(1) ಈ ಬಗ್ಗೆ ರಾಜ್ಯ ಚುನಾವಣಾ ಆಯೋಗವು ನೀಡಬಹುದಾದಂಥ ಸಾಮಾನ್ಯ ಅಥವಾ ವಿಶೇಷ ನಿರ್ದೇಶನಗಳು ಯಾವುದಾದರೂ ಇದ್ದರೆ ಅವುಗಳಿಗೊಳಪಟ್ಟು, ಒಂದು ವಾರ್ಡಿನಲ್ಲಿ ಬಳಸಿದ ಎಲ್ಲ ಪೆಟ್ಟಿಗೆಗಳಿಂದ ತೆಗೆದುಕೊಂಡ ಮತಪತ್ರಗಳನ್ನು ಒಟ್ಟಿಗೆ ಬೆರೆಸತಕ್ಕದ್ದು ಮತ್ತು ನಂತರ ಅನುಕೂಲಕರವಾದ ಕಟ್ಟುಗಳಲ್ಲಿ ವ್ಯವಸ್ಥೆ ಮಾಡತಕ್ಕದ್ದು ಮತ್ತು ಪರಿಶೀಲಿಸತಕ್ಕದ್ದು.
(2) ರಿಟರ್ನಿಂಗ್ ಅಧಿಕಾರಿಯು, ಮತಪತ್ರವನ್ನು,
(i) ಮತದಾರನನ್ನು ಗುರುತಿಸಬಹುದಾದಂಥ ಯಾವುದೇ ಗುರುತು ಅಥವಾ ಬರಹವನ್ನು ಅದು ಹೊಂದಿದ್ದರೆ;
(ii) ಮತವನ್ನು ಸೂಚಿಸುವ ಯಾವುದೇ ಗುರುತನ್ನು ಅದು ಹೊಂದಿರದಿದ್ದರೆ, ಮತಪತ್ರದ ಮೇಲೆ ಅಭ್ಯರ್ಥಿಯ ಚಿಹ್ನೆಯ ಮೇಲೆ ಅಥವಾ ಪಕ್ಕದಲ್ಲಿ ಅಲ್ಲದೆ ಬೇರೆ ಕಡೆ ಗುರುತನ್ನು ಅದು ಹೊಂದಿದ್ದರೆ ಅಥವಾ ಆ ಉದ್ದೇಶಕ್ಕಾಗಿ ಒದಗಿಸಿದ ಸಾಧನದಿಂದಲ್ಲದೆ ಬೇರೆಯದರಿಂದ ಮಾಡಿದ ಗುರುತನ್ನು ಅದು ಹೊಂದಿದ್ದರೆ;
(iii) ಆಯ್ಕೆ ಮಾಡಬೇಕಾಗಿರುವ ಉಮೇದುದಾರರಿಗಿಂತ ಹೆಚ್ಚಿನ ಉಮೇದುದಾರರಿಗೆ ಅದರ ಮೇಲೆ ಮತಗಳನ್ನು ನೀಡಿದ್ದರೆ;
(iv) ಯಾವ ಅಭ್ಯರ್ಥಿಗೆ ಮತವನ್ನು ನೀಡಲಾಗಿದೆ ಎಂಬುದರ ಬಗ್ಗೆ ಸಂಶಯ ಉಂಟುಮಾಡುವ ರೀತಿಯಲ್ಲಿ ಅದರ ಮೇಲೆ ಮತ ಸೂಚಿಸುವ ಗುರುತನ್ನು ಹಾಕಿದ್ದರೆ;
(v) ಅದು ಖೋಟಾ ಮತಪತ್ರವಾಗಿದ್ದರೆ;
(vi) ಅದು ನೈಜವಾದ ಮತಪತ್ರವೆಂದು ಗುರುತಿಸುವುದನ್ನು ದೃಢಪಡಿಸಿಕೊಳ್ಳಲಾಗದ ಹಾಗೆ ಅದು ಹಾನಿಯಾಗಿದ್ದರೆ ಅಥವಾ ವಿರೂಪವಾಗಿದ್ದರೆ;
(vii) ನಿರ್ದಿಷ್ಟ ಮತದಾನ ಕೇಂದ್ರದಲ್ಲಿ ಬಳಸುವುದಕ್ಕಾಗಿ ಅಧಿಕೃತಗೊಳಿಸಲಾದ ಮತಪತ್ರಗಳ ಕ್ರಮಸಂಖ್ಯೆ ಅಥವಾ ಕ್ರಮಸಂಖ್ಯೆಗಳಿಗಿಂತ ಭಿನ್ನವಾದ ಕ್ರಮಸಂಖ್ಯೆ ಅಥವಾ ಸಂದರ್ಭಾನುಸಾರ ವಿನ್ಯಾಸವನ್ನು ಅದು ಹೊಂದಿದ್ದರೆ; ಅಥವಾ
(viii) 57ನೇ ನಿಯಮದ (1) ನೇ ಉಪ-ನಿಯಮದ ಉಪಬಂಧಗಳ ಮೇರೆಗೆ ಅದು ಹೊಂದಿರಬೇಕಾಗಿರುವ ಗುರುತು ಮತ್ತು ಸಹಿ ಎರಡನ್ನು ಅದು ಹೊಂದಿರದಿದ್ದರೆ, - ತಿರಸ್ಕರಿಸತಕ್ಕದ್ದು.
ಪರಂತು, ರಿಟರ್ನಿಂಗ್ ಅಧಿಕಾರಿಯು, (vii) ಖಂಡ ಅಥವಾ (viii) ಖಂಡದಲ್ಲಿ ನಮೂದಿಸಲಾದಂಥ ಯಾವುದೇ ದೋಷವು, ಪ್ರಿಸೈಡಿಂಗ್ ಅಧಿಕಾರಿ ಅಥವಾ ಪೋಲಿಂಗ್ ಅಧಿಕಾರಿ ಕಡೆಯಿಂದ ಯಾವುದೇ ತಪ್ಪಿನಿಂದ ಅಥವಾ ವಿಫಲತೆಯಿಂದಾಗಿದೆ ಎಂದು ಮನದಟ್ಟಾದಲ್ಲಿ, ಮತಪತ್ರವನ್ನು, ಅಂಥ ದೋಷದ ಕಾರಣದಿಂದ ಮಾತ್ರವೇ ತಿರಸ್ಕರಿಸತಕ್ಕದ್ದಲ್ಲ.
ಪರಂತು, ಮತಪತ್ರವನ್ನು ಆ ಮತವು ನಿರ್ದಿಷ್ಟ ಅಭ್ಯರ್ಥಿಗಾಗಿ ಎಂಬ ಉದ್ದೇಶವು ಗುರುತು ಮಾಡಿದ ಪತ್ರದಿಂದ ಸ್ಪಷ್ಟವಾಗಿ ಕಂಡುಬಂದರೆ ಮತ ಸೂಚಿಸಿರುವ ಗುರುತು ಅಸ್ಪಷ್ಟವಾಗಿದೆ ಅಥವಾ ಒಂದಕ್ಕಿಂತ ಹೆಚ್ಚು ಸಲ ಗುರುತು ಮಾಡಲಾಗಿದೆ ಎಂಬ ಕಾರಣದಿಂದ ಮಾತ್ರವೇ ತಿರಸ್ಕರಿಸತಕ್ಕದ್ದಲ್ಲ.
(3) (2) ನೇ ಉಪ-ನಿಯಮದ ಮೇರೆಗೆ ಯಾವುದೇ ಮತಪತ್ರವನ್ನು ತಿರಸ್ಕರಿಸುವ ಮುಂಚೆ, ರಿಟರ್ನಿಂಗ್ ಅಧಿಕಾರಿಯು, ಹಾಜರಿರುವ ಪ್ರತಿಯೊಬ್ಬ ಮತ ಎಣಿಕೆ ಏಜೆಂಟ್ಗೆ ಮತಪತ್ರವನ್ನು ಪರಿಶೀಲಿಸುವ ಯುಕ್ತ ಅವಕಾಶವನ್ನು ನೀಡತಕ್ಕದ್ದು ಆದರೆ ಅದನ್ನು ಅಥವಾ ಇತರೆ ಯಾವುದೇ ಮತಪತ್ರವನ್ನು ಬಳಸಲು ಅವರಿಗೆ ಅವಕಾಶ ನೀಡತಕ್ಕದ್ದಲ್ಲ.
(4) ರಿಟರ್ನಿಂಗ್ ಅಧಿಕಾರಿಯು ಅವರು ತಿರಸ್ಕರಿಸಿದ ಪ್ರತಿಯೊಂದು ಮತಪತ್ರದ ಮೇಲೆ “ತಿರಸ್ಕರಿಸಲಾಗಿದೆ” ಎಂಬ ಪದವನ್ನು ಹಿಂಬರಹ ಮಾಡತಕ್ಕದ್ದು ಮತ್ತು ತಿರಸ್ಕರಣೆಯ ಕಾರಣಗಳನ್ನು ಸಂಕ್ಷಿಪ್ತ ರೂಪದಲ್ಲಿ ಅವರ ಸ್ವಹಸ್ತಾಕ್ಷರದಿಂದಾಗಲಿ ಅಥವಾ ರಬ್ಬರ್ ಸ್ಟ್ಯಾಂಪ್ನಿಂದಾಗಲಿ ಹಿಂಬರಹ ಮಾಡತಕ್ಕದ್ದು ಮತ್ತು ಹಿಂಬರಹಕ್ಕೆ ಚಿಕ್ಕ ರುಜು ಮಾಡತಕ್ಕದ್ದು.
(5) ಈ ನಿಯಮದ ಮೇರೆಗೆ ತಿರಸ್ಕರಿಸಿದ ಎಲ್ಲ ಮತಪತ್ರಗಳನ್ನು ಒಟ್ಟಿಗೆ ಕಟ್ಟಿಡತಕ್ಕದ್ದು.
(6) ಈ ನಿಯಮದ ಮೇರೆಗೆ ತಿರಸ್ಕರಿಸದೆ ಇರುವ ಪ್ರತಿಯೊಂದು ಮತಪತ್ರವನ್ನು ಎಣಿಕೆ ಮಾಡತಕ್ಕದ್ದು.
ಪರಂತು, ಟೆಂಡರ್ಡ್ ಮತಪತ್ರವಿರುವ ಯಾವುದೇ ಲಕೋಟೆಯನ್ನು ತೆರೆಯತಕ್ಕದ್ದಲ್ಲ ಮತ್ತು ಅಂಥ ಯಾವುದೇ ಮತಪತ್ರವನ್ನು ಎಣಿಕೆ ಮಾಡತಕ್ಕದ್ದಲ್ಲ.
(7) ವಾರ್ಡಿನಲ್ಲಿ ಬಳಸದ ಎಲ್ಲ ಮತ ಪೆಟ್ಟಿಗೆಗಳಲ್ಲಿರುವ ಎಲ್ಲ ಮತಪತ್ರಗಳನ್ನು ಎಣಿಕೆಯನ್ನು ಪೂರ್ಣಗೊಳಿಸಿದ ತರುವಾಯ, ರಿಟರ್ನಿಂಗ್ ಅಧಿಕಾರಿಯು, ನಮೂನೆ-23 ರಲ್ಲಿ ಫಲಿತಾಂಶ ಹಾಳೆಯಲ್ಲಿ ನಮೂದುಗಳನ್ನು ಮಾಡತಕ್ಕದ್ದು ಮತ್ತು ವಿವರಗಳನ್ನು ಪ್ರಕಟಿಸತಕ್ಕದ್ದು.