(1) ಈ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಕೆಳಗೆ ನಿರ್ದಿಷ್ಟಪಡಿಸಿದ ಪೂರೈಕೆಗಳಿಗೆ ಸಂಬಂಧಿಸಿದಂತೆ ಮೌಲ್ಯವನ್ನು, ಪೂರೈಕೆದಾರನ ಆಯ್ಕೆಯ ಅನ್ವಯ, ಇನ್ನು ಮುಂದೆ ಒದಗಿಸಲಾದ ವಿಧಾನದಲ್ಲಿ ನಿರ್ಧರಿಸತಕ್ಕದ್ದು.
(2) ಹಣ ಬದಲಾವಣೆಯನ್ನು ಒಳಗೊಂಡಂತೆ, ವಿದೇಶಿ ಕರೆನ್ಸಿಯ ಖರೀದಿ ಅಥವಾ ಮಾರಾಟಕ್ಕೆ ಸಂಬಂಧಿಸಿದ ಸೇವೆಗಳ ಪೂರೈಕೆಯ ಮೌಲ್ಯವನ್ನು, ಸೇವೆಯ ಪೂರೈಕೆದಾರನು ಕೆಳಕಂಡ ವಿಧಾನದಲ್ಲಿ ನಿರ್ಧರಿಸತಕ್ಕದ್ದು, ಅಂದರೆ:-
(ಎ) ಒಂದು ಕರೆನ್ಸಿಯು, ಭಾರತೀಯ ರೂಪಾಯಿಗಳಿಂದ ಅಥವಾ ರೂಪಾಯಿಗಳಿಗೆ ವಿನಿಮಯವಾದಾಗ, ಮೌಲ್ಯವು, ಅದರ ಕೊಳ್ಳುವ ದರ ಅಥವಾ ಸಂದರ್ಭಾನುಸಾರವಾಗಿ ಮಾರಾಟದ ದರ ಮತ್ತು ಆ ಸಮಯದಲ್ಲಿನ ಆ ಕರೆನ್ಸಿಯ ಭಾರತೀಯ ರಿಸರ್ವ್ ಬ್ಯಾಂಕಿನ ಉಲ್ಲೇಖದ ದರದ ವ್ಯತ್ಯಾಸವನ್ನು, ಕರೆನ್ಸಿಯ ಒಟ್ಟು ಘಟಕಗಳಿಂದ ಗುಣಿಸಿದ ಮೊತ್ತಕ್ಕೆ ಸಮನಾಗಿರತಕ್ಕದು:
ಪರಂತು, ಕರೆನ್ಸಿಗೆ ಭಾರತೀಯ ರಿಸರ್ವ್ ಬ್ಯಾಂಕಿನ ಉಲ್ಲೇಖ ದರವು ಲಭ್ಯವಿಲ್ಲದ ಸಂದರ್ಭದಲ್ಲಿ, ಮೌಲ್ಯವು, ಹಣವನ್ನು ಬದಲಾಯಿಸುವ ವ್ಯಕ್ತಿಯು ಒದಗಿಸಿದ ಅಥವಾ ಸ್ವೀಕರಿಸಿದ ಭಾರತೀಯ ರೂಪಾಯಿಗಳ ಒಟ್ಟು ಮೊತ್ತದ ಶೇಕಡ 1ರಷ್ಟಿರತಕ್ಕದ್ದು:
ಮತ್ತು ಪರಂತು, ವಿನಿಮಯವಾದ ಎರಡು ಕರೆನ್ಸಿಗಳಲ್ಲಿ ಯಾವುದೂ ಸಹ ಭಾರತೀಯ ರೂಪಾಯಿಯಾಗಿರದಿದ್ದಲಿ, ಮೌಲ್ಯವು, ಹಣವನ್ನು ಬದಲಾಯಿಸುವ ವ್ಯಕ್ತಿಯು, ಆ ಎರಡು ಕರೆನ್ಸಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕು ಒದಗಿಸಿದ ಉಲ್ಲೇಖದ ದರದಲ್ಲಿ ಆ ದಿನದಲ್ಲಿ ಭಾರತೀಯ ರೂಪಾಯಿಗೆ ವಿನಿಮಯ ಮಾಡಿದಾಗ ಸ್ವೀಕರಿಸಬಹುದಾದ ಎರಡು ಮೊತ್ತಗಳಲ್ಲಿ ಕಡಿಮೆಯಿರುವ ಮೊತ್ತದ ಶೇಕಡ 1ರಷ್ಟಕ್ಕೆ ಸಮನಾಗಿರತಕ್ಕದ್ದು.
ಅಲ್ಲದೇ ಪರಂತು, ಸೇವೆಗಳನ್ನು ಪೂರೈಕೆ ಮಾಡುವ ಒಬ್ಬ ವ್ಯಕ್ತಿಯು ಒಂದು ಹಣಕಾಸು ವರ್ಷಕ್ಕೆ ಖಂಡ (ಬಿ)ಯ ನಿಬಂಧನೆಗೆ ಅನುಸಾರವಾಗಿ ಮೌಲ್ಯವನ್ನು ನಿಶ್ಚಿತಪಡಿಸಿಕೊಳ್ಳುವ ಆಯ್ಕೆಯನ್ನು ಚಲಾಯಿಸಬಹುದು ಮತ್ತು ಅಂಥ ಆಯ್ಕೆಯನ್ನು ಆ ಹಣಕಾಸು ವರ್ಷದ ಉಳಿದ ಭಾಗದ ಅವಧಿಯಲ್ಲಿ ಹಿಂತೆಗೆದುಕೊಳ್ಳತಕ್ಕದ್ದಲ್ಲ.
(ಬಿ) ಸೇವೆಗಳ ಪೂರೈಕೆದಾರನ ಆಯ್ಕೆಯ ಅನ್ವಯ, ಹಣ ಬದಲಾವಣೆಯನ್ನು ಒಳಗೊಂಡಂತೆ, ವಿದೇಶಿ ಕರೆನ್ಸಿಯ ಪೂರೈಕೆಗೆ ಸಂಬಂಧಿಸಿದಂತೆ ಮೌಲ್ಯವನ್ನು, -
(i) ಇನ್ನೂರ ಐವತ್ತು ರೂಪಾಯಿಗಳ ಕನಿಷ್ಟ ಮೊತ್ತಕ್ಕೆ ಒಳಪಟ್ಟು, ಒಂದು ಲಕ್ಷ ರೂಪಾಯಿಗಳ ವರೆಗಿನ ಒಂದು ಮೊತ್ತಕ್ಕೆ ವಿನಿಮಯವಾದ ಕರೆನ್ಸಿಯ ಒಟ್ಟು ಮೊತ್ತದ ಶೇಕಡ ಒಂದರಷ್ಟು;
(ii) ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನದಾದ ಮತ್ತು ಹತ್ತು ಲಕ್ಷ ರೂಪಾಯಿಗಳವರೆಗಿನ ಒಂದು ಮೊತ್ತಕ್ಕೆ ವಿನಿಮಯವಾದ ಕರೆನ್ಸಿಯ ಒಟ್ಟು ಮೊತ್ತದ ಶೇಕಡ ಅರ್ಧದಷ್ಟು ಮತ್ತು ಒಂದು ಸಾವಿರ ರೂಪಾಯಿಗಳು; ಮತ್ತು (iii) ಅರವತ್ತು ಸಾವಿರ ರೂಪಾಯಿಗಳ ಗರಿಷ್ಟ ಮೊತ್ತಕ್ಕೆ ಒಳಪಟ್ಟು, ಹತ್ತು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನದಾದ ಒಂದು ಮೊತ್ತಕ್ಕೆ ವಿನಿಮಯವಾದ ಕರೆನ್ಸಿಯ ಒಟ್ಟು ಮೊತ್ತದ ಶೇಕಡ ಹತ್ತನೇ ಒಂದರಷ್ಟು ಮತ್ತು ಐದು ಸಾವಿರದ ಐದುನೂರು ರೂಪಾಯಿಗಳು, -ಎಂದು ಪರಿಭಾವಿಸತಕ್ಕದ್ದು.
(3) ವಾಯುಯಾನಕ್ಕಾಗಿ ಟಿಕೆಟುಗಳನ್ನು ಬುಕ್ ಮಾಡುವುದಕ್ಕೆ ಸಂಬಂಧಿಸಿದಂತೆ ಒಬ್ಬ ವಾಯು ಯಾನದ ಏಜೆಂಟನಿಂದ ಒದಗಿಸಿದ ಸೇವೆಗಳ ಪೂರೈಕೆಯ ಮೌಲ್ಯವನ್ನು, ದೇಶೀಯ ಬುಕಿಂಗ್ಗಳ ಸಂದರ್ಭದಲ್ಲಿ ಮೂಲ ಪ್ರಯಾಣದರದ ಶೇಕಡ ಐದರ ದರದಲ್ಲಿ ಲೆಕ್ಕ ಹಾಕಲಾದ ಒಂದು ಮೊತ್ತವೆಂದು ಮತ್ತು ವಾಯುಯಾನದ ಮೂಲಕ ಪ್ರಯಾಣಕ್ಕಾಗಿ ಅಂತರರಾಷ್ಟ್ರೀಯ ಬುಕಿಂಗ್ಗಳ ಸಂದರ್ಭದಲ್ಲಿ ಮೂಲ ಪ್ರಯಾಣದರದ ಶೇಕಡ ಹತ್ತರದರದಲ್ಲಿ ಲೆಕ್ಕ ಹಾಕಲಾದ ಒಂದು ಮೊತ್ತವೆಂದು ಪರಿಭಾವಿಸತಕ್ಕದ್ದು.
ವಿವರಣೆ:- ಈ ಉಪನಿಯಮದ ಉದ್ದೇಶಗಳಿಗಾಗಿ, ಪದಾವಳಿಯಾದ “ಮೂಲ ಪ್ರಯಾಣದರ” ಎಂದರೆ ವಾಯುಯಾನ ಸಂಸ್ಥೆಯು ವಾಯುಯಾನ ಏಜೆಂಟನಿಗೆ ಸಾಮಾನ್ಯವಾಗಿ ಯಾವುದರ ಮೇಲೆ ಕಮಿಷನ್ನನ್ನು ಸಂದಾಯ ಮಾಡುತ್ತದೆಯೋ, ಆ ವಾಯುಯಾನ ಪ್ರಯಾಣದರದ ಆ ಭಾಗ.
(4) ಜೀವ ವಿಮೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಸೇವೆಗಳ ಪೂರೈಕೆಯ ಮೌಲ್ಯವು,-
(ಎ) ಸೇವೆಗಳ ಪೂರೈಕೆಯ ಸಮಯದಲ್ಲಿ ಪಾಲಿಸಿದಾರನಿಗೆ, ಅಂಥ ಒಂದು ಮೊತ್ತವನ್ನು ತಿಳಿಸಿದ್ದರೆ, ಪಾಲಸಿದಾರನ ಪರವಾಗಿ ಹೂಡಿಕೆ ಅಥವಾ ಉಳಿತಾಯಕ್ಕೆ ಹಂಚಿಕೆ ಮಾಡಲಾದ ಮೊತ್ತದಿಂದಕಡಿತಗೊಳಿಸಿ, ಪಾಲಿಸಿದಾರನಿಗೆ ಹೊರಿಸಿದ ಒಟ್ಟು ವಿಮಾ ಕಂತಿನ ಮೊತ್ತ;
(ಬಿ) (ಎ)ನ್ನು ಹೊರತುಪಡಿಸಿದ, ವಾರ್ಷಿಕ ಏಕಕಂತಿನ ಪಾಲಿಸಿಗಳ ಸಂದರ್ಭಗಳಲ್ಲಿ, ಪಾಲಸಿದಾರನಿಗೆ ಹೊರಿಸಿದ ಮಾಡಿದ ಏಕಕಂತಿನ ಶೇಕಡ ಹತ್ತರಷ್ಟು; ಅಥವಾ
(ಸಿ) ಇತರೇ ಎಲ್ಲಾ ಸಂದರ್ಭಗಳಲ್ಲಿ, ಪ್ರಥಮ ವರ್ಷದಲ್ಲಿ ಪಾಲಿಸಿದಾರನಿಗೆ ಹೊರಿಸಿದವಿಮಾಕಂತಿನ ಶೇಕಡಾ ಇಪ್ಪತ್ತೈದರಷ್ಟು ಮತ್ತು ತರುವಾಯದ ವರ್ಷಗಳಲ್ಲಿ, ಪಾಲಿಸಿದಾರನಿಗೆ ವಿಧಿಸಿದ ವಿಮಾಕಂತಿನ ಶೇಕಡಾ ಹನ್ನೆರಡೂವರೆಯಷ್ಟು ಇರತಕ್ಕದ್ದು.
ಪರಂತು, ಪಾಲಸಿದಾರನು ಜೀವ ವಿಮೆಯಲ್ಲಿನ ಗಂಡಾಂತರ ರಕ್ಷಣೆಗಾಗಿ ಮಾತ್ರವೇ ವಿಮಾಕಂತನ್ನು ಸಂದಾಯ ಮಾಡಿದ್ದಲ್ಲಿ, ಈ ಉಪ ನಿಯಮದಲ್ಲಿರುವ ಯಾವುದೂ ಅನ್ವಯವಾಗತಕ್ಕದ್ದಲ್ಲ.
(5) ಇನ್ನೊಬ್ಬನು ಉಪಯೋಗಿಸಿದ ಸರಕುಗಳನ್ನು, ಅಂದರೆ ಅವು ಇರುವ ಹಾಗೆಯೇ ಅಥವಾ ಸರಕುಗಳ ಸ್ವರೂಪವನ್ನು ಬದಲಿಸದ ಅಂಥ ಸಣ್ಣ ಪ್ರಮಾಣದ ಸಂಸ್ಕರಣೆಯ ನಂತರ, ಉಪಯೋಗಿಸಿದ ಸರಕುಗಳನ್ನು ಕೊಳ್ಳುವ ಮತ್ತು ಮಾರುವ ವ್ಯವಹಾರದಲ್ಲಿ ತೊಡಗಿರುವ ಒಬ್ಬ ವ್ಯಕ್ತಿಯು, ತೆರಿಗೆದಾಯಕ ಪೂರೈಕೆಯನ್ನು ಒದಗಿಸುತ್ತಿದ್ದಲ್ಲಿ ಮತ್ತು ಅಂಥ ಸರಕುಗಳ ಖರೀದಿಯ ಮೇಲೆ ಹೂಡುವಳಿ ತೆರಿಗೆ ಜಮೆಯನ್ನು ಪಡೆದುಕೊಂಡಿರದಿದ್ದಲ್ಲಿ, ಪೂರೈಕೆಯ ಮೌಲ್ಯವು ಮಾರಾಟದ ಬೆಲೆ ಮತ್ತು ಖರೀದಿಯ ಬೆಲೆಯ ನಡುವಿನ ವ್ಯತ್ಯಾಸವಾಗಿರತಕ್ಕದ್ದು ಮತ್ತು ಅಂಥ ಪೂರೈಕೆಯ ಮೌಲ್ಯವು ಋಣಾತ್ಮಕವಾಗಿದ್ದಲ್ಲಿ, ಅದನ್ನು ಕಡೆಗಣಿಸತಕ್ಕದ್ದು:
ಪರಂತು, ಸಾಲ ಅಥವಾ ಋಣವನ್ನು ವಸೂಲಿ ಮಾಡುವ ಉದ್ದೇಶದಿಂದ ನೋಂದಾಯಿತನಲ್ಲದ ಒಬ್ಬ ತಪ್ಪಿತ ಸಾಲಗಾರನಿಂದ ಪುನರ್ ಸ್ವಾಧೀನಪಡಿಸಿಕೊಂಡ ಸರಕುಗಳ ಖರೀದಿಯ ಮೌಲ್ಯವು, ಖರೀದಿಯ ದಿನಾಂಕ ಮತ್ತು ಅಂಥ ಪುನರ್ ಸ್ವಾಧೀನಪಡಿಸಿಕೊಳ್ಳುವ ವ್ಯಕ್ತಿಯಿಂದ ವಿಲೇವಾರಿಗೊಳ್ಳುವ ದಿನಾಂಕದ ನಡುವಿನ ಪ್ರತಿಯೊಂದು ತ್ರೈಮಾಸಿಕ ಅಥವಾ ಅದರ ಭಾಗಕ್ಕೆ ಶೇಕಡ ಐದು ಅಂಶಗಳಷ್ಟು ಇಳಿಕೆ ಮಾಡಿದ ತಪ್ಪಿತ ಸಾಲಗಾರನು ಖರೀದಿಸಿರುವ ಅಂಥ ಸರಕುಗಳ ಖರೀದಿ ಬೆಲೆ ಎಂದು ಪರಿಭಾವಿಸತಕ್ಕದ್ದು.
(6) ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಪೂರೈಕೆಗೆ ಪ್ರತಿಯಾಗಿ ವಾಪಸ್ಸು ಪಡೆಯಬಹುದಾದಂಥಹ ಒಂದು ಟೋಕನ್ ಅಥವಾ ಒಂದು ಮೋಚರ್, ಅಥವಾ ಒಂದು ಕೂಪನ್, ಅಥವಾ ಒಂದು ಸ್ಟಾಂಪಿನ (ಅಂಚೆ ಸ್ಟಾಂಪನ್ನು ಹೊರತುಪಡಿಸಿದಂತೆ) ಮೌಲ್ಯವು, ಅಂಥ ಟೋಕನ್, ಮೋಚರ್, ಕೂಪನ್, ಸ್ಟಾಂಪಿಗೆ ಪ್ರತಿಯಾಗಿ ವಿವಾಪಸ್ಸು ಪಡೆಯಬಹುದಾದಂಥಹ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಹಣದ ಮೌಲ್ಯಕ್ಕೆ ಸಮನಾಗಿರತಕ್ಕದ್ದು.
(7) ಹೂಡುವಳಿ ತೆರಿಗೆ ಜಮೆ ಲಭ್ಯವಿದ್ದಲ್ಲಿ, ಪ್ರಕರಣ 25ರಲ್ಲಿ ಉಲ್ಲೇಖಿಸಿದಂತಹ ಭಿನ್ನ ವ್ಯಕ್ತಿಗಳ ನಡುವೆ, ಪರಿಷತ್ತಿನ ಶಿಫಾರಸ್ಸಿನ ಅನ್ವಯ ಸರ್ಕಾರದಿಂದ ಅಧಿಸೂಚಿಸಬಹುದಾದ ಅಂಥ ಸೇವೆ ಒದಗಿಸುವವರ ವರ್ಗದಿಂದ ಒದಗಿಸಿದ ಅನುಸೂಚಿ Iರ ಖಂಡಿಕೆ 2ರಲ್ಲಿ ಉಲ್ಲೇಖಿಸಲಾದ, ತೆರಿಗೆದಾಯಕ ಸೇವೆಯ ಮೌಲ್ಯವು ಶೂನ್ಯ ಎಂದು ಪರಿಭಾವಿಸತಕ್ಕದ್ದು.