(1) ಪ್ರತಿಯೊಂದು ಮತದಾನ ಕೇಂದ್ರದ ಹೊರಗೆ,-
(ಎ) ಮತದಾನ ಕೇಂದ್ರದಲ್ಲಿ ಮತ ಚಲಾಯಿಸಲು ಹಕ್ಕುಳ್ಳವರಾಗಿರುವಂಥ ಮತದಾರರು, ಮತದಾನ ಕ್ಷೇತ್ರವನ್ನು ನಿರ್ದಿಷ್ಟಪಡಿಸುವ ಸೂಚನಾ ಪತ್ರ ಮತ್ತು ಮತದಾನ ಕ್ಷೇತ್ರದ ಒಂದಕ್ಕಿಂತ ಹೆಚ್ಚಿನ ಮತದಾನ ಕೇಂದ್ರವನ್ನು ಹೊಂದಿದ್ದರೆ, ಹಾಗೆ ಹಕ್ಕುಳ್ಳವರಾಗಿರುವ ಮತದಾರರ ವಿವರಗಳು; ಮತ್ತು
(ಬಿ) ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯ ಒಂದು ಪ್ರತಿಯನ್ನು ಎದ್ದುಕಾಣುವಂತೆ ಪ್ರದರ್ಶಿಸತಕ್ಕದ್ದು.
(2) ಪ್ರತಿಯೊಂದು ಮತದಾನ ಕೇಂದ್ರದಲ್ಲಿ, ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಪೋಲಿಂಗ್ ಕಂಪಾರ್ಟ್ಮೆಂಟ್ಗಳನ್ನು ರಚಿಸತಕ್ಕದ್ದು, ಅದರಲ್ಲಿ ಮತದಾರರು ವೀಕ್ಷಣೆಯಿಂದ ಮುಕ್ತವಾಗಿ (ಗೌಪ್ಯವಾಗಿ) ಅವರ ಮತಗಳನ್ನು ಚಲಾಯಿಸಬಹುದು.
(3) ರಿಟರ್ನಿಂಗ್ ಅಧಿಕಾರಿಯು, ಪ್ರತಿಯೊಂದು ಮತದಾನ ಕೇಂದ್ರದಲ್ಲಿ ಒಂದು ಮತಯಂತ್ರ ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದ ಭಾಗದ ಪ್ರತಿಗಳು ಮತ್ತು ಮತದಾನ ನಡೆಸಲು ಅಗತ್ಯ ವಿರುವಂತಹ ಇತರೆ ಚುನಾವಣಾ ಸಾಮಗ್ರಿಗಳನ್ನು ಒದಗಿಸತಕ್ಕದ್ದು.
(4) ಉಪ-ನಿಯಮ (3) ರ ಉಪಬಂಧಗಳಿಗೆ ಬಾಧಕವಾಗದಂತೆ, ರಿಟರ್ನಿಂಗ್ ಅಧಿಕಾರಿಯು, ರಾಜ್ಯ ಚುನಾವಣಾ ಆಯೋಗದ ಪೂರ್ವಾನುಮೋದನೆಯೊಂದಿಗೆ, ಒಂದೇ (ಅದೇ) ಆವರಣದಲ್ಲಿ ಇರುವ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಮತದಾನ ಕೇಂದ್ರಗಳಿಗಾಗಿ ಒಂದೇ ಸಾಮಾನ್ಯ ಮತಯಂತ್ರವನ್ನು ಒದಗಿಸಬಹುದು.