(1) ಯಾವುದೇ ಚುನಾವಣೆಯಲ್ಲಿ ಚುನಾವಣಾ ವೆಚ್ಚಗಳ ಲೆಕ್ಕದ ವಿವರಗಳನ್ನು ಸಲ್ಲಿಸುವುದಕ್ಕಾಗಿ 44ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಅವಧಿಯು ಮುಕ್ತಾಯವಾದ ನಂತರ ಆದಷ್ಟು ಬೇಗನೆ ರಿಟರ್ನಿಂಗ್ ಅಧಿಕಾರಿಯು ರಾಜ್ಯ ಚುನಾವಣಾ ಆಯೋಗಕ್ಕೆ ಈ ಮುಂದಿನ ವರದಿಯನ್ನು ಸಲ್ಲಿಸತಕ್ಕದ್ದು. ಎಂದರೆ:-
(ಎ) ಸ್ಪರ್ಧಿಸುತ್ತಿರುವ ಪ್ರತಿಯೊಬ್ಬ ಅಭ್ಯರ್ಥಿಯ ಹೆಸರು;
(ಬಿ) ಅಂಥ ಅಭ್ಯರ್ಥಿಯು ತನ್ನ ಚುನಾವಣಾ ವೆಚ್ಚಗಳ ಲೆಕ್ಕವನ್ನು ಸಲ್ಲಿಸಿದ್ದಾರೆಯೇ, ಹಾಗಿದ್ದರೆ, ಯಾವ ದಿನಾಂಕದಂದು ಅಂಥ ಲೆಕ್ಕವನ್ನು ಸಲ್ಲಿಸಿದ್ದಾರೆ: ಮತ್ತು
(ಸಿ) ಅಂಥ ಲೆಕ್ಕವನ್ನು ಅಧಿನಿಯಮ ಮತ್ತು ಈ ನಿಯಮಗಳ ಮೂಲಕ ಅಗತ್ಯಪಡಿಸಿದ ಸಮಯದೊಳಗೆ ಮತ್ತು ರೀತಿಯಲ್ಲಿ ಸಲ್ಲಿಸಲಾಗಿದೆಯೇ ಎಂಬುದರ ಬಗ್ಗೆ ರಿಟರ್ನಿಂಗ್ ಅಧಿಕಾರಿಯ ಅಭಿಪ್ರಾಯ.
(2) ರಿಟರ್ನಿಂಗ್ ಅಧಿಕಾರಿಯು ಅಭಿಪ್ರಾಯಪಟ್ಟಿರುವಂತೆ, ಯಾವುದೇ ಅಭ್ಯರ್ಥಿಯು ಚುನಾವಣಾ ವೆಚ್ಚಗಳ ಲೆಕ್ಕವನ್ನು ಅಧಿನಿಯಮ ಮತ್ತು ಈ ನಿಯಮಗಳ ಮೂಲಕ ಅಗತ್ಯಪಡಿಸಿದ ರೀತಿಯಲ್ಲಿ ಸಲ್ಲಿಸಿರದಿದ್ದಲ್ಲಿ, ಅಭ್ಯರ್ಥಿಯ ಚುನಾವಣಾ ವೆಚ್ಚಗಳ ಲೆಕ್ಕ ಮತ್ತು ಅದರೊಂದಿಗೆ ವೋಚರುಗಳ ಸಹಿತವಾಗಿ ಸಲ್ಲಿಸಿರುವ ಬಗ್ಗೆ ಆತನು ರಾಜ್ಯ ಚುನಾವಣಾ ಆಯೋಗಕ್ಕೆ ಅಂಥ ಪ್ರತಿಯೊಂದು ವರದಿಯನ್ನು ಕಳುಹಿಸತಕ್ಕದ್ದು.
(3) (2) ನೇ ಉಪ-ನಿಯಮದಲ್ಲಿ ಉಲ್ಲೇಖಿಸಿದ ವರದಿಯನ್ನು ಸಲ್ಲಿಸಿದ ತರುವಾಯ ಕೂಡಲೇ, ರಿಟರ್ನಿಂಗ್ ಅಧಿಕಾರಿಯು ಸೂಚನಾ ಫಲಕದಲ್ಲಿ ಅದನ್ನು ಅಂಟಿಸುವುದರ ಮೂಲಕ ಅದರ ಒಂದು ಪ್ರತಿಯನ್ನು ಪ್ರಕಟಿಸತಕ್ಕದ್ದು.
(4) (2) ನೇ ಉಪ-ನಿಯಮದಲ್ಲಿ ಉಲ್ಲೇಖಿಸಿದ ವರದಿಯು ಸ್ವೀಕೃತವಾದ ನಂತರ ಆದಷ್ಟು ಬೇಗನೆ, ರಾಜ್ಯ ಚುನಾವಣಾ ಆಯೋಗವು ಅದನ್ನು ಪರಿಗಣಿಸತಕ್ಕದ್ದು ಮತ್ತು ಸ್ಪರ್ಧಿಸಿರುವ ಯಾರೇ ಅಭ್ಯರ್ಥಿಯು ಅಧಿನಿಯಮ ಮತ್ತು ಈ ನಿಯಮಗಳ ಮೂಲಕ ಅಗತ್ಯಪಡಿಸಿರುವ ಸಮಯದೊಳಗೆ ಮತ್ತು ಅಂಥ ರೀತಿಯಲ್ಲಿ ಚುನಾವಣಾ ವೆಚ್ಚಗಳ ಲೆಕ್ಕವನ್ನು ಸಲ್ಲಿಸಲು ವಿಫಲರಾಗಿದ್ದಾರೆಯೇ ಎಂಬುದನ್ನು ತೀರ್ಮಾನಿಸತಕ್ಕದ್ದು.
(5) ರಾಜ್ಯ ಚುನಾವಣಾ ಆಯೋಗವು, ಸ್ಪರ್ಧಿಸಿರುವ ಅಭ್ಯರ್ಥಿಯು ಅಧಿನಿಯಮ ಮತ್ತು ಈ ನಿಯಮಗಳಲ್ಲಿ ಅಗತ್ಯಪಡಿಸಿದ ಸಮಯದೊಳಗೆ ಮತ್ತು ಅಂಥ ರೀತಿಯಲ್ಲಿ ಚುನಾವಣಾ ವೆಚ್ಚಗಳ ಲೆಕ್ಕವನ್ನು ಸಲ್ಲಿಸಲು ವಿಫಲರಾಗಿದ್ದಾರೆಂದು ತೀರ್ಮಾನಿಸಿದ್ದಲ್ಲಿ ಅಂಥ ವಿಫಲತೆಗಾಗಿ ಅ ಅಭ್ಯರ್ಥಿಗೆ 45ನೇ ಪ್ರಕರಣದ ಅಡಿಯಲ್ಲಿ ಅವರನ್ನು ಏಕೆ ಅನರ್ಹಗೊಳಿಸಬಾರದೆಂಬ ಬಗ್ಗೆ ಲಿಖಿತದಲ್ಲಿ ನೋಟೀಸ್ ಮೂಲಕ ಕಾರಣವನ್ನು ಕೇಳತಕ್ಕದ್ದು.
(6) (5) ನೇ ಉಪ-ವಿಯಮದ ಮೇರೆಗೆ ಕಾರಣ ಕೇಳಲು ಕರೆದಾಗ, ಚುನಾವಣೆಗೆ ಸ್ಪರ್ಧಿಸಿದ ಯಾರೇ ಅಭ್ಯರ್ಥಿಯು ಆ ವಿಷಯಕ್ಕೆ ಸಂಬಂಧಪಟ್ಟಂತೆ ಅಂಥ ನೋಟೇಸನ್ನು ಸ್ಟೀಕರಿಸಿದ ಇಪ್ಪತ್ತು ದಿನಗಳೊಳಗಾಗಿ ತನ್ನ ಮನವಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಲಿಖಿತದಲ್ಲಿ ಸಲ್ಲಿಸಬಹುದು ಹಾಗೂ ಅಂಥ ಲೆಕ್ಕವನ್ನು ಈಗಾಗಲೇ ಒದಗಿಸದಿದ್ದಲ್ಲಿ, ತನ್ನ ಚುನಾವಣಾ ವೆಚ್ಚಗಳ ಪೂರ್ಣ ಲೆಕ್ಕದೊಂದಿಗೆ ತನ್ನ ಮನವಿಯ ಪ್ರತಿಯನ್ನು ಅದೇ ಸಮಯದಲ್ಲಿ ರಿಟರ್ನಿಂಗ್ ಅಧಿಕಾರಿಗೆ ಸಲ್ಲಿಸತಕ್ಕದ್ದು.
(7) ರಿಟರ್ನಿಂಗ್ ಅಧಿಕಾರಿಯು ಅಂಥ ಮನವಿಯ ಪ್ರತಿ ಮತ್ತು ಲೆಕ್ಕ (ಯಾವುದಾದರೂ ಇದ್ದರೆ) ಚುನಾವಣಾ ವೆಚ್ಚಗಳ ಲೆಕ್ಕವನ್ನು ಸ್ವೀಕರಿಸಿದ ಐದು ದಿನಗಳ ಒಳಗೆ ಈ ಬಗ್ಗೆ ತಾನು ಅಂಥ ಯುಕ್ತ ಅಭಿಪ್ರಾಯದೊಂದಿಗೆ ಅದರ ಆಧಾರದ ಮೇಲೆ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸತಕ್ಕದ್ದು.