1 [(1) (ಎ) 84ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ನೇಮಕಗೊಂಡ ಮಧ್ಯಸ್ಥಗಾರರ ಪಟ್ಟಿಯಲ್ಲಿ 40ಕ್ಕಿಂತ ಹೆಚ್ಚು ಜನ ಸದಸ್ಯರು ಇರತಕ್ಕದ್ದಲ್ಲ, ಮತ್ತು ಸಾಧ್ಯವಾದಷ್ಟು ಮಟ್ಟಿಗೆ, ಅವರಲ್ಲಿ ಶೇಕಡಾ ಐವತ್ತರಷ್ಟು ಸದಸ್ಯರು ಕೃಷಿಕರಾಗಿರತಕ್ಕದ್ದು, ಶೇಕಡಾ ಇಪ್ಪತ್ತೈದರಷ್ಟು ಸದಸ್ಯರು ವ್ಯಾಪಾರಸ್ಥರಾಗಿರತಕ್ಕದ್ದು ಮತ್ತು ಶೇಕಡಾ ಇಪ್ಪತ್ತೈದು ಸದಸ್ಯರು ಕಮಿಷನ್ ಏಜೆಂಟರಾಗಿರತಕ್ಕದ್ದು. ಈ ಸದಸ್ಯರ ಪದಾವಧಿಯು ಒಂದು ವರ್ಷವಾಗಿರತಕ್ಕದ್ದು, ಆದರೆ ಮಧ್ಯಸ್ಥಗಾರರ ಪಟ್ಟಿಯಲ್ಲಿರುವ ಸದಸ್ಯರು ಮಧ್ಯಸ್ಥಗಾರರ ಹೊಸ ಪಟ್ಟಿಯನ್ನು ರಚಿಸುವವರೆಗೆ ಅಧಿಕಾರದಲ್ಲಿ ಮುಂದುವರೆಯತಕ್ಕದ್ದು:
ಪರಂತು, ಸಮಿತಿಯು ಯಾವುದೇ ಕಾಲದಲ್ಲಿ, ಕಾರಣಗಳನ್ನು ದಾಖಲು ಮಾಡಿ ಪಟ್ಟಿಯಿಂದ ಯಾವನೇ ವ್ಯಕ್ತಿಯನ್ನು ತೆಗೆದುಹಾಕಬಹುದು ಮತ್ತು ಹಾಗೆ ತೆಗೆದುಹಾಕಲಾದ ವ್ಯಕ್ತಿಯ ಮುಕ್ತಾಯವಾಗದ ಪದಾವಧಿಯವರೆಗೆ ಅವನ ಸ್ಥಾನದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ನೇಮಕ ಮಾಡಬಹುದು.
(ಬಿ) ಸಮಿತಿಯು ಕೆಳಕಂಡ ಸದಸ್ಯರಿಂದ ಕೂಡಿದ ವಿವಾದ ಪರಿಶೀಲನಾ ಸಮಿತಿಯನ್ನು ನೇಮಕ ಮಾಡತಕ್ಕದ್ದು:-
(i) ಸಮಿತಿಯ ಉಪಾಧ್ಯಕ್ಷ;
(ii) ಅಧ್ಯಕ್ಷನ ಹೊರತಾಗಿ ಕೃಷಿಕರ ಮೂವರು ಪ್ರತಿನಿಧಿಗಳು;
(iii) ವ್ಯಾಪಾರಿಗಳ ಒಬ್ಬ ಪ್ರತಿನಿಧಿ;
(iv) ಕಮಿಷನ್ ಏಜೆಂಟರ ಒಬ್ಬ ಪ್ರತಿನಿಧಿ;
(v) ಸಹಕಾರ ಸಂಘಗಳ ಒಬ್ಬ ಪ್ರತಿನಿಧಿ;
(2) ಸಮಿತಿಯ ಉಪಾಧ್ಯಕ್ಷನು ವಿವಾದ ಪರಿಶೀಲನಾ ಸಮಿತಿಯ ಪದನಿಮಿತ್ತ ಅಧ್ಯಕ್ಷನಾಗಿರತಕ್ಕದ್ದು. ಉಪಾಧ್ಯಕ್ಷನ ಗೈರುಹಾಜರಿಯಲ್ಲಿ, 1 [ವಿವಾದ ಪರಿಶೀಲನಾ ಸಮಿತಿಯು ತನ್ನ ಸದಸ್ಯರ ಪೈಕಿ ಆಯ್ಕೆ ಮಾಡಿದ ಒಬ್ಬ ವ್ಯಕ್ತಿಯು ಸಭೆಯ ಅಧ್ಯಕ್ಷತೆಯನ್ನುವಹಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 44, ದಿನಾಂಕ 3-2-1970ರ ಮೂಲಕ ಪ್ರತಿಯೋಜಿಸಲಾಗಿದೆ.
1 [(3) (i) 84ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಲಾದ ವಿವಾದವು ಉದ್ಭವಿಸಿದಾಗ, ಕಾರ್ಯದರ್ಶಿಯ ಮಧ್ಯಸ್ಥಿಕೆ ವಹಿಸಿ ಆ ಪಕ್ಷಕಾರರು ಪರಸ್ಪರ ಒಪ್ಪಂದದ ಮೂಲಕ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಲು ಸಾಧ್ಯವೇ ಹೇಗೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು ಮತ್ತು ಅವರು ಹಾಗೆ ಇತ್ಯರ್ಥಕ್ಕೆ ಬಂದರೆ ಆ ವಿಷಯವನ್ನು ದಾಖಲು ಮಾಡತಕ್ಕದ್ದು ಮತ್ತು ಅದಕ್ಕೆ ಪಕ್ಷಕಾರರು ಸಹಿ ಹಾಕತಕ್ಕದ್ದು.
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 44, ದಿನಾಂಕ 3-2-1970ರ ಮೂಲಕ ಪ್ರತಿಯೋಜಿಸಲಾಗಿದೆ.
(ii) ಪಕ್ಷಕಾರರು ಪರಸ್ಪರ ಒಪ್ಪಂದಕ್ಕೆ ಬಾರದಿದ್ದರೆ, ದೂರು ನೀಡುವ ಪಕ್ಷಕಾರನು ಕಾರ್ಯದರ್ಶಿಯು ಈ ಸಂಬಂಧದಲ್ಲಿ ನೋಟೀಸನ್ನು ಜಾರಿ ಮಾಡಿದ ದಿನಾಂಕದ ತರುವಾಯ ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಅವಧಿಯೊಳಗೆ ಅಂಥ ಫೀಜನ್ನು ಸಮಿತಿಗೆ ಜಮೆ ಮಾಡತಕ್ಕದ್ದು. ಆ ಪಕ್ಷಕಾರನು ನಿರ್ದಿಷ್ಟಪಡಿಸಿದ ಅವಧಿಯೊಳಗೆ ಫೀಜನ್ನು ಜಮೆಮಾಡಲು ತಪ್ಪಿದರೆ, ಅವನ ಕ್ಲೇಮನ್ನು ನಿರಾಕರಿಸಿರುವುದಾಗಿ ಭಾವಿಸತಕ್ಕದ್ದು. ಮತ್ತು ಫೀಜು ಸಂದಾಯವಾದ ಕೂಡಲೇ, ಕಾರ್ಯದರ್ಶಿಯು ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಅವಧಿಯೊಳಗೆ ಮಧ್ಯಸ್ಥಗಾರರ ಪಟ್ಟಿಯಿಂದ ಮಧ್ಯಸ್ಥಗಾರನಾಗಿ ಕಾರ್ಯನಿರ್ವಹಿಸಲು ಇಚ್ಫಿಸುವ ಒಬ್ಬೊಬ್ಬ ಮಧ್ಯಸ್ಥಗಾರನನ್ನು ಆಯ್ಕೆ ಮಾಡಿಕೊಳ್ಳುವಂತೆ ನೋಟೀಸಿನ ಮೂಲಕ ವಿವಾದಕ್ಕೆ ಸಂಬಂಧಪಟ್ಟ ಪಕ್ಷಕಾರರನ್ನು ಅಗತ್ಯಪಡಿಸತಕ್ಕದ್ದು.
(iii) ಆಯ್ಕೆಯಾದ ಮಧ್ಯಸ್ಥಗಾರರಲ್ಲಿ ಯಾವನೇ ಒಬ್ಬನು ಕಾರ್ಯನಿರ್ವಹಿಸಲು ನಿರ್ಲಕ್ಷಿಸಿದರೆ ಅಥವಾ ನಿರಾಕರಿಸಿದರೆ, ಅಥವಾ ಕಾರ್ಯನಿರ್ವಹಿಸಲು ಅಸಮರ್ಥನಾದರೆ ಅಥವಾ ಮೃತನಾದರೆ, ಕಾರ್ಯದರ್ಶಿಯು ಮುಂಚಿನ ಮಧ್ಯಸ್ಥಗಾರನನ್ನು ಆಯ್ಕೆ ಮಾಡಿದ ಪಕ್ಷಕಾರನನ್ನು ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಅವಧಿಯೊಳಗೆ ಮಧ್ಯಸ್ಥಗಾರನಾಗಿ ಕಾರ್ಯನಿರ್ವಹಿಸಲು ಇಚ್ಫಿಸುವಂಥ ಮತ್ತು ಸಿದ್ಧನಿರುವ ಹೊಸ ಮಧ್ಯಸ್ಥಗಾರನನ್ನು ಆಯ್ಕೆ ಮಾಡುವಂತೆ ಅಗತ್ಯಪಡಿಸತಕ್ಕದ್ದು.
(iv) (vii) ನೇ ಖಂಡದಲ್ಲಿ ಉಪಬಂಧಿಸಿರುವುದನ್ನುಳಿದು, ವಿವಾದದ ಒಬ್ಬ ಪಕ್ಷಕಾರನು, ಉಪವಿಧಿಗಳ ಉದ್ದೇಶಕ್ಕಾಗಿ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಮೇಲೆ ಹೇಳಿದಂತೆ ಪ್ರಾರಂಭದ ಮಧ್ಯಸ್ಥಗಾರನನ್ನು ಅಥವಾ ಬದಲಿ ಮಧ್ಯಸ್ಥಗಾರನನ್ನು ಆಯ್ಕೆ ಮಾಡಲು ತಪ್ಪಿದರೆ,-
(ಎ) ಅಂಥ ಪಕ್ಷಕಾರನು ದೂರು ನೀಡುವ ಪಕ್ಷಕಾರನಾಗಿದ್ದರೆ, ಅವನ ಕ್ಲೇಮನ್ನು ತಿರಸ್ಕರಿಸಿರುವುದಾಗಿ ಭಾವಿಸತಕ್ಕದ್ದು;
(ಬಿ) ಅಂಥ ಪಕ್ಷಕಾರನು ಪ್ರತಿ ಪಕ್ಷಕಾರನಾಗಿದ್ದರೆ ಮತ್ತು ದೂರು ನೀಡುವ ಪಕ್ಷಕಾರನು ಉಪವಿಧಿಗಳ ಉದ್ದೇಶಕ್ಕಾಗಿ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಮಧ್ಯಸ್ಥಗಾರನನ್ನು ಆಯ್ಕೆ ಮಾಡಿದ್ದರೆ, ಆ ಮಧ್ಯಸ್ಥಗಾರನೇ ಏಕೈಕ ಮಧ್ಯಸ್ಥಗಾರನಾಗಿ ಕಾರ್ಯನಿರ್ವಹಿಸತಕ್ಕದ್ದು ಮತ್ತು ಅವನನ್ನು ಉಭಯ ಪಕ್ಷಕಾರರ ಸಮ್ಮತಿಯಿಂದ ನೇಮಕ ಮಾಡಿದ್ದರೆ ಹೇಗೋ ಹಾಗೆ ಅವನು ನೀಡುವ ಐತೀರ್ಪಿಗೆ ಆ ಪಕ್ಷಕಾರರು ಬದ್ಧರಾಗತಕ್ಕದ್ದು.
(v) ಕಾರ್ಯದರ್ಶಿಯು ಪಕ್ಷಕಾರನು ಆಯ್ಕೆ ಮಾಡಿದ ಮಧ್ಯಸ್ಥಗಾರನಿಗೆ ಅಥವಾ ಮಧ್ಯಸ್ಥಗಾರರಿಗೆ ವಿವಾದದ ಬಗ್ಗೆ ತಿಳಿಸತಕ್ಕದ್ದು ಮತ್ತು ಮಧ್ಯಸ್ಥಗಾರನು ಅಥವಾ ಮಧ್ಯಸ್ಥಗಾರರು ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಅವಧಿಯೊಳಗೆ ಐತೀರ್ಪು ನೀಡತಕ್ಕದ್ದು, ಮತ್ತು ಹಾಗೆ ನೀಡಲಾದ ಐತೀರ್ಪು (1)ನೇ ಖಂಡಕ್ಕೊಳಪಟ್ಟು ಅಂತಿಮವಾಗಿರತಕ್ಕದ್ದು.
(vi) ಮಧ್ಯಸ್ಥಗಾರನ ಅಥವಾ ಮಧ್ಯಸ್ಥಗಾರರ ಐತೀರ್ಪಿನ ವಿರುದ್ಧ ವಿವಾದ ಪರಿಶೀಲನಾ ಸಮಿತಿಗೆ ಅಪೀಲು ಸಲ್ಲಿಸಲು ಅವಕಾಶವಿರತಕ್ಕದ್ದು ಮತ್ತು ಅಂಥ ಅಪೀಲನ್ನು ಪಕ್ಷಕಾರರಿಗೆ ಐತೀರ್ಪಿನ ಮಾಹಿತಿಯನ್ನು ತಿಳಿಸಿದ ದಿನಾಂಕದಿಂದ ಏಳು ದಿನಗಳ ಅವಧಿಯೊಳಗಾಗಿ ಸಲ್ಲಿಸತಕ್ಕದ್ದು.
(vii) ಕಾರ್ಯದರ್ಶಿಯು, ಕೆಳಕಂಡ ಸಂದರ್ಭಗಳಲ್ಲಿ ವಿವಾದವನ್ನು ವಿವಾದ ಪರಿಶೀಲನಾ ಸಮಿತಿಗೆ ಒಪ್ಪಿಸತಕ್ಕದ್ದು,-
(ಎ) ಮಧ್ಯಸ್ಥಗಾರನಾಗಿ ಕಾರ್ಯನಿರ್ವಹಿಸಲು ಸಿದ್ಧವಿರುವ ಮತ್ತು ಇಚ್ಚಿಸುವಂಥ ಒಬ್ಬ ಮಧ್ಯಸ್ಥಗಾರನನ್ನು ಆಯ್ಕೆ ಮಾಡಲು ವಿವಾದಿಸುವ ಪಕ್ಷಕಾರರಲ್ಲಿ ಯಾವನೇ ಒಬ್ಬನು ತಾನು ಅಸಮರ್ಥನಾಗಿರುವುದಾಗಿ ಮಧ್ಯಸ್ಥಗಾರರ ಆಯ್ಕೆಗಾಗಿ ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿರುವ ಅವಧಿಯೊಳಗೆ ಕಾರ್ಯದರ್ಶಿಗೆ ವರದಿ ಮಾಡಿದರೆ; ಅಥವಾ
(ಬಿ) ಮಧ್ಯಸ್ಥಗಾರರು ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿರುವ ಅವಧಿಯೊಳಗೆ ಐತೀರ್ಪನ್ನು ನೀಡಲು ವಿಫಲರಾದರೆ; ಅಥವಾ
(ಸಿ) ಮಧ್ಯಸ್ಥಗಾರರು ತಮ್ಮಲ್ಲಿ ಪರಸ್ಪರ ಒಡಂಬಡಿಕೆ ಏರ್ಪಡಿಸುತ್ತಿಲ್ಲವೆಂದು ಲಿಖಿತದಲ್ಲಿ ಕಾರ್ಯದರ್ಶಿಗೆ ತಿಳಿಸಿದರೆ.
(viii) ವಿವಾದ ಪರಿಶೀಲನಾ ಸಮಿತಿಯ ಒಬ್ಬ ಸದಸ್ಯನು ವಿವಾದದ ಪಕ್ಷಕಾರನಾಗಿದ್ದರೆ, ಅಥವಾ ವಿವಾದ ಪರಿಶೀಲನಾ ಸಮಿತಿಯ ಮುಂದೆ ಇರುವ ವಿವಾದದ ಯಾವನೇ ಪಕ್ಷಕಾರನಲ್ಲಿ ಹಿತಾಸಕ್ತಿಯುಳ್ಳವನಾಗಿದ್ದರೆ ಅವನು, ಸದರಿ ವಿವಾದಕ್ಕೆ ಸಂಬಂಧಿಸಿದ ವ್ಯವಹರಣೆಗಳಲ್ಲಿ ಭಾಗವಹಿಸತಕ್ಕದ್ದಲ್ಲ, ಸದರಿ ವಿವಾದದ ಉದ್ದೇಶಕ್ಕಾಗಿ, ಸಮಿತಿಯು ವಿವಾದ ಪರಿಶೀಲನಾ ಸಮಿತಿಯ ಸದಸ್ಯನೆಂದು ಬೇರೊಬ್ಬ ವ್ಯಕ್ತಿಯನ್ನು ನೇಮಿಸಬಹುದು.
(ix) ವಿವಾದ ಪರಿಶೀಲನಾ ಸಮಿತಿಯು, ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಅವಧಿಯೊಳಗೆ ತನ್ನ ಐತೀರ್ಪನ್ನು ನೀಡತಕ್ಕದ್ದು. ಅಂಥ ಅವಧಿಯೊಳಗೆ ಯಾವುದೇ ಐತೀರ್ಪನ್ನು ನೀಡಿದ್ದರೆ ಅಥವಾ ಪಕ್ಷಕಾರರು ತಮ್ಮ ಹಕ್ಕುಗಳನ್ನು ಸ್ಥಾಪಿಸುವುದಕ್ಕಾಗಿ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಆ ಪಕ್ಷಕಾರರಿಗೆ ನಿರ್ದೇಶಿಸಬಹುದೆಂದು ವಿವಾದ ಪರಿಶೀಲನಾ ಸಮಿತಿಯು ಅಭಿಪ್ರಾಯಪಟ್ಟರೆ, ಕಾರ್ಯದರ್ಶಿಯು ಆ ವಿಷಯವನ್ನು ಸಮಿತಿಗೆ ವರದಿ ಮಾಡತಕ್ಕದ್ದು ಮತ್ತು ಆ ಸಮಿತಿಯು ತದನುಸಾರವಾಗಿ ನ್ಯಾಯಾಲಯವನ್ನು ಸಂಪರ್ಕಿಸಲು ಪಕ್ಷಕಾರರಿಗೆ ಅನುಮತಿ ನೀಡತಕ್ಕದ್ದು.
(x) ಸಂದರ್ಭಾನುಸಾರ, ಏಕೈಕ ಮಧ್ಯಸ್ಥಗಾರನು, ಮಧ್ಯಸ್ಥಗಾರರು ಅಥವಾ ವಿವಾದ ಪರಿಶೀಲನಾ ಸಮಿತಿಯು ನೀಡಿದ ಐತೀರ್ಪಿನಲ್ಲಿ ವ್ಯವಹರಣೆಗಳ ವೆಚ್ಚಗಳ ಬಗ್ಗೆ ವ್ಯವಸ್ಥೆ ಮಾಡತಕ್ಕದ್ದು ಮತ್ತು ಆ ಐತೀರ್ಪನ್ನು ನಾಲ್ಕು ಪ್ರತಿಗಳಲ್ಲಿ ಸಿದ್ಧಪಡಿಸತಕ್ಕದ್ದು ಮತ್ತು ಐತೀರ್ಪಿನ ಎಲ್ಲ ಪ್ರತಿಗಳಿಗೆ ಸಂದರ್ಭಾನುಸಾರ ಏಕೈಕ ಮಧ್ಯಸ್ಥಗಾರನು ಅಥವಾ ಮಧ್ಯಸ್ಥಗಾರರು ಸಹಿ ಹಾಕತಕ್ಕದ್ದು. ವಿವಾದ ಪರಿಶೀಲನಾ ಸಮಿತಿಯ ಸಭೆ ಅಥವಾ ಸಭೆಗಳಲ್ಲಿ ಅಧ್ಯಕ್ಷತೆ ವಹಿಸಿದ ಅಧ್ಯಕ್ಷನು ಅಥವಾ ಸಂದರ್ಭಾನುಸಾರ ಸದಸ್ಯನು ಸಹಿ ಹಾಕತಕ್ಕದ್ದು. ಐತೀರ್ಪಿನ ಒಂದೊಂದು ಪ್ರತಿಯನ್ನು ವಿವಾದದ ಪಕ್ಷಕಾರರಿಗೆ ಕಳುಹಿಸತಕ್ಕದ್ದು ಮತ್ತು ಉಳಿದ ಪ್ರತಿಗಳನ್ನು ದಾಖಲೆಗೆ ಸೇರಿಸತಕ್ಕದ್ದು.
(4) ವಿವಾದ ಪರಿಶೀಲನಾ ಸಮಿತಿಯ ಸಭೆಯಲ್ಲಿ ಕೊನೆ ಪಕ್ಷ ಮೂವರು ಸದಸ್ಯರು ಹಾಜರಿರುವ ಹೊರತು ಆ ಸಮಿತಿಯು ಯಾವ ವ್ಯವಹಾರವನ್ನೂ ನಡೆಸತಕ್ಕದ್ದಲ್ಲ.
(5) ವಿವಾದ ಪರಿಶೀಲನಾ ಸಮಿತಿಯ ಯಾವುದೇ ಸಭೆಯಲ್ಲಿ ಬರಬಹುದಾದಂಥ ಎಲ್ಲ ಪ್ರಶ್ನೆಗಳು, ಹಾಜರಿದ್ದು ಮತ್ತು ಮತ ನೀಡುವ ಸದಸ್ಯರ ಬಹುಮತದಿಂದ ತೀರ್ಮಾನವಾಗತಕ್ಕದ್ದು. ಸಮಾನ ಮತಗಳು ಬಂದ ಸಂದರ್ಭದಲ್ಲಿ ಸಂದರ್ಭಾನುಸಾರ ವಿವಾದ ಪರಿಶೀಲನಾ ಸಮಿತಿಯ ಅಧ್ಯಕ್ಷನು ಅಥವಾ ಸಭೆಯ ಅಧ್ಯಕ್ಷತೆ ವಹಿಸುವ ಸದಸ್ಯನು ಒಂದು ಹೆಚ್ಚಿನ ಅಥವಾ ನಿರ್ಣಾಯಕ ಮತವನ್ನು ನೀಡತಕ್ಕದ್ದು.
(6) ವಿವಾದ ಪರಿಶೀಲನಾ ಸಮಿತಿಯ ತೀರ್ಮಾನವು ಅಂತಿಮವಾಗಿರತಕ್ಕದ್ದು.
1 [(7) 1940ರ ಮಧ್ಯಸ್ಥಗಾರಿಕೆ ಅಧಿನಿಯಮದ (1940ರ ಕೇಂದ್ರಾಧಿನಿಯಮ ಸಂಖ್ಯೆ 10) 14, 15, 16, 17, 18, 41 ಮತ್ತು 43ನೇ ಪ್ರಕರಣಗಳ ಉಪಬಂಧಗಳು, ಅಧಿನಿಯಮದ, ಈ ನಿಯಮಗಳ ಮತ್ತು ಉಪನಿಧಿಗಳ ಉಪಬಂಧಗಳಿಗೆ ಅಸಂಗತವಾಗದಿರುವಷ್ಟರ ಮಟ್ಟಿಗೆ 84ನೇ ಪ್ರಕರಣದ ಮೇರೆಗಿನ ಮಧ್ಯಸ್ಥಿಕೆಗೂ ಅನ್ವಯವಾಗತಕ್ಕದ್ದು.
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 44, ದಿನಾಂಕ 3-2-1970ರ ಮೂಲಕ ಸೇರಿಸಲಾಗಿದೆ.