(1) ಈ ಅಧಿನಿಯಮದ ಉಪಬಂಧಗಳಿಗೊಳಪಟ್ಟು, ಕಾರ್ಯದರ್ಶಿಯು ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾಗಿರತಕ್ಕದ್ದು ಮತ್ತು ಅವನು ಸಮಿತಿಯು ಕಾಲಕಾಲಕ್ಕೆ ಅಂಗೀಕರಿಸುವ ನಿರ್ಣಯಗಳನ್ನು ಮತ್ತು ನೀಡುವ ನಿರ್ದೇಶನಗಳನ್ನು ಕಾರ್ಯಗತಗೊಳಿಸತಕ್ಕದ್ದು.
(2) ಕಾರ್ಯದರ್ಶಿಯು ಸಮಿತಿಯ ಪರವಾಗಿ ಅಥವಾ ಅದರ ಹೆಸರಿನಲ್ಲಿ ಸ್ವೀಕರಿಸಿದ ಅಥವಾ ಖರ್ಚು ಮಾಡಿದ ಎಲ್ಲ ಹಣಗಳ ಬಗ್ಗೆ ಸರಿಯಾದ ಲೆಕ್ಕವನ್ನಿಡತಕ್ಕದ್ದು.
1 [(2ಎ) ಮಾರುಕಟ್ಟೆ ಸಮಿತಿಯ ನಿರ್ಣಯದ ಮೂಲಕ ಕಾರ್ಯದರ್ಶಿಗೆ ಸಾಮಾನ್ಯವಾಗಿ ಅಥವಾ ವಿಶೇಷವಾಗಿ ಅಧಿಕಾರ ನೀಡಿರುವ ವಿಷಯಗಳ ಸಂಬಂಧದಲ್ಲಿ ಕರಾರಿನ ಅಥವಾ ಒಪ್ಪಂದದ ಮೊತ್ತವು ಅಥವಾ ಮೌಲ್ಯವು ಒಂದು ಲಕ್ಷ ರೂಪಾಯಿಗಳನ್ನು ಮೀರದಿರುವಲ್ಲಿ ಕಾರ್ಯದರ್ಶಿಯು ಮಾರುಕಟ್ಟೆ ಸಮಿತಿಯ ಪರವಾಗಿ ಕರಾರನ್ನು ಅಥವಾ ಒಪ್ಪಂದವನ್ನು ಮಾಡಿಕೊಳ್ಳಬಹುದು.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಕ 27-1-1994ರ ಮೂಲಕ ಸೇರಿಸಲಾಗಿದೆ.
(3) ಕಾರ್ಯದರ್ಶಿಯು ಸಮಿತಿಯ ಎಲ್ಲ ಪತ್ರ ವ್ಯವಹಾರವನ್ನು ನಿರ್ವಹಿಸತಕ್ಕದ್ದು ಮತ್ತು ಕಚೇರಿಯ ಕಾರ್ಯಗಳನ್ನು ನೆರವೇರಿಸತಕ್ಕದ್ದು.
(4) ಕಾರ್ಯದರ್ಶಿಯು ಉಪವಿಧಿಗಳ ಮೂಲಕ ನಿಯಮಿಸಲಾದ ನಮೂನೆಯಲ್ಲಿ, ಮಧ್ಯಸ್ಥಗಾರರ ಮತ್ತು ವಿವಾದ ಪರಿಶೀಲನಾ ಸಮಿತಿಯ ಮುಂದೆ ತೀರ್ಮಾನಕ್ಕಾಗಿ ಬರುವ ಎಲ್ಲ ವಿವಾದಗಳ ದಾಖಲೆಗಳನ್ನು ಇಟ್ಟಿರತಕ್ಕದ್ದು.
(5) ಕಾರ್ಯದರ್ಶಿಯು, ಮಾರುಕಟ್ಟೆ ಪ್ರದೇಶದಲ್ಲಿನ ಕೃಷಿ ಉತ್ಪನ್ನದ ಮಾರುಕಟ್ಟೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಸರಿಯಾದ ತೂಕ, ಬಟವಾಡೆ, ಸಂದಾಯ ಮತ್ತು ಎಲ್ಲಾ ಇತರ ವಿಷಯಗಳ ಬಗ್ಗೆ ಜವಾಬ್ದಾರನಾಗಿರತಕ್ಕದ್ದು.
(6) ಕಾರ್ಯದರ್ಶಿಯು ಸಮಿತಿಯ ಎಲ್ಲ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಸಾಂದರ್ಭಿಕ ರಜೆಯನ್ನು ಮತ್ತು ಒಂದು ಸಲಕ್ಕೆ ಮೂವತ್ತು ದಿನಗಳಿಗೆ ಮೀರದ ಅವಧಿಯವರೆಗೆ ಗಳಿಕೆ ರಜೆಯನ್ನು ಮಂಜೂರು ಮಾಡುವ ಅಧಿಕಾರ ಹೊಂದಿರತಕ್ಕದ್ದು. ಮೂವತ್ತು ದಿನಗಳಿಗೆ ಮೀರಿದ ಗಳಿಕೆ ರಜೆಯನ್ನು ಮತ್ತು ಇತರ ಎಲ್ಲ ಬಗೆಯ ರಜೆಯನ್ನು ಕೃಷಿ ಮಾರುಕಟ್ಟೆ ಸಹಾಯಕ ನಿರ್ದೇಶಕನು ಅಥವಾ ಈ ಸಂಬಂಧದಲ್ಲಿ ಕೃಷಿ ಮಾರುಕಟ್ಟೆ ನಿರ್ದೇಶಕನಿಂದ ಅಧಿಕೃತರಾಗಬಹುದಾದಂಥ ಇತರ ಅಧಿಕಾರಿಯು ಮಂಜೂರು ಮಾಡತಕ್ಕದ್ದು.
(7) ಕಾರ್ಯದರ್ಶಿಯು ಅಧಿನಿಯಮದ, ನಿಯಮಗಳ, ಉಪವಿಧಿಗಳ ಮತ್ತು ಸಮಿತಿಯ ಹಿಂದಿನ ತೀರ್ಮಾನಗಳ ಅಥವಾ ನಿರ್ದೇಶನಗಳ ಉಪಬಂಧಗಳ ಹಿನ್ನೆಲೆಯಲ್ಲಿ ಸಮಿತಿಗೆ ಮತ್ತು ಅದರ ಅಧ್ಯಕ್ಷನಿಗೆ ಸಲಹೆ ನೀಡತಕ್ಕದ್ದು.
(8) ಕಾರ್ಯದರ್ಶಿಯು, ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯುವ ಎಲ್ಲ ನಿರ್ಮಾಣ ಕಾಮಗಾರಿಗಳ ತಾಂತ್ರಿಕ ಮೇಲ್ವಿಚಾರಣೆ ನೋಡಿಕೊಳ್ಳುವ ಇಂಜಿನಿಯರಿಂಗ್ ಸಿಬ್ಬಂದಿ ಯಾರಾದರೂ ಇದ್ದರೆ ಅವರು ನಡೆಸುವ ಆ ಮೇಲ್ವಿಚಾರಣೆಗೆ ಹೆಚ್ಚಿಗೆಯಾಗಿ ತಾನೂ ಸಹ ಮೇಲ್ವಿಚಾರಣೆ ನಡೆಸತಕ್ಕದ್ದು.
(9) ಸಮಿತಿಯ ಯಾವುವೇ ತೀರ್ಮಾನಗಳು ಅಥವಾ ಅಧ್ಯಕ್ಷನ ಅಥವಾ ಉಪಾಧ್ಯಕ್ಷನ ಯಾವುವೇ ನಿರ್ದೇಶನಗಳು ಅಧಿನಿಯಮಕ್ಕೆ, ನಿಯಮಗಳಿಗೆ ಮತ್ತು ಉಪವಿಧಿಗಳಿಗೆ ವಿರುದ್ದವಾಗಿದೆಯೆಂದು ಕಂಡು ಬಂದರೆ, ಕಾರ್ಯದರ್ಶಿಯು, ಅವುಗಳನ್ನು ಜಾರಿಗೆ ತರುವುದಕ್ಕೆ ಮುಂಚೆ, ಆ ವಿಷಯವನ್ನು ಕೃಷಿ ಮಾರುಕಟ್ಟೆ ನಿರ್ದೇಶಕನಿಗೆ ಅಥವಾ ಅವನು ಅಧಿಕೃತಗೊಳಿಸಿದ ಯಾವನೇ ಇತರ ಅಧಿಕಾರಿಗೆ ಆದೇಶಕ್ಕಾಗಿ ಒಪ್ಪಿಸತಕ್ಕದ್ದು.
ಕೃಷಿ ಮಾರುಕಟ್ಟೆ ನಿರ್ದೇಶಕನು ಅಥವಾ ಅಂಥ ಇತರ ಅಧಿಕಾರಿಯು, ಸಮಿತಿಗೆ ಅಥವಾ ಅಧ್ಯಕ್ಷನಿಗೆ ಅಥವಾ ಉಪಾಧ್ಯಕ್ಷನಿಗೆ ಅಹವಾಲು ಹೇಳಿಕೊಳ್ಳಲು ಯುಕ್ತ ಅವಕಾಶವನ್ನು ನೀಡಿದ ತರುವಾಯ ಆ ಕುರಿತು ತನ್ನ ತೀರ್ಮಾನವನ್ನು ನೀಡತಕ್ಕದ್ದು ಮತ್ತು ಅಂಥ ತೀರ್ಮಾನವು ಅಂತಿಮವಾಗಿರತಕ್ಕದ್ದು.
1 [(10) ಕಾರ್ಯದರ್ಶಿಯು, ವಿವಾದ ಪರಿಶೀಲನಾ ಸಮಿತಿಯ ಪದನಿಮಿತ್ತ ಕಾರ್ಯದರ್ಶಿ ಯಾಗಿರತಕ್ಕದ್ದು.
(11) ಕಾರ್ಯದರ್ಶಿಯು, ಮಾರುಕಟ್ಟೆ ಕಾರ್ಯನಿರ್ವಾಹಕನಿಂದ ಉಂಟಾದ ಅಧಿನಿಯಮದ, ನಿಯಮಗಳ ಅಥವಾ ಉಪವಿಧಿಗಳ ಉಪಬಂಧಗಳ ಉಲ್ಲಂಘನೆಗೆ ಸಂಬಂಧಪಟ್ಟ ವಿವರಗಳೇನಾದರೂ ಇದ್ದರೆ ಆ ವಿವರಗಳನ್ನು ಮತ್ತು ಅಂಥ ಉಲ್ಲಂಘನೆಯ ಬಗ್ಗೆ ಕೈಗೊಂಡ ಕ್ರಮವೇನಾದರೂ ಇದ್ದರೆ ಆ ಕ್ರಮವನ್ನು ಅಂಥ ಉಲ್ಲಂಘನೆಯ ತರುವಾಯ ಸಾಧ್ಯವಾದಷ್ಟು ಬೇಗನೆ ಸಮಿತಿಗೆ ತಿಳಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 44 ದಿನಾಂಕ 3-2-70ರ ಮೂಲಕ ಸೇರಿಸಲಾಗಿದೆ