(1) ಶಿಕ್ಷಕರ ಸಮರ್ಪಕ ಮರುಹಂಚಿಕೆಗೊಳಿಸುವುದರ ಮೇರೆಗೆ ಶಿಕ್ಷಕ ವರ್ಗಾವಣೆಗಾಗಿ ಅನುಸರಿಸುವ ಆದ್ಯತಾ ಕ್ರಮ.
(2) ಶಿಕ್ಷಕರ ಸಮರ್ಪಕ ಮರುಹಂಚಿಕೆಗೊಳಿಸುವ ಅಂತಿಮ ತಾಲ್ಲೂಕುವಾರು ಪಟ್ಟಿಯಲ್ಲಿರುವ ಶಿಕ್ಷಕರನ್ನು, ತಾಲ್ಲೂಕಿನೊಳಗೆ ಖಾಲಿ ಇರುವ ಹುದ್ದೆಗಳಿಗೆ ಮಾತ್ರ ವರ್ಗಾವಣೆ ಮಾಡತಕ್ಕದ್ದು. ಯಾರೇ ಶಿಕ್ಷಕರು ಖಾಲಿ ಹುದ್ದೆಗೆ ವರ್ಗಾವಣೆಯಾಗಲು ನಿರಾಕರಿಸಿದರೆ ಅಥವಾ ಕೌನ್ಸಿಲಿಂಗ್ನಿಂದ ವಿಮುಖರಾದಲ್ಲಿ, ವರ್ಗಾವಣೆ ಪ್ರಾಧಿಕಾರವು, ಅಂಥ ಶಿಕ್ಷಕರನ್ನು, ಆ ತಾಲ್ಲೂಕಿನ ಕೌನ್ಸಿಲಿಂಗ್ ಪ್ರಕ್ರಿಯೆಯು ಪೂರ್ಣಗೊಂಡ ತರುವಾಯ ಪರ್ಯಾಯ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡತಕ್ಕದ್ದು.
(3) “ಗಂಭೀರ ಖಾಯಿಲೆಗೆ ಒಳಗಾದ ಅಥವಾ ದೈಹಿಕವಾಗಿ ಅಂಗವಿಕಲರಾದ” ಶಿಕ್ಷಕರು ಹೆಚ್ಚುವರಿ ಶಿಕ್ಷಕರಾಗಿ ಗುರುತಿಸಿದ್ದಲ್ಲಿ, ಆಗ ವರ್ಗಾವಣೆ ಪ್ರಾಧಿಕಾರವು, ಅಂಥ ಶಿಕ್ಷಕರನ್ನು ವರ್ಗಾವಣೆ ಮಾಡುವಾಗ ಕೃಪಾಂಕ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳದೆ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಅವರಿಗೆ ಮೊದಲ ಆದ್ಯತೆಯನ್ನು ನೀಡತಕ್ಕದ್ದು.
(4) ತಾಲ್ಲೂಕಿನ ವ್ಯಾಪ್ತಿಯೊಳಗೆ ಶಿಕ್ಷಕರನ್ನು ಶಿಕ್ಷಕರ ಸಮರ್ಪಕ ಮರುಹಂಚಿಕೆಗೊಳಿಸಿದ ತರುವಾಯ, ತಾಲ್ಲೂಕುಗಳಸಿಲ್ಲಿ ಖಾಲಿ ಹುದ್ದೆಗಳು ಲಭ್ಯವಿಲ್ಲದ ಕಾರಣದಿಂದಾಗಿ ಅಧಿಕ ಸಂಖ್ಯೆಯಲ್ಲಿ ಉಳಿದಿರುವ ಶಿಕ್ಷಕರನ್ನು ಸಂಯೋಜಿಸತಕ್ಕದ್ದು ಮತ್ತು ಜಿಲ್ಲೆಗಾಗಿ ಹೊಸ ಆದ್ಯತಾ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು. ಆಗ ಸಂಯೋಜಿತ ಪಟ್ಟಿಯಲ್ಲಿರುವ ಶಿಕ್ಷಕರನ್ನು ಜಿಲ್ಲೆಯ ವ್ಯಾಪ್ತಿಯೊಳಗೆ ಯಾವುದೇ ಖಾಲಿ ಹುದ್ದೆಗೆ ವರ್ಗಾವಣೆ ಮಾಡಬಹುದು.
(5) ಜಿಲ್ಲೆಯ ವ್ಯಾಪ್ತಿಯೊಳಗೆ ಖಾಲಿ ಹುದ್ದೆಗಳು ಲಭ್ಯವಿಲ್ಲದಿದ್ದರೆ, ಆಗ ಅಧಿಕ ಸಂಖ್ಯೆಯ ಶಿಕ್ಷಕರನ್ನು, ಜಿಲ್ಲೆಯ ವ್ಯಾಪ್ತಿಯೊಳಗೆ ಅತಿ ಹೆಚ್ಚಿನ ಪಿಟಿಆರ್ ಅನುಪಾತವನ್ನು ಹೊಂದಿರುವ ಶಾಲೆಗಳಿಗೆ ವರ್ಗಾವಣೆ ಮಾಡತಕ್ಕದ್ದು.