(1) ಪ್ರತಿಯೊಂದು ಮಾರಾಟವನ್ನು ಸಾಮಾನ್ಯವಾಗಿ, ಉದ್ಘೋಷಣೆಯಲ್ಲಿ ಸೂಚಿಸಿದ ದಿನಾಂಕದಂದು ನಡೆಸತಕ್ಕದ್ದು ಮತ್ತು ಅವಶ್ಯಕವಾದರೆ, ಉದ್ಘೋಷಣೆಯಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ಸ್ವತ್ತುಗಳು ಮಾರಾಟವಾಗುವವರೆಗೆ ಪ್ರತಿ ದಿನ (ರಜಾ ದಿನಗಳ ಹೊರತು) ಆ ಮಾರಾಟವನ್ನು ಮುಂದುವರೆಸತಕ್ಕದ್ದು. ಮಾರಾಟವನ್ನು ನಡೆಸುವ ಅಧಿಕಾರಿಯು, ತನ್ನ ವಿವೇಚನಾನುಸಾರವಾಗಿ ಯಾವುದೇ ಮಾರಾಟವನ್ನು ಮೂರು ದಿನಗಳಿಗೆ ಮೀರದ ಅವಧಿಯವರೆಗೆ, ಅಂಥ ಮುಂದೂಡಿಕೆಗೆ ಇರುವ ತನ್ನ ಕಾರಣಗಳನ್ನು ನಮೂದಿಸಿ, ಮುಂದೂಡಬಹುದು.
ಪರಂತು, ಮಾರಾಟವು ರೆವಿನ್ಯೂ ಇನ್ಸ್ಪೆಕ್ಟರನಿಂದ ತಹಸೀಲ್ದಾರನ ಕಛೇರಿಯಲ್ಲಿ ಅಥವಾ ಅದರ ಆವರಣದೊಳಗೆ ನಡೆದರೆ, ತಹಶೀಲ್ದಾರನು ಕಛೇರಿಯ ಮುಖ್ಯ ಸ್ಥಳದಲ್ಲಿದ್ದರೆ, ಅವನ ಅಪ್ಪಣೆಯಿಲ್ಲದ ಹಾಗೆ ಮಾರಾಟವನ್ನು ಮಾಡತಕ್ಕದ್ದಲ್ಲ.
ಯಾವ ಹಣದ ವಸೂಲಿಗಾಗಿ ಸ್ಥಿರಸ್ವತ್ತಿನ ಮಾರಾಟವನ್ನು ಮಾಡಲಾಗಿದೆಯೋ ಆ ಹಣಕ್ಕೆ ಹಕ್ಕುಳ್ಳ ಪಕ್ಷಕ್ಕೆ ಡೆಪ್ಯುಟಿ ಕಮಿಷನರ ಸ್ಪಷ್ಟ ಅನುಮತಿಯಿಲ್ಲದೆ, ಆ ಸ್ವತ್ತಿಗಾಗಿ ಹರಾಜಿನಲ್ಲಿ ಸವಾಲು ಮಾಡಲು ಅಥವಾ ಅದನ್ನು ಖರೀದಿ ಮಾಡಲು ಅವಕಾಶ ಕೊಡತಕ್ಕದ್ದಲ್ಲ.
(2) ಅಂಥ ಅನುಮತಿಯಿಲ್ಲದೆ ಪಕ್ಷವು ಸ್ವತಃ ಅಥವಾ ಮತ್ತೊಬ್ಬ ವ್ಯಕ್ತಿಯ ಮೂಲಕ ಖರೀದಿ ಮಾಡಿದರೆ, ಉಪವಿಭಾಗದ ಅಸಿಸ್ಟೆಂಟ್ ಕಮಿಷನರು, ತಾನು ಯುಕ್ತವೆಂದು, ಆಲೋಚಿಸಿದರೆ, ತಪ್ಪಿದಸ್ಥನ ಅಥವಾ ಆ ಮಾರಾಟದಿಂದ ಯಾವ ಇತರ ವ್ಯಕ್ತಿಯ ಹಿತಾಸಕ್ತಿಗಳಿಗೆ ಬಾಧಕವುಂಟಾಗುವುದೋ, ಅಂಥ ಯಾರೇವ್ಯಕ್ತಿಯ ಅರ್ಜಿಯ ಮೇಲೆ, ಆ ಮಾರಾಟವನ್ನು ಆದೇಶದ ಮೂಲಕ ತಳ್ಳಿ ಹಾಕಬಹುದು ಮತ್ತು ಅಂಥ ಅರ್ಜಿ ಮತ್ತು ಆದೇಶದ ಖರ್ಚುಗಳನ್ನು ಮತ್ತು ಮರು ಮಾರಾಟದಿಂದ ಬರುವ ಬೆಲೆಯಲ್ಲಿ ಸಂಭವಿಸಬಹುದಾದ ಯಾವುದೇ ಕೊರತೆಯನ್ನು ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲಾ ವೆಚ್ಚಗಳನ್ನು ಯಾವ ಪಕ್ಷದ ಕಾರಣದಿಂದಾಗಿ ಮಾರಾಟವನ್ನು ಮೂಲತಃ ನಡೆಸಲಾಗಿದೆಯೋ ಆ ಪಕ್ಷವು ಸಂದಾಯ ಮಾಡತಕ್ಕದ್ದು.
(3) ಗೊತ್ತು ಮಾಡಬೇಕಾದ ಮೊಬಲಗಿಗಿಂತ ಕಡಿಮೆ ಮೊಬಲಗಿಗೆ ಅರ್ಜಿದಾರನು ಸವಾಲು ಮಾಡುವುದಕ್ಕೆ ಅವಕಾಶ ಕೊಡಕೂಡದೆಂದು ಡೆಪ್ಯುಟಿ ಕಮಿಷನರು ಪರಿಗಣಿಸುವ ಸಂದರ್ಭಗಳಲ್ಲಿ, ಹಾಗೆ ಕನಿಷ್ಟ ಮೊಬಲಗನು ಗೊತ್ತು ಮಾಡಲು ಅವನು ಸಕ್ಷಮನಾಗಿರತಕ್ಕದ್ದು.
(4) ಅರ್ಜಿದಾರನು ಅಂಥ ಅನುಮತಿಯನ್ನು ಪಡೆದು ಖರೀದಿ ಮಾಡಿದರೆ, ಯಾವ ಮೊಬಲಗಿನ ವಸೂಲಿಗಾಗಿ ಮಾರಾಟ ಮಾಡಲಾಯಿತೋ ಆ ಮೊಬಲಗನ್ನು ಖರೀದಿ ಹಣದಲ್ಲಿ ವಜಾ ಮಾಡತಕ್ಕದ್ದು.
(5) 111ನೇ ನಿಯಮದ ಮೇರೆಗೆ ಕೊಡಲಾದ ತಗಾದೆ ನೋಟೀಸನ್ನು, ಅದರ ಒಂದು ಪ್ರತಿಯನ್ನು ಗ್ರಾಮದ ಚವಡಿಯ ಸೂಚನಾಫಲಕದ ಮೇಲೆ ಅಂಟಿಸುವುದರ ಮೂಲಕ, ಗ್ರಾಮದಲ್ಲಿ ಪ್ರಕಟಿಸತಕ್ಕದ್ದು. 30ನೇ ಪ್ರಕರಣದ ಮೇರೆಗೆ ಒಂದು ಪ್ರತಿಯನ್ನು ತಪ್ಪಿದಸ್ಥನ ಮೇಲೆಯೂ ಜಾರಿ ಮಾಡತಕ್ಕದ್ದು. ತಗಾದೆ ನೋಟೀಸಿನ ಖರ್ಚಿನ ಬಗ್ಗೆ ತಪ್ಪಿದಸ್ಥನಿಂದ 1 ರೂಪಾಯಿಯನ್ನು (ಒಂದು ರೂಪಾಯಿ ಮಾತ್ರ) ವಸೂಲು ಮಾಡತಕ್ಕದ್ದು.
ಮಾರಾಟವು ಪೂರ್ಣವಾದ ಮೇಲೆ ಚಿರಾಸ್ತಿಯ ಪೂರ್ಣ ಮೌಲ್ಯವನ್ನು ಕೂಡಲೇ ಠೇವಣಿಯಿಡತಕ್ಕದ್ದು.
(6) ಮಾರಾಟದ ಉದ್ಘೋಷಣೆ ಮತ್ತು ಆ ಬಗೆಗಿನ ನೋಟೀಸು 38ನೇ ನಮೂನೆಯಲ್ಲಿರತಕ್ಕದ್ದು.
114. (* * * * *)