(1)ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಪ್ರಕರಣ 35ರ ಉಪಪ್ರಕರಣ (1)ರಲ್ಲಿ ನಮೂದಿಸಿದ ವಿವರಗಳಿಗೆ ಹೆಚ್ಚವರಿಯಾಗಿ, ಆಮದು ಮಾಡಿಕೊಂಡ ಅಥವಾ ರಫ್ತಾ ಮಾಡಿದ ಸರಕು ಅಥವಾ ಸೇವೆಗಳ ಅಥವಾ ಹಿಮ್ಮುಖ ವಿಧಿಸುವಿಕೆಯ ಆಧಾರದಲ್ಲಿ ತೆರಿಗೆ ಸಂದಾಯವನ್ನು ಆಕರ್ಷಿಸಿರುವ ಪೂರೈಕೆಗಳ ನಿಜವಾದ ಮತ್ತು ಸರಿಯಾದ ಲೆಕ್ಕವನ್ನು, ಬೆಲೆಪಟ್ಟಿಗಳು, ಪೂರೈಕೆ ಬಿಲ್ಲುಗಳು, ಬಟವಾಡೆ ಚಲನ್ಗಳು, ಜಮೆ ಚೀಟಿಗಳು, ಖರ್ಚು ಚೀಟಿಗಳು, ರಸೀದಿ ಮೋಚರ್ಗಳು, ಸಂದಾಯ ಮೋಚರ್ಗಳು ಮತ್ತು ಮರುಪಾವತಿ ಮೋಚರ್ಗಳನ್ನು ಒಳಗೊಂಡಂತೆ, ಸಂಬಂಧಿತ ದಸ್ತಾವೇಜುಗಳೊಂದಿಗೆ ಇಡತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು.
(2) ಪ್ರಕರಣ 10ರ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡುವ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿದ, ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಆತನಿಂದ ಸ್ವೀಕೃತವಾದ ಮತ್ತು ಪೂರೈಕೆ ಮಾಡಲಾದ ಸರಕುಗಳಿಗೆ ಸಂಬಂಧಿಸಿದಂತೆ ದಾಸ್ತಾನಿನ ಲೆಕ್ಕಪತ್ರಗಳನ್ನು ನಿರ್ವಹಿಸತಕ್ಕದ್ದು, ಮತ್ತು ಅಂಥ ಲೆಕ್ಕಪತ್ರಗಳು, ಪ್ರಾರಂಭಿಕ ಶಿಲ್ಕು, ಸ್ವೀಕೃತಿ, ಪೂರೈಕೆ, ಕಳೆದುಹೋದ, ಕಳ್ಳತನವಾದ, ನಾಶಗೊಂಡ, ಲೆಕ್ಕದಿಂದ ತೆಗೆದುಹಾಕಿದ ಅಥವಾ ಉಡುಗೊರೆಯಾಗಿ ಅಥವಾ ಉಚಿತ ಮಾದರಿಗಳಾಗಿ ವಿಲೇ ಮಾಡಲಾದ ಸರಕುಗಳು ಮತ್ತು ಕಚ್ಚಾ ಸಾಮಗ್ರಿಗಳು, ಸಿದ್ಧಪಡಿಸಿದ ಸರಕುಗಳು, ಅವುಗಳ ರದ್ಧಿ ಮತ್ತು ತ್ಯಾಜ್ಯವನ್ನು ಒಳಗೊಂಡಂತೆ ದಾಸ್ತಾನಿನ ಉಳಿಕೆಯ ವಿವರಗಳನ್ನು ಒಳಗೊಂಡಿರತಕ್ಕದ್ದು.
(3) ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಮುಂಗಡಗಳ ಸ್ವೀಕೃತಿ, ಸಂದಾಯ ಮತ್ತು ಅದಕ್ಕಾಗಿ ಮಾಡಿದ ಹೊಂದಾಣಿಕೆಗಳ ಲೆಕ್ಕಗಳನ್ನು ಪ್ರತ್ಯೇಕವಾಗಿ ಇಡತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು.
(4) ಪ್ರಕರಣ 10ರ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡುವ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿದ, ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು,ಯಾವುದೇ ತೆರಿಗೆ ಅವಧಿಯಲ್ಲಿ ನೀಡಿದ ಅಥವಾ ಸ್ವೀಕರಿಸಿದ ತೆರಿಗೆ ಬೆಲೆಪಟ್ಟಿಗಳ, ಜಮೆ ಚೀಟಿಗಳು, ಖರ್ಚು ಚೀಟಿಗಳ, ಬಟವಾಡೆ ಚಲನ್ನ ರಿಜಿಸ್ಟರ್ ಜೊತೆಯಲ್ಲಿ ಸಂದಾಯ ಮಾಡಬೇಕಾದ ತೆರಿಗೆ (ಪ್ರಕರಣ 9ರ ಉಪಪ್ರಕರಣ (3) ಮತ್ತು ಉಪಪ್ರಕರಣ (4)ರ ಉಪಬಂಧಗಳಿಗೆ ಅನುಸಾರವಾಗಿ ಸಂದಾಯ ಮಾಡಬೇಕಾದ ತೆರಿಗೆಯನ್ನು ಒಳಗೊಂಡಂತೆ), ಸಂಗ್ರಹಿಸಿದ ಮತ್ತು ಸಂದಾಯ ಮಾಡಿದ ತೆರಿಗೆ, ಹೂಡುವಳಿ ತೆರಿಗೆ, ಉಪಯೋಗಿಸಿದ ಹೂಡುವಳಿ ತೆರಿಗೆ ಜಮೆಯ ವಿವರಗಳನ್ನು ಒಳಗೊಂಡಿರುವ ಲೆಕ್ಕವನ್ನು ಇಡತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು.
(5) ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು,-
(ಎ) ಅಧಿನಿಯಮದ ಅಡಿಯಲ್ಲಿ ತೆರಿಗೆಯನ್ನು ವಿದಿಸಬಹುದಾದ ಸರಕು ಅಥವಾ ಸೇವೆಗಳನ್ನು ಅವನು ಯಾರಿಂದ ಸ್ವೀಕರಿಸಿರುವನೋ ಆ ಪೂರೈಕೆದಾರರ ಹೆಸರಗಳು ಮತ್ತು ಸಂಪೂರ್ಣ ವಿಳಾಸಗಳು;
(ಬಿ) ಈ ಅಧ್ಯಾಯದ ಉಪಬಂಧಗಳ ಅಡಿಯಲ್ಲಿ ಅಗತ್ಯಪಡಿಸಿರುವಾಗ, ಅವನು ಯಾರಿಗೆ ಸರಕು ಅಥವಾ ಸೇವೆಗಳನ್ನು ಪೂರೈಕೆ ಮಾಡಿರವರೋ ಆ ವ್ಯಕ್ತಿಗಳ ಹೆಸರುಗಳು ಮತ್ತು ಸಂಪೂರ್ಣ ವಿಳಾಸಗಳು;
(ಸಿ) ಸಾಗಾಣಿಕೆಯ ಸಮಯದಲ್ಲಿ ದಾಸ್ತಾನು ಮಾಡಿರುವ ಸರಕುಗಳನ್ನು ಒಳಗೊಂಡಂತೆ, ಆತನು ಸರಕುಗಳನ್ನು ಎಲ್ಲಿ ದಾಸ್ತಾನು ಮಾಡಿರವನೋ, ಆ ಸ್ಥಳದ ಸಂಪೂರ್ಣ ವಿಳಾಸ, ಅದರಲ್ಲಿ ಸಂಗ್ರಹ ಮಾಡಿರುವ ದಾಸ್ತಾನಿನ ವಿವರಗಳನ್ನು, - ಇಡತಕ್ಕದ್ದು.
(6) ಉಪನಿಯಮ (5)ರ ಅಡಿಯಲ್ಲಿ ಘೋಷಿಸಿದವುಗಳನ್ನು ಹೊರತುಪಡಿಸಿಇತರೇ ಯಾವುದೇ ಸ್ಥಳ(ಗಳು)ದಲ್ಲಿ ಯಾವುದೇ ತೆರಿಗೆದಾಯಕ ಸರಕುಗಳನ್ನು ಯಾವುದೇ ಸಿಂಧುವಾದ ದಸ್ತಾವೇಜುಗಳಿಲ್ಲದೆ, ದಾಸ್ತಾನು ಮಾಡಿರುವುದು ಕಂಡುಬಂದರೆ, ಯುಕ್ತ ಅಧಿಕಾರಿಯು, ಅಂಥ ಸರಕುಗಳು ನೋಂದಾಯಿತ ವ್ಯಕ್ತಿಯು ಪೂರೈಕೆ ಮಾಡಿದ್ದರೇ ಹೇಗೋ ಹಾಗೆಯೇ ಅಂಥ ಸರಕುಗಳ ಮೇಲೆ ಸಂದಾಯ ಮಾಡಬೇಕಾದ ತೆರಿಗೆಯ ಮೊತ್ತವನ್ನು ನಿರ್ಧರಿಸತಕ್ಕದ್ದು.
(7) ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ನೋಂದಣಿ ಪ್ರಮಾಣ ಪತ್ರದಲ್ಲಿ ನಮೂದಿಸಲಾದ ತನ್ನ ಪ್ರಧಾನ ವ್ಯವಹಾರದ ಸ್ಥಳದಲ್ಲಿ ಲೆಕ್ಕಪತ್ರದ ಪುಸ್ತಕಗಳನ್ನು ಮತ್ತು ವ್ಯವಹಾರದ ಹೆಚ್ಚುವರಿ ಸ್ಥಳಕ್ಕೆ ಸಂಬಂಧಿಸಿದ ಲೆಕ್ಕಪತ್ರದ ಪುಸ್ತಕಗಳನ್ನು ಇಡತಕ್ಕದ್ದು ಮತ್ತು ಅಂಥ ಲೆಕ್ಕಪತ್ರದ ಪುಸ್ತಕಗಳು ಯಾವುದೇ ವಿದ್ಯುನ್ಮಾನ ಸಾಧನಗಳಲ್ಲಿ ಸಂಗ್ರಹಿಸಿದ ಯಾವುದೇ ವಿದ್ಯುನ್ಮಾನ ರೂಪದ ದತ್ತಾಂಶವನ್ನು ಒಳಗೊಂಡಿರತಕ್ಕದ್ದು.
(8) ರಿಜಿಸ್ಟ್ರರ್ಗಳಲ್ಲಿ, ಲೆಕ್ಕಪತ್ರಗಳಲ್ಲಿ ಮತ್ತು ದಸ್ತಾವೇಜುಗಳಲ್ಲಿನ ಯಾವುದೇ ನಮೂದನ್ನು, ಅಳಿಸುವುದು, ಹೊಡೆದುಹಾಕುವುದು ಅಥವಾ ತಿದ್ದಿ ಬರೆಯುವುದನ್ನು ಮಾಡತಕ್ಕದ್ದಲ್ಲ ಮತ್ತು ಕೈತಪ್ಪಿನ ಸ್ವರೂಪದಲ್ಲಿರುವವುಗಳನ್ನು ಹೊರತುಪಡಿಸಿದ ಎಲ್ಲಾ ತಪ್ಪಾಗಿರುವ ನಮೂದುಗಳನ್ನು ಧೃಢೀಕರಣದ ಮೂಲಕಹೊಡೆದುಹಾಕತಕ್ಕದು ಮತ್ತು ಸರಿಯಾದ ನಮೂದನ್ನು ದಾಖಲಿಸತಕ್ಕದ್ದು ಮತ್ತು ರಿಜಿಸ್ಟರ್ಗಳು ಮತ್ತು ಇತರೇ ದಸ್ತಾವೇಜುಗಳನ್ನು ವಿದ್ಯುನ್ಮಾನ ರೀತಿಯಲ್ಲಿ ನಿರ್ವಹಿಸಲಾಗಿದ್ದಲ್ಲಿ, ಪ್ರತಿಯೊಂದು ನಮೂದನ್ನು ಎಡಿಟ್ ಮಾಡಿದ ಮತ್ತು ಡಿಲೀಟ್ ಮಾಡಿದ ಲಾಗ್ನ್ನು ನಿರ್ವಹಿಸತಕ್ಕದ್ದು.
(9) ನೋಂದಾಯಿತ ವ್ಯಕ್ತಿಯುಕೈಯಿಂದ ನಿರ್ವಹಿಸಿದ ಲೆಕ್ಕ ಪುಸ್ತಕಗಳ ಪ್ರತಿ ಸಂಪುಟವು ಕ್ರಮ ಸಂಖ್ಯೆಯನ್ನು ಹೊಂದಿರತಕ್ಕದ್ದು.
(10) ನೋಂದಣಿ ಪ್ರಮಾಣ ಪತ್ರದಲ್ಲಿ ನಮೂದಿಸಿರುವುಗಳನ್ನು ಹೊರತುಪಡಿಸಿದ ಯಾವುದೇ ಸ್ಥಳಗಳಲ್ಲಿ, ಒಬ್ಬ ನೋಂದಾಯಿತ ವ್ಯಕ್ತಿಗೆ ಸೇರಿದ ಯಾವುದೇ ದಸ್ತಾವೇಜುಗಳು, ರಿಜಿಸ್ಟರ್ಗಳು, ಅಥವಾ ಯಾವುದೇ ಲೆಕ್ಕಪತ್ರ ಪುಸ್ತಗಳು ಕಂಡಬಂದರೆ, ಅನ್ಯಥಾ ಸಾಬೀತುಪಡಿಸಿದ ಹೊರತು, ಅವುಗಳು ಸದರಿ ನೋಂದಾಯಿತ ವ್ಯಕ್ತಿಯಿಂದ ನಿರ್ವಹಿಸಲ್ಪಟ್ಟಿವೆ ಎಂದು ಭಾವಿಸತಕ್ಕದ್ದು.
(11) ಪ್ರಕರಣ 2ರ ಖಂಡ (5)ರಲ್ಲಿ ಉಲ್ಲೇಖಿಸಲಾದ ಪ್ರತಿಯೊಬ್ಬ ಏಜೆಂಟನು ಕೆಳಕಂಡವುಗಳನ್ನು ನಿರೂಪಿಸುವ ಲೆಕ್ಕಪತ್ರಗಳನ್ನು ನಿರ್ವಹಿಸತಕ್ಕದ್ದು,-
(ಎ) ಅಂಥ ಪ್ರಧಾನ ಕರ್ತನ ಪರವಾಗಿ ಪ್ರತ್ಯೇಕವಾಗಿ ಸರಕು ಅಥವಾ ಸೇವೆಗಳನ್ನು ಸ್ವೀಕರಿಸುವುದಕ್ಕಾಗಿ ಅಥವಾ ಪೂರೈಕೆ ಮಾಡುವುದಕ್ಕಾಗಿ ಪ್ರತಿಯೊಬ್ಬ ಪ್ರಧಾನ ಕರ್ತನಿಂದ ಆತನು ಸ್ವೀಕರಿಸುವ ಪ್ರಾಧಿಕರಣದ ವಿವರಗಳು;
(ಬಿ) ಪ್ರತಿಯೊಬ್ಬ ಪ್ರಧಾನ ಕರ್ತನ ಪರವಾಗಿ ಸ್ವೀಕರಿಸಿದ ಸರಕು ಅಥವಾ ಸೇವೆಗಳ ವಿವರಣೆ, ಮೌಲ್ಯ ಮತ್ತು ಪ್ರಮಾಣವನ್ನು (ಅನ್ವಯವಾಗುವಲ್ಲೆಲ್ಲ) ಒಳಗೊಂಡ ವಿವರಗಳು;
(ಸಿ) ಪ್ರತಿಯೊಬ್ಬ ಪ್ರಧಾನ ಕರ್ತನ ಪರವಾಗಿ ಪೂರೈಕೆ ಮಾಡಿದ ಸರಕು ಅಥವಾ ಸೇವೆಗಳ ವಿವರಣೆ, ಮೌಲ್ಯ ಮತ್ತು ಪ್ರಮಾಣವನ್ನು (ಅನ್ವಯವಾಗುವಲ್ಲೆಲ್ಲ) ಒಳಗೊಂಡ ವಿವರಗಳು;
(ಡಿ) ಪ್ರತಿಯೊಬ್ಬ ಪ್ರಧಾನ ಕರ್ತನಿಗೆ ಒದಗಿಸಿದ ಲೆಕ್ಕಪತ್ರಗಳ ವಿವರಗಳು; ಮತ್ತು
(ಇ) ಪ್ರತಿಯೊಬ್ಬ ಪ್ರಧಾನ ಕರ್ತನ ಪರವಾಗಿ ಮಾಡಿದ ಸರಕು ಅಥವಾ ಸೇವೆಗಳ ಸ್ವೀಕೃತಿ ಅಥವಾ ಪೂರೈಕೆಯ ಮೇಲೆ ಸಂದಾಯ ಮಾಡಿದ ತೆರಿಗೆ.
(12) ಸರಕುಗಳನ್ನು ಉತ್ಪಾದಿಸುತ್ತಿರುವ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಉತ್ಪಾದನೆಯಲ್ಲಿ ಬಳಸಿದ ಕಚ್ಚಾ ಸಾಮಗ್ರಿಗಳ ಮತ್ತು ಸೇವೆಗಳ ಪರಿಮಾಣಾತ್ಮಕ ವಿವರಗಳು ಮತ್ತು ಅವುಗಳ ತ್ಯಾಜ್ಯ ಮತ್ತು ಉಪ ಉತ್ಪನ್ನಗಳನ್ನು ಒಳಗೊಂಡಂತೆ ಹಾಗೆ ಉತ್ಪಾದನೆ ಮಾಡಲಾದ ಸರಕುಗಳ, ಪರಿಮಾಣಾತ್ಮಕ ವಿವರಗಳನ್ನು ತೋರಿಸುವ ಮಾಸಿಕ ಉತ್ಪಾದನಾ ಲೆಕ್ಕಪತ್ರಗಳನ್ನು ನಿರ್ವಹಿಸತಕ್ಕದ್ದು.
(13) ಸೇವೆಗಳನ್ನು ಪೂರೈಕೆ ಮಾಡುತ್ತಿರುವ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಸೇವೆಗಳನ್ನು ಒದಗಿಸುವುದರಲ್ಲಿ ಬಳಸಿದ ಕಚ್ಚಾ ಸರಕುಗಳ ಪರಿಮಾಣಾತ್ಮಕ ವಿವರಗಳು ಮತ್ತು ಬಳಕೆ ಮಾಡಿದ ಹೂಡುವಳಿ ಸೇವೆಗಳು ಮತ್ತು ಪೂರೈಕೆ ಮಾಡಿದ ಸೇವೆಗಳ ವಿವರಗಳನ್ನು ತೋರಿಸುವ ಲೆಕ್ಕಪತ್ರಗಳನ್ನು ನಿರ್ವಹಿಸತಕ್ಕದ್ದು.
(14) ಗುತ್ತಿಗೆ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಕೆಳಕಂಡವುಗಳನ್ನು ತೋರಿಸುವ ಪ್ರತ್ಯೇಕವಾದ ಲೆಕ್ಕಪತ್ರಗಳನ್ನು ನಿರ್ವಹಿಸತಕ್ಕದ್ದು-
(ಎ) ಯಾರ ಪರವಾಗಿ ಗುತ್ತಿಗೆ ಕಾಮಗಾರಿಯನ್ನು ನಿರ್ವಹಿಸಲಾಗಿದೆಯೋ ಆ ವ್ಯಕ್ತಿಗಳ ಹೆಸರಗಳು ಮತ್ತು ವಿಳಾಸಗಳು;
(ಬಿ) ಗುತ್ತಿಗೆ ಕಾಮಗಾರಿಗಾಗಿ ಸ್ವೀಕರಿಸಿದ ಸರಕು ಅಥವಾ ಸೇವೆಗಳ ವಿವರಣೆ, ಮೌಲ್ಯ ಮತ್ತು ಪ್ರಮಾಣವನ್ನು (ಅನ್ವಯವಾಗುವಲ್ಲೆಲ್ಲ);
(ಸಿ) ಗುತ್ತಿಗೆ ಕಾಮಗಾರಿಯಲ್ಲಿ ಬಳಕೆ ಮಾಡಿದ ಸರಕು ಅಥವಾ ಸೇವೆಗಳ ವಿವರಣೆ, ಮೌಲ್ಯ ಮತ್ತು ಪ್ರಮಾಣವನ್ನು (ಅನ್ವಯವಾಗುವಲ್ಲೆಲ್ಲ);
(ಡಿ) ಪ್ರತಿ ಗುತ್ತಿಗೆ ಕಾಮಗಾರಿಗೆ ಸಂಬಂಧಿಸಿದಂತೆ ಸ್ವೀಕರಿಸಿದ ಸಂದಾಯದ ವಿವರಗಳು; ಮತ್ತು
(ಇ) ಯಾರಿಂದ ಸರಕು ಅಥವಾ ಸೇವೆಗಳನ್ನು ಸ್ವೀಕರಿಸಲಾಗಿದೆಯೋ ಆ ಪೂರೈಕೆದಾರರ ಹೆಸರಗಳು ಮತ್ತು ವಿಳಾಸಗಳು;
(15) ಈ ಅಧ್ಯಾಯದ ಉಪಬಂಧಗಳ ಅಡಿಯಲ್ಲಿನ ದಾಖಲೆಗಳನ್ನು ವಿದ್ಯುನ್ಮಾನ ರೂಪದಲ್ಲಿ ನಿರ್ವಹಿಸತಕ್ಕದ್ದು ಮತ್ತು ಹಾಗೆ ನಿರ್ವಹಿಸಿದ ದಾಖಲೆಯನ್ನು ಡಿಜಿಟಲ್ ಸಹಿಯ ಮೂಲಕ ಅಧಿಪ್ರಮಾಣಿಸತಕ್ಕದ್ದು.
(16) ನೊಂದಾಯಿತ ವ್ಯಕ್ತಿಯಿಂದ, ದಾಸ್ತಾನುಗಳು, ಬಟವಾಡೆಗಳು, ಒಳಮುಖ ಪೂರೈಕೆ ಮತ್ತು ಹೊರಮುಖ ಪೂರೈಕೆಗೆ ಸಂಬಂಧಿಸಿದ, ತೆರಿಗೆ ಬೆಲೆಪಟ್ಟಿಗಳ, ಪೂರೈಕೆ ಬಿಲ್ಲುಗಳು, ಜಮೆ ಚೀಟಿಗಳು, ಖರ್ಚು ಚೀಟಿಗಳ, ಬಟವಾಡೆ ಚಲನ್ನ ಜೊತೆಯಲ್ಲಿ ನಿರ್ವಹಿಸಲಾದ ಲೆಕ್ಕಪತ್ರಗಳನ್ನು, ಪ್ರಕರಣ 36ರಲ್ಲಿ ಉಪಬಂಧಿಸಿದ ಅವಧಿಗಾಗಿ ಸಂರಕ್ಷಿಸತಕ್ಕದ್ದು ಮತ್ತು, ಅಂಥ ಲೆಕ್ಕಪತ್ರಗಳು ಮತ್ತು ದಸ್ತಾವೇಜುಗಳನ್ನು ಕೈಯ್ಯಾರೆಯಾಗಿ ನಿರ್ವಹಿಸಲಾಗಿದ್ದಲ್ಲಿ, ನೋಂದಣಿ ಪ್ರಮಾಣಪತ್ರದಲ್ಲಿ ನಮೂದಿಸಿದ ಸಂಬಂಧಿಸಿದ ಪ್ರತಿಯೊಂದು ವ್ಯವಹಾರ ಸ್ಥಳದಲ್ಲಿ ಇಡತಕ್ಕದ್ದು ಮತ್ತು ಅಂಥ ಲೆಕ್ಕಪತ್ರಗಳು ಮತ್ತು ದಸ್ತಾವೇಜುಗಳನ್ನು ಡಿಜಿಟಲ್ ಮೂಲಕ ನಿರ್ವಹಿಸಲಾಗಿದ್ದಲ್ಲಿ, ಅಂಥ ಸಂಬಂಧಿಸಿದ ಪ್ರತಿಯೊಂದು ವ್ಯವಹಾರ ಸ್ಥಳದಲ್ಲಿ ಪ್ರವೇಶಿಸುವಂತಿರತಕ್ಕದ್ದು.
(17) ಸಾಗಾಣಿಕೆದಾರ ಅಥವಾ ತೀರುವೆ ಮತ್ತು ರವಾನಿಸುವ ಏಜೆಂಟ್ನ ಸಾಮಥ್ರ್ಯದಲ್ಲಿ, ಅವುಗಳ ಬಟವಾಡೆ ಅಥವಾ ರವಾನೆ ಮಾಡುವುದಕ್ಕಾಗಿ ಸರಕುಗಳ ಮೇಲೆ ಅಭಿರಕ್ಷೆಯನ್ನು ಹೊಂದಿರುವ ಯಾಮೊಬ್ಬ ವ್ಯಕ್ತಿಯು, ಅಂಥ ನೋಂದಾಯಿತ ವ್ಯಕ್ತಿಯ ಪರವಾಗಿ ಅವನು ನಿರ್ವಹಿಸಿದ ಅಂಥ ಸರಕುಗಳಿಗೆ ಸಂಬಂಧಿಸಿದಂತೆ ನಿಜವಾದ ಮತ್ತು ಸರಿಯಾದ ದಾಖಲೆಗಳನ್ನು ನಿರ್ವಹಿಸತಕ್ಕದ್ದು ಮತ್ತು ಯುಕ್ತಅಧಿಕಾರಿಯಿಂದ ಅಗತ್ಯಪಡಿಸಿದಾಗ ಅವುಗಳ ವಿವರಗಳನ್ನು ಹಾಜರುಪಡಿಸತಕ್ಕದ್ದು.
(18) ಕೋರಿಕೆಯ ಮೇರೆಗೆ, ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಅವನಿಗೆ ನಿರ್ವಹಿಸಲು ಅಗತ್ಯಪಡಿಸಿದ ಲೆಕ್ಕಪತ್ರ ಪುಸ್ತಕಗಳನ್ನು ಹಾಜರುಪಡಿಸತಕ್ಕದ್ದು.