ರಾಜ್ಯ ಗ್ರಂಥಾಲಯ ಪ್ರಾಧಿಕಾರ ಮತ್ತು ಸ್ಥಳೀಯ ಗ್ರಂಥಾಲಯ ಪ್ರಾಧಿಕಾರಗಳು, ಕಾಲಕಾಲಕ್ಕೆ ರಾಜ್ಯ ಸರ್ಕಾರದ ರಾಜ್ಯ ಲೆಕ್ಕಪತ್ರಗಳ ಇಲಾಖೆಯ ನಿಯಂತ್ರಕನು ಹೊರಡಿಸಿದಂಥ ಸೂಚನೆಗಳಿಗನುಸಾರವಾಗಿ ಆದಾಯ ಮತ್ತು ವೆಚ್ಚದ ಮತ್ತು ಜಮೆಗಳು ಮತ್ತು ವೆಚ್ಚಗಳ ಲೆಕ್ಕವನ್ನು ಇಟ್ಟುಕೊಂಡು ಬರತಕ್ಕದ್ದು.
(1) ರಾಜ್ಯ ಗ್ರಂಥಾಲಯ ನಿಧಿಯ ಮತ್ತು ನಗರ ಮತ್ತು ಜಿಲ್ಲಾ ಗ್ರಂಥಾಲಯ ನಿಧಿಗಳ ಲೆಕ್ಕ ಪತ್ರಗಳನ್ನು ರಾಜ್ಯ ಸರ್ಕಾರದ ರಾಜ್ಯ ಲೆಕ್ಕಪತ್ರ ಇಲಾಖೆಯ ನಿಯಂತ್ರಕನು ನೇಮಕ ಮಾಡಿದ ಲೆಕ್ಕ ಪರಿಶೋಧಕರು ಪರಿಶೋಧನೆ ಮಾಡತಕ್ಕದ್ದು.
(2) (ಕ) ರಾಜ್ಯ ಗ್ರಂಥಪಾಲನು, ರಾಜ್ಯ ಗ್ರಂಥಾಲಯ ನಿಧಿಗಳಿಗೆ ಸಂಬಂಧಿಸಿದ ಲೆಕ್ಕ ಪತ್ರಗಳನ್ನು ಲೆಕ್ಕ ಪರಿಶೋಧಕರಿಗೆ ಒಪ್ಪಿಸತಕ್ಕದ್ದು; ಮತ್ತು
(ಖ) ಮುಖ್ಯ ಗ್ರಂಥಪಾಲಕರು, ನಗರ ಮತ್ತು ಜಿಲ್ಲಾ ಗ್ರಂಥಾಲಯ ನಿಧಿಗಳಿಗೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ಲೆಕ್ಕಪರಿಶೋಧಕರಿಗೆ ಒಪ್ಪಿಸತಕ್ಕದ್ದು;
(3) ಲೆಕ್ಕ ಪರಿಶೋಧಕರು-
(i) ಅವರು ಪರೀಕ್ಷೆಗಾಗಿ ಅವಶ್ಯವೆಂದು ಪರ್ಯಾಲೋಚಿಸುವಂಥ ಯಾವುದೇ ಪುಸ್ತಕ, ಪತ್ರ, ಕರಾರು, ಲೆಕ್ಕ, ಮೋಚರ್, ರಸೀತಿ ಅಥವಾ ಇತರ ದಸ್ತಾವೇಜನ್ನು ಪರಿಶೀಲಿಸುವುದಕ್ಕಾಗಿ ಹಾಜರುಪಡಿಸಲು ಬರಹದಲ್ಲಿ ಅಗತ್ಯಪಡಿಸಬಹುದು;
(ii) ಅಂಥ ಯಾವುದೇ ದಸ್ತಾವೇಜಿನ ಅಭಿರಕ್ಷೆ ಅಥವಾ ನಿಯಂತ್ರಣವನ್ನು ಹೊಂದಿರುವ ಅಥವಾ ಅದಕ್ಕೆ ಜವಾಬ್ದಾರನಾದ ವ್ಯಕ್ತಿಯನ್ನು ಅವರ ಮುಂದೆ ಖುದ್ದಾಗಿ ಹಾಜರಾಗಲು ಬರಹದಲ್ಲಿ ಅಗತ್ಯಪಡಿಸಬಹುದು; ಮತ್ತು
(iii) ಹಾಗೆ ಹಾಜರಾಗುವ ಯಾವನೇ ವ್ಯಕ್ತಿಯನ್ನು, ಅಂಥ ದಸ್ತಾವೇಜಿಗೆ ಸಂಬಂಧಿಸಿದಂತೆ ಘೋಷಣೆಯನ್ನು ಮಾಡಲು ಮತ್ತು ಅದಕ್ಕೆ ರುಜು ಮಾಡಲು ಅಥವಾ ಯಾವುದೇ ಪ್ರಶ್ನೆಗೆ ಉತ್ತರ ಕೊಡಲು ಅಥವಾ ಅದಕ್ಕೆ ಸಂಬಂಧಪಟ್ಟಂತೆ ಯಾವುದೇ ವಿವರ ಪತ್ರವನ್ನು ತಯಾರಿಸಲು ಮತ್ತು ಒದಗಿಸಲು ಅಗತ್ಯಪಡಿಸಬಹುದು.
(4) ಲೆಕ್ಕ ಪರಿಶೋಧಕರು-
(i) ರಾಜ್ಯ ಗ್ರಂಥಾಲಯ ಪ್ರಾಧಿಕಾರಿಗೆ ರಾಜ್ಯ ಗ್ರಂಥಾಲಯ ನಿಧಿಗೆ ಸಂಬಂಧಿಸಿದಂತೆ ಮತ್ತು ಸ್ಥಳೀಯ ಗ್ರಂಥಾಲಯದ ಪ್ರಾಧಿಕಾರಕ್ಕೆ ಸ್ಥಳೀಯ ಗ್ರಂಥಾಲಯದ ನಿಧಿಗೆ ಸಂಬಂಧಿಸಿದಂತೆ ಸ್ಥಳೀಯ ಗ್ರಂಥಾಲಯ ಪ್ರಾಧಿಕಾರಕ್ಕೆ, ಬಾಕಿಯಾದ ಹಣಗಳ ವೆಚ್ಚ ಅಥವಾ ವಸೂಲಿಯಲ್ಲಿ ಅಥವಾ ಲೆಕ್ಕ ಪತ್ರಗಳಲ್ಲಿ ಅವರು ಕಾಣಬಹುದಾದಂಥ ಯಾವುದೇ ಮುಖ್ಯ ಅನುಚಿತತೆ ಅಥವಾ ಕ್ರಮ ದೋಷವನ್ನು ವರದಿ ಮಾಡತಕ್ಕದ್ದು;
(ii) ರಾಜ್ಯ ಗ್ರಂಥಾಲಯ ಪ್ರಾಧಿಕಾರ ಮತ್ತು ಸಂಬಂಧಪಟ್ಟ ಸ್ಥಳೀಯ ಗ್ರಂಥಾಲಯ ಪ್ರಾಧಿಕಾರಕ್ಕೆ ಅವರ ಲೆಕ್ಕ ಪರಿಶೋಧನೆಯ ಪ್ರಗತಿಗೆ ಸಂಬಂಧಿಸಿರುವ ಅದು ಅಗತ್ಯವೆಂದು ಭಾವಿಸಬಹುದಾದಂಥ ಮಾಹಿತಿಯನ್ನು ಒದಗಿಸತಕ್ಕದ್ದು;
(iii) ರಾಜ್ಯ ಗ್ರಂಥಾಲಯ ಪ್ರಾಧಿಕಾರ ಮತ್ತು ಸಂಬಂಧಪಟ್ಟ ಸ್ಥಳೀಯ ಗ್ರಂಥಾಲಯ ಪ್ರಾಧಿಕಾರಕ್ಕೆ ನಷ್ಟ ಅಥವಾ ಪೋಲಿಗಾಗಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಜವಾಬ್ದಾರರಾದ ವ್ಯಕ್ತಿಗಳ ಹೆಸರುಗಳೊಂದಿಗೆ ನಿರ್ಲಕ್ಷ್ಯ ಅಥವಾ ದುರ್ನಡತೆಯಿಂದುಂಟಾದ ಸದರಿ ಪ್ರಾಧಿಕಾರಗಳ ಒಡೆತನದಲ್ಲಿರುವ ಅಥವಾ ಅವುಗಳಲ್ಲಿ ನಿಹಿತವಾಗಿರುವ ಹಣ ಅಥವಾ ಇತರ ಸ್ವತ್ತಿನ ಯಾವುದೇ ಅಂಥ ನಷ್ಟ ಅಥವಾ ಪೋಲನ್ನು ವರದಿ ಮಾಡತಕ್ಕದ್ದು; ಮತ್ತು
(iv) ಅನುಕ್ರಮವಾಗಿ ರಾಜ್ಯ ಗ್ರಂಥಾಲಯ ನಿಧಿ ಮತ್ತು ಸ್ಥಳೀಯ ಗ್ರಂಥಾಲಯ ನಿಧಿಯ ಬಗ್ಗೆ ರಾಜ್ಯ ಗ್ರಂಥಾಲಯ ಪ್ರಾಧಿಕಾರ ಮತ್ತು ನಗರ ಅಥವಾ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರಕ್ಕೆ ಲೆಕ್ಕ ಪರಿಶೋಧನೆಯ ಅಂತಿಮ ವಿವರ ಪತ್ರವನ್ನು ಸಂಬಂಧಪಟ್ಟ ರಾಜ್ಯ ಗ್ರಂಥಪಾಲನಿಗೆ ಅದರ ಒಂದು ಪ್ರತಿಯನ್ನು ಹಣಕಾಸು ವರ್ಷವು ಮುಕ್ತಾಯವಾದಂದಿನಿಂದ ಮೂರು ತಿಂಗಳುಗಳ ಅವಧಿಯೊಳಗೆ ಅಥವಾ ಕಾಲಕಾಲಕ್ಕೆ ಸರ್ಕಾರವು ಅಧಿಸೂಚಿಸಬಹುದಾದಂಥ ಇತರ ಅವಧಿಯೊಳಗೆ ಒಪ್ಪಿಸತಕ್ಕದ್ದು.
(5) (i) ರಾಜ್ಯ ಗ್ರಂಥಪಾಲನು, ತಕ್ಷಣವೇ ರಾಜ್ಯ ಗ್ರಂಥಾಲಯ ನಿಧಿಯ ಲೆಕ್ಕ ಪತ್ರಗಳ ಲೆಕ್ಕ ಪರಿಶೋಧಕರು ತೋರಿಸಬಹುದಾದ ಯಾವುವೇ ನ್ಯೂನತೆಗಳು ಅಥವಾ ಕ್ರಮದೋಷಗಳನ್ನು ಪರಿಹರಿಸತಕ್ಕದ್ದು ಮತ್ತು ಅದನ್ನು ಸರ್ಕಾರಕ್ಕೆ ವರದಿ ಮಾಡತಕ್ಕದ್ದು;
(ii) ಸಂಬಂಧಪಟ್ಟ ಮುಖ್ಯ ಗ್ರಂಥಪಾಲನು, ತಕ್ಷಣವೇ, ಲೆಕ್ಕ ಪರಿಶೋಧಕರು ತೋರಿಸಬಹುದಾದ ಯಾವುವೇ ನ್ಯೂನತೆಗಳು ಅಥವಾ ಅಕ್ರಮಗಳನ್ನು ಪರಿಹರಿಸತಕ್ಕುದು ಮತ್ತು ಅದನ್ನು ರಾಜ್ಯ ಗ್ರಂಥಪಾಲನಿಗೆ ಮತ್ತು ಸರ್ಕಾರಕ್ಕೆ ವರದಿ ಮಾಡತಕ್ಕದ್ದು; ಮತ್ತು
(iii) ರಾಜ್ಯ ಗ್ರಂಥಪಾಲನು, 5(ii)ನೇ ಉಪ ನಿಯಮದಲ್ಲಿ, ಉಲ್ಲೇಖಿಸಲಾದ ವರದಿಗಳನ್ನು ಸ್ವೀಕರಿಸಿದ ಮೂರು ತಿಂಗಳೊಳಗಾಗಿ ಲೆಕ್ಕ ಪರಿಶೋಧನೆಯಲ್ಲಿ ಕ್ರಮ ದೋಷಗಳು ಮತ್ತು ವಿಶೇಷ ವೈಶಿಷ್ಟ್ಯಗಳು ಯಾವುವನ್ನಾದರೂ ಗಮನಿಸಿದ್ದರೆ, ಅವುಗಳನ್ನು ವಿಶೇಷವಾಗಿ ಉಲ್ಲೇಖಿಸಿ ವರದಿಗಳ ಕ್ರೋಢೀಕೃತ ಪುನರವಲೋಕನವನ್ನು ಅದರ ಮಾಹಿತಿಗಾಗಿ ಸರ್ಕಾರಕ್ಕೆ ಒಪ್ಪಿಸತಕ್ಕದ್ದು.
(6) ಲೆಕ್ಕ ಪರಿಶೋಧಕರು, ಕಾನೂನಿಗೆ ತದ್ವಿರುದ್ಧವಾದ ಪ್ರತಿಯೊಂದು ಬಾಬನ್ನು, ಮಂಜೂರು ಮಾಡಬಹುದು ಮತ್ತು ಕಾನೂನು ಬಾಹಿರ ಸಂದಾಯವನ್ನು ಮಾಡುವ ಅಥವಾ ಅದನ್ನು ಮಾಡಲು ಅಧಿಕೃತಗೊಳಿಸುವ ವ್ಯಕ್ತಿಯ ಮೇಲೆ ಅದನ್ನು ಅಧಿಭಾರ ಹೊರಿಸಬಹುದು ಮತ್ತು ಆ ವ್ಯಕ್ತಿಯ ನಿರ್ಲಕ್ಷ್ಯತೆ ಅಥವಾ ದುರ್ನಡತೆಯಿಂದಾಗಿ ವಹಿಸಿದ ಯಾವುದೇ ಕೊರತೆಯ ಮೊಬಲಗು, ಲಾಭದಾಯಕವಲ್ಲದ ವೆಚ್ಚದ ನಷ್ಟಕ್ಕಾಗಿ ಅಥವಾ ಆ ವ್ಯಕ್ತಿಯು ಲೆಕ್ಕಕ್ಕೆ ತರಬೇಕಾಗಿದ್ದಂಥ ಆದರೆ ತರದೆ ಇರುವ ಯಾವುದೇ ಮೊತ್ತಕ್ಕಾಗಿ ಜವಾಬ್ದಾರನಾದ ಯಾವನೇ ವ್ಯಕ್ತಿಗೆ ಅದನ್ನು ವಿಧಿಸಬಹುದು ಮತ್ತು ಅಂಥ ಪ್ರತಿಯೊಂದು ಪ್ರಕರಣದಲ್ಲಿ ಅಂಥ ವ್ಯಕ್ತಿಗಳಿಂದ ಬಾಕಿಯಾದ ಮೊಬಲಗನ್ನು ಪ್ರಮಾಣೀಕರಿಸತಕ್ಕದ್ದು.
(7) ಲೆಕ್ಕ ಪರಿಶೋಧಕರು, ಪ್ರತಿಯೊಂದು ನಾಮಂಜೂರಾತಿ, ಅಧಿಭಾರ ಹೊರಿಸುವುದು ಅಥವಾ ವಿಧಿಸುವುದಕ್ಕೆ ಸಂಬಂಧಿಸಿದಂತೆ ಅವರ ತೀರ್ಮಾನಕ್ಕಾಗಿನ ಕಾರಣವನ್ನು ಬರಹದಲ್ಲಿ ತಿಳಿಸತಕ್ಕದ್ದು.
(8) ಈ ಅಧಿನಿಯಮದ ಮೇರೆಗೆ ಲೆಕ್ಕಪರಿಶೋಧಕರು ಯಾವನೇ ವ್ಯಕ್ತಿಯಿಂದ ಬಾಕಿಯಿರುವುದಾಗಿ ಪ್ರಮಾಣೀಕರಿಸಿದ ಪ್ರತಿಯೊಂದು ಮೊತ್ತವನ್ನು ಅಂಥ ವ್ಯಕ್ತಿಯು ಸಂದರ್ಭಾನುಸಾರ ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಅಥವಾ ಸ್ಥಳೀಯ ಗ್ರಂಥಾಲಯ ಪ್ರಾಧಿಕಾರದ ಕಾರ್ಯದರ್ಶಿಯು, ಲೆಕ್ಕ ಪರಿಶೋಧಕರ ತೀರ್ಮಾನವನ್ನು ಅಂಥ ವ್ಯಕ್ತಿಗೆ ತಿಳಿಸಿದ ದಿನಾಂಕದಿಂದ ಹದಿನಾಲ್ಕು ದಿವಸಗಳೊಳಗೆ, ಅವನು ಆ ತೀರ್ಮಾನದ ವಿರುದ್ಧ ಸರ್ಕಾರಕ್ಕೆ ಆ ಅವಧಿಯೊಳಗೆ ಅಪೀಲನ್ನು ಮಾಡಿಕೊಂಡಿದ್ದ ಹೊರತು, ಸಂದಾಯ ಮಾಡತಕ್ಕದ್ದು ಮತ್ತು ಅಂಥ ಮೊತ್ತವನ್ನು ಹಾಗೆ ಸಂದಾಯ ಮಾಡದಿದ್ದರೆ ಅಥವಾ ಅಪೀಲನ್ನು ಮಾಡಿಕೊಂಡ ಮೇಲೆ ಸರ್ಕಾರವು ಬಾಕಿಯಿರುವುದಾಗಿ ಘೋಷಿಸಿದಂಥ ಮೊತ್ತವನ್ನು ಸ್ಥಳೀಯ ಗ್ರಂಥಾಲಯ ಪ್ರಾಧಿಕಾರವು ವಸೂಲು ಮಾಡತಕ್ಕದ್ದು.