ನಮೂನೆ I ರಿಂದ Ix
ಅಧಿಸೂಚನೆ
ಸಹಕಾರ ಸಚಿವಾಲಯ
ಅಧಿಸೂಚನೆ
ಸಂ. ಸಿಡಿ 58 ಎಂಆರ್ಇ 2002, ಬೆಂಗಳೂರು, ದಿನಾಂಕ 9ನೇ ಜುಲೈ, 2004
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ (1966ರ ಕರ್ನಾಟಕ ಅಧಿನಿಯಮ 27) 146ನೆಯ ಪ್ರಕರಣದ (1)ನೇ ಉಪಪ್ರಕರಣದಿಂದ ಅಗತ್ಯಪಡಿಸಲಾದಂತೆ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ನಿಯಮಗಳು, 1968ನ್ನು 23ನೆಯ ಅಕ್ಟೋಬರ್, 2003ರ ಅಧಿಸೂಚನೆ ಸಂಖ್ಯೆ ಸಿಎಇ/58/ಎಂಆರ್ ಇ/2002ನ್ನು 30ನೆಯ ಅಕ್ಟೋಬರ್ 2003ರ ರಾಜ್ಯಪತ್ರದ ಭಾಗ- iv-ಎ ವಿಶೇಷ ಸಂಚಿಕೆಯಲ್ಲಿ ನಿಯಮಗಳ ಕರಡನ್ನು ಪ್ರಕಟಿಸುವ ಮೂಲಕ, ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 30 ದಿನಗಳೊಳಗಾಗಿ ಬಾಧಕವಾಗಬಹುದಾದ ಎಲ್ಲ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದ್ದುದರಿಂದ.
ಸದರಿ ರಾಜ್ಯಪತ್ರವನ್ನು 2003ರ ಅಕ್ಟೋಬರ್ 30ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದ್ದುದರಿಂದ;
ಮತ್ತು ಮೇಲೆ ನಿರ್ದಿಷ್ಟಪಡಿಸಲಾದ ಸದರಿ ಅವಧಿಯೊಳಗಾಗಿ ಸ್ವೀಕರಿಸಿದ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿರುವುದರಿಂದ;
ಆದ್ದರಿಂದ ಈಗ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ (1966ರ ಕರ್ನಾಟಕ ಅಧಿನಿಯಮ 27) 146ನೆಯ ಪ್ರಕರಣದ (1)ನೇ ಉಪಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮುಂದಿನ ನಿಯಮಗಳನ್ನು ರಚಿಸುತ್ತದೆ, ಎಂದರೆ:-
ನಿಯಮಗಳು
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ಮಾರುಕಟ್ಟೆ ಪ್ರಾಂಗಣಗಳಲ್ಲಿ ಸ್ವತ್ತಿನ ಹಂಚಿಕೆ ನಿಯಂತ್ರಣ) ನಿಯಮಗಳು, 2004 ಎಂದು ಕರೆಯತಕ್ಕದ್ದು.
(2) ಇವು, ಈ ಕೂಡಲೇ ಜಾರಿಗೆ ಬರತಕ್ಕದ್ದು.
- ಪರಿಭಾಷೆಗಳು.- ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(1) ‘ಅಧಿನಿಯಮ' ಎಂದರೆ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 ಎಂದು ಅರ್ಥ.
(2) ‘ಹಂಚಿಕೆ ಪಡೆದವನು' ಎಂದರೆ, ಈ ನಿಯಮಗಳ ಮೇರೆಗೆ ಯಾವುದೇ ನಿವೇಶನ, ಗೋದಾಮು, ಅಂಗಡಿ, ಅಂಗಡಿ ಸಹಿತ ಗೋದಾಮು, ತೂಕದ ಯಂತ್ರ (ವೇಬ್ರಿಡ್ಜ್), ಚಿಲ್ಲರೆ
ಅಂಗಡಿಗಳು, ಕ್ಯಾಂಟೀನು, ಚಹಾದ ಅಂಗಡಿಗಳು ಅಥವಾ ಇತರ ಕಟ್ಟಡಗಳ ಹಂಚಿಕೆ ಪಡೆದವನು ಎಂದು ಅರ್ಥ.
(3) ‘ಅನುಬಂಧ' ಎಂದರೆ, ಈ ನಿಯಮಗಳಿಗೆ ಲಗತ್ತಿಸಿದ ಅನುಬಂಧಗಳು.
(4) ‘ಮೂಲೆ ನಿವೇಶನ' ಎಂದರೆ, ಕಡೆಯ ಪಕ್ಷ ಎರಡು ಬದಿಗೆ ಪರಸ್ಪರ ಲಂಬಕೋನದಲ್ಲಿರುವ, ರಸ್ತೆಗಳಿಂದ ಸುತ್ತುವರೆದಿರುವ ಮತ್ತು ಅದನ್ನು ಒಳಗೊಂಡಿರುವ ನಿವೇಶನ ಎಂದು ಅರ್ಥ.
(5) ‘ಪ್ರಸಕ್ತ ಮೌಲ್ಯ' ಎಂದರೆ, ಮಾರುಕಟ್ಟೆ ಸಮಿತಿಯು ಈಗಾಗಲೇ ಹಂಚಿಕೆ ಮಾಡಿದ ನಿವೇಶನದ ಮೌಲ್ಯ ಎಂದು ಅರ್ಥ.
(6) ‘ಇಲಾಖೆ' ಎಂದರೆ, ಕೃಷಿ ಮಾರುಕಟ್ಟೆ ಇಲಾಖೆ ಎಂದು ಅರ್ಥ.
(7) ‘ನಮೂನೆ' ಎಂದರೆ, ಈ ನಿಯಮಗಳಿಗೆ ಲಗತ್ತಿಸಿದ ನಮೂನೆ.
(8) ‘ಲೈಸೆನ್ಸು ಹೊಂದಿರುವ ಮಾರುಕಟ್ಟೆ ಕಾಂiರ್iನಿರ್ವಾಹಕ' ಎಂದರೆ, ದಲಾಲನಾಗಿ, ವ್ಯಾಪಾರಿಯಾಗಿ, ದಲ್ಲಾಳಿಯಾಗಿ, ಆಮದು ಮಾಡಿಕೊಳ್ಳುವವನಾಗಿ, ಜಿನ್ನರ್ನಾಗಿ, ಪ್ರೆಸ್ಸರ್ನಾಗಿ, ಕ್ರಶರ್ನಾಗಿ, ದಾಸ್ತಾನುದಾರನಾಗಿ, ಉಗ್ರಾಣದಾರನಾಗಿ, ರಫ್ತುದಾರನಾಗಿ ಲೈಸೆನ್ಸ್ ಹೊಂದಿರುವ ವ್ಯಕ್ತಿ ಎಂದು ಅರ್ಥ.
(9) ‘ಸೇವಾ ಸಂಸ್ಥೆಗಳು' ಇದು ಅಂಚೆ ಇಲಾಖೆಯನ್ನು, ತಂತಿ ಇಲಾಖೆಯನ್ನು, ಪೊಲೀಸು ಇಲಾಖೆಯನ್ನು, ಅಗ್ನಿಶಾಮಕ ಸೇವೆಯನ್ನು, ಬ್ಯಾಂಕನ್ನು ಮತ್ತು ಆಸ್ಪತ್ರೆಯನ್ನು ಅಥವಾ ಪಶುವೈದ್ಯಕೀಯ ಆಸ್ಪತ್ರೆಯನ್ನು ಅಥವಾ ಕಾಲಕಾಲಕ್ಕೆ ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಬಹುದಾದಂತೆ ಇತರ ಸರ್ಕಾರಿ ಕಚೇರಿಗಳನ್ನು ಒಳಗೊಳ್ಳುತ್ತದೆ.
- ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ಹಂಚಿಕೆಗಾಗಿ ನಿವೇಶನ, ಇತ್ಯಾದಿಗಳ ನೀಡಿಕೆ.- (1) ಮಾರುಕಟ್ಟೆ ಸಮಿತಿಯು, ಈ ನಿಯಮಗಳು ಮತ್ತು ರಾಜ್ಯ ಸರ್ಕಾರದ ಸಾಮಾನ್ಯ ಮತ್ತು ವಿಶೇಷ ಆದೇಶಗಳಿಗೊಳಪಟ್ಟು, ಮಾರುಕಟ್ಟೆ ಪ್ರಾಂಗಣದಲ್ಲಿ ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ನಿವೇಶನಗಳನ್ನು, ಅಂಗಡಿಗಳನ್ನು, ಗೋದಾಮುಗಳನ್ನು ಅಥವಾ ಅಂಗಡಿ ಸಹಿತ ಗೋದಾಮುಗಳನ್ನು ಹಂಚಿಕೆಗಾಗಿ ನೀಡಬಹುದು.
(2) ಅಂಥ ಹಂಚಿಕೆಗೆ ಸಂಬಂಧಪಟ್ಟಂತೆ ಸ್ಥಳವನ್ನು, ನಿವೇಶನಗಳ ಸಂಖ್ಯೆಯನ್ನು, ಗೋದಾಮುಗಳನ್ನು, ಅಂಗಡಿ ಸಹಿತ ಗೋದಾಮುಗಳು ಯಾವುವಾದರೂ ಇದ್ದರೆ ಅವುಗಳನ್ನು ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕವನ್ನು ಮತ್ತು ಅಂಥ ಇತರ ವಿವರಗಳನ್ನು ನಿರ್ದಿಷ್ಟಪಡಿಸಿ ಮಾರುಕಟ್ಟೆ ಸಮಿತಿಯ ಕಚೇರಿಯ ಸೂಚನಾ ಫಲಕದಲ್ಲಿ ನೋಟೀಸನ್ನು ಅಂಟಿಸುವ ಮೂಲಕ ಮತ್ತು ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಕ ಪ್ರಸಾರವುಳ್ಳ ಎರಡಕ್ಕಿಂತ ಕಡಿಮೆ ಇಲ್ಲದ ಕನ್ನಡ ಸಮಾಚಾರ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಸೂಕ್ತ ಪ್ರಚಾರ ನೀಡತಕ್ಕದ್ದು.
(3) ಮಾರುಕಟ್ಟೆ ಸಮಿತಿಯು, ನಿವೇಶನಗಳನ್ನು, ಗೋದಾಮುಗಳನ್ನು, ಅಂಗಡಿಗಳನ್ನು ಅಥವಾ ಅಂಗಡಿ ಸಹಿತ ಗೋದಾಮುಗಳನ್ನು ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ಹಂಚಿಕೆ ಮಾಡುವ ಸಂಬಂಧದಲ್ಲಿ ಅರ್ಜಿಗಳನ್ನು ಕರೆದಾಗ, 6ನೇ ನಿಯಮದ ಮೇರೆಗೆ ನೋಂದಾಯಿಸಿದ, ಲೈಸೆನ್ಸು ಪಡೆದ ಯಾರೇ ಮಾರುಕಟ್ಟೆ ಕಾರ್ಯನಿರ್ವಾಹಕನು ನಿವೇಶನದ, ಗೋದಾಮಿನ, ಅಂಗಡಿಯ ಅಥವಾ
ಸಂದರ್ಭಾನುಸಾರ ಅಂಗಡಿ ಸಹಿತ ಗೋದಾಮುಗಳ ಸಂಬಂಧದಲ್ಲಿ ಅದರ ಮೌಲ್ಯದ ಶೇಕಡಾ ಇಪ್ಪತ್ತೈದಕ್ಕಿಂತ ಕಡಿಮೆಯಲ್ಲದ ಆರಂಭಿಕ ಠೇವಣಿಯೊಂದಿಗೆ, ನಮೂನೆ-III ರಲ್ಲಿ ಮಾರುಕಟ್ಟೆ ಸಮಿತಿಗೆ ಅರ್ಜಿ ಸಲ್ಲಿಸತಕ್ಕದ್ದು.
(4) ಯಾರೇ ನೋಂದಾಯಿತ ಅರ್ಜಿದಾರನು ಮಾರುಕಟ್ಟೆ ಸಮಿತಿಯಿಂದ ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ನಿವೇಶನದ, ಗೋದಾಮಿನ, ಅಂಗಡಿಯ ಅಥವಾ ಅಂಗಡಿ ಸಹಿತ ಗೋದಾಮಿನ ಹಂಚಿಕೆಯನ್ನು ಪಡೆಯಲು ವಿಫಲವಾದಲ್ಲಿ, ಆ ಅರ್ಜಿದಾರನು ಆ ನೋಂದಣಿ ಪ್ರಮಾಣ ಪತ್ರವನ್ನು ಹಿಂದಿರುಗಿಸುವ ಮೂಲಕ ನೋಂದಣಿಯನ್ನು ಹಿಂದಕ್ಕೆ ಪಡೆದ ಹೊರತು, ಆ ನೋಂದಣಿಯು ನಂತರದ ಹಂಚಿಕೆಗಳಿಗೆ ಕೂಡ ಸಿಂಧುವಾಗಿರತಕ್ಕದ್ದು.
(5) ಮಾರುಕಟ್ಟೆ ಸಮಿತಿಯು, 4ನೇ, 5ನೇ, 7ನೇ ಮತ್ತು 8ನೇ ನಿಯಮಗಳ ಉಪಬಂಧಗಳನ್ನು ಗಮನದಲ್ಲಿಟ್ಟುಕೊಂಡು ಗುತ್ತಿಗೆ ಸಹಿತ ಮಾರಾಟದ ಆಧಾರದ ಮೇಲೆ ನಿವೇಶನದ, ಅಂಗಡಿಯ, ಅಂಗಡಿ ಸಹಿತ ಗೋದಾಮಿನ ಹಂಚಿಕೆ ಮಾಡಬಹುದು.
- ನಿವೇಶನ, ಇತ್ಯಾದಿಗಳ ಮೌಲ್ಯ ನಿರ್ಧರಣೆ.- (1) ಮಾರುಕಟ್ಟೆ ಸಮಿತಿಯು, ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ಹಂಚಿಕೆ ಮಾಡಬೇಕಾದ ನಿವೇಶನದ, ಅಂಗಡಿಯ, ಗೋದಾಮಿನ ಅಥವಾ ಅಂಗಡಿ ಸಹಿತ ಗೋದಾಮಿನ ಮೌಲ್ಯನಿರ್ಧರಣಾ ಪ್ರಮಾಣಪತ್ರವನ್ನು ಸಂಬಂಧಪಟ್ಟ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರನಿಂದ (ಮಾರುಕಟ್ಟೆ ಅಭಿವೃದ್ಧಿ ಯೋಜನೆ) ಪಡೆಯತಕ್ಕದ್ದು. ಅವರು, (2)ನೆಯ ಉಪನಿಯಮದ ಉಪಬಂಧಗಳನ್ನು ಗಮನದಲ್ಲಿಟ್ಟುಕೊಂಡು ಮೌಲ್ಯನಿರ್ಧರಣಾ ಪ್ರಮಾಣಪತ್ರವನ್ನು ನೀಡತಕ್ಕದ್ದು. ಮಾರುಕಟ್ಟೆ ಸಮಿತಿಯು ಯುಕ್ತ ಕಾರಣಗಳನ್ನು ಲಿಖಿತದಲ್ಲಿ ದಾಖಲಿಸಿ, ಸಹಾಯಕ ಕಾರ್ಯನಿರ್ವಾಹಕ ಇಂಜನಿಯರನು ಹಾಗೆ ನಿಗದಿಪಡಿಸಿದ ಮೌಲ್ಯವನ್ನು ಹೆಚ್ಚಿಸಬಹುದು. ಸಹಾಯಕ ಕಾರ್ಯನಿರ್ವಾಹಕ ಇಂಜನಿಯರು ಅಥವಾ ಮಾರುಕಟ್ಟೆ ಸಮಿತಿಯು ಹಾಗೆ ನಿಗದಿಪಡಿಸಿದ ಮೌಲ್ಯವು ಕೃಷಿ ಮಾರುಕಟ್ಟೆಯ ನಿರ್ದೇಶಕರ ಅನುಮೋದನೆಗೊಳಪಟ್ಟಿರತಕ್ಕದ್ದು. ಅವರು ಕಾರಣಗಳನ್ನು ದಾಖಲಿಸಿದ ನಂತರ ಅಂಥ ಮಾರ್ಪಾಟುಗಳೊಂದಿಗೆ ಅನುಮೋದನೆ ನೀಡಬಹುದು.
(2) ಗುತ್ತಿಗೆ ಸಹಿತ ಮಾರಾಟದ ಆಧಾರದ ಮೇಲೆ ಹಂಚಿಕೆ ಮಾಡುವ ನಿವೇಶನದ, ಅಂಗಡಿಯ, ಗೋದಾಮಿನ ಅಥವಾ ಅಂಗಡಿ ಸಹಿತ ಗೋದಾಮಿನ ಮೌಲ್ಯವನ್ನು ನಿರ್ಧರಿಸುವಾಗ ಈ ಕೆಳಕಂಡ ಸಂಗತಿಗಳನ್ನು ಪರಿಗಣಿಸತಕ್ಕದ್ದು:-
(i) ಹೆಚ್ಚಿನ ಪರಿಹಾರವನ್ನು ಸಂದಾಯ ಮಾಡಿರುವುದನ್ನೂ ಒಳಗೊಂಡಂತೆ ಭೂ ಸ್ವಾಧೀನಕ್ಕಾಗಿ ಮಾಡಿದ ಖರ್ಚು ಮತ್ತು ಭೂಸ್ವಾಧೀನದ ದಿನಾಂಕದಿಂದ ವರ್ಷಕ್ಕೆ ಶೇಕಡಾ ಐದರ ಬಡ್ಡಿದರದಲ್ಲಿ ಸಂದಾಯ ಮಾಡಿದ ಬಡ್ಡಿಯ ಮೊಬಲಗು.
(ii) ರಸ್ತೆಗಳು, ಚರಂಡಿಗಳು, ಅಡಿಗಾಲುವೆಗಳು, ವಿದ್ಯುದ್ದೀಕರಣ, ನೀರು ಪೂರೈಕೆ, ಕಾಂಪೌಂಡು ಗೋಡೆ / ಬೇಲಿ ಹಾಕುವುದು, ಹರಾಜು ಕಟ್ಟೆ, ಬ್ಯಾಂಕು, ಅಂಚೆ ಕಚೇರಿ ಕಟ್ಟಡ, ಶ್ರಮಿಕ ಭವನ, ರೈತ ಭವನ, ಸಮುದಾಯ ಭವನ, ಕಚೇರಿ ಕಟ್ಟಡ, ಅತಿಥಿ ಗೃಹ, ಒಣಹಾಕುವುದಕ್ಕೆ ಕಟ್ಟೆ, ಸುಂಕದಕಟ್ಟೆ, ತೂಕ ಮಾಡುವ ಯಂತ್ರ (ವೇಬ್ರಿಜ್), ಪಶು ಚಿಕಿತ್ಸಾಲಯ, ಕ್ಯಾಂಟೀನು ಕಟ್ಟಡ ಇತ್ಯಾದಿಗಳಂಥ ಮೂಲ ಸೌಕರ್ಯಗಳನ್ನು ಮಾರುಕಟ್ಟೆ ಪ್ರಾಂಗಣದಲ್ಲಿ ಒದಗಿಸುವುದಕ್ಕಾಗಿ ಖರ್ಚು ಮಾಡಲಾದ ಮೊಬಲಗು ಮತ್ತು ಅಂಥ ಮೊತ್ತದ ಮೇಲೆ, ಖರ್ಚು ಮಾಡಿದ ವರ್ಷದಿಂದ ವಾರ್ಷಿಕ ಶೇಕಡಾ ಐದರ ದರದಲ್ಲಿ ಲೆಕ್ಕ ಹಾಕಿದ ಬಡ್ಡಿ.
(iii) ಅಂಗಡಿಯ, ಅಂಗಡಿ ಸಹಿತ ಗೋದಾಮಿನ ಅಥವಾ ಗೋದಾಮಿನ ಸಂಬಂಧದಲ್ಲಿ, ಅಂಗಡಿಯ, ಅಂಗಡಿ ಸಹಿತ ಗೋದಾಮಿನ ಅಥವಾ ಗೋದಾಮಿನ ನಿರ್ಮಾಣ ವೆಚ್ಚವನ್ನು ಕೂಡ ಈ ಮೇಲ್ಕಂಡ ಖಂಡಗಳಲ್ಲಿ ನಮೂದಿಸಿದ ಮೊಬಲಗಿನ ಜೊತೆಗೆ ಹೆಚ್ಚುವರಿಯಾಗಿ ಸೇರಿಸತಕ್ಕದ್ದು.
(iv) ಕಟ್ಟಡ ಮೌಲ್ಯದಲ್ಲಿನ ಇಳಿತವನ್ನು, ಲೋಕೋಪಯೋಗಿ ಇಲಾಖಾ ಸಂಹಿತೆಯಂತೆ ಲೆಕ್ಕ ಹಾಕತಕ್ಕದ್ದು.
- ನಿವೇಶನ ಮೌಲ್ಯವನ್ನು ಗೊತ್ತುಪಡಿಸಲು ಮಾನದಂಡಗಳು.- (1) ನಿವೇಶನದ ಮೌಲ್ಯವನ್ನು ನಿರ್ಧರಿಸುವ ಉದ್ದೇಶಕ್ಕಾಗಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಹಿಂದಿನ ಹಣಕಾಸು ವರ್ಷದಲ್ಲಿ ಸಂಗ್ರಹಿಸಿದ ಮಾರುಕಟ್ಟೆ ಶುಲ್ಕವನ್ನು ಮತ್ತು ಅನುಬಂಧದಲ್ಲಿ ತೋರಿಸಲಾಗಿರುವಂತೆ 3ನೇ ನಿಯಮದ ಮೇರೆಗೆ ಹಂಚಿಕೆಗಾಗಿ ಕನಿಷ್ಠ ಮಾರ್ಗದರ್ಶಿ ಮೌಲ್ಯವನ್ನು ಆಧರಿಸಿ ವರ್ಗೀಕರಿಸಲಾಗಿದೆ.
(2) 4ನೇ ನಿಯಮದ ಮೇರೆಗೆ ಮೌಲ್ಯವನ್ನು ಅನುಮೋದಿಸುವಾಗ, ಕೃಷಿ ಮಾರುಕಟ್ಟೆ ನಿರ್ದೇಶಕನು ಈ ಕೆಳಕಂಡವುಗಳಲ್ಲಿ ಅತ್ಯಂತ ಹೆಚ್ಚಿನ ಮೌಲ್ಯವನ್ನು ಪರಿಗಣಿಸತಕ್ಕದ್ದು, ಎಂದರೆ.-
(i) ನಿವೇಶನದ ಪ್ರಸಕ್ತ ಮೌಲ್ಯ ;
(ii) ಅನುಬಂಧದಲ್ಲಿ ತೋರಿಸಲಾದಂತೆ ನಿವೇಶನದ ಕನಿಷ್ಠ ಮಾರ್ಗದರ್ಶಿ ಮೌಲ್ಯ ;
(iii) 4ನೇ ನಿಯಮದ ಮೇರೆಗೆ ನಿರ್ಧರಿಸಲಾದ ಮೌಲ್ಯ.
- ನೋಂದಣಿ.- (1) ಪ್ರತಿಯೊಬ್ಬ ಲೈಸನ್ಸು ಪಡೆದ ಮಾರುಕಟ್ಟೆ ಕಾರ್ಯನಿರ್ವಾಹಕನು, ಗುತ್ತಿಗೆ ಸಹಿತ ಮಾರಾಟದ ಆಧಾರದ ಮೇಲೆ ಅಥವಾ ಸಂದರ್ಭಾನುಸಾರ ಅನುಮತಿ ಮತ್ತು ಲೈಸನ್ಸು ಆಧಾರದ ಮೇಲೆ, ನಿವೇಶನದ, ಅಂಗಡಿಯ, ಗೋದಾಮಿನ ಅಥವಾ ಅಂಗಡಿ ಸಹಿತ ಗೋದಾಮಿನ ಹಂಚಿಕೆಗಾಗಿ ಅರ್ಜಿ ಸಲ್ಲಿಸಲು ಇಚ್ಛಿಸಿದಲ್ಲಿ, ಅನುಬಂಧದಲ್ಲಿ ನಿರ್ದಿಷ್ಟಪಡಿಸಲಾದಂತೆ ಮರುಸಂದಾಯ ಮಾಡಲಾಗದ ನೋಂದಣಿ ಶುಲ್ಕದೊಂದಿಗೆ ನಮೂನೆ-I ರಲ್ಲಿ ಮಾರುಕಟ್ಟೆ ಸಮಿತಿಗೆ ನೋಂದಣಿಗಾಗಿ ಅರ್ಜಿ ಸಲ್ಲಿಸತಕ್ಕದ್ದು.
(2) ನೋಂದಣಿಗಾಗಿ ಅರ್ಜಿಯನ್ನು ಸ್ವೀಕರಿಸಿದ ನಂತರ, ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯು ಅದನ್ನು ಪರಿಶೋಧಿಸತಕ್ಕದ್ದು ಮತ್ತು ಅರ್ಜಿಯಲ್ಲಿರುವ ಸಂಗತಿಗಳು ಸರಿಯಾಗಿವೆಯೆಂದು ಕಂಡುಬಂದರೆ, ಅವನು ಅರ್ಜಿದಾರನ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು ಹಾಗೂ ನಮೂನೆ-II ರಲ್ಲಿ ಸ್ವೀಕೃತಿ ಪತ್ರ ನೀಡತಕ್ಕದ್ದು.
(3) ಈ ಉದ್ದೇಶಕ್ಕಾಗಿ ಮಾರುಕಟ್ಟೆ ಸಮಿತಿಯ ಕಚೇರಿಯಲ್ಲಿ ಪ್ರತ್ಯೇಕ ರಿಜಿಸ್ಟರನ್ನು ನಿರ್ವಹಿಸತಕ್ಕದ್ದು ಮತ್ತು ಅರ್ಜಿಯನ್ನು ಸ್ವೀಕರಿಸಿದ ದಿನಾಂಕಗಳನ್ನು ಆಧರಿಸಿ ಅರ್ಜಿಗಳನ್ನು ಕಾಲಾನುಕ್ರಮದಲ್ಲಿ ನಮೂದಿಸತಕ್ಕದ್ದು ಮತ್ತು ಯಾವ ಕಾರಣಗಳಿಗಾಗಿ ಅರ್ಜಿಯು ಸ್ವೀಕೃತವಾಗಿಲ್ಲಮೋ ಅವುಗಳನ್ನು ಅರ್ಜಿದಾರನಿಗೆ ಲಿಖಿತದಲ್ಲಿ ತಿಳಿಸಿದ್ದ ಹೊರತು, ಅವುಗಳ ಕ್ರಮಸಂಖ್ಯೆಯೇ ನೋಂದಣಿ ಸಂಖ್ಯೆಯಾಗಿರತಕ್ಕದ್ದು.
- ಅರ್ಹತೆ.- (1) ಲೈಸೆನ್ಸು ಹೊಂದಿರುವ ಮಾರುಕಟ್ಟೆ ಕಾರ್ಯನಿರ್ವಾಹಕನಾಗಿರದ ಮತ್ತು ಮಾರಾಟಗಾರನಿಗೆ ಅಥವಾ ಮಾರುಕಟ್ಟೆ ಸಮಿತಿಗೆ ಯಾವುದೇ ಬಾಕಿಗಳನ್ನು ಸಂದಾಯ ಮಾಡದೇ ವಿಫಲವಾಗಿರುವ ಮತ್ತು ಅಧಿಸೂಚಿತ ಕೃಷಿ ಉತ್ಪನ್ನದ ಮಾರುಕಟ್ಟೆ ವ್ಯವಹಾರದಲ್ಲಿ ಅಥವಾ ಕೃಷಿ, ತೋಟಗಾರಿಕೆಗೆ ಅಥವಾ ಪಶುಸಂಗೋಪನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿರದ ವ್ಯಕ್ತಿಗೆ ಅಥವಾ ಸಂಸ್ಥೆಗೆ ಅಥವಾ ಸಂಘಟನೆಗೆ ರಾಜ್ಯ ಅಥವಾ ಕೇಂದ್ರ ಉಗ್ರಾಣ ನಿಗಮಕ್ಕೆ, ಸೇವಾ ಸಂಸ್ಥೆಗಳಿಗೆ, ಮಾರುಕಟ್ಟೆ ಕಾರ್ಯನಿರ್ವಾಹಕರುಗಳ ನೋಂದಾಯಿತ ಸಂಘಗಳಿಗೆ ಅಥವಾ ಬ್ಯಾಂಕುಗಳಿಗೆ ಅಥವಾ ಎಸ್.ಟಿ.ಡಿ. ಬೂತುಗಳ ಸ್ಥಾಪನೆಗಾಗಿ ಮಾತ್ರವೇ ಅಥವಾ ಮಾರುಕಟ್ಟೆ ಬಳಕೆದಾರರ ಸಾಮಾನ್ಯ ಸೌಕರ್ಯಗಳ ನಿರ್ಮಾಣಕ್ಕಾಗಿ ಮಾತ್ರವೇ ಹೊರತು, ಮಾರುಕಟ್ಟೆ ಪ್ರಾಂಗಣದಲ್ಲಿ ಗುತ್ತಿಗೆ ಸಹಿತ ಮಾರಾಟದ ಆಧಾರದ ಮೇಲೆ ಅಥವಾ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ ಆಧಾರದ ಮೇಲೆ ನಿವೇಶನವನ್ನು, ಅಂಗಡಿಯನ್ನು, ಗೋದಾಮನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಹಂಚಿಕೆ ಮಾಡತಕ್ಕದ್ದಲ್ಲ.
(2) ಲೈಸೆನ್ಸು ಹೊಂದಿರುವ ಮಾರುಕಟ್ಟೆ ಕಾರ್ಯನಿರ್ವಾಹಕನು ತನ್ನ ಹೆಸರಿನಲ್ಲಾಗಲಿ ಅಥವಾ ತಾನು ಪಾಲುದಾರನಾಗಿರುವ ಫರ್ಮಿನ ಹೆಸರಿನಲ್ಲಾಗಲಿ ಮಾರುಕಟ್ಟೆ ಪ್ರಾಂಗಣದಲ್ಲಿ ಈಗಾಗಲೇ ಒಂದು ನಿವೇಶನವನ್ನು, ಅಂಗಡಿಯನ್ನು, ಅಥವಾ ಅಂಗಡಿ ಸಹಿತ ಗೋದಾಮನ್ನು ಅಥವಾ ಇತರ ಕಟ್ಟಡವನ್ನು ಹೊಂದಿದ್ದರೆ ಅವನಿಗೆ ನಿವೇಶನವನ್ನು ಅಂಗಡಿಯನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಅಥವಾ ಇತರ ಕಟ್ಟಡವನ್ನು ಈ ನಿಯಮಗಳ ಮೇರೆಗೆ ಹಂಚಿಕೆ ಮಾಡತಕ್ಕದ್ದಲ್ಲ.
- ಹಂಚಿಕೆಗಾಗಿ ಅರ್ಜಿದಾರರನ್ನು ಆಯ್ಕೆ ಮಾಡಲು ಸೂತ್ರಗಳು.- (1) ಮಾರುಕಟ್ಟೆ ಸಮಿತಿಯು, 3ನೇ ಅಥವಾ 13ನೇ ನಿಯಮದ ಮೇರೆಗೆ ನಿವೇಶನದ, ಅಂಗಡಿಯ, ಗೋದಾಮಿನ ಅಥವಾ ಅಂಗಡಿ ಸಹಿತ ಗೋದಾಮಿನ ಹಂಚಿಕೆಯ ಸಂಬಂಧದಲ್ಲಿ, ಪ್ರತಿಯೊಬ್ಬ ಅರ್ಜಿದಾರನಿಗೆ ಸಂಬಂಧಿಸಿದಂತೆ ಆತನ ಅರ್ಹತೆಗಳನ್ನೇ ಪರಿಗಣಿಸತಕ್ಕದ್ದು ಮತ್ತು 3ನೇ ಅಥವಾ 13ನೇ ನಿಯಮದ ಮೇರೆಗೆ ಹಂಚಿಕೆಗೆ ಆಯ್ಕೆ ಮಾಡುವಾಗ ಈ ಕೆಳಗಿನ ಸೂತ್ರಗಳನ್ನು ಪರಿಗಣಿಸತಕ್ಕದ್ದು, ಎಂದರೆ,-
(i) ಅರ್ಜಿದಾರನ ಸ್ಥಾನಮಾನ, ಎಂದರೆ ವ್ಯಕ್ತಿಯೇ, ಅವಿಭಕ್ತ ಕುಟುಂಬವೇ ಅಥವಾ ಪಾಲುದಾರಿಕೆ ಫರ್ಮು;
(ii) ಲೈಸೆನ್ಸು ಪಡೆದ ಮಾರುಕಟ್ಟೆ ಕಾರ್ಯನಿರ್ವಾಹಕನು ಹಂಚಿಕೆಗಾಗಿ ಎಷ್ಟು ವರ್ಷಗಳಿಂದ ಕಾಯುತ್ತಿದ್ದಾನೆ ಮತ್ತು ಈ ಹಿಂದಿನ ಪ್ರಯತ್ನಗಳಲ್ಲಿ ಅರ್ಹತೆಯಿದ್ದಾಗಲೂ ಹಂಚಿಕೆ ಪಡೆಯಲು ಅಸಮರ್ಥನಾದುದು ;
(iii) ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಂದಾಯ ಮಾಡಿದ ಒಟ್ಟು ಮಾರುಕಟ್ಟೆ ಶುಲ್ಕ ಮತ್ತು ಒಂದು ವರ್ಷದಲ್ಲಿ ಸಂದಾಯ ಮಾಡಿದ ಸರಾಸರಿ ಮಾರುಕಟ್ಟೆ ಶುಲ್ಕ.
(2) ಹಂಚಿಕೆ ಮಾಡುವ ಸಮಯದಲ್ಲಿ, ಲೈಸೆನ್ಸು ಹೊಂದಿದ ಮಾರುಕಟ್ಟೆ ಕಾರ್ಯನಿರ್ವಾಹಕರಿಂದ ಸಾಕಷ್ಟು ಸಂಖ್ಯೆಯ ಅರ್ಜಿಗಳು ಬಾರದಿರುವಲ್ಲಿ, ಮಾರುಕಟ್ಟೆ ಸಮಿತಿಯು ಕೃಷಿ ಮಾರುಕಟ್ಟೆ ನಿರ್ದೇಶಕರ ಪೂರ್ವಾನುಮತಿ ಪಡೆದು ಈ ಮೇಲ್ಕಂಡ ಷರತ್ತುಗಳನ್ನು ಸಡಿಲಿಸಬಹುದು.
(3) ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯು, ಅರ್ಜಿದಾರರ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು ಮತ್ತು ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಿಂದ ಏಳು ದಿನಗಳ ಒಳಗಾಗಿ ಅಂಥ ಪಟ್ಟಿಯನ್ನು ಮಾರುಕಟ್ಟೆ ಸಮಿತಿಯ ಸೂಚನಾ ಫಲಕದ ಮೇಲೆ ಪ್ರಕಟಿಸುವಂತೆ ಮಾಡತಕ್ಕದ್ದು.
(4) ಅರ್ಜಿದಾರರ ಜೇಷ್ಠತಾ ಪಟ್ಟಿಯನ್ನು, ಅರ್ಜಿದಾರರ ಹೆಸರುಗಳು, ಹಂಚಿಕೆಗಾಗಿ ಅವರು ಮಾಡಿದ ಪ್ರಯತ್ನಗಳು, ಅವರು ಸಂದಾಯ ಮಾಡಿದ ಮೂರು ವರ್ಷಗಳ ಸರಾಸರಿ ಮಾರುಕಟ್ಟೆ ಶುಲ್ಕ ಒಳಗೊಂಡಂತೆ, ನಮೂನೆ ಸಂಖ್ಯೆ- ix ರಲ್ಲಿ ಸಿದ್ದಪಡಿಸತಕ್ಕದ್ದು ಮತ್ತು ಪಟ್ಟಿಯನ್ನು ಸಿದ್ಧಪಡಿಸುವಾಗ ಈ ಕೆಳಕಂಡ ಮಾನದಂಡಗಳನ್ನು ಅನುಸರಿಸತಕ್ಕದ್ದು ಮತ್ತು ಅರ್ಜಿದಾರರು ಗಳಿಸಿದ ಅತ್ಯಧಿಕ ಅಂಕಗಳೇ ಜೇಷ್ಠತಾ ಕ್ರಮಕ್ಕೆ ಆಧಾರವಾಗಿರತಕ್ಕದ್ದು.
(i) ನಿರಂತರವಾಗಿ ಪೂರ್ಣಗೊಳಿಸಿದ ಲೈಸನ್ಸಿನ ಪ್ರತಿಯೊಂದು ವರ್ಷವನ್ನು ಎರಡು ಅಂಕಗಳಾಗಿ ಪರಿಗಣಿಸತಕ್ಕದ್ದು.
(ii) ಹಂಚಿಕೆಗಾಗಿ ಅರ್ಜಿದಾರನು ಮಾಡಿದ ಪ್ರತಿಯೊಂದು ಪ್ರಯತ್ನವನ್ನು ಎರಡು ಅಂಕಗಳಾಗಿ ಪರಿಗಣಿಸತಕ್ಕದ್ದು.
(iii) ಅರ್ಜಿದಾರನು ಸಂದಾಯಮಾಡಿದ ಸರಾಸರಿ ಮಾರುಕಟ್ಟೆ ಶುಲ್ಕದ ಒಂದು ಸಾವಿರ ರೂಪಾಯಿಗಳ ಪ್ರತಿಯೊಂದು ಘಟಕವನ್ನು ಒಂದು ಅಂಕವೆಂದು ಪರಿಗಣಿಸತಕ್ಕದ್ದು ಮತ್ತು ಒಂದು ಸಾವಿರ ರೂಪಾಯಿಗಳಿಗಿಂತ ಕಡಿಮೆಯಿರುವುದನ್ನು ಅಂಕಗಳ ಗಣನೆಯಲ್ಲಿ ಬಿಟ್ಟುಬಿಡತಕ್ಕದ್ದು.
- ಮೂಲೆ ನಿವೇಶನದ ಹಂಚಿಕೆ.- (1) 3ನೆಯ ನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಆದರೆ 4ನೇ ಮತ್ತು 5ನೇ ನಿಯಮಗಳಿಗೆ ಮತ್ತು 7ನೇ ನಿಯಮದ (1)ನೇ ಉಪನಿಯಮಗಳಿಗೊಳಪಟ್ಟು ಮಾರುಕಟ್ಟೆ ಪ್ರಾಂಗಣದಲ್ಲಿನ ಮೂಲೆ ನಿವೇಶನವನ್ನು, ಲೈಸನ್ಸು ಹೊಂದಿರುವ ಮಾರುಕಟ್ಟೆ ಕಾರ್ಯನಿರ್ವಾಹಕನಿಗೆ ಗುತ್ತಿಗೆ ಸಹಿತ ಮಾರಾಟದ ಆಧಾರದ ಮೇಲೆ ಸಾರ್ವಜನಿಕ ಹರಾಜಿನಲ್ಲಿ ಹಂಚಿಕೆ ಮಾಡತಕ್ಕದ್ದು. ಅಂಥ ಹಂಚಿಕೆಗೆ 3ನೇ ನಿಯಮದ (1)ನೇ ಮತ್ತು (2)ನೇ ಉಪನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಕಾರ್ಯವಿಧಾನವನ್ನೇ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯಿಸತಕ್ಕದ್ದು.
(2) ಈ ನಿಯಮದ ಮೇರೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಯಾರೇ ವ್ಯಕ್ತಿಯು ನಿವೇಶನ ಮೌಲ್ಯದ ಶೇಕಡಾ ಇಪ್ಪತ್ತೈದಕ್ಕಿಂತ ಕಡಿಮೆಯಿಲ್ಲದ ಆರಂಭಿಕ ಠೇವಣಿಯೊಂದಿಗೆ ನಮೂನೆ-III ರಲ್ಲಿ ಅರ್ಜಿ ಸಲ್ಲಿಸತಕ್ಕದ್ದು.
(3) ಅತಿ ಹೆಚ್ಚಿನ ಸವಾಲು ಕೂಗಿದವನು, ಅವನು ಕೂಗಿದ ಹರಾಜು ಮೊಬಲಗಿನ ಶೇಕಡಾ ಇಪ್ಪತ್ತೈದರಷ್ಟು ಮೊತ್ತವನ್ನು, ಅದರಲ್ಲಿ ಈಗಾಗಲೇ ಠೇವಣಿ ಮಾಡಿದ್ದ ಆರಂಭಿಕ ಠೇವಣಿಯನ್ನು ಕಳೆದು ಉಳಿದ ಮೊತ್ತವನ್ನು ಹರಾಜು ದಿನಾಂಕದಿಂದ ಒಂದು ವಾರದೊಳಗಾಗಿ ಕಟ್ಟತಕ್ಕದ್ದು, ಹಾಗೆ ಮಾಡಲು ವಿಫಲನಾದರೆ, ಅತಿ ಹೆಚ್ಚಿನ ಸವಾಲು ಕೂಗಿದವನು ಕಟ್ಟಿದ್ದ ಆರಂಭಿಕ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು ಹಾಗೂ ಎರಡನೆಯ ಅತಿ ಹೆಚ್ಚಿನ ಸವಾಲು ಕೂಗಿದವನಿಗೆ ಮೊಬಲಗಿನ ಸಂದಾಯಕ್ಕೆ ಅವಕಾಶ ನೀಡತಕ್ಕದ್ದು. ಎರಡನೆಯ ಅತಿ ಹೆಚ್ಚಿನ ಸವಾಲು ಕೂಗಿದವನೂ ಕೂಡ ಆ ಮೊಬಲಗನ್ನು ಸಂದಾಯ ಮಾಡಲು ವಿಫಲನಾದ ಸಂದರ್ಭದಲ್ಲಿ, ಮಾರುಕಟ್ಟೆ ಸಮಿತಿಯು ಮರುಹರಾಜು ನಡೆಸತಕ್ಕದ್ದು.
- ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ನಿವೇಶನ, ಅಂಗಡಿ, ಗೋದಾಮು ಅಥವಾ ಅಂಗಡಿ ಸಹಿತ ಗೋದಾಮು ಹಂಚಿಕೆ ಷರತ್ತುಗಳು.- (1) ಮೂಲೆ ನಿವೇಶನವೂ ಸೇರಿದಂತೆ, ನಿವೇಶನವನ್ನು, ಗೋದಾಮನ್ನು, ಅಂಗಡಿಯನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಮಾರುಕಟ್ಟೆ ಸಮಿತಿಯು ಗುತ್ತಿಗೆ ಸಹಿತ ಮಾರಾಟದ ಮೇಲೆ ಹಂಚಿಕೆ ಮಾಡುವಾಗ, ಆ ಹಂಚಿಕೆಯು ಕೃಷಿ ಮಾರುಕಟ್ಟೆ ನಿರ್ದೇಶಕರ ಅನುಮೋದನೆಗೊಳಪಟ್ಟಿರತಕ್ಕದ್ದು ಮತ್ತು ಈ ಕೆಳಕಂಡ ಷರತ್ತುಗಳಿಗೆ ಕೂಡ ಒಳಪಟ್ಟಿರತಕ್ಕದ್ದು, ಎಂದರೆ:-
(i) ಹಂಚಿಕೆ ಪಡೆದವನು, 3ನೇ ನಿಯಮದ (3)ನೆಯ ಉಪನಿಯಮದ ಮೇರೆಗೆ ಈಗಾಗಲೇ ಸಂದಾಯ ಮಾಡಿದ ಮೊಬಲಗನ್ನು ಕಳೆದು, ಹಂಚಿಕೆ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ 90 ದಿನಗಳ ಅವಧಿಯೊಳಗಾಗಿ ನಿವೇಶನದ, ಗೋದಾಮಿನ, ಅಂಗಡಿಯ ಅಥವಾ ಅಂಗಡಿ ಸಹಿತ ಗೋದಾಮಿನ ಮೌಲ್ಯದ ಬಾಕಿ ಮೊಬಲಗನ್ನು ಮಾರುಕಟ್ಟೆ ಸಮಿತಿಗೆ ಸಂದಾಯ ಮಾಡತಕ್ಕದ್ದು. 90 ದಿನಗಳ ಅವಧಿಯೊಳಗಾಗಿ ಸದರಿ ಮೌಲ್ಯವನ್ನು ಸಂದಾಯ ಮಾಡದಿರುವಲ್ಲಿ, 60 ದಿನಗಳನ್ನು ಮೀರದ ಅವಧಿಗಾಗಿ ಮತ್ತಷ್ಟು ಸಮಯ ವಿಸ್ತರಣೆಯನ್ನು ಮಾರುಕಟ್ಟೆ ಸಮಿತಿ ನೀಡಬಹುದು, ಮತ್ತು ಹಂಚಿಕೆ ಪಡೆದವನು, ಸದರಿ ಮೊಬಲಗಿನ ಮೇಲೆ ಆ ವಿಸ್ತರಿತ ಅವಧಿಗೆ ವರ್ಷಕ್ಕೆ ಶೇಕಡಾ ಹನ್ನೆರಡರ ದರದಲ್ಲಿ ಬಡ್ಡಿಯನ್ನು ಹೆಚ್ಚುವರಿಯಾಗಿ ನೀಡತಕ್ಕದ್ದು.
(ii) (i)ನೇ ಖಂಡದ ಮೇರೆಗೆ ಮೌಲ್ಯವನ್ನು ಸಂದಾಯ ಮಾಡಿದ ನಂತರ, ಮಾರುಕಟ್ಟೆ ಸಮಿತಿಯು, ನಿವೇಶನ ಸಂಬಂಧದಲ್ಲಿ ನಮೂನೆ -IV ರಲ್ಲಿ ಮತ್ತು ಅಂಗಡಿಯ ಅಥವಾ ಅಂಗಡಿ ಸಹಿತ ಗೋದಾಮಿನ ಅಥವಾ ಗೋದಾಮಿನ ಸಂಬಂಧದಲ್ಲಿ ನಮೂನೆ- V ರಲ್ಲಿ ಒಪ್ಪಂದ ಪತ್ರ ಬರೆದುಕೊಡುವಂತೆ ಮತ್ತು ನೋಂದಣಿ ಮಾಡಿಸಿಕೊಳ್ಳುವಂತೆ ನಿವೇಶನ ಪಡೆದವನಿಗೆ ಲಿಖಿತದಲ್ಲಿ ತಿಳಿಸತಕ್ಕದ್ದು. ಅಂಥ ಒಪ್ಪಂದ ಪತ್ರವನ್ನು ಬರೆದುಕೊಡುವಂತೆ ಹಂಚಿಕೆ ಪಡೆದವನಿಗೆ ತಿಳಿಸಿದ ನಂತರ 45 ದಿನಗಳೊಳಗಾಗಿ ಒಪ್ಪಂದ ಪತ್ರವನ್ನು ಬರೆದುಕೊಡದಿದ್ದರೆ ಹಂಚಿಕೆ ಪಡೆದವನು ಸಂದಾಯ ಮಾಡಿದ ನೋಂದಣಿ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು ಮತ್ತು ಹಂಚಿಕೆಯು ರದ್ದಾಗತಕ್ಕದ್ದು ಹಾಗೂ 3ನೇ ನಿಯಮದ (3)ನೇ ಉಪನಿಯಮದ ಮೇರೆಗೆ ಹಂಚಿಕೆ ಪಡೆದವನು ಸಂದಾಯ ಮಾಡಿದ್ದ ಮೊಬಲಗನ್ನು, ಮಾರುಕಟ್ಟೆ ಸಮಿತಿಯು ಮಾಡಿರಬಹುದಾದ ವೆಚ್ಚವನ್ನು ಮುರಿದುಕೊಂಡು, ಅವನಿಗೆ ಹಿಂದಿರುಗಿಸತಕ್ಕದ್ದು.
(iii) ನಿವೇಶನವನ್ನು, ಗೋದಾಮನ್ನು, ಅಂಗಡಿಯನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಹಂಚಿಕೆದಾರನಿಗೆ ಹಸ್ತಾಂತರ ಮಾಡಿಕೊಡುವವರೆಗೆ, ಅಂಥ ಹಂಚಿಕೆಗಾಗಿ ಹಂಚಿಕೆದಾರನು ಸಂದಾಯ ಮಾಡಿದ ಮೊಬಲಗನ್ನು ಹಂಚಿಕೆಯ ನಿಬಂಧನೆಗಳ ಮತ್ತು ಷರತ್ತುಗಳ ಯುಕ್ತ ನೆರವೇರಿಕೆಗಾಗಿ ಮತ್ತು ಮಾರುಕಟ್ಟೆ ಸಮಿತಿಯ ಹಾಗೂ ಹಂಚಿಕೆ ಪಡೆದವನ ನಡುವೆ ಗುತ್ತಿಗೆ ಸಹಿತ ಮಾರಾಟ ಒಪ್ಪಂದವನ್ನು ಮಾಡಿಕೊಳ್ಳುವವರೆಗೆ ಭದ್ರತಾ ಠೇವಣಿಯಾಗಿ (ಅದರ ಮೇಲೆ ಯಾವುದೇ ಬಡ್ಡಿ ಇಲ್ಲದೆ) ಮಾರುಕಟ್ಟೆ ಸಮಿತಿಯು ಇಟ್ಟುಕೊಂಡಿರತಕ್ಕದ್ದು.
(iv) ನಿವೇಶನ ಹಂಚಿಕೆಯ ಸಂದರ್ಭದಲ್ಲಿ, ಹಂಚಿಕೆ ಪಡೆದವನು ಒಂದು ವರ್ಷದ ಅವಧಿಯೊಳಗಾಗಿ ಅಥವಾ ಮಾರುಕಟ್ಟೆ ಸಮಿತಿಯು ಅನುಮತಿ ನೀಡಬಹುದಾದ ಒಂದು ವರ್ಷ ಮೀರದ ಅಂಥ ವಿಸ್ತರಿಸಿದ ಅವಧಿಯೊಳಗಾಗಿ ಗೋದಾಮನ್ನು ಅಥವಾ ಅಂಗಡಿಯನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಕಟ್ಟತಕ್ಕದ್ದು.
(v) ನಿವೇಶನ ಪಡೆದ ಪ್ರತಿಯೊಬ್ಬ ಹಂಚಿಕೆ ಪಡೆದವನು, ಮಾರುಕಟ್ಟೆ ಸಮಿತಿಯು ಅನುಮೋದಿಸಿದ ನಕ್ಷೆಗಳಿಗೆ ಮತ್ತು ವಿನ್ಯಾಸಗಳಿಗೆ ಅನುಸಾರವಾಗಿ ಗೋದಾಮನ್ನು ಅಥವಾ ಅಂಗಡಿಯನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಆ ನಿವೇಶನದಲ್ಲಿ ಕಟ್ಟತಕ್ಕದ್ದು.
(vi) ಹಂಚಿಕೆ ಪಡೆದವನು ಮಾರುಕಟ್ಟೆ ಸಮಿತಿಯ ಪೂರ್ವಾನುಮತಿಗೆ ಹಾಗೂ ಅದು ವಿಧಿಸುವ ನಿಬಂಧನೆ ಮತ್ತು ಷರತ್ತುಗಳಿಗೊಳಪಟ್ಟು ಸಾಲ ಪಡೆಯುವುದಕ್ಕಾಗಿ ನಿವೇಶನವನ್ನು, ಗೋದಾಮನ್ನು ಅಥವಾ ಅಂಗಡಿಯನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಭಾರತ ಸರ್ಕಾರಕ್ಕೆ, ಕರ್ನಾಟಕ ಸರ್ಕಾರಕ್ಕೆ ಅಥವಾ ಅದರ ಉದ್ಯಮಗಳಿಗೆ, ಭಾರತ ಜೀವವಿಮಾ
ನಿಗಮಕ್ಕೆ, ನಿಗಮಿತ ನಿಕಾಯಗಳಿಗೆ ಅಥವಾ ಬ್ಯಾಂಕುಗಳಿಗೆ ಅವುಗಳ ಪರವಾಗಿ ಅಡಮಾನ ಮಾಡುವ ಮೂಲಕ ಹೊರತು, ಹಂಚಿಕೆಯಾದ ದಿನಾಂಕದಿಂದ ಹತ್ತು ವರ್ಷಗಳ ಅವಧಿಯೊಳಗಾಗಿ ಪರಭಾರೆ ಮಾಡತಕ್ಕದ್ದಲ್ಲ.
(vii) ಗುತ್ತಿಗೆ ಸಹಿತ ಮಾರಾಟ ಒಪ್ಪಂದ ಪತ್ರವನ್ನು ಬರೆದುಕೊಟ್ಟ ದಿನಾಂಕದಿಂದ ಹತ್ತು ವರ್ಷಗಳ ಅವಧಿಯು ಮುಕ್ತಾಯವಾದ ಮೇಲೆ ಮತ್ತು ಹಂಚಿಕೆಯು ರದ್ದಾಗದಿದ್ದರೆ ಅಥವಾ ಗುತ್ತಿಗೆಯು ಕೊನೆಗೊಳ್ಳದಿದ್ದರೆ ಮಾರುಕಟ್ಟೆ ಸಮಿತಿಯು, ಹಂಚಿಕೆ ಪಡೆದವನಿಗೆ ನೋಟೀಸು ನೀಡುವ ಮೂಲಕ, ಸದರಿ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿದ ಅವಧಿಯೊಳಗಾಗಿ ಸ್ವಂತ ವೆಚ್ಚದಲ್ಲಿ ಕ್ರಯಪತ್ರವನ್ನು ಬರೆಯಿಸಿಕೊಳ್ಳಲು ಕರೆ ನೀಡತಕ್ಕದ್ದು.
(viii) ಹಂಚಿಕೆಯಾದ ಸ್ವತ್ತನ್ನು ಸ್ವಾಧೀನಕ್ಕೆ ತೆಗೆದುಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ, ಹಂಚಿಕೆ ಪಡೆದವನು, ಆ ಸ್ವತ್ತಿನ ಸಂಬಂಧದಲ್ಲಿ ಸಂದಾಯ ಮಾಡಬೇಕಾದ ತೆರಿಗೆಗಳನ್ನು, ಶುಲ್ಕಗಳನ್ನು ಮತ್ತು ಉಪಕರಗಳನ್ನು ಸಂದಾಯ ಮಾಡಲು ಬದ್ಧನಾಗಿರತಕ್ಕದ್ದು.
(ix) ಪಾಲುದಾರಿಕೆ ಫರ್ಮಿನ ಹೆಸರಿಗೆ ಹಂಚಿಕೆ ಮಾಡಿದ್ದರೆ, ಆ ಫರ್ಮಿನ ರಚನೆಯಲ್ಲಿ ಯಾವುದೇ ಬದಲಾವಣೆಯಾದಲ್ಲಿ, ಅದನ್ನು ಮಾರುಕಟ್ಟೆ ಸಮಿತಿಯ ಗಮನಕ್ಕೆ ತರತಕ್ಕದ್ದು. ಮಾರುಕಟ್ಟೆ ಸಮಿತಿಯು, ತಾನು ಸೂಕ್ತವೆಂದು ಭಾವಿಸಿದಂಥ ವಿಚಾರಣೆ ನಡೆಸಿದ ನಂತರ, ಫರ್ಮಿನ ರಚನೆಯಲ್ಲಾದ ಬದಲಾವಣೆಯ ಪರಿಣಾಮದಿಂದಾಗಿ ಅಂಗಡಿಯನ್ನು ಅಥವಾ ಗೋದಾಮನ್ನು ಅಥವಾ ಅಂಗಡಿ ಸಹಿತ ಗೊದಾಮನ್ನು ಅಥವಾ ಅದರಲ್ಲಿನ ಯಾವುದೇ ಹಿತಾಸಕ್ತಿಯನ್ನು ಎಲ್ಲಾ ಪಾಲುದಾರರು ಅಥವಾ ಅವರಲ್ಲಿ ಯಾರಾದರೊಬ್ಬರು ವರ್ಗಾವಣೆ ಮಾಡಬೇಕೆಂದು ಅದು ನಿರ್ಧರಿಸಿದರೆ, 12ನೇ ನಿಯಮವನ್ನು ಪಾಲಿಸದೆ ಅಂಥ ವರ್ಗಾವಣೆಯನ್ನು ಮಾಡತಕ್ಕದ್ದಲ್ಲ.
ವಿವರಣೆ.- ಈ ಖಂಡದ ಮತ್ತು 16ನೆಯ ನಿಯಮದ (3)ನೆಯ ಉಪನಿಯಮದ ಉದ್ದೇಶಕ್ಕಾಗಿ, ಒಂದು ವೇಳೆ ಫರ್ಮಿನ ರಚನೆಯಲ್ಲಿ ಬದಲಾವಣೆಯಾದಲ್ಲಿ, ಒಬ್ಬರು ಅಥವಾ ಹೆಚ್ಚು ಜನ ಪಾಲುದಾರರು ಪಾಲುದಾರರಾಗಿರುವುದು ನಿಂತುಹೋದರೆ ಅಥವಾ ಒಬ್ಬರು ಅಥವಾ ಹೆಚ್ಚು ಜನ ಹೊಸ ಪಾಲುದಾರರು ಪ್ರವೇಶ ಪಡೆದರೆ, ಅಂಥ ಸಂದರ್ಭಗಳಲ್ಲಿ ಬದಲಾವಣೆಗೆ ಮೊದಲು ಫರ್ಮಿನ ಪಾಲುದಾರರಾಗಿದ್ದ ವ್ಯಕ್ತಿಗಳು, ಬದಲಾವಣೆಯ ನಂತರ ಪಾಲುದಾರನಾಗಿ ಅಥವಾ ಪಾಲುದಾರರಾಗಿ ಮುಂದುವರೆಯತಕ್ಕದ್ದಲ್ಲ.
-
ಹಂಚಿಕೆ ಪಡೆದವನನ್ನು ಗುತ್ತಿಗೆದಾರನೆಂದು ಭಾವಿಸತಕ್ಕದ್ದು.- ಗುತ್ತಿಗೆ ಸಹಿತ ಮಾರಾಟದ ಆಧಾರದ ಮೇಲೆ ಈ ನಿಯಮಗಳ ಮೇರೆಗೆ ಮೂಲೆ ನಿವೇಶನವೂ ಒಳಗೊಂಡಂತೆ, ನಿವೇಶನವನ್ನು, ಗೋದಾಮನ್ನು ಅಥವಾ ಅಂಗಡಿಯನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಹಂಚಿಕೆ ಮಾಡಲಾಗಿರುವಲ್ಲಿ, ಗುತ್ತಿಗೆಯು ಕೊನೆಗೊಳ್ಳುವವರೆಗೆ ಅಥವಾ ಆ ನಿವೇಶನದ, ಅಂಗಡಿಯ, ಗೋದಾಮಿನ ಅಥವಾ ಅಂಗಡಿ ಸಹಿತ ಗೋದಾಮಿನ ಹಂಚಿಕೆ ಪಡೆದವನಿಗೆ ಹಸ್ತಾಂತರ ಮಾಡುವವರೆಗೆ, ಅಂಥ ಹಂಚಿಕೆ ಪಡೆದವನನ್ನು ಅಂಥ ನಿವೇಶನದ, ಅಂಗಡಿಯ, ಗೋದಾಮಿನ ಅಥವಾ ಅಂಗಡಿ ಸಹಿತ ಗೋದಾಮಿನ ಗುತ್ತಿಗೆದಾರನೆಂದೇ ಭಾವಿಸತಕ್ಕದ್ದು. ಆ ಗುತ್ತಿಗೆಯ ಅವಧಿಯಲ್ಲಿ, ಹಂಚಿಕೆ ಪಡೆದವನು ಪ್ರತಿವರ್ಷದ ಆರಂಭಕ್ಕೆ ಮುಂಚೆ ವರ್ಷಕ್ಕೆ ಹತ್ತು ರೂಪಾಯಿಗಳ ದರದಲ್ಲಿ ಮಾರುಕಟ್ಟೆ ಸಮಿತಿಗೆ ಬಾಡಿಗೆ ಸಂದಾಯ ಮಾಡತಕ್ಕದ್ದು.
-
ವರ್ಗಾವಣೆಗೆ ನಿರ್ಬಂಧ.- (1) ಗೋದಾಮಿನ ಅಥವಾ ಅಂಗಡಿಯ ಅಥವಾ ಅಂಗಡಿ ಸಹಿತ ಗೋದಾಮಿನ ಹಂಚಿಕೆ ಪಡೆದ ಯಾರೇ ಆಗಲಿ 10ನೇ ನಿಯಮದ ಮೇರೆಗೆ ಅವನಿಗೆ ಅದನ್ನು ಹಸ್ತಾಂತರ ಮಾಡಿದ ನಂತರ ಅಲ್ಲಿ ಅಥವಾ ಹಾಗೆ ಹಂಚಿಕೆ ಪಡೆವನಿಂದ ವರ್ಗಾವಣೆ ಪಡೆದವನು ಅಥವಾ ಅಂಥ ಹಂಚಿಕೆ ಪಡೆದವನು, 10ನೆಯ ನಿಯಮದ ಮೇರೆಗೆ ಅವನಿಗೆ ಅದನ್ನು ಹಸ್ತಾಂತರ ಮಾಡಿದ ನಂತರ ಆ ನಿವೇಶನದಲ್ಲಿ ಕಟ್ಟಲಾಗಿರುವ ಗೋದಾಮಿನಲ್ಲಿ ಅಥವಾ ಅಂಗಡಿಯಲ್ಲಿ ಅಥವಾ ಅಂಗಡಿ ಸಹಿತ ಗೋದಾಮಿನಲ್ಲಿ ಯಾವುದೇ ಕಾರಣಕ್ಕೆ ಮಾರುಕಟ್ಟೆ ಕಾರ್ಯಚಟುವಟಿಕೆಗಳನ್ನು ನಡೆಸಲು ಅಸಮರ್ಥನಾದಾಗ, ಅವನು, 10ನೇ ನಿಯಮದ 1ನೇ ಉಪನಿಯಮದ (vi)ನೇ ಖಂಡದಲ್ಲಿ ನಿರ್ದಿಷ್ಟಪಡಿಸಿದ ಹತ್ತು ವರ್ಷಗಳ ಅವಧಿ ಮುಕ್ತಾಯವಾಗಿದ್ದಲ್ಲಿ, ಅನುಬಂಧದಲ್ಲಿ ನಿರ್ದಿಷ್ಟಪಡಿಸಿದ ವರ್ಗಾವಣೆ ಶುಲ್ಕವನ್ನು ಸಂದಾಯ ಮಾಡಿ ಮಾರುಕಟ್ಟೆ ಸಮಿತಿಗೆ ಅರ್ಜಿ ಸಲ್ಲಿಸತಕ್ಕದ್ದು ಮತ್ತು ಮಾರುಕಟ್ಟೆ ಸಮಿತಿಯು ಆ ಅರ್ಜಿದಾರನು ಮಾರುಕಟ್ಟೆ ಸಮಿತಿಗಾಗಲಿ, ಮಾರಾಟಗಾರರಿಗಾಗಲಿ ಮತ್ತು ಇತರೆ ಲೈಸನ್ಸು ಹೊಂದಿದ ಮಾರುಕಟ್ಟೆ ಕಾರ್ಯನಿರ್ವಾಹಕರಿಗಾಗಲಿ ಯಾವುದೇ ಬಾಕಿ ಕೊಡಬೇಕಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡ ನಂತರ, ಕೃಷಿ ಮಾರುಕಟ್ಟೆ ನಿರ್ದೇಶಕರ ಪೂರ್ವಾನುಮೋದನೆ ಪಡೆದು, ಯಾರು ನಿವೇಶನವನ್ನು, ಗೋದಾಮನ್ನು ಅಥವಾ ಅಂಗಡಿಯನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಹೊಂದಿಲ್ಲಮೋ ಆ ಲೈಸನ್ಸು ಪಡೆದ ಮಾರುಕಟ್ಟೆ ಕಾರ್ಯನಿರ್ವಾಹಕನಿಗೆ ಅಂಥ ಗೋದಾಮಿನ, ಅಂಗಡಿಯ ಅಥವಾ ಅಂಗಡಿ ಸಹಿತ ಗೋದಾಮನ್ನು ಪೂರ್ಣವಾಗಿ ಅಥವಾ ಭಾಗಶಃ ವರ್ಗಾವಣೆ ಮಾಡಲು ಅನುಮತಿಸತಕ್ಕದ್ದು :
ಪರಂತು, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ಮಾರುಕಟ್ಟೆ ಪ್ರಾಂಗಣಗಳಲ್ಲಿ ಸ್ವತ್ತಿನ ಹಂಚಿಕೆ ನಿಯಂತ್ರಣ) ನಿಯಮಗಳು, 2004ರ ಪ್ರಾರಂಭಕ್ಕೆ ಮೊದಲು ಅಂಥ ವರ್ಗಾವಣೆಗಾಗಿ ಅನುಮತಿ ಕೋರಿ ಸಲ್ಲಿಸಿದ ಯಾವುದೇ ಅರ್ಜಿಯು ಇತ್ಯರ್ಥದಲ್ಲಿರುವಲ್ಲಿ, ಅಂಥ ಅರ್ಜಿಯನ್ನು ಈ ಉಪನಿಯಮದ ಮೇರೆಗೆ ಸಲ್ಲಿಸಿದ ಅರ್ಜಿಯೆಂದು ಭಾವಿಸತಕ್ಕದ್ದು ಮತ್ತು ಈ ಉಪನಿಯಮಕ್ಕನುಸಾರವಾಗಿ ಅದನ್ನು ವಿಲೇ ಮಾಡತಕ್ಕದ್ದು.
(2) ಲೈಸನ್ಸು ಹೊಂದಿದ ಯಾರೇ ಮಾರುಕಟ್ಟೆ ಕಾರ್ಯನಿರ್ವಾಹಕನಿಗೆ 13ನೇ ನಿಯಮದ ಮೇರೆಗೆ ಕೇಳಿದಾಗ ಬಿಟ್ಟುಕೊಡುವ ಲೈಸನ್ಸು ಆಧಾರದ ಮೇಲೆ ಅಂಗಡಿಯನ್ನು ಅಥವಾ ಗೋದಾಮನ್ನು, ಅಂಗಡಿ ಸಹಿತ ಗೋದಾಮನ್ನು ಅಥವಾ ಇತರ ಕಟ್ಟಡವನ್ನು ಹಂಚಿಕೆ ಮಾಡಲಾಗಿದ್ದು ಕನಿಷ್ಠ 55 ತಿಂಗಳ ಅವಧಿಗೆ ಅವನು ಅದರ ಅಧಿಭೋಗದಲ್ಲಿ ಮುಂದುವರಿದಿದ್ದರೆ ಮತ್ತು ಸದರಿ ಅನುಮತಿ ಮತ್ತು ಲೈಸೆನ್ಸ್ ಆಧಾರದ ಮೇಲಿರುವುದನ್ನು ಗುತ್ತಿಗೆ ಸಹಿತ ಮಾರಾಟದ ಆಧಾರದ ಮೇಲೆ ಎಂಬುದಾಗಿ ಪರಿವರ್ತಿಸಬೇಕೆಂದು ಕೋರಿದರೆ, ಕೃಷಿ ಮಾರುಕಟ್ಟೆ ನಿರ್ದೇಶಕರ ಪೂರ್ವಾನುಮೋದನೆಯೊಂದಿಗೆ ಅದನ್ನು ಪರಿಶೀಲಿಸಬಹುದು ಮತ್ತು ಆ ನಿವೇಶನದ, ಅಂಗಡಿಯ, ಗೋದಾಮಿನ ಅಥವಾ ಅಂಗಡಿ ಸಹಿತ ಗೋದಾಮಿನ ಮೌಲ್ಯವನ್ನು ಈ ಕೆಳಕಂಡ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಮೂಲಕ ನಿರ್ಧರಿಸತಕ್ಕದ್ದು, ಎಂದರೆ,-
(i) ಕರ್ನಾಟಕ ಸ್ಟಾಂಪ್ ಅಧಿನಿಯಮ, 1957ರ ಮತ್ತು ಅದರ ಮೇರೆಗೆ ರಚಿಸಿದ ನಿಯಮಗಳ ಮೇರೆಗೆ ನಿರ್ಧರಿಸಿದ ಮಾರ್ಗಸೂಚಿ ಮೌಲ್ಯದ ಶೇಕಡಾ 40 ರಷ್ಟು ನಿವೇಶನ ಮೌಲ್ಯ ಅಥವಾ 5ನೇ ನಿಯಮದ ಮೇರೆಗೆ ಕೃಷಿ ಮಾರುಕಟ್ಟೆ ನಿರ್ದೇಶಕರಿಂದ ಅನುಮೋದಿತವಾದ ನಿವೇಶನದ ಮೌಲ್ಯ, ಇವುಗಳಲ್ಲಿ ಯಾವುದು ಹೆಚ್ಚಿರುತ್ತದೋ ಅದು;
(ii) ಕಟ್ಟಡದ ಮೌಲ್ಯದಲ್ಲಿ ಇಳಿತವನ್ನು ಪರಿಗಣಿಸಿದ ನಂತರ ಇಲಾಖೆಯ ಇಂಜನಿಯರಿಂಗ್ ಘಟಕವು ನಿಗದಿಪಡಿಸುವ ಕಟ್ಟಡದ ಮೌಲ್ಯ;
(iii) ಆ ನಿವೇಶನದ ಅಥವಾ ಕಟ್ಟಡದ ಮೇಲೆ ಮಾರುಕಟ್ಟೆ ಸಮಿತಿಯು ಮಾಡಿದ ಯಾವುದೇ ಇತರ ವೆಚ್ಚ.
- ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ ಆಧಾರದ ಮೇಲೆ ಅಂಗಡಿಯ, ಅಂಗಡಿ ಸಹಿತ ಗೋದಾಮಿನ ಅಥವಾ ಗೋದಾಮಿನ ಹಂಚಿಕೆ.- (1) 3ನೇ ನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ ಆಧಾರದ ಮೇಲೆ ಮಾರುಕಟ್ಟೆ ಪ್ರಾಂಗಣದಲ್ಲಿ ಅಂಗಡಿಯನ್ನು, ಅಂಗಡಿ ಸಹಿತ ಗೋದಾಮನ್ನು ಅಥವಾ ಗೋದಾಮನ್ನು ಮಾರುಕಟ್ಟೆ ಸಮಿತಿಯು ಹಂಚಿಕೆ ಮಾಡಬಹುದ.
(2) ಹಂಚಿಕೆ ಮಾಡಬೇಕಾಗಿರುವ ಅಂಗಡಿ, ಅಂಗಡಿ ಸಹಿತ ಗೋದಾಮು ಅಥವಾ ಗೋದಾಮುಗಳು ಯಾವುವಾದರೂ ಇದ್ದರೆ, ಅವು ಇರುವ ಸ್ಥಳದ ವಿವರ, ಅದರ ಸಂಖ್ಯೆ, ಅರ್ಜಿ ಸಲ್ಲಿಸುವುದಕ್ಕೆ ಇರುವ ಕೊನೆಯ ದಿನಾಂಕ ಮತ್ತು ಅಂಥ ಇತರ ವಿವರಗಳನ್ನು ನಿರ್ದಿಷ್ಟಪಡಿಸಿ ಮಾರುಕಟ್ಟೆ ಸಮಿತಿಯ ಕಚೇರಿಯ ಸೂಚನಾ ಫಲಕದಲ್ಲಿ ನೋಟೀಸನ್ನು ಅಂಟಿಸುವ ಮೂಲಕ ಹಾಗೂ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಕ ಪ್ರಸಾರವುಳ್ಳ ಎರಡಕ್ಕಿಂತ ಕಡಿಮೆಯಿಲ್ಲದ ಕನ್ನಡ ಸಮಾಚಾರ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಅಂಥ ಹಂಚಿಕೆಯ ಸಂಬಂಧದಲ್ಲಿ ಸೂಕ್ತ ಪ್ರಚಾರ ನೀಡತಕ್ಕದ್ದು.
(3) (1)ನೆಯ ಉಪನಿಯಮದ ಮೇರೆಗೆ ಮಾರುಕಟ್ಟೆ ಸಮಿತಿಯು ಹಂಚಿಕೆಗಾಗಿ ಅರ್ಜಿ ಕರೆದಾಗ, 6ನೆಯ ನಿಯಮದ ಮೇರೆಗೆ ನೋಂದಾಯಿಸಿಕೊಂಡಿರುವ ಲೈಸನ್ಸು ಹೊಂದಿದ ಯಾರೇ ಮಾರುಕಟ್ಟೆ ಕಾರ್ಯನಿರ್ವಾಹಕನು, ಕೇಳಿದಾಗ ಬಿಟ್ಟುಕೊಡುವ ಆಧಾರದ ಮೇಲೆ ಲೈಸನ್ಸು ಶುಲ್ಕದ ಎರಡು ತಿಂಗಳ ಮೊತ್ತಕ್ಕೆ ಸಮನಾದ ಅಥವಾ ಐದು ಸಾವಿರ ರೂಪಾಯಿಗಳ ಮುಂಗಡ ಹಣ ಇವುಗಳಲ್ಲಿ ಯಾವುದು ಹೆಚ್ಚೋ ಆ ಮೊತ್ತದ ಠೇವಣಿಯೊಂದಿಗೆ ನಮೂನೆ-III ರಲ್ಲಿ ಮಾರುಕಟ್ಟೆ ಸಮಿತಿಗೆ ಅರ್ಜಿ ಸಲ್ಲಿಸಬಹುದು.
(4) ಮಾರುಕಟ್ಟೆ ಸಮಿತಿಯಲ್ಲಿ ನೋಂದಾಯಿಸಿಕೊಂಡಿರುವ ಯಾರೇ ಅರ್ಜಿದಾರನು, ಈ ನಿಯಮದ ಮೇರೆಗೆ, ಅಂಗಡಿಯ, ಅಂಗಡಿ ಸಹಿತ ಗೋದಾಮಿನ ಅಥವಾ ಸಂದರ್ಭಾನುಸಾರ ಗೋದಾಮಿನ ಹಂಚಿಕೆಯನ್ನು ಪಡೆಯುವಲ್ಲಿ ವಿಫಲನಾದಲ್ಲಿ, ನೋಂದಣಿ ಪ್ರಮಾಣಪತ್ರವನ್ನು ಹಿಂದಿರುಗಿಸುವ ಮೂಲಕ ಅರ್ಜಿದಾರನು ನೋಂದಣಿಯನ್ನು ಹಿಂದಕ್ಕೆ ಪಡೆದ ಹೊರತು, ಅಂಥ ನೋಂದಣಿಯು, ನಂತರದ ಹಂಚಿಕೆಗಳಿಗೆ ಕೂಡ ಸಿಂಧುವಾಗಿರತಕ್ಕದ್ದು.
(5) ಕೃಷಿ ಮಾರುಕಟ್ಟೆ ನಿರ್ದೇಶಕನ ಸಾಮಾನ್ಯ ಅಥವಾ ವಿಶೇಷ ಆದೇಶಕ್ಕೊಳಪಟ್ಟು, ಮಾರುಕಟ್ಟೆ ಸಮಿತಿಯು, ಸಂದಾಯ ಮಾಡಬೇಕಾದ ಲೈಸನ್ಸು ಶುಲ್ಕಕ್ಕೆ ಸಂಬಂಧಪಟ್ಟಂತೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ನಿಂದ (ಮಾರುಕಟ್ಟೆ ಅಭಿವೃದ್ಧಿ ಯೋಜನೆ) ಪ್ರಮಾಣಪತ್ರ ಪಡೆದ ನಂತರ, ಈ ನಿಯಮದ ಮೇರೆಗೆ ಅಂಗಡಿಯ, ಅಂಗಡಿ ಸಹಿತ ಗೋದಾಮಿನ ಅಥವಾ ಗೋದಾಮಿನ ಹಂಚಿಕೆಗಾಗಿ ಕನಿಷ್ಠ ಲೈಸನ್ಸು ಶುಲ್ಕವನ್ನು ಗೊತ್ತುಪಡಿಸತಕ್ಕದ್ದು. ಸಹಾಯಕ ಕಾರ್ಯನಿರ್ವಾಹಕ ಇಂಜನಿಯರನು, ಕಟ್ಟಡದ ಮೂಲ ಖರ್ಚನ್ನು ಗಮನದಲ್ಲಿಟ್ಟುಕೊಂಡು ಲೈಸನ್ಸ್ ಶುಲ್ಕವನ್ನು ನಿಗದಿಪಡಿಸತಕ್ಕದ್ದು.
(6) ಮಾರುಕಟ್ಟೆ ಸಮಿತಿಯು, 7ನೇ ಮತ್ತು 8ನೇ ನಿಯಮಗಳ ಉಪಬಂಧಗಳನ್ನು ಗಮನದಲ್ಲಿಟ್ಟುಕೊಂಡು ಯಾರೇ ಅರ್ಜಿದಾರನಿಗೆ, ಕೇಳಿದಾಗ ಬಿಟ್ಟುಕೊಡುವ ಲೈಸನ್ಸು ಆಧಾರದ ಮೇಲೆ ಅಂಗಡಿ, ಅಂಗಡಿ ಸಹಿತ ಗೋದಾಮನ್ನು ಅಥವಾ ಗೋದಾಮನ್ನು ಹಂಚಿಕೆ ಮಾಡಬಹುದು.
(7) ಈ ನಿಯಮದ ಮೇರೆಗೆ ಆರಂಭಿಕ ಹಂಚಿಕೆಯು, 11 ತಿಂಗಳ ಅವಧಿಯದ್ದಾಗಿರತಕ್ಕದ್ದು, ಗರಿಷ್ಠ 55 ತಿಂಗಳಿಗೊಳಪಟ್ಟು ಮಾರುಕಟ್ಟೆ ಸಮಿತಿಯು ಅದನ್ನು ಪ್ರತಿ 11 ತಿಂಗಳಿಗೊಮ್ಮೆ ನವೀಕರಿಸಬಹುದು.
- ತೂಕಮಾಡುವ ಯಂತ್ರಗಳು (ವೇಬ್ರಿಜ್) ಇತ್ಯಾದಿಗಳ ಹಂಚಿಕೆ.- (1) ಮಾರುಕಟ್ಟೆ ಸಮಿತಿಯು ತೂಕಮಾಡುವ ಯಂತ್ರಗಳನ್ನು, ಚಿಲ್ಲರೆ ಅಂಗಡಿಗಳನ್ನು, ಕ್ಯಾಂಟೀನನ್ನು ಮತ್ತು ಚಹಾದ ಅಂಗಡಿಗಳನ್ನು ಟೆಂಡರ್ ಸಹಿತ ಹರಾಜಿನ ಮುಖಾಂತರ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ ಆಧಾರದ ಮೇಲೆ ಹಂಚಿಕೆ ಮಾಡಬಹುದು.
(2) ಮಾರುಕಟ್ಟೆ ಸಮಿತಿಯು, ಈ ನಿಯಮಗಳ ಉಪಬಂಧಗಳಿಗೊಳಪಟ್ಟು, ಟೆಂಡರ್ ಸಹಿತ ಹರಾಜಿನ ಮೂಲಕ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ ಆಧಾರದ ಮೇಲೆ ಮಾರುಕಟ್ಟೆ ಪ್ರಾಂಗಣದಲ್ಲಿ ತೂಕಮಾಡುವ ಯಂತ್ರಗಳನ್ನು (ವೇಬ್ರಿಜ್), ಚಿಲ್ಲರೆ ಅಂಗಡಿಗಳನ್ನು, ಕ್ಯಾಂಟೀನುಗಳನ್ನು ಮತ್ತು ಚಹಾದ ಅಂಗಡಿಗಳನ್ನು ಹಂಚಿಕೆ ಮಾಡಬಹುದು.
(3) ಹಂಚಿಕೆ ಮಾಡಬೇಕಾಗಿರುವ ಅಂಗಡಿ, ಅಂಗಡಿ ಸಹಿತ ಗೋದಾಮು ಅಥವಾ ಗೋದಾಮುಗಳು ಯಾವುವಾದರೂ ಇದ್ದರೆ, ಅವು ಇರುವ ಸ್ಥಳದ ವಿವರ, ಅದರ ಸಂಖ್ಯೆ, ಅರ್ಜಿ ಸಲ್ಲಿಸುವುದಕ್ಕೆ ಇರುವ ಕೊನೆಯ ದಿನಾಂಕ ಮತ್ತು ಅಂಥ ಇತರ ವಿವರಗಳನ್ನು ನಿರ್ದಿಷ್ಟಪಡಿಸಿ ಮಾರುಕಟ್ಟೆ ಸಮಿತಿಯ ಕಚೇರಿಯ ಸೂಚನಾ ಫಲಕದಲ್ಲಿ ನೋಟೀಸನ್ನು ಅಂಟಿಸುವ ಮೂಲಕ ಹಾಗೂ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಕ ಪ್ರಸಾರವುಳ್ಳ ಎರಡಕ್ಕಿಂತ ಕಡಿಮೆಯಿಲ್ಲದ ಕನ್ನಡ ಸಮಾಚಾರ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಅಂಥ ಹಂಚಿಕೆಯ ಸಂಬಂಧದಲ್ಲಿ ಸೂಕ್ತ ಪ್ರಚಾರ ನೀಡತಕ್ಕದ್ದು.
(4) ಈ ನಿಯಮದ ಮೇರೆಗೆ ಹಂಚಿಕೆಗಾಗಿ ಅರ್ಜಿ ಸಲ್ಲಿಸಲು ಇಚ್ಛಿಸುವ ಯಾರೇ ವ್ಯಕ್ತಿಯು, ಕನಿಷ್ಠ ಎರಡು ತಿಂಗಳ ಲೈಸನ್ಸು ಶುಲ್ಕಕ್ಕೆ ಸಮನಾದ ಅಥವಾ ಐದು ಸಾವಿರ ರೂಪಾಯಿಗಳು ಇವುಗಳಲ್ಲಿ ಯಾವುದು ಹೆಚ್ಚೋ ಅಷ್ಟನ್ನು ಮುಂಗಡ ಹಣದ ಠೇವಣಿಯೊಂದಿಗೆ ನಮೂನೆ- VI ರಲ್ಲಿ ಮಾರುಕಟ್ಟೆ ಸಮಿತಿಗೆ ಅರ್ಜಿ ಸಲ್ಲಿಸತಕ್ಕದ್ದು.
(5) ಅತಿ ಹೆಚ್ಚಿನ ಸವಾಲು ಕೂಗಿದವನು, ಅವನು ಕೂಗಿದ ಹರಾಜು ಮೊಬಲಗಿನ ಶೇಕಡಾ ಇಪ್ಪತ್ತೈದರಷ್ಟು ಮೊತ್ತವನ್ನು, ಅದರಲ್ಲಿ ಈಗಾಗಲೇ ಠೇವಣಿ ಇಟ್ಟಿದ್ದ ಮುಂಗಡ ಹಣವನ್ನು ಅದರಲ್ಲಿ ಕಳೆದು ಉಳಿದ ಮೊತ್ತವನ್ನು ಹರಾಜು ದಿನಾಂಕದಿಂದ ಮೂರು ದಿನಗಳೊಳಗಾಗಿ ಕಟ್ಟತಕ್ಕದ್ದು. ಹಾಗೆ ಕಟ್ಟಲು ವಿಫಲನಾದರೆ, ಮುಂಗಡ ಹಣದ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು ಮತ್ತು ಎರಡನೆಯ ಅತಿ ಹೆಚ್ಚಿನ ಸವಾಲು ಕೂಗಿದವನಿಗೆ ಅಂಥ ಮೊತ್ತದ ಸಂದಾಯಕ್ಕೆ ಅವಕಾಶ ನೀಡಬೇಕು. ಎರಡನೆಯ ಅತಿ ಹೆಚ್ಚಿನ ಸವಾಲು ಕೂಗಿದವನೂ ಕೂಡ ಆ ಮೊತ್ತ ಸಂದಾಯ ಮಾಡಲು ವಿಫಲನಾದ ಸಂದರ್ಭದಲ್ಲಿ, ಮಾರುಕಟ್ಟೆ ಸಮಿತಿಯು ಮರುಹರಾಜು ನಡೆಸತಕ್ಕದ್ದು.
(6) ಆರಂಭದ ಹಂಚಿಕೆಯು 11 ತಿಂಗಳ ಅವಧಿಯದಾಗಿದ್ದು, ಗರಿಷ್ಠ 55 ತಿಂಗಳಿಗೆ ಒಳಪಟ್ಟು ಮಾರುಕಟ್ಟೆ ಸಮಿತಿಯು ಪ್ರತಿ 11 ತಿಂಗಳಿಗೊಮ್ಮೆ ನವೀಕರಿಸಬಹುದು.
- ಲೈಸನ್ಸು ಶುಲ್ಕವನ್ನು ನಿಗದಿಪಡಿಸುವುದು.- ಕೃಷಿ ಮಾರುಕಟ್ಟೆ ನಿರ್ದೇಶಕರ ಸಾಮಾನ್ಯ ಅಥವಾ ವಿಶೇಷ ಆದೇಶಕ್ಕೊಳಪಟ್ಟು, ಲೈಸನ್ಸು ಶುಲ್ಕ ಸಂದಾಯ ಮಾಡುವ ಸಂಬಂಧದಲ್ಲಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ (ಮಾರುಕಟ್ಟೆ ಅಭಿವೃದ್ಧಿ ಯೋಜನೆ) ಅವರಿಂದ ಪ್ರಮಾಣಪತ್ರ ಪಡೆದ
ನಂತರ ಮಾರುಕಟ್ಟೆ ಸಮಿತಿಯು ತನಗೆ ಸೇರಿದ ಯಾವುದೇ ವೇಬ್ರಿಜ್ಗಳಿಗೆ, ಚಿಲ್ಲರೆ ಅಂಗಡಿಗಳಿಗೆ, ಕ್ಯಾಂಟೀನಿಗೆ ಅಥವಾ ಚಹಾದ ಅಂಗಡಿಗೆ ಹಂಚಿಕೆಯ ಕನಿಷ್ಠ ಲೈಸನ್ಸು ಶುಲ್ಕವನ್ನು ನಿಗದಿಪಡಿಸತಕ್ಕದ್ದು.
- ಕೇಳಿದಾಗ ಬಿಟ್ಟುಕೊಡುವ ಲೈಸನ್ಸು ಆಧಾರದ ಮೇಲೆ ಮಾಡುವ ಹಂಚಿಕೆಗಾಗಿ ಇರುವ ಷರತ್ತುಗಳು.- 13 ಮತ್ತು 14ನೇ ನಿಯಮಗಳ ಮೇರೆಗೆ, ಕೇಳಿದಾಗ ಬಿಟ್ಟುಕೊಡುವ ಲೈಸನ್ಸ್ ಆಧಾರದ ಮೇಲೆ ಅಂಗಡಿ, ಗೋದಾಮು, ಅಂಗಡಿ ಸಹಿತ ಗೋದಾಮು, ವೇಬ್ರಿಜ್ಗಳು, ಚಿಲ್ಲರೆ ಅಂಗಡಿಗಳು, ಚಹಾದ ಅಂಗಡಿಯ ಮತ್ತು ಕ್ಯಾಂಟೀನಿನ ಹಂಚಿಕೆಯು ಈ ಕೆಳಕಂಡ ಷರತ್ತುಗಳಿಗೊಳಪಟ್ಟಿರತಕ್ಕದ್ದು, ಎಂದರೆ:-
(1) ಹಂಚಿಕೆ ಪಡೆದವನು, ಹಂಚಿಕೆ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ದಿನಗಳ ಅವಧಿಯೊಳಗಾಗಿ, ಸಂದಾಯ ಮಾಡಬೇಕಾದ ಹತ್ತು ತಿಂಗಳ ಲೈಸನ್ಸು ಶುಲ್ಕಕ್ಕೆ ಸಮನಾದ ಮೊಬಲಗನ್ನು ಈಗಾಗಲೇ ಠೇವಣಿ ಇಟ್ಟಿದ್ದ ಮುಂಗಡ ಹಣವನ್ನು ಅದರಲ್ಲಿ ಕಳೆದು ಮಾರುಕಟ್ಟೆ ಸಮಿತಿಯಲ್ಲಿ ಠೇವಣಿ ಇಡತಕ್ಕದ್ದು.
(2) ಹಂಚಿಕೆ ಪಡೆದವನು, 13ನೇ ಅಥವಾ 14ನೇ ನಿಯಮದ ಮತ್ತು (1)ನೆಯ ಖಂಡದ ಮೇರೆಗೆ ಅಗತ್ಯಪಡಿಸಿದಂತೆ ಸಂದಾಯವನ್ನು ಮಾಡಿದ ನಂತರ, ಮಾರುಕಟ್ಟೆ ಸಮಿತಿಯು, ಸಮುಚಿತವಾದ ನಮೂನೆ-VII ರಲ್ಲಿ ಅಥವಾ ನಮೂನೆ -VIII ರಲ್ಲಿ ಒಪ್ಪಂದ ಪತ್ರ ಬರೆದುಕೊಡುವಂತೆ ತಿಳಿಸತಕ್ಕದ್ದು.
(3) ಪಾಲುದಾರಿಕೆ ಫರ್ಮಿನ ಹೆಸರಿಗೆ ಹಂಚಿಕೆ ಮಾಡಲಾಗಿರುವಲ್ಲಿ, ಆ ಫರ್ಮಿನ ರಚನೆಯಲ್ಲಿ ಯಾವುದೇ ಬದಲಾವಣೆಯಾದಲ್ಲಿ, ಅದನ್ನು ಮಾರುಕಟ್ಟೆ ಸಮಿತಿಯ ಗಮನಕ್ಕೆ ತರತಕ್ಕದ್ದು. ಮಾರುಕಟ್ಟೆ ಸಮಿತಿಯು ತಾನು ಸೂಕ್ತವೆಂದು ಭಾವಿಸಿದಂಥ ವಿಚಾರಣೆ ನಡೆಸಿದ ನಂತರ, ಫರ್ಮಿನ ರಚನೆಯಲ್ಲಾದ ಬದಲಾವಣೆಯು ಲೈಸನ್ಸನ್ನು ವಹಿಸಿಕೊಟ್ಟಂತಾಗುತ್ತದೆ ಎಂದು ನಿರ್ಧರಿಸಿದರೆ ಅಂಥ ಲೈಸೆನ್ಸು ರದ್ದಾಗತಕ್ಕದ್ದು.
(4) ಲೈಸನ್ಸು ಶುಲ್ಕವನ್ನು, 33 ತಿಂಗಳಿಗೊಮ್ಮೆ, ಲೈಸನ್ಸು ಶುಲ್ಕದ ಶೇಕಡಾ ಐದರ ದರದಲ್ಲಿ ಹೆಚ್ಚಿಸತಕ್ಕದ್ದು.
(5) ಮಾರುಕಟ್ಟೆ ಸಮಿತಿಯು ಮಾಡಿದ ಎಲ್ಲ ಆರಂಭಿಕ ಹಂಚಿಕೆಗಳು, ಕೃಷಿ ಮಾರುಕಟ್ಟೆ ನಿರ್ದೇಶಕನ ಅಥವಾ ಅವನು ಅಧಿಕೃತಗೊಳಿಸಿದ ಇತರ ಅಂಥ ಅಧಿಕಾರಿಯ ಅನುಮೋದನೆ ಗೊಳಪಟ್ಟಿರತಕ್ಕದ್ದು.
(6) ಈ ನಿಯಮಗಳ ಮೇರೆಗೆ, ಕೇಳಿದಾಗ ಬಿಟ್ಟುಕೊಡುವ ಲೈಸನ್ಸನ್ನು,-
(i) ಲೈಸನ್ಸು ಪಡೆದವನು, ಮಾರುಕಟ್ಟೆ ಸಮಿತಿಗೆ ಸಂದಾಯ ಮಾಡಬೇಕಾಗಿದ್ದ ಬಾಕಿಗಳನ್ನು ಸಂದಾಯ ಮಾಡಲು ವಿಫಲನಾದಲ್ಲಿ ; ಅಥವಾ
(ii) ಲೈಸನ್ಸು ಪಡೆದವನು, ಒಪ್ಪಂದದ ನಿಬಂಧನೆ ಮತ್ತು ಷರತ್ತುಗಳನ್ನು ಪಾಲಿಸಲು ತಪ್ಪಿದಲ್ಲಿ
- ನವೀಕರಿಸತಕ್ಕದ್ದಲ್ಲ.
-
ನಿವೇಶನ, ಇತ್ಯಾದಿಗಳನ್ನು ಮೀಸಲಿಡುವುದು.- ಮಾರುಕಟ್ಟೆ ಸಮಿತಿಯು ಹಂಚಬೇಕಾಗಿರುವ ನಿವೇಶನಗಳ, ಅಂಗಡಿಗಳ, ಅಂಗಡಿ ಸಹಿತ ಗೋದಾಮು ಅಥವಾ ಗೋದಾಮುಗಳ ಪೈಕಿ, ಕಾಲಕಾಲಕ್ಕೆ ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಬಹುದಾದ ಸಂಖ್ಯೆಯಷ್ಟನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳಿಗೆ ಹಂಚಲು ಪ್ರತಿಯೊಂದು ಪ್ರವರ್ಗಗಳಿಗಾಗಿ ಮೀಸಲಿಡತಕ್ಕದ್ದು.
-
ಅರ್ಜಿದಾರನ ಮರಣ.- (1) ಹಂಚಿಕೆಗೆ ಮೊದಲು ಅರ್ಜಿದಾರನು ಮೃತನಾದರೆ, ಅವನ ಕಾನೂನುಬದ್ಧ ವಾರಸುದಾರರು, ಅವರ ಆಯ್ಕೆಯ ಮೇರೆಗೆ ಠೇವಣಿಯನ್ನು ವಾಪಸ್ಸು ಪಡೆಯಲು ಅಥವಾ ಅವರು ಅಗತ್ಯ ಮಾನದಂಡಗಳನ್ನು ಪೂರೈಸಿದ್ದರೆ ಈ ನಿಯಮಗಳ ಮೇರೆಗೆ ಹಂಚಿಕೆ ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದು.
(2) ಹಂಚಿಕೆಯಾದ ನಂತರ ಅರ್ಜಿದಾರನು ಮೃತನಾದಲ್ಲಿ, ಅವನ ಕಾನೂನುಬದ್ದ ವಾರಸುದಾರರು ಅವರ ಆಯ್ಕೆಯ ಮೇರೆಗೆ ಹಂಚಿಕೆಗಾಗಿ ಸಂದಾಯ ಮಾಡಿದ್ದ ಮೊಬಲಗನ್ನು ವಾಪಸು ಪಡೆಯಲು ಅಥವಾ ಅವರು ಅಗತ್ಯ ಮಾನದಂಡಗಳನ್ನು ಪೂರೈಸಿದ್ದರೆ ಈ ನಿಯಮಗಳಿಗನುಸಾರವಾಗಿ ಒಪ್ಪಂದ ಮಾಡಿಕೊಳ್ಳಲು ಹಕ್ಕುಳ್ಳವರಾಗಿರತಕ್ಕದ್ದು.
(3) ಕಾನೂನುಬದ್ಧ ವಾರಸುದಾರರು ಮೊಬಲಗನ್ನು ವಾಪಸ್ಸು ಪಡೆಯುವುದನ್ನು ಆಯ್ಕೆ ಮಾಡಿಕೊಂಡರೆ, ಮಾರುಕಟ್ಟೆ ಸಮಿತಿಯು, ಅದಕ್ಕೆ ಯಾವುದೇ ಬಡ್ಡಿಯಿಲ್ಲದೆ ಮರುಪವಾವತಿ ಮಾಡತಕ್ಕದ್ದು ಹಾಗೂ ಈ ನಿಯಮಗಳಿಗೊಳಪಟ್ಟು ಅದು ಮರುಹಂಚಿಕೆ ಮಾಡಬಹುದು.
-
ಸ್ವಯಿಚ್ಛೆಯಿಂದ ಹಿಂದಿರುಗಿಸುವುದು.- ಹಂಚಿಕೆಯಾದ ನಂತರದ ಯಾವುದೇ ಕಾಲದಲ್ಲಿ ಹಂಚಿಕೆ ಪಡೆದವನು ಹಂಚಿಕೆಯಾದ ಸ್ವತ್ತನ್ನು ಮಾರುಕಟ್ಟೆ ಸಮಿತಿಗೆ ಹಿಂದಿರುಗಿಸಬಹುದು. ಹಾಗೆ ಹಿಂದಿರುಗಿಸಿದ ನಂತರ, ಮಾರುಕಟ್ಟೆ ಸಮಿತಿಯು ಸದರಿ ಹಂಚಿಕೆಯ ಸಂಬಂಧದಲ್ಲಿ ಸಂದಾಯ ಮಾಡಿದ್ದ ಮೊಬಲಗನ್ನು ಯಾವುದೇ ಬಡ್ಡಿಯಿಲ್ಲದೆ ಮರುಪಾವತಿ ಮಾಡತಕ್ಕದ್ದು.
-
ದಂಡರೂಪದ ಶುಲ್ಕ, ಇತ್ಯಾದಿ.- (1) ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ನಿವೇಶನದ, ಅಂಗಡಿಯ, ಗೋದಾಮಿನ ಅಥವಾ ಅಂಗಡಿ ಸಹಿತ ಗೋದಾಮಿನ ಹಂಚಿಕೆ ಪಡೆದವನು, ಈ ನಿಯಮಗಳ ಯಾವುದೇ ನಿಯಮವನ್ನು ಅಥವಾ ಒಪ್ಪಂದದ ನಿಬಂಧನೆಗಳನ್ನು ಉಲ್ಲಂಘಿಸಿದಲಿ,್ಲ ಮಾರುಕಟ್ಟೆ ಸಮಿತಿಯು ಹಂಚಿಕೆಯನ್ನು ರದ್ದುಮಾಡಬಹುದು ಮತ್ತು ಗುತ್ತಿಗೆ ಅವಧಿಯು ಮುಕ್ತಾಯಗೊಳ್ಳುವ ಮೊದಲೇ ಈ ನಿಯಮಗಳಿಗನುಸಾರವಾಗಿ ಅಥವಾ ಒಪ್ಪಂದದ ನಿಬಂಧನೆಗಳಿಗನುಸಾರವಾಗಿ ಗುತ್ತಿಗೆಯನ್ನು ಕೊನೆಗೊಳಿಸತಕ್ಕದ್ದು ಮತ್ತು ಠೇವಣಿ ಹಣವನ್ನು ಮತ್ತು ಸ್ವತ್ತನ್ನು ಮತ್ತು ಆ ನಿವೇಶನದಲ್ಲಿ ಕಟ್ಟಲಾಗಿದ್ದ ಕಟ್ಟಡವನ್ನು ಯಾವುದೇ ಪರಿಹಾರ ನೀಡದೆ ಮುಟ್ಟುಗೋಲು ಹಾಕಿಕೊಳ್ಳಬಹುದು:
ಪರಂತು, ಅದರಿಂದ ಬಾಧಿತನಾಗುವ ಸಂಭವವಿರುವ ವ್ಯಕ್ತಿಗೆ ತನ್ನ ಅಹವಾಲು ಹೇಳಿಕೊಳ್ಳಲು ಅವಕಾಶ ಕೊಟ್ಟ ಹೊರತು, ಯಾವುದೇ ತೀರ್ಮಾನವನ್ನು ಅಥವಾ ಆದೇಶವನ್ನು ಮಾಡತಕ್ಕದ್ದಲ್ಲ.
ಮತ್ತೂ ಪರಂತು, (1)ನೆಯ ಉಪನಿಯಮದ ಮೇರೆಗೆ ಮುಟ್ಟುಗೋಲು ಹಾಕಿಕೊಳ್ಳುವ ಯಾವುದೇ ಆದೇಶವನ್ನು ಜಾರಿಗೊಳಿಸುವ ಮೊದಲು, ಸಂದಾಯ ಮಾಡಿರುವ ಹಣವನ್ನು ಏಕೆ ಮುಟ್ಟುಗೋಲು ಹಾಕಿಕೊಳ್ಳಬಾರದೆಂಬ ಬಗ್ಗೆ ಕಾರಣ ತೋರಿಸುವಂತೆ ಹಂಚಿಕೆ ಪಡೆದವನಿಗೆ ಒಂದು ಅವಕಾಶ ನೀಡತಕ್ಕದ್ದು.
(2) 13ನೇ ಮತ್ತು 14ನೇ ನಿಯಮಗಳ ಮೇರೆಗೆ ಹಂಚಿಕೆ ಪಡೆದವನು, ಕೇಳಿದಾಗ ಬಿಟ್ಟುಕೊಡುವ ಲೈಸನ್ಸಿನ ಶುಲ್ಕವನ್ನು ಯಾವುದೇ ತಿಂಗಳಿಗಾಗಿ ತರುವಾಯದ ತಿಂಗಳ ಹತ್ತನೇ ದಿನಕ್ಕೆ ಮುಂಚೆ ಸಂದಾಯ ಮಾಡಲು ವಿಫಲನಾದಲ್ಲಿ, ಆ ತಿಂಗಳಿಗೆ ಸಂದಾಯ ಮಾಡಬೇಕಾದ ಲೈಸನ್ಸು ಶುಲ್ಕದ ಶೇಕಡಾ ಹತ್ತರ ದರದಲ್ಲಿ ದಂಡರೂಪದ ಶುಲ್ಕವನ್ನು ವಿಧಿಸತಕ್ಕದ್ದು ಮತ್ತು ಹಂಚಿಕೆ ಪಡೆದವನಿಂದ ವಸೂಲು ಮಾಡತಕ್ಕದ್ದು.
- ಸಂಗತಿಗಳನ್ನು ತಪ್ಪಾಗಿ ನಿರೂಪಿಸುವುದು ಅಥವಾ ಮುಚ್ಚಿಡುವುದು.- 3ನೇ, 9ನೇ, 13ನೇ ಅಥವಾ 14ನೇ ನಿಯಮಗಳ ಮೇರೆಗೆ ಹಂಚಿಕೆ ಕೋರುವ ಅರ್ಜಿದಾರನು, ಸುಳ್ಳು ಮಾಹಿತಿಯನ್ನು ಒದಗಿಸಿದರೆ ಅಥವಾ ಯಾವುದೇ ಮಹತ್ವದ ಸಂಗತಿಯನ್ನು ಮುಚ್ಚಿಟ್ಟರೆ ಆ ಹಂಚಿಕೆಗಾಗಿನ ಅರ್ಜಿಯನ್ನು ತಿರಸ್ಕರಿಸತಕ್ಕದ್ದು ಮತ್ತು ಯಾವುದೇ ಹಂಚಿಕೆ ಮಾಡಿದ್ದರೆ ಕ್ಷಿಪ್ರ ರೀತಿಯಲ್ಲಿ ರದ್ದುಪಡಿಸತಕ್ಕದ್ದು, ಮತ್ತು ನಿವೇಶನವನ್ನು, ಅಂಗಡಿಯನ್ನು, ಅಂಗಡಿ ಸಹಿತ ಗೋದಾಮನ್ನು ಅಥವಾ ಗೋದಾಮನ್ನು, ವೇಬ್ರಿಜ್ಗಳನ್ನು, ಚಹಾದ ಅಂಗಡಿಗಳನ್ನು, ಚಿಲ್ಲರೆ ಅಂಗಡಿಯನ್ನು ಅಥವಾ ಇತರ ಕಟ್ಟಡವನ್ನು ಮಾರುಕಟ್ಟೆ ಸಮಿತಿಯು ತನ್ನ ವಶಕ್ಕೆ ತೆಗೆದುಕೊಳ್ಳತಕ್ಕದ್ದು. ಈ ಸಂದರ್ಭಗಳ ಮೇರೆಗಿನ ತಿರಸ್ಕರಣೆ ಅಥವಾ ರದ್ಧಿಯಾತಿಯು ಅರ್ಜಿದಾರನನ್ನು ಭವಿಷ್ಯದಲ್ಲಿಯೂ ಕೂಡ ಹಂಚಿಕೆಗಾಗಿ ಅನರ್ಹನನ್ನಾಗಿಸತಕ್ಕದ್ದು. ಅಂಥ ಅರ್ಜಿದಾರನು ಸಂದಾಯ ಮಾಡಿದ ಎಲ್ಲ ಮೊಬಲಗುಗಳನ್ನು ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು. ಅರ್ಜಿದಾರನು ಅಪರಾಧಿಕ ಪ್ರಾಸಿಕ್ಯೂಷನ್ಗೆ ಸಹ ಗುರಿಯಾಗತಕ್ಕದ್ದು.
ಪರಂತು, ಅದರಿಂದ ಬಾಧಿತನಾಗುವ ಸಂಭವವಿರುವ ವ್ಯಕ್ತಿಗೆ ತನ್ನ ಅಹವಾಲು ಹೇಳಿಕೊಳ್ಳಲು ಅವಕಾಶವನ್ನು ಕೊಟ್ಟ ಹೊರತು ಯಾವುದೇ ತೀರ್ಮಾನವನ್ನು ಅಥವಾ ಆದೇಶವನ್ನು ಮಾಡತಕ್ಕದ್ದಲ್ಲ.
-
ದುರ್ಬಳಕೆ, ಸೇರ್ಪಡೆಗಳ ಮತ್ತು ಮಾರ್ಪಾಟುಗಳ ಮೇಲೆ ನಿರ್ಬಂಧಗಳು.- ಮಾರುಕಟ್ಟೆ ಪ್ರಾಂಗಣದಲ್ಲಿ ಲೈಸನ್ಸು ಹೊಂದಿದ ಮಾರುಕಟ್ಟೆ ಕಾರ್ಯನಿರ್ವಾಹಕನಾಗಲಿ ಅಥವಾ ಮಾರುಕಟ್ಟೆ ಸಮಿತಿಯಾಗಲಿ ನಿರ್ಮಿಸಿದ ಕಟ್ಟಡಗಳನ್ನು ಅಧಿಸೂಚಿತ ಕೃಷಿ ಉತ್ಪನ್ನಗಳ ಕ್ರಯವಿಕ್ರಯಕ್ಕಾಗಿ ಹೊರತು ಬೇರೆ ಯಾವುದೇ ಉದ್ದೇಶಕ್ಕೆ ಬಳಸತಕ್ಕದ್ದಲ್ಲ. ಹಂಚಿಕೆ ಪಡೆದವನು, ಹಂಚಿಕೆಯಾದ ಯಾವುದೇ ನಿವೇಶನವನ್ನು ಅಥವಾ ಯಾವುದೇ ಕಟ್ಟಡವನ್ನು ಪುನಃ ವಿಭಜಿಸಲು ಅಥವಾ ಮಾರುಕಟ್ಟೆ ಸಮಿತಿಯ ಲಿಖಿತ ಪೂರ್ವಾನುಮತಿ ಪಡೆಯದೆ ಹಂಚಿಕೆಯಾದ ಯಾವುದೇ ಇತರ ಕಟ್ಟಡ ಘಟಕದೊಂದಿಗೆ ಅಥವಾ ನಿವೇಶನದೊಂದಿಗೆ ಸಂಯೋಜಿಸಲು ಅಥವಾ ಯಾವುದೇ ಹೆಚ್ಚುವರಿ ರಚನೆ ಅಥವಾ ಮಾರ್ಪಾಟುಗಳನ್ನು ಮಾಡಲು ಹಕ್ಕುಳ್ಳವನಾಗಿರತಕ್ಕದ್ದಲ್ಲ.
-
ಪುನರೀಕ್ಷಣೆ.- (1) ಸರ್ಕಾರವು, ಈ ನಿಯಮಗಳ ಮೇರೆಗೆ ಮಾರುಕಟ್ಟೆ ಸಮಿತಿಯ ಯಾವುದೇ ತೀರ್ಮಾನದ, ಆದೇಶದ ಅಥವಾ ನಡವಳಿಯ ದಾಖಲೆಯನ್ನು, ಅಂಥ ತೀರ್ಮಾನದ, ಆದೇಶದ ಅಥವಾ ನಡವಳಿಗಳ ಕಾನೂನು ಸಮ್ಮತತೆಯ ಅಥವಾ ಔಚಿತ್ಯತೆಯ ಬಗೆಗೆ ತಾನು ಮನದಟ್ಟು ಮಾಡಿಕೊಳ್ಳಲು ತಾನಾಗಿಯೇ ಅಥವಾ ಅನ್ಯಥಾ ಅವುಗಳ ದಾಖಲೆಗಳನ್ನು ತರಿಸಿಕೊಳ್ಳಬಹುದು.
(2) ಯಾವುದೇ ಸಂದರ್ಭದಲ್ಲಿ, ಹಾಗೆ ತರಿಸಿಕೊಂಡ ಯಾವುದೇ ತೀರ್ಮಾನವನ್ನು, ಆದೇಶವನ್ನು ಅಥವಾ ನಡವಳಿಯನ್ನು ಮಾರ್ಪಾಟು ಮಾಡಬೇಕೆಂದು ಅಥವಾ ರದ್ದುಮಾಡಬೇಕೆಂದು ಅಥವಾ ವಿಪರ್ಯಯಗೊಳಿಸಬೇಕೆಂದು ಸರ್ಕಾರಕ್ಕೆ ಕಂಡುಬಂದರೆ, ಅದು ಸೂಕ್ತವೆಂದು ಭಾವಿಸಬಹುದಾದಂಥ ಆದೇಶವನ್ನು ಮಾಡಬಹುದು:
ಪರಂತು, ಅದರಿಂದ ಬಾಧಿತನಾಗುವ ಸಂಭವವಿರುವ ವ್ಯಕ್ತಿಗೆ ತನ್ನ ಅಹವಾಲು ಹೇಳಿಕೊಳ್ಳಲು ಒಂದು ಅವಕಾಶವನ್ನು ಕೊಟ್ಟ ಹೊರತು, ಯಾವುದೇ ಅಂಥ ತೀರ್ಮಾನವನ್ನು ಅಥವಾ ಆದೇಶವನ್ನು ಮಾರ್ಪಾಟು ಮಾಡತಕ್ಕದ್ದಲ್ಲ, ರದ್ದು ಮಾಡತಕ್ಕದ್ದಲ್ಲ ಅಥವಾ ವಿಪರ್ಯಯಗೊಳಿಸತಕ್ಕದ್ದಲ್ಲ.
- ಸಹಕಾರಿ ಸಂಘಗಳು, ಇತ್ಯಾದಿಗಳಿಗೆ ನಿವೇಶನಗಳ ಹಂಚಿಕೆ.- ಈ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಮಾರುಕಟ್ಟೆ ಸಮಿತಿಯು, ಅಧಿಸೂಚಿತ ಮಾರುಕಟ್ಟೆ ಉತ್ಪನ್ನಗಳ ಸಂಬಂಧದಲ್ಲಿ ವ್ಯವಹರಿಸುವ ಮತ್ತು ಮಾರುಕಟ್ಟೆ ಪ್ರದೇಶದಲ್ಲಿ ಲೈಸನ್ಸು ಕೂಡ ಹೊಂದಿರುವ ಸಹಕಾರ ಸಂಘಕ್ಕೆ ಅಥವಾ ಉಗ್ರಾಣ ನಿಗಮಕ್ಕೆ ಅಥವಾ ಯಾವುದೇ ಸೇವಾ ಸಂಸ್ಥೆಗೆ ಸಮಿತಿಯು ನಿರ್ದಿಷ್ಟಪಡಿಸಬಹುದಾದಂಥ ಬಾಡಿಗೆ ಅಥವಾ ಶುಲ್ಕದ ಆಧಾರದ ಮೇಲೆ ಮತ್ತು ಅಂಥ ಷರತ್ತುಗಳಿಗೊಳಪಟ್ಟು, ಗುತ್ತಿಗೆ ಸಹಿತ ಮಾರಾಟದ ಆಧಾರದ ಮೇಲೆ ಅಥವಾ ಕೇಳಿದಾಗ ಬಿಟ್ಟುಕೊಡುವ ಲೈಸನ್ಸು ಆಧಾರದ ಮೇಲೆ ನಿವೇಶನಗಳನ್ನು, ಅಂಗಡಿಗಳನ್ನು, ಗೋದಾಮನ್ನು, ಅಂಗಡಿ ಸಹಿತ ಗೋದಾಮನ್ನು ಅಥವಾ ಚಿಲ್ಲರೆ ಅಂಗಡಿಯನ್ನು ಹಂಚಿಕೆ ಮಾಡಬಹುದು.