(1) ಎಲ್ಲ ಕಂದಾಯವನ್ನು ಗ್ರಾಮ ಲೆಕ್ಕಗನಿಗೆ ಸಂದಾಯ ಮಾಡತಕ್ಕದ್ದು ಮತ್ತು ಅವನು 36ನೇ ನಮೂನೆಯಲ್ಲಿ ಅದರ ಎರಡು ಭಾಗಗಳನ್ನು ಉಪಯೋಗಿಸಿ, ದ್ವಿಪ್ರತಿಯಲ್ಲಿ ರಸೀತಿಗಳನ್ನು ತಯಾರಿಸತಕ್ಕದ್ದು ಮತ್ತು ಎರಡನೇ ಪ್ರತಿಯನ್ನು ಹಣವನ್ನು ಸಂದಾಯ ಮಾಡುವ ವ್ಯಕ್ತಿಗೆ ಕೊಡತಕ್ಕದ್ದು.
ಪರಂತು, ಸಂದಾಯ ಮಾಡುವವನ ಇಚ್ಛಾನುಸಾರ ಅಂಥ ಕಂದಾಯವನ್ನು,-
(ಕ) ಭೂಮಿಯು ಇರುವ ತಾಲ್ಲೂಕಿನ ಖಜಾನೆಗೆ;
(ಖ) ಡೆಪ್ಯುಟಿ ಕಮಿಷನರ ಅನುಮತಿಯನ್ನು ಪಡೆದು ಜಿಲ್ಲೆಯಲ್ಲಿ ಇತರ ಯಾವುದೇ ತಾಲ್ಲೂಕು ಖಜಾನೆಗೆ ಅಥವಾ ಜಿಲ್ಲಾ ಖಜಾನೆಗೆ; ಅಥವಾ
(ಗ) ಪ್ರತಿ ಸಂದರ್ಭದಲ್ಲಿ ಕೊಡಬೇಕಾಗಿರುವ ಮೊಬಲಗಿನ, ಮತ್ತು ಯಾವ ಸ್ವತ್ತುಗಳ ಸಲುವಾಗಿ ಕಂದಾಯವನ್ನು ಸಂದಾಯ ಮಾಡಲಾಗಿದೆಯೋ ಆ ಸ್ವತ್ತುಗಳ ಪೂರ್ಣ ವಿವರಗಳನ್ನು ಕೊಡುವ ವಿವರಣ ಪತ್ರವನ್ನು ಲಗತ್ತಿಸಿ ಮನಿಯಾರ್ಡರಿನ ಮೂಲಕ ಸಂದಾಯ ಮಾಡತಕ್ಕದ್ದು.
(2) ಜಿಲ್ಲಾ ಖಜಾನೆಗೆ ಅಥವಾ ತಾಲ್ಲೂಕು ಖಜಾನೆಗೆ ಅಥವಾ ಮನಿಯಾರ್ಡರಿನ ಮೂಲಕ ಯಾವುದೇ ಸಂದಾಯವನ್ನು ಮಾಡಿದಾಗ, ಅಂಥ ಸಂದಾಯವು ಮಾರಾಟವನ್ನು ನಡೆಸುವ ಅಧಿಕಾರಿಯ ಮುಂದೆ ಆ ಸಂದಾಯದ ಬಗೆಗಿನ ರಸೀತಿಯನ್ನು ಹಾಜರುಪಡಿಸುವುದಕ್ಕೆ ಮೊದಲು ಮಾಡಿದ ಯಾವುದೇ ಮಾರಾಟದ ಮೇಲೆ ಪರಿಣಾಮವುಂಟು ಮಾಡತಕ್ಕದ್ದಲ್ಲ.
(3) ಅಂಥ ಯಾವುದೇ ಸಂದಾಯವನ್ನು ಪಡೆಯುವ ಖಜಾನೆಯ ಅಧಿಕಾರಿಗಳು ಆ ಬಗ್ಗೆ, ಯಾವ ತಾಲ್ಲೂಕಿನಲ್ಲಿ ಅದನ್ನು ಸಂದಾಯ ಮಾಡಬೇಕಾಗಿದೆಯೋ ಆ ತಾಲ್ಲೂಕಿನ ತಹಸೀಲ್ದಾರನಿಗೆ ತಕ್ಷಣ ತಿಳಿಸತಕ್ಕದ್ದು; ಮತ್ತು ತಹಶೀಲ್ದಾರನು ಗ್ರಾಮ ಲೆಕ್ಕಗಳಲ್ಲಿ ಅವಶ್ಯಕ ನಮೂದನೆಯನ್ನು ಮಾಡಿಸಲು ಯಾವ ವಿಳಂಬವನ್ನು ಮಾಡತಕ್ಕದ್ದಲ್ಲ.