(1) ಅಧಿನಿಯಮದ 43ನೇ ಪ್ರಕರಣದ (1)ನೇ ಉಪಪ್ರಕರಣದ (ಸಿ) ಖಂಡದ ಅಡಿಯಲ್ಲಿ ಡಿಕ್ರಿಯನ್ನು ಜಾರಿಗೊಳಿಸಲು ಬಯಸುವ ಪ್ರತಿಯೊಬ್ಬ ಡಿಕ್ರಿದಾರನು, ತೀರ್ಪುಋಣಿಯು ಯಾರ ಅಧಿಕಾರ ವ್ಯಾಪ್ತಿಯೊಳಗೆ ವಾಸಿಸುತ್ತಿರುವನೋ ಅಥವಾ ಸ್ವತ್ತನ್ನು ಹೊಂದಿರುವನೋ ಅಂಥ ವಸೂಲಾತಿ ಅಧಿಕಾರಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು ಮತ್ತು ಅಂಥ ಅಧಿಕಾರಿಯು ನಿರ್ಧರಿಸುವಂತೆ ಜಾರಿಗೊಳಿಸಲು ತಗಲಬಹುದಾದ ವೆಚ್ಚವನ್ನು ಮುಂಗಡವಾಗಿ ಸಂದಾಯಮಾಡತಕ್ಕದ್ದು.
(2) ಅಂಥ ಪ್ರತಿಯೊಂದು ಅರ್ಜಿಯು ನಮೂನೆ-3ರಲ್ಲಿರತಕ್ಕದ್ದು ಮತ್ತು ಡಿಕ್ರಿದಾರನು ಅದಕ್ಕೆ ಸಹಿ ಮಾಡಿರತಕ್ಕದ್ದು. ಡಿಕ್ರಿದಾರನು ತಾನು ಇಚ್ಛಿಸಿದಲ್ಲಿ ತನಗೆ ಅಡಮಾನ ಮಾಡಿಕೊಟ್ಟ ಸ್ಥಿರ ಸ್ವತ್ತಿನ ಮೇಲೆ ಅಥವಾ ಬೇರೆ ಸ್ಥಿರಸ್ವತ್ತಿನ ಮೇಲೆ ಡಿಕ್ರಿಯನ್ನು ಜಾರಿಗೊಳಿಸಬೇಕೆಂದು ಇಚ್ಛಿಸಿರುವನೋ ಅಥವಾ ಚರಸ್ವತ್ತನ್ನು ಜಫ್ತಿ ಮಾಡಿಸಬೇಕೆಂದು ಇಚ್ಛಿಸುವನೋ ಎಂಬುದನ್ನು ಸೂಚಿಸಬಹುದು. ಡಿಕ್ರಿದಾರನು, ಸ್ಥಿರಸ್ವತ್ತಿನ ಮೇಲೆ ಜಾರಿಗೊಳಿಸಬೇಕೆಂದು ಇಚ್ಛಿಸಿದಲ್ಲಿ ಆ ಸ್ವತ್ತನ್ನು ಗುರುತಿಸಲು ಅಗತ್ಯವಾದ ಸಾಕಷ್ಟು ವಿವರಣೆಯನ್ನು ತನ್ನ ಅರ್ಜಿಯಲ್ಲಿ ತಿಳಿಸತಕ್ಕದ್ದು ಮತ್ತು ಅಂಥ ಸ್ವತ್ತನ್ನು ಅದರ ಚಕ್ಕುಬಂದಿಯಿಂದ ಅಥವಾ ಹಕ್ಕು ದಾಖಲೆ ಪತ್ರ, ಕಂದಾಯ ವ್ಯವಸ್ಥೆ ಅಥವಾ ಸರ್ವೆ ನಂಬರುಗಳಿಂದ ಗುರುತು ಹಿಡಿಯಲು ಸಾಧ್ಯವಿದ್ದಲ್ಲಿ, ಅಂತಹ ಚಕ್ಕುಬಂದಿಗಳ ಅಥವಾ ನಂಬರುಗಳ ತಪಶೀಲನ್ನು ಮತ್ತು ಅಂಥ ಸ್ವತ್ತಿನಲ್ಲಿ ತೀರ್ಪುಋಣಿಯ ಪಾಲು ಅಥವಾ ಹಕ್ಕಿನ ಬಗ್ಗೆ ತಪಶೀಲನ್ನು ಸಾಧ್ಯವಾದಷ್ಟು ಮಟ್ಟಿಗೆ ಅರ್ಜಿಯಲ್ಲಿ ನಮೂದಿಸತಕ್ಕದ್ದು.
(3) ಅಂಥ ಅರ್ಜಿಯನ್ನು ಸ್ವೀಕರಿಸಿದ ನಂತರ ವಸೂಲಿ ಅಧಿಕಾರಿಯು, ಅರ್ಜಿಯಲ್ಲಿ ಕಾಣಿಸಿದ ವಿವರಗಳ ನಿಖರತೆ ಮತ್ತು ನೈಜತೆಯನ್ನು ರಿಜಿಸ್ಟ್ರಾರರ ಕಛೇರಿಯಲ್ಲಿ ದೊರಕಬಹುದಾದ ವಿವರಗಳೊಂದಿಗೆ ಪರಿಶೀಲಿಸಿ ನೋಡತಕ್ಕದ್ದು ಮತ್ತು ರಿಜಿಸ್ಟ್ರಾರನು ನಮೂನೆ-4ರಲ್ಲಿ ಒಂದು ಲಿಖಿತ ತಗಾದೆ ನೋಟೀಸನ್ನು, ದ್ವೀಪ್ರತಿಯಲ್ಲಿ ತಯಾರಿಸತಕ್ಕದ್ದು. ಸದರಿ ತಗಾದೆ ನೋಟೀಸಿನಲ್ಲಿ ತೀರ್ಪುಋಣಿಯ ಹೆಸರು ಮತ್ತು ಆತನಿಂದ ಬರಬೇಕಾದ ಮೊಬಲಗನ್ನು ತಿಳಿಸಿ ಮಾರಾಟ ಅಧಿಕಾರಿಯವರಿಗೆ ಕಳುಹಿತಕ್ಕದ್ದು. ಸ್ಥಿರಸ್ವತ್ತಿನ ಸಂಬಂಧದಲ್ಲಿ ಜಾರಿಮಾಡುತ್ತಿದ್ದರೆ ತಗಾದೆ ನೋಟೀಸಿನಲ್ಲಿ ಅದನ್ನು ಜಾರಿಗೊಳಿಸುವ ಬಗ್ಗೆ ಖರ್ಚು ಯಾವುದೇ ಇದ್ದಲ್ಲಿ ಅದರ ಸಹಿತ ಪಾವತಿಸಬೇಕಾದ ಮೊಬಲಗು, ಸದರಿ ನೋಟೀಸನ್ನು ಜಾರಿ ಮಾಡುವ ವ್ಯಕ್ತಿಗೆ ಕೊಡಬೇಕಾದ ಭತ್ಯೆ, ಸದರಿ ಮೊಬಲಗನ್ನು ಪಾವತಿಸಲು ನೀಡಲಾದ ಕಾಲಾವಧಿ ಮತ್ತು ಆ ಹಣವನ್ನು ಪಾವತಿಸದಿದ್ದಲ್ಲಿ ಜಪ್ತಿ ಮಾಡಿ ಮಾರಾಟ ಮಾಡಿಸಬಹುದಾದ ಸ್ಥಿರಸ್ವತ್ತುಗಳ ವಿವರಗಳನ್ನು ಅಥವಾ ಜಪ್ತಿ ಮಾಡದೆ ಮಾರಾಟ ಮಾಡುವ ಸ್ಥಿರಸ್ವತ್ತುಗಳ ವಿವರಗಳನ್ನು ತಿಳಿಸತಕ್ಕದ್ದು;
ಪರಂತು, ತೀರ್ಪು ಋಣಿಯು ತನ್ನ ವಿರುದ್ಧ ಮಾಡಲಿರುವ ಜಾರಿ ಕ್ರಮಗಳನ್ನು ವ್ಯರ್ಥಗೊಳಿಸುವ ಅಥವಾ ವಿಳಂಬ ಮಾಡುವ ಉದ್ದೇಶದಿಂದ ತನ್ನ ಸ್ವತ್ತನ್ನು ಸಂಪೂರ್ಣವಾಗಿ ಅಥವಾ ಭಾಗಶಃ ವಿಲೇವಾರಿ ಮಾಡಲಿರುವನೆಂದು ವಸೂಲಾಧಿಕಾರಿಗೆ ಖಚಿತವಾದಲ್ಲಿ, ಆತನಿಗೆ ನೀಡಿದ ತಗಾದೆ ನೋಟೀಸಿನಲ್ಲಿ ಆತನು ಕೊಡಬೇಕಾದ ಮೊತ್ತವನ್ನು ಪಾವತಿ ಮಾಡಲು ಯಾವುದೇ ಕಾಲಾವಕಾಶವನ್ನು ಕೊಡತಕ್ಕದ್ದಲ್ಲ ಮತ್ತು ಅಂಥ ಸುಸ್ತಿದಾರನ ಸ್ವತ್ತನ್ನು ಕೂಡಲೇ ಜಪ್ತಿ ಮಾಡತಕ್ಕದ್ದು.