(1) ಅಧಿನಿಯಮದ ಅಡಿಯಲ್ಲಿ ಸಹಾಯಕ ರಿಜಿಸ್ಟ್ರಾರ್, ರಿಜಿಸ್ಟ್ರಾರ್ ಅಥವಾ ರಿಜಿಸ್ಟ್ರಾರ್ ಜನರಲ್ಲನ ಮುಂದಿರುವ ಯಾವುದೇ ಅರ್ಜಿ, ವಿಚಾರಣೆ ಅಥವಾ ಅಪೀಲಿನ ಯಾರೇ ಪಕ್ಷಕಾರನು ಅಥವಾ ಅಂಥ ಅರ್ಜಿ, ವಿಚಾರಣೆ ಅಥವಾ ಅಪೀಲಿನಲ್ಲಿ ಹಿತಾಸಕ್ತಿಯುಳ್ಳ ಯಾರೇ ವ್ಯಕ್ತಿಯು, ಅಂಥ ಅರ್ಜಿ, ವಿಚಾರಣೆ ಅಥವಾ ಅಪೀಲಿನ ಯಾವುದೇ ದಸ್ತಾವೇಜಿನಲ್ಲಿನ ಯಾವುದೇ ಪ್ರತಿಯನ್ನು ಕೋರಿ ಸಹಾಯಕ ರಿಜಿಸ್ಟ್ರಾರ್, ರಿಜಿಸ್ಟ್ರಾರ್ ಅಥವಾ ಸಂದರ್ಭಾನುಸಾರ ರಿಜಿಸ್ಟ್ರಾರ್ ಜನರಲ್ಲನಿಗೆ ಅರ್ಜಿ ಸಲ್ಲಿಸಬಹುದು.
(2) ನಕಲುಗಳನ್ನು ಸಿದ್ಧಪಡಿಸುವ ವೆಚ್ಚವನ್ನು ಒಳಗೊಳ್ಳುವಂತೆ ನಕಲು ಫೀಜು ಈ ಕೆಳಕಂಡ ಪ್ರಮಾಣಗಳಿಗನುಸಾರವಾಗಿ ಠೇವಣಿ ಅಥವಾ ಒಂದು ಮೊಬಲಗು ಅರ್ಜಿಯ ಜೊತೆಯಲ್ಲಿರತಕ್ಕದ್ದು, ಎಂದರೆ:-
(ಎ) ಇಂಗ್ಲೀಷ್ ಪ್ರತಿಗಳ ಸಂದರ್ಭದಲ್ಲಿ, ಪ್ರತಿ 25 ಪದಗಳು ಅಥವಾ ಅವುಗಳ ಭಾಗಕ್ಕೆ 5 ಪೈಸೆ;
(ಬಿ) ಪ್ರಾದೇಶಿಕ ಭಾಷೆಗಳ ಪ್ರತಿಗಳ ಸಂದರ್ಭದಲ್ಲಿ, ಪ್ರತಿ 30 ಪದಗಳಿಗೆ ಅಥವಾ ಅವುಗಳ ಭಾಗಕ್ಕೆ 5 ಪೈಸೆ;
(ಸಿ) ಪ್ರಮಾಣೀಕೃತ ಪ್ರತಿಗಳ ಸಂದರ್ಭದಲ್ಲಿ, ತಾಳೆ ನೋಡುವುದಕ್ಕೆ 100 ಪದಗಳು ಅಥವಾ ಅದರ ಭಾಗಕ್ಕೆ ಹೆಚ್ಚಿನ 5 ಪೈಸೆ;
(ಡಿ) ಕೋಷ್ಟಕದ ನಮೂನೆಗಳಲ್ಲಿರುವ ದಸ್ತಾವೇಜುಗಳ ಸಂದರ್ಭದಲ್ಲಿ, ಸಾಮಾನ್ಯ ದರದ ಎರಡರಷ್ಟು; ಆದರೆ, ಎಲ್ಲ ನಕಲು ಮಾಡುವ, ತಾಳೆ ನೋಡುವ ಮತ್ತು ಭಾಷಾಂತರಿಸುವ ಕಾರ್ಯಗಳಿಗಾಗಿ ಶೇ 55 ರಷ್ಟು ಅಧಿಕ ಕರವನ್ನು ವಿಧಿಸತಕ್ಕದ್ದು ಮತ್ತು ಪ್ರಮಾಣೀಕೃತ ಪ್ರತಿಗಳನ್ನು ಸಿದ್ಧಪಡಿಸುವುದಕ್ಕಾಗಿ ಒಟ್ಟು ವೆಚ್ಚಗಳಿಗೆ ಅದನ್ನು ಸೇರಿಸತಕ್ಕದ್ದು;
(ಇ) ಅರ್ಜಿಯಲ್ಲಿ ಕೊಟ್ಟಿರುವ ದಸ್ತಾವೇಜಿನ ವಿವರಣೆಯು ತಪ್ಪಾಗಿದ್ದಾಗ ಅಥವಾ ಅಪೂರ್ಣವಾಗಿದ್ದಾಗ, ಅದರ ಪರಿಣಾಮವಾಗಿ ಅದನ್ನು ಕಂಡುಹಿಡಿಯಲು ಅವನ ದಾಖಲೆಗಳನ್ನು ರಿಕಾರ್ಡ್ಕೀಪರನು ಅಗತ್ಯವಾಗಿ ಶೋಧಿಸಬೇಕಾಗುವ ಕಾರಣದಿಂದಾಗಿ ದಸ್ತಾವೇಜು ಕಂಡುಬರಲಿ ಅಥವಾ ಇಲ್ಲದಿರಲಿ ಮತ್ತು ಸದರಿ ದಸ್ತಾವೇಜಿನ ಪರಿಶೀಲನೆಯ ತರುವಾಯ ಅವನು ಅರ್ಜಿಯಲ್ಲಿ ಕೋರಿದ್ದ ಪ್ರತಿಯನ್ನು ನೀಡಿರಲಿ ಅಥವಾ ನೀಡದಿರಲಿ, ಯಾವ ವರ್ಷಕ್ಕಾಗಿ ದಾಖಲೆಗಳನ್ನು ಶೋಧಿಸಲಾಯಿತೋ ಆ ಪ್ರತಿಯೊಂದು ವರ್ಷಕ್ಕೆ ಒಂದು ರೂಪಾಯಿ ದರದಲ್ಲಿ ಫೀಜನ್ನು ಅಂಥ ಶೋಧನೆಗಾಗಿ ಅರ್ಜಿದಾರನು ಸಂದಾಯಮಾಡತಕ್ಕದ್ದು.
(3) ಪ್ರತಿ ಮಾಡುವ ಫೀಜು ಆಗಿ, ಮೇಲಿನ ಪ್ರಮಾಣಕ್ಕನುಸಾರವಾಗಿ ಲೆಕ್ಕ ಹಾಕಲಾದ ಮೊಬಲಗನ್ನು, ಪ್ರತಿಗಳನ್ನು ಮಂಜೂರು ಮಾಡಲು ಯಾರಿಗೆ ಅರ್ಜಿ ಸಲ್ಲಿಸಲಾಗಿತ್ತೋ ಆ ಸಹಾಯಕ ರಿಜಿಸ್ಟ್ರಾರ್, ರಿಜಿಸ್ಟ್ರಾರ್ ಅಥವಾ ರಿಜಿಸ್ಟ್ರಾರ್ ಜನರಲ್ಲನು ಸರ್ಕಾರಕ್ಕೆ ಜಮೆ ಮಾಡತಕ್ಕದ್ದು ಮತ್ತು ಪ್ರತಿಗಳಿಗಾಗಿ ಅರ್ಜಿ ಸಲ್ಲಿಸುವ ವ್ಯಕ್ತಿಯು ಹೆಚ್ಚುವರಿ ಮೊಬಲಗೇನಾದರೂ ಠೇವಣಿ ಇಟ್ಟಿದ್ದರೆ, ಪ್ರತಿಗಳನ್ನು ಒದಗಿಸುವ ಸಮಯದಲ್ಲಿ ಅದನ್ನು ಅವನಿಗೆ ಮರುಪಾವತಿ ಮಾಡತಕ್ಕದ್ದು; ಆದರೆ, ಪ್ರತಿಗಳಿಗಾಗಿ ಅರ್ಜಿ ಸಲ್ಲಿಸುವ ವ್ಯಕ್ತಿಯು ಠೇವಣಿ ಇಟ್ಟ ಮೊಬಲಗು ಪ್ರತಿಗಳನ್ನು ಮಾಡುವ ಸಂಬಂಧದ ಫೀಜನ್ನು ಒಳಗೊಳ್ಳಲು ಸಾಕಾಗುವಷ್ಟು ಇಲ್ಲದಿದ್ದರೆ, ಅವನು ಪ್ರತಿಯನ್ನು ತೆಗೆದುಕೊಂಡು ಹೋಗುವುದಕ್ಕೆ ಮುಂಚೆ ಕಡಿಮೆಬಿದ್ದ ಮೊಬಲಗನ್ನು ಸಂದಾಯ ಮಾಡತಕ್ಕದ್ದು.