(1) ಯಾವುದೇ ಸಭೆಯಲ್ಲಿ ಕೋರಂ ಇಲ್ಲದಿದ್ದರೆ, ಅಧ್ಯಕ್ಷನು ಸಭೆಯನ್ನು ಆ ಸಭೆಯ ತರುವಾಯದ ದಿನಾಂಕಕ್ಕೆ ಮುಂದೂಡತಕ್ಕದ್ದು. ಕಾರ್ಯದರ್ಶಿಯು, ಆ ಮುಂದೂಡಿದ ಸಭೆಯ ದಿನಾಂಕ ಮತ್ತು ವೇಳೆಯನ್ನು ಸೂಚಿಸುವ ಪೂರ್ಣ ಐದು ದಿವಸಗಳ ಹೊಸ ನೋಟೀಸನ್ನು ಕೊಡತಕ್ಕದ್ದು ಮತ್ತು ಮೂಲ ಸಭೆಯಲ್ಲಿ ಕೋರಂ ಇದ್ದಿದ್ದರೆ ಅದರ ಮುಂದೆ ತರಬೇಕಾಗಿದ್ದಂಥ ವ್ಯವಹಾರವನ್ನು ಮುಂದೂಡಿದ ಸಭೆಯ ಮುಂದೆ ತರತಕ್ಕದ್ದು ಮತ್ತು ಅದನ್ನು ಕೋರಂ ಇದ್ದರೆ, ಅಂಥ ಸಭೆಯಲ್ಲಿ ವಿಲೆ ಮಾಡಬಹುದು.
(2) ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಯಾವುದೇ ಸಭೆಯಲ್ಲಿನ ಎಲ್ಲಾ ಪ್ರಶ್ನೆಗಳನ್ನು, ಹಾಜರಿರುವ ಮತ್ತು ಮತ ಚಲಾಯಿಸಿದ ಸದಸ್ಯರ ಬಹುಮತದ ಮೂಲಕ ತೀರ್ಮಾನಿಸತಕ್ಕದ್ದು ಮತ್ತು ಸಮಾನ ಮತಗಳ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸುವ ವ್ಯಕ್ತಿಯು ಎರಡನೇ ಅಥವಾ ನಿರ್ಣಾಯಕ ಮತವನ್ನು ಹೊಂದಿರತಕ್ಕದ್ದು ಮತ್ತು ಅದನ್ನು ಚಲಾಯಿಸತಕ್ಕದ್ದು.
(3) ಮತವು ಕೈಎತ್ತುವುದರ ಮೂಲಕ ಇರತಕ್ಕದ್ದು. ಆದರೆ, ರಾಜ್ಯ ಗ್ರಂಥಾಲಯ ಪ್ರಾಧಿಕಾರವು ಯಾವುದೇ ಪ್ರಶ್ನೆಯನ್ನು ಮತಪತ್ರದ ಮೂಲಕ ತೀರ್ಮಾನಿಸತಕ್ಕದ್ದೆಂದು ನಿರ್ಣಯಿಸಬಹುದು.
(4) ಮತದಾನವನ್ನು ಮತ ಪತ್ರದ ಮೂಲಕ ಕೊಡಬೇಕೆಂದು ತಗಾದೆ ಮಾಡಿದಾಗ ಹೊರತು, ಅಂಥ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸುವ ವ್ಯಕ್ತಿಯು, ಪ್ರಸ್ತಾವವನ್ನು ಅಂಗೀಕರಿಸಲಾಗಿದೆ ಅಥವಾ ಅದು ಬಿದ್ದು ಹೋಗಿದೆ ಎಂದು ಮಾಡಿದ ಘೋಷಣೆಯು, ಸಂದರ್ಭಾನುಸಾರ ಅಂಥ ಪ್ರಸ್ತಾವವನ್ನು ಅಂಗೀಕರಿಸಿರುವುದಕ್ಕಾಗಿನ ಅಥವಾ ಅಂಗೀಕರಿಸಿಲ್ಲದಿರುವುದರ ಬಗ್ಗೆ ನಿರ್ಣಾಯಕ ಸಾಕ್ಷ್ಯವಾಗಿರತಕ್ಕದ್ದು.
(5) ಮತದಾನವು ಮತ ಪತ್ರದ ಮೂಲಕ ಇರುವಾಗ, ಮತದಾನ ಮಾಡಲು ಇಚ್ಛಿಸುವ ಹಾಜರಿರುವ ಎಲ್ಲಾ ಸದಸ್ಯರ ಮತಗಳನ್ನು ಆ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸುವ ವ್ಯಕ್ತಿಯ ನಿರ್ದೇಶನದ ಮೇರೆಗೆ ತೆಗೆದುಕೊಳ್ಳತಕ್ಕದ್ದು ಮತ್ತು ಮತದಾನದ ಫಲಿತಾಂಶವನ್ನು, ಅಂಥ ಸಭೆಯಲ್ಲಿ ರಾಜ್ಯ ಗ್ರಂಥಾಲಯ ಪ್ರಾಧಿಕಾರದ ತೀರ್ಮಾನವಾಗಿರುವುದಾಗಿ ಭಾವಿಸತಕ್ಕದ್ದು.
(6) ಕಾರ್ಯದರ್ಶಿಯ ಅಧ್ಯಕ್ಷನ ನಿರ್ದೇಶನಗಳ ಮೇರೆಗೆ ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸಭೆಗಳ ವ್ಯವಹರಣೆಗಳು ಮತ್ತು ತೀರ್ಮಾನಗಳ ದಾಖಲೆಯನ್ನು ಇಟ್ಟುಕೊಂಡು ಬರತಕ್ಕದ್ದು.