(1) ಅರ್ಜಿಯನ್ನು ಯುಕ್ತ ಅಧಿಕಾರಿಗೆ ಕಳುಹಿಸತಕ್ಕದ್ದು ಮತ್ತು ಆ ಅಧಿಕಾರಿಯು ಅರ್ಜಿಯನ್ನು ಮತ್ತು ಲಗತ್ತಿಸಲಾದ ದಸ್ತಾವೇಜುಗಳನ್ನು ಪರೀಕ್ಷಿಸತಕ್ಕದ್ದು ಮತ್ತು ಅವುಗಳು ಕ್ರಮ ಬದ್ಧವಾಗಿರುವುದು ಕಂಡುಬಂದರೆ ಅರ್ಜಿಯನ್ನು ಸಲ್ಲಿಸಿದ ದಿನಾಂಕದಿಂದ ಮೂರು ಕೆಲಸದ ದಿನಗಳ ಒಳಗಾಗಿ ಅರ್ಜಿದಾರನಿಗೆ, ನೋಂದಣಿಯ ಮಂಜೂರಾತಿಯನ್ನು ಅನುಮೋದಿಸತಕ್ಕದ್ದು.
(2) ನಿಯಮ (8)ರ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯು, ಯಾವುದೇ ಮಾಹಿತಿಯ ರೂಪದಲ್ಲಿಯಾಗಲಿ ಅಥವಾ ಸದರಿ ನಿಯಮಗಳ ಅಡಿಯಲ್ಲಿ ಒದಗಿಸಲು ಅಗತ್ಯವಿರುವ ಯಾವುದೇ ದಸ್ತವೇಜಿನ ರೂಪದಲ್ಲಿಯಾಗಲಿ ನ್ಯೂನ್ಯತೆಯನ್ನು ಹೊಂದಿರುವುದು ಕಂಡುಬಂದಲ್ಲಿ, ಅಥವಾ ಆ ಅರ್ಜಿಯಲ್ಲಿ ಅಥವಾ ಅದರೊಂದಿಗೆ ಒದಗಿಸಿದ ದಸ್ತಾವೇಜುಗಳಲ್ಲಿ ಒದಗಿಸಲಾದ ಯಾವುದೇ ಮಾಹಿತಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷೀಕರಣವನ್ನು ಯುಕ್ತ ಅಧಿಕಾರಿಯು ಅಗತ್ಯಪಡಿಸಿದ್ದಲ್ಲಿ, ಅವನು ಅರ್ಜಿಯನ್ನು ಸಲ್ಲಿಸಿದ ದಿನಾಂಕದಿಂದ ಮೂರು ಕೆಲಸದ ದಿನಗಳ ಒಳಗಾಗಿ ಅರ್ಜಿದಾರನಿಗೆ ನಮೂನೆ ಜಿಎಸ್ಟಿ ಆರ್ಇಜಿ-03ರಲ್ಲಿ ಒಂದು ಸೂಚನಾಪತ್ರವನ್ನು ವಿದ್ಯುನ್ಮಾನ ರೀತಿಯಲ್ಲಿ ನೀಡತಕ್ಕದ್ದು ಮತ್ತು ಅರ್ಜಿದಾರನು ಅಂಥ ಸೂಚನಪತ್ರವನ್ನು ಸ್ವೀಕರಿಸಿದ ದಿನಾಂಕದಿಂದ ಏಳು ಕೆಲಸದ ದಿನಗಳ ಒಳಗಾಗಿ, ನಮೂನೆ ಜಿಎಸ್ಟಿ ಆರ್ಇಜಿ-04ರಲ್ಲಿ ಅಂಥ ಸ್ಪಷ್ಟೀಕರಣ, ಮಾಹಿತಿ ಅಥವಾ ದಸ್ತಾವೇಜುಗಳನ್ನು ವಿದ್ಯುನ್ಮಾನ ರೀತಿಯಲ್ಲಿ ಒದಗಿಸತಕ್ಕದ್ದು.
ವಿವರಣೆ.- ಈ ಉಪನಿಯಮಗಳ ಉದ್ದೇಶಗಳಿಗಾಗಿ, “ಸ್ಪಷ್ಟೀಕರಣ”ಎಂಬ ಪದಾವಳಿಯುನಮೂನೆ ಜಿಎಸ್ಟಿ ಆರ್ಇಜಿ-01ರ ಭಾಗ-ಎ ನಲ್ಲಿ ಘೋಷಿಸಲಾದ ಶಾಶ್ವತ ಖಾತೆ ಸಂಖ್ಯೆ, ರಾಜ್ಯ, ಮೊಬೈಲ್ ಸಂಖ್ಯೆ ಮತ್ತು ಮಿಂಚೋಲೆ ವಿಳಾಸ ಇವುಗಳನ್ನು ಹೊರತುಪಡಿಸಿ ನೊಂದಣಿಯ ಅರ್ಜಿಯಲ್ಲಿ ಘೋಷಿಸಲಾದ ವಿವರಗಳ ಮಾರ್ಪಾಟು ಅಥವಾ ಸರಿಪಡಿಸುವಿಕೆಯನ್ನು ಒಳಗೊಳ್ಳುತ್ತದೆ.
(3) ಅರ್ಜಿದಾರನು ಒದಗಿಸಿದ ಸ್ಪಷ್ಟೀಕರಣ, ಮಾಹಿತಿ, ಅಥವಾ ದಸ್ತಾವೇಜುಗಳಿಂದ ಯುಕ್ತ ಅಧಿಕಾರಿಯು ತೃಪ್ತಿಹೊಂದಿದ್ದಲ್ಲಿ, ಅವನು ಅಂಥ ಸ್ಪಷ್ಟೀಕರಣ, ಮಾಹಿತಿ, ಅಥವಾ ದಸ್ತಾವೇಜುಗಳನ್ನು ಸ್ವೀಕರಿಸಿದ ದಿನಾಂಕದಿಂದ ಏಳು ಕೆಲಸದ ದಿನಗಳ ಒಳಗಾಗಿ ಅರ್ಜಿದಾರನಿಗೆ ನೋಂದಣಿಯ ಮಂಜೂರಾತಿಯನ್ನು ಅನುಮೋದಿಸಬಹುದು.
(4) ಉಪನಿಯಮ (2)ರ ಅಡಿಯಲ್ಲಿ ನೀಡಲಾದ ಸೂಚನಾಪತ್ರಕ್ಕೆ ಪ್ರತಿಯಾಗಿಅರ್ಜಿದಾರನು ಯಾವುದೇ ಉತ್ತರವನ್ನು ನೀಡದಿದ್ದಲ್ಲಿ, ಅಥವಾ ಒದಗಿಸಲಾದ ಸ್ಪಷ್ಟೀಕರಣ, ಮಾಹಿತಿ, ಅಥವಾ ದಸ್ತಾವೇಜುಗಳ ಬಗ್ಗೆ ಯುಕ್ತ ಅಧಿಕಾರಿಯು ತೃಪ್ತಿಯನ್ನು ಹೊಂದಿಲ್ಲದಿದ್ದಲ್ಲಿ, ಅವನು, ಲಿಖಿತದಲ್ಲಿ ದಾಖಲಿಸಬೇಕಾದ ಕಾರಣಗಳಿಗಾಗಿ, ಅಂಥ ಅರ್ಜಿಯನ್ನು ತಿರಸ್ಕರಿಸತಕ್ಕದ್ದು ಮತ್ತು ಅರ್ಜಿದಾರನಿಗೆ ನಮೂನೆ ಜಿಎಸ್ಟಿ ಆರ್ಇಜಿ-05ರಲ್ಲಿ ವಿದ್ಯುನ್ಮಾನ ರೀತಿಯಲ್ಲಿ ತಿಳಿಸತಕ್ಕದ್ದು.
(5) ಯುಕ್ತ ಅಧಿಕಾರಿಯು,-
(ಎ) ಅರ್ಜಿಯನ್ನು ಸಲ್ಲಿಸಿದ ದಿನಾಂಕದಿಂದ ಮೂರು ಕೆಲಸದ ದಿನಗಳ ಒಳಗಾಗಿ, ಅಥವಾ
(ಬಿ) ಉಪನಿಯಮ (2)ರ ಅಡಿಯಲ್ಲಿ ಅರ್ಜಿದಾರನಿಂದ ಒದಗಿಸಲಾದ ಸ್ಪಷ್ಟೀಕರಣ, ಮಾಹಿತಿ, ಅಥವಾ ದಸ್ತಾವೇಜುಗಳನ್ನು ಸ್ವೀಕರಿಸಿದ ದಿನಾಂಕದಿಂದ ಏಳು ಕೆಲಸದ ದಿನಗಳ ಒಳಗಾಗಿ, -ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ವಿಫಲನಾದಲ್ಲಿ ನೋಂದಣಿಯ ಮಂಜುರಾತಿಯ ಅರ್ಜಿಯನ್ನು ಅನುಮೋದನೆ ಮಾಡಲಾಗಿದೆ ಎಂದು ಪರಿಭಾವಿಸತಕ್ಕದ್ದು.