(1) ಯಾವುದೇ ಡಿಕ್ರಿಯನ್ನು ಜಾರಿಗೊಳಿಸುವಾಗ ಯಾವುದೇ ಸ್ಥಿರ ಸ್ವತ್ತನ್ನು, ಈ ಮೊದಲು ಅದನ್ನು ಜಪ್ತಿ ಮಾಡಿದ್ದ ಹೊರತು ಆ ಸ್ವತ್ತನ್ನು ಮಾರಾಟ ಮಾಡತಕ್ಕದ್ದಲ್ಲ; ಪರಂತು, ಅಂಥ ಸ್ವತ್ತಿನ ಅಡಮಾನದ ಆಧಾರದ ಮೇಲೆ ಡಿಕ್ರಿಯನ್ನು ಪಡೆಯಲಾಗಿದ್ದ ಸಂದರ್ಭದಲ್ಲಿ ಅದನ್ನು ಜಪ್ತಿ ಮಾಡುವ ಅವಶ್ಯಕತೆಯಿರುವುದಿಲ್ಲ.
(2) ಸ್ಥಿರ ಸ್ವತ್ತಿನ ಜಪ್ತಿ ಮತ್ತು ಮಾರಾಟ ಅಥವಾ ಜಪ್ತಿ ರಹಿತ ಮಾರಾಟದಲ್ಲಿ ಈ ಕೆಳಗಿನ ನಿಯಮಗಳನ್ನು ಪಾಲಿಸತಕ್ಕದ್ದು; ಎಂದರೆ:-
(ಎ) ಮಾರಾಟ ಅಧಿಕಾರಿಯು 13ನೇ ನಿಯಮದ (3)ನೇ ಉಪನಿಯಮದ ಅಡಿಯಲ್ಲಿ ಹೊರಡಿಸಲಾದ ತಗಾದೆ ನೋಟೀಸಿನ ಒಂದು ಪ್ರತಿಯನ್ನು ತೀರ್ಪುಋಣಿಗೆ ಅಥವಾ ಅವನು ದೊರೆಯದಿದ್ದರೆ ಅವನ ಕುಟುಂಬದ ಯಾಮೊಬ್ಬ ವಯಸ್ಕ ಪುರುಷ ಸದಸ್ಯನಿಗೆ ಅಥವಾ ಅವನ ಅಧಿಕೃತ ಏಜೆಂಟನಿಗೆ ಜಾರಿ ಮಾಡತಕ್ಕದ್ದು ಅಥವಾ ಹಾಗೆ ಮಾಡಲು ಸಾಧ್ಯವಾಗದಿದ್ದಲ್ಲಿ, ಅದರ ಒಂದು ಪ್ರತಿಯನ್ನು, ಸಂದರ್ಭಾನುಸಾರ ಜಪ್ತಿ ಸಹಿತವಾಗಿ ಮಾರಾಟ ಮಾಡಲಿರುವ ಅಥವಾ ಜಪ್ತಿ ರಹಿತವಾಗಿ ಮಾರಾಟ ಮಾಡಲಿರುವ ಸ್ವತ್ತಿನ ಯಾವುದೇ ಎದ್ದು ಕಾಣುವಂಥ ಭಾಗದಲ್ಲಿ ಅಂಟಿಸತಕ್ಕದ್ದು.
(ಬಿ) ತೀರ್ಪು ಋಣಿಯು, ತಗಾದೆ ನೋಟೀಸಿನಲ್ಲಿ ನಿರ್ದಿಷ್ಟಪಡಿಸಲಾದ ಮೊಬಲಗನ್ನು ನಿಗದಿತ ಸಮಯದೊಳಗೆ ಅಥವಾ ಸಮಯವನ್ನು ನಿರ್ದಿಷ್ಟಪಡಿಸಿರದಿದ್ದರೆ, ಕೂಡಲೇ ಸಂದಾಯ ಮಾಡಲು ತಪ್ಪಿದಲ್ಲಿ, ಮಾರಾಟ ಅಧಿಕಾರಿಯು ತಗಾದೆ ನೋಟೀಸಿನಲ್ಲಿ ನಿರ್ದಿಷ್ಟಪಡಿಸಲಾದ ಸ್ಥಿರ ಸ್ವತ್ತನ್ನು ಸಂದರ್ಭಾನುಸಾರ ಜಪ್ತಿ ಮಾಡಿ ಮಾರಾಟ ಮಾಡಲು ಅಥವಾ ಜಪ್ತಿ ರಹಿತವಾಗಿ ಮಾರಾಟ ಮಾಡಲು ಮುಂದುವರಿಯತಕ್ಕದ್ದು.
(ಸಿ) ಮಾರಾಟಕ್ಕೆ ಮುಂಚೆ ಜಪ್ತಿ ಮಾಡಬೇಕಿದ್ದಲ್ಲಿ ಮಾರಾಟ ಅಧಿಕಾರಿಯು ಜಪ್ತಿ ನೋಟೀಸೊಂದನ್ನು ತೀರ್ಪು ಋಣಿಗೆ ವೈಯಕ್ತಿಕವಾಗಿ ಅಥವಾ ಅವನ ಕುಟುಂಬದ ವಯಸ್ಕ ಪುರುಷ ಸದಸ್ಯನ ಮೇಲೆ ಅಥವಾ ಅವನ ಅಧಿಕೃತ ಏಜೆಂಟನ ಮೇಲೆ ಜಾರಿ ಮಾಡತಕ್ಕದ್ದು. ಹಾಗೆ ಜಾರಿ ಮಾಡಲು ಸಾಧ್ಯವಾಗದಿದ್ದಲ್ಲಿ ಸದರಿ ನೋಟೀಸನ್ನು ತೀರ್ಪುಋಣಿಯ ಇತ್ತೀಚಿನ ವಾಸಸ್ಥಳವೆಂದು ತಿಳಿದು ಬಂದಿರುವ ಸ್ಥಳದ ಯಾವುದೇ ಎದ್ದು ಕಾಣುವಂಥ ಭಾಗದಲ್ಲಿ ಅಂಟಿಸತಕ್ಕದ್ದು. ಜಪ್ತಿ ಮಾಡಲಾಗಿದೆ ಎಂಬ ಸಂಗತಿಯನ್ನು ಜಪ್ತಿ ಮಾಡಲಾದ ಸ್ವತ್ತಿನ ಮೇಲೆ ಅಥವಾ ಅದಕ್ಕೆ ಹೊಂದಿಕೊಂಡಿರುವ ಯಾವುದೇ ಸ್ಥಳದಲ್ಲಿ ಮತ್ತು ವಸೂಲಿ ಅಧಿಕಾರಿಯು ಮಾರಾಟಕ್ಕೆ ಸೂಕ್ತ ಪ್ರಚಾರವನ್ನು ಕೊಡುವ ಸಲುವಾಗಿ ಅವಶ್ಯವಿರುವುದೆಂದು ಭಾವಿಸುವ ಯಾವುದೇ ಅಂಥ ಇತರ ಸ್ಥಳದಲ್ಲಿ ಅಥವಾ ಸ್ಥಳಗಳಲ್ಲಿ ಡಂಗುರ ಹೊಡೆಸುವುದರ ಮೂಲಕ ಅಥವಾ ಇತರ ವಾಡಿಕೆಯ ವಿಧಾನದಿಂದ ಸಹ ಘೋಷಿಸತಕ್ಕದ್ದು. ಜಪ್ತಿಯ ನೋಟೀಸಿನಲ್ಲಿ, ಅದರಲ್ಲಿ ನಮೂದಿಸಲಾದ ದಿನಾಂಕದೊಳಗೆ ಬರಬೇಕಾದ ಬಾಕಿ ಮೊಬಲಗನ್ನು, ಬಡ್ಡಿ ಮತ್ತು ವೆಚ್ಚಗಳ ಸಹಿತ ಸಂದಾಯ ಮಾಡದಿದ್ದಲ್ಲಿ ಸದರಿ ಸ್ವತ್ತನ್ನು ಮಾರಾಟಕ್ಕೆ ಇಡಲಾಗುವುದೆಂದು ನಿರ್ದಿಷ್ಟಪಡಿಸತಕ್ಕದ್ದು. ಅಂಥ ನೋಟೀಸಿನ ಒಂದು ಪ್ರತಿಯನ್ನು ಡಿಕ್ರಿದಾರರಿಗೆ ಕಳುಹಿಸಿಕೊಡತಕ್ಕದ್ದು. ವಸೂಲಿ ಅಧಿಕಾರಿಯವರು ನಿರ್ದೇಶಿಸಿದಲ್ಲಿ ಜಪ್ತಿ ನೋಟೀಸನ್ನು ಸರ್ಕಾರಿ ರಾಜ್ಯಪತ್ರದಲ್ಲಿಯೂ ಅಸೂಚಿಸತಕ್ಕದ್ದು.
(ಡಿ) ಮಾರಾಟಕ್ಕಾಗಿ ನಿಗದಿ ಮಾಡಲಾದ ದಿನಾಂಕಕ್ಕೆ ಕನಿಷ್ಠ ಮೂವತ್ತು ದಿವಸಗಳಿಗೆ ಮುಂಚೆ ಮಾರಾಟದ ಘೋಷಣೆಯನ್ನು ನಮೂನೆ-8ರಲ್ಲಿ ತಯಾರಿಸಿ ವಸೂಲಿ ಅಧಿಕಾರಿಯವರ ಕಛೇರಿಯಲ್ಲಿ ಮತ್ತು ತಾಲ್ಲೂಕು ಕಛೇರಿಯಲ್ಲಿ ಅದರ ಒಂದು ನಕಲನ್ನು ಅಂಟಿಸುವ ಮೂಲಕ ಪ್ರಕಟಿಸತಕ್ಕದ್ದು. ಅಂಥ ಘೋಷಣೆಯನ್ನು ಸದರಿ ಗ್ರಾಮದಲ್ಲಿ ಅಥವಾ ಸ್ಥಳದಲ್ಲಿ ಮಾರಾಟದ ದಿನಕ್ಕೆ ಮುಂಚಿನ ಎರಡು ಅನುಕ್ರಮಿಕ ದಿನಗಳಂದು ಮತ್ತು ಮಾರಾಟದ ದಿನದಂದು ಮಾರಾಟಕ್ಕೆ ಮುಂಚೆ ಡಂಗುರ ಹೊಡೆಸುವ ಮೂಲಕ ಪ್ರಕಟಿಸತಕ್ಕದ್ದು. ಮಾರಾಟಕ್ಕೆ ಮುಂಚೆ ಜಫ್ತಿ ಅವಶ್ಯಕವಾಗಿರುವಲ್ಲಿ, ಜಫ್ತಿಯನ್ನು ಮಾಡಿದ ನಂತರ ಅಂಥ ಘೋಷಣೆಯನ್ನು ಮಾಡತಕ್ಕದ್ದು. ಡಿಕ್ರಿದಾರನಿಗೂ ಮತ್ತು ತೀರ್ಪುಋಣಿಗೂ ಸದರಿ ಘೋಷಣೆಯ ನಕಲು ಹಾಗೂ ನಮೂನೆ-9ರಲ್ಲಿ ನೋಟೀಸು ನೀಡತಕ್ಕದ್ದು. ಸದರಿ ಘೋಷಣೆಯಲ್ಲಿ ಮಾರಾಟದ ಸಮಯ ಮತ್ತು ಸ್ಥಳಗಳನ್ನು ತಿಳಿಸತಕ್ಕದ್ದು, ಮತ್ತು ಕೆಳಗಿನವುಗಳನ್ನು ಸ್ಪಷ್ಟವಾಗಿಯೂ ಮತ್ತು ನಿಖರವಾಗಿಯೂ ನಿರ್ದಿಷ್ಟಪಡಿಸತಕ್ಕದ್ದು :-
- ಮಾರಾಟ ಮಾಡಲಿರುವ ಸ್ವತ್ತು:
- ಸದರಿ ಸ್ವತ್ತು ಗುರಿಯಾಗಿರುವ ಯಾವುದೇ ಋಣಭಾರ;
- ಯಾವ ಮೊಬಲಗಿನ ವಸೂಲಿಯ ಸಲುವಾಗಿ ಮಾರಾಟಕ್ಕಾಗಿ ಆದೇಶ ಮಾಡಲಾಗಿದೆಯೋ ಆ ಮೊಬಲಗು; ಮತ್ತು 4. ಖರೀದಿದಾರನು ಸದರಿ ಸ್ವತ್ತಿನ ಸ್ವರೂಪ ಮತ್ತು ಮೌಲ್ಯವನ್ನು ಕಂಡು ಹಿಡಿಯಲು ಅತಿಮುಖ್ಯವಾಗಿ ಇರಲೇಬೇಕೆಂದು ಮಾರಾಟ ಅಧಿಕಾರಿಯು ಭಾವಿಸುವಂಥ ಇತರ ಪ್ರತಿಯೊಂದು ವಿಷಯ;
ಇ) ಈ ನಿಯಮಗಳ ಮೇರೆಗೆ ಯಾವುದೇ ಸ್ಥಿರ ಸ್ವತ್ತನ್ನು ಮಾರಾಟ ಮಾಡಿದಾಗ, ಸದರಿ ಮಾರಾಟವು, ಸದರಿ ಸ್ವತ್ತಿನ ಮೇಲೆ ಇದ್ದಿರಬಹುದಾದ ಯಾವುವೇ ಹಿಂದಿನ ಋಣಭಾರಗಳಿಗೆ ಒಳಪಟ್ಟಿರತಕ್ಕದ್ದು. ಯಾವ ಮೊಬಲಗಿನ ವಸೂಲಿಯ ಸಲುವಾಗಿ ಮಾರಾಟವನ್ನು ಏರ್ಪಡಿಸಲಾಗಿದೆಯೋ ಆ ಮೊಬಲಗು 100 ರೂಪಾಯಿಗಳಿಗಿಂತ ಹೆಚ್ಚಾಗಿರುವ ಸಂದರ್ಭದಲ್ಲಿ ಮಾರಾಟ ಅಧಿಕಾರಿಯು ಅಥವಾ ವಸೂಲಿ ಅಧಿಕಾರಿಯು ನಿಗದಿ ಮಾಡಿದ ಅವಧಿಯೊಳಗೆ ಮಾರಾಟ ಮಾಡಲು ಉದ್ದೇಶಿಸಲಾದ ಸ್ವತ್ತಿನ ಜಫ್ತಿಯ ದಿನಾಂಕಕ್ಕೆ ಮುಂಚಿನ ಅಥವಾ (1)ನೇ ಉಪನಿಯಮದ ಪರಂತುಕದ ಅಡಿಯಲ್ಲಿ ಬರುವ ಸಂದರ್ಭಗಳಲ್ಲಿ ಜಾರಿಗಾಗಿ ಸಲ್ಲಿಸಲಾದ ಅರ್ಜಿಯ ದಿನಾಂಕಕ್ಕೆ ಮುಂಚಿನ ಹನ್ನೆರಡು ವರ್ಷಗಳಿಗೆ ಕಡಿಮೆಯಾಗಿರದ ಅವಧಿಗಾಗಿ ನೋಂದಣಿ ಇಲಾಖೆಯಿಂದ ಪಡೆಯಲಾದ ಒಂದು ಋಣಭಾರ ಪ್ರಮಾಣ ಪತ್ರವನ್ನು ಡಿಕ್ರಿದಾರನು ಮಾರಾಟ ಅಧಿಕಾರಿಗೆ ಒದಗಿಸತಕ್ಕದ್ದು. ಋಣಭಾರ ಪ್ರಮಾಣಪತ್ರವನ್ನು ಒದಗಿಸಲು ನಿಗದಿಪಡಿಸಿದ ಅವಧಿಯನ್ನು ಸಂದರ್ಭಾನುಸಾರ ಮಾರಾಟ ಅಧಿಕಾರಿಯ ಅಥವಾ ವಸೂಲಿ ಅಧಿಕಾರಿಯು ತನ್ನ ವಿವೇಚನೆ ಗನುಸಾರವಾಗಿ ವಿಸ ್ತರಿಸಬಹುದು:
ಪರಂತು, ಯಾಮೊಂದು ಋಣಭಾರ ಪ್ರಮಾಣಪತ್ರವು ಸಂಬಂಧಪಟ್ಟ ದಾಖಲೆಗಳು ನಾಶಹೊಂದಿದ ಕಾರಣದಿಂದ ದೊರೆಯದಂತಾಗಿರುವ ಸಂದರ್ಭದಲ್ಲಿ ಸಂಬಂಧಪಟ್ಟ ದಾಖಲೆಗಳು ನಾಶಹೊಂದಿದ್ದ ಕಾರಣದಿಂದ ಋಣಭಾರ ಪ್ರಮಾಣದ ಪತ್ರವನ್ನು ಕೊಡಲು ಸಾಧ್ಯವಾಗುತ್ತಿಲ್ಲವೆಂದು ನೋಂದಣಿ ಇಲಾಖೆಯು ನೀಡಿದ ಒಂದು ಪ್ರಮಾಣಪತ್ರದ ಆಧಾರದ ಮೇಲೆ ಆ ಗ್ರಾಮದ ಲೆಕ್ಕಿಗನು ತನಗೆ ಗೊತ್ತಿರುವಂಥ ಋಣಭಾರ ಕುರಿತು ನೀಡಿದ ಶಪಥ ಪತ್ರವನ್ನು ಋಣಭಾರ ಪ್ರಮಾಣ ಪತ್ರದ ಬದಲಾಗಿ ಮಾನ್ಯ ಮಾಡತಕ್ಕದ್ದು.
(ಎಫ್) ಸಾರ್ವಜನಿಕ ಹರಾಜಿನ ಮೂಲಕ ಅತ್ಯಂತ ಹೆಚ್ಚು ಸವಾಲು ಕೂಗುವವನಿಗೆ ಮಾರಾಟವನ್ನು ಮಾಡತಕ್ಕದ್ದು:
ಪರಂತು ಹರಾಜಿನಲ್ಲಿ ಬಂದ ಬೆಲೆಯು ಅತಿ ಕಡಿಮೆಯಾಗಿದೆಯೆಂದು ಮಾರಾಟ ಅಧಿಕಾರಿಗೆ ಕಂಡುಬಂದಲ್ಲಿ ಅಥವಾ ಇತರ ಕಾರಣಗಳಿಗಾಗಿ ಅವನು ಆ ಅತ್ಯಂತ ಹೆಚ್ಚಿನ ಸವಾಲನ್ನು ನಿರಾಕರಿಸಲು ಅವಕಾಶವಿರತಕ್ಕದ್ದು:
ಮತ್ತು ಪರಂತು, ವಸೂಲಿ ಅಧಿಕಾರಿಯು ಅಥವಾ ಮಾರಾಟ ಅಧಿಕಾರಿಯು ತನ್ನ ವಿವೇಚನೆಗನುಸಾರವಾಗಿ, ಮಾರಾಟವನ್ನು ನಿರ್ದಿಷ್ಟಪಡಿಸಲಾದ ದಿನಕ್ಕೆ ಮತ್ತು ಸಮಯಕ್ಕೆ ಮುಂದೆ ಹಾಕುವ ಬಗ್ಗೆ ತನ್ನ ಕಾರಣಗಳನ್ನು ದಾಖಲಿಸಿ ಮಂದೂಡಬಹುದು. ಏಳು ದಿನಗಳಿಗಿಂತ ಹೆಚ್ಚಿನ ಅವಧಿಯವರೆಗೆ ಯಾಮೊಂದು ಮಾರಾಟವನ್ನು ಹಾಗೆ ಮುಂದೂಡಿದಲ್ಲಿ ತೀರ್ಪು ಋಣಿಯು ಹಾಗೆ ಮಾಡಲು ಲಿಖಿತ ಅನುಮತಿಯನ್ನು ಕೊಟ್ಟ ಹೊರತು (ಡಿ) ಖಂಡದ ಅಡಿಯಲ್ಲಿ ಒಂದು ಹೊಸ ಘೋಷಣೆಯನ್ನು ಮಾಡತಕ್ಕದ್ದು.
(ಜಿ) ವಸೂಲಿ ಅಧಿಕಾರಿಯ ಕಛೇರಿಯಲ್ಲಿ ಘೋಷಣೆಯ ನೋಟೀಸನ್ನು ಅಂಟಿಸಿದ ದಿನಾಂಕದಿಂದ ಲೆಕ್ಕ ಮಾಡಲಾದ ಮೂವತ್ತು ದಿನಗಳಿಗಿಂತ ಕಡಿಮೆ ಇಲ್ಲದಷ್ಟು ಅವಧಿಯು ಮುಗಿದ ನಂತರ ಮಾರಾಟವು ನಡೆಯತಕ್ಕದ್ದು. ವಸೂಲಿ ಅಧಿಕಾರಿಯು ಮಾರಾಟದ ಸಮಯ ಮತ್ತು ಸ್ಥಳಗಳನ್ನು ನಿಗದಿ ಮಾಡತಕ್ಕದ್ದು ಮತ್ತು ಮಾರಾಟದ ಸ್ಥಳವು ಮಾರಾಟ ಮಾಡಬೇಕಾದ ಸ್ವತ್ತು ಯಾವ ಗ್ರಾಮದಲ್ಲಿ ಅಥವಾ ಸ್ಥಳದಲ್ಲಿ ಇದೆಯೋ ಆ ಗ್ರಾಮ ಅಥವಾ ಸ್ಥಳ ಆಗಿರತಕ್ಕದ್ದು ಅಥವಾ ವಸೂಲಿ ಅಧಿಕಾರಿಯು ನಿಗದಿ ಮಾಡಬಹುದಾದ ಅದಕ್ಕೆ ಹೊಂದಿಕೊಂಡಿರುವ ಪ್ರಮುಖ ಸಾರ್ವಜನಿಕ ಆವರಣ ಆಗಿರತಕ್ಕದ್ದು.
ಎಚ್) ಸ್ಥಿರ ಸ್ವತ್ತನ್ನು ಹರಾಜಿನಲ್ಲಿ ಯಾವ ಬೆಲೆಗೆ ಕೊಂಡುಕೊಳ್ಳಲಾಯಿತೋ ಆ ಬೆಲೆಯ ಶೇ. 25ಕ್ಕೆ ಸಮನಾದ ಮೊಬಲಗನ್ನು ಖರೀದಿದಾರನು ಕೊಂಡುಕೊಳ್ಳುವ ಕಾಲಕ್ಕೆ ಮಾರಾಟ ಅಧಿಕಾರಿಗೆ ಸಂದಾಯ ಮಾಡತಕ್ಕದ್ದು ಮತ್ತು ಹಾಗೆ ಠೇವಣಿ ಇಡಲು ತಪ್ಪಿದಲ್ಲಿ, ಸದರಿ ಸ್ವತ್ತನ್ನು ಆ ಕೂಡಲೇ ಮರು ಮಾರಾಟ ಮಾಡತಕ್ಕದ್ದು:
ಪರಂತು, ಡಿಕ್ರಿದಾರನೇ ಸದರಿ ಸ್ವತ್ತಿನ ಖರೀದಿದಾರನಾಗಿದ್ದಲ್ಲಿ ಮತ್ತು (ಎಲ್)ಖಂಡದ ಮೇರೆಗೆ ಖರೀದಿ ಬೆಲೆಯನ್ನು ವಜಾವಟ್ಟು ಮಾಡಿಕೊಳ್ಳಲು ಹಕ್ಕುಳ್ಳವನಾಗಿದ್ದಲ್ಲಿ ಮಾರಾಟ ಅಧಿಕಾರಿಯು ಈ ನಿಯಮದಲ್ಲಿ ಅಗತ್ಯಪಡಿಸಿದ್ದನ್ನು ಬಿಟ್ಟುಬಿಡಬಹುದು.
ಐ) ಖರೀದಿಯ ಉಳಿದ ಹಣವನ್ನು ಮತ್ತು ಮಾರಾಟ ಪ್ರಮಾಣ ಪತ್ರದ ಸಲುವಾಗಿರುವ ಸಾಮಾನ್ಯ ಸ್ಟ್ಯಾಂಪಿಗಾಗಿ ಬೇಕಾದ ಮೊಬಲಗನ್ನು ಮಾರಾಟ ದಿನಾಂಕದಿಂದ ನಲವತ್ತೈದು ದಿವಸಗಳೊಳಗೆ ಪಾವತಿ ಮಾಡತಕ್ಕದ್ದು.
ಪರಂತು, ಈ ಖಂಡದ ಮೇರೆಗೆ ಸಂದಾಯ ಮಾಡಬೇಕಾದ ಮೊಬಲಗನ್ನು ಲೆಕ್ಕ ಹಾಕುವಲ್ಲಿ ಖರೀದಿದಾರನು (ಎಲ್) ಖಂಡದ ಅಡಿಯಲ್ಲಿ ಅವನಿಗೆ ಹಕ್ಕಿರಬಹುದಾದ ಯಾವುದೇ ವಜಾವಟ್ಟು ಮಾಡುವ ಅವಕಾಶವನ್ನು ಹೊಂದಿರತಕ್ಕದ್ದು.
ಜೆ) (ಐ) ಖಂಡದಲ್ಲಿ ನಮೂದಿಸಲಾದ ಅವಧಿಯೊಳಗೆ ಉಳಿದ ಖರೀದಿ ಹಣವನ್ನು ಪಾವತಿ ಮಾಡುವುದಕ್ಕೆ ತಪ್ಪಿದಲ್ಲಿ, ವಸೂಲಿ ಅಧಿಕಾರಿಗೆ ಸೂಕ್ತವೆಂದು ಕಂಡುಬಂದ ಮಾರಾಟ ವೆಚ್ಚಗಳನ್ನು ಭರಿಸಿದ ನಂತರ ಠೇವಣಿಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದು ಮತ್ತು ಸಂದಾಯ ಮಾಡಲು ತಪ್ಪಿದ ಖರೀದಿದಾರನು ಸದರಿ ಸ್ವತ್ತಿನ ಬಗ್ಗೆ ಅಥವಾ ಅದನ್ನು ಆ ನಂತರ ಮಾರಾಟ ಮಾಡಿದ ಮೇಲೆ ಬರುವ ಮೊಬಲಗಿನ ಯಾವುದೇ ಭಾಗಕ್ಕೆ ಇರುವ ತನ್ನ ಎಲ್ಲಾ ಕ್ಲೇಮುಗಳನ್ನು ಕಳೆದುಕೊಳ್ಳತಕ್ಕದ್ದು.
ಕೆ) (ಎಚ್) ಮತ್ತು (ಐ) ಖಂಡಗಳಲ್ಲಿ ನಮೂದಿಸಲಾದ ಮೊಬಲಗನ್ನು ಸಂದಾಯ ಮಾಡಲು ಅನುಮತಿ ಕೊಡಲಾದ ಅವಧಿಯೊಳಗೆ ಸಂದಾಯ ಮಾಡಲು ತಪ್ಪಿದ ಕಾರಣದಿಂದಾಗಿ ಪಡೆಯಬೇಕಾದ ಸ್ಥಿರ ಸ್ವತ್ತಿನ ಪ್ರತಿಯೊಂದು ಮರು ಮಾರಾಟವನ್ನು ಹೊಸದೊಂದು ಘೋಷಣೆಯನ್ನು ಹೊರಡಿಸಿದ ನಂತರ ಮತ್ತು ಅದರಲ್ಲಿ ಮಾರಾಟಕ್ಕಾಗಿ ನಿಯಮಿಸಲಾದ ರೀತಿಯಲ್ಲಿ ಮತ್ತು ಅವಧಿಯೊಳಗೆ ಮಾಡತಕ್ಕದ್ದು.
ಎಲ್) ಡಿಕ್ರಿದಾರನೇ ಸ್ವತ್ತನ್ನು ಖರೀದಿಸಿದಾಗ ಖರೀದಿ ಹಣ ಮತ್ತು ಡಿಕ್ರಿಯ ಸಂಬಂಧದಲ್ಲಿ ಬಾಕಿ ಇರುವ ಮೊಬಗಲು, ಇವುಗಳನ್ನು, ಒಂದಕ್ಕೊಂದು ವಜಾವಟ್ಟು ಮಾಡತಕ್ಕದ್ದು ಮತ್ತು ಮಾರಾಟ ಅಧಿಕಾರಿಯು ತದನುಸಾರವಾಗಿ, ಡಿಕ್ರಿಯ ಪಾಲನೆ ಸಂಪೂರ್ಣವಾಗಿ ಆಗಿದೆಯೇ ಅಥವಾ ಭಾಗಶಃ ಆಗಿರುವುದೇ ಎಂಬುದನ್ನು ನಮೂದಿಸತಕ್ಕದ್ದು.
(3) ತೀರ್ಪು ಋಣಿಯ ಅಥವಾ ಅವನ ಪರವಾಗಿ ಕಾರ್ಯನಿರ್ವಹಿಸುವ ಯಾಮೊಬ್ಬ ವ್ಯಕ್ತಿಯು ಅಥವಾ ಮಾರಾಟ ಮಾಡಲು ಉದ್ದೇಶಿಸಲಾದ ಸ್ವತ್ತಿನ ಯಾವುದೇ ಹಿತಾಸಕ್ತಿಯನ್ನು ಕ್ಲೇಮು ಮಾಡುವ ಯಾಮೊಬ್ಬ ವ್ಯಕ್ತಿಯು, ಮಾರಾಟಕ್ಕೆ ಮುಂಚೆ ಬಾಕಿಯಿರುವ ಒಟ್ಟು ಮೊಬಲಗನ್ನು ಬಡ್ಡಿ, ಭತ್ಯೆ ಮತ್ತು ಜಫ್ತಿಯ ವೆಚ್ಚಗಳು ಒಳಗೊಂಡಂತೆ ಸ್ವತ್ತನ್ನು ಮಾರಾಟ ಮಾಡುವುದಕ್ಕೆ ವಹಿಸಿದ ವೆಚ್ಚಗಳ ಸಹಿತ ಸಂದಾಯ ಮಾಡಿದರೆ, ಆ ಸ್ವತ್ತನ್ನು ಜಫ್ತಿ ಮಾಡಿರುವಲ್ಲಿ ಮಾರಾಟ ಅಧಿಕಾರಿಯು ಜಫ್ತಿ ಆದೇಶವನ್ನು ರದ್ದುಗೊಳಿಸಿ, ಆ ಕೂಡಲೇ ಸ್ವತ್ತನ್ನು ವಿಮೋಚನೆಗೊಳಿಸತಕ್ಕದ್ದು.
(4) (ಎ) ಸ್ವತ್ತನ್ನು ಮಾರಾಟ ಮಾಡಿದಾಗ, ಅಂಥ ಸ್ವತ್ತಿನ ಒಡೆತನವನ್ನು ಹೊಂದಿರುವ ಅಥವಾ ಅಂಥ ಮಾರಾಟಕ್ಕೆ ಮುಂಚೆ ಆರ್ಜಿಸಲಾದ ಸ್ವಾಮ್ಯದ ಬಲದಿಂದ ಅದರಲ್ಲಿ ಯಾವುದೇ ಹಿತಾಸಕ್ತಿಯನ್ನು ಹೊಂದಿರುವ ಯಾಮೊಬ್ಬ ವ್ಯಕ್ತಿಯು, ಮಾರಾಟಕ್ಕೆ ಮುಂಚೆ ವಸೂಲಿ ಅಧಿಕಾರಿಯ ಬಳಿಯಲ್ಲಿ ಈ ಮುಂದಿನಂತೆ ಎಂದರೆ,-
(i) ಖರೀದಿದಾರನಿಗೆ ಸಂದಾಯ ಮಾಡುವುದಕ್ಕಾಗಿ ಬೆಲೆಯ ಶೇಕಡಾ 5ಕ್ಕೆ ಸಮನಾದ ಹಣವನ್ನು; ಮತ್ತು
(ii) ಡಿಕ್ರಿದಾರನಿಗೆ ಸಂದಾಯ ಮಾಡುವುದಕ್ಕಾಗಿ ಮಾರಾಟದ ಘೋಷಣೆಯಲ್ಲಿ ನಿರ್ದಿಷ್ಟಪಡಿಸಲಾದ ಬಾಕಿಗಳ ಮೊಬಗಲನ್ನು ಅಂದರೆ ಯಾವ ಮೊಬಲಗಿನ ವಸೂಲಿಯ ಸಲುವಾಗಿ ಮಾರಾಟಕ್ಕಾಗಿ ಆದೇಶ ಮಾಡಲಾಗಿದೆಯೋ ಆ ಮೊಬಲಗು ಮತ್ತು ಅದರ ಮೇಲಿನ ಬಡ್ಡಿ, ಜಫ್ತಿಯ ವೆಚ್ಚಗಳಿದ್ದಲ್ಲಿ ಅವುಗಳನ್ನು ಮತ್ತು ಮಾರಾಟದ ಮತ್ತು ಇತರ ವೆಚ್ಚಗಳೂ ಒಳಗೊಂಡಂತೆ, ಇವುಗಳಲ್ಲಿ ಘೋಷಣೆಯ ದಿನಾಂಕದಿಂದ ಡಿಕ್ರಿದಾರನು ಸ್ವೀಕರಿಸಿದ ಮೊಬಲಗನ್ನು ವಜಾ ಮಾಡಿಕೊಂಡು ಉಳಿದ ಹಣವನ್ನು - ಠೇವಣಿ ಇಟ್ಟು ಮಾರಾಟವನ್ನು ರದ್ದು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಬಹುದು.
(ಬಿ) ಮಾರಾಟದ ದಿನಾಂಕದಿಂದ 30 ದಿವಸಗಳೊಳಗಾಗಿ ಅಂಥ ಠೇವಣಿ ಮತ್ತು ಅರ್ಜಿಯನ್ನು ಸಲ್ಲಿಸಿದಲ್ಲಿ ವಸೂಲಿ ಅಧಿಕಾರಿಯು, ಮಾರಾಟವನ್ನು ರದ್ದುಗೊಳಿಸುವ ಒಂದು ಆದೇಶವನ್ನು ಮಾಡತಕ್ಕದ್ದು ಮತ್ತು ಖರೀದಿದಾರನಿಗೆ ಸದರಿ ಖರೀದಿಯ ಹಣವನ್ನು, ಅದನ್ನು ಅರ್ಜಿದಾರನು ಠೇವಣಿ ಇಟ್ಟಿರುವಷ್ಟರ ಮಟ್ಟಿಗೆ, ಅರ್ಜಿದಾರನು ಇಟ್ಟಿದ್ದ ಠೇವಣಿಯ ಶೇಕಡಾ 5ರಷ್ಟು ಮೊತ್ತ ಸಹಿತ ಮರು ಸಂದಾಯ ಮಾಡತಕ್ಕದ್ದು:
ಪರಂತು, ಈ ಉಪನಿಯಮದ ಮೇರೆಗೆ ಒಬ್ಬನಿಗಿಂತ ಹೆಚ್ಚು ಜನರು ಠೇವಣಿ ಮತ್ತು ಅರ್ಜಿ ಸಲ್ಲಿಸಿದ್ದಲ್ಲಿ ವಸೂಲಿ ಅಧಿಕಾರಿಯು ಮೊದಲನೆಯ ಠೇವಣಿದಾರನು ಸಲ್ಲಿಸಿದ ಅರ್ಜಿಯನ್ನು ಅಂಗೀಕರಿಸತಕ್ಕದ್ದು.
(ಸಿ) ಯಾಮೊಬ್ಬ ವ್ಯಕ್ತಿಯು (5)ನೆಯ ಉಪನಿಯಮದ ಮೇರೆಗೆ ಒಂದು ಸ್ಥಿರ ಸ್ವತ್ತಿನ ಮಾರಾಟವನ್ನು ರದ್ದುಗೊಳಿಸುವಂತೆ ಅರ್ಜಿಯನ್ನು ಸಲ್ಲಿಸಿದ್ದಲ್ಲಿ, ಅವನು ಈ ಉಪನಿಯಮದ ಮೇರೆಗೆ ಅರ್ಜಿ ಸಲ್ಲಿಸಲು ಹಕ್ಕುಳ್ಳವನಾಗತಕ್ಕದ್ದಲ್ಲ.
(5) (ಎ) ಯಾವುದೇ ಸ್ಥಿರಸ್ವತ್ತಿನ ಮಾರಾಟದ ದಿನಾಂಕದಿಂದ 30 ದಿವಸಗಳ ಒಳಗಿನ ಯಾವುದೇ ಕಾಲಕ್ಕೆ ಡಿಕ್ರಿದಾರನು ಅಥವಾ ಆಸ್ತಿಗಳ ಪ್ರಮಾಣಾನುಸಾರ ಹಂಚಿಕೆಯಲ್ಲಿ ಷೇರಿಗೆ ಹಕ್ಕುಳ್ಳವನಾಗಿರುವ ಯಾಮೊಬ್ಬ ವ್ಯಕ್ತಿಯು ಅಥವಾ ಮಾರಾಟದಿಂದ ಯಾರ ಹಿತಾಸಕ್ತಿಗಳಿಗೆ ಬಾಧಕವಾಗುವುದೋ ಅಂಥ ಯಾಮೊಬ್ಬ ವ್ಯಕ್ತಿಯು ಸದರಿ ಮಾರಾಟದ ಬಗ್ಗೆ ಪ್ರಕಟಿಸುವಲ್ಲಿ ಅಥವಾ ಅದನ್ನು ನಡೆಸುವಲ್ಲಿ ಉಂಟಾದ ಗಣನೀಯ ಅಕ್ರಮ ಅಥವಾ ದೋಷ ಅಥವಾ ಮೋಸದ ಕಾರಣದಿಂದ ಅದನ್ನು ರದ್ದುಗೊಳಿಸಬೇಕೆಂದು ಕೋರಿ ವಸೂಲಿ ಅಧಿಕಾರಿಗೆ ಅರ್ಜಿ ಸಲ್ಲಿಸಬಹುದು: ಪರಂತು, ಅರ್ಜಿದಾರನು ಅಂಥ ಅಕ್ರಮ, ದೋಷ ಅಥವಾ ಮೋಸದ ಕಾರಣದಿಂದ ಗಣನೀಯವಾದ ಹಾನಿಯನ್ನು ಅನುಭವಿಸಿರುವನೆಂದು ವಸೂಲಿ ಅಧಿಕಾರಿಗೆ ಮನದಟ್ಟಾದ ಹೊರತು, ಅಂಥ ಯಾವುದೇ ಮಾರಾಟವನ್ನು ರದ್ದುಗೊಳಿಸತಕ್ಕದ್ದಲ್ಲ.
(ಬಿ) ಸದರಿ ಅರ್ಜಿಯನ್ನು ಪುರಸ್ಕರಿಸಿದಲ್ಲಿ, ವಸೂಲಿ ಅಧಿಕಾರಿಯು ಮಾರಾಟವನ್ನು ರದ್ದುಗೊಳಿಸತಕ್ಕದ್ದು ಮತ್ತು ಹೊಸದಾಗಿ ಮಾರಾಟ ಮಾಡಲು ಆದೇಶ ನೀಡಬಹುದು.
(6) (ಎ) ಮಾರಾಟದ ದಿನಾಂಕದಿಂದ ಮೂವತ್ತು ದಿನಗಳ ಮುಕ್ತಾಯವಾಗುವುದರೊಳಗೆ (4)ನೆಯ ಉಪನಿಯಮ ಅಥವಾ (5)ನೆಯ ಉಪನಿಯಮದ ಅಡಿಯಲ್ಲಿ ಸದರಿ ಮಾರಾಟವನ್ನು ರದ್ದುಗೊಳಿಸಲು ಯಾವುದೇ ಅರ್ಜಿಯನ್ನು ಸಲ್ಲಿಸಿರದಿದ್ದಲ್ಲಿ ಅಥವಾ ಅಂಥ ಅರ್ಜಿಯನ್ನು ಸಲ್ಲಿಸಿದ್ದು ಅದನ್ನು ತಿರಸ್ಕರಿಸಿದ್ದಲ್ಲಿ 30 ದಿನಗಳು ಮುಕ್ತಾಯವಾದ ಕೂಡಲೇ ವಸೂಲಿ ಅಧಿಕಾರಿಯು ಸದರಿ ಮಾರಾಟವನ್ನು ಸ್ವೀಕರಿಸುವ ಒಂದು ಆದೇಶವನ್ನು ಮಾಡತಕ್ಕದ್ದು: ಪರಂತು, ಅಂಥ ಯಾವುದೇ ಅರ್ಜಿಯನ್ನು ಸಲ್ಲಿಸಿರದಿದ್ದಲ್ಲಿ ಅಥವಾ ಸಲ್ಲಿಸಲಾದ ಮತ್ತು ತಿರಸ್ಕರಿಸಲಾದ ಯಾವುದೇ ಅರ್ಜಿಯಲ್ಲಿ ಆಪಾದಿಸಲಾದ ಕಾರಣಗಳ ಹೊರತಾಗಿ ಇತರ ಕಾರಣಗಳಿಗಾಗಿ ಮಾರಾಟವನ್ನು ತಳ್ಳಿಹಾಕತಕ್ಕದ್ದೆಂದು ಭಾವಿಸಲು ಕಾರಣಗಳಿದ್ದರೆ ಅವನು ತನ್ನ ಕಾರಣಗಳನ್ನು ದಾಖಲಿಸಿ ಮಾರಾಟವನ್ನು ತಳ್ಳಿಹಾಕಬಹುದು.
(ಬಿ) ಯಾವುದೇ ಸ್ಥಿರ ಸ್ವತ್ತಿನ ಮಾರಾಟವನ್ನು ಸ್ಥಿರೀಕರಿಸದಿದ್ದಲ್ಲಿ, ಅಥವಾ ತಳ್ಳಿಹಾಕಿದ್ದಲ್ಲಿ, ಸಂದರ್ಭಾನುಸಾರ ಠೇವಣಿ ಅಥವಾ ಖರೀದಿ ಹಣವನ್ನು ಖರೀದಿದಾರನಿಗೆ ವಾಪಸು ಮಾಡತಕ್ಕದ್ದು.
(7) ಈ ನಿಯಮದ ಮೇರೆಗೆ ಮಾರಾಟದ ಸ್ಥಿರೀಕರಣದ ನಂತರ, ಖರೀದಿದಾರನಿಗೆ, ವಸೂಲಿ ಅಧಿಕಾರಿಯು ಮುದ್ರೆಯನ್ನು ಹಾಕಿ ಮತ್ತು ಸಹಿ ಮಾಡಿದ ಒಂದು ಪ್ರಮಾಣ ಪತ್ರವನ್ನು ನಮೂನೆ-10ರಲ್ಲಿ ನೀಡತಕ್ಕದ್ದು ಮತ್ತು ಅಂಥ ಪ್ರಮಾಣಪತ್ರವು ಮಾರಾಟ ಮಾಡಲಾದ ಸ್ವತ್ತಿನ ವಿವರಗಳನ್ನು ಮತ್ತು ಖರೀದಿದಾರನ ಹೆಸರು ಮತ್ತು ವಿಳಾಸಗಳನ್ನು ಒಳಗೊಂಡಿರತಕ್ಕದ್ದು. ಅದು ಅಂಥ ಖರೀದಿದಾರನಿಗೆ ಮಾಡಲಾದ ಮಾರಾಟದ ಸಂಗತಿಯ ನಿರ್ಣಾಯಕ ಸಾಕ್ಷ್ಯವಾಗಿರತಕ್ಕದ್ದು. ತದನಂತರ ನಮೂನೆ-11ರಲ್ಲಿ ಪ್ರಕಟಣೆ ಹೊರಡಿಸತಕ್ಕದ್ದು.