(1) ರಾಜ್ಯ ಗ್ರಂಥಪಾಲನು ರಾಜ್ಯದಲ್ಲಿನ ಎಲ್ಲ ಸಾರ್ವಜನಿಕ ಗ್ರಂಥಾಲಯಗಳ ಒಂದು ರಿಜಿಸ್ಟರನ್ನು ಮತ್ತು ಅಂತಹ ಸಾರ್ವಜನಿಕ ಗ್ರಂಥಾಲಯಗಳ ಗ್ರಂಥಪಾಲರ ಒಂದು ರಿಜಿಸ್ಟರನ್ನು ಸಹ ಇಟ್ಟುಕೊಂಡು ಬರತಕ್ಕದ್ದು.
(2) ಸ್ಥಳೀಯ ಗ್ರಂಥಾಲಯ ಪ್ರಾಧಿಕಾರಿಗಳು ಅವರ ಅಧಿಕಾರ ವ್ಯಾಪ್ತಿಯೊಳಗೆ ಇರುವ ಎಲ್ಲ ಸಾರ್ವಜನಿಕ ಗ್ರಂಥಾಲಯಗಳ ಒಂದು ರಿಜಿಸ್ಟರನ್ನು ಮತ್ತು ಅಂತಹ ಗ್ರಂಥಾಲಯಗಳ ಗ್ರಂಥಪಾಲರ ಒಂದು ರಿಜಿಸ್ಟರನ್ನು ಸಹ ಇಟ್ಟುಕೊಂಡು ಬರತಕ್ಕದ್ದು.
(3) ಪ್ರತಿಯೊಂದು ಸಾರ್ವಜನಿಕ ಗ್ರಂಥಾಲಯದ ಕಾರ್ಯದರ್ಶಿಯು, ಅಂತಹ ಗ್ರಂಥಾಲಯವು ಯಾರ ಅಧಿಕಾರ ವ್ಯಾಪ್ತಿಯಲ್ಲಿ ಇರುವುದೋ ಆ ಸ್ಥಳೀಯ ಗ್ರಂಥಾಲಯ ಪ್ರಾಧಿಕಾರಕ್ಕೆ, ಆ ಗ್ರಂಥಾಲಯದ ಹೆಸರನ್ನು ಮತ್ತು ಅಂತಹ ಗ್ರಂಥಾಲಯದ ಆಡಳಿತ ಮಂಡಲಿಯ ಸದಸ್ಯರ ಹೆಸರುಗಳು ಮತ್ತು ವಿಳಾಸಗಳನ್ನು, ಅಂತಹ ಗ್ರಂಥಾಲಯದ ಗ್ರಂಥಪಾಲನ ಹೆಸರು ಮತ್ತು ಅರ್ಹತೆಯನ್ನು ತೋರಿಸುವ ಒಂದು ವಿವರ ಪತ್ರವನ್ನು ಕಳುಹಿಸಿ ಕೊಡತಕ್ಕದ್ದು ಮತ್ತು ಅಂಥ ಸ್ಥಳೀಯ ಗ್ರಂಥಾಲಯ ಪ್ರಾಧಿಕಾರದ ಮುಖ್ಯ ಗ್ರಂಥಪಾಲನಿಗೆ ಆಡಳಿತ ಮಂಡಲಿಯ ಸಿಬ್ಬಂದಿಯಲ್ಲಿನ ಅಥವಾ ಗ್ರಂಥಪಾಲನ ಬದಲಾವಣೆಯನ್ನು ಅವರ ವಿಳಾಸದೊಂದಿಗೆ ಸಹ ವರದಿ ಮಾಡತಕ್ಕದ್ದು.