(1) ಯುಕ್ತ ಅಧಿಕಾರಿಯು, ಬಾಕಿದಾರನಿಗೆ ಸೇರಿದ ಚರ ಅಥವಾ ಸ್ಥಿರ ಸ್ವತ್ತಿನ ಪಟ್ಟಿಯನ್ನು ಸಿದ್ಧಪಡಿಸಿ, ಪ್ರಚಲಿತ ಮಾರುಕಟ್ಟೆ ಬೆಲೆಯ ಪ್ರಕಾರ ಅವುಗಳ ಮೌಲ್ಯವನ್ನು ಅಂದಾಜಿಸತಕ್ಕದ್ದು ಮತ್ತು ಜಪ್ತಿ ಅಥವಾ ಚರಾಸ್ತಿ ವಶದ ಒಂದು ಆದೇಶವನ್ನು ಮತ್ತು ಬಾಕಿಯಿರುವ ಮೊತ್ತದ ವಸೂಲಾತಿಗಾಗಿ ಅಗತ್ಯವಿರಬಹುದಾದ ಅಂಥ ಚರ ಅಥವಾ ಸ್ಥಿರ ಸ್ವತ್ತಿಗೆ ಸಂಬಂಧಿಸಿದಂತೆ ಯಾವುದೇ ವ್ಯವಹಾರವನ್ನು ನಿಷೇದಿಸಿ ಒಂದು ಸೂಚನಾಪತ್ರವನ್ನು ಮಾರಾಟಕ್ಕಾಗಿ ನಮೂನೆ ಜಿಎಸ್ಟಿ ಡಿಆರ್ಸಿ-16ರಲ್ಲಿ ನೀಡತಕ್ಕದ್ದು.
ಪರಂತು ನೆಗೋಷಿಯಬಲ್ ಇನ್ಸ್ಟ್ರುಮೆಂಟ್ನಿಂದ ಭದ್ರತೆಯಿಲ್ಲದ ಒಂದು ಋಣದಲ್ಲಿನ, ಒಂದು ನಿಗಮದಲ್ಲಿನ ಒಂದು ಷೇರಲ್ಲಿನ, ಯಾವುದೇ ಸ್ವತ್ತಿನ ಅಥವಾ ಯಾವುದೇ ನ್ಯಾಯಾಲಯದಲ್ಲಿ ಠೇವಣಿ ಇಟ್ಟ ಅಥವಾ ಅದರ ಅಭಿರಕ್ಷಣೆಯಲ್ಲಿರುವ ಸ್ವತ್ತನ್ನು ಹೊರತುಪಡಿಸಿದಂತೆ ಬಾಕಿದಾರನ ಸ್ವಾಧೀನದಲ್ಲಿ ಇಲ್ಲದಿರುವ ಇತರೇ ಚರ ಸ್ವತ್ತಿನ ಜಪ್ತಿಯನ್ನು, ನಿಯಮ 151ರಲ್ಲಿ ಉಪಬಂಧಿಸಿದ ವಿಧಾನದಲ್ಲಿ ಜಪ್ತಿಮಾಡತಕ್ಕದ್ದು.
(2) ಯುಕ್ತ ಅಧಿಕಾರಿಯು ಜಪ್ತಿಅಥವಾ ಚರಾಸ್ತಿ ವಶದ ಆದೇಶದ ಒಂದು ಪ್ರತಿಯನ್ನು, ಸದರೀ ಚರ ಅಥವಾ ಸ್ಥಿರ ಸ್ವತ್ತಿನ ಮೇಲೆ ಪೂರ್ವಾಧಿಯನ್ನು ಹೊರಿಸುವ, ಅದನ್ನು ಯುಕ್ತ ಅಧಿಕಾರಿಯಿಂದ ಹಾಗೆಂದು, ಲಿಖಿತ ಸೂಚನೆಗಳ ಮೇಲೆ ಮಾತ್ರ ತೆಗೆಯತಕ್ಕ, ಸಂಬಂಧಪಟ್ಟ ರೆವಿನ್ಯೂ ಪ್ರಾಧಿಕಾರ ಅಥವಾ ಸಾರಿಗೆ ಪ್ರಾಧಿಕಾರ ಅಥವಾ ಯಾವುದೇ ಅಂಥ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದು.
(3) ಉಪನಿಯಮ (1)ರ ಅಡಿಯಲ್ಲಿ ಜಪ್ತಿಅಥವಾ ಚರಾಸ್ತಿ ವಶಕ್ಕೆ ಒಳಪಟ್ಟ ಸ್ವತ್ತು-
(ಎ) ಸ್ಥಿರ ಸ್ವತ್ತಾಗಿದ್ದಲ್ಲಿ, ಜಪ್ತಿಅಥವಾ ಚರಾಸ್ತಿ ವಶದ ಆದೇಶವನ್ನು ಸದರಿ ಸ್ವತ್ತಿನಲ್ಲಿ ಅಂಟಿಸತಕ್ಕದ್ದು ಮತ್ತು ಮಾರಾಟದ ಖಾತ್ರಿಯ ವರೆಗೂ ಅಂಟಿಸಿರುವುದು ಉಳಿಯತಕ್ಕದ್ದು;
(ಬಿ) ಚರ ಸ್ವತ್ತಾಗಿದ್ದಲ್ಲಿ, ಯುಕ್ತ ಅದಿಕಾರಿಯು, ಅಧಿನಿಯಮದ ಅಧ್ಯಾಯ XIV ರ ಉಪಬಂಧಗಳಿಗೆ ಅನುಸಾರವಾಗಿ ಸದರಿ ಸ್ವತ್ತನ್ನು ವಶಕ್ಕೆ ತೆಗೆದುಕೊಳ್ಳತಕ್ಕದ್ದು ಮತ್ತು ಸದರಿ ಸ್ವತ್ತಿನ ಅಭಿರಕ್ಷಣೆಯನ್ನು ಯುಕ್ತ ಅಧಿಕಾರಿಯು ತಾನೇ ಸ್ವತಃ ಅಥವಾ ಆತನಿಂದ ಪ್ರಾಧಿಕೃತನಾದ ಒಬ್ಬ ಅಧಿಕಾರಿಯು ತೆಗೆದುಕೊಳ್ಳತಕ್ಕದ್ದು.
(4) ಜಪ್ತಿ ಅಥವಾ ಚರಾಸ್ತಿ ವಶದ ಸ್ವತ್ತನ್ನು, ಇ-ಹರಾಜನ್ನು ಒಳಗೊಂಡಂತೆ ಹರಾಜಿನ ಒಂದು ಪ್ರಕ್ರಿಯೆಯ ಮೂಲಕ ಮಾರಾಟ ಮಾಡತಕ್ಕದ್ದು, ಅದಕ್ಕಾಗಿ ಒಂದು ಸೂಚನಾಪತ್ರವನ್ನು ಮಾರಾಟ ಮಾಡಬೇಕಾದ ಸ್ವತ್ತು ಮತ್ತು ಮಾರಾಟದ ಉದ್ದೇಶವನ್ನು ಸ್ಪಷ್ಟವಾಗಿ ಸೂಚಿಸಿ ನಮೂನೆ ಜಿಎಸ್ಟಿ ಡಿಆರ್ಸಿ-17ರಲ್ಲಿ ನೀಡತಕ್ಕದ್ದು.
(5) ಈ ಅಧ್ಯಾಯದ ಉಪಬಂಧಗಳಲ್ಲಿ ಏನೇ ಒಳಗೊಂಡಿದ್ದಾಗ್ಯೂ, ಮಾರಾಟ ಮಾಡಬೇಕಾದ ಸ್ವತ್ತು, ನೆಗೋಷಿಯಬಲ್ ಇನ್ಸ್ಟ್ರುಮೆಂಟ್, ಒಂದು ನಿಗಮದಲ್ಲಿನ ಒಂದು ಷೇರಾಗಿದ್ದಲ್ಲಿ, ಯುಕ್ತ ಅಧಿಕಾರಿಯು, ಅದನ್ನು ಸಾರ್ವಜನಿಕ ಹರಾಜಿನ ಮೂಲಕ ಮಾರಾಟ ಮಾಡದೆ, ಅಂಥ ಇನ್ಸ್ಟ್ರುಮೆಂಟ್ ಅಥವಾ ಒಂದು ಷೇರನ್ನು ಒಬ್ಬ ದಲ್ಲಾಳಿಯ ಮೂಲಕ ಮಾರಾಟ ಮಾಡಬಹುದು ಮತ್ತು ಸದರಿ ದಲ್ಲಾಳಿಯು ವಸೂಲಾತಿಯ ಅಡಿಯಲ್ಲಿನ ಮೊತ್ತವನ್ನು ವಿಮೋಚನೆ ಮಾಡುವುದಕ್ಕಾಗಿ ಅಗತ್ಯವಿರಬಹುದಾದ ತನ್ನ ಕಮಿಷನ್ನಷ್ಟು ಇಳಿಕೆ ಮಾಡಿದ ಅಂಥ ಮಾರಾಟದ ಅಷ್ಟು ಉತ್ಪತ್ತಿಯನ್ನು ಸರ್ಕಾರಕ್ಕೆ ಠೇವಣಿ ಮಾಡತಕ್ಕದ್ದು ಮತ್ತು ಉಳಿಕೆ ಮೊತ್ತ ಏನಾದರು ಇದ್ದರೆ, ಅದನ್ನು ಅಂಥ ಇನ್ಸ್ಟ್ರುಮೆಂಟ್ ಅಥವಾ ಷೇರಿನ ಮಾಲಿಕನಿಗೆ ಸಂದಾಯ ಮಾಡತಕ್ಕದ್ದು.
(6) ಯುಕ್ತ ಅಧಿಕಾರಿಯು ಸವಾಲುದಾರರನ್ನು ಹರಾಜಿನಲ್ಲಿ ಭಾಗವಹಿಸಲು ಅರ್ಹರನ್ನಾಗಿ ಮಾಡುವುದಕ್ಕಾಗಿ ಅಂಥ ಅಧಿಕಾರಿಯಿಂದ ನಿರ್ದಿಷ್ಟಪಡಿಸಬಹುದಾದ ವಿಧಾನದಲ್ಲಿ ಒದಗಿಸಬೇಕಾದ ಪೂರ್ವ ಸವಾಲಿನ ಠೇವಣಿಯ ಮೊತ್ತವನ್ನು, ನಿರ್ದಿಷ್ಟಪಡಿಸಬಹುದು, ಅದನ್ನು ಯಶಸ್ವಿಯಾಗದ ಸವಲುದಾರರಿಗೆ ಹಿಂದಿರುಗಿಸಬಹುದು, ಸಂದರ್ಭಾನುಸಾರವಾಗಿ, ಯಶಸ್ವಿ ಸವಾಲುದಾರ ಪೂರ್ಣ ಮೊತ್ತವನ್ನು ಸಂದಾಯ ಮಾಡಲು ವಿಫಲನಾದ ಸಂದರ್ಭದಲ್ಲಿ ಮುಟ್ಟುಗೋಲು ಹಾಕಿಕೊಳ್ಳಬಹುದು.
(7) ಸವಾಲು ಸಲ್ಲಿಕೆಯ ಕೊನೆಯ ದಿನ ಅಥವಾ ಹರಾಜಿನ ದಿನಾಂಕವು ಉಪನಿಯಮ (4)ರಲ್ಲಿ ಉಲ್ಲೇಖಿಸಲಾದ ಸೂಚನಾಪತ್ರ ನೀಡಿಕೆಯ ದಿನಾಂಕದಿಂದ ಹದಿನೈದು ದಿನಗಳಿಗಿಂತ ಮುಂಚಿತವಾಗಿಲ್ಲದಿರತಕ್ಕದ್ದು.
ಪರಂತು ಸರಕುಗಳು ಕೆಟ್ಟು ಹೋಗುವ ಅಥವಾ ಅಪಾಯಕಾರಿ ಸ್ವರೂಪದ್ದಾಗಿದ್ದಲ್ಲಿ, ಅಥವಾ ಅವುಗಳನ್ನು ಅಭಿರಕ್ಷಣೆಯಲ್ಲಿಡುವ ವೆಚ್ಚಗಳು ಅವುಗಳ ಮೌಲ್ಯವನ್ನು ಮೀರುವುದು ಕಂಡಬಂದಲ್ಲಿ, ಯುಕ್ತ ಅಧಿಕಾರಿಯು ತತ್ಕ್ಷಣವೇ ಮಾರಾಟ ಮಾಡಬಹುದು.
(8) ಯಾವುದೇ ಸ್ವತ್ತಿನ ಜಪ್ತಿಅಥವಾ ಚರಾಸ್ತಿ ವಶಕ್ಕೆ ಸಂಬಂಧಿಸಿದಂತೆ, ಅಂಥ ಸ್ವತ್ತು ಅಂಥ ಜಪ್ತಿಅಥವಾ ಚರಾಸ್ತಿ ವಶಕ್ಕೆ ಬಾಧ್ಯವಾಗಿಲ್ಲ ಎನ್ನುವ ಕಾರಣಾಧಾರದ ಮೇಲೆ ಯಾವುದೇ ಕ್ಲೇಮನ್ನು ಹೂಡಿದ್ದಲ್ಲಿ ಅಥವಾ ಯಾವುದೇ ಆಕ್ಷೇಪಣೆಯನು ಎತ್ತಿದ್ದಲ್ಲಿ, ಯುಕ್ತ ಅಧಿಕಾರಿಯು ಆ ಕ್ಲೇಮು ಅಥವಾ ಆಕ್ಷೇಪಣೆಯನ್ನು ತನಿಖೆ ಮಾಡತಕ್ಕದ್ದು ಮತ್ತು ಆ ಮಾರಾಟವನ್ನು ಆತನು ಸೂಕ್ತ ಎಂದು ಭಾವಿಸಬಹುದಾದ ಅಂಥ ಸಮಯಕ್ಕೆ ಮುಂದೂಡಬಹುದು.
(9) ಕ್ಲೇಮು ಅಥವಾ ಆಕ್ಷೇಪಣೆಯನ್ನು ಮಾಡುವ ವ್ಯಕ್ತಿಯು ಉಪನಿಯಮ (1)ರ ಅಡಿಯಲ್ಲಿ ನೀಡಿದ ಆದೇಶದ ದಿನಾಂಕದಂದು, ಜಪ್ತಿಅಥವಾ ಚರಾಸ್ತಿ ವಶದ ಅಡಿಯಲ್ಲಿ ಪ್ರಶ್ನೆಯಲ್ಲಿರುವ ಸ್ವತ್ತಿನಲ್ಲಿ ಆತನು ಕೆಲವು ಹಿತಾಶಕ್ತಿಯನ್ನು ಹೊಂದಿದ್ದ, ಅಥವಾ ಸ್ವಾಧೀನತೆಯಲ್ಲಿತ್ತು ಎನ್ನುವುದಕ್ಕೆ ಸಾಕ್ಷ್ಯವನ್ನು ಮುಂದಿಡಬೇಕು.
(10) ಯುಕ್ತ ಅಧಿಕಾರಿಯು ತನಿಖೆಯಾದ ಮೇಲೆ, ಕ್ಲೇಮು ಅಥವಾ ಆಕ್ಷೇಪಣೆಯಲ್ಲಿ ನಿರೂಪಿಸಿರವ ಕಾರಣಗಳಿಗಾಗಿ, ಅಂತ ಸ್ವತ್ತು, ಸದರಿ ದಿನಾಂಕದಂದು, ಬಾಕಿದಾರನ ಅಥವಾ ಆತನ ಅಥವಾ ಅದರ ಪರವಾದ ಯಾವುದೇ ಇತರ ವ್ಯಕ್ತಿಯ ಸ್ವಾಧೀನತೆಯಲ್ಲಿರಲಿಲ್ಲ, ಸದರಿ ದಿನಾಂಕದಂದು, ಬಾಕಿದಾರನ ಸ್ವಾಧೀನತೆಯಲ್ಲಿತ್ತು, ಅದು ಆತನ ಸ್ವಾಧೀನತೆಯಲ್ಲಿದ್ದದ್ದು, ಆತನ ಸ್ವಂತ ಖಾತೆಯಲ್ಲಲ್ಲ ಅಥವಾ ಆತನ ಸ್ವಂತ ಸ್ವತ್ತಾಗಿಯಲ್ಲ, ಆದರೆ ಯಾವುದೇ ಇತರ ವ್ಯಕ್ತಿಗಾಗಿ ಟ್ರಸ್ಟ್ನ ಖಾತೆಯಲ್ಲಿ ಅಥವಾ ಅದರಲ್ಲಿತ್ತು, ಅಥವಾ ಭಾಗಶಃವಾಗಿ ಆತನ ಖಾತೆಯಲ್ಲಿ ಅಥವಾ ಭಾಗಶಃವಾಗಿ ಕೆಲವು ಇತರೇ ವ್ಯಕ್ತಿಯ ಖಾತೆಯಲ್ಲಿತ್ತು, ಎನ್ನುವುದನ್ನು ಮನದಟ್ಟು ಮಾಡಿಕೊಂಡಿದ್ದಲ್ಲಿ, ಯುಕ್ತ ಅಧಿಕಾರಿಯು ಸ್ವತ್ತನ್ನು ಪೂರ್ಣವಾಗಿ ಅಥವಾ ಆತನು ಸೂಕ್ತ ಎಂದು ಭಾವಿಸಿದಷ್ಟರ ಮಟ್ಟಿಗೆ ಜಪ್ತಿಅಥವಾ ಚರಾಸ್ತಿ ವಶದಿಂದ ಬಿಡುಗಡೆ ಮಾಡಿ ಆದೇಶ ಮಾಡತಕ್ಕದ್ದು.
(11) ಯುಕ್ತ ಅಧಿಕಾರಿಯು ಸ್ವತ್ತು, ಸದರಿ ದಿನಾಂಕಂದು ಬಾಕಿದಾರನ ಸ್ವಾಧೀನತೆಯಲ್ಲಿ, ಆತನ ಸ್ವಂತ ಸ್ವತ್ತಾಗಿ ಇತ್ತು ಮತ್ತು ಯಾವುದೇ ವ್ಯಕ್ತಿಯ ಖಾತೆಯಲ್ಲಿರಲಿಲ್ಲ, ಅಥವಾ ಆತನಿಗಾಗಿ ಟ್ರಸ್ಟ್ನಲ್ಲಿ ಇತರ ವ್ಯಕ್ತಿಯ ಸ್ವಾಧೀನತೆಯಲ್ಲಿತ್ತು, ಅಥವಾ ಗೇಣಿದಾರನ ಅಥವಾ ಆತನಿಗೆ ಬಾಡಿಗೆಯನ್ನು ಸಂದಾಯ ಮಾಡುವ ಇತರೇ ವ್ಯಕ್ತಿಯ ಅಧಿಭೋಗದಲ್ಲಿತ್ತು ಎನ್ನುವುದನ್ನು ಮನದಟ್ಟು ಮಾಡಿಕೊಂಡಿದ್ದಲ್ಲಿ, ಯುಕ್ತ ಅಧಿಕಾರಿಯು ಕ್ಲೇಮನ್ನು ತಿರಸ್ಕರಿಸತಕ್ಕದ್ದು ಮತ್ತು ಹರಾಜಿನ ಮೂಲಕ ಮಾರಾಟದ ಪ್ರಕ್ರಿಯೆಯನ್ನು ಮುಂದುವರಿಸತಕ್ಕದ್ದು.
(12) ಯುಕ್ತ ಅದಿಕಾರಿಯು ಯಶಸ್ವಿ ಸವಾಲುದಾರನಿಗೆ ಒಂದು ಸೂಚನಾಪತ್ರವನ್ನು, ಅಂಥ ಸೂಚನಾಪತ್ರ ನೀಡಿದ ದಿನಾಂಕದಿಂದ ಹದಿನೈದು ದಿನಗಳ ಒಂದು ಅವಧಿಯ ಒಳಗಾಗಿ ಸಂದಾಯವನ್ನು ಮಾಡುವಂತೆ ಆತನನ್ನು ಅಗತ್ಯಪಡಿಸಿ ನಮೂನೆ ಜಿಎಸ್ಟಿ ಡಿಆರ್ಸಿ-11ರಲ್ಲಿ ನೀಡತಕ್ಕದ್ದು ಮತ್ತು ಸದರಿ ಸಂದಾಯವನ್ನು ಮಾಡಿದ ನಂತರ, ಆತನು ಸ್ವತ್ತಿನ ವಿವರಗಳು, ವರ್ಗಾವಣೆಯ ದಿನಾಂಕ, ಸವಾಲುದಾರನ ವಿವರಗಳು ಮತ್ತು ಸಂದಾಯ ಮಾಡಿದ ಮೊತ್ತವನ್ನು ನಿರ್ದಿಷ್ಟಪಡಿಸಿ ಒಂದು ಪ್ರಮಾಣ ಪತ್ರವನ್ನು ನಮೂನೆ ಜಿಎಸ್ಟಿ ಡಿಆರ್ಸಿ-12ರಲ್ಲಿ ನೀಡತಕ್ಕದ್ದು ಮತ್ತು ಅಂಥ ಪ್ರಮಾಣಪತ್ರವನ್ನು ನೀಡಿದ ತರುವಾಯ, ಸ್ವತ್ತಿನಲ್ಲಿಯ ಹಕ್ಕುಗಳು, ಸ್ವಾಮ್ಯ ಮತ್ತು ಹಿತಾಶಕ್ತಿಯು ಅಂಥ ಸವಾಲುದಾರನಿಗೆ ವರ್ಗಾಯಿಸಲಾಗಿದೆ ಎಂದು ಪರಿಭಾವಿಸತಕ್ಕದ್ದು.್ತ
(13) ಉಪನಿಯಮ (12)ರಲ್ಲಿ ನಿರ್ದಿಷ್ಟಪಡಿಸಿದ ಸ್ವತ್ತಿನ ವರ್ಗಾವಣೆಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ಸ್ಟಾಂಪು ಸುಂಕ, ತೆರಿಗೆ ಅಥವಾ ಶುಲ್ಕವನ್ನು ಒಳಗೊಂಡಂತೆ ಯಾವುದೇ ಮೊತ್ತವನ್ನು, ಯಾರಿಗೆ ಅಂಥ ಸ್ವತ್ತು ವರ್ಗಾವಣೆಯಾಗಿದೆಯೋ ಆ ವ್ಯಕ್ತಿಯು ಸರ್ಕಾರಕ್ಕೆ ಸಂದಾಯ ಮಾಡತಕ್ಕದ್ದು.
(14) ಬಾಕಿದಾರನು ವಸೂಲಾತಿಯ ಅಡಿಯಲ್ಲಿನ ಮೊತ್ತವನ್ನು, ವಸೂಲಾತಿಯ ಪ್ರಕ್ರಿಯೆ ಮೇಲೆ ಭರಿಸಲಾದ ಯಾವುದೇ ವಚ್ಚವನ್ನು ಒಳಗೊಂಡಂತೆ, ಉಪನಿಯಮ (4)ರ ಅಡಿಯಲ್ಲಿ ಸೂಚನಾ ಪತ್ರವನ್ನು ನೀಡುವುದಕ್ಕಿಂತ ಮೊದಲೇ ಸಂದಾಯ ಮಾಡಿದಲ್ಲಿ, ಯುಕ್ತ ಅಧಿಕಾರಿಯು ಹರಾಜಿನ ಪ್ರಕ್ರಿಯೆಯನ್ನು ರದ್ಧುಗೊಳಿಸತಕ್ಕದ್ದು ಮತ್ತು ಸರಕುಗಳನ್ನು ಬಿಡುಗಡೆಗೊಳಿಸತಕ್ಕದ್ದು.
(15) ಯುಕ್ತ ಅಧಿಕಾರಿಯು, ಯಾವುದೇ ಸವಾಲನ್ನು ಸ್ವೀಕರಿಸದಿದ್ದಲ್ಲಿ ಅಥವಾ ಸಾಕಷ್ಟು ಭಾಗವಹಿಸುವಿಕೆಯ ಕೊರತೆಯ ಕಾರಣದಿಂದಾಗಿ ಅಥವಾ ಕಡಿಮೆ ಸವಾಲುಗಳ ಕಾರಣದಿಂದಾಗಿ ಹರಾಜು ಸ್ಪರ್ಧಾತ್ಮಕವಾಗಿಲ್ಲ ಎಂದು ಪರಿಗಣಿಸಬೇಕಾಗಿದ್ದಲ್ಲಿ, ಪ್ರಕ್ರಿಯೆಯನ್ನು ರದ್ದುಗೊಳಿಸತಕ್ಕದ್ದು ಮತ್ತು ಪುನರ್-ಹರಾಜಿಗಾಗಿ ಮುಂದುವರಿಯತಕ್ಕದ್ದು.