಾಡಿದ ಸ್ವತ್ತುಗಳನ್ನು ಅಭಿರಕ್ಷಣೆಗೆ ತೆಗೆದುಕೊಳ್ಳಬೇಕೆಂದು ತಿಳಿಸಿದಲ್ಲಿ ಡಿಕ್ರಿದಾರನು ಸ್ವತ್ತನ್ನು ತೆಗೆದುಕೊಳ್ಳಲು ಬದ್ಧನಾಗಿರುತ್ತಾನೆ ಮತ್ತು ಆತನ ನಿರ್ಲಕ್ಷದಿಂದ ಸಂಭವಿಸಿದ ಯಾವುದೇ ನಷ್ಟವನ್ನು ಡಿಕ್ರಿದಾರನು ಭರ್ತಿ ಮಾಡತಕ್ಕದ್ದು. ಜಪ್ತಿ ಮಾಡಿದ ಸ್ವತ್ತುಗಳು ಜಾನುವಾರುಗಳಾಗಿದ್ದರೆ ಡಿಕ್ರಿದಾರನು ಅವುಗಳಿಗೆ ಹುಲ್ಲು, ನೀರು ಒದಗಿಸಬೇಕು. ಮಾರಾಟ ಅಧಿಕಾರಿಯು ತೀರ್ಪು ಋಣಿಯ ಅಥವಾ ಅಂಥ ಸ್ವತ್ತಿನಲ್ಲಿ ಹಕ್ಕುಳ್ಳವನೆಂದು ಕ್ಲೇಮು ಮಾಡುವ ಯಾಮೊಬ್ಬ ವ್ಯಕ್ತಿಯ ಕೋರಿಕೆಯಂತೆ, ಅದು ಯಾವ ಗ್ರಾಮದಲ್ಲಿ ಅಥವಾ ಸ್ಥಳದಲ್ಲಿ ಜಪ್ತಿಯಾಯಿತೋ ಆ ಸ್ಥಳದಲ್ಲಿ, ಕೇಳಿದಾಗ ಸದರಿ ಸ್ವತ್ತನ್ನು ಹಾಜರುಪಡಿಸುವ ಬಗ್ಗೆ ಒಂದು ಅಥವಾ ಅಧಿಕ ಜಾಮೀನುಗಳ ಸಹಿತ, ರಿಜಿಸ್ಟ್ರಾರನು ನಿಗದಿಮಾಡಿದ ನಮೂನೆಯಲ್ಲಿ ತೀರ್ಪುಋಣಿಯು ಅಥವಾ ಅಂಥ ವ್ಯಕ್ತಿಯು ಒಂದು ಕರಾರು ಪತ್ರವನ್ನು ಬರೆದುಕೊಟ್ಟಲ್ಲಿ ಅಂಥ ತೀರ್ಪು ಋಣಿಯ ಅಥವಾ ಅಂಥ ವ್ಯಕ್ತಿಯ ಅಭಿರಕ್ಷೆಯಲ್ಲಿ ಇಡಬಹುದು.
ಸಿ) (ಎ) ಅಥವಾ (ಬಿ) ಖಂಡಗಳ ಮೇರೆಗೆ ಸೂರ್ಯಾಸ್ತವಾದ ಮೇಲೆ ಅಥವಾ ಸೂರ್ಯೋದಯಕ್ಕೆ ಮುಂಚೆ ಯಾವುದೇ ಜಪ್ತಿಯನ್ನು ಮಾಡತಕ್ಕದ್ದಲ್ಲ.
ಡಿ) ಜಪ್ತಿ ಮಾಡಲಾದ ಸ್ವತ್ತುಗಳ ಪ್ರಮಾಣವು ಅತಿಯಾಗಿ ಇರತಕ್ಕದ್ದಲ್ಲ ಎಂದರೆ, ಜಪ್ತಿ ಮಾಡಲಾದ ಸ್ವತ್ತಿನ ಮೌಲ್ಯ ಮತ್ತು ತೀರ್ಪು ಋಣಿಯಿಂದ ಬಾಕಿಯಿರುವ ಮೊತ್ತ, ಅದರ ಮೇಲಿನ ಬಡ್ಡಿ ಮತ್ತು ಮಾರಾಟಕ್ಕೆ ಪ್ರಾಸಂಗೀಕವಾದ ಎಲ್ಲಾ ವೆಚ್ಚ ಇವುಗಳ ಒಟ್ಟು ಮೊತ್ತ ಸಾಧ್ಯವಾದಷ್ಟು ಪ್ರಮಾಣಾನುಸಾರವಾಗಿರತಕ್ಕದ್ದು.
ಇ) ತೀರ್ಪು ಋಣಿಗೆ ಸೇರಿದ ಜಮೀನಿನ ಬೆಳೆಗಳನ್ನು ಅಥವಾ ಸಂಗ್ರಹಿಸಲಾದ ಉತ್ಪನ್ನಗಳನ್ನು ಜಪ್ತಿ ಮಾಡಿರುವಲ್ಲಿ ಮಾರಾಟ ಅಧಿಕಾರಿಯು, ಕಟಾವು ಮಾಡುವುದಕ್ಕೆ ಅಥವಾ ಸಂಗ್ರಹಿಸುವುದಕ್ಕೆ ಅವು ಯೋಗ್ಯವಾಗಿರುವಾಗ ಮಾರಾಟ ಮಾಡಿಸಬಹುದು ಅಥವಾ ತಾನು ಇಷ್ಟಪಟ್ಟಲ್ಲಿ ಅವುಗಳನ್ನು ಸೂಕ್ತ ಋತುವಿನಲ್ಲಿ ಕಟಾವು ಮಾಡಿಸಬಹುದು ಅಥವಾ ಸಂಗ್ರಹಿಸಿಡಬಹುದು ಹಾಗೂ ಅವುಗಳನ್ನು ಮಾರಾಟ ಮಾಡುವ ತನಕ ಸೂಕ್ತ ಸ್ಥಳಗಳಲ್ಲಿ ದಾಸ್ತಾನು ಮಾಡಿಸಬಹುದು. ಎರಡನೆಯ ಸಂದರ್ಭದಲ್ಲಿ, ಅಂಥ ಬೆಳೆಗಳನ್ನು ಕಟಾವು ಮಾಡಿಸುವ ಅಥವಾ ಉತ್ಪನ್ನಗಳನ್ನು ಸಂಗ್ರಹಿಸುವ ಮತ್ತು ದಾಸ್ತಾನು ಮಾಡಿಸುವ ವೆಚ್ಚವನ್ನು, ಸದರಿ ಸ್ವತ್ತನ್ನು ಬಿಡಿಸಿಕೊಳ್ಳುವಾಗ ಮಾಲೀಕರು ಭರಿತಕ್ಕದ್ದು ಅಥವಾ ಅದನ್ನು ಮಾರಾಟ ಮಾಡಿದ ಸಂದರ್ಭದಲ್ಲಿ ಮಾರಾಟದ ಉತ್ಪನ್ನದಿಂದ ಭರಿಸತಕ್ಕದ್ದು.
ಎಫ್) ಮಾರಾಟ ಅಧಿಕಾರಿಯು ಜಪ್ತಿ ಮಾಡಿ ವಶಕ್ಕೆ ತೆಗೆದುಕೊಂಡ ಎತ್ತುಗಳು ಅಥವಾ ದನಕರುಗಳಿಂದ ಕೆಲಸ ಮಾಡಿಸತಕ್ಕದ್ದಲ್ಲ ಅಥವಾ ವಶಕ್ಕೆ ತೆಗೆದುಕೊಂಡ ಸಾಮಾನುಗಳನ್ನು ಅಥವಾ ಚರಸ್ವತ್ತುಗಳನ್ನು ಉಪಯೋಗಿಸತಕ್ಕದ್ದಲ್ಲ ಮತ್ತು ದನಕರುಗಳಿಗೆ ಅಥವಾ ಜಾನುವಾರುಗಳಿಗೆ ಅವಶ್ಯವಾದ ಮೇವನ್ನು ಒದಗಿಸತಕ್ಕದ್ದು. ಇದಕ್ಕೆ ತಗಲುವ ಖರ್ಚನ್ನು ಸ್ವತ್ತನ್ನು ಬಿಡಿಸಿಕೊಳ್ಳುವಾಗ ಮಾಲೀಕರು ಭರಿಸತಕ್ಕದ್ದು ಅಥವಾ ಅದನ್ನು ಮಾರಾಟದ ಉತ್ಪನ್ನದಿಂದ ಭರಿಸತಕ್ಕದ್ದು.
ಜಿ) ತೀರ್ಪುಋಣಿಗೆ ಸೇರಿದ ಮತ್ತು ಅದರಲ್ಲಿ ಇರಿಸಲಾದ ಸ್ವತ್ತನ್ನು ಜಪ್ತಿ ಮಾಡುವ ಉದ್ದೇಶದಿಂದ, ಯಾವುದೇ ಕುದುರೆಲಾಯ, ದನದ ಕೊಟ್ಟಿಗೆ, ಕಣಜ, ಉಗ್ರಾಣ, ಹೊರಮನೆ ಅಥವಾ ಇತರ ಕಟ್ಟಡವನ್ನು ಬಲವಂತವಾಗಿ ತೆರೆಯಿಸಲು ಮಾರಾಟ ಅಧಿಕಾರಿಗೆ ನ್ಯಾಯಸಮ್ಮತವಾದ ಅಧಿಕಾರವಿರತಕ್ಕದ್ದು ಮತ್ತು ಆತನು ಯಾವ ವಾಸದ ಮನೆಯ ಹೊರಬಾಗಿಲು ತೆರೆದಿರುತ್ತದೋ ಅಂಥ ವಾಸದ ಮನೆಯೊಳಗೆ ಪ್ರವೇಶ ಮಾಡಬಹುದು ಮತ್ತು ಅಂಥ ವಾಸದ ಮನೆಯೊಳಗಿನ ಯಾವುದೇ ಕೊಠಡಿಯ ಬಾಗಿಲನ್ನು ಮುರಿದು ತೆಗೆಯಬಹದು:
ಪರಂತು, ಇದರಲ್ಲಿ ಇಲ್ಲಿ ಇನ್ನು ಮುಂದೆ ಉಪಬಂಧಿಸಿದುದರ ಹೊರತಾಗಿ ಜನಾನಾ ಅಥವಾ ಮಹಿಳೆಯರ ವಾಸದ ಉಪಯೋಗಕ್ಕೆ ಬಿಡಲಾದ ಕೋಣೆಯ ಬಾಗಿಲನ್ನು ಮುರಿದು ತೆಗೆಯಲು ಅಥವಾ ಪ್ರವೇಶಿಸಲು ಸದರಿ ಅಧಿಕಾರಿಗೆ ನ್ಯಾಯಸಮ್ಮತವಾದ ಅಧಿಕಾರವು ಇರತಕ್ಕದ್ದಲ್ಲ.
ಎಚ್) ಯಾವ ವಾಸದ ಮನೆಯ ಹೊರಬಾಗಿಲು ಮುಚ್ಚಲ್ಪಟ್ಟಿರುತ್ತದೋ ಆ ವಾಸದ ಮನೆಯೊಳಗೆ ಅಥವಾ ವಾಸದ ಮನೆಯೊಳಗೆ ಮಹಿಳೆಯರ ವಾಸಕ್ಕೆ ಬಿಡಲಾದ ಹಾಗೂ ಪದ್ಧತಿ ಅಥವಾ ರೂಢಿಗತವಾದ ಖಾಸಗಿ ಸ್ಥಳಗಳೆಂದು ಪರಿಗಣಿಸಲಾದ ಯಾವುದೇ ಕೊಠಡಿಯೊಳಗೆ ತೀರ್ಪುಋಣಿಯ ಸ್ವತ್ತು ಇರುವುದೆಂದು ನಂಬಲು ಮಾರಾಟ ಅಧಿಕಾರಿಗೆ ಕಾರಣವಿದ್ದಲ್ಲಿ, ಸದರಿ ಮಾರಾಟ ಅಧಿಕಾರಿಯು ಅತ್ಯಂತ ಸಮೀಪದ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಅಧಿಕಾರಿಗೆ ವಾಸ್ತವಿಕ ಸಂಗತಿಗಳನ್ನು ತಿಳಿಸಿ ಮನವಿಯನ್ನು ಸಲ್ಲಿಸತಕ್ಕದ್ದು. ಅಂಥ ಮನವಿಯನ್ನು ಸಲ್ಲಿಸಿದ ಮೇಲೆ ಸದರಿ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಅಧಿಕಾರಿಯು, ಒಬ್ಬ ಪೊಲೀಸ್ ಅಧಿಕಾರಿಯನ್ನು ಸದರಿ ಸ್ಥಳಕ್ಕೆ ಕಳುಹಿಸತಕ್ಕದ್ದು ಮತ್ತು ಆತನ ಸಮಕ್ಷಮದಲ್ಲಿ ಅಂತಹ ವಾಸದ ಮನೆಯ ಹೊರಬಾಗಿಲನ್ನು ಜನಾನಾವನ್ನು ಹೊರತುಪಡಿಸಿ, ಮನೆ ಒಳಗಿನ ಯಾವುದೇ ಕೊಠಡಿಯ ಬಾಗಿಲನ್ನು ಮುರಿದು ತೆಗೆಯಬಹುದು. ಅಲ್ಲದೇ ಮಾರಾಟ ಅಧಿಕಾರಿಯು ಪೊಲೀಸ್ ಅಧಿಕಾರಿಯ ಸಮಕ್ಷಮದಲ್ಲಿ ಜನಾನಾದೊಳಗಿನ ಮಹಿಳೆಯರನ್ನು ಅವರು ತಮ್ಮ ಪದ್ಧತಿಯಂತೆ ಅಥವಾ ರೂಢಿಯಂತೆ ಹೊರಗೆ ಕಾಣಿಸಿಕೊಳ್ಳಲಾಗದಿದ್ದ ಸಂದರ್ಭದಲ್ಲಿ ಅವರನ್ನು ಸ್ಥಳಾಂತರಿಸುವುದಕ್ಕೆ ಸೂಕ್ತ ವ್ಯವಸ್ಥೆ ಒದಗಿಸಿ ಸ್ಥಳಾಂತರಿಸಿದ ತರುವಾಯ, ತೀರ್ಪು ಋಣಿಯ ಸ್ವತ್ತುಗಳು ಯಾವುದಾದರೂ ಸದರಿ ಸ್ಥಳದಲ್ಲಿ ಇದ್ದರೆ ಸದರಿ ಸ್ವತ್ತುಗಳನ್ನು ಜಪ್ತಿ ಮಾಡಲು ಜನಾನಾ ಕೊಠಡಿಗಳೊಳಗೆ ಪ್ರವೇಶ ಮಾಡಬಹುದು. ಆದರೆ ಇಂಥ ಸ್ವತ್ತು ಪತ್ತೆಯಾದ ಕೂಡಲೇ ಅಂತಹ ಕೊಠಡಿಗಳಿಂದ ಅದನ್ನು ಸ್ಥಳಾಂತರಿಸತಕ್ಕದ್ದು ಮತ್ತು ಆ ತರುವಾಯ ಮೊದಲಿನಿಂತೆ ಆ ಕೋಣೆಗಳನ್ನು ವಾಸಕ್ಕಾಗಿ ಬಳಸಿಕೊಳ್ಳಲು ಅವಕಾಶಮಾಡಿಕೊಡತಕ್ಕದ್ದು.
ಐ) ಮಾರಾಟ ಅಧಿಕಾರಿಯು, ಮಾರಾಟದ ದಿನಕ್ಕೆ ಮುಂಚಿನ ದಿನ ಮತ್ತು ಮಾರಾಟದ ದಿನ, ತೀರ್ಪು ಋಣಿಯು ವಾಸಿಸುವ ಗ್ರಾಮದಲ್ಲಿ ಮತ್ತು ಮಾರಾಟಕ್ಕೆ ಸೂಕ್ತ ಪ್ರಚಾರ ಮಾಡಲು ಅವಶ್ಯವೆಂದು ವಸೂಲಿ ಅಧಿಕಾರಿಯು ಪರಿಗಣಿಸುವಂತಹ ಸ್ಥಳದಲ್ಲಿ ಅಥವಾ ಸ್ಥಳಗಳಲ್ಲಿ ಉದ್ದೇಶಿತ ಮಾರಾಟದ ಸಮಯ ಮತ್ತು ಸ್ಥಳದ ಬಗ್ಗೆ ಡಂಗುರ ಸಾರುವ ಮೂಲಕ ಘೋಷಣೆ ಮಾಡಿಸತಕ್ಕದ್ದು. (ಎ) ಖಂಡದಲ್ಲಿ ನಿಯಮಿಸಲಾದ ರೀತಿಯಲ್ಲಿ ಮಾರಾಟದ ನೋಟೀಸನ್ನು ನಮೂನೆ-6ರಲ್ಲಿ ತಯಾರಿಸತಕ್ಕದ್ದು ಹಾಗೂ ಅದನ್ನು ಜಾರಿ ಮಾಡಿದ ಅಥವಾ ಅದನ್ನು ಅಂಟಿಸಿದ ದಿನಾಂಕದಿಂದ 15 ದಿನಗಳ ಅವಧಿ ಮುಕ್ತಾಯವಾಗುವವರೆಗೆ ಯಾವುದೇ ಮಾರಾಟವು ನಡೆಯತಕ್ಕದ್ದಲ್ಲ:
ಪರಂತು, ವಶಪಡಿಸಿಕೊಳ್ಳಲ್ಪಟ್ಟ ಸ್ವತ್ತು ಶೀಘ್ರವಾಗಿ ಮತ್ತು ಸ್ವಾಭಾವಿಕವಾಗಿ ನಾಶವಾಗುವಂಥದ್ದಾಗಿದ್ದರೆ ಅಥವಾ ಅದನ್ನು ವಶದಲ್ಲಿಟ್ಟುಕೊಳ್ಳುವ ವೆಚ್ಚವು ಅದರ ಮೌಲ್ಯಕ್ಕಿಂತ ಅಧಿಕವಾಗುವ ಸಂಭವವಿರುವಲ್ಲಿ, ಸದರಿ ಮೊತ್ತವು, ಮುಂಚೆಯೇ ಸಂದಾಯವಾದ ಹೊರತು ಮಾರಾಟಾಧಿಕಾರಿಯು 15 ದಿನಗಳ ಅವಧಿಯು ಮುಕ್ತಾಯವಾಗುವ ಮೊದಲೇ ಯಾವುದೇ ಸಮಯದಲ್ಲಿ ಅದನ್ನು ಮಾರಾಟ ಮಾಡಬಹುದು.
ಜೆ) ಗೊತ್ತುಪಡಿಸಿದ ಸಮಯದಲ್ಲಿ ಮಾರಾಟ ಅಧಿಕಾರಿಯು ಯುಕ್ತವೆಂದು ಪರಿಗಣಿಸಬಹುದಾದಂತೆ ಸ್ವತ್ತನ್ನು ಒಂದು ಅಥವಾ ಅಧಿಕ ಲಾಟುಗಳಲ್ಲಿ ಮಾರಾಟಕ್ಕೆ ಇಡಬಹುದು ಮತ್ತು ಅತ್ಯಂತ ಹೆಚ್ಚು ಬೆಲೆಗೆ ಹರಾಜು ಕೂಗಿದವನಿಗೆ ಅದನ್ನು ಮಾರಾಟ ಮಾಡತಕ್ಕದ್ದು:
ಪರಂತು, ಮಾರಾಟದ ಬೆಲೆಯು ಬಹಳ ಕಡಿಮೆ ಎಂದು ಕಂಡುಬಂದಲ್ಲಿ ಅಥವಾ ಇತರ ಕಾರಣಗಳಿಗಾಗಿ ಅತ್ಯಂತ ಹೆಚ್ಚು ಬೆಲೆಗೆ ಕೂಗಲಾದ ಬಿಡ್ಡನ್ನು ನಿರಾಕರಿಸಲು ಮಾರಾಟ ಅಧಿಕಾರಿಗೆ ಅವಕಾಶ ಇರತಕ್ಕದ್ದು. ಆ ಸ್ವತ್ತನ್ನು ಬಾಕಿಯಿರುವ ಮೊಬಲಗಿಗಿಂತ ಹೆಚ್ಚಿನ ಮೊಬಲಗಿಗೆ ಮಾರಾಟ ಮಾಡಿದಲ್ಲಿ ಬಡ್ಡಿ ಮತ್ತು ಕಾನೂನು ಸಮ್ಮತ ವೆಚ್ಚ ಹಾಗೂ ಇತರ ಖರ್ಚುಗಳನ್ನು ವಜಾ ಹಾಕಿದ ನಂತರ ಉಳಿದ ಹೆಚ್ಚಿಗೆಯ ಮೊತ್ತವನ್ನು ತೀರ್ಪು ಋಣಿಗೆ ಪಾವತಿ ಮಾಡತಕ್ಕದ್ದು:
ಮತ್ತು ಪರಂತು, ವಸೂಲಿ ಅಧಿಕಾರಿಯಾಗಲೀ ಅಥವಾ ಮಾರಾಟ ಅಧಿಕಾರಿಯಾಗಲೀ ತನ್ನ ವಿವೇಚನಾನುಸಾರ ಮುಂದೂಡಿಕೆಯ ಬಗ್ಗೆ ಕಾರಣಗಳನ್ನು ದಾಖಲಿಸಿ ಒಂದು ಗೊತ್ತಾದ ದಿನ ಮತ್ತು ಸಮಯಕ್ಕೆ ಮಾರಾಟವನ್ನು ಮುಂದೂಡುವ ಅಧಿಕಾರ ಹೊಂದಿರತಕ್ಕದ್ದು. ಮಾರಾಟವನ್ನು ಏಳು ದಿನಗಳನ್ನು ಮೀರಿದ ಅವಧಿಗೆ ಹಾಗೆ ಮುಂದೂಡಿದಲ್ಲಿ ತೀರ್ಪು ಋಣಿಯು ಹಾಗೆ ಮುಂದೂಡಲು ಲಿಖಿತ ಅನುಮತಿಕೊಟ್ಟ ಹೊರತು (ಐ) ಖಂಡದ ಮೇರೆಗೆ ಒಂದು ಹೊಸ ಘೋಷಣೆಯನ್ನು ಮಾಡತಕ್ಕದ್ದು.
ಕೆ) ಮಾರಾಟದ ವೇಳೆಯಲ್ಲಿ ಅಥವಾ ಮಾರಾಟ ಮಾಡುವ ಅಧಿಕಾರಿಯು ಗೊತ್ತುಪಡಿಸಿದಂತೆ ಆ ತರುವಾಯ ಆದಷ್ಟು ಬೇಗನೆ ನಗದು ರೂಪದಲ್ಲಿ ಸ್ವತ್ತಿನ ಹಣವನ್ನು ಸಂದಾಯ ಮಾಡತಕ್ಕದ್ದು. ಖರೀದಿದಾರನು ಪೂರ್ಣ ಹಣವನ್ನು ಸಂದಾಯಮಾಡುವವರೆಗೆ ಸ್ವತ್ತಿನ ಯಾವುದೇ ಭಾಗವನ್ನು ತೆಗೆದುಕೊಂಡು ಹೋಗಲು ಅನುಮತಿಸತಕ್ಕದ್ದಲ್ಲ. ಖರೀದಿದಾರನು ಖರೀದಿ ಹಣವನ್ನು ಸಂದಾಯ ಮಾಡಲು ತಪ್ಪಿದಲ್ಲಿ ಸದರಿ ಸ್ವತ್ತನ್ನು ಪುನಃ ಮಾರಾಟ ಮಾಡತಕ್ಕದ್ದು.
ಎಲ್) ಈ ನಿಯಮಗಳ ಮೇರೆಗೆ ಜಪ್ತಿ ಮಾಡಲಾದ ಯಾವುದೇ ಸ್ವತ್ತನ್ನು, ಬಲವಂತವಾಗಿ ಅಥವಾ ಕಳ್ಳತನದಿಂದ ಯಾಮೊಬ್ಬ ವ್ಯಕ್ತಿಯು ಸಾಗಿಸಿದ್ದಲ್ಲಿ, ಮಾರಾಟ ಅಧಿಕಾರಿಯು, ಅಂತಹ ಸ್ವತ್ತನ್ನು ಪುನಃ ಸ್ವಾೀಧಿನಕ್ಕೆ ಪಡೆಯಲು, ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಮ್ಯಾಜಿಸ್ಟ್ರೇಟರಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯಲ್ಲಿ ಆಪಾದಿಸಲಾದ ಸಂಗತಿಗಳು ನಿಜವೆಂದು ಮ್ಯಾಜಿಸ್ಟ್ರೇಟರಿಗೆ ಮನದಟ್ಟಾದರೆ ಆತನು ಅಂಥ ಸ್ವತ್ತನ್ನು ಮಾರಾಟ ಅಧಿಕಾರಿಯ ವಶಕ್ಕೆ ಪುನಃ ಒಪ್ಪಿಸುವಂತೆ ಕೂಡಲೇ ಆದೇಶ ನೀಡಬಹುದು.
ಎಂ) ಮಾರಾಟಕ್ಕೆ ಮುಂಚೆ ತೀರ್ಪು ಋಣಿಯಾಗಲಿ ಅಥವಾ ಆತನ ಪರವಾಗಿ ಕಾರ್ಯನಿರ್ವಹಿಸುವ ಯಾಮೊಬ್ಬ ವ್ಯಕ್ತಿಯಾಗಲೀ ಅಥವಾ ಜಪ್ತಿ ಮಾಡಲಾದ ಸ್ವತ್ತಿನಲ್ಲಿ ಹಿತಾಸಕ್ತಿಯನ್ನು ಕ್ಲೇಮು ಮಾಡುವ ಯಾಮೊಬ್ಬ ವ್ಯಕ್ತಿಯಾಗಲೀ ಸದರಿ ಸ್ವತ್ತನ್ನು ಜಪ್ತಿ ಮಾಡುವಲ್ಲಿ ತಗುಲಿದ ಭತ್ಯೆ, ಇತರ ಖರ್ಚುಗಳು ಮತ್ತು ಬಡ್ಡಿ ಸಹಿತ, ಬಾಕಿಯಿರುವ ಸಂಪೂರ್ಣ ಮೊತ್ತವನ್ನು ಸಂದಾಯ ಮಾಡಿದಲ್ಲಿ, ಮಾರಾಟ ಅಧಿಕಾರಿಯು ಜಪ್ತಿಯ ಆದೇಶವನ್ನು ರದ್ದು ಮಾಡತಕ್ಕದ್ದು ಮತ್ತು ಸದರಿ ಸ್ವತ್ತನ್ನು ಕೂಡಲೇ ಬಿಡುಗಡೆ ಮಾಡತಕ್ಕದ್ದು.
ಎನ್) ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರ (1908ರ 5ನೆಯ ಅಧಿನಿಯಮ) 60ನೇ ಪ್ರಕರಣದ ಅಡಿಯಲ್ಲಿ ಜಪ್ತಿಯಿಂದ ವಿನಾಯಿತಿ ಪಡೆದಿರುವ ಚರಸ್ವತ್ತುಗಳನ್ನು ಈ ನಿಯಮಗಳ ಮೇರೆಗೆ ಜಪ್ತಿ ಅಥವಾ ಮಾರಾಟ ಮಾಡತಕ್ಕದ್ದಲ್ಲ.