(1) 153ನೇ ಪ್ರಕರಣದ (1)ನೇ ಉಪ ಪ್ರಕರಣದ (ಕ) ಖಂಡದ ಮೇರೆಗೆ ಮತ್ತು 26ನೇ ನಮೂನೆಯಲ್ಲಿ ಅಧಿಸೂಚನೆಯನ್ನು ಅಪಿಷಿಯಲ್ ಗೆಜೆಟ್ಟಿನಲ್ಲಿ ಪ್ರಕಟಿಸತಕ್ಕದ್ದು ಮತ್ತು ಅದರ ಒಂದು ಪ್ರತಿಯನ್ನು (ಕ) ಮೋಜಣಿ ಅಧಿಕಾರಿಯ, (ಖ) ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರಿಯ ಮತ್ತು (ಗ) ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರನ ಕಛೇರಿಯಲ್ಲಿ ಅಂಟಿಸತಕ್ಕದ್ದು.
(2) ಯಾವುದೇ ಗ್ರಾಮದ, ಪಟ್ಟಣದ ಅಥವಾ ನಗರದ ನಿವೇಶನದಲ್ಲಿ ಮೋಜಣಿ ಕೆಲಸವನ್ನು ಕೈಕೊಂಡಾಗ, ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರಿಯು ಮೋಜಣಿ ಅಧಿಕಾರಿಗೆ ಅಥವಾ ವಿಚಾರಣಾಧಿಕಾರಿಗೆ ಆಗಿಂದಾಗ್ಗೆ ಅವಶ್ಯಕವಾಗಬಹುದಾದಂಥ ಸಹಾಯವನ್ನು ಕೊಡತಕ್ಕದ್ದು ಮತ್ತು ಅಂಥ ದಾಖಲೆಗಳನ್ನು ಒದಗಿಸತಕ್ಕದ್ದು.
(3) ಅಂಥ ಮೋಜಣಿ ಕಾರ್ಯಕ್ರಮವನ್ನು ಕೈಕೊಂಡಾಗ, ಅಂಥ ರಸ್ತೆಯಲ್ಲಿ ಕಾರ್ಯಾಚರಣೆಯನ್ನು ನಡೆಸುವುದಕ್ಕೆ ಯುಕ್ತವಾಗಿ ಅವಶ್ಯಕವಾಗಬಹುದಾದಂಥ ಅವಧಿಯವರೆಗೆ ಮೋಜಣಿ ಅಧಿಕಾರಿಯು ಯಾವುದೇ ರಸ್ತೆಯನ್ನು ಮುಚ್ಚಬಹುದು.
(4) ಮೋಜಣಿಯ ಉದ್ದೇಶಕ್ಕಾಗಿ ಯಾವುದೇ ಕಟ್ಟಡ ನಿವೇಶನವನ್ನು ಪ್ರವೇಶಿಸುವುದಕ್ಕೆ ಮೊದಲು, ಮೋಜಣಿ ಅಧಿಕಾರಿಯು, ಮೇರೆಗಳನ್ನು ತೋರಿಸುವ ಮತ್ತು ಅವಶ್ಯಕವಾಗಬಹುದಾದಂಥ ವಿವರಣೆಯನ್ನು ಒದಗಿಸುವ ಉದ್ದೇಶಕ್ಕಾಗಿ ಅಂಥ ನೋಟೀಸನ್ನು ಜಾರಿ ಮಾಡಿದ ತರುವಾಯ ಮೂರು ದಿನಗಳಿಗೆ ಕಡಿಮೆಯಿಲ್ಲದಂಥ ನಿರ್ದಿಷ್ಟ ಕಾಲದೊಳಗೆ ತನ್ನ ಮುಂದೆ ಅಥವಾ ಈ ಸಂಬಂಧದಲ್ಲಿ ತನ್ನಿಂದ ಪ್ರಾಧಿಕಾರ ಹೊಂದಿರಬಹುದಾದಂಥ ಅಧಿಕಾರಿಯ ಮುಂದೆ ಮೋಜಣಿ ಮಾಡಬೇಕಾಗಿರುವ ಕಟ್ಟಡ ನಿವೇಶನಗಳ ಹಿಡುವಳಿದಾರನು ಅಥವಾ ಅಧಿಭೋಗದಾರನು ಮತ್ತು ಅಂಥ ಕಟ್ಟಡದ ನಿವೇಶನಗಳೊಂದಿಗೆ ಸೇರಿಕೊಂಡಿರುವ ಕಟ್ಟಡದ ನಿವೇಶನದ ಹಿಡುವಳಿದಾರನು ಮತ್ತು ಅಧಿಭೋಗದಾರನು ಖುದ್ದಾಗಿ ಅಥವಾ ಅವನ ಅಭಿಕರ್ತನ ಮೂಲಕ ಆ ಕಟ್ಟಡ ನಿವೇಶನದಲ್ಲಿ ಹಾಜರಾಗಬೇಕೆಂದು ಮತ್ತು ಅವನು ಹಾಜರಾಗಲು ತಪ್ಪಿದರೆ, ಅವನು ಅಥವಾ ಅಂಥ ಅಧಿಕಾರಿಯು ಅವನ ಗೈರು ಹಾಜರಾತಿಯಲ್ಲಿ ಮೋಜಣಿಯನ್ನು ನಡೆಸುವರೆಂದು ಲಿಖಿತ ನೋಟೀಸನ್ನು ಅಂಥ ಹಿಡುವಳಿದಾರನ ಅಥವಾ ಅಧಿಭೋಗದಾರನ ಮೇಲೆ ಜಾರಿ ಮಾಡುವಂತೆ ಮಾಡತಕ್ಕದ್ದು.
(5) (4)ನೇ ಉಪನಿಯಮದ ಮೇರೆಗಿನ ನೋಟೀಸನ್ನು, ಕೆಳಕಂಡಂತೆ ಜಾರಿ ಮಾಡತಕ್ಕದ್ದು.
(ಎ) ಅದನ್ನು ಅಂಥ ವ್ಯಕ್ತಿಗೆ ಕೊಡುವುದರ ಮೂಲಕ ಅಥವಾ ಅಂಥ ವ್ಯಕ್ತಿಯು ಸಿಗದಿದ್ದಾಗ, ಅಂಥ ವ್ಯಕ್ತಿಯು ಸಾಮಾನ್ಯವಾಗಿ ವಾಸಿಸುವ ಅಥವಾ ತನ್ನ ಕಛೇರಿಯನ್ನು ನಡೆಸುವ ಅಥವಾ ತನ್ನ ವ್ಯವಹಾರವನ್ನು ನಡೆಸುವ ಮನೆಯ ಎದ್ದು ಕಾಣುವ ಭಾಗದಲ್ಲಿ ಅದನ್ನು ಅಂಟಿಸುವುದರ ಮೂಲಕ ಅಥವಾ ಅದನ್ನು ಅಂಥ ವ್ಯಕ್ತಿಯ ಅಭಿಕರ್ತನಿಗೆ ಅಥವಾ ನೌಕರನಿಗೆ ಅಥವಾ ಅವನ ಕುಟುಂಬದ ಒಬ್ಬ ವಯಸ್ಕ ಗಂಡಸಿಗೆ ಒಪ್ಪಿಸುವುದರ ಮೂಲಕ; ಅಥವಾ
(ಬಿ) ಅಂಥ ನೋಟೀಸನ್ನು ಅವನು ಸಾಮಾನ್ಯವಾಗಿ ವಾಸಿಸುವ ಸ್ಥಳದ ಅವನ ವಿಳಾಸಕ್ಕೆ ನೋಂದಾಯಿತ ಅಂಚೆಯಲ್ಲಿ ಕಳುಹಿಸುವುದರ ಮೂಲಕ.