(1) ಪ್ರಕರಣ 140ರ ಅಡಿಯಲ್ಲಿ ಹೂಡುವಳಿ ತೆರಿಗೆ ಜಮೆಯನ್ನು ತೆಗೆದುಕೊಳ್ಳಲು ಹಕ್ಕುಳ್ಳ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಗೊತ್ತುಪಡಿಸಿದ ದಿನದಿಂದ ತೊಂಬತ್ತು ದಿನಗಳ ಒಳಗಾಗಿ, ನಮೂನೆ ಜಿಎಸಟಿ ಟಿಆರ್ಎಎನ್-1ರಲ್ಲಿ ಒಂದು ಘೋಷಣೆಯನ್ನು, ಯುಕ್ತವಾಗಿ ಸಹಿಮಾಡಿ, ಅದರಲ್ಲಿ ಸದರಿ ಪ್ರಕರಣದ ಉಪಬಂಧಗಳ ಅಡಿಯಲ್ಲಿ ಆತನು ಹಕ್ಕುಳ್ಳಂತಹ ಹೂಡುವಳಿ ತೆರಿಗೆ ಜಮೆಯನ್ನು ಪ್ರತ್ಯೇಕವಾಗಿ ನಿರ್ದಿಷ್ಟಪಡಿಸಿ, ವಿದ್ಯುನ್ಮಾನ ರೀತಿಯಲ್ಲಿ ಸಲ್ಲಿಸತಕ್ಕದ್ದು:
ಪರಂತು, ಆಯುಕ್ತರು, ಪರಿಷತ್ತಿನ ಶಿಫಾರಸ್ಸುಗಳ ಅನ್ವಯ, ತೊಂಬತ್ತು ದಿನಗಳ ಅವಧಿಯನ್ನು, ತೊಂಬತ್ತು ದಿನಗಳನ್ನು ಮೀರಿಲ್ಲದ ಮುಂದಿನ ಅವಧಿಗೆ ವಿಸ್ತರಿಸಬಹುದು.
(2) ಉಪನಿಯಮ (1)ರ ಅಡಿಯಲ್ಲಿನ ಪ್ರತಿಯೊಂದು ಘೋಷಣೆಯು-
(ಎ) ಪ್ರಕರಣ 140ರ ಉಪಪ್ರಕರಣ (2)ರ ಅಡಿಯಲ್ಲಿನ ಕ್ಲೇಮಿನ ಸಂದರ್ಭದಲ್ಲಿ, ಗೊತ್ತುಪಡಿಸಿದ ದಿನದಂದು ಬಂಡವಾಳ ಸರಕುಗಳ ಪ್ರತಿಯೊಂದು ವಸ್ತುವಿಗೆ ಸಂಬಂಧಿಸಿದಂತೆ, ಕೆಳಕಂಡ ವಿವರಗಳನ್ನು ಪ್ರತ್ಯೇಕವಾಗಿ ನಿರ್ದಿಷ್ಟಪಡಿಸತಕ್ಕದ್ದು-
(i) ಗೊತ್ತುಪಡಿಸಿದ ದಿನದವರೆವಿಗೂ ಪ್ರತಿ ಅಸ್ತಿತ್ವದಲ್ಲಿನ ಕಾನೂನುಗಳ ಅಡಿಯಲ್ಲಿ ಹೂಡುವಳಿ ತೆರಿಗೆ ಜಮೆಯ ರೂಪದಲ್ಲಿ, ಉಪಯೋಗಿಸಿದ ಅಥವಾ ಬಳಕೆ ಮಾಡಿದ ತೆರಿಗೆಯ ಮೊತ್ತ; ಮತ್ತು
(ii) ಗೊತ್ತುಪಡಿಸಿದ ದಿನದವರೆವಿಗೂ ಪ್ರತಿ ಅಸ್ತಿತ್ವದಲ್ಲಿನ ಕಾನೂನುಗಳ ಅಡಿಯಲ್ಲಿ ಹೂಡುವಳಿ ತೆರಿಗೆ ಜಮೆಯ ರೂಪದಲ್ಲಿ, ಉಪಯೋಗಿಸಬೇಕಾಗಿರುವ ಅಥವಾ ಬಳಕೆ ಮಾಡಬೇಕಾಗಿರುವ ತೆರಿಗೆಯ ಮೊತ್ತ;
(ಬಿ) ಪ್ರಕರಣ 140ರ ಉಪಪ್ರಕರಣ (3)ರ ಅಥವಾ ಉಪಪ್ರಕರಣ (4)ರ ಖಂಡ (ಬಿ) ಅಥವಾ ಉಪಪ್ರಕರಣ (6)ರ ಅಥವಾ ಉಪಪ್ರಕರಣ (8)ರ ಅಡಿಯಲ್ಲಿನ ಕ್ಲೇಮಿನ ಸಂದರ್ಭದಲ್ಲಿ, ಗೊತ್ತುಪಡಿಸಿದ ದಿನದಂದು ಹೊಂದಿರುವ ದಾಸ್ತಾನಿನ ವಿವರಗಳನ್ನು ಪ್ರತ್ಯೇಕವಾಗಿ ನಿರ್ದಿಷ್ಟಪಡಿಸತಕ್ಕದ್ದು;
(ಸಿ) ಪ್ರಕರಣ 140ರ ಉಪಪ್ರಕರಣ (5)ರ ಅಡಿಯಲ್ಲಿನ ಕ್ಲೇಮಿನ ಸಂದರ್ಭದಲ್ಲಿ, ಕೆಳಕಂಡ ವಿವರಗಳನ್ನು ನಿರ್ದಿಷ್ಟಪಡಿಸತಕ್ಕದ್ದು-
(i) ಪೂರೈಕೆದಾರನ ಹೆಸರು, ಪೂರೈಕೆದಾರನಿಂದ ನೀಡಿದ ಬೆಲೆಪಟ್ಟಿಯ ಅಥವಾ ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಅದರ ಆಧಾರದ ಮೇಲೆ ಹೂಡುವಳಿ ತೆರಿಗೆಯ ಜಮೆಯನ್ನು ಅನುಮತಿಸಬಹುದಾದ ಯಾವುದೇ ದಸ್ತಾವೇಜಿನ ಕ್ರಮ ಸಂಖ್ಯೆ ಅಥವಾ ನೀಡಿಕೆ ದಿನಾಂಕ;
(ii) ಸರಕು ಅಥವಾ ಸೇವೆಗಳ ವಿವರಣೆ ಮತ್ತು ಮೌಲ್ಯ;
(iii) ಸರಕುಗಳ ಸಂದರ್ಭದಲ್ಲಿ ಪ್ರಮಾಣ ಮತ್ತು ಅವುಗಳ ಘಟಕ ಅಥವಾ ಘಟಕ ಪ್ರಮಾಣದ ಕೋಡ್;
(iv) ಅರ್ಹದಾಯಕ ತೆರಿಗೆಗಳ ಮತ್ತು ಸುಂಕಗಳ ಅಥವಾ ಸಂದರ್ಭಾನುಸಾರವಾಗಿ ಸರಕು ಅಥವಾ ಸೇವೆಗಳಿಗೆ ಸಂಬಂಧಿಸಿದಂತೆ ಪೂರೈಕೆದಾರನಿಂದ ವಿಧಿಸಿದ ಮೌಲ್ಯವರ್ಧಿತ ತೆರಿಗೆಯ ಮೊತ್ತ; ಮತ್ತು
(v) ಸ್ವಿಕರಿಸುವವನ ಲೆಕ್ಕಪತ್ರ ಪುಸ್ತಕಗಳಲ್ಲಿ ಸರಕು ಅಥವಾ ಸೇವೆಗಳ ಸ್ವೀಕೃತಿಯು ನಮೂದಾದ ದಿನಾಂಕ.
(3) ನಮೂನೆ ಜಿಎಸಟಿ ಟಿಆರ್ಎಎನ್-1ರಲ್ಲಿನ ಅರ್ಜಿಯಲ್ಲಿ ನಿರ್ದಿಷ್ಟಪಡಿಸಿದ ಜಮೆಯ ಮೊತ್ತವು, ಸಾಮಾನ್ಯ ಪೋರ್ಟಲ್ನಲ್ಲಿ ನಮೂನೆ ಜಿಎಸಟಿ ಪಿಎಂಟಿ-2ರಲ್ಲಿ ನಿರ್ವಹಿಸಲಾದ ಅರ್ಜಿದಾರನ ವಿದ್ಯುನ್ಮಾನ ಜಮೆ ಖಾತೆಗೆ ಜಮೆಗೊಳ್ಳತಕ್ಕದ್ದು.