(1) ರೆವಿನ್ಯೂಇನ್ಸ್ಪೆಕ್ಟರು ಅಥವಾ ಈ ಉದ್ದೇಶಕ್ಕಾಗಿ ನೇಮಕ ಮಾಡಿದ ಇತರ ಅಧಿಕಾರಿಯು, ಹಾಗೆ ನಿರ್ದಿಷ್ಟಪಡಿಸಿದ ದಿನದಂದು ಅಥವಾ ಚಾವಡಿಯಲ್ಲಿ ನೊಟೀಸನ್ನು ಪ್ರಕಟಿಸುವುದರ ಮೂಲಕ ಗ್ರಾಮಸ್ಥರಿಗೆ ಸೂಕ್ತ ತಿಳುವಳಿಕೆಯನ್ನು ಕೊಡಲಾಗಿರುವ ತರುವಾಯದ ಯಾವುದೇ ದಿನಾಂಕದಂದು, ಚಾವಡಿಯಲ್ಲಿ ಸೇರಿದ ಗ್ರಾಮಸ್ಥರನ್ನು ಭೇಟಿ ಮಾಡತಕ್ಕದ್ದು. ಗ್ರಾಮ ಲೆಕ್ಕಿಗನು ತಯಾರಿಸಿರುವ ಪ್ರಾರಂಭಿಕ ದಾಖಲೆಗಳಲ್ಲಿನ ಎಲ್ಲಾ ನಮೂದನೆಗಳನ್ನು ಓದಿ ಹೇಳತಕ್ಕದ್ದು; ಮತ್ತು ಆ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದರೆ ಅವುಗಳನ್ನು ಆ ದಿನಾಂಕದಿಂದ ಹದಿನೈದು ದಿನಗಳ ಅವಧಿಯೊಳಗೆ ತಿಳಿಸಬೇಕೆಂದು ಹೇಳತಕ್ಕದ್ದು, ಅವನು ವಿಚಾರಣೆಗಾಗಿ ಗ್ರಾಮಕ್ಕೆ ತಾನು ಮುಂದೆ ಭೇಟಿ ಕೊಡುವ ದಿನಾಂಕವನ್ನು ಸಹ ಅವರ ಸಮ್ಮುಖದಲ್ಲಿ ಗೊತ್ತು ಮಾಡತಕ್ಕದ್ದು. ಅಲ್ಲಿ ಸೇರಿದ ಗ್ರಾಮಸ್ಥರಿಗೆ ಎಲ್ಲಾ ನಮೂದನೆಗಳನ್ನು ಸರಿಯಾಗಿ ಓದಿ ಹೇಳಲಾಯಿತೆಂಬ ಬಗ್ಗೆ ಮತ್ತು ತಾನು ಮುಂದಿನ ಭೇಟಿಯ ದಿನಾಂಕವನ್ನು ಗೊತ್ತು ಮಾಡಲಾಗಿದೆಯೆಂಬ ಬಗ್ಗೆ ಅವನು ಪ್ರಾರಂಭಿಕ ದಾಖಲೆಗಳ ಅಡಿಯಲ್ಲಿ ಬರೆದು ದೃಢೀಕರಿಸತಕ್ಕದ್ದು. ಯಾವುದಾದರೂ ಆಕ್ಷೇಪಣೆಯು ಬಂದ ತರುವಾಯ ಅಥವಾ ಬೇರೆ ರೀತಿಯಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಹಾಗೆ ಗೊತ್ತುಮಾಡಿದ್ದ ದಿನಾಂಕದಂದು ಪ್ರಾರಂಭಿಕ ದಾಖಲೆಯ ಪ್ರತಿಯೊಂದು ನಮೂದನೆಯನ್ನು ಪರೀಕ್ಷಿಸತಕ್ಕದ್ದು ಮತ್ತು ಅದರ ಯಥಾರ್ಥತೆಯನ್ನು ಪ್ರಮಾಣೀಕರಿಸತಕ್ಕದ್ದು.
ನಮೂದನೆಯ ಯಥಾರ್ಥತೆಯ ಬಗ್ಗೆ ಆಕ್ಷೇಪಣೆ ಮಾಡಿದ ಯಾರೇವ್ಯಕ್ತಿಯು ವಿಚಾರಣೆಯ ಕಾಲದಲ್ಲಿ, ಅಂಥ ನಮೂದನೆಯು ಸರಿಯಾಗಿದೆಯೆಂದು ಒಪ್ಪಿಕೊಂಡರೆ, ರೆವಿನ್ಯೂಇನ್ಸ್ಪೆಕ್ಟರು ಅಥವಾ ಇತರ ಅಧಿಕಾರಿಯು ಆ ಒಪ್ಪಿಗೆಯನ್ನು ದಾಖಲೆಯ ಷರಾ ಅಂಕಣದಲ್ಲಿ ನಮೂದಿಸತಕ್ಕದ್ದು. ರೆವಿನ್ಯೂಇನ್ಸ್ಪೆಕ್ಟರು ಅಥವಾ ಇತರ ಅಧಿಕಾರಿಯು ಎಲ್ಲಾ ಪಕ್ಷಕಾರರೂ ಒಪ್ಪಿರುವ ಯಾವುವೇ ತಪ್ಪುಗಳನ್ನು ಅಳಿಸತಕ್ಕದ್ದಲ್ಲ, ಆದರೆ ಆ ತಪ್ಪುಗಳಿಗೆ ಆವರಣ ಚಿಹ್ನೆಗಳನ್ನು ಹಾಕುವುದರ ಮೂಲಕ ಮತ್ತು ತಿದ್ದಿದ ನಮೂದನೆಗಳನ್ನು ಪಂಕ್ತಿಗಳ ಮಧ್ಯೆ ಬರೆಯುವ ಮೂಲಕ ಅಥವಾ ಪಕ್ಕದ ಟಿಪ್ಪಣಿಯ ಮೂಲಕ ಅಥವಾ ಪೂರ್ತಿ ಹೊಸದಾದ ಒಂದು ನಮೂದನೆಯ ಮೂಲಕ ಸೇರಿಸಿ ಸರಿಪಡಿಸತಕ್ಕದ್ದು ಮತ್ತು ಅಂಥ ಯಾವುದೇ ಸಂದರ್ಭದಲ್ಲಿ ಹಾಗೆ ಸೇರಿಸಿದ್ದನ್ನು ಅಥವಾ ನಮೂದನೆಯನ್ನು ತನ್ನ ರುಜುವಿನ ಮೂಲಕ ಅನುಪ್ರಮಾಣಿಸತಕ್ಕದ್ದು, ತಪ್ಪನ್ನು ಒಪ್ಪಿಕೊಳ್ಳದಿದ್ದರೆ, ರೆವಿನ್ಯೂಇನ್ಸ್ಪೆಕ್ಟರು ಅಥವಾ ಇತರ ಅಧಿಕಾರಿಯು ಆ ತಕರಾರನ್ನು ತಕರಾರು ಮೊಕದ್ದಮೆಗಳ ರಿಜಿಸ್ಟರಿನಲ್ಲಿ ನಮೂದಿಸತಕ್ಕದ್ದು. ಸೇರಿರುವ ಗ್ರಾಮಸ್ಥರಿಗೆ ಹಾಗೆ ಸರಿಪಡಿಸಿದ ನಮೂದನೆಗಳನ್ನು ಕ್ರಮವಾಗಿ ಓದಿ ಹೇಳಲಾಗಿದೆಯೆಂದು ಪ್ರಾರಂಭಿಕ ದಾಖಲೆಯ ಅಡಿಯಲ್ಲಿ ಬರೆದು ದೃಢೀಕರಿಸತಕ್ಕದ್ದು ಮತ್ತು ಅದಕ್ಕೆ ಅಲ್ಲಿ ಸೇರಿದ ಮುಖ್ಯ ವ್ಯಕ್ತಿಗಳ ರುಜುವನ್ನು ಹಾಕಿಸತಕ್ಕದ್ದು, ಅವನು ಶೇಕಡಾ 20ಕ್ಕೆ ಕಡಿಮೆಯಿಲ್ಲದ ನಮೂದನೆಗಳನ್ನು ಖುದ್ದು ತಾಳೆ ನೋಡತಕ್ಕದ್ದು ಮತ್ತು ಪರೀಕ್ಷೆ ಮಾಡತಕ್ಕದ್ದು.
(2) ನಮೂದನೆಗಳನ್ನು ರೆವಿನ್ಯೂಇನ್ಸ್ಪೆಕ್ಟರು ಅಥವಾ ಇತರ ಅಧಿಕಾರಿಯು (1)ನೇ ಉಪನಿಯಮದ ಮೇರೆಗೆ ತಾಳೆ ನೋಡಿ ಪರೀಕ್ಷಿಸಿದ ತರುವಾಯ, ತಹಶೀಲುದಾರನು ಅಥವಾ ಈ ಉದ್ದೇಶಕ್ಕಾಗಿ ಪ್ರಾಧಿಕಾರ ಹೊಂದಿದ ಇತರ ಅಧಿಕಾರಿಯು ಪ್ರತಿಯೊಂದು ಗ್ರಾಮಕ್ಕೂ ಭೇಟಿ ಕೊಡತಕ್ಕದ್ದು. ಮತ್ತು ಅದರಲ್ಲಿರುವ ನಮೂದನೆಗಳ ಪೈಕಿ ಶೇಕಡಾ 50ಕ್ಕೆ ಕಡಿಮೆ ಇಲ್ಲದಷ್ಟನ್ನು ಯಥಾರ್ಥತೆಯ ಖುದ್ದು ತನಿಖೆಯ ಮೂಲಕ ಪರೀಕ್ಷಿಸತಕ್ಕದ್ದು, ಮತ್ತು ಹಾಗೆ ತಾಳೆ ನೋಡಿದ ನಮೂದನೆಗಳ ಹತ್ತಿರ ತನ್ನ ಸಂಕ್ಷಿಪ್ತ ರುಜನ್ನು ಹಾಕತಕ್ಕದ್ದು. ನಮೂದನೆಗಳನ್ನು ರೆವಿನ್ಯೂಇನ್ಸ್ಪೆಕ್ಟರು ಗ್ರಾಮಸ್ಥರಿಗೆ ಓದಿ ಹೇಳಿದ್ದಾನೆಂಬ ಬಗ್ಗೆ ಅವನು ಖುದ್ದು ವಿಚಾರಣೆಯ ಮೂಲಕ ಖಚಿತಪಡಿಸಿಕೊಳ್ಳತಕ್ಕದ್ದು. ಅವನು ಆ ನಮೂದನೆಗಳನ್ನು ಶೇಕಡಾ 10ಕ್ಕೆ ಕಡಿಮೆಯಿಲ್ಲದಷ್ಟು ನಮೂದನೆಗಳನ್ನು ಸ್ಥಳದಲ್ಲಿಯೇ ಖುದ್ದು ತಾಳೆ ನೋಡತಕ್ಕದ್ದು ಮತ್ತು ಪರೀಕ್ಷಿಸತಕ್ಕದ್ದು.