ಅನುಸೂಚಿ
ಕರ್ನಾಟಕ ಭೂಮಂಜೂರಾತಿ ನಿಯಮಗಳು, 1969 (ತಿದ್ದುಪಡಿಯಾದಂತೆ)
- ಹೆಸರು ಮತ್ತು ಪ್ರಾರಂಭ.- ಈ ನಿಯಮಗಳನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969 ಎಂದು ಕರೆಯತಕ್ಕದ್ದು.
(2) ಅವು ಕೂಡಲೇ ಜಾರಿಗೆ ಬರತಕ್ಕದ್ದು.
- ಪರಿಭಾಷೆಗಳು.- ಈ ನಿಯಮಗಳಲ್ಲಿ, ಸಂದರ್ಭಕ್ಕೆ ಬೇರೆ ಅರ್ಥದ ಅಗತ್ಯವಿದ್ದ ಹೊರತು:-
(1) ‘ಅಧಿನಿಯಮ’ ಎಂದರೆ ಕರ್ನಾಟಕ ಭೂಕಂದಾಯ ಅಧಿನಿಯಮ, 1964;
(2) ‘ಕೃಷಿ’ ಎಂದರೆ
(ಕ) ತೋಟಗಾರಿಕೆ;
(ಖ) ಬೆಳೆಗಳನ್ನು, ಹುಲ್ಲು ಅಥವಾ ತೋಟದ ಬೆಳೆಯನ್ನು ಬೆಳೆಸುವುದು;
(ಗ) ಬೇಸಾಯಗಾರನು ತಾನು ಹೊಂದಿರುವ ಭೂಮಿಯನ್ನು ಅಥವಾ ಅದರ ಒಂದು ಭಾಗವನ್ನು ತನ್ನ ದನಗಳನ್ನು ಮೇಯಿಸುವುದಕ್ಕಾಗಿ ಉಪಯೋಗಿಸುವುದು, ಆದರೆ ಅದರಲ್ಲಿ ಹೈನುಗಾರಿಕೆ, ಕೋಳಿ ಸಾಕಣೆ, ಜಾನುವಾರು ತಳಿ ಅಭಿವೃದ್ಧಿ (ತನ್ನ ಸ್ವಂತ ಬೇಸಾಯದ ದನಗಳು ಮೇಯುವುದಕ್ಕಾಗಿ ಉಪಯೋಗಿಸುವ ಹುಲ್ಲುಗಾವಲಿನ ಹೊರತು) ಹುಲ್ಲುಗಾವಲನ್ನು ಬೆಳೆಸುವುದು ಮತ್ತು ನಿಯಮಿಸಬಹುದಾದಂಥ ಇತರ ವೃತ್ತಿಗಳು ಅಥವಾ ಮರವನ್ನು ಕಡಿಯುವುದು ಸೇರುವುದಿಲ್ಲ.
(3) ‘ಭೂಚ್ಯುತ ಹಿಡುವಳಿದಾರ’ ಎಂದರೆ, ಭೂಸ್ವಾಧೀನ ಅಧಿನಿಯಮದ ಮೇರೆಗೆ ಸ್ವಾಧೀನಪಡಿಸಿಕೊಳ್ಳುವ ಮೂಲಕ ತಾನು ಒಡೆತನ ಹೊಂದಿರುವ ಬೇಸಾಯದ ಭೂಮಿಯಿಂದ ಚ್ಯುತನಾದ ವ್ಯಕ್ತಿ;
(4) ‘ಚ್ಯುತನಾದ ಗೇಣಿದಾರ’ ಎಂದರೆ, ಭೂಸ್ವಾಧೀನ ಅಧಿನಿಯಮದ ಮೇರೆಗೆ ಅಂಥ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದರ ಮೂಲಕ ತಾನು ಗೇಣಿದಾರನಾಗಿದ್ದ ಬೇಸಾಯದ ಭೂಮಿಯಿಂದ ಚ್ಯುತನಾದ ವ್ಯಕ್ತಿ;
(5) ‘ಮಾಜಿ ಸೈನಿಕ’ ಎಂದರೆ ಕರ್ನಾಟಕದ ರಾಜ್ಯದ ಹಿಂದಿನ ಸೈನ್ಯದಿಂದ ಅಥವಾ ಹಿಂದಿನ ಹೈದರಾಬಾದ್ ರಾಜ್ಯದ ಸೈನ್ಯದಿಂದ ಅಥವಾ ಭಾರತದ ಹಿಂದಿನ ಸೈನ್ಯದಿಂದ ಅಥವಾ ಭಾರತದ ಒಕ್ಕೂಡದ ಸಶಸ್ತ್ರ ಸೈನ್ಯದಿಂದ ಕಾಯಂ ಆಗಿ ನಿವೃತ್ತಿಗೊಳಿಸಲಾದ ವ್ಯಕ್ತಿ;
(6) ವ್ಯಕ್ತಿಗೆ ಸಂಬಂಧಿಸಿದಂತೆ ‘ಕುಟುಂಬ’ ಎಂದರೆ, ಅಂಥ ವ್ಯಕ್ತಿ ಮತ್ತು ಮದುವೆಯಾಗಿದ್ದರೆ ಸಂದರ್ಭಾನುಸಾರ ಹೆಂಡತಿ ಅಥವಾ ಗಂಡ ಮತ್ತು ಅಂಥ ವ್ಯಕ್ತಿಯ ಆಶ್ರಯದಲ್ಲಿರುವ ಮಕ್ಕಳು ಮತ್ತು ಮೊಮ್ಮಕ್ಕಳು;
(7) ‘ನಮೂನೆ’ ಎಂದರೆ, ಈ ನಿಯಮಗಳಿಗೆ ಅನುಬಂಧಿಸಿದ ನಮೂನೆ;
(8) ‘ಸಣ್ಣ ಹಿಡುವಳಿದಾರ’ ಎಂದರೆ, ಸಾಕಷ್ಟು ಹಿಡುವಳಿ ಹೊಂದಿರದ ವ್ಯಕ್ತಿ;
(9) ‘ಪ್ಲಾಂಟೇಷನ್ ಬೆಳೆಗಳು’ ಎಂದರೆ, ಏಲಕ್ಕಿ, ಕಾಫಿ, ಮೆಣಸು, ರಬ್ಬರ್ ಮತ್ತು ಚಹ;
(10) ‘ರಾಜಕೀಯ ಸಂತ್ರಸ್ತ’ ಎಂದರೆ ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸಿದುದರ ಮೂಲಕ-
(ಕ) ಆರು ತಿಂಗಳಿಗೆ ಕಡಿಮೆಯಲ್ಲದ ಅವಧಿಯ ಕಾರಾಗೃಹವಾಸ ದಂಡನೆಗೆ ಗುರಿಪಡಿಸಲಾದ ವ್ಯಕ್ತಿ; ಅಥವಾ
(ಖ) ಆರು ತಿಂಗಳುಗಳಿಗೆ ಕಡಿಮೆಯಿಲ್ಲದ ಅವಧಿಯವರೆಗೆ (ವಿಚಾರಣೆಯಲ್ಲಿರುವಾಗ ಬಂಧನದಲ್ಲಿ ರುವವನೂ ಸೇರಿ) ಬಂಧಿಯಾಗಿ ಬಂಧನದಲ್ಲಿಡಲ್ಪಟ್ಟ ವ್ಯಕ್ತಿ; ಅಥವಾ
(ಗ) ತನ್ನ ಕೆಲಸವನ್ನು ಅಥವಾ ಜೀವನೋಪಾಯವನ್ನು ಅಥವಾ ತನ್ನ ಸ್ವತ್ತನ್ನು ಪೂರ್ಣವಾಗಿ ಅಥವಾ ಬಹುಭಾಗವನ್ನು ಕಳೆದುಕೊಂಡ ವ್ಯಕ್ತಿ;
ಮತ್ತು ಈ ನಿಯಮಗಳ ಮೇರೆಗೆ ಭೂಮಿಯ ಮಂಜೂರಾತಿಗಾಗಿ ಅರ್ಜಿ ಮಾಡಿಕೊಂಡ ದಿನಾಂಕಕ್ಕೆ ನಿಕಟಪೂರ್ವದಲ್ಲಿ ಐದು ವರ್ಷಗಳಿಗೆ ಕಡಿಮೆಯಿಲ್ಲದ ಅವಧಿಯವರೆಗೆ ಕರ್ನಾಟಕ ರಾಜ್ಯದ ಅಧಿವಾಸಿಯಾಗಿದ್ದ ವ್ಯಕ್ತಿ;
(11) ‘ಮೀಸಲು ಮರಗಳು’ ಎಂದರೆ, ತೇಗ ಅಥವಾ ಸಾಗುವಾನಿ (ಟೆಕೋನಾಗ್ರಾಂಡಿಸ್) ಕರಿಮರ ಅಥವಾ ಬೀಟೆ (ಡಾಲ್ಬೆರ್ಜಿಯಾ ಲತಿಫೋಲಿಯಾ) ಮೈರೋಬೋಲಮ್ ಅಥವಾ ಗಾಲಾನಬ್ ಅಥವಾ ಅಳಲೆ (ಟರ್ಮಿನಾಲಯ ಚುಬುಲಾ) ವೈಪ್ಸೀಡರ್ ಅಥವಾ ದೇವಗರ್ಗೆ (ಡೈಸ್ಸೆನೋಲು ಲಬಾರಿಕೆ), ಜಾಲರಿ (ಷುರಿಯಾ ಲೆಕ್ಕಿಫೈರ) ಬೇಂಟೀಕ್ ಅಥವಾ ನಂದಿ (ಲೆಗಸೆನ್ರ್ಟಾಮಿಮಿಯ ಲಾನ್ಸಿಯೋಲಾಟ), ಸ್ಯಾಟೀನ್ ಮರ ಅಥವಾ ಉರಗಲು, (ಕ್ಲೋರೋಗ್ಸೆಲಾನ್ ಅವೆತ್ತುಬಿನಿಯಾ), ಸೀಗೆ ಅಥವಾ ಅಂಟವಾಳಲ (ಸಪಿಂನ್ಡಸ್ ಎಮಾರ್ಜಿನಟಸ್), ಕರಾಚಿಮರ (ಹಾರ್ಡಾ ವಿಕ್ಕಿಯಾ ಚಿನ್ನಾಟ), ತೈಲ ವೃಕ್ಷಗಳು ಅಥವಾ ಎಣ್ಣೆ ಮರ (ಹಾರ್ಡಾ ವಿಕ್ಕಿಯಾ ಪಿನ್ನಾಟ), ಹೆಬ್ಬಲಸು (ಆರ್ಟೋಕಾರ್ಪಸ್ ಪಿರ್ಸೂಟ್), ಎಬೋನಿ ಅಥವಾ ಕರಿಮರ ಅಥವಾ ಬಾಲೆ (ಡಿ ಫೈರಾಸ್ ಬೀನಂ), ಐರನ್ವುಡ್ ಅಥವಾ ಜಂಟಿ (ಕ್ಸೈಲಿಯಾ ಡೊಲೆ ಬ್ರಿಫಾರ್ಮೆನ್), ಪೂನ್ಸ್ಫಾರ್ ಅಥವಾ ಸುರಹೊನ್ನೆ (ಖಿಲೋಫೈಲಂಮೆಲಾಟಮ್), ಚಿತ್ತಗಾಂಗ್ ಮರ (ಚಿಕ್ರಸಿಯಾ ಟುಬೊಲಾರಿಸ್), ಕಿರಾಲ ಬೋಗಿ (ಹೋಸಿಯಾ ಪಾರ್ಮಿಪ್ಲೋರ್), ಕಾಚು ಅಥವಾ ಕಗ್ಗಲಿ (ಅಕಾಶಿಯಾ ಕಬಾಚ್ಯು), ಬೋರೆ (ಜಿಜಿಪಸ್ ಜುಜುಬಾ) ಸಗಡ (ಸ್ಪಿಲಿಚೆರಾ ಟ್ರೆಜುಗ), ಯತ್ತೇಗ (ವ್ಯಾನ್ಟೀಕ್) (ಅಂಡೀನಾ ಕೋರ್ಡಿ ಕೋರ್ಡಿ ಪೋಲಿಯಾಮೇಯ), ಹುಣಸೆ (ಇಂಡಿಕಾ), ಕರಿಮತ್ತಿ (ಟರ್ಮಿನೇಲಿಯಾ ಟೊಮೊಟೋಸಾ), ಮಾವು (ಮಂಗಿಫೆರಾ ಇಂಡಿಕಾ), ಕಸರ್ಕ (ಸ್ಟ್ರೆಚೊದಸ್ ನಕ್ಲವಾಮಿಕ), ಹಲಸು (ಆರ್ಲೊ ಕಾರ್ಪಸ್ ಇಂಟಿಗ್ರಿಫೋಲಿಯಾ), ಬಿಳಿಮತ್ತಿ (ಟರ್ಮಿನೇಲಿಯಾ ಅರ್ಜುನ), ದೂಪ್ (ಆಪ್ಲಾಮುಹಿಸ್ ಮಲಬೇರಿಕಾ), ಶ್ರೀಗಂಧದ ಮರ (ಸ್ಯಾಂಟಲಂ ಅಲ್ಬಂ) ಮತ್ತು ಕರ್ನಾಟಕ ಅರಣ್ಯ ಅಧಿನಿಯಮ, 1963 (ಕರ್ನಾಟಕ ಅಧಿನಿಯಮ, 1964ರ 5) ಉದ್ದೇಶಗಳಿಗಾಗಿ ಮೀಸಲು ಮರಗಳೆಂದು ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಘೋಷಿಸಬಹುದಾದಂಥ ಇತರ ಮರಗಳು;
(12) ‘ಪ್ರಕರಣ’ ಎಂದರೆ ಅಧಿನಿಯಮದ ಪ್ರಕರಣ;
(13) ‘ಸೈನಿಕ’ ಎಂದರೆ, ಭಾರತ ಒಕ್ಕೂಟದ ಸಶಸ್ತ್ರ ದಳದ ಸೇನೆಯಲ್ಲಿರುವ ವ್ಯಕ್ತಿ ಮತ್ತು ಇದರಲ್ಲಿ ಭಾರತದ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತನಾಗಿದ್ದಾಗ ಮರಣ ಹೊಂದಿದ ಸೈನಿಕನಿಗೆ ಸಂಬಂಧಿಸಿದಂತೆ, ಅವನ ಮರಣ ಕಾಲಕ್ಕೆ ಅವನ ಆಶ್ರಯದಲ್ಲಿದ್ದ ಅವನ ತಂದೆ, ತಾಯಿ, ಹೆಂಡತಿ, ಮಗು ಮತ್ತು ಮೊಮ್ಮಗು ಇವರನ್ನು ಒಳಗೊಳ್ಳುತ್ತದೆ:
ಪರಂತು, ಯಾವನೇ ವ್ಯಕ್ತಿಯು ಸೈನಿಕನೇ ಅಥವಾ ಭಾರತದ ರಕ್ಷಣಾಕಾರ್ಯಚರಣೆಯಲ್ಲಿ ನಿರತನಾಗಿರುವಾಗ ಯಾವನೇ ಸೈನಿಕನು ಮರಣ ಹೊಂದಿದನೇ ಎಂಬ ಪ್ರಶ್ನೆಯು ಉದ್ಭವಿಸಿದರೆ, ಅಂಥ ಪ್ರಶ್ನೆಯನ್ನು ರಾಜ್ಯ ಸರ್ಕಾರವು ತೀರ್ಮಾನಿಸತಕ್ಕದ್ದು ಮತ್ತು ಅದರ ತೀರ್ಮಾನವು ಅಂತಿಮವಾಗಿರತಕ್ಕದ್ದು;
(14) ‘ಸ್ವಂತ ಸಾಗು ಮಾಡುವುದು’ ಮತ್ತು ‘ಖಾತ್ರಿ ನೀರಾವರಿ ಸೌಕರ್ಯವನ್ನು ಹೊಂದಿರುವ ಭೂಮಿಗಳು’ ಎನ್ನುವ ಪದಾವಳಿಗಳಿಗೆ ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮ, 1961ರಲ್ಲಿ (ಕರ್ನಾಟಕ ಅಧಿನಿಯಮ, 1962ರ 10) ಅವಕ್ಕೆ ಕೊಡಲಾದ ಅರ್ಥಗಳೇ ಇರತಕ್ಕದ್ದು;
(15) ‘ಸಾಕಷ್ಟು ಭೂಮಿಯ ಹಿಡುವಳಿದಾರ’ ಎಂದರೆ, ನಾಲ್ಕು ಹೆಕ್ಟೇರುಗಳಿಗೆ ಕಡಿಮೆಯಿಲ್ಲದ ಬಾಗಾಯ್ತು ಭೂಮಿ ಅಥವಾ ಖಾತ್ರಿ ನೀರಾವರಿ ಸೌಕರ್ಯಗಳನ್ನುಳ್ಳ ತರಿ ಭೂಮಿ ಅಥವಾ 8 ಹೆಕ್ಟೇರುಗಳ ಖುಷ್ಕಿ ಅಥವಾ ಮಳೆಯ ನೀರಿನ ಅಸರೆಯ ತರಿ ಭೂಮಿಯನ್ನು ಹೊಂದಿರುವ ವ್ಯಕ್ತಿ.
ವಿವರಣೆ:
ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ವರ್ಗಗಳ ಭೂಮಿಯ ಒಡೆಯನಾಗಿದ್ದರೆ, ಈ ಖಂಡದ ಉದ್ದೇಶಗಳಿಗಾಗಿ, ಅವನು ಹೊಂದಿರುವ ಭೂಮಿಯ ವಿಸ್ತೀರ್ಣ ಬೇರೆ ಬೇರೆ ವರ್ಗಗಳ ಭೂಮಿಗಳ ವಿಸ್ತೀರ್ಣವನ್ನು ಅದಕ್ಕೆ ಸಮಾನವಾಗುವ ಭೂಮಿಗಳ ವಿಸ್ತೀರ್ಣಕ್ಕೆ ಪರಿವರ್ತಿಸುವುದರ ಮೂಲಕ ಈ ಕೆಳಕಂಡಂತೆ ನಿರ್ಧರಿಸತಕ್ಕದ್ದು:-
ಬಾಗಾಯ್ತು ಭೂಮಿಯ ಒಂದು ಹೆಕ್ಟೇರು ಅಥವಾ ಖಾತ್ರಿ ನೀರಾವರಿ ಸೌಕರ್ಯಗಳುಳ್ಳ ತರಿ ಭೂಮಿಯ ಒಂದು ಹೆಕ್ಟೇರು ಇವನ್ನು ಮಳೆ ನೀರಿನಿಂದ ಬೇಸಾಯವಾಗುವ ತರಿ ಭೂಮಿಯ ಅಥವಾ ಖುಷ್ಕಿ ಭೂಮಿಯ ಎರಡು ಹೆಕ್ಟೇರುಗಳಿಗೆ ಸಮಾನವೆಂದು ಭಾವಿಸತಕ್ಕದ್ದು;
(16) ಈ ನಿಯಮಗಳಲ್ಲಿ ಉಪಯೋಗಿಸಲಾದ ಆದರೆ ಪರಿಭಾಷಿಸಿರದ ಪದಗಳಿಗೆ ಮತ್ತು ಪದಾವಳಿಗಳಿಗೆ ಕರ್ನಾಟಕ ಭೂಕಂದಾಯ ಅಧಿನಿಯಮ 1964 ಮತ್ತು ಅದರ ಮೇರೆಗಿನ ನಿಯಮಗಳಲ್ಲಿ ಕೊಡಲಾದ ಅರ್ಥವು ಇರತಕ್ಕದ್ದು.
- ವಿಲೆಗೆ ದೊರೆಯಬಹುದಾದ ಭೂಮಿಗಳ ಪಟ್ಟಿಯ ತಯಾರಿಕೆ ಮತ್ತು ಪ್ರಕಟಣೆ.- (1) ಯಾವುದೇ ಗ್ರಾಮದಲ್ಲಿ ವಿಲೆಗೆ ದೊರೆಯಬಹುದಾದ ಭೂಮಿಗಳನ್ನು ನಿರ್ಧರಿಸುವುದಕ್ಕಾಗಿ, ತಾಲ್ಲೂಕಿನ ತಹಶೀಲ್ದಾರನು ಅಧಿನಿಯಮದ 71ನೇ ಪ್ರಕರಣದ ಮೇರೆಗೆ ವಿಶೇಷ ಉದ್ದೇಶಗಳಿಗಾಗಿ ಮೀಸಲಿಡಲಾದ ಅಥವಾ ಮೀಸಲಿಡಬೇಕಾದ ಮತ್ತು ಕೃಷಿ ಇಲಾಖೆಯು ಗ ಮತ್ತು ಘ ವರ್ಗಗಳಿಗೆ ಸೇರಿದ ಭೂಮಿಯೆಂದು ವರ್ಗೀಕರಿಸಲಾದ ಭೂಮಿಗಳಲ್ಲಿ, ಕೃಷಿ ಇಲಾಖೆಯು ಗ ಮತ್ತು ಘ ವರ್ಗಗಳಿಗೆ ಸೇರಿದುವೆಂದು ವರ್ಗೀಕರಿಸಿದ ಭೂಮಿಗಳನ್ನುಳಿದು ಇತರ ಅಧಿಭೋಗದಲ್ಲಿರದ ಭೂಮಿಗಳ ಪಟ್ಟಿಯನ್ನು ತಯಾರಿಸತಕ್ಕದ್ದು.
(2) ಅಂಥ ಪಟ್ಟಿಗಳು ತಾಲ್ಲೂಕಿನಲ್ಲಿಯ ಎಲ್ಲ ಗ್ರಾಮಗಳಿಗೆ ಸಂಬಂಧಿಸಿದ್ದರೆ, ತಾಲ್ಲೂಕು ಕಛೇರಿಯಲ್ಲಿ ಮತ್ತು ಅವು ಗ್ರಾಮಕ್ಕೆ ಸಂಬಂಧಿಸಿದ್ದರೆ, ಆ ಗ್ರಾಮದ ಚಾವಡಿಯಲ್ಲಿ ಮತ್ತು ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಅವುಗಳನ್ನು ಪ್ರಕಟಿಸತಕ್ಕದ್ದು. ಪ್ರತಿ ಗ್ರಾಮಕ್ಕೆ ಸಂಬಂಧಪಡುವ ಪಟ್ಟಿಯು ಸಂಬಂಧಪಟ್ಟ ಗ್ರಾಮ ಲೆಕ್ಕಿಗನಲ್ಲಿ ಪರಿಶೀಲನೆಗಾಗಿ ದೊರೆಯತಕ್ಕದ್ದು.
(3) ಪ್ರತಿಯೊಂದು ಪಟ್ಟಿಯನ್ನು ಪ್ರತಿ ವರ್ಷ ತಯಾರಿಸತಕ್ಕದ್ದು; ಪರಿಷ್ಕರಿಸತಕ್ಕದ್ದು; ಹಾಗೂ ತಹಲ್ವರೆಗೆ ತರತಕ್ಕದ್ದು ಮತ್ತು ಅದನ್ನು ಪ್ರತಿ ವರ್ಷ ಜುಲೈ ಒಂದನೇ ದಿನಾಂಕಕ್ಕೆ ಮೀರದಂತೆ ಪ್ರಕಟಿಸತಕ್ಕದ್ದು.
- ಬೇಸಾಯದ ಉದ್ದೇಶಗಳಿಗಾಗಿ ಭೂಮಿಯ ಮಂಜೂರಾತಿಗೆ ಅರ್ಹರಿಂದ ವ್ಯಕ್ತಿಗಳು;-
(1) ಬೇಸಾಯದ ಉದ್ದೇಶಗಳಿಗಾಗಿ ವಿಲೆ ಮಾಡಲು ದೊರೆಯುವ ಭೂಮಿಯನ್ನು ಈ ನಿಯಮಗಳ ಮೇರೆಗೆ ಕೆಳಕಂಡ ವ್ಯಕ್ತಿಗೆ ಮಂಜೂರು ಮಾಡಬಹುದು:-
(i) ಹದಿನೆಂಟು ವರ್ಷ ವಯಸ್ಸಾಗಿರುವವನು; ಮತ್ತು
(ii) ಒಟ್ಟು ಎರಡು ಸಾವಿರ ರೂಪಾಯಿಗಳಿಗೆ ಮೀರದ ವಾರ್ಷಿಕ ವರಮಾನವಿರುವವನು;
(iii) ಸ್ವಂತವಾಗಿ, ಭೂಮಿಯನ್ನು ಸಾಗುವಳಿ ಮಾಡುವ ನಿಜವಾದ ಬೇಸಾಯಗಾರ ಅಥವಾ ಸ್ವಂತ ಸಾಗುವಳಿಯನ್ನು ಮಾಡಲು ನಿಜವಾದ ಉದ್ದೇಶವುಳ್ಳವನು; ಮತ್ತು
(iv) ಸಾಕಷ್ಟು ಭೂಮಿ ಇಲ್ಲದಿರುವವನು:
ಪರಂತು, ಮೊದಲು ಸೇನಾ ಸೇವೆಯಲ್ಲಿದ್ದವರ ಮತ್ತು ಸೈನಿಕರ ಸಂದರ್ಭದಲ್ಲಿ, ಅರ್ಜಿದಾರನ ಒಟ್ಟು ವಾರ್ಷಿಕ ವರಮಾನವು ಐದು ಸಾವಿರ ರೂಪಾಯಿಗಳನ್ನು ಮೀರದಿದ್ದಲ್ಲಿ, ಭೂಮಿಯನ್ನು ಮಂಜೂರು ಮಾಡಬಹುದು;
ಮತ್ತು ಪರಂತು, ಯಾವನೇ ವ್ಯಕ್ತಿಗೆ ಮಂಜೂರು ಮಾಡಲಾದ ಭೂಮಿಯ ವಿಸ್ತೀರ್ಣವು ಅಂಥ ವ್ಯಕ್ತಿಯು ಈಗಾಗಲೇ ಹೊಂದಿರುವ ಭೂಮಿಯ ಜೊತೆಗೆ 15(2)ನೇ ನಿಯಮದಲ್ಲಿ ಸಾಕಷ್ಟು ಹಿಡುವಳಿಯನ್ನು ಹೊಂದಿರುವವನ ಬಗ್ಗೆ ನಿಯಮಿಸಿದ ಪರಿಮಿತಿಗಳನ್ನು ಮೀರತಕ್ಕದ್ದಲ್ಲ.
(2) (1)ನೇ ಉಪನಿಯಮದಲ್ಲಿ ಏನೇ ಇದ್ದರೂ, ತಾನು ಈಗಾಗಲೇ ಹೊಂದಿರುವ ಭೂಮಿಗೆ ಲಗತ್ತಾಗಿರುವ ಅಥವಾ ಅದರ ಹತ್ತಿರದಲ್ಲಿರುವ ಭೂಮಿಯು, ಅದು, ಈಗ ಅವನು ಹೊಂದಿರುವ ಭೂಮಿಯ ಹೆಚ್ಚಿನ ಉಪಯುಕ್ತತೆಗಾಗಿ ಅಥವಾ ಅದರ ಉತ್ತಮ ಸಾಗುವಳಿಗಾಗಿ ಅವಶ್ಯವೆಂದು ಭೂಮಿ ಮಂಜೂರು ಮಾಡುವ ಪ್ರಾಧಿಕಾರಿಯು ಅಭಿಪ್ರಾಯಪಟ್ಟರೆ, ಆ ಪ್ರಾಧಿಕಾರಿಯು ಆ ಮಂಜೂರಾತಿಯ ದಿನಾಂಕದಂದು ಇದೆಯೆಂದು ನಿರ್ಧರಿಸುವಂಥ ಮಾರುಕಟ್ಟೆ ಮೌಲ್ಯವನ್ನು ಪಡೆದ ತರುವಾಯ ಯಾವನೇ ವ್ಯಕ್ತಿಗೆ ಮಂಜೂರು ಮಾಡಬಹುದು:
ಪರಂತು, ತರಿ ಅಥವಾ ಬಾಗಾಯ್ತು ಭೂಮಿಯ ಸಂದರ್ಭದಲ್ಲಿ ಅರ್ಧ ಹೆಕ್ಟೇರಿಗೆ ಮೀರುವ ಮತ್ತು ಖುಷ್ಕಿ ಭೂಮಿಯ ಸಂದರ್ಭದಲ್ಲಿ ಒಂದು ಹೆಕ್ಟೇರಿಗೆ ಮೀರುವ ವಿಸ್ತೀರ್ಣವುಳ್ಳ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ ಮತ್ತು ಅಂಥ ಮಂಜೂರಾತಿಯ ತರುವಾಯ ಹೊಂದಿರುವ ಭೂಮಿಯ ಒಟ್ಟು ವಿಸ್ತೀರ್ಣವು ಕರ್ನಾಟಕ ಭೂಸುಧಾರಣೆ ಅಧಿನಿಯಮ, 1961ಕ್ಕನುಸಾರವಾದ ಪರಮಾವಧಿ ವಿಸ್ತೀರ್ಣವನ್ನು ಮೀರತಕ್ಕದ್ದಲ್ಲ.
- ಭೂಮಿಯ ಮೀಸಲಾತಿ.- (1) ಯಾವುದೇ ಗ್ರಾಮದಲ್ಲಿ ವಿಲೆ ಮಆಡುವುದಕ್ಕೆ ದೊರೆಯುವ ಭೂಮಿಯಲ್ಲಿ, ಕೆಳಗೆ ಸೂಚಿಸಿದವರಿಗೆ ಮೀಸಲಾಗಿಟ್ಟು, ಉಳಿದುದನ್ನು ಮಂಜೂರು ಮಾಡತಕ್ಕದ್ದು:-
(i) ಮೊದಲು ಸೇನಾ ಸೇವೆಯಲ್ಲಿದ್ದವರು ಮತ್ತು ಸೈನಿಕರು ಶೇಕಡಾ 10
(ii) ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಗಳು ಶೇಕಡಾ 50
(iii) ರಾಜಕೀಯ ಸಂತ್ರಸ್ತರು ಶೇಕಡಾ 10
(iv) ಇತರರು ಶೇಕಡಾ 30
(2) (ii) ಮತ್ತು (iii)ರಲ್ಲಿ ಮೀಸಲಿಟ್ಟ ವಿಸ್ತೀರ್ಣವು ಆ ವರ್ಗಗಳಿಗೆ ಸೇರಿದ ವ್ಯಕ್ತಿಗಳಿಗೆ ಮಂಜೂರು ಮಾಡಬಹುದಾದ ವಿಸ್ತೀರ್ಣಕ್ಕಿಂತ ಹೆಚ್ಚಾಗಿದ್ದಲ್ಲಿ, ಹೆಚ್ಚಿನ ಭೂಮಿಯನ್ನು ಡೆಪ್ಯುಟಿ ಕಮೀಷನರ ಅನುಮೋದನೆ ಪಡೆದು (iv)ನೇ ವರ್ಗದಲ್ಲಿನ ವ್ಯಕ್ತಿಗಳ ಪೈಕಿ ಯಾರಿಗಾದರೂ ವಿಲೇ ಮಾಡತಕ್ಕದ್ದು.
(3) (1)ನೇ ಉಪನಿಯಮದಲ್ಲಿ ಏನೇ ಇದ್ದರೂ, ಗ್ರಾಮದಲ್ಲಿ ವಿಲೆಗಾಗಿ, ದೊರಕುವ ಭೂಮಿಯು ನಾಲ್ಕು ಹೆಕ್ಟೇರುಗಳಿಗೆ ಕಡಿಮೆಯಿದ್ದಲ್ಲಿ, ಅಂಥ ಗ್ರಾಮದಲ್ಲಿ ಸಾಮಾನ್ಯವಾಗಿ ವಾಸಿಸುವ ಅಥವಾ ನೆರೆಯ ಗ್ರಾಮದಲ್ಲಿ ವಾಸಿಸುವ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಆ ಇಡೀ ಭೂಮಿಯನ್ನು ವಿಲೇ ಮಾಡತಕ್ಕದ್ದು ಮತ್ತು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ಯಾವ ವ್ಯಕ್ತಿಗಳೂ ಅದಕ್ಕೆ ಅರ್ಜಿ ಸಲ್ಲಿಸದಿದ್ದರೆ, ಅದನ್ನು ಇತರರಿಗೆ ವಿಲೇ ಮಾಡತಕ್ಕದ್ದು.
- ಆದ್ಯತಾ ಕ್ರಮ.- 5ನೇ ನಿಯಮದ (1)ನೇ ಉಪನಿಯಮದ (iv)ನೇ ವರ್ಗಕ್ಕೆ ಸೇರಿದ ವ್ಯಕ್ತಿಗಳಲ್ಲಿ ಭೂಮಿಯನ್ನು ವಿಲೆ ಮಾಡುವಾಗ, ಈ ಕೆಳಕಂಡ ಆದ್ಯತಾ ಕ್ರಮವನ್ನು ಅನುಸರಿಸತಕ್ಕದ್ದು:-
(i) ಗ್ರಾಮದಲ್ಲಿ ವಾಸಿಸುವ ಭೂರಹಿತ ವ್ಯಕ್ತಿಗಳು;
(ii) ಗ್ರಾಮದಲ್ಲಿ ವಾಸಿಸುವ ಸಾಕಷ್ಟು ಭೂಮಿ ಇಲ್ಲದ ಹಿಡುವಳಿದಾರರು;
(iii) ಅದೇ ತಾಲ್ಲೂಕಿನ ಅಥವಾ ಅದಕ್ಕೆ ಲಗತ್ತಾಗಿರುವ ತಾಲ್ಲೂಕಿನ ಇತರ ಗ್ರಾಮಗಳಲ್ಲಿ ವಾಸಿಸುವ ಭೂರಹಿತ ವ್ಯಕ್ತಿಗಳು;
(iv) ಇತರರು
ಪರಂತು, ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಸರ್ಕಾರಿ ಭೂಮಿಯನ್ನು ಸ್ಥಳಾಂತರಿತ ವ್ಯಕ್ತಿಗಳಿಗೆ ಮತ್ತು ಯಾವುದೇ ಸರಕಾರಿ ಯೋಜನೆಯಿಂದ ಬಾಧಿತರಾದ ಗೇಣಿದಾರರಿಗೆ ಮಂಜೂರು ಮಾಡುವುದಕ್ಕಾಗಿ ಮೀಸಲಾಗಿಡತಕ್ಕದ್ದೆಂದು ಅಧಿನಿಯಮದ 71ನೇ ಪ್ರಕರಣದ ಮೇರೆಗೆ ಸರ್ಕಾರವು ನಿರ್ದೇಶಿಸಿದಾಗ 5 ಮತ್ತು 6ನೇ ನಿಯಮದ ಉಪಬಂಧಗಳು ಅನ್ವಯಿಸುವುದಿಲ್ಲ.
- ಭೂಮಿಯನ್ನು ಮಂಜೂರು ಮಾಡಲು ರೆವೆನ್ಯೂ ಅಧಿಕಾರಿಗಳಿಗಿರುವ ಅಧಿಕಾರಗಳು.- (1) ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯುವುದಕ್ಕಲ್ಲದ ಇತರ ಬೇಸಾಯದ ಉದ್ದೇಶಕ್ಕಾಗಿ, ಕೆಳಕಂಡ ರೆವೆನ್ಯೂ ಅಧಿಕಾರಿಗಳು ಅವರ ಮುಂದೆ ಸೂಚಿಸಿರುವ ವಿಸ್ತೀರ್ಣದ ಭೂಮಿಯನ್ನು ಮಂಜೂರು ಮಾಡುವುದಕ್ಕೆ ಅಧಿಕಾರ ಹೊಂದಿರತಕ್ಕದ್ದು:
(i) ತಾಲ್ಲೂಕಿನ ಆಡಳಿತವನ್ನು ಹೊಂದಿರುವ ತಹಶೀಲ್ದಾರ.- ಎರಡು ಹೆಕ್ಟೇರುಗಳವರೆಗೆ ಖುಷ್ಕಿ ಭೂಮಿ ಅಥವಾ ಒಂದು ಹೆಕ್ಟೇರಿನವರೆಗೆ ತರಿ ಅಥವಾ ಬಾಗಾಯ್ತು ಭೂಮಿ;
(ii) ರೆವೆನ್ಯೂ ಉಪವಿಭಾಗದ ಆಡಳಿತವನ್ನು ಹೊಂದಿರುವ ಅಸಿಸ್ಟೆಂಟ್ ಕಮೀಷನರು ಅಥವಾ ಭೂಮಿಯನ್ನು ಮಂಜೂರು ಮಾಡಲು ಡೆಪ್ಯುಟಿ ಕಮೀಷನರ ಅಧಿಕಾರಗಳನ್ನು ಪ್ರತ್ಯಾಯೋಜಿಸಲಾಗಿರುವ ಜಿಲ್ಲೆಯ ಯಾವನೇ ಅಸಿಸ್ಟೆಂಟ್ ಕಮೀಷನರು ನಾಲ್ಕು ಹೆಕ್ಟೇರುಗಳವರೆಗೆ ಖುಷ್ಕಿ ಭೂಮಿ ಅಥವಾ ಎರಡು ಹೆಕ್ಟೇರಿನವರೆಗೆ ತರಿ ಅಥವಾ ಬಾಗಾಯ್ತು ಭೂಮಿ;
(iii) ಜಿಲ್ಲೆಯ ಡೆಪ್ಯುಟಿ ಕಮೀಷನರು.- ಆರು ಹೆಕ್ಟೇರುಗಳಿಗೆ ಮೀರದ ಖುಷ್ಕಿ ಭೂಮಿ ಅಥವಾ ಮೂರು ಹೆಕ್ಟೇರುಗಳಿಗೆ ತರಿ ಅಥವಾ ಬಾಗಾಯ್ತು ಭೂಮಿ;
(iv) ಡಿವಿಜನಲ್ ಕಮೀಷನರು.- ಆರು ಹೆಕ್ಟೇರುಗಳಿಗೆ ಮೀರಿದ ಆದರೆ ಹತ್ತು ಹೆಕ್ಟೇರುಗಳಿಗೆ ಮೀರದ ಖುಷ್ಕಿ ಭೂಮಿ ಅಥವಾ ಮೂರು ಹೆಕ್ಟೇರುಗಳಿಗೆ ಮೀರಿದ, ಆದರೆ ಐದು ಹೆಕ್ಟೇರುಗಳಿಗೆ ಮೀರದ ತರಿ ಅಥವಾ ಬಾಗಾಯ್ತು ಭೂಮಿ;
(v) (iv)ನೇ ಉಪಖಂಡದಲ್ಲಿ ನಿರ್ದಿಷ್ಟಪಡಿಸಲಾದ ವಿಸ್ತೀರ್ಣಕ್ಕಿಂತ ಹೆಚ್ಚಾಗಿರುವ ಇತರ ಯಾವುದೇ ಸಂದರ್ಭದಲ್ಲಿ,ತಮ್ಮ ಸೂಚನೆಗಳನ್ನು ಮಂಜೂರಾತಿಗಾಗಿ ಸರ್ಕಾರಕ್ಕೆ ಒಪ್ಪಿಸತಕ್ಕದ್ದು.
(1) (1)ನೇ ಉಪನಿಯಮದಲ್ಲಿ ಏನೇ ಇದ್ದರೂ, ಈ ನಿಯಮಗಳ ಮೇರೆಗೆ ಭೂಮಿಯನ್ನು ಮಂಜೂರು ಮಾಡುವುದಕ್ಕಾಗಿ ವಿಶೇಷ ಅಸಿಸ್ಟೆಂಟ್ ಕಮೀಷನರುಗಳನ್ನು ನೇಮಕ ಮಾಡಿರುವಲ್ಲಿ, (1)ನೇ ಉಪನಿಯಮದ (i) ಮತ್ತು (ii)ನೇ ಬಾಬುಗಳಲ್ಲಿ ನಿರ್ದಿಷ್ಟಪಡಿಸಿದ ರೆವೆನ್ಯೂ ಅಧಿಕಾರಿಗಳಿಗೆ ಭೂಮಿಯನ್ನು ಮಂಜೂರು ಮಾಡಲು ಅಧಿಕಾರವಿರತಕ್ಕದ್ದಲ್ಲ. ಮತ್ತು ಸದರಿ ವಿಶೇಷ ಅಸಿಸ್ಟೆಂಟ್ ಕಮೀಷನರುಗಳಿಗೆ, ತಮ್ಮ ಅಧಿಕಾರ ವ್ಯಾಪ್ತಿಯೊಳಗೆ, (1)ನೇ ಉಪನಿಯಮದಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಕ್ಕಾಗಿ ನಾಲ್ಕು ಹೆಕ್ಟೇರುಗಳವರೆಗೆ ಖುಷ್ಕಿ ಭೂಮಿಯನ್ನು ಅಥವಾ ಎರಡು ಹೆಕ್ಟೇರುಗಳವರೆಗೆ ತರಿ ಅಥವಾ ಬಾಗಾಯ್ತು ಭೂಮಿಯನ್ನು ಮಂಜೂರು ಮಾಡಲು ಅಧಿಕಾರವಿರತಕ್ಕದ್ದು.
(2) ಬಾಗಾಯ್ತು ಬೆಳೆಗಳನ್ನು ಬೆಳೆಯುವ ಉದ್ದೇಶಕ್ಕಾಗಿ, ಜಿಲ್ಲೆಯ ಡೆಪ್ಯುಟಿ ಕಮೀಷನರು 10 ಎಕರೆಗೆ ವಿಸ್ತೀರ್ಣದವರೆಗೆ ಭೂಮಿಗಳನ್ನು ಮಂಜೂರು ಮಾಡಬಹುದು ಮತ್ತು ಡಿವಿಜನಲ್ ಕಮೀಷನರು ಹದಿನೈದು ಹೆಕ್ಟೇರುಗಳ ವಿಸ್ತೀರ್ಣದವರೆಗೆ ಭೂಮಿಯನ್ನು ಮಂಜೂರು ಮಾಡಬಹುದು. ಇತರ ಎಲ್ಲ ಸಂದರ್ಭಗಳಲ್ಲಿ, ಸೂಚನೆಗಳನ್ನು ಮಂಜೂರಾತಿಗಾಗಿ ಸರ್ಕಾರಕ್ಕೆ ಒಪ್ಪಿಸತಕ್ಕದ್ದು.
(3) ಕಟ್ಟಡ ನಿವೇಶನಗಳಿಗಾಗಿಯಲ್ಲದೆ ಇತರ ಬೇಸಾಯೇತರ ಉದ್ದೇಶಗಳಿಗಾಗಿ, ಈ ಕೆಳಕಂಡ ರೆವೆನ್ಯೂ ಅಧಿಕಾರಿಗಳು 10(3)ನೇ ಉಪಬಂಧಗಳಿಗೊಳಪಟ್ಟು ಅವರು ನಿರ್ಧರಿಸಬೇಕಾದ ಪರಿವರ್ತನಾ ಪರಿಹಾರದ ಮೊಬಲಗು ಸೇರಿ ಮಾರುಕಟ್ಟೆ ಮೌಲ್ಯವನ್ನು ಪಡೆದು, ಅವರ ಹೆಸರಿನ ಮುಂದೆ ನಮೂದಿಸಲಾದ ವಿಸ್ತೀರ್ಣದವರೆಗೆ ಭೂಮಿಯನ್ನು ಮಂಜೂರು ಮಾಡಬಹುದು.
(i) ಡೆಪ್ಯುಟಿ ಕಮೀಷನರು-ನಾಲ್ಕು ಹೆಕ್ಟೇರುಗಳ ವಿಸ್ತೀರ್ಣದವರೆಗೆ;
(ii) ಡಿವಿಜನಲ್ ಕಮೀಷನರು-ನಾಲ್ಕು ಹೆಕ್ಟೇರುಗಳನ್ನು ಮೀರಿ ಆದರೆ 8 ಹೆಕ್ಟೇರುಗಳನ್ನು ಮೀರದಂತೆ;
(iii) (ii)ನೇ ಉಪಖಂಡದಲ್ಲಿ ನಿರ್ದಿಷ್ಟಪಡಿಸಲಾದ ವಿಸ್ತೀರ್ಣವನ್ನು ಮೀರಿದ ಇತರ ಯಾವುದೇ ಸಂದರ್ಭದಲ್ಲಿ, ಸೂಚನೆಗಳನ್ನು ಮಂಜೂರಾತಿಗಾಗಿ ಸರ್ಕಾರಕ್ಕೆ ಒಪ್ಪಿಸತಕ್ಕದ್ದು.
- ಬೇಸಾಯದ ಉದ್ದೇಶಗಳಿಗಾಗಿ ಭೂಮಿಯನ್ನು ಮಂಜೂರು ಮಾಡಲು ಅನುಸರಿಸಬೇಕಾದ ಕ್ರಮ.- (1) ಈ ನಿಯಮಗಳ ಮೇರೆಗೆ ಬೇಸಾಯದ ಉದ್ದೇಶಗಳಿಗಾಗಿ ಭೂಮಿಯ ಮಂಜೂರಾತಿಯನ್ನು ಪಡೆಯಲು ಅರ್ಹನಾಗಿರುವ ಯಾವನೇ ವ್ಯಕ್ತಿಯು ಈ ಕೆಳಕಂಡ ವಿವರಗಳನ್ನು ಕೊಟ್ಟು ತಾಲ್ಲೂಕು ತಹಶೀಲ್ದಾರನಿಗೆ, ನಮೂನೆ-1ರಲ್ಲಿ ಲಿಖಿತದ ಅರ್ಜಿಯನ್ನು ಸಲ್ಲಿಸಬೇಕು.-
(i) ಅರ್ಜಿದಾರನ ಹೆಸರು, ವಯಸ್ಸು ಮತ್ತು ವಿಳಾಸ;
(ii) ಕೇಳಿರುವ ಭೂಮಿಯ ವಿಸ್ತೀರ್ಣ ಮತ್ತು ವಿವರಗಳು, ಅಂದರೆ ಭೂಮಿಯ ಸರ್ವೆ ನಂಬರು, ಅದು ಇರುವ ಗ್ರಾಮ, ತಾಲ್ಲೂಕು ಮತ್ತು ಉಪವಿಭಾಗ;
(iii) ಅವನು ಅಥವಾ ಅವನ ಕುಟುಂಬದ ಯಾವನೇ ವ್ಯಕ್ತಿಯು ಈಗಾಗಲೇ ಒಡೆತನ ಪಡೆದಿರುವ ಅಥವಾ ಹೊಂದಿರುವ ಭೂಮಿಯು ಯಾವುದಾದರೂ ಇದ್ದರೆ, ಅದರ ವಿಸ್ತೀರ್ಣ ಮತ್ತು ವಿವರ;
(iv) ಅವನು ಅನುಸೂಚಿತ ಜಾತಿಗೆ ಅಥವಾ ಅನುಸೂಚಿತ ಪಂಗಡಗಳಿಗೆ ಸೇರಿದವನೇ ಅಥವಾ ಸ್ಥಳಾಂತರಿತ ವ್ಯಕ್ತಿಯೇ, ಭೂಚ್ಯುತ ಹಿಡುವಳಿದಾರನೆ, ಭೂಚ್ಯುತ ಧಾರಕನೆ, ಗೇಣಿದಾರನೆ, ಮೊದಲು ಸೇನಾ ಸೇವೆಯಲ್ಲಿದ್ದವನೆ, ಸೈನಿಕನೆ ಅಥವಾ ರಾಜಕೀಯ ಸಂತ್ರಸ್ತನೆ;
(v) ಅವನು ಅಥವಾ ಅವನ ಕುಟುಂಬದ ಯಾವನೇ ವ್ಯಕ್ತಿಯು ಭೂಮಿಗಾಗಿ ಹಿಂದೆಯೇ ಅರ್ಜಿ ಸಲ್ಲಿಸಿದ್ದನೇ, ಸಲ್ಲಿಸಿದ್ದರೆ, ಅದರ ಬಗ್ಗೆ ಬಂದ ಉತ್ತರದ ವಿವರಗಳು;
(vi) ಅವನಿಗೆ ಅಥವಾ ಅವನ ಕುಟುಂಬದ ಯಾವನೇ ವ್ಯಕ್ತಿಗೆ ಈ ಮೊದಲು ಮಂಜೂರು ಮಾಡಿದ ಯಾವುದೇ ಭೂಮಿಯ ವಿವರಗಳು;
(2) ಅಂಥ ಅರ್ಜಿಯು ತಲುಪಿದ ಕೂಡಲೇ, ತಹಶೀಲ್ದಾರನು, ತನ್ನ ಕಛೇರಿಯಲ್ಲಿ ಇಟ್ಟಿರುವ 11ನೇ ನಮೂನೆಯಲ್ಲಿರುವ ರಿಜಿಸ್ಟರಿನಲ್ಲಿ ಆ ಅರ್ಜಿಯ ವಿವರಗಳನ್ನು ನಮೂದನೆ ಮಾಡಿಸತಕ್ಕದ್ದು.
(3) ಪ್ರತಿ ವರ್ಷದ ಸೆಪ್ಟೆಂಬರ್ ತಿಂಗಳ ಕೊನೆಯ ದಿನಾಂಕದ ತರುವಾಯ ಬಂದ ಅರ್ಜಿಗಳನ್ನು ತಹಶೀಲ್ದಾರನು ಪರಿಶೀಲಿಸತಕ್ಕದ್ದು ಮತ್ತು 6ನೇ ನಿಯಮದಲ್ಲಿ ನಿರ್ದಿಷ್ಟಪಡಿಸಲಾದ ಆದ್ಯತೆಗಳಿಗೆ ಅನುಸಾರವಾಗಿ ಅವುಗಳನ್ನು ವರ್ಗೀಕರಿಸತಕ್ಕದ್ದು. (1969ನೇ ವರ್ಷಕ್ಕೆ) 1969ರ ನವೆಂಬರ್ 30ರ ತರುವಾಯ ಮತ್ತು (ಮುಂದಿನ ವರ್ಷಗಳಿಗೆ) 30ನೇ ಸೆಪ್ಟೆಂಬರಿನ ತರುವಾಯ ಬಂದ ಅರ್ಜಿಗಳನ್ನು ತಿಂಗಳಿಗೊಮ್ಮೆ ತಹಶೀಲ್ದಾರನು ಪರಿಶೀಲಿಸಕತ್ಕದ್ದು ಮತ್ತು ವರ್ಗೀಕರಿಸತಕ್ಕದ್ದು.
(4) ತದನಂತರ, ತಹಶೀಲ್ದಾರನು ತಾನು ಸೂಕ್ತವೆಂದು ಆಲೋಚಿಸುವಂಥ ವಿಚಾರಣೆಯನ್ನು ನಡೆಸತಕ್ಕದ್ದು ಮತ್ತು ಅರ್ಜಿದಾರನು ತಾನು ಅರ್ಜಿ ಹಾಕಿಕೊಂಡಿರುವ ಭೂಮಿಯ ಮಂಜೂರಾತಿಯನ್ನು ಪಡೆಯಲು ಈ ನಿಯಮಗಳ ಮೇರೆಗೆ ಅರ್ಹನಾಗಿದ್ದಾನೆ ಎಂದು ಮನದಟ್ಟಾದರೆ 5, 6, 7 ಮತ್ತು 24ನೇ ನಿಯಮಗಳ ಉಪಬಂಧಗಳಿಗೊಳಪಟ್ಟು, ಭೂಮಿಯನ್ನು ಮಂಜೂರು ಮಾಡಿದ ಆದೇಶವನ್ನು ಹೊರಡಿಸತಕ್ಕದ್ದು.
(5) ಅರ್ಜಿ ಹಾಕಿಕೊಂಡಿರುವ ಭೂಮಿಯು ಮಂಜೂರಾತಿಗೆ ಉಪಲಬ್ದವಿರದಿದ್ದರೆ ಅಥವಾ ಅರ್ಜಿದಾರನು ಮಂಜೂರಾತಿಗೆ ಅರ್ಹನಲ್ಲವೆಂದು ತಹಶೀಲ್ದಾರನಿಗೆ ಮನದಟ್ಟಾದರೆ, ಅವನು ಅರ್ಜಿಯನ್ನು ತಿರಸ್ಕರಿಸಬಹುದು ಮತ್ತು ಹಾಗೆ ಅರ್ಜಿದಾರನಿಗೆ ತಿಳಿಸಬಹುದು.
(6) ಈ ನಿಯಮಗಳ ಮೇರೆಗೆ ಭೂಮಿಯನ್ನು ಮಂಜೂರು ಮಾಡಲು ತಹಶೀಲ್ದಾರನಿಗೆ ಅಧಿಕಾರವಿಲ್ಲದಿದ್ದರೆ, ಅಥವಾ ಯಾವ ಭೂಮಿಗಾಗಿ ಅರ್ಜಿ ಹಾಕಲಾಗಿದೆಯೋ ಆ ಭೂಮಿಯ ವಿಸ್ತೀರ್ಣವು ಅವನು ಮಂಜೂರು ಮಾಡಲು ಅಧಿಕಾರ ಹೊಂದಿರುವ ಭೂಮಿಯ ವಿಸ್ತೀರ್ಣಕ್ಕಿಂತ ಹೆಚ್ಚಾಗಿದ್ದರೆ, ಅವನು ಅಂಥ ವಿಸ್ತೀರ್ಣದ ಭೂಮಿಯನ್ನು ಮಂಜೂರು ಮಾಡಲು ಈ ನಿಯಮಗಳ ಮೇರೆಗೆ ಅಧಿಕಾರ ಹೊಂದಿರುವ ಅಧಿಕಾರಿಗೆ ಈ ವಿಷಯದ ವರದಿಯೊಂದಿಗೆ ಆ ಅರ್ಜಿಯನ್ನು ಒಪ್ಪಿಸತಕ್ಕದ್ದು ಮತ್ತು ಅಂಥ ಅಧಿಕಾರವುಳ್ಳ ಅಧಿಕಾರಿಯು ಭೂಮಿಯನ್ನು ಮಂಜೂರು ಮಾಡಿದ ಆದೇಶವನ್ನು ಹೊರಡಿಸಬಹುದು.
(7) ಭೂಮಿಯನ್ನು ಮಂಜೂರು ಮಾಡಿದಾಗೆಲೆಲ್ಲ, 5ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ಮೀಸಲಾತಿಯನ್ನು ಗಮನಿಸಲಾಗಿದೆ ಎಂಬುದರ ಬಗ್ಗೆ ತಹಶೀಲ್ದಾರನು ಒಂದು ಪ್ರಮಾಣ ಪತ್ರವನ್ನು ಅಭಿಲೇಖಿಸತಕ್ಕದ್ದು.
- ಮಂಜೂರಾತಿಯ ಷರತ್ತುಗಳು.- (1) ಈ ನಿಯಮಗಳ ಮೇರೆಗೆ ಬೇಸಾಯದ ಉದ್ದೇಶಗಳಿಗಾಗಿ ಭೂಮಿಯನ್ನು ಮಂಜೂರು ಮಾಡುವುದು ಈ ಮುಂದಿನ ಷರತ್ತುಗಳಿಗೆ ಒಳಪಟ್ಟಿರತಕ್ಕದ್ದು, ಎಂದರೆ:-
(i) ಮಂಜೂರಾತಿ ಪಡೆದವನು ತಾನು ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡ ದಿನಾಂಕದಿಂದ ಹದಿನೈದು ವರ್ಷಗಳ ಅವಧಿಯವರೆಗೆ ಅದನ್ನು ಪರಭಾರೆ ಮಾಡತಕ್ಕದ್ದಲ್ಲ:
ಪರಂತು, ಅವನು ಐದು ವರ್ಷಗಳ ಅವಧಿಯ ತರುವಾಯ, ಡೆಪ್ಯುಟಿ ಕಮೀಷನರ ಪೂರ್ವಾನುಮತಿಯನ್ನು ಪಡೆದು ಮತ್ತು ಅವನು ನಿರ್ದಿಷ್ಟಪಡಿಸಬಹುದಾದಂಥ ಷರತ್ತುಗಳಿಗೆ ಒಳಪಟ್ಟು, ಅಂಥ ಭೂಮಿಯನ್ನು ಪೂರ್ಣವಾಗಿ ಅಥವಾ ಅದರ ಯಾವುದೇ ಭಾಗವನ್ನು ಪರಭಾರೆ ಮಾಡಬಹುದು. ಆದರೆ, ಆ ಪರಭಾರೆಯು ಇತರ ಭೂಮಿಯನ್ನು ಅರ್ಜಿಸುವ ಉದ್ದೇಶಕ್ಕಾಗಿ ಅಥವಾ ಉಳಿದಿರುವ ಭೂಮಿಯನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಮಾಡಲಾಗಿದೆಯೆಂದು ಮತ್ತು ಮಂಜೂರಾತಿ ಪಡೆದವನು ಡೆಪ್ಯುಟಿ ಕಮೀಷನರು ಅಂಥ ಪರಭಾರೆಗೆ ಅನುಮತಿ ಕೊಡುವ ದಿನಾಂಕದಂದು ಇದೆಯೆಂದು ನಿರ್ಧರಿಸುವಂಥ ಅಂಥ ಭೂಮಿಯ ಮಾರುಕಟ್ಟೆ ಮೌಲ್ಯದ ಶೇಕಡ ಐವತ್ತಕ್ಕೆ ಸಮವಾದ ಮೊಬಲಗನ್ನು ಸರ್ಕಾರಕ್ಕೆ ಜಮೆ ಮಾಡುವನೆಂದು ಡೆಪ್ಯುಟಿ ಕಮೀಷನರಿಗೆ ಮನದಟ್ಟಾದ ಹೊರತು, ಅವನು ಅಂಥ ಅನುಮತಿಯನ್ನು ಕೊಡತಕ್ಕದ್ದಲ್ಲ:
ಪರಂತು, ಈ ನಿಯಮದ ಮೇರೆಗೆ ಭೂಮಿಯನ್ನು ಪರಭಾರೆ ಮಾಡಲು ಅನುಮತಿಯನ್ನು ಪಡೆದಿರುವ ಯಾವನೇ ವ್ಯಕ್ತಿಯು, 4ನೇ ನಿಯಮದ ಉಪಬಂಧಗಳಲ್ಲಿ ಏನೇ ಇದ್ದರೂ, ಯಾವುದೇ ಸರ್ಕಾರಿ ಭೂಮಿಯ ಮಂಜೂರಾತಿಯನ್ನು ಪಡೆಯಲು ಅರ್ಹನಾಗಿರತಕ್ಕದ್ದಲ್ಲ.
(i) ಮಂಜೂರಾತಿ ಪಡೆದ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡ ದಿನಾಂಕದಿಂದ ಮೂರು ವರ್ಷಗಳ ಒಳಗೆ ಅದನ್ನು ಸಾಗುವಳಿಗೆ ತರತಕ್ಕದ್ದು;
ಪರಂತು, ಮಂಜೂರಾತಿ ಪಡೆದವನು ವಾಸ್ತವಿಕ ಕಾರಣಗಳಿಗಾಗಿ ಹಾಗೆ ಮಾಡುವುದು ಸಾಧ್ಯವಿಲ್ಲವೆಂದು ಡೆಪ್ಯುಟಿ ಕಮೀಷನರಿಗೆ ಮನದಟ್ಟಾದರೆ, ಅವನು ಮೇಲೆ ಹೇಳಿದ ಅವಧಿಯನ್ನು 5 ವರ್ಷಗಳವರೆಗೆ ವಿಸ್ತರಿಸಬಹುದು;
(ii) ಮಂಜೂರಾತಿ ಪಡೆದವನು ಭೂಮಿಯನ್ನು ಸ್ವಂತವಾಗಿ ಸಾಗುವಳಿ ಮಾಡತಕ್ಕದ್ದು;
(iii) ಭೂಮಿಯನ್ನು ಮಂಜೂರು ಮಾಡುವ ಅಧಿಕಾರಿಯು ಯುಕ್ತವೆಂದು ಪರ್ಯಾಲೋಚಿಸುವಂಥ ಷರತ್ತುಗಳಿಗೆ ಒಳಪಟ್ಟು ಮತ್ತು ಅವನು ಸೂಕ್ತವೆಂದು ಪರ್ಯಾಲೋಚಿಸಬಹುದಾದ ಹೆಚ್ಚಿನ ನಿಗದಿತ ಬೆಲೆಯನ್ನು ಸಂದಾಯ ಮಾಡುವುದಕ್ಕೆ ಒಳಪಟ್ಟು, ಅಂಥ ಅಧಿಕಾರಿಯ ಪೂರ್ವಾನುಮೋದನೆಯನ್ನು ಪಡೆದ ಹೊರತು ಆ ಭೂಮಿಯನ್ನು ಯಾವ ಉದ್ದೇಶಕ್ಕಾಗಿ ಮಂಜೂರು ಮಾಡಲಾಗದೆಯೋ ಅದರ ಹೊರತು ಇತರ ಯಾವುದೇ ಉದ್ದೇಶಕ್ಕಾಗಿ ಅದನ್ನು ವಿನಿಯೋಗಿಸತಕ್ಕದ್ದಲ್ಲ;
ಪರಂತು, ಪರಿವರ್ತನೆಯು ಬೇಸಾಯೇತರ ಉದ್ದೇಶಗಳಿಗಾಗಿ ಆಗಿರಬೇಕು ಮತ್ತು ಬೆಲೆಯು 12ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ಪರಮಾವಧಿಯೊಳಗೆ ಇರಬೇಕು.
(iv) ಮೇಲಿನ ಯಾವುದೇ ಷರತ್ತುಗಳ ಉಲ್ಲಂಘನೆಯಾದರೆ, ಮಂಜೂರಾತಿಯು ರದ್ದಿಯಾತಿಗೆ ಒಳಪಟ್ಟಿರತಕ್ಕದ್ದು ಮತ್ತು ಭೂಮಿಯನ್ನು ಮಂಜೂರು ಮಾಡುವ ಅಧಿಕಾರಿಯು ಅದನ್ನು ಎಲ್ಲ ಪೂರ್ವಾಧಿಕಾರಿಗಳಿಂದ ಮುಕ್ತವಾಗಿ ಸರ್ಕಾರಕ್ಕೆ ಪುನಃ ವಹಿಸಿಕೊಳ್ಳತಕ್ಕದ್ದು.
ಪರಂತು, ಮಂಜೂರಾತಿಯನ್ನು ರದ್ದುಗೊಳಿಸುವ ಮೊದಲು ಆ ಮಂಜೂರಾತಿ ಪಡೆದವನಿಗೆ ಅಹವಾಲು ಹೇಳಿಕೊಳ್ಳಲು ಒಂದು ಅವಕಾಶವನ್ನು ಕೊಡತಕ್ಕದ್ದು: ಮತ್ತು
ಪರಂತು, ನಿಗದಿತ ಬೆಲೆಯನ್ನು ಸಂದಾಯ ಮಾಡದಿರುವುದಕ್ಕಾಗಿ ಮಂಜೂರಾತಿಯನ್ನು ರದ್ದುಗೊಳಿಸಿದಾಗ, ಸಂಬಂಧಪಟ್ಟ ಭೂಮಿಯು ಬೇರೆ ರೀತಿಯಲ್ಲಿ ವಿಲೆಯಾಗಿರದಿದ್ದರೆ, ಮಂಜೂರಾತಿಯ ತರುವಾಯದ 2 ವರ್ಷಗಳ ಅವಧಿಯೊಳಗೆ ನಿಗದಿತ ಬೆಲೆಯ ಶೇಕಡ 10ರಷ್ಟು ದಂಡದೊಡನೆ ನಿಗದಿತ ಬೆಲೆಯನ್ನು ಸಂದಾಯ ಮಾಡಿದ ಮೇಲೆ ಡೆಪ್ಯುಟಿ ಕಮೀಷನರು ಆ ಭೂಮಿಯನ್ನು ಪುನಃ ಅವನಿಗೆ ಮಂಜೂರು ಮಾಡಬಹುದು.
(2) (1)ನೇ ಉಪನಿಯಮದ ಉದ್ದೇಶಗಳಿಗಾಗಿ ಈ ಕೆಳಕಂಡವುಗಳನ್ನು ಪರಭಾರೆಯೆಂದು ಪರಿಗಣಿಸತಕ್ಕದ್ದಲ್ಲ:-
(ಕ) ಭೂಮಿಯ ಸುಧಾರಣೆಗಾಗಿ ಅಥವಾ ಅಂಥ ಭೂಮಿಯನ್ನು ಸಾಗುವಳಿ ಮಾಡಲು ದನಗಳನ್ನು ಅಥವಾ ಬೇಸಾಯದ ಉಪಕರಣಗಳನ್ನ ಕೊಳ್ಳುವುದಕ್ಕಾಗಿ ಪಡೆದ ಸಾಲಗಳಿಗಾಗಿ ಅಂಥ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಅಥವಾ ಒಂದು ಸಹಕಾರ ಸಂಘಕ್ಕೆ ಅಥವಾ ಭಾರತ ಕಾಫಿ ಮಂಡಲಿಗೆ ಅಥವಾ ಅನುಸೂಚಿತ ಬ್ಯಾಂಕಿಗೆ (ಅಥವಾ ಬೇಸಾಯ ಪುನರ್ವಿತ್ತ ನಿಗಮಕ್ಕೆ ಅಥವಾ ಕರ್ನಾಟಕ ರಾಜ್ಯ ಕೃಷಿ, ಕೈಗಾರಿಕಾ ನಿಗಮಕ್ಕೆ) ಅಡಮಾನ ಮಾಡುವುದು; ಮತ್ತು
(ಖ) ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961ರ ಉಪಬಂಧಗಳಿಗೆ ಅನುಸಾರವಾಗಿ ಭೂಮಿಯನ್ನು ಗೇಣಿಗೆ ಕೊಡುವುದು;
(3) ಈ ನಿಯಮಗಳ ಮೇರೆಗೆ ಕಟ್ಟಡ ನಿವೇಶನಗಳಿಗಾಗಿ ಹೊರತು ಇತರ ಬೇಸಾಯೇತರ ಉದ್ದೇಶಗಳಿಗಾಗಿ ಭೂಮಿಯನ್ನು ಮಂಜೂರು ಮಾಡುವುದು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರತಕ್ಕದ್ದು ಎಂದರೆ:-
(i) ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡ ದಿನಾಂಕದಿಂದ ಎರಡು ವರ್ಷಗಳ ಒಳಗಾಗಿ ಯಾವ ಉದ್ದೇಶಕ್ಕಾಗಿ ಅದನ್ನು ಮಂಜೂರು ಮಾಡಲಾಗಿದೆಯೋ ಆ ಉದ್ದೇಶಕ್ಕಾಗಿ ಅದನ್ನು ಉಪಯೋಗಿಸತಕ್ಕದ್ದು;
ಪರಂತು, ಭೂಮಿಯ ಮಂಜೂರಾತಿ ಪಡೆದವನು ನಂಬಲರ್ಹವಾದ ಕಾರಣಗಳಿಗಾಗಿ ಸದರಿ ಅವಧಿಯೊಳಗಾಗಿ ಅದನ್ನು ಉಪಯೋಗಿಸಿಕೊಳ್ಳಲು ಆಗಲಿಲ್ಲವೆಂದು ಭೂಮಿಯನ್ನು ಮಂಜೂರು ಮಾಡುವ ಅಧಿಕಾರಿಗಳಿಗೆ ಮನದಟ್ಟಾದರೆ, ಎರಡು ರ್ಷಗಳಿಗೆ ಮೀರದ, ಹೆಚ್ಚಿನ ಅವಧಿಯವರೆಗೆ ಲಿಖಿತಾದೇಶದ ಮೂಲಕ ಕಾಲವನ್ನು ವಿಸ್ತರಿಸಬಹುದು;
(ii) ಭೂಮಿಯನ್ನು ಮಂಜೂರು ಮಾಡುವ ಅಧಿಕಾರಿಯು ತಾನು ಯುಕ್ತವೆಂದು ಮತ್ತು ಸೂಕ್ತವೆಂದು ಪರ್ಯಾಲೋಚಿಸುವಂಥ ಷರತ್ತುಗಳಿಗೆ ಒಳಪಟ್ಟು ಕೊಡಬಹುದಾದ ಪೂರ್ವಾನುಮತಿಯಿಲ್ಲದೆ, ಭೂಮಿಯನ್ನು ಮಂಜೂರು ಮಾಡಲಾದ ಉದ್ದೇಶಕ್ಕಲ್ಲದೆ ಇತರ ಯಾವ ಉದ್ದೇಶಕ್ಕಾಗಿಯಾಗಿಯೂ ಅದನ್ನು ವಿನಿಯೋಗಿಸತಕ್ಕದ್ದಲ್ಲ;
(iii) ಮೇಲಿನ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದರೆ, ಮಂಜೂರಾತಿಯು ರದ್ದಿಯಾತಿಗೆ ಒಳಪಟ್ಟಿರತಕ್ಕದ್ದು ಮತ್ತು ಎಲ್ಲ ಪೂರ್ವಾಧಿ ಮುಕ್ತವಾಗಿಸಿ ಮತ್ತು ಯಾವುದೇ ನಷ್ಟ ಪರಿಹಾರವನ್ನು ಸಂದಾಯ ಮಾಡದೆ ಮಂಜೂರು ಮಾಡುವ ಅಧಿಕಾರಿಯು ಅದನ್ನು ಪುನಃ ವಹಿಸಿಕೊಳ್ಳತಕ್ಕದ್ದು.
- ಕೆಲವು ಸಂದರ್ಭಗಳಲ್ಲಿ ಭೂಮಿಯ ವಿಲೆಯ ಮೇಲೆ ನಿರ್ಬಂಧ.- (1) ಒಂದು ಹೆಕ್ಟೇರಿನಲ್ಲಿ ಐವತ್ತಕ್ಕಿಂತ ಹೆಚ್ಚು ಮೀಸಲು ಮರಗಳುಳ್ಳ ಯಾವುದೇ ಭೂಮಿಯನ್ನು ಡೆಪ್ಯುಟಿ ಕಮೀಷನರ ಆದೇಶವಿಲ್ಲದೆ ಸಾಗುವಳಿಗಾಗಿ ವಿಲೆ ಮಾಡತಕ್ಕದ್ದಲ್ಲ.
(2) (i) ಬೆಂಗಳೂರು ನಗರದ ಪೌರಸಭಾ ಪರಿಮಿತಿಗಳಲ್ಲಿ ಮತ್ತು ಬೆಂಗಳೂರು ನಗರದ ಪೌರಸಭಾ ಪರಿಮಿತಿಗಳಿಂದ ಹದಿನಾರು ಕಿಲೋಮೀಟರುಗಳ ತ್ರಿಜ್ಯದೊಳಗಿರುವ ಯಾವುದೇ ಗ್ರಾಮದಲ್ಲಿ; ಅಥವಾ
(ii) ಮೈಸೂರು, ದಾವಣಗೆರೆ, ಮಂಗಳೂರು, ಹುಬ್ಬಳ್ಳಿ-ಧಾರವಾಡ ನಗರಗಳ, ಕೋಲಾರ, ಚಿನ್ನದಗಣಿ ಪ್ರದೇಶದ ಮತ್ತು ಬಾಗಲಕೋಟೆ ಪಟ್ಟಣದ ಪೌರಸಭಾ ಪರಿಮಿತಿಗಳಲ್ಲಿರುವ ಮತ್ತು ಸದರಿ ಸ್ಥಳಗಳ ಪೌರಸಭಾ ಪರಿಮಿತಿಗಳಿಂದ ಏಳು ಕಿಲೋಮೀಟರುಗಳ ತ್ರಿಜ್ಯದೊಳಗಿರುವ ಯಾವುದೇ ಗ್ರಾಮದಲ್ಲಿ; ಅಥವಾ
(iii) ಜಿಲ್ಲಾ ಮುಖ್ಯ ಸ್ಥಳಗಳ ಪೌರಸಭಾ ಪರಿಮಿತಿಗಳೊಳಗಿರುವ ಮತ್ತು ಗದಗ-ಬೆಟಗೇರಿ ಹಾಗೂ ದಾಂಡೇಲಿ ಪಟ್ಟಣಗಳಲ್ಲಿರುವ ಮತ್ತು ಸದರಿ ಸ್ಥಳಗಳ ಪೌರಸಭಾ ಅಥವಾ ಪಟ್ಟಣ ಪರಿಮಿತಿಗಳಿಂದ ಐದು ಕಿಲೋಮೀಟರುಗಳ ತ್ರಿಜ್ಯದೊಳಗಿರುವ ಯಾವುದೇ ಗ್ರಾಮದಲ್ಲಿ; ಅಥವಾ
(iv) ತಾಲ್ಲೂಕು ಮುಖ್ಯಸ್ಥಲಗಳ ಪೌರಸಭಾ ಪರಿಮಿತಿಗಳೊಳಗಿರುವ ಮತ್ತು ರೈಲಿನ ಸಂಪರ್ಕವಿರುವ ಪಟ್ಟಣಗಳಲ್ಲಿರುವ ಮತ್ತು ಸದರಿ ಸ್ಥಳಗಳ ಪೌರಸಭಾ ಅಥವಾ ಪಟ್ಟಣ ಪರಿಮಿತಿಗಳಿಂದ ಮೂರು ಕಿಲೋಮೀಟರುಗಳ ತ್ರಿಜ್ಯದೊಳಗಿರುವ ಯಾವುದೇ ಗ್ರಾಮದಲ್ಲಿ; ಅಥವಾ
(v) ಇತರ ಪೌರಸಭೆಗಳ ಇತರ ತಾಲ್ಲೂಕು ಮುಖ್ಯ ಸ್ಥಳಗಳ ಮತ್ತು ಪಟ್ಟಣ ಪಂಚಾಯತಿಗಳ ಪರಿಮಿತಿಗಳೊಳಗಿರುವ ಮತ್ತು ಸದರಿ ಸ್ಥಳಗಳಿಂದ ಒಂದೂವರೆ ಕಿಲೋಮೀಟರುಗಳ ತ್ರಿಜ್ಯದೊಳಗಿರುವ ಯಾವುದೇ ಗ್ರಾಮದಲ್ಲಿ
ವಿವರಣೆ:- ಈ ಉಪನಿಯಮದ ಉದ್ದೇಶಕ್ಕಾಗಿ, ಗ್ರಾಮದ ಮುಖ್ಯ ಸ್ಥಳವು, ಗ್ರಾಮ ಠಾಣೆಯು ಅಥವಾ ಚಾವಡಿಯು ಈ ಉಪನಿಯಮದಲ್ಲಿ ನಿರ್ದಿಷ್ಟಪಡಿಸಿದ ತ್ರಿಜ್ಯದೊಳಗಿದ್ದರೆ, ಅಂಥ ಇಡೀ ಗ್ರಾಮವು ಈ ಉಪನಿಯಮದಲ್ಲಿ ನಿರ್ದಿಷ್ಟಪಡಿಸಿದ ತ್ರಿಜ್ಯದೊಳಗಿದೆಯೆಂದು ಭಾವಿಸತಕ್ಕದ್ದು:-
(vi) ಇತರ ತಾಲ್ಲೂಕು ಮುಖ್ಯ ಸ್ಥಳಗಳ, ಪಟ್ಟಣಗಳ ಮತ್ತು ಇತರ ಪೌರ ಸಭೆಯ ಮತ್ತು ಪಂಚಾಯತಿ ಪಟ್ಟಣದ ಪೌರಸಭಾ ಪರಿಮಿತಿಗಳಿಂದ ಒಂದು ಮೈಲಿಯೊಳಗಿರುವ
ಯಾವ ಭೂಮಿಯನ್ನು ಈ ನಿಯಮಗಳ ಮೇರೆಗೆ ಬೇಸಾಯದ ಉದ್ದೇಶಕ್ಕಾಗಿ ಮಂಜೂರು ಮಾಡತಕ್ಕದ್ದಲ್ಲ;
(3) 7(3) ಮತ್ತು 18ನೇ ನಿಯಮದಲ್ಲಿ ಏನೇ ಇದ್ದರೂ, (2)ನೇ ಉಪ ನಿಯಮದಲ್ಲಿ ನಿರ್ದಿಷ್ಟಪಡಿಸಿದ ತ್ರಿಜ್ಯದೊಳಗಿರುವ ಭೂಮಿಗಳನ್ನು ರಾಜ್ಯ ಸರ್ಕಾರದ ಪೂರ್ವಾನುಮೋದನೆಯಿಲ್ಲದೆ ಬೇಸಾಯೇತರ ಉದ್ದೇಶಗಳಿಗಾಗಿ ಮಂಜೂರು ಮಾಡತಕ್ಕದ್ದಲ್ಲ:
ಪರಂತು, ಜಿಲ್ಲಾ ಮುಖ್ಯ ಸ್ಥಳಗಳ ಪೌರಸಭಾ ಪರಿಮಿತಿಗಳನ್ನು ಹೊರತುಪಡಿಸಿ (2)ನೇ ಉಪನಿಯಮದ(iii), (iv) ಮತ್ತು (v)ನೇ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ತ್ರಿಜ್ಯದೊಳಗಿರುವ ಕಟ್ಟಡ ನಿವೇಶನಗಳ ಮಂಜೂರಾತಿಗೆ ಅಂಥ ಅನುಮೋದನೆಯು ಅವಶ್ಯಕವಾಗಿರತಕ್ಕದ್ದಲ್ಲ.
(3) ಅಂಥ ಮರಗಳ ಮೌಲ್ಯವು ಒಂದು ಸಾವಿರ ರೂಪಾಯಿಗಳಿಗಿಂತ ಹೆಚ್ಚಾಗಿದ್ದರೆ ಭೂಮಿಯು ಮಂಜೂರಾದ ದಿನಾಂಕದಿಂದ ಒಂದು ವರ್ಷದೊಳಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಆ ಮರಗಳನ್ನು ತೆಗೆದುಹಾಕತಕ್ಕದ್ದು’
ಪರಂತು ಅಂಥ ಭೂಮಿಯು ಇರುವ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ವಿಭಾಗ ಅರಣ್ಯಾಧಿಕಾರಿಯ ಶಿಫಾರಸ್ಸಿನ ಮೇಲೆ ಡಿವಿಜನಲ್ ಕಮೀಷನರು ಇನ್ನೂ ಒಂದು ವರ್ಷದ ಅವಧಿಯನ್ನು ಹೆಚ್ಚಿಸಬಹುದು, ಹಾಗೂ ಅಸಾಧಾರಣ ಸಂದರ್ಭಗಳಲ್ಲಿ, ಬೇಸಾಯದ ಕಾಲದ ಮುಕ್ತಾಯದೊಂದಿಗೆ ಹೊಂದಿಕೊಳ್ಳುವ ಹಾಗೆ ಮತ್ತೊಂದು ಹೆಚ್ಚಿನ ಅವಧಿಯವರೆಗೆ ವಿಸ್ತರಿಸಬಹುದು.
(4) ಮೇಲೆ ಹೇಳಿದ ಅವಧಿಯೊಳಗೆ ಹಾಗೆ ಅಂಥ ಮರುಗಳನ್ನು ತೆಗೆದು ಹಾಕದಿದ್ದರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಚಾಲ್ತಿಯಲ್ಲಿರುವ ಮಾರುಕಟ್ಟೆ ದರವನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸುವಂಥ ಮೌಲ್ಯವನ್ನ ಭೂಮಿಯ ಮಂಜೂರಾತಿ ಪಡೆದವನು ಸಂದಾಯ ಮಾಡಿದ ಮೇಲೆ, ಆ ಮರಗಳನ್ನು ಆತನಿಗೆ ಮಾರಬಹುದು.
(4) (ಕ) (4)ನೇ ಉಪನಿಯಮದ ಉಪಬಂಧಗಳಿಗೊಳಪಟ್ಟು ಮಂಜೂರು ಮಾಡಲಾದ ಭೂಮಿಯಲ್ಲಿರುವ ಮರಗಳನ್ನು ಈ ನಿಯಮಗಳ ಮೂಲಕ ಅಗತ್ಯಪಡಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ತೆಗೆದುಹಾಕಬೇಕಾಗಿರುವ ಸಂದರ್ಭಗಳಲ್ಲಿ, ಅಂಥ ಮರಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತೆಗೆದುಹಾಕುವವರೆಗೆ ಮಂಜೂರಾತಿಪಡೆದವನಿಗೆ ಭೂಮಿಯ ಸ್ವಾಧೀನವನ್ನು ಕೊಡತಕ್ಕದ್ದಲ್ಲ.
- ಮಂಜೂರು ಮಾಡಲಾದ ಭೂಮಿಗಳಲ್ಲಿರುವ ಮರಗಳ ವಿಲೆ.- (1) ಈ ನಿಯಮಗಳ ಮೇರೆಗೆ ಮಂಜೂರು ಮಾಡಲಾದ ಭೂಮಿಯಲ್ಲಿರುವ ಎಲ್ಲ ಮರಗಳ ಮೌಲ್ಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಧರಿಸತಕ್ಕದ್ದು.
(2) ಹಾಗೆ ನಿರ್ಧರಿಸಲಾದ ಮರಗಳ ಮೌಲ್ಯವು ಒಂದು ಸಾವಿರ ರೂಪಾಯಿಗಳಿಗಿಂತ ಹೆಚ್ಚಾಗಿಲ್ಲದಿದ್ದರೆ, ಭೂಮಿಯನ್ನು ಮಂಜೂರು ಮಾಡುವ ಅಧಿಕಾರಿಯು ಗೊತ್ತುಪಡಿಸಿರುವ ಕಾಲದೊಳಗೆ ಹಾಗೆ ನಿರ್ಧರಿಸಲಾದ ಬೆಲೆಯನ್ನು ಸಂದಾಯ ಮಾಡುವ ಅವಕಾಶವನ್ನು ಮಂಜೂರಾತಿ ಪಡೆದವನಿಗೆ ಕೊಡತಕ್ಕದ್ದು. ಮತ್ತು ಮರಗಳನ್ನು ಅವನಿಗೆ ಮಾರತಕ್ಕದ್ದು. ಅವನು ಮರಗಳ ಮೌಲ್ಯವನ್ನು ಸಂದಾಯ ಮಾಡಲು ಒಪ್ಪಿಕೊಂಡ ಮೇಲೆ ಹಾಗೆ ಸಂದಾಯ ಮಾಡಲು ತಪ್ಪಿದರೆ, ಅವನಿಗೆ ಮರಗಳನ್ನು ಮಾರುವುದನ್ನು ರದ್ದುಪಡಿಸತಕ್ಕದ್ದು. ಅರಣ್ಯ ಇಲಾಖೆಯು ನಿರ್ಧರಿಸಿದ ಮರಗಳ ಮೌಲ್ಯವನ್ನು ಸಂದಾಯ ಮಾಡಲು ಮಂಜೂರಾತಿ ಪಡೆದವನು ಒಪ್ಪದಿದ್ದರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಟೆಂಡರು ಹಾಗೂ ಹರಾಜಿನ ಮೂಲಕ ಆ ಮರಗಳನ್ನು ವಿಲೆ ಮಾಡತಕ್ಕದ್ದು:
ಪರಂತು, ಸಾಕಷ್ಟು ಕಾರಣಕ್ಕಾಗಿ ಮೇಲೆ ಹೇಳಿದ ಅವಧಿಯನ್ನು ರಾಜ್ಯ ಸರ್ಕಾರವು ವಿಸ್ತರಿಸಬಹುದು.
(i) ಅಂಥ ಮರಗಳ ಮೌಲ್ಯವು-
(ii) ಚಿಕ್ಕಮಂಗಳೂರು, ಹಾಸನ, ಕೊಡಗು, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎರಡು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲದಿದ್ದರೆ; ಮತ್ತು
(iii) ಇತರ ಜಿಲ್ಲೆಗಳಲ್ಲಿ ಒಂದು ಸಾವಿರ ರೂಪಾಯಿಗಳಿಗೆ ಕಡಿಮೆ ಇಲ್ಲದಿದ್ದರೆ, ಭೂಮಿಯ ಮಂಜೂರಾತಿಯ ದಿನಾಂಕದಿಂದ ಒಂದು ವರ್ಷದ ಒಳಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಆ ಮರಗಳನ್ನು ತೆಗೆದುಹಾಕತಕ್ಕದ್ದು;
ಪರಂತು, ಅಂಥ ಭೂಮಿಯು ಇರುವ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ವಿಭಾಗ ಅರಣ್ಯಾಧಿಕಾರಿಯ ಶಿಫಾರಸ್ಸಿನ ಮೇಲೆ ಅವಧಿಯನ್ನು ಡಿವಿಜನಲ್ ಕಮೀಷನರು ಮತ್ತೆ ಒಂದು ವರ್ಷ ಹೆಚ್ಚಿಸಬಹುದು, ಮತ್ತು ಅಸಾಧಾರಣ ಸಂದರ್ಭಗಳಲ್ಲಿ, ಬೇಸಾಯದ ಕಾಲದ ಮುಕ್ತಾಯಕ್ಕೆ ಹೊಂದಿಕೊಳ್ಳುವ ಹಾಗೆ ಮತ್ತೊಂದು ಹೆಚ್ಚಿನ ಅವಧಿಯವರೆಗೆ ವಿಸ್ತರಿಸಬಹುದು.
(4) ಮೇಲೆ ಹೇಳಿದ ಅವಧಿಯೊಳಗೆ, ಹಾಗೆ ಅಂಥ ಮರಗಳನ್ನು ತೆಗೆದುಹಾಕದಿದ್ದರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಚಾಲ್ತಿಯಲ್ಲಿರುವ ಮಾರುಕಟ್ಟೆಯ ದರವನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸುವಂಥ ಮೌಲ್ಯವನ್ನು ಆ ಭೂಮಿಯ ಮಂಜೂರಾತಿ ಪಡೆದವನು ಸಂದಾಯ ಮಾಡಿದ ಮೇಲೆ ಅವನಿಗೆ ಆ ಮರಗಳನ್ನು ಮಾರಬಹುದು.
(4-ಕ) ಮಂಜೂರು ಮಾಡಲಾದ ಭೂಮಿಯಲ್ಲಿರುವ ಮರಗಳನ್ನು (4)ನೇ ಉಪನಿಯಮದ ಉಪಬಂಧಗಳಿಗೊಳಪಟ್ಟು ಅರಣ್ಯ ಇಲಾಖೆಯ ಅಧಿಕಾರಿಗಳು ತೆಗೆದುಹಾಕಬೇಕೆಂದು ಈ ನಿಯಮಗಳ ಮೂಲಕ ಅಗತ್ಯಪಡಿಸಲಾಗಿರುವ ಸಂದರ್ಭಗಳಲ್ಲಿ, ಅಂಥ ವಿವರಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತೆಗೆದು ಹಾಕುವವರೆಗೆ ಭೂಮಿಯ ಮಂಜೂರಾತಿ ಪಡೆದವನಿಗೆ ಅದರ ಸ್ವಾಧೀನವನ್ನು ಕೊಡತಕ್ಕದ್ದಲ್ಲ.
(5) ‘ಮಾವು’ ‘ಹಲಸು’, ‘ನೇರಳೆ’, ‘ಹುಣಸೆ’, ‘ನೆಲ್ಲಿ’, ‘ಸೀತಾಫಲ’, ‘ಗೇರು’-ಇವುಗಳಂಥ ಯಾವುವೇ ಹಣ್ಣು ಬಿಡುವ ಮರಗಳನ್ನು ಮತ್ತು ಅಂಥ ಭೂಮಿಯಲ್ಲಿ ಇರುವ ‘ಹೊಂಗೆ’, ‘ಸೀಮೆ ತಂಗಡಿ’, ‘ಬಸವನಪಾದ’ ಮತ್ತು ‘ಗ್ಲೈರಿಸೀಡಿಯ’ ದಂಥ ಗೊಬ್ಬರಕ್ಕೆ ಉಪಯೋಗಿಸುವ ಯಾವುವೇ ಮರಗಳನ್ನು ತನಗೆ ಮಂಜೂರು ಮಾಡಬೇಕೆಂದು ಭೂಮಂಜೂರಾತಿ ಪಡೆದವನು ಅಪೇಕ್ಷಿಸಿದರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಅಂಥ ಮರ ಅಥವಾ ಮರಗಳ ಬಗ್ಗೆ ನಿರ್ಧರಿಸುವಂಥ ಮೌಲ್ಯವನ್ನು ಅವನು ಸಂದಾಯ ಮಾಡಿದರೆ, ಅಂಥ ಮರಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಿತ್ತು ಹಾಕತಕ್ಕದ್ದಲ್ಲ ಅಥವಾ ವಿಲೆ ಮಾಡತಕ್ಕದ್ದಲ್ಲ.
- ಈ ನಿಯಮಗಳ ಮೇರೆಗೆ ಮಂಜೂರಾದ ಭೂಮಿಯ ಬಗ್ಗೆ ಸಂದಾಯ ಮಾಡಬೇಕಾದ ಬೆಲೆ.- ಬೇಸಾಯೋದ್ದೇಶಕ್ಕಾಗಿ ಈ ನಿಯಮಗಳ ಮೇರೆಗೆ ಮಂಜೂರಾದ ಭೂಮಿಯ ಸಂಬಂಧದಲ್ಲಿ,-
(i) ಖುಷ್ಕಿ, ಭೂಮಿ ಮತ್ತು ಮಳೆಯ ನೀರಿನಿಂದಲೇ ಬೆಳೆ ಬರುವ ಭೂಮಿಯ ಬಗ್ಗೆ ಸಂದಾಯ ಮಾಡಬೇಕಾದ ಬೆಲೆಯು ಅಂಥ ಭೂಮಿಯ ಬಗ್ಗೆ ಸಂದಾಯ ಮಾಡಬೇಕಾದ ಭೂಕಂದಾಯದ ಐವತ್ತಷ್ಟಕ್ಕಿಂತ ಕಡಿಮೆ ಇರತಕ್ಕದ್ದು ಮತ್ತು ಇನ್ನೂರರಷ್ಟಕ್ಕಿಂತ ಹೆಚ್ಚಿರತಕ್ಕದ್ದಲ್ಲ:
(ii) ಕೆರೆಗಳು ಅಥವಾ ನಾಲೆಗಳಿಂದ ಖಾತ್ರಿ ನೀರಾವರಿ ಸೌಲಭ್ಯವುಳ್ಳ ಬಾಗಾಯ್ತು ಭೂಮಿಗಳ ಅಥವಾ ತರಿ ಭೂಮಿಗಳ ಬಗ್ಗೆ ಸಂದಾಯ ಮಾಡಬೇಕಾದ ಬೆಲೆಯು ಪ್ರತಿ ಹೆಕ್ಟೇರಿಗೆ ಐದು ನೂರು ರೂಪಾಯಿಗಳಿಗೆ ಕಡಿಮೆಯಿರತಕ್ಕದ್ದಲ್ಲ ಮತ್ತು ಎರಡು ಸಾವಿರದ ಐದು ನೂರು ರೂಪಾಯಿಗಳಿಗೆ ಹೆಚ್ಚಿರತಕ್ಕದ್ದಲ್ಲ.
(2) (1)ನೇ ಉಪನಿಯಮದಲ್ಲಿ ಏನೇ ಇದ್ದರೂ, ಭೂಮಿಯು ಬಹಳ ಬೆಲೆಯುಳ್ಳದ್ದಾಗಿದ್ದರೆ, ಡೆಪ್ಯುಟಿ ಕಮೀಷನರು ಅಥವಾ ಈ ಬಗ್ಗೆ ಅವನಿಂದ ಪ್ರಾಧಿಕೃತನಾದ ಇತರ ಅಧಿಕಾರಿಯು ಅಂಥ ಭೂಮಿಯನ್ನು ಬಹಿರಂಗ ಹರಾಜಿನ ಮೂಲಕ ಮಾರಬಹುದು.
(3) ಪ್ಲಾಂಟೇಷನ್ ಬೆಳೆಗಳ ಸಾಗುವಳಿಗಾಗಿ ಮಂಜೂರಾದ ಭೂಮಿಗಳ ಸಂಬಂಧದಲ್ಲಿ ಸಂದಾಯವಾಗಬೇಕಾದ ಬೆಲೆಯು, ಪ್ರತಿ ಹೆಕ್ಟೇರಿಗೆ ಒಂದು ಸಾವಿರದ ಇನೂರ ಐವತ್ತು ರೂಪಾಯಿಗಳಿಗೆ ಕಡಿಮೆ ಇರದಂತೆ ಅಂಥ ಭೂಮಿಯ ಬಗ್ಗೆಡೆಪ್ಯುಟಿ ಕಮೀಷನರು ನಿರ್ಧರಿಸುವ ಮಾರುಕಟ್ಟೆ ಮೌಲ್ಯವಾಗಿರತಕ್ಕದ್ದು.
ಪರಂತು, ಮಾರುಕಟ್ಟೆ ಮೌಲ್ಯವು (1) ಮತ್ತು (3)ನೇ ಉಪನಿಯಮದಲ್ಲಿ ನಿಯಮಿಸಲಾದ ಕನಿಷ್ಟ ಮಿತಿಗಿಂತ ಕಡಿಮೆಯಾಗಿದ್ದರೆ, ಮಾರುಕಟ್ಟೆ ಮೌಲ್ಯವನ್ನು ವಸೂಲು ಮಾಡಿಕೊಂಡು ಭೂಮಿಯನ್ನು ಮಂಜೂರು ಮಾಡಲು ಮಂಜೂರಾತಿ ಅಧಿಕಾರಿಗೆ ಅಧಿಕಾರವಿರತಕ್ಕದು:
ಮತ್ತು ಪರಂತು, ಪ್ಲಾಂಟೇಷನ್ ಬೆಳೆಗಳ ಸಾಗುವಳಿಗಾಗಿ ತನ್ನ ಸದಸ್ಯರಿಗೆ ಸಾಲವನ್ನು ಮಂಜೂರು ಮಾಡುವ ಸಹಕಾರಿ ಸಂಘದ ಸದಸ್ಯರಾಗಿರುವ ಅನುಸೂಚಿತ ಜಾತಿಗಳಿಗೆ ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಕಾಫಿ ಬೆಳೆ ಮಾಡುವುದಾಗಿ ಮಂಜೂರು ಮಾಡಲಾದ ಭೂಮಿಯ ಸಂಬಂಧದಲ್ಲಿ, ಅಂಥ ಭೂಮಿಯ ಬಗ್ಗೆ ಸಂದಾಯ ಮಾಡಬೇಕಾದ ಬೆಲೆಯನ್ನು ಅವರಿಗೆ ಭೂಮಿಯನ್ನು ಖಾಯಂಗೊಳಿಸುವ ಕಾಲದಲ್ಲಿ ವಸೂಲು ಮಾಡತಕ್ಕದ್ದು:
ಮತ್ತು ಪರಂತು, ಹತ್ತು ಎಕರೆಗಳ ವಿಸ್ತೀರ್ಣಕ್ಕೆ ಮೀರದ ಕಾಫಿ ಭೂಮಿಗಳ ಒಡೆತನವನ್ನು ಹೊಂದಿರುವ ವ್ಯಕ್ತಿಯು ಅಥವಾ ಯಾವುದೇ ಭೂಮಿಯ ಒಡೆತನವನ್ನು ಹೊಂದಿರದ ವ್ಯಕ್ತಿಯು ಕಾಫಿಯನ್ನು ಬೆಳೆಯುವುದಕ್ಕಾಗಿ ಭೂಮಿಯನ್ನು ಮಂಜೂರು ಮಾಡಬೇಕೆಂದು ಅರ್ಜಿ ಹಾಕಿಕೊಂಡಾಗ ಅವನಿಗೆ ಐದು ಎಕರೆಗಳವರೆಗೆ ಅಥವಾ ಹತ್ತು ಎಕರೆಯಾಗುವುದಕ್ಕೆ ಬೇಕಾಗುವಷ್ಟು ವಿಸ್ತೀರ್ಣವನ್ನು, ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು, ಈ ಉಪನಿಯಮದ ಮೇರೆಗೆ ಸಂದಾಯ ಮಾಡಬೇಕಾದ ಅರ್ಧ ದರದಲ್ಲಿ ಮಂಜೂರು ಮಾಡಬಹುದು.
3(ಕ) ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯುವುದಕ್ಕಾಗಿ ಮಂಜೂರಾದ ಭೂಮಿಗಳ ಸಂಬಂಧದಲ್ಲಿ, ಹಾಗೆ ಮಂಜೂರಾದ ಭೂಮಿಗಳ ಬೆಲೆಯನ್ನು ಒಂದೇ ಮೊತ್ತದಲ್ಲಿ ಸಂದಾಯ ಮಾಡಲು ಮಂಜೂರಾತಿ ಪಡೆದವನು ಅಸಮರ್ಥನೆಂದು ಡೆಪ್ಯುಟಿ ಕಮೀಷನರಿಗೆ ಮನದಟ್ಟಾದರೆ, ಅವನು, ಲಿಖಿತದಲ್ಲಿ ಅಭಿಲೇಖಿಸಬೇಕಾದ ಕಾರಣಗಳಿಗಾಗಿ, ಅಂಥ ಭೂಮಿಯ ಮೌಲ್ಯವನ್ನು ಸಮಾನವಾದ ಮೂರು ವಾರ್ಷಿಕ ಕಂತುಗಳಲ್ಲಿ ಆ ಮಂಜೂರಾತಿ ಪಡೆದವನು ಸಂದಾಯ ಮಾಡಲು ಅನುಮತಿ ಕೊಡಬಹುದು. ಮೊದಲನೆಯ ಕಂತನ್ನು ಮಂಜೂರಾತಿ ಪಡೆದವನಿಗೆ ಭೂಮಿಯನ್ನು ಸ್ವಾಧೀನಕ್ಕೆ ಕೊಡುವ ಮೊದಲು ವಸೂಲು ಮಾಡತಕ್ಕದ್ದು.
- ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿರುವ ವ್ಯಕ್ತಿಗಳಿಗೆ ಮತ್ತು ಬಡತನದ ಕಾರಣದಿಂದಾಗಿ ಆ ಬೆಲೆಯನ್ನು ಸಂದಾಯ ಮಾಡಲು ಅಸಮರ್ಥರಾಗಿರುವ ವ್ಯಕ್ತಿಗಳಿಗೆ ಮಂಜೂರಾದ ಭೂಮಿಗಳ ಸಂಬಂಧದಲ್ಲಿ, (1)ನೇ ಉಪನಿಯಮದ ಮೇರೆಗೆ ಸಂದಾಯ ಮಾಡಬೇಕಾದ ನಿಗದಿತ ಬೆಲೆಯಲ್ಲಿ ಐನೂರು ರೂಪಾಯಿಗಳ ಗರಿಷ್ಟ ಮಿತಿಗೆ ಒಳಪಟ್ಟು, ಶೇಕಡಾ ಎಪ್ಪತ್ತೈದರವರೆಗೆ ಭೂಮಿಯನ್ನು ಮಂಜೂರು
ಮಾಡುವ ಅಧಿಕಾರಿಯು ಬಿಟ್ಟುಬಿಡಬಹುದು, ಮತ್ತು ಉಳಿದುದನ್ನು ಮೂರು ವಾರ್ಷಿಕ ಕಂತುಗಳಲ್ಲಿ ವಸೂಲು ಮಾಡಬೇಕೆಂದು ನಿರ್ದೇಶಿಸತಕ್ಕದ್ದು. ಆದರೆ ಆ ಮೊಬಲಗು ಐನೂರು ರೂಪಾಯಿಗಳಿಗೆ ಮೀರದಿದ್ದರೆ, ಸಂದಾಯ ಮಾಡಬೇಕಾದ ಆ ಇಡೀ ಬೆಲೆಯನ್ನು ಡೆಪ್ಯುಟಿ ಕಮೀಷನರು ಬಿಟ್ಟು ಬಿಡಬಹುದು.
(5) ಈ ನಿಯಮದ (1)ನೇ ಉಪನಿಯಮದಲ್ಲಿ ಏನೇ ಇದ್ದರೂ, 3.2 ಹೆಕ್ಟೇರುಗಳ ವರೆಗೆ ಖುಷ್ಕಿ ಭೂಮಿಯನ್ನು ಅಥವಾ 1.6 ಹೆಕ್ಟೇರುಗಳ ಬಾಗಾಯ್ತು ಭೂಮಿಯನ್ನು ಅಥವಾ ಕೆರೆಗಳಿಂದ ಅಥವಾ ನಾಲೆಗಳಿಂದ ಖಾತ್ರಿ ನೀರಾವರಿ ಸೌಲಭ್ಯಗಳಿಂದ ಕೂಡಿದ ತರಿ ಭೂಮಿಯನ್ನು ಮೊದಲು ಸೇನಾ ಸೇವೆಯಲ್ಲಿದ್ದವರಿಗೆ ಮತ್ತು ಸೈನಿಕರಿಗೆ ಮಂಜೂರಾದ ಭೂಮಿಗಳ ಸಂಬಂಧದಲ್ಲಿ ಯಾವ ಬೆಲೆಯೂ ಸಂದಾಯವಾಗತಕ್ಕದ್ದಲ್ಲ.
-
ಈಗಾಗಲೇ ಕಂದಾಯ ನಿರ್ಧರಣೆಯಾಗಿರದ ಭೂಮಿಯನ್ನು ವಿಲೆ ಮಾಡುವುದಕ್ಕೆ ಮೊದಲು ಅದರ ಕಂದಾಯವನ್ನು ನಿರ್ಧರಿಸತಕ್ಕದ್ದು.- ಈ ನಿಯಮಗಳ ಮೇರೆಗೆ ವಿಲೆ ಮಾಡಬೇಕಾದ ಯಾವುದೇ ಭೂಮಿಯ ಕಂದಾಯವನ್ನು ನಿರ್ಧರಣೆ ಮಾಡಿರದಿದ್ದರೆ, ಭೂಮಿಯ ಕಂದಾಯ ನಿರ್ಧರಣೆಗೆ ಅನ್ವಯಿಸುವ ಉಪಬಂಧಗಳಿಗನುಸಾರವಾಗಿ ಅದನ್ನು ನಿರ್ಧರಿಸತಕ್ಕದ್ದು. ಭೂಮಿಯ ಮಂಜೂರಾತಿ ಪಡೆದವನಿಗೆ ಅದರ ಸ್ವಾಧೀನವನ್ನು ಕೊಡುವುದಕ್ಕೆ ಮೊದಲು ಅದನ್ನು ಮೋಜಣಿ ಮತ್ತು ಅದರ ಗಡಿಯನ್ನು ನಿರ್ಣಯಿಸಿ ಮೇರೆ ಗುರುತುಗಳನ್ನು ಹಾಕತಕ್ಕದ್ದು. ಅಂಥ ಮೋಜಣಿ ಮತ್ತು ಗಡಿ ನಿರ್ಣಯದ ಬಗ್ಗೆ ತಗಲಿದ ವೆಚ್ಚಗಳನ್ನು ಮಂಜೂರಾತಿ ಪಡೆದವನಿಂದ ವಸೂಲು ಮಾಡತಕ್ಕದ್ದು.
-
ಚೌಳು ಭೂಮಿಯನ್ನು ಬೇಸಾಯ ಯೋಗ್ಯವನ್ನಾಗಿ ಮಾಡುವುದಕ್ಕಾಗಿ ಮಂಜೂರು ಮಾಡುವುದು.- ಉಪ್ಪು ಭೂಮಿ ಅಥವಾ ಉಪ್ಪು ತಯಾರಿಕೆಗೆ ಬೇಕಾಗಿರದ ಅಥವಾ ಬೇಕಾಗುವ ಸಂಭವವಿರದ ಹಾಗೂ ಒಮ್ಮೊಮ್ಮೆ ಉಪ್ಪು ನೀರಿನಿಂದ ತುಂಬಿ ಹಗಿಯುವ ಭೂಮಿಯನ್ನು ಬೇಸಾಯ ಯೋಗ್ಯವನ್ನಾಗಿ ಮಾಡುವ ಉದ್ದೇಶಗಳಿಗಾಗಿ ಈ ಕೆಳಕಂಡ ನಿಬಂಧನೆಗಳ ಮೇಲೆ ಅದನ್ನು ಡೆಪ್ಯುಟಿ ಕಮೀಷನರು ಕೊಡತಕ್ಕದ್ದು:-
(ಕ) ಮೊದಲನೇ ಹತ್ತು ವರ್ಷಗಳಿಗೆ ಗೇಣಿ ಮೊಬಲಗಿಲ್ಲದೆ;
(ಖ) ಹಾಗೆ ಗೇಣಿಗೆ ಕೊಟ್ಟ ಒಟ್ಟು ಪ್ರದೇಶದ ಮೇಲೆ ಅದನ್ನು ಬೇಸಾಯ ಯೋಗ್ಯವಾಗಿ ಮಾಡಿರಲಿ ಅಥವಾ ಇಲ್ಲದಿರಲಿ, ಮುಂದಿನ ಇಪ್ಪತ್ತು ವರ್ಷಗಳಿಗೆ ಪ್ರತಿ ಹೆಕ್ಟೇರಿಗೆ ಎರಡು ರೂಪಾಯಿಗಳ ದರದಲ್ಲಿ ಗೇಣಿಯನ್ನು ಸಂದಾಯ ಮಾಡುವುದು;
(ಗ) ಮೂವತ್ತು ವರ್ಷಗಳು ಕಳೆದ ತರುವಾಯ, ಬೇಸಾಯ ಯೋಗ್ಯವಾಗಿ ಮಾಡಿದ ಭೂಮಿಗಳ ಸಂದರ್ಭದಲ್ಲಿ ಮೋಜಣಿಯನ್ನು ಮತ್ತು ಕಂದಾಯ ವ್ಯವಸ್ಥೆಗೆ ಅವು ಒಳಪಟ್ಟಿದ್ದರೆ ಕಾಲಕಾಲಕ್ಕೆ ಭೂಕಂದಾಯವನ್ನು ನಿರ್ಧರಿಸಬಹುದಾದ ದರದಲ್ಲಿ ಮತ್ತು ಬೇಸಾಯ ಯೋಗ್ಯವಾಗಿ ಮಾಡಿರದ ಭೂಮಿಗಳು, ಯಾವುದಾದರೂ ಇದ್ದರೆ, ಅವುಗಳ ಸಂದರ್ಭದಲ್ಲಿ ಬೇಸಾಯ ಯೋಗ್ಯವಾಗಿ ಮಾಡಿದ ಭೂಮಿಗಳ ಸರಾಸರಿ ದರದಲ್ಲಿ ಗೇಣಿಯನ್ನು ಮುಂದುವರಿಸಬಹುದು.
(ಘ) ಸಾರ್ವಜನಿಕ ರಸ್ತೆಗಳಿಗಾಗಿ ಉಪಯೋಗಿಸಲಾದ ಆ ಭೂಮಿಯ ಯಾವುದೇ ಭಾಗದ ಬಗ್ಗೆ ಯಾವ ಗೇಣಿಯನ್ನು ವಿಧಿಸತಕ್ಕದ್ದಲ್ಲ:
(ಙ) ಗೇಣಿಗೆ ಕೊಟ್ಟ ದಿನಾಂಕದಿಂದ ಎರಡು ವರ್ಷಗಳ ಒಳಗೆ ತಕ್ಕ ಶ್ರದ್ಧೆಯಿಂದ ಆ ಭೂಮಿಯನ್ನು ಬೇಸಾಯ ಯೋಗ್ಯವನ್ನಾಗಿ ಮಾಡದಿದ್ದರೆ ಅಥವಾ ಹತ್ತು ವರ್ಷಗಳ ಕೊನೆಯಲ್ಲಿ ಬೇಸಾಯ ಉದ್ದೇಶಕ್ಕಾಗಿ
ಉಪಯೋಗಿಸುವುದಕ್ಕೆ ಯೋಗ್ಯವಾದ ಸ್ಥಿತಿಯಲ್ಲಿರುವಂತೆ ಅರ್ಧ ಪ್ರದೇಶವನ್ನು ಮಾರ್ಪಡಿಸದಿದ್ದರೆ, ಅಥವಾ ಮೇಲೆ ಹೇಳಿದ ರೀತಿಯಲ್ಲಿ ಒಮ್ಮೆ ಬೇಸಾಯ ಯೋಗ್ಯವನ್ನಾಗಿ ಮಾಡಿದ ಯಾವುದೇ ಭೂಮಿನ್ನು ಬೇಸಾಯದ ಉದ್ದೇಶಕ್ಕೆ ಉಪಯೋಗಿಸಲು ಯೋಗ್ಯವಾದ ಸ್ಥಿತಿಯಲ್ಲಿ ಇಟ್ಟಿರದಿದ್ದರೆ, ಡೆಪ್ಯುಟಿ ಕಮೀಷನರು ತನ್ನ ವಿವೇಚನಾನುಸಾರ, ಗೇಣಿಯನ್ನು ರದ್ದುಪಡಿಸಬಹುದು:
ಪರಂತು, ಮೊದಲು ಹತ್ತು ವರ್ಷಗಳಲ್ಲಿ ತಾನು ಬೇಸಾಯ ಯೋಗ್ಯವನ್ನಾಗಿ ಮಾಡಲಾಗದ ಯಾವುದೇ ಪ್ರದೇಶವನ್ನು ಬಿಟ್ಟು ಕೊಡುವ ಅಧಿಕಾರವು ಗೇಣಿದಾರನಿಗೆ ಇರತಕ್ಕದ್ದು:
(ಚ) ಬೇಸಾಯ ಯೋಗ್ಯವಾಗಿ ಮಾಡಿದ ಭೂಮಿಯನ್ನು ಯಾವುದೇ ಬೇಸಾಯೇತರ ಉದ್ದೇಶಕ್ಕಾಗಿ ಉಪಯೋಗಿಸಿದರೆ, ಮೇಲೆ ನಿರ್ದಿಷ್ಟಪಡಿಸಿದ ಅವಧಿಗಳು ಮುಕ್ತಾಯವಾಗಿರದಿದ್ದರೂ, ಈ ನಿಯಮಗಳಿಗೆ ಅನುಸಾರವಾಗಿ ಗೇಣಿಯು ಪರಿಷ್ಕರಣಕ್ಕೆ ಒಳಪಟ್ಟಿರತಕ್ಕದ್ದು.
- ಕರಾವಳಿಯ ಹತ್ತಿರದ ಭೂಮಿಗಳ ಮಂಜೂರಾತಿ.- (1) ರಾಜ್ಯ ಸರ್ಕಾರದ ಸ್ವತ್ತಾಗಿರುವ ಸಮುದ್ರದ ಏರುಮಟ್ಟದಿಂದ ಇನ್ನೂರು ಮೀಟರುಗಳ ಒಳಗೆ ಇರುವ ಕರಾವಳಿಯ ಹತ್ತಿರದ ಯಾವ ಭೂಮಿಯನ್ನು ಈ ಮುಂದೆ ನಿರ್ದಿಷ್ಟಪಡಿಸಿದ ಹೊರತು ಮಂಜೂರು ಮಾಡತಕ್ಕದ್ದಲ್ಲ.
(2) ಡೆಪ್ಯುಟಿ ಕಮೀಷನರು ಲೈಸೆನ್ಸು ಕೊಡಲ್ಪಟ್ಟಿರುವ ವರ್ಷದಿಂದ ಆ ಪ್ರದೇಶದ ಬಗ್ಗೆ ಪೂರ್ತ ಕರನಿರ್ಧಾರಣೆಯನ್ನು ವಿಧಿಸುವುದಕ್ಕೆ ಒಳಪಟ್ಟು ಅತ್ಯಂತ ಹತ್ತಿರದ ಗ್ರಾಮಗಳಿಂದ ಅರ್ಧ ಕಿಲೋಮೀಟರಿಗೆ ಕಡಿಮೆಯಲ್ಲದ ದೂರದಲ್ಲಿರುವ ಸ್ಥಳಗಳ ಏರುಮಟ್ಟಕ್ಕಿಂತ (ಒಂದು ನೂರು ಮೀಟರುಗಳ ಎತ್ತರದಲ್ಲಿರುವ) ಭೂಮಿಗಳಲ್ಲಿ ಸರ್ವೆ ಮರಗಳು, ತಾಳೆ ಮರಗಳು ಮತ್ತು ತೆಂಗಿನ ತೋಪುಗಳನ್ನು ಬೆಳೆಸಲು, ಲೈಸೆನ್ಸು ಕೊಡಲಾದ ವರ್ಷದಿಂದ ಪ್ರದೇಶದ ಮೇಲೆ ಪೂರ್ಣ ಕಂದಾಯವನ್ನು ವಿಧಿಸುವುದಕ್ಕೆ ಒಳಪಟ್ಟು, ಡೆಪ್ಯುಟಿ ಕಮೀಷನರು ಅನುಮತಿಸಬಹುದು. ಡಿವಿಜನಲ್ ಕಮೀಷನರ ಪೂರ್ವಾನುಮತಿ ಪಡೆದು ಅಂಥ ಭೂಮಿಗಳನ್ನು ಹಂಚಿಕೆ ಕೊಡತಕ್ಕದ್ದು.
(3) ಡೆಪ್ಯುಟಿ ಕಮೀಷನರು ಮೀನುಗಾರಿಕೆ ಇಲಾಖೆಯ ನಿರ್ದೇಶಕರು ಮತ್ತು ಬಂದರು ಅಧಿಕಾರಿಗಳೊಡನೆ ಸಮಾಲೋಚಿಸಿ, ಮೀನೆಣ್ಣೆ ಮತ್ತು ಮೀನುಗೊಬ್ಬರ ಕಾರ್ಖಾನೆಗಳ ನಿರ್ಮಾಣಕ್ಕೆ ಅಥವಾ ತಾತ್ಕಾಲಿಕ ವಾಸದ ಮನೆಯನ್ನು ಕಟ್ಟುವುದಕ್ಕಾಗಿ ವಾರ್ಷಿಕವಾಗಿ ನವೀಕರಿಸಬಹುದಾದ ಗುತ್ತಿಗೆಯ ಮೇಲೆ ಬೆಸ್ತರಿಗೆ ಕರಾವಳಿಯ ಭೂಮಿಗಳನ್ನು ಹಂಚಬಹುದು. ಆ ನಿವೇಶನದಲ್ಲಿ ಒಂದು ಕಾರ್ಖಾನೆಯನ್ನು ಸ್ಥಾಪಿಸುವುದಕ್ಕೆ ಅರ್ಜಿದಾರನು ಮೊದಲೇ ಲೈಸೆನ್ಸನ್ನು ಪಡೆದಿದ್ದ ಹೊರತು ಮಂಜೂರು ಮಾಡತಕ್ಕದ್ದಲ್ಲ.
- ಪ್ಲಾಂಟೇಷನ್ ಬೆಳೆಗಳನ್ನು ಬೆಳೆಸಲು ಭೂಮಿಯನ್ನು ಮಂಜೂರು ಮಾಡುವುದು.- (1) ಪ್ಲಾಂಟೇಷನ್ ಬೆಳೆಗಳನ್ನು ಬೆಳೆಸುವುದಕ್ಕಾಗಿ ಯಾವನೇ ವ್ಯಕ್ತಿಗೆ, ಅಂಥ ವ್ಯಕ್ತಿಯು ಹೊಂದಿರುವ ಪ್ಲಾಂಟೇಷನ್ ಬೆಳೆಯನ್ನು ಬೆಳೆಯುವಂಥ ಒಟ್ಟು ಭೂಮಿಯ ಮತ್ತು ಮಂಜೂರು ಮಾಡಬೇಕಾದ ಭೂಮಿಯ ವಿಸ್ತೀರ್ಣ ಎರಡೂ ಸೇರಿ ಮತ್ತು ಹೆಕ್ಟೇರಿಗೆ ಮೀರತಕ್ಕದ್ದಲ್ಲವೆಂದು ಷರತ್ತಿಗೊಳಪಟ್ಟು, ಭೂಮಿಯನ್ನು ಮಂಜೂರು ಮಾಡಬಹುದು:-
ಪರಂತು, (i) ಏಲಕ್ಕಿ, ಕಾಫಿ, ಟೀ ಮತ್ತು ರಬ್ಬರ್ ಬೆಳೆಯಲು ಮಂಜೂರು ಮಾಡಲಾದ ಭೂಮಿಯ ವಿಸ್ತೀರ್ಣವು ಮೊದಲನೆಯದಾಗಿ ಹತ್ತು ಹೆಕ್ಟೇರುಗಳಿಗೆ ಮೀರತಕ್ಕದ್ದಲ್ಲ;
(ii) ಮೆಣಸು ಬೆಳೆಯಲು ಮಂಜೂರು ಮಾಡಲಾದ ಭೂಮಿಯ ವಿಸ್ತೀರ್ಣವು ಮೊದಲನೆಯದಾಗಿ ಐದು ಹೆಕ್ಟೇರುಗಳಿಗೆ ಮೀರತಕ್ಕದ್ದಲ್ಲ;
ಮತ್ತು ಪರಂತು, ಈ ನಿಯಮದ ಮೇರೆಗೆ ಭೂಮಿಗಳನ್ನು ಮಂಜೂರು ಮಾಡುವುದು 7 ಮತ್ತು 9ನೇ ನಿಯಮಗಳ ಉಪಬಂಧಗಳಿಗೊಳಪಟ್ಟಿರತಕ್ಕದ್ದು.
(2) ಕಾಫಿ ಬೆಳೆಯನ್ನು ಬೆಳೆಸಲು ಮೊದಲನೆಯದಾಗಿ ಗುತ್ತಿಗೆಯ ಆಧಾರದ ಮೇಲೆ ಭೂಮಿಯನ್ನು ಮಂಜೂರು ಮಾಡತಕ್ಕದ್ದು. ಅಂಥ ಗುತ್ತಿಗೆಯ ದಿನಾಂಕದಿಂದ ಮೂರು ವರ್ಷಗಳ ಅವಧಿಯ ಒಳಗೆ ಹಾಗೆ ಗುತ್ತಿಗೆಗೆ ಕೊಡಲಾದ ಪ್ರದೇಶದಲ್ಲಿ ಕಾಫಿ ಬೆಳೆಯುವುದಕ್ಕೆ ಕಾಫಿ ಅಧಿನಿಯಮದ (ಕೇಂದ್ರ ಅಧಿನಿಯಮ 1942ರ 7) ಮೇರೆಗೆ ಡೆಪ್ಯುಟಿ ಕಮೀಷನರಿಂದ ಒಂದು ಪ್ರಮಾಣ ಪತ್ರವನ್ನು ಭೂಮಂಜೂರಾತಿ ಪಡೆದವನು ಪಡೆದ ತರುವಾಯ ಈ ಮಂಜೂರಾತಿಯನ್ನು ಸ್ಥಿರೀಕರಿಸತಕ್ಕದ್ದು:
ಪರಂತು, ಗುತ್ತಿಗೆದಾರನು ಮೂರು ವರ್ಷಗಳ ಒಳಗೆ ಆ ಇಡೀ ಕ್ಷೇತ್ರದಲ್ಲಿ ಕಾಫಿ ಬೆಳೆಯನ್ನು ಬೆಳೆಯದಿದ್ದರೆ, ಡೆಪ್ಯುಟಿ ಕಮೀಷನರು, ಯೋಗ್ಯ ಸಂದರ್ಭಗಳಲ್ಲಿ ಕಾಲಾವಕಾಶ ಕೊಡಬಹುದು ಮತ್ತು ಐದು ವರ್ಷಗಳವರೆಗೆ ಗುತ್ತಿಗೆ ಅವಧಿಯನ್ನು ಮುಂದುವರಿಸಬಹುದು.
(3) ಕಾಫಿ ಬೆಳೆಯನ್ನು ಬೆಳೆಯಲು ಅಗತ್ಯವಿರುವ ಭೂಮಿಗಳ ಸಂಬಂಧದಲ್ಲಿ, ಕಾಫಿಯನ್ನು ಬೆಳೆಯಲು ಆ ಭೂಮಿಗಳು ಉಪಯುಕ್ತವಾಗಿವೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಭಾರತ ಕಾಫಿ ಮಂಡಲಿಯೊಡನೆ ಸಮಾಲೋಚನೆ ನಡೆಸತಕ್ಕದ್ದು. ಕಾಫಿ ಮಂಡಳಿಯು ಮೊದಲ ನೋಟಕ್ಕೆ ಭೂಮಿಯು ಕಾಫಿಯನ್ನು ಬೆಳೆಯಲು ಉಪಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟರೆ, ಸಕ್ಷಮ ಅಧಿಕಾರಿಯು ಅರ್ಜಿಯನ್ನು ಅದರ ಗುಣಾಮಗುಣಗಳ ಮೇಲೆ ವಿಲೆ ಮಾಡಬಹುದು. ಕಾಫಿ ಮಂಡಳಿಯು ಹಾಗೆ ಅಭಿಪ್ರಾಯ ಪಡದಿದ್ದರೆ, ಅರ್ಜಿಯನ್ನು ತಿರಸ್ಕರಿಸತಕ್ಕದ್ದು.
- ಗೇರು ಬೀಜ ಬೇಸಾಯಕ್ಕೆ ಭೂಮಿಯ ಮಂಜೂರಾತಿ.- ಅರ್ಜಿದಾರನು ಗೇರು ಬೀಜ ಬೆಳೆಯುವ ಒಟ್ಟು ಭೂಮಿಯು ಹತ್ತು ಹೆಕ್ಟೇರುಗಳನ್ನು ಮೀರತಕ್ಕದ್ದಲ್ಲವೆಂಬ ಷರತ್ತಿಗೆ ಒಳಪಟ್ಟು, ಗೇರು ಬೀಜವನ್ನು ಬೆಳೆಯಲು ಸಕ್ಷಮ ಪ್ರಾಧಿಕಾರಿಯು 7ನೇ ನಿಯಮದ ಮೇರೆಗೆ ಮಾರುಕಟ್ಟೆ ಮೌಲ್ಯವನ್ನು ವಸೂಲು ಮಾಡಿ ತರುವಾಯ ಐದು ಹೆಕ್ಟೇರುಗಳಿಗೆ ಮೀರದಷ್ಟು ವಿಸ್ತೀರ್ಣದ ಭೂಮಿಯನ್ನು ಅವನಿಗೆ ಮಂಜೂರು ಮಾಡಬಹುದು.
ಪರಂತು, ಹಾಗೆ ಮಂಜೂರು ಮಾಡಿದ ಭೂಮಿಯ ವಿಸ್ತೀರ್ಣವು ಮಂಜೂರಾತಿ ಪಡೆದವನು ಈಗಾಗಲೇ ಹೊಂದಿರುವ ಭೂಮಿಯ ವಿಸ್ತೀರ್ಣವೂ ಸೇರಿ ಕರ್ನಾಟಕ ಭೂಸುಧಾರಣೆಗಳ ಅಧಿನಿಯಮ 1961ರಲ್ಲಿ ನಿರ್ದಿಷ್ಟಪಡಿಸಿದ ಪರಮಾವಧಿ ವಿಸ್ತೀರ್ಣವನ್ನು ಮೀರತಕ್ಕದ್ದಲ್ಲ.
17ಕ. ಬೇಸಾಯೇತರ ಉದ್ದೇಶಗಳಿಗಾಗಿ ಭೂಮಿಯನ್ನು ಮಂಜೂರು ಮಾಡುವ ಕ್ರಮ.- (1) ಯಾವುದೇ ಬೇಸಾಯೇತರ ಉದ್ದೇಶಗಳಿಗಾಗಿ ಭೂಮಿಯನ್ನು ಮಂಜೂರು ಮಾಡಬೇಕೆಂದು ಆಪೇಕ್ಷಿಸುವ ಯಾವನೇ ವ್ಯಕ್ತಿಯು ಈ ಕೆಳಕಂಡ ವಿವರಗಳನ್ನು ಒದಗಿಸಿ, ಆ ಭೂಮಿಯು ಇರುವ ತಾಲ್ಲೂಕಿನ ತಹಶೀಲ್ದಾರನಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು:-
(i) ಹೆಸರು, ವಯಸ್ಸು (ಅರ್ಜಿದಾರನು ವ್ಯಕ್ತಿಯಾಗಿದ್ದರೆ) ಮತ್ತು ವಿಳಾಸ:
(ii) ಅರ್ಜಿ ಹಾಕಿಕೊಂಡ ಭೂಮಿಯ ವಿಸ್ತೀರ್ಣ ಮತ್ತು ವಿವರಗಳು ಅಂದರೆ, ಭೂಮಿಯ ಸರ್ವೆ ನಂಬರು ಅದು ಇರುವ ಗ್ರಾಮ, ತಾಲ್ಲೂಕು ಮತ್ತು ಉಪ ವಿಭಾಗ;
(iii) ಅರ್ಜಿದಾರನು ಒಬ್ಬ ವ್ಯಕ್ತಿಯಾಗಿದ್ದರೆ, ಅವನಾಗಲಿ ಅಥವಾ ಅವನ ಕುಟುಂಬ ಇತರ ಯಾವನಾಗಲಿ, ಸದರಿ ಭೂಮಿಗಾಗಿ ಈ ಮೊದಲೇ ಅರ್ಜಿ ಸಲ್ಲಿಸಿದ್ದನೇ, ಹಾಗಿದ್ದರೆ, ಅಂಥ ಅರ್ಜಿಯ ವಿವರಗಳು;
(iv) ಈ ಮೊದಲು ಮಂಜೂರು ಮಾಡಿದ ಯಾವುದೇ ಭೂಮಿಯ ವಿವರಗಳು;
(v) ಅರ್ಜಿದಾರನು ಒಬ್ಬ ವ್ಯಕ್ತಿಯಾಗಿದ್ದರೆ, ಅವನ ಕುಟುಂಬದ ಯಾವನೇ ಸದಸ್ಯನಿಗೆ ಈ ಮೊದಲೇ ಮಂಜೂರು ಮಾಡಿದ ಯಾವುದೇ ಭೂಮಿಯ ವಿವರಗಳು
(vi) ಭೂಮಿಯು ಬೇಕಾಗಿರುವ ಉದ್ದೇಶ.
(2) ಅಂಥ ಅರ್ಜಿಯು ತಲುಪಿದ ಮೇಲೆ, ತಹಸೀಲ್ದಾರನು ಅರ್ಜಿಯ ವಿವರಗಳನ್ನು ಆ ಉದ್ದೇಶಕ್ಕಾಗಿ ಇಟ್ಟಿರುವ ರಿಜಿಸ್ಟರಿನಲ್ಲಿ ನಮೂದಿಸುವಂತೆ ಮಾಡತಕ್ಕದ್ದು. ಅರ್ಜಿದಾರನು ಯಾವ ಉದ್ದೇಶಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದಾನೋ, ಅದಕ್ಕಾಗಿ ಆ ಭೂಮಿಯನ್ನು ಉಪಯೋಗಿಸುವ ನಿಜವಾದ ಉದ್ದೇಶವನ್ನು ಹೊಂದಿದ್ದಾನೆಂಬ ಬಗ್ಗೆ ಮನದಟ್ಟು ಮಾಡಿಕೊಳ್ಳುವುದಕ್ಕಾಗಿ ತಾನು ಯುಕ್ತವೆಂದು ಆಲೋಚಿಸುವಂಥ ವಿಚಾರಣೆಯನ್ನು ತಹಶೀಲ್ದಾರನು ನಡೆಸತಕ್ಕದ್ದು. ಅರ್ಜಿ ಹಾಕಲಾದ ಭೂಮಿಯು ಮಂಜೂರಾತಿಗೆ ದೊರಕಬಹುದಾಗಿದ್ದರೆ, ತಹಸೀಲ್ದಾರನು ತನ್ನ ವರದಿಯನ್ನು ಅರ್ಜಿ ಮತ್ತು ಸಂಬಂಧಪಟ್ಟ ದಾಖಲೆಗಳೊಡನೆ ಡೆಪ್ಯುಟಿ ಕಮೀಷನರಿಗೆ ಕಳಿಸತಕ್ಕದ್ದು.
- ಕಟ್ಟಡ ನಿವೇಶನಗಳ ಮಂಜೂರಾತಿ.- (1) ಈ ಕೆಳಕಂಡ ಎಲ್ಲ ಅಥವಾ ಯಾವುವೇ ಷರತ್ತುಗಳಿಗೊಳಪಟ್ಟು, ವಿಶೇಷವಾಗಿ ಅರ್ಹವಾಗಿರುವ ಸಂದರ್ಭಗಳನ್ನು ಬಿಟ್ಟು ಉಳಿದ ಸಂದರ್ಭಗಳಲ್ಲಿ ಅಂಥ ನಿವೇಶನದ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆಯಿಲ್ಲದಂತೆ ತಾನು ಗೊತ್ತು ಮಾಡಿದಂಥ ಬೆಲೆಯು ಸಂದಾಯವಾದ ಮೇಲೆ, ದೊರೆಯಬಹುದಾದ ನಿವೇಶನಗಳ ಶೇಕಡಾ ಹದಿನೆಂಟರಷ್ಟನ್ನು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡವವರಿಗೆ ಅವಶ್ಯವಿದ್ದಲ್ಲಿ ಮೀಸಲಿಟ್ಟು, ಡೆಪ್ಯುಟಿ ಕಮೀಷನರು ಕಟ್ಟಡ ನಿವೇಶನಗಳನ್ನು ಮಂಜೂರು ಮಾಡಬಹುದು:
ಪರಂತು, ಸಂಬಂಧಪಟ್ಟ ಗ್ರಾಮದಲ್ಲಿ, ಪಟ್ಟಣದಲ್ಲಿ ಅಥವಾ ನಗರದಲ್ಲಿ ಮನೆಯನ್ನು ಅಥವಾ ನಿವೇಶನವನ್ನು ಸ್ವಂತವಾಗಿ ಹೊಂದಿರುವ ವ್ಯಕ್ತಿಗೆ ಅಥವಾ ಕಳೆದ ಇಪ್ಪತ್ತು ವರ್ಷಗಳಲ್ಲಿ ಯಾವುದೇ ಪ್ರಾಧಿಕಾರದಿಂದ ನಿವೇಶನವನ್ನು ಮಂಜೂರು ಪಡೆದಿರುವ ವ್ಯಕ್ತಿಗೆ ಯಾವ ನಿವೇಶನವನ್ನು ಮಂಜೂರು ಮಾಡತಕ್ಕದ್ದಲ್ಲ.
(ಕ) ಮಂಜೂರಾತಿ ಪಡೆದವನು ನಿವೇಶನದ ಸ್ವಾಧೀನವನ್ನು ಪಡೆದ ದಿನಾಂಕದಿಂದ ಐದು ವರ್ಷಗಳ ಅವಧಿಯವರೆಗೆ ಆ ನಿವೇಶನವನ್ನು ಬಾಡಿಗೆಗೆ ಕೊಡತಕ್ಕದ್ದಲ್ಲ. ಮಂಜೂರಾತಿ ಪಡೆದವನು ಐದು ವರ್ಷಗಳ ತರುವಾಯ ಮತ್ತು ಹದಿನೈದು ವರ್ಷಗಳ ಅವಧಿಯೊಳಗೆ ನಿವೇಶನವನ್ನು ಪರಬಾರೆ ಮಾಡಲು ಅಪೇಕ್ಷಿಸಿದರೆ, ಡೆಪ್ಯುಟಿ ಕಮೀಷನರ ಪೂರ್ವ ಮಂಜೂರಾತಿಯನ್ನು ಪಡೆಯತಕ್ಕದ್ದು. ಡೆಪ್ಯುಟಿ ಕಮೀಷನರು ಪರಭಾರೆಯನ್ನು ಮಂಜೂರು ಮಾಡುವ ದಿನಾಂಕದಂದು ಇರುವ ಅಂಥ ನಿವೇಶನದ ಮಾರುಕಟ್ಟೆ ಮೌಲ್ಯದ ಶೇಕಡ ಐವತ್ತರಷ್ಟಕ್ಕೆ ಸಮನಾದ ಮೊಬಲಗನ್ನು ವಸೂಲು ಮಾಡಿದ ತರುವಾಯ ಅಂಥ ಪರಭಾರೆಯನ್ನು ಮಂಜೂರು ಮಾಡಬಹುದು:
ಪರಂತು, ಕಟ್ಟಡವನ್ನು ಕಟ್ಟಲು ಅಥವಾ ಅದನ್ನು ಉತ್ತಮಗೊಳಿಸಲು ಸಾಲವನ್ನು ಪಡೆಯುವುದಕ್ಕಾಗಿ ರಾಜ್ಯ ಸರ್ಕಾರದ ಅಥವಾ ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಥವಾ ಗೃಹ ನಿರ್ಮಾಣ ಸಹಕಾರ ಸಂಘ ಅಥವಾ ಅನುಸೂಚಿತ ಬಾ ್ಯಂಕು ಅಥವಾ ಭಾರತ ಜೀವವಿಮಾ ನಿಗಮದ ಹೆಸರಿಗೆ ನಿವೇಶನವನ್ನು ಅಡಮಾನ ಮಾಡುವುದನ್ನು ಈ ನಿಯಮದ ಉದ್ದೇಶಕ್ಕಾಗಿ ಪರಭಾರೆಯೆಂದು ಭಾವಿಸತಕ್ಕದ್ದಲ್ಲ.
(ಖ) ಮಂಜೂರಾತಿ ಪಡೆದವನು ನಿವೇಶನವನ್ನು ಯಾವ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿದೆಯೋ ಅದರ ಹೊರತು ಇತರ ಯಾವುದೇ ಉದ್ದೇಶಕ್ಕಾಗಿ ಅದನ್ನು ಉಪಯೋಗಿಸತಕ್ಕದ್ದಲ್ಲ.
(ಖಖ) ಮಂಜೂರಾತಿ ಪಡೆದವನು ನಿವೇಶನವನ್ನು ಸ್ವಾಧೀನಕ್ಕೆ ತೆಗೆದುಕೊಂಡ ದಿನಾಂಕದಿಂದ ಎರಡು ವರ್ಷಗಳ ಒಳಗಾಗಿ ಅದನ್ನು ಮಂಜೂರು ಮಾಡಿದ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು:
ಪರಂತು, ನಿವೇಶನವನ್ನು ಮಂಜೂರು ಮಾಡುವ ಪ್ರಾಧಿಕಾರಿಯು ಮಂಜೂರಾತಿ ಪಡೆದವನು ನಿವೇಶನವನ್ನು ನೈಜವಾದ ಕಾರಣಕ್ಕಾಗಿ ಸದರಿ ಅವಧಿಯಲ್ಲಿ ಉಪಯೋಗಿಸಲಿಲ್ಲವೆಂಬುದರ ಬಗ್ಗೆ ಮನದಟ್ಟಾದರೆ, ಲಿಖಿತ ಆದೇಶದ ಮೂಲಕ ಎರಡು ವರ್ಷಗಳಿಗೆ ಮೀರದ ಕಾಲದವರೆಗೆ ಅವಧಿಯನ್ನು ಮುಂದುವರೆಸಬಹುದು:
(ಗ) ಮಂಜೂರಾದ ನಿವೇಶನವನ್ನು ಉಪಯೋಗಿಸುವುದು ಅದು ಇರುವ ಪ್ರದೇಶದ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸ್ಥಳೀಯ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಯಾವುದೇ ಕಾನೂನಿಗೆ ಒಳಪಟ್ಟಿರತಕ್ಕದ್ದು;
(ಘ) ಮೇಲೆ ಹೇಳಿದ ಯಾವುವೇ ಷರತ್ತುಗಳನ್ನು ಉಲ್ಲಂಘಿಸಿದರೆ, ಮಂಜೂರಾತಿ ಪಡೆದವನಿಗೆ ಯಾವುದೇ ಪರಿಹಾರವನ್ನು ಕೊಡದೆ ಡೆಪ್ಯುಟಿ ಕಮೀಷನರು ತನ್ನ ವಿವೇಚನಾನುಸಾರವಾಗಿ ಕಟ್ಟಡ ನಿವೇಶನವನ್ನು ಹಿಂದಕ್ಕೆ ಪಡೆಯಲು ಅವಕಾಶವಿರತಕ್ಕದ್ದು:
(2) ಯಾವುದೇ ಕಟ್ಟಡ ನಿವೇಶನವನ್ನು ಪ್ರತ್ಯೇಕ ನಿವೇಶನವೆಂದು ಉಪಯುಕ್ತವಾಗುವ ಹಾಗೆ ಮಂಜೂರು ಮಾಡಲಾಗದಿದ್ದರೆ, ಪಕ್ಕದಲ್ಲಿ ನಿವೇಶನ ಹೊಂದಿರುವವನು ಹಾಗೆ ಆಪೇಕ್ಷಿಸಿದರೆ, ಡೆಪ್ಯುಟಿ ಕಮೀಷನರು ನಿರ್ಧರಿಸಬಹುದಾದಂಥ ಮೌಲ್ಯಕ್ಕೆ ಅಂಥ ನಿವೇಶನವನ್ನು ಅವನಿಗೆ ಮಂಜೂರು ಮಾಡಬಹುದು.
(3) ಈ ನಿಯಮಗಳಲ್ಲಿ ಏನೇ ಇದ್ದರೂ, ಡೆಪ್ಯುಟಿ ಕಮೀಷನರು, ಯಾವುದೇ ಶೈಕ್ಷಣಿಕ ಅಥವಾ ಧರ್ಮಾರ್ಥ ಸಂಸ್ಥೆಗೆ ಅಥವಾ ಲೋಕ ಪ್ರಾಧಿಕಾರಕ್ಕೆ ತಾನು ಗೊತ್ತು ಮಾಡಿದ ನಿಗದಿತ ಬೆಲೆಯನ್ನು ಪಡೆದು ಮತ್ತು ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗೆ ಸೇರಿದ ವ್ಯಕ್ತಿಗಳಿಗೆ ಉಚಿತವಾಗಿ, ನಿವೇಶನಗಳನ್ನು ಮಂಜೂರು ಮಾಡಬಹುದು.
(4) ಯಾವುದೇ ಕಟ್ಟಡದ ನಿವೇಶನವನ್ನು ಡೆಪ್ಯುಟಿ ಕಮೀಷನರು ಪ್ರತಿಯೊಂದು ಸಂದರ್ಭ ಮತ್ತು ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ತಾನು ಗೊತ್ತು ಮಾಡುವ ಬಾಡಿಗೆಯನ್ನು ವಸೂಲು ಮಾಡುವುದಕ್ಕೆ ಒಳಪಟ್ಟು, ಹನ್ನೆರಡು ತಿಂಗಳುಗಳನ್ನು ಮೀರದ ಅವಧಿಗೆ ಅದನ್ನು ತಾತ್ಕಾಲಿಕವಾಗಿ ಗುತ್ತಿಗೆಗೆ ಕೊಡಬಹುದು.
(5) ಈ ನಿಯಮದ ಮೇರೆಗೆ ಮಂಜೂರು ಮಾಡಬಹುದಾದ ಕಟ್ಟಡ ನಿವೇಶನಗಳು ಐದು ಎಕರೆಗಳನ್ನು ಮೀರತಕ್ಕದ್ದಲ್ಲ.
(6) ಈ ನಿಯಮದಲ್ಲಿ ಅಥವಾ 1969ರ ಜೂನ್ 21ನೇ ದಿನಾಂಕದ ಆರ್.ಡಿ. 26 ಜಿಎನ್ಎ 9ನೇ ಸರ್ಕಾರಿ ಅಧಿಸೂಚನೆಯಲ್ಲಿ ಏನೇ ಇದ್ದರೂ, ಯಾವುದೇ ಮನೆಯ ಅಥವಾ ಕಟ್ಟಡ ನಿವೇಶನದ ಒಡೆತನವನ್ನು ಹೊಂದಿರುವ ಪಂಚಾಯತಿಯ ಸರಹದ್ದಿನ ಹೊರಗೆ ವಾಸಿಸುವ ಬಡನಿವಾಸಿಗಳಿಗೆ ತಾಲ್ಲೂಕಿನ ಯಾವುದೇ
ಗ್ರಾಮ ಪಂಚಾಯತಿಯ ಸರಹದ್ದಿನಲ್ಲಿ ಎರಡು ಎಕರೆಗಳಿಗೆ ಮೀರದ ಮತ್ತು ಪಟ್ಟಣ ಪಂಚಾಯಿತಿ ಸರಹದ್ದಿನಲ್ಲಿ ಒಂದು ಎಕರೆಗೆ ಮೀರದ ಕಟ್ಟಡ ನಿವೇಶನಗಳನ್ನು ಮಂಜೂರು ಮಾಡಲು ತಾಲ್ಲೂಕಿನ ತಹಶೀಲ್ದಾರನಿಗೆ ಅಧಿಕಾರವಿರತ್ಕದ್ದು:
ಪರಂತು, ಅಧಿಸೂಚನೆಯ ಮೂಲಕ ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸುವಂಥ ಪ್ರದೇಶಗಳಲ್ಲಿ ಅಂಥ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಲಾಗಿರುವ ಅಧಿಕಾರಿಗಳು ತಮಗೆ ಸಂಬಂಧಪಟ್ಟ ಅಧಿಕಾರ ವ್ಯಾಪ್ತಿಯಲ್ಲಿ ಈ ಉಪನಿಯಮದಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳಿಗೆ ಮತ್ತು ಅವುಗಳ ವ್ಯಾಪ್ತಿಗೆ ಒಳಪಟ್ಟು, ಕಟ್ಟಡ ನಿವೇಶನಗಳನ್ನು ಮಂಜೂರು ಮಾಡಲು ಸಕ್ಷಮರಾಗಿರತಕ್ಕದ್ದು. ಆದರೆ ತಾಲ್ಲೂಕಿನ ತಹಸೀಲ್ದಾರನು ಸಕ್ಷಮವಾಗಿರತಕ್ಕದ್ದಲ್ಲ.
- ಭೂಮಿಗಳನ್ನು ಗುತ್ತಿಗೆಗೆ ಕೊಡುವುದು.- (1) ಡೆಪ್ಯುಟಿ ಕಮೀಷನರು, ಭೂಮಿಗಳು ದೊರಕುವುದಾದಲ್ಲಿ, ಅವುಗಳನ್ನು ಕೆಳಕಂಡ ಸಂಸ್ಥೆಗಳಿಗೆ ಗುತ್ತಿಗೆಗೆ ಕೊಡಬಹುದು:-
(ಕ) ಶಿಕ್ಷಣ ಸಂಸ್ಥೆಗಳು;
(ಖ) ಸಹಕಾರಿ ಬೇಸಾಯ ಸಂಘಗಳು;
(ಗ) ಗ್ರಾಮ ಪಂಚಾಯಿತಿಗಳು ಮತ್ತು ತಾಲ್ಲೂಕು ಅಭಿವೃದ್ಧಿ ಮಂಡಲಿಗಳು ಮತ್ತು
(ಘ) ಬೇಸಾಯ, ಉದ್ಯಮ ಅಥವಾ ಇತರ ಯಾವುದೇ ಸಾರ್ವಜನಿಕ ಉಪಯೋಗದ ಉದ್ದೇಶಗಳಿಗಾಗಿ ಯಾವುದೇ ಕಂಪೆನಿ ಅಥವಾ ಸಂಘ.
(2) (ಕ) ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಂದ ಅಥವಾ ಇತರ ಯಾವುದೇ ಪ್ರಾಧಿಕಾರದಿಂದ ಮಾನ್ಯತೆ ಹೊಂದಿರುವ (ಆದರೆ ಸರಕಾರಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಗುವಳಿಗಾಗಿ ಅಂಗೀಕರಿಸಲ್ಪಟ್ಟ ಶಾಲೆಗಳು, ಕಾಲೇಜುಗಳ ವಿದ್ಯಾರ್ಥಿನಿಲಯಗಳು ಅಲ್ಲದ) ಶಾಲೆಗಳು, ಕಾಲೇಜುಗಳು ಸಮಾಜ ಕಲ್ಯಾಣ ಕೆಲಸಗಾರರು ಮತ್ತು ವಿದ್ಯಾರ್ಥಿಗಳ ತರಬೇತಿ ಸಂಸ್ಥೆಗಳಿಗೆ, ಆ ಸಂಸ್ಥೆಗಳ ವಿದ್ಯಾರ್ಥಿಗಳ ತರಬೇತಿ ಸಂಸ್ಥೆಗಳಾದ ಶಿಕ್ಷಣ ಸಂಸ್ಥೆಗಳ ಪರವಾಗಿ ಗೇಣಿಗೆ ಕೊಡಬೇಕಾದ ಭೂಮಿಯ ವಿದ್ಯಾರ್ಥಿಗಳು ಸಾಗುವಳಿ ಮಾಡುವುದಕ್ಕಾಗಿ ಗುತ್ತಿಗೆಗೆ ಕೊಡಬಹುದಾದ ಭೂಮಿಯ ವಿಸ್ತೀರ್ಣವು ಪ್ರತಿ ಸಂದರ್ಭದಲ್ಲಿ ಕೆಳಕಂಡಂತೆ ಹೆಕ್ಟೇರುಗಳಲ್ಲಿ ಇರತಕ್ಕದ್ದು.-
(ಖ) ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ 1959 (ಕರ್ನಾಟಕ ಅಧಿನಿಯಮ 1959ರ 2)ರ ಮೇರೆಗೆ ನೋಂದಾಯಿತವಾದ ಸಹಕಾರಿ ಬೇಸಾಯ ಸಂಘಗಳಿಗೆ ಸಾಗುವಳಿಗಾಗಿ ಗೇಣಿಗೆ ಕೊಡಬಹುದಾದ ಭೂಮಿಯ ವಿಸ್ತೀರ್ಣವನ್ನು ಸಂಘದ ಪ್ರತಿಯೊಬ್ಬ ಸದಸ್ಯನಿಗೆ ಎರಡು ಹೆಕ್ಟೇರುಗಳಂತೆ ಸಂಘದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಡೆಪ್ಯುಟಿ ಕಮೀಷನರು ನಿರ್ಧರಿಸತಕ್ಕದ್ದು;
ತರಕಾರಿ ತೋಟಗಳನ್ನು ಮತ್ತು ಹಣ್ಣಿನ ಗಿಡಗಳನ್ನು ಬೆಳೆಸುವುದಕ್ಕಾಗಿ ಮತ್ತು ಫಾರ್ಮ ಫಾರೆಸ್ಟಿಗಾಗಿ ಗ್ರಾಮ ಪಂಚಾಯತಿ ಅಥವಾ ತಾಲ್ಲೂಕು ಅಭಿವೃದ್ಧಿ ಮಂಡಲಿಗಳಿಗೆ ಗುತ್ತಿಗೆಗೆ ಕೊಡಬೇಕಾದ ಭೂಮಿಯ ವಿಸ್ತೀರ್ಣವು ಐದು ಹೆಕ್ಟೇರುಗಳ ತರಿ ಭೂಮಿಗೆ ಅಥವಾ ಹತ್ತು ಹೆಕ್ಟೇರುಗಳ ಖುಷ್ಕಿ ಭೂಮಿಗೆ ಮೀರತಕ್ಕದ್ದಲ್ಲ;
(ಗ) ಬೇಸಾಯೇತರ ಉದ್ದೇಶಗಳಿಗಾಗಿ ಯಾವುದೇ ಕಂಪೆನಿ ಅಥವಾ ಸಂಘಕ್ಕೆ ಗುತ್ತಿಗೆಗೆ ಕೊಡಬಹುದಾದ ಭೂಮಿಯ ವಿಸ್ತೀರ್ಣವು ನಾಲ್ಕು ಹೆಕ್ಟೇರುಗಳಿಗೆ ಮೀರತಕ್ಕದ್ದಲ್ಲ.
(ಘ ) ಯಾವನೆ ಒಬ್ಬ ವ್ಯಕ್ತಿಗೆ ಗುತ್ತಿಗೆಗೆ ಕೊಡಬೇಕಾದ ಭೂಮಿಯ ವಿಸ್ತೀರ್ಣವು ಅವನು ಈಗಾಗಲೇ ಹೊಂದಿರುವ ಯಾವುದೇ ಭೂಮಿಯ ವಿಸ್ತೀರ್ಣವೂ ಸೇರಿ 2(15)ನೇ ನಿಯಮದಲ್ಲಿ ಸಾಕಷ್ಟು ಭೂಮಿಯ ಹಿಡುವಳಿದಾರನಿಗೆ ನಿಯಮಿಸಲಾದ ಮಿತಿಗಳನ್ನು ಮೀರತಕ್ಕದ್ದಲ್ಲ;
(ಙ) ಮೇಲೆ ನಿರ್ದಿಷ್ಟಪಡಿಸಿದ ವಿಸ್ತೀರ್ಣವನ್ನು ಮೀರುವ ಇತರ ಯಾವುದೇ ಸಂದರ್ಭದಲ್ಲಿ ಸರಕಾರದ ಮಂಜೂರಾತಿಗಾಗಿ ಸೂಚನೆಯನ್ನು ಒಪ್ಪಿಸತಕ್ಕದ್ದು.
(3) ಈ ನಿಯಮದ ಮೇರೆಗೆ ಭೂಮಿಗಳನ್ನು ಗುತ್ತಿಗೆಗೆ ಕೊಡಬಹುದಾದ ಅವಧಿಯು,
(ಕ) ರಾಜ್ಯ ಸರ್ಕಾರದ ಪೂರ್ವ ಮಂಜೂರಾತಿ ಇಲ್ಲದೆ, ಒಬ್ಬ ವ್ಯಕ್ತಿಯ, ಕಂಪೆನಿಯ ಅಥವಾ ಸಂಘದ ಸಂದರ್ಭದಲ್ಲಿ ಐದು ವರ್ಷಗಳಿಗಿಂತ ಹೆಚ್ಚಾಗಿರತಕ್ಕದ್ದಲ್ಲ; ಮತ್ತು
(ಖ) ಇತರ ಸಂದರ್ಭಗಳಲ್ಲಿ ಹತ್ತು ವರ್ಷಗಳಿಗಿಂತ ಕಡಿಮೆ ಮತ್ತು ಮೂವತ್ತು ವರ್ಷಗಳಿಗಿಂತ ಹೆಚ್ಚಾಗಿ ಇರತಕ್ಕದ್ದಲ್ಲ.
ಪರಂತು, ಈ ಅವಧಿಯು ಮುಕ್ತಾಯವಾದ ತರುವಾಯ, ಗುತ್ತಿಗೆಯನ್ನು ಇನ್ನೂ ಹೆಚ್ಚಿನ ಐದು ವರ್ಷಗಳ ಅವಧಿಯವರೆಗೆ ನವೀಕರಿಸಲು ಡೆಪ್ಯುಟಿ ಕಮೀಷನರಿಗೆ ಅಧಿಕಾರವಿರತಕ್ಕದ್ದು.
(4) (ಕ) ಬೇಸಾಯದ ಉದ್ದೇಶಕ್ಕಾಗಿ (1)ನೇ ಉಪನಿಯಮದ ಮೇರೆಗಿನ ಭೂಮಿಗಳ ಗುತ್ತಿಗೆಯು ಈ ಕೆಳಕಂಡ ಷರತ್ತುಗಳಿಗೆ ಸಹ ಒಳಪಟ್ಟಿರತಕ್ಕದ್ದು:-
(i) ಭೂಮಿಗೆ ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾದ ಗುತ್ತಿಗೆದಾರನು ಏನನ್ನೂ ಮಾಡತಕ್ಕದ್ದಲ್ಲ;
(ii) ಗುತ್ತಿಗೆದಾರನು ಭೂಮಿಯನ್ನು ಗುತ್ತಿಗೆಗೆ ಕೊಡತಕ್ಕದ್ದಲ್ಲ ಅಥವಾ ಪರಭಾರೆ ಮಾಡತಕ್ಕದ್ದಲ್ಲ;
(iii) ಭೂಮಿಯನ್ನು, ಸಂದರ್ಭಾನುಸಾರ ಸ್ವಂತವಾಗಿ ಅಥವಾ ಸಂಬಂಧಪಟ್ಟ ಸಂಸ್ಥೆಗಳ ಸದಸ್ಯರು ಸಾಗುವಳಿ ಮಾಡತಕ್ಕದ್ದು;
(iv) ಭೂಮಿಯನ್ನು ಯಾವ ಉದ್ದೇಶಕ್ಕಾಗಿ ಗುತ್ತಿಗೆಗೆ ಕೊಡಲಾಗಿದೆಯೋ ಅದರ ಹೊರತು ಇತರ ಯಾವುದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದಲ್ಲ;
(v) ಗುತ್ತಿಗೆಗೆ ಕೊಡುವ ಅಧಿಕಾರಿಯು ಗೊತ್ತು ಮಾಡಬಹುದಾದಂತೆ ಅಂಥ ಭೂಮಿಯ ಸಂಬಂಧದಲ್ಲಿ ಸಂದಾಯ ಮಾಡಬೇಕಾದ ಭೂಕಂದಾಯದ 5ರಷ್ಟಕ್ಕೆ ಮೀರದ ಗುತ್ತಿಗೆಯನ್ನು ಗುತ್ತಿಗೆದಾರನು ವಾರ್ಷಿಕವಾಗಿ ಸಂದಾಯ ಮಾಡತಕ್ಕದ್ದು;
(vi) ಸಂಸ್ಥೆಯ ನೋಂದಣಿಯು ರದ್ದಾದಾಗ ಗುತ್ತಿಗೆಯನ್ನು ಕೊನೆಗೊಳಿಸಲು ಅವಕಾಶವಾಗತಕ್ಕದ್ದು;
(vii) ಗುತ್ತಿಗೆಯ ಷರತ್ತುಗಳನ್ನು ಉಲ್ಲಂಘಿಸಿಲ್ಲವೆಂದು ತಾನು ಮನದಟ್ಟು ಮಾಡಿಕೊಳ್ಳುವುದಕ್ಕಾಗಿ ಡೆಪ್ಯುಟಿ ಕಮೀಷನರು ಅಥವಾ ಅವನಿಂದ ಅಧಿಕಾರ ಪಡೆದ ಯಾವನೇ ವ್ಯಕ್ತಿಯು ಭೂಮಿಯನ್ನು ಪರಿಶೀಲಿಸಲು ಎಲ್ಲಾ ಕಾಲದಲ್ಲೂ ಗುತ್ತಿಗೆದಾರನು ಅವಕಾಶ ಕೊಡತಕ್ಕದ್ದು;
(viii) ಭೂಮಿ ಅಥವಾ ಭೂಮಿಯ ಒಂದು ಭಾಗವು ಯಾವುದೇ ಸಾರ್ವಜನಿಕ ಉದ್ದೇಶಕ್ಕಾಗಿ ಅಗತ್ಯವಾಗಿದ್ದರೆ, ಗುತ್ತಿಗೆಗೆ ಕೊಡುವ ಅಧಿಕಾರಿಯು ಗುತ್ತಿಗೆದಾರನಿಗೆ ಮೂರು ತಿಂಗಳುಗಳ ನೋಟೀಸನ್ನು ಕೊಟ್ಟ ತರುವಾಯ ಭೂಮಿಯನ್ನು ಹಿಂತೆಗೆದುಕೊಳ್ಳಬಹುದು;
(ix) ಮೇಲೆ ಹೇಳಿರುವ ಯಾವುವೇ ಷರತ್ತುಗಳನ್ನು ಉಲ್ಲಂಘಿಸಿದುದಕ್ಕಾಗಿ ಗುತ್ತಿಗೆಯನ್ನು ಕೊನೆಗಾಣಿಸಲು ಅವಕಾಶವಿರತಕ್ಕದ್ದು.
(ಖ) ಬೇಸಾಯೇತರ ಉದ್ದೇಶಕ್ಕಾಗಿ ಗೇಣಿಗೆ ಕೊಡಲಾದ ಭೂಮಿಗಳ ಸಂಬಂಧದಲ್ಲಿ, ಆ ಭೂಮಿ ಇರುವ ಸ್ಥಳವನ್ನು, ಯಾವ ಉದ್ದೇಶಕ್ಕಾಗಿ ಅದನ್ನು ಉಪಯೋಗಿಸಲಾಗಿದೆಯೋ ಆ ಉದ್ದೇಶವನ್ನು ಗಣನೆಗೆ ತೆಗೆದುಕೊಂಡು ಅಂಥ ಭೂಮಿಯ ಸಂಬಂಧದಲ್ಲಿ ಸಂದಾಯ ಮಾಡಬೇಕಾದ ಗುತ್ತಿಗೆಯನ್ನು ಡೆಪ್ಯುಟಿ ಕಮೀಷನರು ಗೊತ್ತು ಮಾಡತಕ್ಕದ್ದು. ಪ್ರತಿಯೊಂದು ಸಂದರ್ಭವನ್ನು ಗಮನಿಸಿ, ತಾನು ಅವಶ್ಯಕವೆಂದು ಭಾವಿಸುವಂಥ ಷರತ್ತುಗಳನ್ನು ಸಹ ಅವನು ವಿಧಿಸಬಹುದು.
(5) ಈ ನಿಯಮದ ಮೇರೆಗೆ ಯಾವುದೇ ಭೂಮಿಯನ್ನು ಗುತ್ತಿಗೆಗೆ ಕೊಟ್ಟಾಗ, ಗುತ್ತಿಗೆದಾರನು ಆ ಗುತ್ತಿಗೆಯ ಎಲ್ಲ ಷರತ್ತುಗಳನ್ನು ಸೇರಿಸಿ (iii) ಅಥವಾ (iv)ನೇಯ ನಮೂನೆಯಲ್ಲಿ ಗುತ್ತಿಗೆ ಪತ್ರವನ್ನು ಬರೆದು ಕೊಡತಕ್ಕದ್ದು.
- ಗೃಹ ನಿರ್ಮಾಣ ಮಂಡಲಿ, ಗ್ರಾಮ ಪಂಚಾಯತಿ, ತಾಲ್ಲೂಕು ಅಭಿವೃದ್ಧಿ ಮಂಡಲಿ, ಸಹಕಾರ ಸಂಘಗಳು ಮತ್ತು ಇತರ ಶಾಸನಬದ್ಧ ಮಂಡಲಿಗೆ ಭೂಮಿಯನ್ನು ಮಂಜೂರು ಮಾಡುವುದು.- (1) ರಾಜ್ಯ ಸರ್ಕಾರದ ಪೂರ್ವಾನುಮೋದನೆಯನ್ನು ಪಡೆದು ಡೆಪ್ಯುಟಿ ಕಮೀಷನರು ಭೂಮಿಯನ್ನು ಈ ನಿಯಮಗಳ ಮೇರೆಗೆ ಕೆಳಕಂಡವರಿಗೆ ಮಂಜೂರು ಮಾಡಬಹುದು.-
(ಕ) ಸಹಾಯಧನ ಪಡೆದ ಬಾಡಿಗೆ ಮನೆಗಳ ನಿರ್ಮಾಣ ಯೋಜನೆಯ ಮೇರೆಗೆ ಅಥವಾ ಸಹಾಯಧನ ಪಡೆದ ಕೈಗಾರಿಕಾ ಗೃಹ ನಿರ್ಮಾಣ ಯೋಜನೆಯ ಮೇರೆಗೆ ಮನೆಗಳನ್ನು ಕಟ್ಟುವುದಕ್ಕೆ ಉಚಿತವಾಗಿ ಮತ್ತು ಇತರ ಎಲ್ಲ ಸಂದರ್ಭಗಳಲ್ಲಿ ಮಾರುಕಟ್ಟೆ ಮೌಲ್ಯದ ಶೇಕಡಾ ಐವತ್ತರಷ್ಟನ್ನು ಸಂದಾಯ ಮಾಡಿದ ಮೇಲೆ, ಕರ್ನಾಟಕ ಗೃಹ ನಿರ್ಮಾಣ ಮಂಡಲಿಗೆ;
(ಖ) ಶಾಲೆಗಳ, ಆಸ್ಪತ್ರೆಗಳ, ಔಷಧಾಲಯಗಳ ನಿರ್ಮಾಣಕ್ಕಾಗಿ ಮತ್ತು ಸಾರ್ವಜನಿಕ ಸೌಕರ್ಯಗಳಿಗಾಗಿ ಮತ್ತು ಕರ್ನಾಟಕ ಗ್ರಾಮ ಪಂಚಾಯತಿ ಮತ್ತು ಸ್ಥಳೀಯ ಮಂಡಲಿಗಳ ಅಧಿನಿಯಮ, 1959ರ ಮೇರೆಗೆ ನೆರವೇರಿಸಬೇಕಾದವುಗಳೆಂದು ಭಾವಿಸಲಾದ ಇತರ ಉದ್ದೇಶಗಳಿಗಾಗಿ, ಉಚಿತವಾಗಿ ಗ್ರಾಮ ಪಂಚಾಯತಿಗಳಿಗೆ ಮತ್ತು ತಾಲ್ಲೂಕು ಅಭಿವೃದ್ಧಿ ಮಂಡಲಿಗಳಿಗೆ;
(ಗ) ಡೆಪ್ಯುಟಿ ಕಮೀಷನರು ನಿರ್ಧರಿಸಬಹುದಾದ ಮಾರುಕಟ್ಟೆ ಮೌಲ್ಯದ ಶೇಕಡಾ 50ನ್ನು ತೆಗೆದುಕೊಂಡು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಸಹಕಾರ ಸಂಘಗಳಿಗೆ ಮತ್ತು ಕರ್ನಾಟಕ ರಾಜ್ಯ ವಿದ್ಯುತ್ ಮಂಡಲಿ ಇತ್ಯಾದಿಯಂಥ ಶಾಸನಬದ್ಧ ನಿಕಾಯಗಳಿಗೆ;
(2) (1)ನೇ ಉಪನಿಯಮದ (ಕ) ಯಿಂದ (ಗ)ವರೆಗಿನ ಖಂಡಗಳ ಮೇರೆಗೆ ಮಂಜೂರು ಮಾಡಲಾದ ಭೂಮಿಗಳನ್ನು, ಅವುಗಳನ್ನು ಯಾವ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿದೆಯೋ ಆ ಉದ್ದೇಶಗಳಿಗಾಗಿ ಉಪಯೋಗಿಸದಿದ್ದರೆ, ಹಿಂತೆಗೆದುಕೊಳ್ಳತಕ್ಕದ್ದು. ಹಾಗೆ ಹಿಂತೆಗೆದುಕೊಂಡ ಭೂಮಿಗಳ ಬಗ್ಗೆ ಯಾವುದೇ ನಷ್ಟ ಪರಿಹಾರವನ್ನು ಅಥವಾ ನಷ್ಟ ಭರ್ತಿಯನ್ನು ಸಂದಾಯ ಮಾಡುವುದಕ್ಕೆ ರಾಜ್ಯ ಸರ್ಕಾರವು ಬದ್ಧವಾಗಿರತಕ್ಕದ್ದಲ್ಲ.
-
ಮತೀಯ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಭೂಮಿಯ ಮಂಜೂರಾತಿ.- ಈ ನಿಯಮಗಳಲ್ಲಿ ಏನೇ ಇದ್ದರೂ, ಡೆಪ್ಯುಟಿ ಕಮೀಷನರು ಒಂದು ಹೆಕ್ಟೇರಿನ ವಿಸ್ತೀರ್ಣದವರೆಗೆ ಮತ್ತು ಡಿವಿಜನಲ್ ಕಮೀಷನರ ಪೂರ್ವಾನುಮೋದನೆಯನ್ನು ಪಡೆದು ಎರಡು ಹೆಕ್ಟೇರುಗಳ ವಿಸ್ತೀರ್ಣದವರೆಗೆ ಮತ್ತು ರಾಜ್ಯ ಸರ್ಕಾರದ ಪೂರ್ವಾನುಮೋದನೆಯನ್ನು ಪಡೆದು ಯಾವುದೇ ವಿಸ್ತೀರ್ಣದವರೆಗೆ ಭೂಮಿಗಳನ್ನು ತಾನು ಗೊತ್ತು ಮಾಡಿದ ಬೆಲೆಯನ್ನು ಸಂದಾಯ ಮಾಡಿದ ಮೇಲೆ ಮತ್ತು ತಾನು ವಿಧಿಸಬಹುದಾದಂಥ ಇತರ ಷರತ್ತುಗಳಿಗೆ ಒಳಪಟ್ಟಂತೆ ಬೇಸಾಯೇತರ ಉದ್ದೇಶಗಳಿಗಾಗಿ ಯಾವುದೇ ಮತೀಯ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಮಂಜೂರು ಮಾಡಬಹುದು.
-
ಕೈಗಾರಿಕಾ ಸಂಸ್ಥೆಗಳಿಗೆ ಭೂಮಿಯ ಮಂಜೂರಾತಿ.- (1) ಕೈಗಾರಿಕಾ (ಅಭಿವೃದ್ಧಿ ಮತ್ತು ನಿಯಂತ್ರಣ ಅಧಿನಿಯಮ), 1951 (ಕೇಂದ್ರಾಧಿನಿಯಮ)ರ ಮೇರಗೆ ನೋಂದಾಯಿತವಾದ ಕೈಗಾರಿಕಾ ಸಂಸ್ಥೆಗಳಿಗೆ ಮತ್ತು ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯದ ನಿರ್ದೇಶನಾಲಯದಲ್ಲಿ, ನೊಂದಾಯಿತವಾದ ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳಿಗೆ ರಾಜ್ಯ ಸರ್ಕಾರದ ಪೂರ್ವ ಮಂಜೂರಾತಿಯನ್ನು ಪಡೆದು ಡೆಪ್ಯುಟಿ ಕಮೀಷನರು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಭೂಮಿಗಳನ್ನು ಮಂಜೂರು ಮಾಡಬಹುದು.-
(i) ಭೂಮಂಜೂರಾತಿ ಪಡೆದ ಸಂಸ್ಥೆಯ ರಾಜ್ಯ ಸರ್ಕಾರದ ಅನುಮತಿಯಿಲ್ಲದೆ, ಆ ಮಂಜೂರಾತಿಯ ದಿನಾಂಕದಿಂದ ಮೂವತ್ತು ವರ್ಷಗಳ ಅವಧಿಯೊಳಗೆ ಅಂಥ ಭೂಮಿಯನ್ನು ಮಾರತಕ್ಕದ್ದಲ್ಲ, ಗುತ್ತಿಗೆಗೆ ಕೊಡತಕ್ಕದ್ದಲ್ಲ, ಅಡಮಾನ ಮಾಡತಕ್ಕದ್ದಲ್ಲ. ವರ್ಗಾಯಿಸತಕ್ಕದ್ದಲ್ಲ, ದಾನ ಕೊಡತಕ್ಕದ್ದಲ್ಲ ಅಥವಾ ಬೇರೆ ಯಾವುದೇ ರೀತಿಯಲ್ಲಿ ಪರಭಾರೆ ಮಾಡತಕ್ಕದ್ದಲ್ಲ;
(ii) ಭೂ ಮಂಜೂರಾತಿ ಪಡೆದ ಸಂಸ್ಥೆಯು ಅದರ ನಂತರ ಯಾವುದೇ ಕಾಲದಲ್ಲಿ ಅಂಥ ಭೂಮಿಯನ್ನು ಮಾರಲು, ಗುತ್ತಿಗೆಗೆ ಕೊಡಲು, ಅಡಮಾನ ಮಾಡಲು, ವರ್ಗಾಯಿಸಲು, ದಾನ ಕೊಡಲು ಅಥವಾ ಬೇರೆ ಯಾವುದೇ ರೀತಿಯಲ್ಲಿ ಪರಭಾರೆ ಮಾಡಲು ಉದ್ದೇಶಿಸಿದರೆ, ಆ ಕೈಗಾರಿಕಾ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ಮೊದಲು ಅದನ್ನು ನೀಡತಕ್ಕದ್ದು ಮತ್ತು ರಾಜ್ಯ ಸರ್ಕಾರಕ್ಕೆ ಆ ಭೂಮಿಯನ್ನು ತೆಗೆದುಕೊಳ್ಳಲು ಉದ್ದೇಶವಿರದಿದ್ದರೆ, ಆ ಕೈಗಾರಿಕಾ ಸಂಸ್ಥೆಯು ಆ ಭೂಮಿಯನ್ನು ಯಾವನೇ ವ್ಯಕ್ತಿಗೆ ವಿಲೆ ಮಾಡಬಹುದು;
(iii) ಯಾವುದೇ ಸಣ್ಣ ಪ್ರಮಾಣದ ಕೈಗಾರಿಕಾ ಘಟಕಕ್ಕೆ ಎರಡು ಹೆಕ್ಟೇರುಗಳಿಗೆ ಮೀರಿದ ಭೂಮಿಯನ್ನು ಮಂಜೂರು ಮಾಡಬಹುದು.
(2) (1)ನೇ ಉಪನಿಯಮದ ಮೇರೆಗೆ ಮಂಜೂರು ಮಾಡಲಾದ ಭೂಮಿಯ ಮೌಲ್ಯವು ಅದರ ಮಾರುಕಟ್ಟೆ ಮೌಲ್ಯವನ್ನು ಮತ್ತು ಪರಿವರ್ತನೆಯ ಫೀಜನ್ನು ರಾಜ್ಯ ಸರ್ಕಾರವು ವಿನಾಯಿತಿಗೊಳಿಸಿದ ಹೊರತು, ಭೂಮಿಯ ಆ ಪರಿವರ್ತನೆಯ ವೆಚ್ಚಗಳನ್ನು ಒಳಗೊಳ್ಳತಕ್ಕದ್ದು.
(3) (1)ನೇ ಉಪನಿಯಮದಲ್ಲಿ ಏನೇ ಇದ್ದರೂ, ಕೈಗಾರಿಕಾ ಅಭಿವೃದ್ಧಿ ಮತ್ತು ವಿಸ್ತರಣೆಗೆ ಸಾಲಗಳನ್ನು ಪಡೆಯುವುದಕ್ಕೆ, ರಾಜ್ಯ ಅಥವಾ ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಆರ್ಥಿಕ ನಿಗಮಗಳಿಗೆ ಆ ಭೂಮಿಯನ್ನು, ಭೂಮಂಜೂರಾತಿ ಪಡೆದ ಸಂಸ್ಥೆಯು ಅಡಮಾನ ಮಾಡಬಹುದು.
- ಭೂಮಿಯು ಹಂಗಾಮಿಯಾಗಿ ಗುತ್ತಿಗೆಗೆ ಪಡೆದುಕೊಂಡಿರುವ ವ್ಯಕ್ತಿಗಳಿಗೆ ಭೂಮಿಗಳನ್ನು ಖಾಯಂಗೊಳಿಸುವುದು.- ಈ ನಿಯಮಗಳಲ್ಲಿ ಏನೇ ಇದ್ದರೂ,-
(1) ಈ ನಿಯಮಗಳ ಪ್ರಾರಂಭಕ್ಕೆ ಮೊದಲು, ಸಾಗುವಳಿಯ ಉದ್ದೇಶಕ್ಕಾಗಿ ಯಾವನೇ ವ್ಯಕ್ತಿಗೆ ಬೇಸಾಯದ ಭೂಮಿಗಳನ್ನು ಹಂಗಾಮಿಯಾಗಿ ಗುತ್ತಿಗೆಗೆ ಕೊಟ್ಟಿದ್ದರೆ ಮತ್ತು ಆ ಭೂಮಿಯನ್ನು ಅನಂತರ ಆ ಗುತ್ತಿಗೆದಾರನಿಗೆ ಮಂಜೂರು ಮಾಡಬೇಕೆಂದು ಉದ್ದೇಶಿಸಿದ್ದರೆ ಮತ್ತು ಗುತ್ತಿಗೆಯ ಎಲ್ಲ ಷರತ್ತುಗಳನ್ನು ಪಾಲಿಸಿದ್ದರೆ, 12ನೇ ನಿಯಮಕ್ಕನುಸಾರವಾಗಿ ಡೆಪ್ಯುಟಿ ಕಮೀಷನರನು ಗೊತ್ತು ಮಾಡಿದ ಬೆಲೆಯನ್ನು ಸಂದಾಯ ಮಾಡಿದ ಮೇಲೆ ಅಂಥ ಭೂಮಿಗಳನ್ನು ಗುತ್ತಿಗೆದಾರನಿಗೆ ಅವನು ಮಂಜೂರಾತಿ ಮಾಡಬಹುದು.
(2) ಈ ನಿಯಮಗಳು ಜಾರಿಗೆ ಬಂದ ತರುವಾಯ, ಭೂಮಿಗಳನ್ನು ಸಾಗುವಳಿಗಾಗಿ ಹಂಗಾಮಿಯಾಗಿ ಕೊಟ್ಟಿದ್ದರೆ ಮತ್ತು ಗುತ್ತಿಗೆದಾರನು ಗುತ್ತಿಗೆಯ ಎಲ್ಲ ಷರತ್ತುಗಳನ್ನು ಪೂರೈಸಿದ್ದರೆ, ಗುತ್ತಿಗೆದಾರನು ಭೂರಹಿತ ವ್ಯಕ್ತಿಯಾಗಿದ್ದರೆ ಅಥವಾ ಸಾಕಷ್ಟು ಭೂಮಿಯಿಲ್ಲದವನಾಗಿದ್ದರೆ, ಡೆಪ್ಯುಟಿ ಕಮೀಷನರು ಗೊತ್ತು ಮಾಡಬಹುದಾದ ಬೆಲೆಯನ್ನು ಸಂದಾಯ ಮಾಡಿದ ಮೇಲೆ ಅಂಥ ಭೂಮಿಯನ್ನು ಗುತ್ತಿಗೆದಾರನಿಗೆ ಅವನು ಮಂಜೂರು ಮಾಡಬಹುದು.
(3) ಗುತ್ತಿಗೆಯ ಅವಧಿಯು ಮುಕ್ತಾಯವಾದರೆ ಮತ್ತು ಗುತ್ತಿಗೆದಾರನಿಗೆ ಭೂಮಿಯನ್ನು ಮಂಜೂರು ಮಾಡುವ ಪ್ರಸ್ತಾಪವು ಪರಿಶೀಲನೆಯಲ್ಲಿದ್ದರೆ, ಅಂಥ ಪ್ರಸ್ತಾಪದ ಬಗ್ಗೆ ಡೆಪ್ಯುಟಿ ಕಮೀಷನರು ಆದೇಶ ಮಾಡುವ ಕಾಲದವರೆಗೆ ಗುತ್ತಿಗೆಯ ಅವಧಿಯನ್ನು ಮುಂದುವರಿಸಲಾಗಿದೆಯೆಂದು ಭಾವಿಸತಕ್ಕದ್ದು.
- ಸಮಾಲೋಚನಾ ಸಮಿತಿಗಳ ರಚನೆ.- (1) ರಾಜ್ಯ ಸರ್ಕಾರವು, ಆದೇಶದ ಮೂಲಕ, ಪ್ರತಿಯೊಂದು ತಾಲ್ಲೂಕಿಗೆ ತಾನು ನಿರ್ಧರಿಸಬಹುದಾದಂಥ ಸಂಖ್ಯೆಯಷ್ಟು ಸರಕಾರಿ ಮತ್ತು ಖಾಸಗಿ ಸದಸ್ಯರನ್ನು ಒಳಗೊಂಡ ಸಮಾಲೋಚನಾ ಸಮಿತಿಯನ್ನು ತಾನು ನಿರ್ಧರಿಸಬಹುದಾದಂಥ ಅವಧಿಗಾಗಿ ರಚಿಸಬಹುದು;
(2) ಸಮಿತಿಯ ಸದಸ್ಯರುಗಳನ್ನು ರಾಜ್ಯ ಸರ್ಕಾರವು ನಾಮನಿರ್ದೇಶಿಸತಕ್ಕದ್ದು;
(3) ರಾಜ್ಯ ಸರ್ಕಾರಕ್ಕೆ, ಅದು ತಾನು ಸೂಕ್ತವೆಂದು ಭಾವಿಸಿದರೆ, ಯಾವ ಕಾಲದಲ್ಲೇ ಅಗಲಿ, ಸಮಿತಿಯ ಸದಸ್ಯರಲ್ಲಿ ಬದಲಾವಣೆಗಳನ್ನು ಮಾಡಲು ಅಧಿಕಾರವಿರತಕ್ಕದ್ದು;
(4) ಸಂಬಂಧಪಟ್ಟ ತಾಲ್ಲೂಕಿನಲ್ಲಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಸುವುದೂ ಸೇರಿ ಬೇಸಾಯೋದ್ದೇಶ ಗಳಿಗಾಗಿ ಭೂಮಿಯನ್ನು ಮಂಜೂರು ಮಾಡುವ ಬಗೆಗಿನ ಎಲ್ಲ ಅರ್ಜಿಗಳ ಸಂಬಂಧದಲ್ಲಿ ಸಮಿತಿಯೊಡನೆ ಸಮಾಲೋಚನೆ ನಡೆಸತಕ್ಕದ್ದು ಮತ್ತು ಸಮಿತಿಯ ಶಿಫಾರಸ್ಸುಗಳನ್ನು ಭೂಮಂಜೂರಾತಿಯ ಅಧಿಕಾರವಿರುವ ಅಧಿಕಾರಿಯು ಸಾಮಾನ್ಯವಾಗಿ ಅಂಗೀಕರಿಸತಕ್ಕದ್ದು.
- ಮಂಜೂರಾತಿಯ ರದ್ದಿಯಾತಿ.- ಸುಳ್ಳು ಅಥವಾ ಮೋಸಕರವಾದ ಸಂಗತಿಗಳ ಹೇಳಿಕೆಯ ಮೂಲಕ ಭೂಮಿಯನ್ನು ಪಡೆದಿರುವಲ್ಲಿ ಅಥವಾ ಅದು ಈ ನಿಯಮಗಳಿಗೆ ವಿರುದ್ಧವಾಗಿರುವಲ್ಲಿ, ಈ ನಿಯಮಗಳ ಮೇರೆಗೆ ಮಾಡಿದ ಯಾವುದೇ ಭೂಮಿಯ ಮಂಜೂರಾತಿಯು ರದ್ದಿಯಾತಿಗೆ ಒಳಪಟ್ಟಿರತಕ್ಕದ್ದು ಮತ್ತು ಭೂಮಂಜೂರಾತಿ ಅಧಿಕಾರಿಗೆ ಅದನ್ನು ಹಿಂದಕ್ಕೆ ಪಡೆಯಲು ಅವಕಾಶವಿರತಕ್ಕದ್ದು.
ಪರಂತು, ಭೂಮಂಜುನಾತಿ ಪಡೆದವನಿಗೆ ಅಹವಾಲು ಹೇಳಿಕೊಳ್ಳಲು ಅವಕಾಶವನ್ನು ಕೊಡದೆ ಹಾಗೆ ರದ್ದು ಮಾಡತಕ್ಕದ್ದಲ್ಲ.
-
ಭೂಮಂಜುರಾತಿಯು ವಿವೇಚನಾತ್ಮಕವಾಗಿರುವುದು.- ಈ ನಿಯಮಗಳಲ್ಲಿ ಇರುವುದು ಯಾವುದೂ, ಯಾವನೇ ವ್ಯಕ್ತಿಗೆ ಯಾವುದೇ ಭೂಮಿಯ ಮಂಜೂರಾತಿಯನ್ನು ಪಡೆಯುವ ಯಾವುದೇ ಅಧಿಕಾರವನ್ನು ಕೊಡುವುದೆಂದು ಭಾವಿಸತಕ್ಕದ್ದಲ್ಲ.
-
ರಾಜ್ಯ ಸರ್ಕಾರದ ಅಧಿಕಾರಗಳು.- ಈ ಹಿಂದಿನ ನಿಯಮಗಳಲ್ಲಿ ಏನೇ ಇದ್ದರೂ, ರಾಜ್ಯ ಸರ್ಕಾರವು ತಾವಾಗಿಯೇ ಅಥವಾ ಡಿವಿಜನಲ್ ಕಮೀಷನರ ಅಥವಾ ಡೆಪ್ಯುಟಿ ಕಮೀಷನರ ಶಿಫಾರಸ್ಸಿನ ಮೇಲೆ, ಯಾವುದೇ ಪ್ರಕರಣದ ಅಥವಾ ಪ್ರಕರಣಗಳ ವರ್ಗಗಳ ಸಂದರ್ಭದಲ್ಲಿ, ಈ ನಿಯಮಗಳ ಯಾವುವೇ ಉಪಬಂಧಗಳನ್ನು ಸಡಿಲಗೊಳಿಸುವುದು ನ್ಯಾಯವೆಂದು ಮತ್ತು ಯುಕ್ತವೆಂದು ಅಭಿಪ್ರಾಯಪಟ್ಟರೆ, ಅದು ಅಂಥ ಸಡಿಲಿಕೆಗೆ ಕಾರಣಗಳನ್ನು ಅಭಿಲೇಖಿಸಿ, ಆದೇಶಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಷರತ್ತುಗಳಿಗೆ ಒಳಪಟ್ಟು, ಅಂಥ ಸಡಿಲಿಕೆಗೆ ಆದೇಶ ಮೂಲಕ ನಿರ್ದೇಶಿಸಬಹುದು ಮತ್ತು ಅನಂತರ ಅಂಥ ನಿರ್ದೇಶನಕ್ಕನುಸಾರವಾಗಿ ಅಂಥ ಪ್ರಕರಣದಲ್ಲಿ ಅಥವಾ ಪ್ರಕರಣಗಳ ವರ್ಗಗಳ ಸಂಬಂಧದಲ್ಲಿ ಭೂಮಿಯನ್ನು ಮಂಜೂರು ಮಾಡಬಹುದು.
-
ಭೂ ಮಂಜೂರಾತಿ ಪಡೆದವರು ಒಪ್ಪಂದ ಪತ್ರವನ್ನು ಬರೆದುಕೊಡತಕ್ಕದ್ದು.- (1) ಈ ನಿಯಮಗಳ ಮೇರೆಗೆ ಬೇಸಾಯೋದ್ದೇಶಗಳಿಗಾಗಿ ಭೂಮಂಜೂರಾತಿಯನ್ನು ಪಡೆದಿರುವ ವ್ಯಕ್ತಿಯು 5ನೇ ನಮೂನೆಯಲ್ಲಿ ಒಂದು ಒಪ್ಪಂದ ಪತ್ರವನ್ನು ಬರೆದುಕೊಡತಕ್ಕದ್ದು.
(2) ಈ ನಿಯಮಗಳ ಮೇರೆಗೆ ಬೇಸಾಯೇತರ ಉದ್ದೇಶಗಳಿಗಾಗಿ ಭೂಮಂಜೂರಾತಿಯನ್ನು ಪಡೆದಿರುವ ಪ್ರತಿಯೊಬ್ಬ ವ್ಯಕ್ತಿಯು 4ನೇ ನಮೂನೆಯಲ್ಲಿ ಒಂದು ಒಪ್ಪಂದ ಪತ್ರವನ್ನು ಬರೆದು ಕೊಡತಕ್ಕದ್ದು:
ಪರಂತು, ಕರ್ನಾಟಕ ಗೃಹ ನಿರ್ಮಾಣ ಮಂಡಲಿಗೆ, ಗ್ರಾಮ ಪಂಚಾಯಿತಿಗೆ ಅಥವಾ ತಾಲ್ಲೂಕು ಅಭಿವೃದ್ಧಿ ಮಂಡಳಿಗೆ ಭೂಮಿಯನ್ನು ಮಂಜೂರು ಮಾಡಿರುವಾಗ, ಭೂಮಿಗಳನ್ನು ಪರಭಾರೆ ಮಾಡತಕ್ಕದ್ದಲ್ಲ ಎಂಬ ಷರತ್ತು ಅವುಗಳಿಗೆ ಅನ್ವಯಿಸತಕ್ಕದ್ದಲ್ಲ.
28ಕ. ಬಿಟ್ಟುಕೊಟ್ಟ ಭೂಮಿಗೆ ಬದಲಾಗಿ ಭೂಮಿಯ ಮಂಜೂರಾತಿ.- (1) ಈ ನಿಯಮಗಳಲ್ಲಿ ಏನೇ ಇದ್ದರೂ, ಯಾವನೇ ವ್ಯಕ್ತಿಯು ರಾಜ್ಯ ಭೂಮಿಯನ್ನು ಮಂಜೂರು ಮಾಡಬಹುದು, ಅಂದರೆ,-
(i) ಮಾರ್ಗ ಬದಲಾವಣೆಯಿಂದಾಗಿ, ಒಂದು ಖಾಸಗಿ ಭೂಮಿಯ ಮೂಲಕ ನದಿ, ಜಲ ಮಾರ್ಗ ಅಥವಾ ಗಾಡಿ ದಾರಿಯು ಹಾದು ಹೋದರೆ;
ಪರಂತು, ಪ್ರತಿಯಾಗಿ ಮಂಜೂರು ಮಾಡಬೇಕಾದ ಭೂಮಿಯು ರೆವೆನ್ಯೂ ದಾಖಲೆಗಳಲ್ಲಿ ನದಿ, ಜಲಮಾರ್ಗ ಅಥವಾ ಗಾಡಿ ದಾರಿಯೆಂದು ನೊಂದಾಯಿತವಾದ ಭೂಮಿಯಾಗಿರತಕ್ಕದ್ದು;
(ii) ನಾಲೆ ಅಥವಾ ಕಾಲುದಾರಿಯು ಒಬ್ಬ ವ್ಯಕ್ತಿಯ ಖಾಸಗಿ ಭೂಮಿಯನ್ನು ಎರಡಾಗಿ ವಿಭಜಿಸಿದರೆ ಮತ್ತು ಅದನ್ನು ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಅಂಥ ಭೂಮಿಯ ಮೇರೆಯ ಉದ್ದಕ್ಕೂ ತಿರುಗಿಸಬಹುದಾದರೆ;
(iii) ನಾಲೆ ಅಥವಾ ಕಾಲುದಾರಿಯ ಮಾರ್ಗವನ್ನು ನೇರವಾಗಿ ಮಾಡಲು ಖಾಸಗಿ ಭೂಮಿಯು ಅಗತ್ಯವಾಗಿದ್ದರೆ;
(iv) ಖಾಸಗಿ ಭೂಮಿಯು ನೀರಾವರಿ ಕೆರೆ ಅಥವಾ ನದಿಯ ಅಂಗಳದಲ್ಲಿದ್ದರೆ ಮತ್ತು ರಾಜ್ಯ ಸರ್ಕಾರವು ಅಂಥ ಭೂಮಿಯನ್ನು ವಹಿಸಿಕೊಳ್ಳಲು ಅಪೇಕ್ಷಿಸಿದರೆ;
(v) ಪ್ರತಿ ಸಂದರ್ಭದಲ್ಲಿ ಐದು ಹೆಕ್ಟೇರುಗಳನ್ನು ಮೀರದ ಖಾಸಗಿ ಭೂಮಿಯ ಚಾವಡಿಗಳ, ದನದ ದೊಡ್ಡಿಗಳ, ಬಾವಿಗಳ, ಶಾಲೆಗಳ ನಿರ್ಮಾಣದಂಥ ಸಾರ್ವಜನಿಕ ಉದ್ದೇಶಕ್ಕೆ ಅಥವಾ ಯಾವುದೇ
ನೀರಾವರಿ ಕಾಮಗಾರಿಯ ಸಣ್ಣಪುಟ್ಟ ಅಭಿವೃದ್ಧಿಗೆ ಅಥವಾ ದನದ ಉಚಿತ ಗೋಮಾಳಕ್ಕಾಗಿ ಅಂಥ ಭೂಮಿಯನ್ನು ಪ್ರತ್ಯೇಕವಾಗಿಡುವುದಕ್ಕೆ ಅಗತ್ಯವಾದರೆ;
(vi) ಸರ್ಕಾರದ ಯಾವುದೇ ಕಾರ್ಯದ ಮೂಲಕ ಖಾಸಗಿ ಭೂಮಿ ಅಥವಾ ಅದರ ಯಾವುದೇ ಭಾಗವು ಬೆಲೆಬಾಳದಂತಾಗಿದ್ದರೆ ಅಥವಾ ಬೆಲೆಯಲ್ಲಿ ಕಡಿಮೆಯಾಗಿದ್ದರೆ;
(vii) ಗ್ರಾಮ ನಿವೇಶನಗಳ ವಿಸ್ತರಣೆಗಾಗಿ ಖಾಸಗಿ ಭೂಮಿಯು ಅಗತ್ಯವಾಗಿದ್ದರೆ;
(2) ತಾನು ಬಿಟ್ಟ ಕೊಡಬೇಕಾದ ಭೂಮಿಯ ಬದಲಾಗಿ ಭೂಮಿಯ ಮಂಜೂರಾತಿಯನ್ನು ಆಪೇಕ್ಷಿಸುವ ಯಾವನೇ ವ್ಯಕ್ತಿಯು ಈ ಕೆಳಕಂಡ ವಿವರಗಳನ್ನು ಕೊಟ್ಟು 8ನೇ ನಮೂನೆಯಲ್ಲಿ ಡೆಪ್ಯುಟಿ ಕಮೀಷನರಿಗೆ ಒಂದು ಲಿಖಿತ ಅರ್ಜಿಯನ್ನು ಸಲ್ಲಿಸತಕ್ಕದ್ದು.-
(i) ಅರ್ಜಿದಾರನ ಹೆಸರು, ವಯಸ್ಸು ಮತ್ತು ವಿಳಾಸ;
(ii) ಬಿಟ್ಟುಕೊಡಬೇಕೆಂದು ಉದ್ದೇಶಿಸಿದ ಭೂಮಿಯ ವಿಸ್ತೀರ್ಣ ಮತ್ತು ವಿವರಗಳು;
(iii) ಕೇಳಲಾಗಿರುವ ಭೂಮಿಯ ವಿಸ್ತೀರ್ಣ ಮತ್ತು ವಿವರಗಳು ಅಂದರೆ, ಆ ಭೂಮಿಯ ಸರ್ವೆ ನಂಬರು, ಅದು ಇರುವ ಗ್ರಾಮ, ತಾಲ್ಲೂಕು, ಉಪವಿಭಾಗ;
(3) ಮಂಜೂರು ಮಾಡಬೇಕಾದ ಭೂಮಿಯ ಮೌಲ್ಯವು ಒಂದು ನೂರು ರೂಪಾಯಿಗಳನ್ನು ಮೀರುವ ಎಲ್ಲ ಸಂದರ್ಭಗಳಲ್ಲಿ, ಅರ್ಜಿಯ ಜೊತೆಗೆ ಬಿಟ್ಟು ಕೊಡಬೇಕಾದ ಭೂಮಿಯ ಬಗೆಗಿನ ಪೂರ್ವಾಧಿ ಪ್ರಮಾಣ ಪತ್ರವು ಇರತಕ್ಕದ್ದು:
ಪರಂತು, ಇತರ ಸಂದರ್ಭಗಳಲ್ಲಿ ಅಂಥ ಪೂರ್ವಾಧಿ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕೆಂದು ಕೇಳಿದರೆ, ಅರ್ಜಿದಾರನು ಹಾಗೆ ಹಾಜರುಪಡಿಸತಕ್ಕದ್ದು.
- ಡೆಪ್ಯುಟಿ ಕಮೀಷನರು, ಅಂಥ ಅರ್ಜಿಯು ಬಂದ ಮೇಲೆ, ತಾನು ಸೂಕ್ತವೆಂದು ಆಲೋಚಿಸುವಂಥ ವಿಚಾರಣೆಯನ್ನು ಮಾಡತಕ್ಕದ್ದು ಮತ್ತು ಅರ್ಜಿದಾರನು ಬಿಟ್ಟು ಕೊಟ್ಟ ಭೂಮಿಗೆ ಬದಲಾಗಿ ಈ ನಿಯಮದ ಮೇರೆಗೆ ಭೂಮಿಯ ಮಂಜೂರಾತಿಗೆ ಅರ್ಹನೆಂದು ತನಗೆ ಮನದಟ್ಟಾದರೆ, ಬಿಟ್ಟು ಕೊಡಬೇಕಾದ ಭೂಮಿಯ ಹಾಗೂ ಮಂಜೂರು ಮಾಡಬೇಕಾದ ಭೂಮಿಯ ಮಾರುಕಟ್ಟೆ ಮೌಲ್ಯವನ್ನು ಅವನು ನಿರ್ಧರಿಸತಕ್ಕದ್ದು. ತದನಂತರ ಅವನು ಅಂಥ ಭೂಮಿಯ ಮೌಲ್ಯವು ಒಂದು ಸಾವಿರ ರೂಪಾಯಿಗಳಿಗಿಂತ ಹೆಚ್ಚಾಗಿಲ್ಲದಿದ್ದರೆ, ಭೂಮಿಯನ್ನು ಮಂಜೂರು ಮಾಡುವ ಆದೇಶವನ್ನು ಹೊರಡಿಸಬಹುದು. ಮೌಲ್ಯವು ಒಂದು ಸಾವಿರ ರೂಪಾಯಿಗಳನ್ನು ಮೀರಿದ್ದರೆ, ಅವನು ಆ ಅರ್ಜಿಯನ್ನು ಆ ಬಗೆಗಿನ ತನ್ನ ವರದಿಯೊಡನೆ ಡಿವಿಜನಲ್ ಕಮೀಷನರಿಗೆ ಒಪ್ಪಿಸತಕ್ಕದ್ದು. ಅಂಥ ಭೂಮಿಯ ಮೌಲ್ಯವು ಹತ್ತು ಸಾವಿರ ರೂಪಾಯಿಗಳನ್ನು ಮೀರದಿದ್ದರೆ ಡಿವಿಜನಲ್ ಕಮೀಷನರು ಭೂಮಿಯನ್ನು ಮಂಜೂರು ಮಾಡುವ ಆದೇಶವನ್ನು ಹೊರಡಿಸಬಹುದು. ಮೌಲ್ಯವು ಹತ್ತು ಸಾವಿರ ರೂಪಾಯಿಗಳನ್ನು ಮೀರಿದರೆ, ದಾಖಲೆಗಳನ್ನು ರಾಜ್ಯ ಸರ್ಕಾರಕ್ಕೆ ಒಪ್ಪಿಸತಕ್ಕದ್ದು; ಅದು ಅಂಥ ಭೂಮಿಯನ್ನು ಮಂಜೂರು ಮಾಡುವ ಆದೇಶಗಳನ್ನು ಹೊರಡಿಸಬಹುದು.
(5) ಈ ನಿಯಮದ ಮೇರೆಗಿನ ಭೂಮಿಯ ಮಂಜೂರಾತಿಯು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರತಕ್ಕದ್ದು, ಅಂದರೆ:-
(i) ಮಂಜೂರಾತಿಯು 9 ಮತ್ತು 13ನೇ ನಿಯಮಗಳ ಉಪಬಂಧಗಳಿಗೆ ಒಳಪಟ್ಟಿರತಕ್ಕದ್ದು;
(ii) ಬಿಟ್ಟು ಕೊಡಬೇಕಾದ ಭೂಮಿಯ ಬಗ್ಗೆ ಅರ್ಜಿದಾರನು ಸಂಪೂರ್ಣ ಹಕ್ಕನ್ನು ಹೊಂದಿರಬೇಕು;
(iii) ಮಂಜೂರು ಮಾಡಬೇಕಾದ ಭೂಮಿಯ ಮೌಲ್ಯವು ಬಿಟ್ಟು ಕೊಡಬೇಕಾದ ಭೂಮಿಯ ಮೌಲ್ಯಕ್ಕಿಂತ ಸಾಧ್ಯವಾದ ಮಟ್ಟಿಗೆ ಹೆಚ್ಚಾಗಿರತಕ್ಕದ್ದಲ್ಲ ಮತ್ತು ಮೌಲ್ಯದಲ್ಲಿ ಏನಾದರೂ ವ್ಯತ್ಯಾಸವಿದ್ದರೆ ಅದನ್ನು ಅರ್ಜಿದಾರನು ಸಂದಾಯ ಮಾಡತಕ್ಕದ್ದು.
-
ಅನುಮತಿ ಪತ್ರದ ನಮೂನೆ.- ಅಧಿನಿಯಮದ 93ನೇ ಪ್ರಕರಣದ ಮೇರೆಗೆ ಕೊಡಲಾದ ಅನುಮತಿಯು 7ನೇ ನಮೂನೆಯಲ್ಲಿರತಕ್ಕದ್ದು. ಮಂಜೂರು ಮಾಡಲಾದ ಭೂಮಿಯ ನಕಾಶೆಯನ್ನು ಸದರಿ ನಮೂನೆಗೆ ಲಗತ್ತಿಸಿರತಕ್ಕದ್ದು. ನಕಾಶೆಯ ಖರ್ಚನ್ನು ಭೂಮಂಜೂರಾತಿ ಪಡೆದವನಿಂದ ವಸೂಲು ಮಾಡತಕ್ಕದ್ದು.
-
ನಿರಸನ ಮತ್ತು ಉಳಿಸುವಿಕೆಗಳು.- ಕರ್ನಾಟಕ ಭೂಮಂಜೂರಾತಿ ನಿಯಮಗಳು, 1968 ಮತ್ತು ಕರ್ನಾಟಕ ಭೂಕಂದಾಯ (ತಿದ್ದುಪಡಿ) ನಿಯಮಗಳು 1967, (ನಿಯಮ 93-ಕ) ಈ ಮೂಲಕ ನಿರಸಿತವಾಗಿವೆ.-
ಪರಂತು, ನಿರಸನದಿಂದಾಗಿ ಕೆಳಕಂಡವುಗಳಿಗೆ ಏನೂ ಬಾಧಕವಾಗುವುದಿಲ್ಲ.
(ಕ) ಹಾಗೆ ನಿರಸಿತವಾದ ಯಾವುದೇ ನಿಯಮದ ಪ್ರಕಾರ ಈ ಹಿಂದೆ ನಡೆದ ಯಾವುದೇ ನಡವಳಿಕೆ ಅಥವಾ ಅದರ ಮೇರೆಗೆ ಕ್ರಮಬದ್ಧವಾಗಿ ಮಾಡಿದ ಅಥವಾ ಮಾಡಲು ಅವಕಾಶ ಕೊಟ್ಟ ಯಾವುದೇ ಕಾರ್ಯ;
(ಖ) ಹಾಗೆ ನಿರಸಿತವಾದ ಯಾವುದೇ ನಿಯಮದ ಮೇರೆಗೆ ಅರ್ಜಿಸಿದ, ಒದಗಿಬಂದ ಅಥವಾ ವಹಿಸಿದ ಯಾವುದೇ ಹಕ್ಕು, ವಿಶೇಷಾಧಿಕಾರ, ಬಾಧ್ಯತೆ ಅಥವಾ ಹೊಣೆಗಾರಿಕೆ;
(ಗ) ಹಾಗೆ ನಿರಸಿತವಾದ ಯಾವುದೇ ನಿಯಮದ ವಿರುದ್ಧವಾಗಿ ಮಾಡಲಾದ ಯಾವುದೇ ಉಲ್ಲಂಘನೆ ಅಥವಾ ಅಪರಾಧದ ಸಂಬಂಧದಲ್ಲಿ ಆದ ಯಾವುದೇ ದಂಡ, ಮುಟ್ಟುಗೋಲು ಅಥವಾ ದಂಡನೆ; ಅಥವಾ
(ಘ) ಮೇಲೆ ಹೇಳಿದ ಯಾವುದೇ ಹಕ್ಕು, ವಿಶೇಷಾಧಿಕಾರ, ಬಾಧ್ಯತೆ, ಹೊಣೆಗಾರಿಕೆ, ದಂಡ, ಮುಟ್ಟುಗೋಲು ಅಥವಾ ದಂಡನೆಯ ಸಂಬಂಧದಲ್ಲಿನ ಯಾವುದೇ ತನಿಖೆ ಅಥವಾ ಕಾನೂನು ವ್ಯವಹರಣೆ ಅಥವಾ ಪರಿಹಾರ ಕ್ರಮ;
ಅಂಥ ನಿಯಮವು ನಿರಸಿತವಾಗಿಲ್ಲದಿದ್ದರೆ ಹೇಗೋ ಹಾಗೆ ಯಾವುದೇ ಕಾನೂನು ವ್ಯವಹರಣೆ ಅಥವಾ ಪರಿಹಾರ ಕ್ರಮವನ್ನು ಹೂಡಬಹುದು, ಮುಂದುವರಿಸಬಹುದು ಅಥವಾ ಜಾರಿಯಲ್ಲಿ ತರಬಹುದು ಮತ್ತು ಅಂಥ ಯಾವುದೇ ದಂಡ, ಮುಟ್ಟುಗೋಲು ಅಥವಾ ದಂಡನೆಯನ್ನು ವಿಧಿಸಬಹುದು;
ಮತ್ತು ಪರಂತು, ಹಿಂದಿನ ಪರಂತುಕಕ್ಕೆ ಒಳಪಟ್ಟು ಅಂಥ ಯಾವುದೇ ನಿಯಮದ ಮೇರೆಗೆ ಮಾಡಿದ ಯಾವುದೇ ಕಾರ್ಯವನ್ನು ಅಥವಾ ಕೈಕೊಂಡ ಯಾವುದೇ ಕ್ರಮವನ್ನು (ಹೊರಡಿಸಿದ ಯಾವುದೇ ಅಧಿಸೂಚನೆ, ಆದೇಶ, ಅನುದೇಶ ಅಥವಾ ನಿರ್ದೇಶನಗಳು ಸೇರಿ) ಈ ನಿಯಮದ ಸಂವಾದಿ ಉಪಬಂಧಗಳ ಮೇರೆಗೆ, ಮಾಡಲಾಗಿದೆ ಅಥವಾ ಕೈಕೊಳ್ಳಲಾಗಿದೆ ಎಂಬಂತೆ ಭಾವಿಸತಕ್ಕದ್ದು; ಮತ್ತು ಅವು, ಸಂದರ್ಭಾನುಸಾರ, ಈ ಅಧಿನಿಯಮದ ಅಥವಾ ಈ ನಿಯಮಗಳ ಮೇರೆಗೆ ಮಾಡಿದ ಯಾವುದೇ ಕಾರ್ಯ ಅಥವಾ ಕೈಗೊಂಡ ಯಾವುದೇ ಕ್ರಮದಿಂದ ರದ್ದಾದ ಹೊರತು ಮತ್ತು ರದ್ದಾಗುವವರೆಗೆ ಅದಕ್ಕನುಸಾರವಾಗಿ ಜಾರಿಯಲ್ಲಿ ಮುಂದುವರಿಯತಕ್ಕದ್ದು.
- ನಿರಸನ ನಿಯಮಗಳು ಕೆಲವು ಅಡಮಾನಗಳಿಗೆ ಅನ್ವಯಿಸತಕ್ಕದ್ದಲ್ಲ.- ಕರ್ನಾಟಕ ಭೂಮಂಜೂರಾತಿ ನಿಯಮಗಳು, 1968ರ 12ನೇ ನಿಯಮದ (vi)ನೇ ಖಂಡದಲ್ಲಿ ಅಥವಾ ಸದರಿ ನಿಯಮಗಳ 40ನೇ ನಿಯಮದಿಂದ ನಿರಸಿತವಾದ ಯಾವುವೇ ನಿಯಮಗಳ ಸಂವಾದಿ ಉಪಬಂಧಗಳಲ್ಲಿ ಇರುವ ಯಾವುದು, ಸದರಿ ನಿಯಮಗಳ ಮೇರೆಗೆ ಮಂಜೂರಾದ ಭೂಮಿಯನ್ನು, ಅಂಥ ಭೂಮಿಯ ಆಭಿವೃದ್ಧಿಗಾಗಿ ಅಥವಾ ಅಂಥ ಭೂಮಿಯ ಸಾಗುವಳಿಗಾಗಿ ದನಗಳನ್ನು ಅಥವಾ ಬೇಸಾಯದ ಉಪಕರಣಗಳನ್ನು ಕೊಳ್ಳುವುದಕ್ಕಾಗಿ ಅನುಸೂಚಿತ ಬ್ಯಾಂಕಿಗೆ ಅಥವಾ ಕೃಷಿ ಪುನರ್ವಿತ್ತ ನಿಗಮಕ್ಕೆ ಅಥವಾ ಕರ್ನಾಟಕ ರಾಜ್ಯದ ಕೃಷಿ ಕೈಗಾರಿಕೆ ನಿಗಮಕ್ಕೆ ಅಡಮಾನ ಮಾಡುವುದಕ್ಕೆ ಅನ್ವಯಿಸತಕ್ಕದ್ದಲ್ಲ.