(1) ಪ್ರಾರಂಭಿಕ ವರದಿಗೆ ಕಮಿಷನರ ಅನುಮೋದನೆಯು ದೊರೆತ ಮೇಲೆ, ಕಂದಾಯ ವ್ಯವಸ್ಥೆಯ ಅಧಿಕಾರಿಯ ತೀವ್ರ ವಿಚಾರಣೆಯನ್ನು ನಡೆಸತಕ್ಕದ್ದು ಮತ್ತು ಆ ವಲಯದ ಸಂಬಧದಲ್ಲಿ ಈ ಕೆಳಕಂಡ ವಿಷಯಗಳ ಬಗ್ಗೆ ಮತ್ತು ಕೆಳಗೆ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಮಾಹಿತಿಗಳನ್ನು ಸಂಗ್ರಹಿಸತಕ್ಕದ್ದು.
(ಎ) ಭೂಮಿಯ ಮೇಲ್ಮೈ ವಿನ್ಯಾಸ.- ಕಂದಾಯ ವ್ಯವಸ್ಥೆಯ ಅಧಿಕಾರಿಯು, ಭೂಮಿಯ ಮೇಲ್ಮೈ ವಿನ್ಯಾಸದ, ಸಂಬಂಧದಲ್ಲಿ,-
(i) ತಾನು ಸ್ವತಃ ಮಾಡಿದ ಸಮೀಕ್ಷೆಗಳ, ಮತ್ತು
(ii) ಹಿಂದಿನ ಕಂದಾಯ ವ್ಯವಸ್ಥೆಯ ವರದಿಗಳಲ್ಲಿ ಮತ್ತು ಜಿಲ್ಲಾ ಗೆಜೆಟಿಯರುಗಳಲ್ಲಿ ದೊರೆಯಬಹುದಾದ ಮಾಹಿತಿಯ ಮೇಲೆ ತನ್ನ ಮಾಹಿತಿಯನ್ನು ಆಧರಿಸತಕ್ಕದ್ದು.
(ಬಿ) ವಾಯುಗುಣ ಮತ್ತು ಮಳೆ.- ಕಂದಾಯ ವ್ಯವಸ್ಥೆಯ ಅಧಿಕಾರಿಯ ವಾಯುಗುಣದ ಸಂಬಂಧದಲ್ಲಿ ಸ್ವತಃ ವಿಚಾರಣೆಯನ್ನು ನಡೆಸುವುದರ ಮೂಲಕ ಮತ್ತು ಜನಾರೋಗ್ಯ ಇಲಾಖೆಯಿಂದ ಪಡೆದ ವಿವರಗಳ ಮೇಲೆ ತನ್ನ ಮಾಹಿತಿಯನ್ನು ಆಧರಿಸತಕ್ಕದ್ದು.
ಕೊನೆಯದಾಗಿ ಕಂದಾಯ ವ್ಯವಸ್ಥೆಯನ್ನು ಜಾರಿಗೆ ತಂದ ತರುವಾಯದ ವರ್ಷಗಳಿಗೆ ಸಂಬಂಧಿಸಿದಂತೆ ಅವನು ಅಂಕಿ ಅಂಶಗಳ ಇಲಾಖೆಯಿಂದ ಅಥವಾ ಸಂಬಧಪಟ್ಟ ತಾಲ್ಲೂಕಿನ ತಹಶೀಲ್ದಾರನಿಂದ ಮಳೆಯ ಅಂಕಿಅಂಶಗಳನ್ನು ಸಂಗ್ರಹಿಸತಕ್ಕದ್ದು ಅಥವಾ ಅಂಥ ವಿವರಗಳನ್ನು ಸರ್ಕಾರಿ ಪ್ರಕಟಣೆಗಳು ಅಥವಾ ಇತರ ಸರ್ಕಾರಿ ದಾಖಲೆಗಳಿಂದ ಪಡೆಯಬಹುದು. ವಿಚಾರಣೆಯ ನಿಕಟಪೂರ್ವದ 10 ವರ್ಷಗಳ ಋತುಮಾನ ಸ್ಥಿತಿಗಳ ಸಂಬಂಧದಲ್ಲಿನ ಮಾಹಿತಿಯನ್ನು ವಲಯದ ಸಾಮಾನ್ಯ ಋತುಮಾನದ ಸ್ಥಿತಿಯನ್ನು ತೋರಿಸಲು ಅದು ಸಾಕಾಗುವುದೆಂದು ಅವನು ಅಭಿಪ್ರಾಯ ಪಟ್ಟರೆ, ಇದೇ ರೀತಿ ಸಂಗ್ರಹಿಸತಕ್ಕದ್ದು.
(ಸಿ) ಮುಖ್ಯ ಬೆಳೆಗಳ ಇಳುವರಿ.- ಮುಖ್ಯ ಬೆಳೆಗಳ ಸರಾಸರಿ ಇಳುವರಿಯನ್ನು ಗೊತ್ತುಮಾಡುವುದಕ್ಕಾಗಿ, ಕಂದಾಯ ವ್ಯವಸ್ಥೆಯ ಅಧಿಕಾರಿಯು ಈ ಕೆಳಕಂಡ ಎರಡು ವಿಧಾನಗಳನ್ನು ಅನುಸರಿಸತಕ್ಕದ್ದು.
(i) ವ್ಯವಸಾಯ ಇಲಾಖೆಯು, ಅಂಕಿ ಅಂಶಗಳ ಇಲಾಖೆಯು, ಮತ್ತು ರೆವಿನ್ಯೂ ಇಲಾಖೆಯು ಬೆಳೆ ಕೊಯ್ಯುವ ಪ್ರಯೋಗಗಳ ಫಲಿತಾಂಶಗಳ ಸಂಬಂಧದಲ್ಲಿ ದಾಖಲು ಮಾಡಿರುವ ಮಾಹಿತಿಯನ್ನು ಸಂಗ್ರಹಿಸುವುದರ ಮೂಲಕ;
ವಿವರಣೆ:
(ii) ಮೋಜಣಿ, ಭೂಕಂದಾಯ ವ್ಯವಸ್ತೆ ಮತ್ತು ಭೂದಾಖಲೆಗಳ ಕಮಿಷನರು ಕೊಟ್ಟಿರುವ ಸೂಚನೆಗಳಿಗನುಸಾರವಾಗಿ (ಪ್ರತಿಯೊಂದು ಪ್ರಾತಿನಿಧಿಕ ಗ್ರಾಮದಲ್ಲಿ ಪ್ರತಿಯೊಂದು ಮುಖ್ಯ ಬೆಳೆಯ ಬಗ್ಗೆ ವಿಚಾರಣಾ ವರ್ಷದಲ್ಲಿ ಸುಗ್ಗಿಯ ಕಾಲದಲ್ಲಿ ನಡೆಸಿದ ಬೆಳೆಕೊಯ್ಯುವ ಪ್ರಯೋಗಗಳ ಮೂಲಕ.
(iii) ಮೋಜಣಿ, ಭೂಕಂದಾಯ ವ್ಯವಸ್ಥೆ ಕಾಯಾಚರಣೆಯು ಪ್ರಾರಂಭವಾಗುವುದಕ್ಕೆ ಮೊದಲು ಎಲ್ಲ ಜಮೀನುಗಳಲ್ಲಿ ಕುಯಿಲು ಆಗಿದ್ದರೆ, ಕಂದಾಯ ವ್ಯವಸ್ಥೆಯ ಅಧಿಕಾರಿಯು ಸ್ಥಳೀಯ ವಇಚಾರಣೆಯ ಮತ್ತು ದೊರೆಯಬಹುದಾದ ಇತರ ಅಂಕಿಅಂಶಗಳ ಆಧಾರದ ಮೇಲೆ ತನ್ನ ತೀರ್ಮಾನವನ್ನು ಕೊಡತಕ್ಕದ್ದು, ಸರಾಸರಿ ಇಳುವರಿಯನ್ನು ಕಂಡುಹಿಡಿಯುವ ಉದ್ದೇಶಕ್ಕಾಗಿ, ಒಂದೇ ಜಮೀನಿನಲ್ಲಿ ಎರಡು ಅಥವಾ ಹೆಚ್ಚಿನ ಬೆಳೆಗಳನ್ನು ಬೆಳೆದಾಗ, ಕೊಯಿಲು ಮಾಡಿದ ಮೊದಲ ಬೆಳೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದು.
(ಡಿ) ಮುಖ್ಯ ಬೆಳೆಗಳ ಬೆಲೆಗಳು:- ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ದಾಖಲೆಗಳ ಕಮಿಷನರು ನಿರ್ದಿಷ್ಟಪಡಿಸಬಹುದಾದಂಥ ಅವಧಿಯಲ್ಲಿ ಇರುವ ವಿವಿಧ ಮುಖ್ಯ ಬೆಳೆಗಳ ಬೆಲೆಗಳ ಬಗ್ಗೆ ಮಾಹಿತಿಯನ್ನು ತಾಲ್ಲೂಕಿನ ತಹಸೀಲುದಾರನಿಂದ ಅಥವಾ ವ್ಯವಸಾಯ ಇಲಾಖೆಯಿಂದ ಪಡೆಯತಕ್ಕದ್ದು ಅಥವಾ ಸಂಬಂಧಪಟ್ಟ ಆಡಳಿತ ವರದಿಗಳಿಂದ ಸಂಗ್ರಹಿಸತಕ್ಕದ್ದು.
(2) (1)ನೇ ಉಪನಿಯಮದಲ್ಲಿ ಉಲ್ಲೇಖಿತವಾದ ವಿಷಯಗಳ ಜೊತೆಗೆ ಕಂದಾಯ ವ್ಯವಸ್ಥೆಯ ಅಧಿಕಾರಿಯು ಈ ಕೆಳಕಂಡ ವಿಷಯಗಳ ಸಂಬಂಧದಲ್ಲಿ ಈ ಕೆಳಗೆ ಸೂಚಿಸಿದ ರೀತಿಯಲ್ಲೂ ಮಾಹಿತಿನ್ನು ಸಂಗ್ರಹಿಸಬಹುದು:-
(ಎ) ಮಾರುಕಟ್ಟೆ ಸೌಲಭ್ಯಗಳು.- ಕಂದಾಯ ವ್ಯವಸ್ಥೆಯ ಅಧಿಕಾರಿಯು ಮಾರುಕಟ್ಟೆಯ ಸೌಲಭ್ಯಗಳ ಬಗ್ಗೆ ತಾನು ಮಾಡಿದ ವೈಯಕ್ತಿಕ ವಿಚಾರಣೆಯ ಮೇರೆ ಮಾಹಿತಿಯನ್ನು ಸಂಗ್ರಹಿಸತಕ್ಕದ್ದು.
(ಬಿ) ಸಂಚಾರ ಮಾರ್ಗಗಳು.- ಕಂದಾಯ ವ್ಯವಸ್ಥೆಯ ಅಧಿಕಾರಿಯು ತನ್ನ ಸ್ವಂತ ಸಮೀಕ್ಷೆಯಿಂದ ಮತ್ತು ಲೋಕೋಪಯೋಗಿ ಇಲಾಖೆಯಿಂದ ಪಡೆದ ವಿವರಗಳಿಗೆ ಸಂಬಂಧಪಟ್ಟಂತೆ ಸಂಚಾರ ಮಾರ್ಗಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸತಕ್ಕದ್ದು.
(ಸಿ) ಪಶುಸಂಗೋಪನೆಯ ಮಟ್ಟ.- ಕಂದಾಯ ವ್ಯವಸ್ಥೆಯ ಅಧಿಕಾರಿಯು ಪಶುಸಂಗೋಪನೆಯ ಮಟ್ಟದ ಸಂಬಂಧದಲ್ಲಿ ತಾನು ಸ್ವತಃ ಸಮೀಕ್ಷೆಯಿಂದ ಮಾಹಿತಿಯನ್ನು ಸಂಗ್ರಹಿಸತಕ್ಕದ್ದು.
(ಡಿ) ಜನಸಂಖ್ಯೆ ಮತ್ತು ಕೆಲಸಗಾರರ ಸರಬರಾಜು.- ಕಂದಾಯ ವ್ಯವಸ್ಥೆಯ ಅಧಿಕಾರಿಯು ಅಂಕಿ ಅಂಶಗಳ ಇಲಾಖೆಯಿಂದ ಅಥವಾ ಬೇರೆ ರೀತಿಯಲ್ಲಿ ವೃತ್ತಿಗನುಸಾರವಾಗಿ ಜನಸಂಖ್ಯೆಯ ಅಂಕಿ ಅಂಶವನ್ನು ಪಡೆಯತಕ್ಕದ್ದು, ಪ್ರತಿಯೊಂದು ಪ್ರಾತಿನಿಧಿಕ ಗ್ರಾಮದಲ್ಲಿ ದೊರೆಯುವ ಕೆಲಸಗಾರರ ಬಗ್ಗೆ ಅವನು ಸ್ವಂತ ವಿಚಾರಣೆಯ ಮೂಲಕ ತಿಳಿದುಕೊಳ್ಳತಕ್ಕದ್ದು.
(ಇ) ಕೃಷಿ ಸಂಪನ್ಮೂಲಗಳು.- ಕಂದಾಯ ವ್ಯವಸ್ಥೆಯ ಅಧಿಕಾರಿಯು, ಸಂದರ್ಭಾನುಸಾರ, ತಹಸೀಲುದಾರನಿಂದ ಅಥವಾ ವ್ಯವಸಾಯ ಇಲಾಖೆಯಿಂದ ಅಥವಾ ಪಶುಸಂಗೋಪನಾ ಇಲಾಖೆಯಿಂದ ಪಶುಸಂಪತ್ತಿನ, ವ್ಯವಸಾಯದ ಉಪಕರಣಗಳ ಮತ್ತು ಇತರ ಕೃಷಿ ಸಂಪನ್ಮೂಲಗಳ ಬಗ್ಗೆ ಮಾಹಿತಿಯನ್ನು ಪಡೆಯತಕ್ಕದ್ದು.
(ಎಫ್) ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಅಧಿಭೋಗದಲ್ಲಿರುವ ಮತ್ತು ಸಾಗುವಳಿಯಾದ ಭೂಮಿಯ ವಿಸ್ತೀರ್ಣದಲ್ಲಿ ಆಗಿರುವ ಬದಲಾವಣೆ.- ಕಂದಾಯ ವ್ಯವಸ್ಥೆಯ ಅಧಿಕಾರಿಯು ಸಾಗುವಳಿಯ ವಿವರಗಳ ಮತ್ತು ಬೆಳೆಗಳ ಬಗ್ಗೆ ಹಾಗೂ ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಅಧಿಭೋಗದಲ್ಲಿರುವ ಮತ್ತು ಸಾಗುವಳಿಯಾಗಿರುವ ಭೂಮಿಯ ವಿಸ್ತೀರ್ಣದಲ್ಲಿ ಆಗಿರುವ ಬದಲಾವಣೆಯ ಬಗ್ಗೆ ಸಹಶೀಲುದಾರನಿಂದ ಮಾಹಿತಿಯನ್ನು ಪಡೆಯತಕ್ಕದ್ದು.
(ಜಿ) ಕೂಲಿ:- ಕಂದಾಯ ವ್ಯವಸ್ಥೆಯ ಅಧಿಕಾರಿಯು ಆ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಕೂಲಿಯ ಬಗ್ಗೆ ತಹಶೀಲುದಾರನಿಂದ ಮಾಹಿತಿಯನ್ನು ಪಡೆಯತಕ್ಕದ್ದು ಮತ್ತು ಈ ಅಂಕಿಅಂಶಗಳನ್ನು ಸ್ವತಃ ವಿಚಾರಿಸುವ ಮೂಲಕ ಪರೀಕ್ಷಿಸತಕ್ಕದ್ದು.
(ಎಚ್) ಮುಖ್ಯ ಬೆಳೆಗಳನ್ನು ಬೆಳೆಯಲು ತಗಲುವ ಸಾಮಾನ್ಯ ವೆಚ್ಚಗಳು.- ಕಂದಾಯ ವ್ಯವಸ್ಥೆಯ ಅಧಿಕಾರಿಯು ಕೆಲವು ವ್ಯವಸಾಯಗಾರರ ಲೆಕ್ಕಗಳನ್ನು, ದೊರೆತರೆ ಪರೀಕ್ಷಿಸುವುದರ ಮೂಲಕ ಅಥವಾ ಸ್ವತಃ ವಿಚಾರಿಸಿ ಸಾಗುವಳಿಗೆ ತಗಲುವ ಸಾಮಾನ್ಯ ವೆಚ್ಚಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸತಕ್ಕದ್ದು.
(3) ವ್ಯವಸಾಯೋದ್ದೇಶಕ್ಕಾಗಿ ಉಪಯೋಗಿಸಿದ ಭೂಮಿಗಳ ಮಾರಾಟ.- ಕಂದಾಯ ವ್ಯವಸ್ಥೆಯ ಅಧಿಕಾರಿಯು ತಾನು ಆಯ್ಕೆ ಮಾಡಿದ ಪ್ರಾತಿನಿಧಿಕ ಗ್ರಾಮಗಳಲ್ಲಿ ಆ ವಿಚಾರಣೆಗೆ ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಮಾರಾಟ ಮಾಡಿದ ಭೂಮಿಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಪರೀಕ್ಷಿಸತಕ್ಕದ್ದು, ಕಂದಾಯ ವ್ಯವಸ್ಥೆಯ ಅಧಿಕಾರಿಯು ನಿಜವಾದುದಲ್ಲವೆಂದು ತಾನು ಅಭಿಪ್ರಾಯ ಪಡುವ ಎಲ್ಲಾ ಮಾರಾಟಗಳನ್ನು ಈ ಉದ್ದೇಶಕ್ಕಾಗಿ ಹೊರತುಪಡಿಸತಕ್ಕದ್ದು.