(1) ಪ್ರತಿಯೊಬ್ಬ ನಿಯೋಜಕನು ‘‘ಠ’’ ನಮೂನೆಯಲ್ಲಿ ನಿಯೋಜನಾ ರಿಜಿಸ್ಟರನ್ನು ಇಡತಕ್ಕದ್ದು, ಪರಂತು, ತೆರೆಯುವ ಮತ್ತು ಮುಚ್ಚುವ ವೇಳೆಗಳು ಸಾಮಾನ್ಯವಾಗಿ ಏಕರೂಪದ್ದವುಗಳು ಆಗಿದ್ದರೆ ನಿಯೋಜಕನು ‘ಡ’ ನಮೂನೆ ಅಂತಹ ರಿಜಿಸ್ಟರನ್ನು ಇಡಬಹುದು.
(2) (1)ನೇ ಉಪ-ನಿಯಮದಲ್ಲಿ ಏನೇ ಅಡಕವಾಗಿದ್ದಾಗ್ಯೂ, ನಿಯೋಜಕನು ಸದರಿ ಉಪ- ನಿಯಮದಲ್ಲಿ ಉಪಬಂಧಿಸಿದಂತೆ ರಿಜಿಸ್ಟರನ್ನು ಇಡುವುದಕ್ಕೆ ಬದಲು ಅವನು ಕಾರ್ಯಸಂಸ್ಥೆಯಲ್ಲಿ ನಿಯೋಜಿತರು ಕೆಲಸ ಮಾಡಬೇಕಾದ ದೈನಂದಿನ ವೇಳೆಗಳು ಮತ್ತು ಅವರಿಗೆ ಕೊಡಬೇಕಾದ ವಿಶ್ರಾಂತಿ ಮತ್ತು ಭೋಜನಗಳಿಗಾಗಿನ ಮಧ್ಯಂತರಗಳನ್ನು ನಿರ್ದಿಷ್ಟಪಡಿಸಿ ನೋಟಿಸನ್ನು ಪ್ರದರ್ಶಿಸಬಹುದು ಆ ನೊಟೀಸು ‘‘ಢ’’ ನಮೂನೆಯಲ್ಲಿರತಕ್ಕದ್ದು ಮತ್ತು ಅದನ್ನು ಯಾವ ಮೊದಲನೇ ವಾರದಲ್ಲಿ ಅಂತ ನೊಟೀಸಿನಲ್ಲಿ ಕೆಲಸದ ವೇಳೆಗಳನ್ನು ನಿರ್ದಿಷ್ಟಪಡಿಸತಕ್ಕದೋ ಆ ಮೊದಲನೇ ವಾರದ ನಿಕಟಪೂರ್ವದ ಶನಿವಾರದಂದು ಮುಚ್ಚುವ ವೇಳೆಯನ್ನು ಮೀರದಂತೆ ಪ್ರದರ್ಶಿಸತಕ್ಕದ್ದು ಅದರಲ್ಲಿ ನಿರ್ದಿಷ್ಟಪಡಿಸಿದ ಕೆಲಸದ ವೇಳೆಗಳನ್ನು ಪಾಲಿಸುತ್ತಿರುವವರೆಗೆ ಅದನ್ನು ಪ್ರದರ್ಶಿಸುವುದನ್ನು ಮುಂದುವರೆಸತಕ್ಕದ್ದು.
(3) (2) ನೇ ಉಪ-ನಿಯಮದಲ್ಲಿ ಉಲ್ಲೇಖಿಸಿದ ನೊಟೀಸನ್ನು ನಿಯೋಜಕನು ಪ್ರದರ್ಶಿಸಿರುವಲ್ಲಿ ಅವನು ‘‘ಣ’’ ನಮೂನೆಯಲ್ಲಿ ಕೆಲಸದ ವೇಳೆಗಳ ದಾಖಲೆಯನ್ನು ಇಡತಕ್ಕದ್ದು.
(4) ಪ್ರತಿಯೊಬ್ಬ ನಿಯೋಜಕನೂ ಅವನು ನಿಯೋಜಿಸಿಕೊಂಡ ವ್ಯಕ್ತಿಗಳಿಗೆ ಯಾವ ದಿವಸ ಅಥವಾ ದಿವಸಗಳಂದು ರಜಾ ದಿನವನ್ನು ಕೊಡತಕ್ಕದೋ ಆ ದಿವಸ ಅಥವಾ ದಿವಸಗಳನ್ನು ನಿರ್ದಿಷ್ಟಪಡಿಸಿ ‘‘ತ’’ ನಮೂನೆಯಲ್ಲಿ ನೋಟಿಸನ್ನು ಅವನ ಕಾರ್ಯಸಂಸ್ಥೆಯಲ್ಲಿ ಪ್ರದರ್ಶಿಸತಕ್ಕದ್ದು, ಆ ನೋಟೀಸನ್ನು ಜಾರಿಗೆ ಬರುವಂಥ ಮೊದಲನೇ ವಾರದ ನಿಕಟಪೂರ್ವದ ಶನಿವಾರದಂದು ಅದು ಸಂಬಂಧಪಡುವ ವ್ಯಕ್ತಿಗಳು ಕೆಲಸವನ್ನು ನಿಲ್ಲಿಸುವುದಕ್ಕೆ ಮುಂಚೆ ಪ್ರದರ್ಶಿಸತಕ್ಕದ್ದು.
(5) ಪ್ರತಿಯೊಬ್ಬ ನಿಯೋಜಕನು ಅವನ ಕಾರ್ಯಸಂಸ್ಥೆಯಲ್ಲಿ ಅಧಿನಿಯಮದ ಮತ್ತು ಈ ನಿಯಮಗಳ ಉದ್ದೃತಗಳನ್ನು ಒಳಗೊಂಡಿರುವ ನೋಟೀಸನ್ನು ಇಂಗ್ಲೀಷಿನಲ್ಲಿ ಮತ್ತು ಬಹುಸಂಖ್ಯಾತ ನಿಯೋಜಿತರ ಭಾಷೆಯಲ್ಲಿ ಪ್ರದರ್ಶಿಸತಕ್ಕದ್ದು.
(6) ಈ ನಿಯಮಗಳ ಮೇರೆಗೆ ಪ್ರದರ್ಶಿಸಬೇಕೆಂದು ಅಗತ್ಯಪಡಿಸಿದ ನೋಟೀಸನ್ನು ಅದು ಯಾರನ್ನು ಬಾಧಿಸುತ್ತದೆಯೋ ಆ ಯಾವನೇ ವ್ಯಕ್ತಿಯು ಕೂಡಲೇ ನೋಡಬಹುದಾದ ಮತ್ತು ಓದಬಹುದಾದಂಥ ರೀತಿಯಲ್ಲಿ ಪ್ರದರ್ಶಿಸತಕ್ಕದ್ದು ಮತ್ತು ಅದು ವಿಕೃತಗೊಂಡಾಗಲೆಲ್ಲಾ ಅಥವಾ ಅನ್ಯಥಾ ಸ್ಪಷ್ಟವಾಗಿ ಮತ್ತು ಸ್ಪುಟವಾಗಿರುವುದು ನಿಂತು ಹೋದಾಗಲೆಲ್ಲಾ ಅದನ್ನು ನವೀಕರಿಸತಕ್ಕದ್ದು.
(7) ಈ ನಿಯಮಗಳ ಮೇರೆಗೆ ನಿಯೋಜಕನು ಇಡಬೇಕೆಂದು ಅಗತ್ಯಪಡಿಸಿದಂಥ ಯಾವುದೇ ರಿಜಿಸ್ಟರು ಅಥವಾದಾಖಲೆಯಲ್ಲಿ ಯಾವುದೇ ದಿವಸಕ್ಕೆ ಸಂಬಂಧಿಸಿದಂಥನಮೂದನೆಗಳನ್ನು ಅಂಥ ದಿವಸದಂದು ಮಾಡತಕ್ಕದ್ದು.
(8) ಈ ನಿಯಮಗಳಲ್ಲಿ ಅನ್ಯಥಾ ಉಪಬಂಧಿಸಿರುವಂತೆ ಹೊರತು ಯಾವುದೇ ಕ್ಯಾಲೆಂಡರ್ ವರ್ಷಕ್ಕೆ ಸಂಬಂಧಿಸಿದ ರಿಜಿಸ್ಟರು. ದಾಖಲೆಗಳು ಮತ್ತು ನೋಟೀಸುಗಳನ್ನು ಮುಂದಿನ ಕ್ಯಾಲೆಂಡರ್ ವರ್ಷದ ಕೊನೆಯವರೆಗೆ ಪರಿರಕ್ಷಿಸತಕ್ಕದ್ದು.
(9) ನಿಯೋಜಕನು ಬರಹದಲ್ಲಿ ಸಲ್ಲಿಸಿದ ಯಾವುದೇ ಅರ್ಜಿಯ ಮೇಲೆ ಸರ್ಕಾರಕ್ಕೆ ಅಂಥ ನಿಯೋಜಕನು ಇಟ್ಟುಕೊಂಡು ಬಂದಿರುವ ಯಾವುದೇ ಹಾಜರಿಪಟ್ಟಿ, ರಿಜಿಸ್ಟರು ಅಥವಾ ದಾಖಲೆಯು ಅವನ ಕಾರ್ಯಸಂಸ್ಥೆಯಲ್ಲಿ ನಿಯೋಜಿತರಾದೆಲ್ಲ ಅಥವಾಯಾವನೇ ವ್ಯಕ್ತಿಗೆ ಸಂಬಂಧಿಸಿದಂತೆ ಈ ನಿಯಮದ ಮೇರೆಗೆ ನಿಯಮಿಸಿದ ಯಾವುದೇ ರಿಜಿಸ್ಟರು ದಾಖಲೆ ಅಥವಾ ನೋಟೀಸಿನಲ್ಲಿ ತೋರಿಸಬೇಕೆಂದು ಅಗತ್ಯಪಡಿಸಿದ ವಿವರಗಳನ್ನು ಕೊಡುತ್ತದೆ ಎಂದು ಮನದಟ್ಟಾದರೆ ರಾಜ್ಯ ಸರ್ಕಾರವು ಬರಹದಲ್ಲಿನ ಆದೇಶದ ಮೂಲಕ ಅಂಥ ಹಾಜರಿಪಟ್ಟಿ, ರಿಜಿಸ್ಟರು ಅಥವಾದಾಖಲೆಯನ್ನು ಸಂದರ್ಭಾನುಸಾರ ಅಂಥ ರಿಜಿಸ್ಟರು ದಾಖಲೆ ಅಥವಾನೋಟೀಸಿನ ಬದಲಾಗಿ ಅದಕ್ಕೆ ಹೋಲುವಷ್ಟರ ಮಟ್ಟಿಗೆ ಇಟ್ಟುಕೊಂಡು ಬರತಕ್ಕದ್ದೆಂದು, ನಿರ್ದೇಶಿಸಬಹುದು.
(10) (5)ನೇ ಉಪ ನಿಯಮದಲ್ಲಿ ಅನ್ಯಥಾ ಉಪಬಂಧಿಸಿರುವಂತೆ ಹೊರತು, ಈ ನಿಯಮಗಳ ಮೇರೆಗೆ ಇಟ್ಟುಕೊಂಡು ಬರಬೇಕೆಂದು, ಪ್ರದರ್ಶಿಸಬೇಕೆಂದು ಅಥವಾ ಕೊಡಬೇಕೆಂದು ಅಗತ್ಯ ಪಡಿಸಿದ ಎಲ್ಲಾ ರಿಜಿಸ್ಟರುಗಳು, ದಾಖಲೆಗಳು, ಹಾಜರಿಪಟ್ಟಿಗಳು ಮತ್ತು ನೋಟೀಸುಗಳು ಇಂಗ್ಲಿಷಿನಲ್ಲಿ ಅಗಲಿ ಅಥವಾ ಕನ್ನಡದಲ್ಲಿ ಅಗಲಿ ಇರತಕ್ಕದ್ದು.
(11) ಪ್ರತಿಯೊಬ್ಬ ನಿಯೋಜಕನು ಒಂದು ಸಂದರ್ಶನ ಪುಸ್ತಕವನ್ನು ಇಟ್ಟುಕೊಂಡು ಬರತಕ್ಕದ್ದು ಅದರಲ್ಲಿ ಆ ಕಾರ್ಯಸಂಸ್ಥೆಗೆ ಸಂದರ್ಶನ ಕೊಡುವ ಪರಿಶೀಲಕನು ಅವನ ಪರಿಶೀಲನೆಯ ಕಾಲದಲ್ಲಿ ಬೆಳಕಿಗೆ ಬರಬಹುದಾದ ಯಾವುದೇ ನ್ಯೂನತೆಗಳ ಬಗ್ಗೆ ಅವನ ಷರಾಗಳನ್ನು ದಾಖಲು ಮಾಡಬಹುದು ಮತ್ತು ಅದನ್ನು ಪರಿಶೀಲಕನು ಹಾಗೆ ಮಾಡಲು ಅಗತ್ಯ ಪಡಿಸಿದಾಗಲೆಲ್ಲಾ ಹಾಜರುಪಡಿಸಕ್ಕದ್ದು.
ಕಾರ್ಯಸಂಸ್ಥೆಯ ವ್ಯಾಪಾರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಉಪಯೋಗಿಸಿದ ಕಚೇರಿ ಉಗ್ರಾಣ, ಗೋದಾಮು, ಸರಕುಗಳ ಉಗ್ರಾಣ ಅಥವಾ ಕೆಲಸದ ಸ್ಥಳವು ಆ ಕಾರ್ಯಸಂಸ್ಥೆಯ ಆವರಣವಲ್ಲದ ಇತರ ಆವರಣದಲ್ಲಿ ಇರುವಲ್ಲಿ ಈ ಅಧಿನಿಯಮ ಮತ್ತು ಈ ನಿಯಮಗಳ ಮೇರೆಗೆ ಇಟ್ಟುಕೊಂಡು ಬರಬೇಕೆಂದು ಪ್ರದರ್ಶಿಸಬೇಕೆಂದು ಅಥವಾ ಕೊಡಬೇಕೆಂದು ಅಗತ್ಯಪಡಿಸಿದ ಎಲ್ಲಾ ರಿಜಿಸ್ಟರುಗಳು, ದಾಖಲೆಗಳು, ಹಾಜರಿ ಪಟ್ಟಿಗಳು, ಸಂದರ್ಶನ ಪುಸ್ತಕ ಮತ್ತು ನೋಟಿಸುಗಳನ್ನು ಅಂತಹ ಕಚೇರಿ, ಉಗ್ರಾಣ, ಗೋದಾಮು, ಸರಕುಗಳ ಉಗ್ರಾಣ ಅಥವಾ ಕೆಲಸದ ಸ್ಥಳಕ್ಕೆ ಸಂಬಂಧಿಸಿದಂತೆ ಮತ್ತು ಅಲ್ಲಿ ಪ್ರತ್ಯೇಕವಾಗಿ ಹಾಗೆ ಇಟ್ಟುಕೊಂಡು ಬರತಕ್ಕದ್ದು, ಪ್ರದರ್ಶಿಸತಕ್ಕದ್ದು ಅಥವಾ ಕೊಡತಕ್ಕದ್ದು.